ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 31, 2010

4

ಆಲದ ಮರ ಮತ್ತು ಅತೃಪ್ತ ಆತ್ಮಗಳು

‍ನಿಲುಮೆ ಮೂಲಕ

ಸಂತೋಷ್ ಆಚಾರ್ಯ

ಈ ದೆವ್ವ ಭೂತಗಳು ಪ್ರತಿ ಹಳ್ಳಿಯ ಅವಿಭಾಜ್ಯ ಭಾಗ! ಒಂದು ರೀತಿ ಹಳ್ಳಿಯ ಬದುಕಿನ ಹಾಸು ಹೊಕ್ಕುಗಳಲ್ಲಿ ಸೇರಿಕೊಂಡ ಹಾರರ್ ಸ್ಕೋಪುಗಳಿದ್ದಂತೆ. ಪಟ್ಟಣದಲ್ಲಿ ಪಾಳು ಬಂಗಲೆಯಲ್ಲಿ, ಸ್ಮಷಾನದಲ್ಲಿ ಆವಾಸಿಯಾಗಿದ್ದರೂ ಹಳ್ಳಿಯಲ್ಲಿ ಈ ಪ್ರೇತಗಳಿಗೆ ಮರಗಳೆಂದರೆ ಅಚ್ಚು ಮೆಚ್ಚು! ಅದರಲ್ಲೂ ಹುಣಸೇ ಮರವೆಂದರೆ ಪ್ರಾಣ. ಇದನ್ನು ಪ್ರವೀಣ್ ಮಾಯ್ಕರ್ ಅವರ ಒಂದು ಬರಹ ಕೂಡ ಸ್ಪಷ್ಟೀಕರಿಸುತ್ತದೆ. ಹಾಗೆ ನೋಡುವುದಾದರೆ ನನ್ನ ಮತ್ತು ಈ ಪ್ರೇತಗಳ ಸಂಬಂಧ ಏನೇನೂ ಇಲ್ಲ. ಸುಮ್ಮನೆ ಯಾವುದೋ ನೆನಪಾದ ಹಳೆಯ ವಿಷಯವೊಂದು ನನ್ನ ಮನಃಪಟಲಕ್ಕೆ ಈ ರಾತ್ರಿ ಬಂದಿದ್ದರಿಂದ ಈ ಬರಹ! ಬೆಳಿಗ್ಗೆವರೆಗೆ ಆಫೀಸಿನಿಂದ ಕದಲುವ ಹಾಗಿಲ್ಲ, ಮನೆಗೆ ಹೋಗುವ ಹಾಗಿಲ್ಲ. ಆದ್ದರಿಂದ ಚಿಂತೆಯಿಲ್ಲ.

ಮನೆಯ ಕಾಂಪೌಂಡಿನಿಂದ ಸುಮಾರು ಐವತ್ತು ಮೀಟರ್ ದೂರದಲ್ಲಿದ್ದ ಆಲದ ಮರದಲ್ಲಿ ಭೂತವಿತ್ತು ಎಂಬುದು ಅಜ್ಜಿ ಕಲಿಸಿಕೊಟ್ಟ ಸಂಗತಿ. ಆಗ ಭೂತವೆಂದರೆ ಬಿಳಿ ಸೀರೆಯನ್ನುಟ್ಟ ಮಹಿಳೆ ಎಂದೆನಿಸುತ್ತಿದ್ದೆ. ವಿಶಾಲವಾಗಿದ್ದ ಆ ಮರದ ಯಾವುದೋ ಕೊಂಬೆಯಲ್ಲಿ ರಾತ್ರಿ ಬಂದು ನೇತಾಡುತ್ತಿರಬಹುದು ಎಂದು ನನ್ನ ಊಹೆಯಾಗಿತ್ತು. ಅದು ನಾನು ಓದುತ್ತಿದ್ದ ಪುಸ್ತಕಗಳ ಮಹಿಮೆಯೋ ಟಿವಿಯ ಮಹಿಮೆಯೋ ಅಥವಾ ಅಜ್ಜಿಯ ಮಹಿಮೆಯೋ ಭೂತವೆಂದರೆ ಹೀಗೆಯೇ ಇರತ್ತೆ ಎಂದು ನಾನು ಅಂದುಕೊಂಡಿದ್ದೆ. ಅದರ ಮೇಲೆ ಮನೆಯ ಹಿಂದಿನ ಬ್ರಾಹ್ಮಣರ ತಂದೆಯ ಶವವನ್ನೂ ಅಲ್ಲೇ ಸುಟ್ಟಿದ್ದು ಅವರ ಭೂತ ಕೂಡ ಅಲ್ಲಿ ಸೇರಿರಬಹುದು ಎಂದು ನನ್ನ ಶಂಕೆಯಾಗಿತ್ತು. ಪುರುಷರೂ ಸತ್ತ ನಂತರ ಭೂತವಾಗುತ್ತಾರೆ. ಸೊಳ್ಳೆಗಳಂತೆ ಅವು ತೊಂದರೆ ಮಾಡುವುದಿಲ್ಲ ಎಂದು ನನ್ನ ಅನಿಸಿಕೆಯಾಗಿತ್ತು. ಒಟ್ಟಾರೆ ಸತ್ತ ಬಳಿಕ ಎಲ್ಲರೂ ಭೂತವಾಗುತ್ತಾರೆ ಮತ್ತು ಆ ಮರದಲ್ಲಿ ಜೋತು ಬೀಳುತ್ತಾರೆ ಎಂದು ಅಂದುಕೊಂಡಿದ್ದೆ. ನನ್ನ ಎಷ್ಟೋ ಟೆನ್ನಿಸ್ ಬಾಲುಗಳು ಆ ಮರದ ಕೆಳಗಿದ್ದ ಪೊದೆಗಳಲ್ಲಿ ಮರೆಯಾಗಿತ್ತು. ಹುಡುಕುವ ಧೈರ್ಯ ಯಾವತ್ತೂ ಮಾಡಿರಲಿಲ್ಲ. ಆದರೆ ಕ್ರಮೇಣ ಚಿಂತನೆಗಳು ಬದಲಾದಂತೆ ಇದೆಲ್ಲಾ ನಗಣ್ಯವಾಗಿದ್ದು ಬೇರೆ ಮಾತು.

ಒಮ್ಮೆ ಆನಂದ್ ಎನ್ನುವ ಮನೆಯ ಸನಿಹವಿದ್ದ ವ್ಯಕ್ತಿಯೊಬ್ಬನಿಗೆ ಮರದ ಬಳಿ ಗೆಜ್ಜೆಗಳ ಸದ್ದು ಕೇಳಿತಂತೆ. ಇದು ಗಾಳಿ ಸುದ್ದಿಯೋ, ನಿಜಕ್ಕೂ ಏನಾದರೂ ಆಗಿತ್ತೋ ಅಥವಾ ರಾತ್ರಿಯಲ್ಲಿ ಜಿಯ್ ಗುಡುವ ಯಾವುದೋ ಕ್ರಿಮಿಯಾಗಿತ್ತೋ ಕುಡಿತದ ಅಮಲಿನಲ್ಲಿದ್ದ ಆತನಿಗೂ ಗೊತ್ತಿಲ್ಲ. ಆದರೆ ಅದರ ನಂತರ ಒಂಥರಾ ಭೀತಿ ವ್ಯಾಪಿಸಿದ್ದು ಮಾತ್ರ ಸುಳ್ಳಲ್ಲ. ಅಮ್ಮ ಅದೆಲ್ಲಾ ಸುಳ್ಳು ಎಂದೆಲ್ಲಾ ಹೇಳಿದ್ದರೂ ಅವರೂ ಹೆದರುತ್ತಿದ್ದುದು ಮನೆಗೆ ಬೇಗ ಬರಲು ಹೇಳುತ್ತಿದ್ದುದು ಇದೇ ಕಾರಣಕ್ಕೆ ಆಗಿರಬಹುದು. ಇದಕ್ಕೆ ಪುಷ್ಟಿ ಕೊಡುವಂತೆ ವಿಠಲ ಎಂಬವರು ಹೆದರಿ ಮನೆಗೆ ಬಂದು ಮನೆ ತನಕ ಬಿಡುವಂತೆ ಕೋರಿದಾಗ ಮಾತ್ರ ನಿಜಕ್ಕೂ ಏನಾದರೂ ಇದೆಯೇ ಎಂಬ ಮೊದಲ ಮೆಚ್ಯೂರ್ಡ್ ಯೋಚನೆ ಬಂದಿತ್ತು. ಆದರೆ ನಾನು ಕೆಲವೊಮ್ಮೆ ಮನೆಗೆ ಬರುವಾಗ ರಾತ್ರಿ ಹತ್ತು ಹತ್ತೂವರೆಯಾಗುತ್ತಿದ್ದರೂ ನನಗೆ ಒಮ್ಮೆಯೂ ಏನೂ ಅನಿಸದಿದ್ದದ್ದು ಯಾಕೋ!

ಈಗ ಮನೆಯ ಬಳಿಯಿದ್ದ ತುಂಬಾ ಮರಗಳಿಲ್ಲ, ಅದರಲ್ಲೂ ಇಷ್ಟವಾಗುತ್ತಿದ್ದ – ಗಾಳಿ ಮರ ರಸ್ತೆಗಾಗಿ, ಗಿಡವಾಗಿ ಸುಮಾರು ಬೆಳೆದಿದ್ದ ಶ್ರೀಗಂಧ ಕಳ್ಳರಿಗಾಗಿ ಮತ್ತು ಆಲದ ಮರ ಮನೆ ಕಟ್ಟಲೆಂದು ಉರುಳಿ, ಅಲ್ಲಿಂದ ಭೂತಗಳು ಖಾಲಿಯಾದವೋ ಅಥವಾ ಅಲ್ಲಿ ಎಂದಿಗೂ ಇರಲೇ ಇಲ್ಲವೋ ಎಂಬ ಪ್ರಶ್ನೆಗಳಿಗೆ ಉತ್ತರ ಹುದುಕಲು ನಾನೆಂದೂ ಪ್ರಯತ್ನಿಸಿಲ್ಲ. ನಿಜವಾಗಿಯೂ ಅತೃಪ್ತ ಆತ್ಮಗಳು ಯಾವುವು ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತೇನೆ, ಉತ್ತರದ ನಿರೀಕ್ಷೆಯಂತೂ ಸದ್ಯಕ್ಕಿಲ್ಲ.

ಇಲ್ಲಿಗೆ ಬಂದ ನಂತರವೂ ಒಮ್ಮೆ ಭೂತ ಹಿಡಿಯುತ್ತೇವೆಂದು ರಾತ್ರಿ ಹನ್ನೆರಡರ ನಂತರ ಒಮ್ಮೆ ಪಾಳು ಬಿದ್ದ ಸ್ಥಳಗಳಲ್ಲಿ ಅಲೆದಿದ್ದೆವು. ಅದರ ನಂತರ ಅಂತಹ ಪ್ರಯತ್ನಕ್ಕಿಳಿದಿಲ್ಲ. ಆದರೆ ಈಗಲೂ ಕೆಲವೊಮ್ಮೆ ರಾತ್ರಿಯಲ್ಲಿ ಮನೆಗೆ ಹೋಗುವಾಗ ಅಲ್ಲೋ ಇಲ್ಲೋ ’ಗ್ರಜ್ಜ್’ ಅಥವಾ ’ರಿಂಗ್’ ನಲ್ಲಿ ನೋಡಿದ ಭೂತಗಳು ಅಥವಾ ಸರಸಮ್ಮನ ಸಮಾಧಿಯ ಸರಸಮ್ಮ ಕಣ್ಮುಂದೆ ಬರುತ್ತಾರೆ. ಅದರಲ್ಲೂ ಏನೋ ಥ್ರಿಲ್ ಇರುತ್ತದೆ. ಮರುಕ್ಷಣ ಮುಖದಲ್ಲಿ ನಗುವೊಂದು ಅಯಾಚಿತವಾಗಿ ಬರುತ್ತದೆ. ಆದರೆ ನಿಜಕ್ಕೂ ಒಮ್ಮೆ ನನ್ನೆದುರು ಬಂದರೆ ನನ್ನ ಗತಿ….. ಗೋವಿಂದಾ!!!

ಚಿತ್ರಕೃಪೆ:ಗೂಗಲ್ ಇಮೇಜ್
Read more from ಲೇಖನಗಳು
4 ಟಿಪ್ಪಣಿಗಳು Post a comment
  1. K S RAGHAVENDRA NAVADA's avatar
    ಡಿಸೆ 31 2010

    ಈ ಲೇಖಕರ ಆತ್ಮಕಥೆಯ ಎಲ್ಲಾ ಭಾಗಗಳೂ ಬಹಳ ಸುಂದರವಾಗಿವೆ. ಈ ಭಾಗವೂ ಕೂಡಾ!
    ನಮಸ್ಕಾರಗಳೊ0ದಿಗೆ,
    ನಾವಡ.

    ಉತ್ತರ
  2. ಮಹೇಶ ಪ್ರಸಾದ್ ನೀರ್ಕಜೆ's avatar
    ಮಹೇಶ ಪ್ರಸಾದ್ ನೀರ್ಕಜೆ
    ಫೆಬ್ರ 19 2011

    ಎಲ್ಲಾ‌ ಭೂತಗಳು ಮರಗಳ ಮೇಲಲ್ಲ, ಬದಲಾಗಿ ಭಯದಲ್ಲಿ ಮತ್ತು ಅನೈತಿಕತೆಯಲ್ಲಿ ಮನೆಮಾಡಿಕೊಂಡಿರುತ್ತವೆ ಅಂತ ನನ್ನ ಬಲವಾದ ನಂಬಿಕೆ..

    ಉತ್ತರ
  3. ರಾಕೇಶ್ ಶೆಟ್ಟಿ's avatar
    ಫೆಬ್ರ 19 2011

    ನಾನು ದೆವ್ವದ ದರ್ಶನಕ್ಕಾಗಿ ಕಾಯಿತಿದ್ದೆನೆ, ಇವರೆಗೂ ಬರಿ ಗೆಜ್ಜೆಯ ಶಬ್ದ ಮಾತ್ರ ಸ್ಪಷ್ಟವಾಗಿ ಕೇಳಿದ್ದೇನೆ ಅಷ್ಟೆ!

    ಉತ್ತರ
  4. Parthasarathi Kunjarugiri's avatar
    Parthasarathi Kunjarugiri
    ಆಕ್ಟೋ 19 2011

    ಭೂತ, ಪ್ರೇತ ಎಂಬುದು ಕಲ್ಪನೆಯ ರೂಪ ಇರಬಹುದು. ಅದನ್ನೇ ಜನರು ಬಲವಾಗಿ ನಂಬಿಕೊಂಡಿದ್ದು ಅದರ ಅಸ್ತಿತ್ವವನ್ನು ಹುಟ್ಟು ಹಾಕಿರಬಹುದಲ್ಲವೇ?

    ಉತ್ತರ

Leave a reply to ಮಹೇಶ ಪ್ರಸಾದ್ ನೀರ್ಕಜೆ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments