ಚಿತ್ರ
೨ನೇ ಫೆಬ್ರವರಿ ೨೦೧೧ರಂದು ಎಂದಿನಂತೆ ಕಚೇರಿಯಿಂದ ಸರಿಯಾಗಿ ಸಂಜೆ ೬ ಗಂಟೆಗೆ ಮನೆಗೆ ಹೊರಟೆ. ಮೆಟ್ಟಿಲಿಳಿದು, ನನ್ನ ನಾಲ್ಕುಚಕ್ರ ವಾಹನದ ಕಡೆ ಬಂದು ಕಾರ್ ಗ್ಲಾಸ್ಗೆ ನೀರು ಹಾಕ್ತಿದ್ದೆ, ಅಷ್ಟೊತ್ತಿಗೆ ಅಲ್ಲೆ ನಿಂತಿದ್ದ ಒಬ್ಬ ಸೆಕ್ಯುರಿಟಿ, ಮೇಡಂ ಚಕ್ರದ ಏರ್ ಇಳ್ದಿದೆ, ನೋಡಿ ಅಂದ. ನೋಡ್ತೀನಿ, ಏರ್ ಇಳ್ದಿದೆ, ಪಂಚರ್ ಆಗಿರೋಹಾಗಿದೆ, ಏನಪ್ಪ ಮಾಡೋದು ಅಂತ ಯೋಚಿಸ್ತಾ, ನನ್ನ ಸಹುದ್ಯೋಗಿಯೊಬ್ಬರನ್ನ ಕರೆದು, ತೋರಿಸ್ದೆ. ಅವರು ಮೇಡಂ ಇಲ್ಲಿ ಸದ್ಯಕ್ಕೆ ಯಾರು ಸಿಕ್ಕಲ್ಲ, ಸೆಕ್ಯುರಿಟಿಯವರಿಗೆ ತಿಳಿಸಿ ಇಲ್ಲೇ ಪಾರ್ಕ್ ಮಾಡಿಹೋಗಿ, ಬೆಳಿಗ್ಗೆ ಬಂದು ಸರಿ ಮಾಡ್ಸಿ ಅಂದ್ರು. ಸರಿ ಅಂತ ಮನೆಗೆ ಬಸ್ನಲ್ಲೇ ಹೋಗೋಣ (ಆಟೋಗೆ ಯಾಕೆ ಅಷ್ಟೊಂದು ಹಣ ಕೊಡೋದು) ಅಂತ ಶೇಷಾದ್ರಿಪುರಂ ಬಸ್ ನಿಲ್ದಾಣದ ಹತ್ತಿರ ಬಂದು ಶೇಷಾದ್ರಿಪುರಂ ನಿಂದ ಸೆಂಟ್ರಲ್ ಮಾರ್ಗವಾಗಿ ಮಲ್ಲೇಶ್ವರ, ಮತ್ತೀಕೆರೆ, ಬಿಇಎಲ್ ವೃತ್ತಕ್ಕೆ ಹೋಗೋ ಬಸ್ ಹತ್ತಿದೆ (೨೭೩ಸಿ).

ಮಲ್ಲೇಶ್ವರ ಸರ್ಕಲ್ ನಿಲ್ದಾಣದ ಬಳಿ ಕಂಡಕ್ಟರ್ ನಿಲ್ಲಿಸಲು ಸೂಚಿಸಿದನಾದರೂ, ಚಾಲಕ ನಿಲ್ಲಿಸಿದ ಹಾಗೂ ಇರ್ಬೇಕು, ನಿಲ್ಲಿಸಲೂಬಾರದು ಆ ತರಹ ನಿಲ್ಲಿಸಿದ. ಇನ್ನೇನು ಬಸ್ ಹೊರಡಬೇಕು, ಅಷ್ಟೊತ್ತಿಗೆ ಸರಿಯಾಗಿ ಒಬ್ಬ ಅಂಗವಿಕಲನು (ಎರಡು ಕಾಲು ಇರಲಿಲ್ಲ) ಬಸ್ ನಿಲ್ಲಿಸಿ ಅಂತ ಬಂದರು. ನನಗಂತೂ ಆತನನ್ನು ನೋಡಿ ಬಹಳ ನೋವಾಯಿತು. ಚಾಲಕನಿಗೆ ಅದು ಕೇಳಿಸಲಿಲ್ಲ. ನಾನು ನೋಡಿ ಸುಮ್ಮನಿರೋದಿಕ್ಕೆ ಆಗ್ದೆ ಸ್ವಲ್ಪ ಬಸ್ ನಿಲ್ಲಿಸಿ, ಅವರು ಹತ್ತಲಿ ಅಂತ ಹೇಳ್ದೆ. ಚಾಲಕ ಬಸ್ಸನ್ನು ನಿಧಾನಿಸಿದ. ಆತ ಬಸ್ ಹತ್ತಿದರು. ಬಸ್ ಹತ್ತಿದ ತಕ್ಷಣ ಅವರು ಅಲ್ಲೇ ಕಂಬಿಯ ಸಹಾಯದಿಂದ ಕೆಳಗೆ ಕುಳಿತುಕೊಳ್ಳಲು ಪ್ರಯತ್ನಿಸುತ್ತಿದ್ದರು. ಮೊದಲನೇ ಸೀಟು ಅಂಗವಿಕಲರಿಗೆ ಅಂತ ಬೋರ್ಡ್ ಇದ್ರು, ಮೊದಲನೇ ಸೀಟಿನಲ್ಲಿ ಕುಳಿತಿರೋ ಜನ ಆ ಬೋರ್ಡ್ ನನಗೆ ಸಂಬಂಧಿಸಿಲ್ಲವೇನೋ ಅನ್ನೋ ರೀತಿ ನಡೆದುಕೊಳ್ತಾ ಇದ್ದಿದ್ದು ನೋಡಿ ನನಗೆ ಸಹಿಸಲಾಗಲಿಲ್ಲ. ಅಷ್ಟೊತ್ತಿಗೇ ಮಲ್ಲೇಶ್ವರ ೮ನೇ ಕ್ರಾಸ್ ನಿಲ್ದಾಣ ಬಂದಿತು. ಕಂಡಕ್ಟರ್ ಚಾಲಕನಿಗೆ ಬೇಗ ಹೊರಡು, ಬಸ್ ಹತ್ಬೇಕು ಅನ್ನೋವ್ರು ಓಡಿ ಬಂದು ಹತ್ಕೋತಾರೆ ಅಂತ ಕೊಂಕು ಮಾತು ಬೇರೆ ಆಡ್ತಿದ್ದ. ಆತನಿಗೆ ಸೀಟು ಕೊಡ್ಲಿಲ್ವಲ್ಲಾ ಅದಕ್ಕೆ ನನಗೆ ಮೊದಲೇ ಕೋಪ ಬಂದಿತ್ತು. ಹಾಗಾಗಿ ಕೋಪದಲ್ಲೇ, ಅವರಿಗೆ (ಆತನಿಗೆ) ಜಾಗ ಬಿಡಿ. ಅಷ್ಟು ಚೆನ್ನಾಗಿ ಅಂಗವಿಕಲರಿಗೆ ಅಂತ ಬೋರ್ಡ್ ಇದ್ದರೂ, ಅವರು ಕಷ್ಟಪಟ್ಟು ಕೆಳಗೆ ಕುಳಿತುಕೊಳ್ಳುವುದನ್ನು ನೋಡಿಯೂ ಜಾಗ ಬಿಡದ ನೀವು ಮನುಷ್ಯರೇ ಅಂತ ರೇಗಿದೆ. ಆಗ ಕಿಟಕಿ ಪಕ್ಕದಲ್ಲಿದ್ದ ಹುಡುಗಿ ಒಲ್ಲದ ಮನಸ್ಸಿನಿಂದ ಆತನಿಗೆ ಜಾಗ ಬಿಟ್ಟಳು. ಆತನಿಗೆ ಏನನ್ನಿಸಿತೋ ಏನೋ ಥ್ಯಾಂಕ್ಸ್ ಅಂದರು.
ನಾನು ಬಿಇಎಲ್ ವೃತ್ತ ಬರೋವರೆಗೂ ಯೋಚಿಸತೊಡಗಿದೆ. ಆ ಹುಡುಗಿಯ ಕೈಯಲ್ಲಿ ಮೊಬೈಲ್ ಇತ್ತು. ಅದರ ಜೊತೆಗೆ ಹೆಡ್ ಫೋನ್ ಹಾಕೊಂಡು ಹಾಡು ಕೇಳುತ್ತಿದ್ದಳು. ಜಾಗ ಬಿಟ್ಟಿದ್ದಿದ್ದ್ರೆ ಹಾಡು ಕೇಳಲು ತೊಂದರೆ ಆಗ್ತಿತ್ತು ಅಂತ ಬಿಡ್ಲಿಲ್ವ ಅಥವಾ ಆತ ಕಷ್ಟಪಟ್ಟಾದ್ರೂ ಸರಿ ಕೆಳಗೆ ಕುಳಿತುಕೊಳ್ಳಲಿ, ನನಗೇನಾಗ್ಬೇಕು ಅನ್ನೋ ಮನುಷ್ಯತ್ವನೇ ಇಲ್ಲದೇ ಇರೋ ಮನೋಭಾವ ಇತ್ತ. ನಮ್ಮ ಸುತ್ತ ಮುತ್ತ ಏನಾಗ್ತಿದೆ ಅನ್ನೋ ಪರಿವೆಯೇ ಇಲ್ಲದೆ ಇರೋ ಈ ಹುಡುಗಿಯರಿಗೇನಾಗಿದೆ? ಬರೀ ಮೊಬೈಲ್ನಲ್ಲಿ ಹಾಡು, ಮಾತು, ಮೆಸೇಜ್ ಮೇಲೆ ಮೆಸೇಜ್ ಕಳಿಸಿಕೊಂಡು ಬಸ್ನಲ್ಲಿ ಪ್ರಯಾಣ ಮಾಡ್ಬಿಟ್ರೆ ಆಗೋಯ್ತ.
ಇಷ್ಟೆಲ್ಲಾ ಯೋಚಿಸೋ ಹೊತ್ತಿಗೆ ಬಿಇಎಲ್ ವೃತ್ತ ಬಂದೇಬಿಡ್ತು. ಇಳಿದು ಮನೆ ಕಡೆಗೆ ಹೊರಟೆ.
ಚಿತ್ರಕೃಪೆ : ಅಂತರ್ಜಾಲ
ಮಾನವೀಯತೆಯ ಸಂಸ್ಕಾರ ನೀಡುವ ಹಿರಿಯರಿಗೆ ಪುರುಸೊತ್ತೇ ಇಲ್ಲ ಈಗ
ಆಧುನಿಕತೆಯ ಭರಾಟೆಯಲ್ಲಿ ಮಾನವೀಯತೆ ಕಳೆದುಕೊಂಡಿದೆ ತನ್ನ ಜಾಗ!
ತಪ್ಪು ಒಪ್ಪುಗಳ ಪರಾಮರ್ಶೆ ಮಾಡಿ ತಿಳಿಹೇಳುವವರನೇ ತಿಳಿಗೇಡಿಗಳೆಂಬರು
ತಮ್ಮನುಕೂಲಕ್ಕೆ ಹೊಂದುವ ಜೀವನ ನಡೆಸುವುದನೇ ವ್ಯಕ್ತಿಸ್ವಾತಂತ್ರ್ಯವೆಂಬರು
ತಪ್ಪುಒಪ್ಪುಗಳ ಪರಾಮರ್ಶೆ ಮಾಡುವವರನು ತಿಳಿಗೇಡಿ ಅಂದರೆ ಅದು ಅವರಿಗೆ ನಷ್ಟ
ಸತ್ಯಕ್ಕೆ ಹೋರಾಡುವವರನು ತಡೆಯೋದು ಬಲು ಕಷ್ಟ
nijavagalu nanu koda e ritiya anubhavagalnnu anubhavisiddene
innumunde yaradaru angavikalar jote hage nededukondare nanu koda avar virudda kram kai golluve
you are the best