ಕಪಟ ನಾಟಕ ಸೂತ್ರಧಾರಿ ನೀನೇ…
– ಅಶ್ವಿನ್ ಅಮಿನ್
ದೇಶದ ಯಾವುದೇ ಮೂಲೆಯಲ್ಲಿ ಆಡ್ವಾಣಿ, ವಾಜಪೇಯಿಯಂತಹ ಹಿರಿಯ ಬಿಜೆಪಿ ಮುತ್ಸದ್ದಿಗಳು ‘ಜೈ ಶ್ರೀ ರಾಮ್ ಎಂದರೆ ಸಾಕು ಅದು ಮಂಗಳೂರಿನವರ ಬಾಯಲ್ಲಿ ಮಾರ್ದನಿಸುತ್ತದೆ. ಹಿಂದುತ್ವ ಎಂದರೆ ಉಸಿರು, ಹಿಂದುತ್ವ ಎಂದರೆ ಜೀವನ, ಹಿಂದುತ್ವ ಎಂದರೆ ಸರ್ವಸ್ವ ಎಂದು ಹಿಂದುತ್ವವನ್ನೇ ಮೈಗೂಡಿಸಿಕೊಂಡ ನಾಡು ಈ ಕರಾವಳಿಯ ಮಂಗಳೂರು ಹಾಗು ಉಡುಪಿ ಜಿಲ್ಲೆಗಳು… ಬರೀ ವೋಟ್ ಬ್ಯಾಂಕ್ ಗಷ್ಟೇ ಹಿಂದುತ್ವದ ಸೋಗು ಹಾಕಿಕೊಳ್ಳುವ ಈ ಕಾಲದಲ್ಲಿ ಹೃದಯದಿಂದ ಹಿಂದುತ್ವವನ್ನು ಅಪ್ಪಿಕೊಂಡವರಿವರು.ಇಲ್ಲಿ ಬಿಜೆಪಿಯಿಂದ ಹಿಂದುತ್ವ ಬಂದಿಲ್ಲ ಬದಲಾಗಿ ಹಿಂದುತ್ವದಿಂದ ಬಿಜೆಪಿ ಬಂದಿದೆ ಆದರೆ ಈಗ ನಾವೆಷ್ಟು ಮೂರ್ಖರಾಗಿದ್ದೆವು ಎಂಬುದರ ಅರಿವಾಗುತ್ತಿದೆ. ವೋಟ್ ಬ್ಯಾಂಕ್ ಗಾಗಿ ನಮ್ಮ ಹಿಂದುತ್ವವನ್ನು ಬಳಸಿಕೊಂಡರಲ್ಲ ಎಂಬ ಬಗ್ಗೆ ಖೇದವಾಗುತ್ತಿದೆ. ಇದಕ್ಕೆ ಕಾರಣರಾದವರ ಮೇಲೆ ಕೋಪ, ಸಿಟ್ಟು, ಅಸಹನ, ಜೊತೆ ಜೊತೆಗೆ ನಮ್ಮ ಮೇಲೆಯೇ ಅಸಹನೆ ಹುಟ್ಟುತ್ತಿದೆ…!
ಈಗಿನ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ಬಿಜೆಪಿ ನಿಜವಾಗಲೂ ಅದರ ಸಿದ್ಧಾಂತಗಳನ್ನು ಉಳಿಸಿಕೊಂಡಿದ್ದರೆ ಅದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯಲ್ಲಿ ಮಾತ್ರವೇನೋ… ಪ್ರತಿ ಸಲದ ಚುನಾವಣೆಯಲ್ಲೂ ಬಿಜೆಪಿಗೆ ಅತ್ಯಧಿಕ ಶಾಸಕರನ್ನು ಕೊಟ್ಟ, ಪಕ್ಷದ ಯಾವ ಕ್ಲಿಷ್ಟ ಸಂದರ್ಭಗಳಲ್ಲೂ ಕೈ ಹಿಡಿಯುವಂತಹ ಜಿಲ್ಲೆಯಿದು. ಆದರೆ ಗೆದ್ದು ಅಧಿಕಾರಕ್ಕೆ ಬಂದ ಮೇಲೆ ಮಾತ್ರ ಎಲ್ಲರಿಂದಲೂ ಕಡೆಗಣಿಸಲ್ಪಟ್ಟಿತು. ಚುನಾವಣಾ ಗೆಲ್ಲುವವರೆಗೆ ಹಿಂದುತ್ವ ಎಂದು ಮಾತನಾಡುತ್ತಿದ್ದ ರಾಜ್ಯದ ಹಿರಿಯ ನಾಯಕರುಗಳು ಲಿಂಗಾಯಿತ, ಒಕ್ಕಲಿಗ ಎಂದು ಶುರುವಿಟ್ಟುಕೊಂಡರು. ‘ನಾವೆಲ್ಲಾ ಹಿಂದೂ, ನಾವೆಲ್ಲಾ ಒಂದು’ ಎಂದು ಭಾಷಣ ಮಾಡುವ ಮಂದಿ ಜಾತಿ ಲೆಕ್ಕ ಆರಂಭಿಸಿದರು.





