– ಡಾ ಅಶೋಕ್ ಕೆ ಆರ್

ಕೇರಳದಲ್ಲಿ, ಮಂಗಳೂರಿನಲ್ಲಿ, ಮೈಸೂರಿನ ಬನ್ನಿಮಂಟಪದಲ್ಲಿ ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿಕೊಂಡಿರುವ ಮುಸ್ಲಿಮರನ್ನು, ಕೆಲವು ಹಿಂದೂಗಳನ್ನು ನೋಡಿದಾಗ ನಮ್ಮ ಮನದಲ್ಲಿ ಮೂಡುವ ಮೊದಲ ಅಭಿಪ್ರಾಯ “ದುಬೈಗ್ ಹೋಗಿ ಚೆನ್ನಾಗಿ ದುಡ್ಕೊಂಡ್ ಬಂದಿದಾನ್ ನೋಡು” ಎಂಬುದೇ ಆಗಿರುತ್ತದೆ. ಸ್ವಲ್ಪಮಟ್ಟಿಗದು ಸತ್ಯವೂ ಹೌದು. ಹೆಚ್ಚು ಹಣ ದುಡಿದ ದೊಡ್ಡ ಮನೆಗಳಿಂದಾಚೆಗೆ ಇರುವ ‘ದುಬೈ ರಿಟರ್ನ್ಡ್’ ಬಡಜನರ ಬವಣೆ ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ. ಐಷಾರಾಮಕ್ಕಲ್ಲದೆ ಜೀವನೋಪಾಯಕ್ಕಾಗಿ ಮನೆಯ ಆರ್ಥಿಕ ಸಂಕಷ್ಟಗಳ ನಿವಾರಣೆಗಾಗಿ ಸೌದಿ ಅರೇಬಿಯಾದಂಥಹ ದೇಶಗಳಿಗೆ ವಲಸೆ ಹೋಗುವ ಜನರ ಪಡಿಪಾಟಲುಗಳನ್ನು ವಿವರಿಸುವ ಚಿತ್ರವೇ ಮಲಯಾಳಂನ ‘ಗದ್ದಾಮ’ ಅರ್ಥಾತ್ ಮನೆಗೆಲಸದವಳು. ಮನೆಗೆಲಸಕ್ಕೆ ಹೋದ ಹೆಣ್ಣುಮಕ್ಕಳ ನೋವು, ಗಾರೆ ಕೆಲಸ, ಡ್ರೈವರ್ ಕೆಲಸಕ್ಕೆ ಹೋದ ಗಂಡಸರ ಆಕ್ರಂದನವನ್ನು ಎಳೆಎಳೆಯಾಗಿ ಬಿಚ್ಚಿಡುತ್ತದೆ ‘ಗದ್ದಾಮ’. ಇವರ ಸಂಕಷ್ಟಗಳ ಜೊತೆಗೆ ಮುಸ್ಲಿಮರ ಪವಿತ್ರ ಸ್ಥಳಗಳಿರುವ ನಾಡಿನ ಅಪವಿತ್ರ ಮನಸ್ಸುಗಳ ಅನಾವರಣವೂ ಆಗುತ್ತದೆ. ಪ್ರವಾದಿ ಹುಟ್ಟಿದ ಓಡಾಡಿದ ನಾಡಿನ ಸೈತಾನರ ಪರಿಚಯ ಮಾಡಿಕೊಡುತ್ತದೆ.
ಕಮಲ್ ನಿರ್ದೇಶನದ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಅಸ್ವತಿಯಾಗಿ ಕಾವ್ಯ ಮಾಧವನ್ ನೈಜವಾಗಿ ಅಭಿನಯಿಸಿದ್ದಾರೆ. ಅಪರಿಚಿತ ನಾಡು ಹುಟ್ಟಿಸುವ ಅಷ್ಟೂ ಭಯವನ್ನು ಅವರ ಕಣ್ಣುಗಳಲ್ಲೇ ಕಾಣಬಹುದು. ಪ್ರೀತಿಯ ಗಂಡ ನದಿಯಲ್ಲಿ ಮುಳುಗಿಹೋಗುತ್ತಿದ್ದ ಮಕ್ಕಳನ್ನುಳಿಸಲು ಹೋಗಿ ಸಾವಿಗೀಡಾದಾಗ ಅಸ್ವತಿಗೆ ಉಳಿದಿದ್ದು ಮನೆಯಲ್ಲಿನ ಸಾಲ – ಕಷ್ಟಗಳು ಮಾತ್ರ. ಸಾಲ ತೀರಿಸುವ ಸಲುವಾಗಿ ಸೌದಿಗೆ ತೆರಳುತ್ತಾಳೆ. ಸೌದಿಯ ವಿಮಾನ ನಿಲ್ದಾಣದಲ್ಲಿ ಪರಿಚಿತಳಾದ ಮುಸ್ಲಿಮಳೊಬ್ಬಳು ಹಣೆಯ ತಿಲಕ ಅಳಿಸುವಂತೆ ಸಲಹೆ ನೀಡಿ ತಲೆಯ ಮೇಲೆ ಹೊದ್ದುಕೊಳ್ಳಲು ಕಪ್ಪು ವಸ್ತ್ರವನ್ನು ನೀಡುವುದರೊಂದಿಗೆ ಚಿತ್ರ ಆರಂಭವಾಗುತ್ತದೆ. ಅನ್ಯಧರ್ಮೀಯ ವಿಚಾರಗಳಿಗೆ ಸೌದಿಯಂಥ ಧರ್ಮಾಧಾರಿತ ದೇಶದ ಅಸಹನೀಯ ಅಭಿಪ್ರಾಯಗಳು ಇದೊಂದೇ ದೃಶ್ಯದಲ್ಲಿ ವಿವರಿಸಲ್ಪಟ್ಟಿದೆ. ಅಸ್ವತಿಯ ಊರಿನವನಾದ ಉಸ್ಮಾನ್ ತಾನು ಕೆಲಸ ಮಾಡುವ ಮನೆಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಇಂಡೋನೇಷ್ಯಾದ ಮುಸ್ಲಿಂ ಯುವತಿಯೊಬ್ಬಳು ಕೆಲಸದಲ್ಲಿದ್ದಾಳೆ. ಅಸ್ವತಿಯ ಕಷ್ಟಗಳು ನಿಧಾನಕ್ಕೆ ಆರಂಭವಾಗುತ್ತದೆ, ಆ ಮನೆಯವರ ಕ್ರೌರ್ಯಭರಿತ ಮನಸ್ಸುಗಳನ್ನು ತೆರೆಯಲ್ಪಡುತ್ತದೆ. ದೂರದ ದೇಶದಲ್ಲಿ ದೈಹಿಕ ಅಗತ್ಯಗಳಿಗಾಗಿ ಉಸ್ಮಾನ್ ಇಂಡೋನೇಷ್ಯಾದ ಯುವತಿಯೊಡನೆ ಸೇರುತ್ತಿರುತ್ತಾನೆ. ಈ ವಿಷಯ ಮನೆಯವರಿಗೆ ತಿಳಿದು ಉಸ್ಮಾನನನ್ನು ಓಡಿಸಿ, ಇಂಡೋನೇಷ್ಯಾ ಯುವತಿಗೆ ಸಾಯುವಂತೆ ಬಡಿಯುತ್ತಾರೆ. ಇವರು ನೀಡುವ ಹಿಂಸೆಗಿಂತ ಅನೈತಿಕತೆಯೇ ಮಾನವೀಯವೇನೋ? ಇಂಡೋನೇಷ್ಯಾ ಯುವತಿಗೆ ಮನೆಯಿಂದ ಓಡಿಹೋಗಲು ಸಹಾಯ ಮಾಡಿದ ನಂತರ ಮನೆಯವರ ಅಷ್ಟೂ ಕೋಪ ಅಸ್ವತಿಯ ಮೇಲೆ ತಿರುಗುತ್ತದೆ. ಅಲ್ಲಿಂದ ಓಡಿಹೋಗಿ ನಾನಾ ಕಷ್ಟಗಳನ್ನನುಭವಿಸಿ ಜೈಲುವಾಸವನ್ನೂ ಕಂಡು ರಜಾಕಿನ ನೆರವಿನಿಂದ ಕೊನೆಗೆ ಪಾರಾಗುತ್ತಾಳೆ. ಇದು ಕೇವಲ ಹಿಂಸೆಯ ಚಿತ್ರವಲ್ಲ,ಅಮಾನವೀಯತೆಯ ಮರುಭೂಮಿಯಲ್ಲೂ ಅಲ್ಲಲ್ಲಿ ಮಾನವೀಯ ಓಯಸಸ್ಸುಗಳಿವೆ. ‘ಅನಾಥ ಭಾರತೀಯ ‘ ಹೆಣಗಳನ್ನು ಗುರುತಿಸಿ ಮನೆಗೆ ಮುಟ್ಟಿಸುವ ಪ್ರಯತ್ನ ಮಾಡುವ ರಜಾಕನ ಪಾತ್ರ ಮೆಚ್ಚುಗೆಗೆ ಅರ್ಹ. ರಜಾಕನ ಮುಖಾಂತರ ಅಕ್ರಮ ವಲಸೆಯ ಬಗ್ಗೆ, ರಜಾಕನಿಂದ ವರದಿ ಪಡೆದು ‘ರೋಚಕ ಕಥೆ’ಗಳನ್ನಾಗಿಸುವ ಎಸಿ ರೂಮಿನ ಪತ್ರಕರ್ತನ ಬಗ್ಗೆ ಹೇಳುತ್ತಾ ಹೋಗುತ್ತಾರೆ ನಿರ್ದೇಶಕರು. ಎಲ್ಲರಿಗೂ ನೆರವು ನೀಡುವ ಧಾವಂತದಲ್ಲಿ ತನ್ನ ಪಾಸ್ ಪೋರ್ಟ್ ನವೀಕರಿಸುವುದನ್ನೇ ಮರೆತು ಬಿಟ್ಟ ರಜಾಕನಿಗೆ ತನ್ನ ತಾಯಿಯ ಅಂತ್ಯಕ್ರಿಯೆಗೇ ಭಾರತಕ್ಕೆ ಮರಳಲಾಗುವುದಿಲ್ಲ!
ಸೌದಿ ಅರೇಬಿಯಾವನ್ನು ಆದರ್ಶ ದೇಶವೆಂಬಂತೆ ನೋಡುವ ಮುಸ್ಲಿಮರು ಮತ್ತು ಭಾರತವನ್ನು ಹಿಂದೂ ದೇಶವಾಗಿ ಮಾಡುವ ಸಂಕಲ್ಪ ತೊಡುವ ಹಿಂದೂಗಳಿಬ್ಬರೂ ನೋಡಲೇಬೇಕಾದ ಚಿತ್ರ ‘ಗದ್ದಾಮ’
* * * * * * * *
ಚಿತ್ರಕೃಪೆ : ಅಂತರ್ಜಾಲ
Hi Ashok..watched movie also..it was very..good.
ಚಿತ್ರವನ್ನು ನೋಡಲೇಬೇಕೆಂಬ ಆಸೆ ಹುಟ್ಟಿಸುವಂತಿದೆ ಲೇಖನ.
ಆದರೆ, ನನಗೆ ಮಲೆಯಾಳಂ ಬರುವುದಿಲ್ಲ. ಅದು ಇಂಗ್ಲಿಷ್ ಅಥವಾ ಕನ್ನಡ “Sub-Titles”ನೊಂದಿಗೆ ಬಂದರೆ ಖಂಡಿತ ನೋಡುತ್ತೇನೆ.
ಉತ್ತಮ ಚಿತ್ರದ ಕುರಿತಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು.
ನಾನು ಭಟ್ಕಳದಲ್ಲಿದ್ದಾಗ ದುಬೈಗೆ ಹೊಟ್ಟೆಪಾಡಿಗಾಗಿ ಹೋಗಿರುವ ಅನೇಕರನ್ನು ಕಂಡಿದ್ದೆ. ಅಲ್ಲಿನ ಮೀನುಗಾರರ ಜೀವನ ಬಹಳ ಕಷ್ಟದ್ದು.
ಸ್ವಲ್ಪ ಹೆಚ್ಚಿಗೆ ಹಣ ಸಿಗುತ್ತದೆ ಎನ್ನುವ ಆಸೆಗೆ ದೂರದ ದೇಶಕ್ಕೆ ಹೋಗಿ, ಇನ್ನಿಲ್ಲದ ಕಷ್ಟಗಳನ್ನು ಸಹಿಸುತ್ತಾರೆ. ಕೆಲವರು ಮನೆಗೆ ಆಗಾಗ ಹಣದ ಸಹಾಯ ಮಾಡುತ್ತಾರೆ. ಮತ್ತೆ ಕೆಲವರು “ಏನೇನೋ” ಆಗಿ ಹೋಗುತ್ತಾರೆ. ಇನ್ನೂ ಕೆಲವರು “ಕಳೆದು” ಹೋಗುತ್ತಾರೆ. ಒಟ್ಟಿನಲ್ಲಿ ಸುಖವನ್ನರಸಿ ಹೋಗುವುದು “ಮಾಯಾಮೃಗ”ವನ್ನು ಅಟ್ಟಿಸಿಕೊಂಡು ಹೋದಂತೆ ಎನ್ನುವುದು ಸ್ಪಷ್ಟ.
it is available with english subtitles!
illandare nanage taane elli artavaagutittu!!
ashok> it is available with english subtitles
So, can I download it online or is it available as DVD in some store?
ಮಾನ್ಯ ಡಾ:ಅಶೋಕ್ ರವರೆ, ” ಗದ್ದಾಮ ” ಚಿತ್ರದ ಬಗ್ಗೆ ಒಳ್ಳೆಯ ಮಾಹಿತಿ ನೀಡಿದ್ದೀರಿ. ನಿಮಗೆ ವಂದನೆಗಳು.ನೋಡುವ ಮನಸ್ಸಗ್ಗುತ್ತಿದೆ ಆದರೆ ನೇಮಗೆ ಮಲಯಾಳಂ ಇಂಗ್ಲೀಷ್ ಎರಡೂ ಭಾಷೆ ಬರುವುದಿಲ್ಲ. ನಮ್ಮ ರಾಜ್ಯದಲ್ಲಿ ಕನ್ನಡಕ್ಕೆ ಡಬ್ ಮಾಡುವಂತಿಲ್ಲ. ಇದು ಕನ್ನಡಿಗರ ದುರಾದೃಷ್ಠ. ವಿದೇಶಿ ವ್ಯಾಮೋಹ ಮತ್ತು ಹಣ ಸಂಪಾದನೆಯ ಬಗ್ಗೆ ಈ ಮೊದಲೇ ಇಂತಹ ಚಿತ್ರಗಳು ಬರಬೇಕಿತ್ತು ತಡವಾಗಿದೆ. ಅದರೂ ಬಂದಿದೆ. ಇಂತಹ ಚಿತ್ರಗಳನ್ನು ನೋಡಿಯಾದರೂ ವಿದೇಶಿ ವ್ಯಾಮೋಹ ಭಾರತೀಯರು ಬಿಟ್ಟರೆ ಒಳ್ಳೆಯದು. ಅಲ್ಲವೇ?
Nanjunda Raju> ಇಂತಹ ಚಿತ್ರಗಳನ್ನು ನೋಡಿಯಾದರೂ ವಿದೇಶಿ ವ್ಯಾಮೋಹ ಭಾರತೀಯರು ಬಿಟ್ಟರೆ
ಇದು ವಿದೇಶೀ ವ್ಯಾಮೋಹಕ್ಕೆ ಸಂಬಂಧಿಸಿದ ಚಿತ್ರವಲ್ಲ ಎನ್ನುವುದು ನನ್ನ ಭಾವನೆ.
ಸೌದಿಯಂತಹ ದೇಶಗಳಿಗೆ ಹೋಗುವ ಭಾರತೀಯರು ತಮ್ಮ ಹೊಟ್ಟೆಪಾಡಿಗಾಗಿ ಅಲ್ಲಿಗೆ ಹೋಗುತ್ತಿದ್ದಾರೆ. ಅವರಿಗೆ ತಾವಿರುವ ಸ್ಥಳದಲ್ಲಿ ಕೆಲಸಗಳು ದೊರೆಯುತ್ತಿಲ್ಲ.
ಸೌದಿಗೆ ಹೋಗುವಂತೆಯೇ ಮುಂಬೈಗೂ ಅವರು ಹೋಗುತ್ತಾರೆ.
ಆ ರೀತಿ ಹೋಗುವವರಿಗೆ ಹೆಚ್ಚು ಹಣಸಂಪಾದನೆ ಎನ್ನುವುದಷ್ಟೇ ಆಕರ್ಷಣೆ. ಆದರೆ, ಅಲ್ಲಿಗೆ ಹೋದನಂತರ ಅವರ ಪಾಡು ದೇವರಿಗೇ ಪ್ರೀತಿ ಎನ್ನುವಂತಾಗುತ್ತದೆ.
ವಿದೇಶೀ ವ್ಯಾಮೋಹವಿರುವುದು ಅಮೆರಿಕಾ, ಲಂಡನ್, ಇತ್ಯಾದಿ ದೇಶಗಳಿಗೆ “White Collorred Jobs” ಹುಡುಕಿಕೊಂಡು ಹೋಗುವವರಿಗಿದೆ.
ಅವರು ಮಾಡುವ ಕೆಲಸಗಳಿಗೆ ಭಾರತದಲ್ಲೂ ಒಳ್ಳೆಯ ಸಂಬಳ ಬರುತ್ತದೆ. ಆದರೆ, ಅವರಿಗೆ ವಿದೇಶಗಳ ಆಕರ್ಷಣೆ. ಜೊತೆಗೆ, ಮನೆಯವರಿಂದಲೂ ಒತ್ತಾಯ. “ನಿಮ್ಮ ಮಗ ಇನ್ನೂ ಅಮೇರಿಕಕ್ಕೆ ಹೋಗಿಯೇ ಇಲ್ಲವೆ?” ಎಂದು ಪಕ್ಕದ ಮನೆಯವರೋ ಇಲ್ಲವೇ ಸಂಬಂಧಿಕರೋ ಆಗಾಗ ತಿವಿಯುತ್ತಿರುತ್ತಾರೆ. ಕೆಲವು ಪ್ರದೇಶಗಳಲ್ಲಂತೂ ವಿದೇಶಕ್ಕೆ ಹೋಗಿಲ್ಲದಿದ್ದರೆ ಮದುವೆಗೆ ಕನ್ಯೆಯೇ ಸಿಗುವುದಿಲ್ಲ! ಇಲ್ಲಿ ಹಣದ ಆವಶ್ಯಕತೆಗಿಂತ ಪ್ರತಿಷ್ಠೆಯೇ ಹೆಚ್ಚು ಕೆಲಸ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಹೀಗಾಗಿ, ಇದನ್ನು “ವಿದೇಶೀ ವ್ಯಾಮೋಹ” ಎನ್ನಬಹುದು.
ಆದರೆ, ಉ.ಕ, ದ.ಕ, ಕೇರಳ, ಇತ್ಯಾದಿ ಪ್ರದೇಶಗಳ ಬಡ ಯುವಕರು ವಿದೇಶಕ್ಕೆ ಹೋಗುವುದು ಹೊಟ್ಟೆಪಾಡಿಗಾಗಿ.
ಪ್ರಾಯಶಃ ಅವರಿಗೆ ಅದು ಬಿಟ್ಟು ಬೇರೆ ಮಾರ್ಗವೇ ಇಲ್ಲವೇನೋ!
ಮೀನುಗಾರಗ ಮನೆಯಲ್ಲಿ ಹುಟ್ಟಿದ ಮಗನನ್ನು ಅವರು ಶಾಲೆಗೆ ಕಳುಹಿಸುವ ಸ್ಥಿತಿಯಲ್ಲಿರುವುದಿಲ್ಲ. ಇನ್ನು ಮನೆಯವರೆಲ್ಲರೂ (ಮಹಿಳೆಯರೂ ಸೇರಿದಂತೆ) ಕುಡಿತದ ಚಟಕ್ಕೆ ಒಳಗಾಗಿರುತ್ತಾರೆ. ಅವರಿಗೆ ಒಪ್ಪೊತ್ತಿನ ಹೊಟ್ಟೆ ತುಂಬಿದರೆ ಸಾಕು. ಹೀಗಾಗಿ, ಮನೆಯವರೆಲ್ಲರೂ ದುಡಿಯಲೇ ಬೇಕು. ಇಂತಹ ಕುಟುಂಬದ ಯುವಕರು ಈ ಕಡುಬಡತನದ ಸಂಕೋಲೆಯಿಂದ ತಪ್ಪಿಸಿಕೊಳ್ಳಲು ಬೇರಾವ ಮಾರ್ಗವಿದೆ ಹೇಳಿ?
Hi Sir, Really I wants to see this movie.
ನಾಗಶೆಟ್ಟರೆ ನಿಮ್ಮ ಭಾವ ಅದೇ ವರ್ತಮಾನದಲ್ಲಿ ವೈದಿಕರ ಚಳಿ ಬಿಡಿಸುವ ಕಂಬಳಿಯಂತೆ ಕೆಲಸಮಾಡುವ ಸಲಾಂ ಭಾವ ಅವರಿಗೆ ಈ ಲೇಖನ ಓದಲು ಮತ್ತು ಚಿತ್ರ ನೋಡಲು ಸಲಹೆ ನೀಡಿ. ಏಕೆಂದರೆ ಅವರು ಅರೆಬಿಯಾವನ್ನು ಹಾಡಿ ಹೊಗಳುತ್ತಿರುತ್ತಾರೆ.