ಭೌತಿಕ…ಭೌಗೋಳಿಕ…ಬೌದ್ದಿಕ ಅಸೂಯೆಯ ಕಲಾತ್ಮಕ ಅನಾವರಣ…!
– ಕುಮಾರ ರೈತ
ಭಾರತ ಮತ್ತು ಚೀನಾ ಸಂಘರ್ಷ ಇಂದು ನೆನ್ನೆಯದಲ್ಲ….ಅದಕ್ಕೆ ಸುದೀರ್ಘ ಇತಿಹಾಸವಿದೆ. ಹಿಂದಿ-ಚೀನಿ ಭಾಯಿ ಭಾಯಿ ಎನ್ನುತ್ತಲೇ ಬೆನ್ನ ಹಿಂದೆ ದ್ರೋಹ ಬಗೆದ ದೇಶವದು. ನಮ್ಮ ದೇಶದ ಗಡಿ ಭಾಗದ ವಿಸ್ತಾರ ಭೂ ಪ್ರದೇಶವನದು ಅಕ್ರಮಿಸಿಕೊಂಡಿದೆ. ಭಾರತೀಯರಿಗೆ ಪುಣ್ಯಸ್ಥಳವಾದ ಮಾನಸ ಗಂಗೋತ್ರಿಗೆ ಹೋಗಬೇಕಾದರೆ ಚೀನಾ ಪರವಾನಗಿ ಪಡೆಯಬೇಕಾದ ದುಸ್ಥಿತಿ ಉಂಟಾಗಿದೆ. ಅದರ ನೆಲದ ದಾಹ ಇನ್ನೂ ಹಿಂಗಿಲ್ಲ. ಈಶಾನ್ಯ ರಾಜ್ಯಗಳ ಗಡಿ ವಿಷಯದಲ್ಲಿ ತಂಟೆ ತೆಗೆಯುತ್ತಲೇ ಇದೆ. ಈ ನಿಟ್ಟಿನಲ್ಲಿಯೇ ಮುಂಜಾಗ್ರತೆಯಿಂದ ಒಂದು ಲಕ್ಷಕ್ಕೂ ಹೆಚ್ಚಿನ ಸೈನಿಕರನ್ನು ಈ ಗಡಿಭಾಗಗಳಲ್ಲಿ ನಿಯೋಜಿಸಲು ಭಾರತ ಸರಕಾರ ನಿರ್ಧರಿಸಿದೆ. ಸ್ನೇಹದ ಮುಖವಾಡ ಧರಿಸಿ ಸಂಚು ರೂಪಿಸಬಹುದಾದ ಚೀನಾಕ್ಕೆ ಭಾರತದ ಮೇಲಿನ ಭೌತಿಕ…ಭೌಗೋಳಿಕ…ಬೌದ್ದಿಕ ಅಸೂಯೆಯನ್ನು ‘ಏಳಮ್ ಅರಿವು’ ಚಿತ್ರ ಕಲಾತ್ಮಕವಾಗಿ ಅನಾವರಣಗೊಳಿಸಿದೆ. ಇದೇ ಈ ಚಿತ್ರದ ಕೇಂದ್ರ ಪ್ರಜ್ಞೆ…! ತಮಿಳಿನ ಏಳಮ್ ಅರಿವು ಎಂದರೆ ಏಳನೇ ಅರಿವು..ಅಥವಾ ಜ್ಞಾನ ಎಂದರ್ಥ..!
ನೆರೆ ದೇಶದ ದ್ವೇಷದ ವಿಷಯವನ್ನು ತೆಗೆದುಕೊಂಡಾಗ ಅದನ್ನು ಹಸಿಹಸಿಯಾಗಿ ನಿರೂಪಿಸಿ ಮೂರನೇ ದರ್ಜೆ ಸಿನಿಮಾ ಮಾಡಿಬಿಡುವ ಸಾಧ್ಯತೆಗಳೆ ಹೆಚ್ಚು. ಆದರೆ ಇಂಥ ಅಪಾಯದಿಂದ ‘ಏಳಮ್ ಅರಿವು’ ಹೊರತಾಗಿದೆ. ಈ ಕಾರಣಕ್ಕಾಗಿಯೂ ಈ ಸಿನಿಮಾ ಪ್ರಸ್ತುತ ಪ್ರಾಮುಖ್ಯತೆ ಪಡೆಯುತ್ತದೆ. ಭಾರತ-ಚೀನಾ ನಡುವೆ ಎರಡು ಸಾವಿರ ವರ್ಷಕ್ಕೂ ಹಿಂದಿನಿಂದಲೂ ವಾಣಿಜ್ಯ ವ್ಯವಹಾರವಿದೆ. ಆದರೆ ಇದಕ್ಕಿಂತಲೂ ಮಿಗಿಲಾಗಿ ಇಲ್ಲಿನ ಶ್ರೀಮಂತ ಬೌದ್ದಿಕತೆ ಮೇಲೆ ಚೀನಾ ಕಣ್ಣಿಟ್ಟಿತ್ತು. ಅಲ್ಲಿಯ ಸಾಮ್ರಾಟರ ನೆರವಿನಿಂದ ಇಲ್ಲಿಗೆ ಪ್ರವಾಸಿಗರಾಗಿ ಬರುತ್ತಿದ್ದವರು ಇಲ್ಲಿನ ಬಹುಮುಖ್ಯ ವಿಷಯ-ವಿಚಾರ-ವಿಜ್ಞಾನಗಳ ಜ್ಞಾನ ಸಂಗ್ರಹಿಸಿ ಸಾಗಿಸುತ್ತಿದ್ದರು. ಚೀನಾ ಕುರಿತು ಮಹಾಭಾರತದಲ್ಲಿಯೂ ಉಲ್ಲೇಖಗಳಿವೆ. ಆದರೆ ಇಲ್ಲಿಂದ ಅಲ್ಲಿಗೆ ಯಾರೂ ಪ್ರವಾಸಿಗರಾಗಿ ಹೋದವರಲ್ಲ. ಪ್ರಚಾರಕರಾಗಿ ಹೋದರು. ಬೌದ್ಧ ಧರ್ಮದ ಪ್ರಚಾರವನ್ನು ಅಲ್ಲಿ ಕೈಗೊಂಡರು.





