ನೆಹರೂ ಎಂಬ ಸ್ವಾರ್ಥ ರಾಜಕಾರಣಿ ಮತ್ತು ನೇತಾಜಿ ಎಂಬ ಸ್ವಾತಂತ್ರ್ಯ ಸೇನಾನಿ
– ರಾಕೇಶ್ ಶೆಟ್ಟಿ
“ಸುಭಾಷ್ ಸೈನ್ಯವೇನಾದರೂ ಭಾರತಕ್ಕೆ ಬಂದರೆ ನಾನು ಕತ್ತಿ ಹಿಡಿದು ಹೋರಾಡುತ್ತೇನೆ”. ಹೀಗೆ ಹೇಳಿದ ಕಠಾರಿವೀರ ಯಾವುದೋ ಬ್ರಿಟಿಷನಲ್ಲ.ಗಾಂಧಿ ಪಕ್ಷದೊಳಗಿನ ಬ್ರಿಟಿಷ್ ಶ್ರೀಮಾನ್ ಚಾಚಾ ನೆಹರೂ.ಅಷ್ಟಕ್ಕೂ ನೆಹರೂವನ್ನು “ಗಾಂಧಿ ಪಕ್ಷದೊಳಗಿನ ಬ್ರಿಟಿಷ್” ಎಂದು ನಾನು ಕರೆಯುತ್ತಿಲ್ಲ.ಖುದ್ದು ನೆಹರೂ ಅವರ ಅಮೇರಿಕಾದ ಗೆಳೆಯನಾಗಿದ್ದ ಜಾನ್ ಕೆನೆತ್ ಗಾಲ್ಬ್ರೈತ್ ಬಳಿ “ಭಾರತವನ್ನು ಆಳುವ ಕಡೆಯ ಬ್ರಿಟಿಷ್ ನಾನೇ” ಎಂದು ಹೇಳಿಕೊಂಡಿದ್ದರು. (ಈ ಜಾನ್ ಎಂತ ಮಹಾನುಭಾವನೆಂದರೆ, ಭಾರತವು ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿದ್ದು ಪುಣ್ಯ ಎನ್ನುವಂತ ಮನಸ್ಥಿತಿಯವ)
ಗಾಂಧಿ ಪಕ್ಷದೊಳಗಿನ ಬ್ರಿಟಿಷ್ ಎನ್ನಲಿಕ್ಕೆ ಇನ್ನೊಂದು ಸತ್ಯವೂ ಈಗ ಬಹಿರಂಗವಾಗಿದೆ.ಭಾರತವು ಸ್ವತಂತ್ರವಾಗಿ, ಸುಮಾರು ೨೦ ವರ್ಷಗಳ ಕಾಲ ನೇತಾಜಿ ಕುಟುಂಬದ ಮೇಲೆ ಶ್ರೀಮಾನ್ ನೆಹರೂ ಅವರ ಘನ ಸರ್ಕಾರ “ಗೂಢಚಾರಿಕೆ”ಯನ್ನು ಮಾಡಿದೇ ಎಂಬುದೇ ಆ ಸತ್ಯ.ಅದೂ ಬ್ರಿಟಿಷರ MI15 ಎಂಬ ಗೂಢಚಾರ ಸಂಸ್ಥೆಯೊಂದಿಗೆ ಸೇರಿಕೊಂಡು! ಹೀಗಿರುವಾಗ ನೆಹರೂ ತನ್ನನ್ನು ತಾನು “I am the last Englishman to rule in India.” ಎಂದಿದ್ದು ಸರಿಯಾಗಿಯೇ ಇದೆ ಅಲ್ಲವೇ? ಅಷ್ಟಕ್ಕೂ ಬ್ರಿಟಿಷರಿಗೆ ನೇತಾಜಿಯವರ ಮೇಲೆ ಗೂಢಚಾರಿಕೆ ಮಾಡಲಿಕ್ಕೆ ಕಾರಣಗಳಿದ್ದವು.ಆದರೆ ನೆಹರೂ ಮಹಾಶಯರಿಗೇನಿತ್ತು ಅಂತ ಕಾರಣ? “ಅಭದ್ರತೆ” ಭಾವವೇ?ನೇತಾಜಿಯವರು ತೈಪೆಯ ವಿಮಾನಾಪಘಾತದಲ್ಲಿ ಮರಣಹೊಂದಿದರು ಎಂದು ಸೃಷ್ಟಿಸಲಾಗಿದ್ದ ಸುದ್ದಿಯನ್ನು ಇತರರಂತೆ ನೆಹರೂ ಸಹ ನಂಬಿರಲಿಲ್ಲ.ಒಂದು ವೇಳೆ ಸ್ವತಂತ್ರ ಭಾರತಕ್ಕೆ ನೇತಾಜಿ ಕಾಲಿಟ್ಟರೆ,ಗಾಂಧೀಜಿಯ ಮರಣದ ನಂತರ ಏಕಮೇವಾದ್ವೀತಿಯನಂತಿರುವ ತನ್ನ ಕುರ್ಚಿ ಉಳಿಯುವುದಿಲ್ಲವೆಂಬ ಘೋರ ಸತ್ಯ ತಿಳಿದಿದ್ದರಿಂದಲೇ? ನೆಹರೂವಿಗೆ,ನೇತಾಜಿಯವರ ಮೇಲೆ ಅಂತದ್ದೊಂದು ಅಭದ್ರತೆ,ಈರ್ಷ್ಯೆ ಇರಲಿಲ್ಲವೆಂದಾದರೇ, ಬ್ರಿಟನ್ ಪ್ರಧಾನಿಯಾಗಿದ್ದ ಕ್ಲೆಮೆಂಟ್ ಆಟ್ಲಿಯವರಿಗೆ,ಸುಭಾಷ್ ರಷ್ಯಾದಲ್ಲಿ ಇರುವ ಬಗ್ಗೆ ಮತ್ತು ರಷ್ಯಾ ಮಿತ್ರಪಡೆಗಳಿಗೆ ನಂಬಿಕೆ ದ್ರೋಹ ಮಾಡಿದಂತೆ ಎಂಬಂತ ಸಾಲುಗಳಿರುವ ಪತ್ರವೊಂದನ್ನು ಬರೆದಿದ್ದರು ಎನ್ನುವುದು ಸುಳ್ಳೇ? ಅದೆಲ್ಲಾ ಬಿಡಿ.ಸ್ವಾತಂತ್ರ್ಯ ಸಿಕ್ಕ ನಂತರ ಐ.ಎನ್.ಎ ಸೈನಿಕರನ್ನು ನೆಹರೂ ನಡೆಸಿಕೊಂಡ ರೀತಿ ನೋಡಿ.ಆ ಸೈನಿಕರಿಗೆ ಭಾರತೀಯ ಸೈನ್ಯದಲ್ಲಿ ಕಾಲಿಡಲು ಬಿಡಲಿಲ್ಲ.ಪಿಂಚಣಿಗಾಗಿ ಆ ಸೈನಿಕರು ೧೯೭೭ರವರೆಗೂ ಕಾಯಬೇಕಾಯಿತು! ಆಜಾದ್ ಹಿಂದ್ ಸೈನಿಕರು ಭಾರತೀಯ ಸೇನೆ ಸೇರಿಕೊಂಡ ಮೇಲೆ ನೇತಾಜಿ ಪ್ರತ್ಯಕ್ಷವಾದರೇ,ಸೈನ್ಯ ಅವರ ಪರ ನಿಂತೀತೂ ಎಂಬ ಭಯವಿತ್ತೇ? ನೆಹರೂ ಅವರ ಈ ನಡೆಗಳನ್ನೆಲ್ಲ ಹೇಗೆ ಅರ್ಥೈಸಿಕೊಳ್ಳಬೇಕು?






