ಅವಿವೇಕಿ ಮಿತ್ರನಿಗಿಂತ ವಿವೇಕಿ ಶತ್ರು ಮೇಲು
ಪ್ರವೀಣ ಓದೋ ವಿಷಯದಲ್ಲಿ ಯಾವಾಗ್ಲೂ ಸೋಂಬೇರಿ,ಅಪ್ಪ ಅಮ್ಮ ಎಷ್ಟು ಬೈದರೂ ತನ್ನ ಲೋಕದಲ್ಲೇ ಮಗ್ನ, ಸ್ನೇಹಿತರ ಜೊತೆ ಯಾವಾಗ್ಲೂ ತಿರುಗಾಡೋದು, ಅಪ್ಪ ಅಮ್ಮನ ಹತ್ರ ಹಣ ತೆಗೆದುಕೊಂಡು ಸಿನಿಮಾ ನೋಡೋದು, ಭಾನುವಾರ ಬಂದ್ರೆ ಸಾಕು ಬೆಳಿಗ್ಗೆ ಇಂದ ಸಂಜೆಯವರೆಗೂ ಬೆಟ್ಟಿಂಗ್ನಲ್ಲಿ ಕ್ರಿಕೆಟ್ ಆಡೋದು ಇದೇ ಕೆಲಸ, ಅಪ್ಪ ಅಮ್ಮನಿಗೂ ಬುದ್ಧಿ ಹೇಳಿ ಹೇಳಿ ಸುಸ್ತಾಗಿತ್ತು. ಹುಡುಗ್ರ ಸಹವಾಸ ಬರೀ ಆಡುವುದಕ್ಕೆ ಸೀಮಿತವಾಗದೆ ದುಶ್ಚಟಗಳ ಕಡೆಯೂ ಸಹ ವಾಲಿತ್ತು. ಮನೆಗೆ ಬಂದಾಗ ಒಮ್ಮೆ ಧೂಮಪಾನದ ಘಮಲು ಅಮ್ಮನ ಮೂಗು ಬಡಿದಿತ್ತು. ಆಗಾಗ ಅಪ್ಪನ ಜೇಬಿನಿಂದ ನೋಟುಗಳು ಸಹ ಕಾಣೆಯಾಗುತಿದ್ದವು. ಅಪ್ಪ ಅಮ್ಮ ಇಬ್ಬರು ಚರ್ಚಿಸಿ ಏನು ಮಾಡುವುದು ಎಂದು ಯೋಚಿಸಿ ಒಂದು ನಿರ್ಧಾರಕ್ಕೆ ಬಂದರು.
ಮರುದಿನ ಭಾನುವಾರ ಪ್ರವೀಣ ಎಂದಿನಂತೆ ಹೇಳದೆ ಕೇಳದೆ ಕ್ರಿಕೆಟ್ ಆಡಲು ಹೊರಟು ಬಿಟ್ಟ, ಅಪ್ಪ ಅಮ್ಮ ಸೀದ ಅವರಪ್ಪನ ಮನೆಗೆ ಹೋಗಿ ಪ್ರವೀಣನ ತಾತನನ್ನು ಕರೆ ತಂದರು. ತಾತನಿಗೆ ವಯಸ್ಸು ಸುಮಾರು ೭೦ ಆಗಿದ್ದರು ಬಹಳ ಚುರುಕು, ಕಾಲ ಕಾಲಕ್ಕೆ ತಾನು ಸಹ ಬದಲಾಗಿದ್ದಂತಹ ಘಾಟಿ ಮುದುಕ. ಕಂಪ್ಯೂಟರ್, ಕ್ರಿಕೆಟ್, ಸಿನಿಮಾ ಎಲ್ಲಾದ್ರಲ್ಲು ಎತ್ತಿದ ಕೈ. ಕ್ರಿಕೆಟ್ ಆಡಲು ಹೋಗಿದ್ದ ಪ್ರವೀಣ ಎಂದಿನಂತೆ ಮನೆಗೆ ಬಂದ, ಬಂದೊಡನೆ ತಾತನನ್ನು ನೋಡಿ ಆಶ್ಚರ್ಯ ಚಕಿತನಾದ, ತಾತನ ಕಾಲಿಗೆ ನಮಸ್ಕಾರ ಮಾಡೋ ಅಂತ ಅಪ್ಪ ಹೇಳೋ ತನಕ ಇವ್ನಿಗೆ ತೋಚಲಿಲ್ಲ, ಮಾಡ್ತೀನಿ ಕೈ ಕಾಲು ತೊಳ್ಕೊಂದು ಬಂದೆ ಅಂತ ಸ್ನಾನದ ಮನೆಗೆ ಹೋಗಿ ಟೂತ್ ಪೇಸ್ಟ್ ನ ಒಂದಷ್ಟು ಬಾಯಿಗೆ ಹಾಕಿಕೊಂಡು ಮುಕ್ಕಳಿಸಿ ಬಂದ, ಬಂದೊಡನೆ ನಮಸ್ಕಾರ ಮಾಡಿದಾಗ ತಾತನಿಗೆ ಧೂಮಪಾನದ ಘಮಲು ತಿಳಿದು ಬಿಡ್ತು. ಅದೂ ಅಲ್ದೆ ಮೊದಲೇ ಪ್ರವೀಣನ ಅಪ್ಪ ಅಮ್ಮ ತಮ್ಮ ಮಗ ದಾರಿ ತಪ್ತಾ ಇದ್ದಾನೆ ಅನ್ನೋ ವಿಷಯ ಬೇರೆ ಮೊದಲೇ ಹೇಳಿದ್ರು. ವಿಷಯ ಗೊತ್ತಾದ್ರು ತಾತ ಮುಗುಮ್ಮನೆ ಇದ್ದರು.
ಮಾರನೆ ದಿನ ಪ್ರವೀಣ ಕಾಲೇಜಿಗೆ ಅಂತ ಹೊರಟಾಗ, ತಾತ ಸಹ ತಯಾರಾಗಿ ಮೊಮ್ಮಗನೊಂದಿಗೆ ಹೊರಡಲು ಸಿದ್ದರಾಗಿದ್ದರು, ಪ್ರವೀಣ ತಾತ ಹಾಗೆಲ್ಲ ನಿಮ್ಮನ್ನ ಕಾಲೇಜಿಗೆ ಬಿಡಲ್ಲ, ಬಹಳಾ ಶಿಸ್ತು ಅಲ್ಲಿ ಅಂತೆಲ್ಲ ಹೇಳ್ದ, ಅದಕ್ಕೆ ತಾತ ನಾ ನೋಡದೇ ಇರೋ ಕಾಲೇಜೇನೋ ಅದು, ನೀನ್ ಓದ್ತಾ ಇರೋ ಕಾಲೇಜು ನನ್ನ ಫೇಸ್ಬುಕ್ ಗೆಳೆಯ ಪ್ರಕಾಶ್ ರಾಜು ದು, ಅವರು ನಾನು ಇಲ್ಲಿಗೆ ಬಂದಿರೋ ಸ್ಟೇಟಸ್ ನೋಡಿದ್ರಂತೆ, ಫೋನ್ ಮಾಡಿದ್ರು ಅದಕ್ಕೆ ಬರ್ತಾ ಇದ್ದೀನಿ ಅಂತ ಪ್ರವೀಣಂಗೆ ಒಳ್ಳೆ ಟಾಂಗ್ ಕೊಟ್ಟ್ರು. ಪ್ರವೀಣನ ಮೊಬೈಲ್ ಗೆ ಅವನ ಗೆಳೆಯನ ಫೋನ್ ಬಂತು, ಏನ್ ಮಗಾ ಸಿನಿಮಾಗೆ ಟಿಕೆಟ್ ತೊಗೊಂಡು ಕಾಯ್ತಾ ಇದ್ದೀವಿ ಎಲ್ಲಿದ್ಯ ಇನ್ನ?? ಪ್ರವೀಣ,ತಾತನ ಜೊತೆ ಇದ್ದೀನಿ ಮಗಾ ಆಮೇಲೆ ಫೋನ್ ಮಾಡ್ತೀನಿ ಅಂದ. ಫೋನ್ ಕಟ್ ಆದ ಮೇಲೆ ತಾತ ಕೇಳಿದ್ರು ಏನು ಸಿನಿಮಾಗೆ ಹೋಗ್ಬೇಕ ಅಂತ, ಅದಕ್ಕೆ ಪ್ರವೀಣ ಹೌದು ನಿಮಗೆ ಹೇಗೆ ಗೊತ್ತಾಯ್ತು ತಾತ ಅಂದ, ಅದಕ್ಕೆ ರಾತ್ರಿ ನೀನು ನಿನ್ನ ಗೆಳೆಯನ ಜೊತೆ ಫೋನಲ್ಲಿ ಮಾತಾಡ್ತಾ ಇದ್ದಲ್ಲ ಆಗ ಕೇಳಿಸ್ತು ನಂಗೆ ಅಂದ್ರು. ಆದ್ರೆ ಕಾಲೇಜಿಗೆ ಚಕ್ಕರ್ ಹೊಡೆದು ಸಿನಿಮಾ ನೋಡೋದು ತಪ್ಪಲ್ವ ಅಂದ್ರು. ಪ್ರವೀಣನಿಗೆ ಉತ್ತರ ಕೊಡಲು ಆಗ್ಲಿಲ್ಲ, ಕಡೆಗೆ ತಾತ, ನಿನ್ ಸ್ನೇಹಿತನಿಗೆ ಫೋನ್ ಮಾಡಿ ಹೇಳು ನನಗೂ ಒಂದು ಟಿಕೆಟ್ ತೊಗೊ ಅಂತ ನಾನು ಬರ್ತೀನಿ ಅಂದ್ರು. ಪ್ರವೀಣನಿಗೆ ಒಂದು ಕಡೇ ಖುಷಿ ಆಯ್ತು ಮತ್ತೆ ಭಯ ಸಹ ಆಯ್ತು ಮನೇಲಿ ಹೇಳಿಬಿಟ್ರೆ ಅಂತ ಅಷ್ಟ್ರಲ್ಲಿ ತಾತ, ನೀನೇನು ಯೋಚಿಸ ಬೇಡ ಮನೇಲಿ ನಾ ಏನು ಈ ವಿಷಯ ತಿಳಿಸಲ್ಲ ಅಂದಾಗ ಸ್ವಲ್ಪ ಸಮಾಧಾನ ಆಯ್ತು.






