ಸಿರಿಯಾದಲ್ಲಿ ಶಬ್ದವಿಲ್ಲದ ಯುದ್ಧವಂತೂ ನಡೆಯಲಿದೆ
– ಎಸ್.ಸುನಿಲ್ ಕುಮಾರ್
ರಾಷ್ಟೀಯ ಪ್ರಧಾನ ಕಾರ್ಯದರ್ಶಿ, YOUTH FOR NATION
ಈ ಬಾರಿ ಸಿರಿಯಾ ಮೇಲೆ ಕ್ಷಿಪಣಿ ಯುದ್ಧವೇರ್ಪಟ್ಟರೂ, ಕ್ಷಿಪಣಿ ಬಳಸದೇ ಇದ್ದರೂ ಸೈಬರ್ ಯುದ್ಧವಂತೂ ನಿಶ್ಚಿತವಾಗಿ ನಡೆಯಲಿದೆ. ಇದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ. ಯಾರ ಸಮ್ಮತಿಗೂ ಕಾಯಬೇಕಿಲ್ಲ. ಏಕೆಂದರೆ ಇದೊಂದು ಮಾಯಾಯುದ್ಧ. ಇಲ್ಲಿ ಶತ್ರು ಎಲ್ಲಿರುವನು ಎಂದು ತಿಳಿಯುವುದೇ ಇಲ್ಲ. ದಾಳಿ ನಡೆಯುವುದೆ ಗೊತ್ತಾಗುವುದಿಲ್ಲ, ದಾಳಿ ಎಂದು ಶುರುವಾತು, ಎಲ್ಲಿ ಮುಗಿತು ಒಂದೂ ತಿಳಿಯುವುದಿಲ್ಲ. ತಿಳಿಯುವುದೊಂದೆ ಅದರಿಂದಾಗುವ ಹಾನಿ ಮಾತ್ರ, ಸೈಬರ್ ಯುದ್ಧದ ಪರಿಣಾಮ ಅತ್ಯಂತ ಅಪಾಯಕಾರಿ.
ಜೂನ್ ೨೦೧೦ ರಲ್ಲಿ ಇರಾನಿನ ಅಣುಸ್ಥಾವರಗಳು ಸ್ಟಕ್ಸ್‌ನೆಟ್ ಎಂಬ ಕಂಪ್ಯೂಟರ್ ವೈರಸ್ ದಾಳಿಂದ ನಿಷ್ಕ್ರಿಯಗೊಳ್ಳುತ್ತದೆ. ನಿರ್ದಿಷ್ಟವಾಗಿ ಅಣುಸ್ಥಾವರದ ಸೆಂಟ್ರಿಫ್ಯೂಜ್‌ಗಳನ್ನೆ ಗುರಿಯಾಗಿರಿಸಿ ಇರಾನಿನ ಅಣುಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಕುಂಠಿತಗೊಳಿಸಿದ ಸ್ಟಕ್ಸ್‌ನೆಟ್ ಅಮೆರಿಕಾ ಮತ್ತು ಇಸ್ರೇಲ್ ಸೇರಿ ಇರಾನಿನ ವಿರುದ್ಧ ಬಳಸಲು ತಯಾರಿಸಿದ ಸೈಬರ್ ಅಸ್ತ್ರ ಎಂದು ಜೂನ್ ೧. ೨೦೧೨ ರಂದು “ನ್ಯೂಯಾರ್ಕ್ ಟೈಮ್ಸ್” ವರದಿ ಮಾಡುತ್ತದೆ. ಹಾಗೆಯೆ ಈ ಕಾರ್ಯಾಚರಣೆಯ ಹೆಸರು “ಆಪರೇಷನ್ ಒಲಂಪಿಕ್ ಗೇಮ್ಸ್” ಎಂಬುದನ್ನು ಉಲ್ಲೇಖಿಸುತ್ತದೆ.
ದೇಶವೊಂದು ಯಾವುದೇ ಸೈನಿಕರನ್ನು ಕಳುಹಿಸದೆ, ವಾಯುಪಡೆ ನೌಕಾಪಡೆಗಳನ್ನು ನಿಯೋಜಿಸದೆ ಗುಂಡಿನ ಆರ್ಭಟವೂ ಇಲ್ಲದೆ ಹೇಗೆ ಯುದ್ಧ ಮಾಡಬಹುದು ಹಾಗೂ ಇದರಿಂದ ಹೇಗೆ ಶತ್ರು ರಾಷ್ಟ್ರವನ್ನು ಹಣೆಯಬಹುದೆಂಬ ಪಾಠವನ್ನು ಅಮೆರಿಕಾ ಮತ್ತು ಇಸ್ರೇಲ್ ಜಗತ್ತಿಗೆ ಹೇಳಿಕೊಟ್ಟವು.





