ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 11, 2012

4

ಚಿಕಾಗೋದಲ್ಲಿ ಹರಿದ ವಿವೇಕಾಮೃತ ಧಾರೆ

‍ನಿಲುಮೆ ಮೂಲಕ

– ಚಕ್ರವರ್ತಿ ಸೂಲಿಬೆಲೆ

ಸ್ವಾತಂತ್ರ್ಯ ಹೋರಾಟದ ಹೊತ್ತು. ಕ್ರಾಂತಿಕಾರಿಯೊಬ್ಬ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಸಂದರ್ಭ. ಪ್ರೀತಿಲತಾ ವಡ್ಡೆದಾರ್ ಎಂಬ ಮತ್ತೊಬ್ಬ ಮಹಿಳಾ ಕ್ರಾಂತಿಕಾರಿಗೆ ಜೈಲಿನಿಂದಲೇ ಪತ್ರ ಬರೆದ. ಅಚಾನಕ್ಕಾಗಿ ನಿನ್ನ ತೋಳಿನ ರವಿಕೆಯ ಮೇಲಿದ್ದ ವಿವೇಕಾನಂದರ ಚಿತ್ರ ನನ್ನ ಕಣ್ಣಿಗೆ ಬಿತ್ತು. ಬಹಳ ಆನಂದವಾಯ್ತು. ನಮ್ಮ ಕಾಲದ ಋಷಿ ಆತ. ಆತನನ್ನು ಅನುಸರಿಸುವುದು ಒಳಿತು.ಮುಂದೆ ಪೊಲೀಸರೊಂದಿಗಿನ ಕದನದಲ್ಲಿ ಆ ಹುಡುಗಿ ಅಸುನೀಗಿದಳು.

ಇದು ಸ್ವಾಮಿ ವಿವೇಕಾನಂದರ ದೇಹತ್ಯಾಗದ ಬಹು ವರ್ಷಗಳ ನಂತರ ನಡೆದ ಘಟನೆ. ಅವರು ಬದುಕಿದ್ದಾಗಲೇ ಅಪರೂಪದ ಮತ್ತೊಂದು ಘಟನೆ ಜರುಗಿತ್ತು.
ಸ್ವಾಮೀಜಿ ಪ್ರಯಾಣಿಸುತ್ತಿದ್ದ ರೈಲು ತಮ್ಮೂರನ್ನು ಹಾದುಹೋಗಲಿದೆ ಎಂದರಿತ ಒಂದು ಊರಿನ ಜನ ತಮ್ಮ ಊರಿನಲ್ಲಿ ರೈಲು ನಿಲ್ಲಿಸುವಂತೆ ಕೇಳಿಕೊಂಡರು. ಅದನ್ನು ನಿಯಮ ಬಾಹಿರವೆಂದು ಸ್ಟೇಷನ್ ಮಾಸ್ಟರ್ ನಿರಾಕರಿಸಿದಾಗ ಅವರು ಗೋಗರೆದರು. ಆಗಲೂ ಕೇಳುವ ಲಕ್ಷಣಗಳು ಕಾಣದಾದಾಗ ಊರಿನ ಜನ ರೈಲು ಹಳಿಗಳ ಮೇಲೆ ಅಂಗಾತ ಮಲಗಿಬಿಟ್ಟರು. ಶ್ರೇಷ್ಠ ಸಂತನೊಬ್ಬನ ಪಾದಸ್ಪರ್ಷ ನಮ್ಮೂರಿನ ನೆಲಕ್ಕೆ ಆಗಲಿಲ್ಲವೆಂದರೆ ನಮ್ಮೆಲ್ಲರ ಬದುಕು ವ್ಯರ್ಥ ಎನ್ನುವುದು ಅವರ ನಿಲುವಾಗಿತ್ತು. ರೈಲು ಬಂತು. ಆನರು ಹಳಿಯಿಂದ ಅಲುಗಾಡುವ ಲಕ್ಷಣ ಕಾಣದಿದ್ದಾಗ ಸ್ಟೇಷನ್ ಮಾಸ್ಟರ್ ಗಾಬರಿಗೊಂಡು ನಿಲುಗಡೆ ಸೂಚಿಸಿದ. ಜನ ಫ್ಲಾಟ್‌ಫಾರಮ್‌ನತ್ತ ಧಾವಿಸಿದರು. ಸ್ವಾಮೀಜಿ ಮೆಟ್ಟಿಲ ಬಳಿ ಬಂದು, ನಿಂತಿದ್ದ ಜನರತ್ತ ಕೈಬೀಸಿದರು. ರೈಲು ಮತ್ತೆ ಹೊರಟಿತು.

ಅಬ್ಬ! ಇದು ವ್ಯಕ್ತಿಯೊಬ್ಬನಿಗೆ ಸಿಗಬಹುದಾದ ಅತ್ಯಂತ ಶ್ರೇಷ್ಠ ಗೌರವ. ಆತನ ಚಿಂತನೆಗಳನ್ನು ಅನುಸರಿಸುತ್ತ ಜೀವ ತೆರುವುದು ಒಂದೆಡೆಯಾದರೆ ಆತನಿಗಾಗಿ ಬಯಸಿ ಪ್ರಾಣ ಕೊಡಲು ಸಿದ್ಧವಾಗುವುದು ಮತ್ತೊಂದು. ಸ್ವಾಮೀಜಿ ಎರಡೂ ರೀತಿಯ ಅನುಯಯಿಗಳನ್ನು ಹೊಂದಿದ್ದ ಅಪರೂಪದ ವ್ಯಕ್ತಿಯಾಗಿದ್ದರು.

ಅವರು ಹುಟ್ಟಿದ್ದ ಕಾಲಘಟ್ಟವೇ ಅಂಥದ್ದು. ಒಂದೆಡೆ ಮುಸ್ಲಿಮರ ಆಕ್ರಮಣದ ತೀವ್ರ ಪರಿಣಾಮವಾಗಿ, ದೀರ್ಘಕಾಲ ಸ್ವಂತಿಕೆ ಮರೆತುಬಿಟ್ಟಿದ್ದ ಭಾರತ; ಮತ್ತೊಂದೆಡೆ ಇದರ ಹಿಂದುಹಿಂದೆಯೇ ಕ್ರಿಶ್ಚಿಯನ್ನರ ಆಕ್ರಮಣಕ್ಕೆ ಒಳಗಾಗಿ ಬುದ್ಧಿಭ್ರಮಣೆಯಾದಂತೆ ವರ್ತಿಸುತ್ತಿದ್ದ ಇಲ್ಲಿನ ಸಮಾಜ. ಈ ದೃಷ್ಟಿಯಿಂದ ನೋಡಿದರೆ ಬಂಗಾಳ ಇಡಿಯ ಭಾರತದ ಸಣ್ಣ ರೂಪವಾಗಿತ್ತು. ಹೀಗಾಗಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಬ್ಬರೂ ಬಂಗಾಳವನ್ನು ಕೇಂದ್ರವಾಗಿರಿಸಿಕೊಂಡು ತಮ್ಮ ಕಾರ್ಯ ವಿಸ್ತರಿಸಿದರು. ಅದಕ್ಕೇ ಭಗವಂತನೂ ತನ್ನ ಲೀಲಾಕಾರ್ಯಕ್ಕೆ ಬಂಗಾಳವನ್ನೇ ವೇದಿಕೆ ಮಾಡಿಕೊಳ್ಳಬೇಕಾಯ್ತು.

ಬುದ್ಧಿವಂತ ಬಂಗಾಳಿಗಳು ಮುಸಲ್ಮಾನ ಪರಂಪರೆಯಿಂದ ವಿಮುಖರಾಗಲು ಅರಸುತ್ತಿದ್ದ ದಾರಿಯಲ್ಲಿ ಏಸುಕ್ರಿಸ್ತ ಬಂದು ನಿಂತ. ರಾಜಾಶ್ರಯವೂ ಇದ್ದುದರಿಂದ ಬುದ್ಧಿಜೀವಿಗಳು ಬಲುಬೇಗ ಏಸುಕ್ರಿಸ್ತನನ್ನು ತಬ್ಬಿಕೊಂಡವು. ಕ್ರಿಸ್ತ ಮತ್ತವನ ಅನುಯಾಯಿಗಳ ಗುಣಗಾನವನ್ನು ನಮ್ಮವರೇ ಜೋರು ಜೋರಾಗಿ ಮಾಡತೊಡಗಿದರು. ಹಿಂದೂ ಸಮಾಜ ಅಲ್ಲಾಹನ ಕಬಂದ ಬಾಹುಗಳಿಂದ ಬಿಡಿಸಿಕೊಳ್ಳಲು ಹೋಗಿ ಕ್ರಿಸ್ತನ ಉಸಿರುಗಟ್ಟಿಸುವಂತಹ ಅಪ್ಪುಗೆಯಲ್ಲಿ ಸಿಕ್ಕಿಹಾಕಿಕೊಂಡಿತು. ಆಗ ಹಿಂದೂ ಸಮಾಜ ಕಂಡುಕೊಂಡ ಪರಿಹಾರವೇ ಶ್ರೀರಾಮಕೃಷ್ಣ.

ಬಡತನದಲ್ಲಿ ಹುಟ್ಟಿ ಬದುಕಿನುದ್ದಕ್ಕೂ ಸಿರಿವಂತರನ್ನು ಕಾಲಬುಡಕ್ಕೆ ಕೆಡವಿಕೊಂಡವರವರು; ತಾವು ಶಾಲೆಗೆ ಹೋಗಲಿಲ್ಲವಾದರೂ ಇಂಗ್ಲೀಷಲ್ಲಿ ಪುಟಗಟ್ಟಲೆ ಉದ್ಧರಿಸಬಲ್ಲವರನ್ನು ಕೊಠಡಿಯಲ್ಲಿ ಕುಳ್ಳಿರಿಸಿಕೊಂಡು ಪಾಠ ಹೇಳಿದವರು; ಹುಟ್ಟಿನಿಂದ ಬ್ರಾಹ್ಮಣರಾದರೂ ಅಂತ್ಯಜರ ಸೇವೆಗೆ ಕಟಿಬದ್ಧರಾದವರು; ಸಾಧನೆಯ ವಿಷಯದಲ್ಲಂತೂ ಎಲ್ಲ ಪಂಥಗಳನ್ನು ಒಂದು ಮಾಡಿ ಸಾಕ್ಷಾತ್ಕರಿಸಿಕೊಂಡವರು. ಇಂತಹ ಮೂಲ ವಿಗ್ರಹಕ್ಕೆ ಉತ್ಸವ ಮೂರ್ತಿಯಾಗಿ ಜವಾಬ್ದಾರಿ ನಿರ್ವಹಿಸಿದವರು ಸ್ವಾಮಿ ವಿವೇಕಾನಂದ.

ನರೇಂದ್ರನಾಗಿದ್ದ ತರುಣ ವಿವೇಕಾನಂದನಾಗಿ ರೂಪುಗೊಂಡಿದ್ದು ರಾಮಕೃಷ್ಣರ ಗರಡಿಯಲ್ಲಿಯೇ. ಅದುಬಿಡಿ. ಮರಣ ಶಯ್ಯೆಯಲ್ಲಿ ರಾಮಕೃಷ್ಣರು ವಿವೇಕಾನಂದರನ್ನು ಕರೆದು ನೀನು ಜಗತ್ತಿಗೆ ಶಿಕ್ಷಣ ಕೊಡುವೆ ಎಂದಾಗ ಯಾವ ವಿಶ್ವಧರ್ಮ ಸಮ್ಮೇಳನದ ಉಲ್ಲೇಖವೂ ಇರಲಿಲ್ಲ. ಆಗಿನ್ನೂ ೧೮೮೬. ಮುಂದೆ ಸರ್ವಧರ್ಮ ಸಮ್ಮೇಳನ ನಡೆದಿದ್ದು ಅದಾದ ೭ ವರ್ಷಗಳ ನಂತರ, ೧೮೯೩ರಲ್ಲಿ. ಹೇಗಿದೆ ವರಸೆ?

ನರೇಂದ್ರ ಗುರುಗಳ ದೇಹತ್ಯಾಗದ ನಂತರ ದೇಶ ತಿರುಗಿದ. ಸಾಧನೆಯಲ್ಲಿ ಶ್ರೇಷ್ಠ ಹಂತವನ್ನೇರಿದ. ಹೃದಯದ ಆಗಸವನ್ನು ವಿಸ್ತಾರಗೊಳಿಸಿಕೊಂಡು ಬಡವರಿಗಾಗಿ ಮರುಗಿದ. ಅಜ್ಞಾನಿಗಳಿಗಾಗಿ ಕಣ್ಣೀರಿಟ್ಟ. ಅವರಿಗಾಗಿ ಬದುಕಿನ ಪ್ರತಿಕ್ಷಣವನ್ನೂ ಅರ್ಪಿಸುವ ನಿರ್ಧಾರ ಕೈಗೊಂಡ. ಆಗಲೇ ಸರ್ವಧರ್ಮ ಸಮ್ಮೇಳನದ ತಯಾರಿ ಶುರುವಾಗಿತ್ತು. ಅದೆಲ್ಲಿಂದ ಸೂಚನೆ ದೊರಕಿತ್ತೋ? ಅದೊಂದು ದಿನ ಸ್ವಾಮೀಜಿ ಸೋದರ ಸನ್ಯಾಸಿಯೊಬ್ಬರ ಬಳಿ ಅದೆಲ್ಲ ವೈಭವದ ಕಾರ್ಯಕ್ರಮ ನಡೆಯುತ್ತಿರುವುದು ಯಾರಿಗಾಗಿ ಗೊತ್ತೇನು? ಇವನಿಗಾಗಿ ಎಂದು ತಮ್ಮ ಎದೆಯತ್ತಲೇ ಬೆಟ್ಟು ಮಾಡಿದರು. ಜೊತೆಯಲ್ಲಿದ್ದವರಿಗೆ ಇದೊಂದು ಹುಚ್ಚು ಎಂದುಕೊಳ್ಳದೆ ವಿಧಿಯಿರಲಿಲ್ಲ.

ಇಷ್ಟಕ್ಕೂ ಸರ್ವಧರ್ಮ ಸಮ್ಮೇಳನ ಆ ಯೋಜನೆಯಾಗಿದ್ದೇಕೆ ಗೊತ್ತೇನು? ಕೊಲಂಬಸ್ ಅಮೆರಿಕ ಕಂಡು ಹಿಡಿದು ನಾಲ್ಕುನೂರು ವರ್ಷಗಳಾಗಿಬಿಟ್ಟಿತ್ತು. ಈ ನಾಲ್ಕು ಶತಕಗಳಲ್ಲಿ ಪಶ್ಚಿಮ ಕೈಗಾರಿಕಾ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯನ್ನು ವಿಶ್ವಕ್ಕೆ ಪರಿಚಯಿಸುವ ಪ್ರಯತ್ನ ಆಗಬೇಕಿತ್ತು. ಈ ಹಿಂದೆ ಆದ ಇದೇ ರೀತಿಯ ಎರಡು ಕಾರ್ಯಕ್ರಮಗಳಲ್ಲಿ ಲಕ್ಷ ಲಕ್ಷ ಜನ ಭಾಗವಹಿಸಿದ್ದರು. ಹೀಗಾಗಿ ಈ ಬಾರಿಯ ಪ್ರಯತ್ನ ಅದ್ದೂರಿಯೂ ವಿಶೇಷವೂ ಆಗಿರುವುದು ಅನಿವಾರ್ಯವಿತ್ತು. ಅದಕ್ಕಾಗಿ ಜಗತ್ತಿನೆಲ್ಲ ಮತಪಂಥಗಳವರನ್ನು ಒಟ್ಟಿಗೆ ಸೇರಿಸುವ ಅವರ ಮಾತುಗಳನ್ನು ಕೇಳುವ, ಕೊನೆಗೆ ಕ್ರಿಶ್ಚಿಯನ್ ಪಂಥವೇ ಎಲ್ಲರಿಗಿಂತ, ಎಲ್ಲಕ್ಕಿಂತ ಶ್ರೇಷ್ಠವೆಂದು ಸಾರುವ ಪ್ರಯತ್ನವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ವತಃ ಪೋಪ್ ಇದನ್ನು ಧಿಕ್ಕರಿಸಿದ್ದ. ಕ್ರಿಶ್ಚಿಯನ್ ಮತಕ್ಕೆ ಸರಿಸಮವಾಗಿ ಇತರರನ್ನು ಕೂರಿಸುವ ವಿಚಾರವೇ ಅವರಿಗೆ ಹಿಡಿಸಿರಲಿಲ್ಲ.

ಅಂತೂ ಕಾರ್ಯಕ್ರಮದ ದಿನ ನಿರ್ಧಾರವಾಯಿತು. ಸೂತ್ರಧಾರ ಡಾ.ಬರೋಸ್ ಅನೇಕ ದೇಶಗಳನ್ನು ಸುತ್ತಾಡಿದ.ಎಲ್ಲ ಮತಪಂಥದವರನ್ನು ಕಾರ್ಯಕ್ರಮಕ್ಕೆ ಬರುವಂತೆ ಮನ ಒಪ್ಪಿಸುವ ಕೆಲಸ ಮಾಡಿದ. ಆದರೆ ಭಾರತದ ಸಂತರು ಒಪ್ಪಲಿಲ್ಲ. ಕೊನೆಗೆ ಗರ ದಾಟಿ ಬಂದು ನಿಮ್ಮ ಧರ್ಮದ ಶ್ರೇಷ್ಠತೆ ಜಗತ್ತಿಗೆ ತಿಳಿಸಲಿಲ್ಲವೆಂದರೆ ಜಗತ್ತಿಗೆ ಕೊಡಲು ಹಿಂದೂ ಧರ್ಮದಲ್ಲಿ ಏನೂ ಇಲ್ಲವೆಂದು ಭಾವಿಸಿಬಿಡುತ್ತಾರೆ ಎಂದು ಹೆದರಿಸಿದ. ಯಾರೂ ತಲೆಬಾಗಲಿಲ್ಲ. ಬ್ರಾಹ್ಮಣ ಅಡುಗೆ ಭಟ್ಟರಿರುವ ಪ್ರತ್ಯೇಕ ಹಡಗು ನಿಮಗಾಗಿ ವ್ಯವಸ್ಥೆ ಮಾಡಿಸುತ್ತೇನೆ ಎಂದು ವಾಗ್ದಾನ ಮಾಡಿದ. ಆಗಲೂ ಯಾರೂ ಒಪ್ಪಿಕೊಳ್ಳಲಿಲ್ಲ. ಹಿಂದೂ ಧರ್ಮ ಮಾತ್ರ ಕ್ರಿಶ್ಚಿಯನ್ನರ ಎದುರು ನಿಲ್ಲಬಲ್ಲದೆಂಬ ಅರಿವು ಅವರಿಗಿತ್ತು. ಹೀಗಾಗಿ ಹೇಗಾದರೂ ಮಾಡಿ ಹಿಂದೂ ಸಂತರನ್ನೊಯ್ದು ಕ್ರಿಶ್ಚಿಯನ್ ಶ್ರೇಷ್ಠತೆ ಸಾಬೀತು ಮಾಡಲು ಸಾಧ್ಯವಾದರೆ ಸಾಕು ಎಂಬುದು ಅವರ ಗುರಿ.

ಅವರ ದುರ್ದೈವ. ಹಿಂದೂ ಧರ್ಮದ ಪ್ರತಿನಿಧಿಯಾಗಿ ಜಗದ ವೇದಿಕೆ ಮೇಲೆ ಸ್ವಾಮಿ ವಿವೇಕಾನಂದರು ನಿಂತುಬಿಟ್ಟರು. ಅವರು ಅಲ್ಲಿಗೆ ಹೋಗಿದ್ದು, ವಿಳಾಸ ಕಳಕೊಂಡು ಪರದಾಡಿದ್ದು, ಹೊಟ್ಟೆಗೆ ಹಿಟ್ಟಿಲ್ಲದೆ ಸಾಯುವ ಚಿಂತನೆ ಮಾಡಿದ್ದು, ಹಾಗೆಯೇ ವೇದಿಕೆ ಮೇಲೆ ವಿಶೇಷ ಅತಿಥಿಯಾಗಿ ಕುಳಿತಿದ್ದು. ಎಲ್ಲವೂ ರೋಚಕ ಕಥೆಯೇ.
೧೮೯೩ರ ಸೆಪ್ಟೆಂಬರ್ ೧೧ಕ್ಕೆ ದೊಡ್ಡದೊಂದು ಗಂಟೆಯ ಸದ್ದಿನೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಮೊದಲು ಮಾತನಾಡಿದ ಆರ್ಚ್ ಬಿಷಪ್ ಜಾಂಟೆಗೆ ಭಾರೀ ಕರತಾಡನದ ಸ್ವಾಗತ ಸಿಕ್ಕಿತು. ಮೊದಲು ಮಾತನಾಡಿದ್ದಕ್ಕಾಗಿ ಆ ಗೌರವ. ನಡುವೆ ಮಾತನಾಡಿದ ಬ್ರಹ್ಮ ಸಮಾಜದ ಮಜುಮ್‌ದಾರರಿಗೂ ಅಷ್ಟೆ ಗೌರವ ಸಿಕ್ಕಿತು. ಅದಾಗಲೇ ಮಜುಮ್‌ದಾರರ ಲೇಖನಗಳು ಪಶ್ಚಿಮದ ಕದತಟ್ಟಿ ಅವರು ಖ್ಯಾತರಾಗಿದ್ದರು. ಹೀಗಾಗಿ ಅಮೆರಿಕನ್ನರು ಅವರನ್ನು ಗುರುತಿಸಿ ಚಪ್ಪಾಳೆ ಹೊಡೆದರು. ಚೀನಾದ ಫುಂಗ್ ಕ್ಯುಂಗ್ ಯೋಗೂ ವಿಶೇಷ ಗೌರವ ಸಿಕ್ಕಿತು. ಚೀನಾದ ಕುರಿತಂತೆ ಅಮೆರಿಕಾದ ಧೋರಣೆಯನ್ನು ವಿರೋಧಿಸುತ್ತಿದ್ದವರ ಗೌರವ ಅದು.

ಸ್ವಾಮೀಜಿ ಸಿಂಹದಂತೆ ಕುಳಿತಿದ್ದರು. ವೇದಿಕೆ ಮೇಲೆ ಅವರಿಗೆ ಸಿಕ್ಕಿದ್ದೂ ವಿಶೇಷ ಜಾಗವೇ. ಆದರೆ ಅವರು ಭಾಷಣಕ್ಕೆ ಹಿಂದೇಟು ಹಾಕುತ್ತಿದ್ದರು. ಕೊನೆಗೂ ಭಾಷಣದ ಅಂತಿಮ ಅವಧಿಯಲ್ಲಿ ಅವರು ಮಾತಾಡಲೇಬೇಕಾಯ್ತು. ಅವರು ಎದ್ದು ನಿಂತೊಡನೆ ಸಭೆಯಲ್ಲಿ ನೀರವತೆ ಆವರಿಸಿತು. ಮಾತು ಹರಿಯುವ ನೀರಿನಂತೆ ಶುರುವಾಯಿತು. ಮೊದಲ ಐದು ಪದಗಳಿಗೆ ಅಚ್ಚರಿಯೆನಿಸುವಷ್ಟು ಕರತಾಡನ. ಕಾರಣವೇ ಇಲ್ಲದೆ ಸಿಕ್ಕ ಅಪರೂಪದ ಗೌರವ ಅದು. ವೇದಿಕೆ ಮೇಲಿದ್ದವರಿಗೆ ಗಾಬರಿ. ಅದಾದ ಮರುಕ್ಷಣದಲ್ಲಿ ಸ್ವಾಮೀಜಿಯವರ ಮಾತು ಪ್ರವಾಹವಾಯಿತು.

ಭಾರತ – ಹಿಂದೂ ಧರ್ಮಗಳು ಒಂದಕ್ಕೊಂದು ಪೂರಕವಾಗಿ ಶಾಂತಿಯ, ವಿಶ್ವಭ್ರಾತೃತ್ವದ ಮಾತುಗಳು ಅಂತರಾಳದಿಂದ ಹೊಮ್ಮಿಬಂದವು. ಅದು ಬರೆದುಕೊಂಡು ಬಂದು ಓದಿದ ರೆಡಿಮೇಡ್ ಸಾಹಿತ್ಯವಾಗಿರಲಿಲ್ಲ. ಹೃದಯ ತಂತಿ ಮೀಟಿದಾಗ ಹೊಮ್ಮಿದ ಸಂಗೀತವಾಗಿತ್ತು. ಜನ ತಲೆದೂಗಿದರು. ಬಾಯಿ ಕಳಕೊಂಡರು. ಭಾವುಕರು ಕಣ್ಣೀರಾದರು. ಒಟ್ಟಿನಲ್ಲಿ, ಮೊದಲ ಜಯ ಸ್ವಾಮೀಜಿಗೆ ದಕ್ಕಿಬಿಟ್ಟಿತ್ತು. ನಿಸ್ಸಂಶಯವಾಗಿ ಈ ಸಮ್ಮೇಳನದ ನಿಜವಾದ ಹೀರೋ ಸ್ವಾಮಿ ವಿವೇಕಾನಂದರೇ! ಪತ್ರಿಕೆಯೊಂದು ಉದ್ಗರಿಸಿತು. ಇವನ ದೇಶಕ್ಕೆ ಮಿಷನರಿಗಳನ್ನು ಕಳಿಸಿಕೊಡುವುದಿರಲಿ, ನಾವೇ ಇವನ ದೇಶದಿಂದ ಇಂತಹವರನ್ನು ಕರೆಸಿಕೊಂಡು ಪಾಠ ಕಲಿಯಬೇಕುಮತ್ತೊಂದು ಪತ್ರಿಕೆ ನೊಂದು ಹೇಳಿತು. ಹಿಂದಿನ ದಿನದವರೆಗೆ ಯಾರಿಗೂ ಗೊತ್ತಿರದಿದ್ದ ಸ್ವಾಮಿ ವಿವೇಕಾನಂದ ಈಗ ದೇಶದ ಮೂಲೆಮೂಲೆಗಳಲ್ಲಿ ಪರಿಚಿತನಾಗಿದ್ದ. ಇಂದಿಗೂ ಅಮೆರಿಕನ್ನರಿಗೆ ಈ ಕುರಿತ ಅಹಂಕಾರ ಇದೆ. ನೀವು ಸ್ವಾಮಿ ವಿವೇಕಾನಂದರನ್ನು ನಮಗೆ ಕೊಟ್ಟಿರಿ. ನಾವು ವಿಶ್ವಪ್ರಸಿದ್ಧ ವಿವೇಕಾನಂದರನ್ನು ನಿಮಗೆ ಮರಳಿಸಿದೆವು ಎಂದವರು ಹೆಮ್ಮೆಯಿಂದ ಹೇಳುತ್ತಾರೆ.

ಸಮ್ಮೇಳನದ ಮುಂದಿನ ದಿನಗಳಲ್ಲಿ ಪ್ರತಿಯೊಂದು ಕಾರ್ಯಕ್ರಮದಲ್ಲೂ ಸ್ವಾಮೀಜಿಯ ಮಾತುಗಳೆ ಪ್ರಮುಖವಾದವು. ಕಾರ್ಯಕ್ರಮದ ಕೊನೆಯಲ್ಲಿ ಸ್ವಾಮೀಜಿ ಆಡುವ ಹತ್ತು ನಿಮಿಷದ ಮಾತುಗಳಿಗಾಗಿ ಜನ ಎರೆಡೆರಡು ಗಂಟೆ ಬೇರೆಯವರ ಕೊರೆತ ಕೇಳುತ್ತ ಕುಳಿತಿರುತ್ತಿದ್ದರು. ಹಿಂದೂ ಧರ್ಮದ ಕುರಿತಂತೆ ವಿಸ್ತೃತ ಭಾಷಣವಿರಲಿ, ಬೌದ್ಧ ಸನ್ಯಾಸಿ ಧರ್ಮಪಾಲರ ಕೋರಿಕೆಯ ಮೇರೆಗೆ ಬುದ್ಧನ ಬಗ್ಗೆಯೂ ಸುಂದರ ಉಪನ್ಯಾಸ ನೀಡಿದರು. ಸ್ವಾಮೀಜಿಯವರ ಕಾರಣದಿಂದಾಗಿ ಸಮ್ಮೇಳನದ ಆವರಣ ಕಿಕ್ಕಿರಿದು ತುಂಬುತ್ತಿತ್ತು. ಹೀಗಾಗಿ ಸಮ್ಮೇಳನದ ಸ್ಥಳವನ್ನೆ ಬೇರೆಡೆಗೆ ಸ್ಥಳಾಂತರಿಸಬೇಕಾಗಿ ಬಂತು. ನಾಲ್ಕು ರಸ್ತೆಗಳು ಕೂಡುವ ಜಾಗದಲ್ಲಿ ಸ್ವಾಮೀಝಿಯವರ ಕಟೌಟ್‌ಗಳನ್ನು ನಿಲ್ಲಿಸಿದ್ದಲ್ಲದೆ, ಅವರ ಮುಂದಿನ ಕಾರ್ಯಕ್ರಮಗಳ ವಿವರವನ್ನೂ ಲಗತ್ತಿಸಲಾಗುತ್ತಿತ್ತು. ಸಮ್ಮೇಳನ ಯಶಸ್ವಿಯಾಯಿತು. ಆದರೆ ಕ್ರಿಶ್ಚಿಯನ್ನರಿಗೆ ತುಂಬಲಾಗದ ನಷ್ಟವಾಯ್ತು. ಮಿಷಿನರಿಗಳೆಡೆಗೆ ಹರಿದು ಬರುತ್ತಿದ್ದ ದಾನದ ಆದಾಯ ಸಾಕಷ್ಟು ಕಡಿಮೆಯಾಯ್ತು.

ಸ್ವಾಮೀಜಿ ಅಮೆರಿಕಾ ಯುರೋಪುಗಳನ್ನು ತಿರುಗಾಡಿದರು. ಭಾರತ, ಹಿಂದೂ ಧರ್ಮಗಳ ಕುರಿತಂತೆ ಇದ್ದ ತಪ್ಪು ಅಭಿಪ್ರಾಯಗಳನ್ನು ಬಡಿದೋಡಿಸಿದರು. ತಮ್ಮ ಕೆಲಸಕ್ಕೆ ಬೇಕಾದ ಪಶ್ಚಿಮದ ಶಿಷ್ಯರನ್ನು ತಯಾರು ಮಾಡಿದರು. ಎಲ್ಲವೂ ಸರಿ. ಆಗೆಲ್ಲ ಸ್ವಾಮೀಜಿಯ ಮಾನಸಿಕತೆ ಹೇಗಿತ್ತು? ಸಿಗುತ್ತಿದ್ದ ಗೌರವಕ್ಕೆ ಮೈಮರೆತು ಭಾರತದಿಂದ ಒಂದು ಕ್ಷಣವಾದರೂ ದೂರವಿದ್ದರಾ? ಅವರದೊಂದು ಪತ್ರ ಓದಿದರೆ ಗೊತ್ತಾಗುತ್ತದೆ. ಹೆಸರು ಕೀರ್ತಿಗಳ ಆಸೆಗೆ ನಾನಿಲ್ಲಿಗೆ ಬಂದಿಲ್ಲ. ಈಗಲೂ ಲಂಗೋಟಿ ಉಡುವ, ಭಿಕ್ಷೆ ಬೇಡಿ ಉಣ್ಣುವ, ಮರದ ಕೆಳಗೆ ಮಲಗುವ ಆಸೆಯಾಗುತ್ತದೆ ಎಂದವರು ಬರೆದಿದ್ದರು. ಅದೇ ವೇಳೆಗೆ, ನನ್ನ ಕಾಲಿಗೆ ನಮಿಸುವ ಅಂಗ್ಲರು ನನ್ನ ದೇಶದ, ನನ್ನ ಜನಾಂಗದವರನ್ನು ಬೂಟು ಕಾಲುಗಳಲ್ಲಿ ಒದೆಯುತ್ತಾರಲ್ಲ ಎಂಬ ಆಕ್ರೋಶವೂ ಅವರಿಗಿತ್ತು. ಹೀಗಾಗಿ ಸ್ವಾಮೀಜಿ ತಮ್ಮ ಯಶಸ್ಸಿನ ಅಷ್ಟೂ ಪಾಲನ್ನು ಭಾರತದ ಸೇವೆಗೆ ಸುರಿದರು. ಮಲಗಿದ್ದ ಆತ್ಮಗಳನ್ನು ಬಡಿದೆಬ್ಬಿಸಿದರು. ಅದಕ್ಕಾಗಿ ಕಟಿಬದ್ಧರಾದರು.

ಸ್ವಾಮೀಜಿಯ ಮಾತು, ಬರೆಹ, ಕೊನೆಗೆ ಅವರದೊಂದು ನೆನಪು ಕೂಡ ಇಂದಿಗೂ ಕೆಲಸ ಮಾಡುತ್ತಿದೆ. ತರುಣ ಪೀಳಿಗೆಗೆ, ತ್ಯಾಗಿಗಳಿಗೆ, ಸೇವಾಮಾರ್ಗಿಗಳಿಗೆ, ರಾಜನೀತಿಜ್ಞರಿಗೆ, ವ್ಯಾಪಾರಿಗಳಿಗೆ, ಅಧಿಕಾರಿಗಳಿಗೆ, ಕೊನೆಗೆ ಸನ್ಮಾರ್ಗದಲ್ಲಿ ನಡೆಯಲು ಬಯಸುವ ಪ್ರತಿಯೊಬ್ಬರಿಗೆ ಸ್ವಾಮೀಜಿ ಇಂದಿಗೂ ಮಾರ್ಗದರ್ಶನ ಮಾಡುತ್ತಿದ್ದಾರೆ. ಅನುಭವಿಸಿದವರಿಗೆ ಅದು ದರ್ಶನವಾಗುತ್ತದೆ. ಉಳಿದವರಿಗೆ ಅದು ಆದರ್ಶವಾದರೂ ಆಗುತ್ತದೆ. ಅಲೀಪುರ ಮೊಕದ್ದಮೆಯಲ್ಲಿ ಸಿಲುಕಿ ಜೈಲಿನ ಏಕಾಂತದಲ್ಲಿದ್ದ ಅರವಿಂದರಿಗೆ ವಿವೇಕಾನಂದರೊಡನೆ ಮಾತನಾಡಿದ ಅನುಭವವಾಗುತ್ತಿತ್ತಂತೆ. ನಮ್ಮ ನಾಡಿನ ರಸಋಷಿ ಕುವೆಂಪು ನೀನೇ ವಿವೇಕಾನಂದ ಎನ್ನುತ್ತ ತಾದಾತ್ಮ್ಯ ಭಾವದಲ್ಲಿ ಇರುತ್ತಿದ್ದುದನ್ನು ನೋಡಿದವರಿದ್ದಾರೆ.ಹೇಳಿ ಹಾಗಿದ್ದರೆ. ನೀನು ದೇಹವೇ ಇಲ್ಲದ ಮಾತು ಎಂದು ಸ್ವಾಮೀಜಿ ಹೇಳಿದ್ದು ಸುಳ್ಳೆ? ಒಮ್ಮೆ ತೆರಕೊಂಡು ನೋಡಿ, ಆ ಮಹಾಪ್ರವಾಹ ನಮ್ಮಂತರಗವನ್ನು ಸೋಕಿದರೆ ನಮ್ಮ ಬದುಕೇ ಬದಲಾಗಿಬಿಡುತ್ತದೆ. ಕುವೆಂಪು ಹೇಳಿದಂತೆ ಹೊಕ್ಕರೆ ಪ್ರಬುದ್ಧರಾಗುವ, ಮಿಂದರೆ ಪುನೀತರಾಗುವ ಅಮೃತದ ಪ್ರವಾಹ ಅದು!

4 ಟಿಪ್ಪಣಿಗಳು Post a comment
  1. ಸುಸಂಸ್ಕೃತ's avatar
    ಸುಸಂಸ್ಕೃತ
    ಸೆಪ್ಟೆಂ 12 2012

    ಅದೇ ರಾಗ ಅದೇ ತಾಳ. ಹಳಸಲು

    ಉತ್ತರ
  2. Dinesh Madiwala's avatar
    Dinesh Madiwala
    ಸೆಪ್ಟೆಂ 12 2012

    Chakravarthi Sir…………. really nice artticle. I like it. Sir Vivekananda avaru namage needidha koduge apara. Namma samskruthi paschathyara mundhe kochi hoguthe annuvaga namage kathaleyindha belakige dhari thoridha punyathma. Sir namage eeega antha obba olle vyakthiya agathya idhe. yakendre ellellu paschathya samskruthi abbara hechagidhe. For this article I read one comment by Susamskrutha ” Adhe raga Adhe Hadu. Halasalu.” I will ask that person ( Susamskrutha) – Amma mudhuki adhare ammana preethi vasalya Halasalu aguvudhe. AA preeeti amratha kintha hechu. AA preeti mundhe Visha kooda amrutha aguthe. Hage Vivekanandhara jeevana odhuvaga mai romanchana aguthe. Namagu namma samskruthi bagge Jagruthe mooduthe. Namma dharma samskruthi ulisi belesa bekendhu ase aguthe. Vividhatheyalli yekathe hondiruva namma samskruthi yavaglu shresta.

    Chakravarthi sir nimma mathu yavagly ista. Nimma voice mathra yellarannu modi maduthe.I am from udupi. First time I heard ur voice in Udupi ” Hindu Samajyothsava”.
    Any how this is nice article. We have to rewind this type of article every time. Thank u sir for your nice article.

    Dinesh Madiwala
    9844629676

    ಉತ್ತರ
  3. ashok kumar Valadur's avatar
    ashok kumar Valadur
    ಸೆಪ್ಟೆಂ 12 2012

    ಚಕ್ರವರ್ತಿ ಸರ್ , ಸ್ವಾಮಿ ವಿವೇಕಾನಂದರ ವಿಚಾರವನ್ನು ಸವಿಸ್ತಾರವಾಗಿ ಮನದಟ್ಟು ಮಾಡಿದ್ದಿರಿ . ಸ್ವಾಮಿಜಿಯವರ ವಿಚಾರಧಾರೆ ಇನ್ನು ಹೆಚ್ಚಿನ ಜನರನ್ನು ತಲುಪಲಿ ಎಂದು ಆಶಿಸುತ್ತೇನೆ .

    -ಅಕುವ

    ಉತ್ತರ
  4. makara's avatar
    makara
    ಸೆಪ್ಟೆಂ 15 2012

    ೧೧ ವರ್ಷಗಳ ಕೆಳಗೆ ಅಮೇರಿಕನ್ನರ ಭೌತಿಕ ಸಂಪತ್ತಿನ ಪ್ರತೀಕವಾಗಿದ್ದ ವಾಣಿಜ್ಯ ಕಟ್ಟಡಗಳನ್ನು ಕೆಡವಿ ಆ ಜನಾಂಗ ಮತ್ತು ಅದರ ಆಯೋಜಕ ವಿಶ್ವದ ಎಲ್ಲಾ ರಾಷ್ಟ್ರಗಳ ದ್ವೇಷ ಕಟ್ಟಿಕೊಂಡ. ಅದೇ ೧೧ನೇ ಸೆಪ್ಟೆಂಬರ್ ಸ್ವಾಮಿ ವಿವೇಕಾನಂದರು ವಿಶ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿ ಅಮೇರಿಕರನ್ನ ಮಾನಸಿಕ ಅಹಂಕಾರ ಮತ್ತು ಅಜ್ಞಾನಗಳನ್ನು ಹೊಡೆದುರುಳಿಸಿ ವಿಶ್ವಮಾನ್ಯರಾದರು ಮತ್ತು ಮಾನವರೆಲ್ಲರನ್ನೂ ಬೆಸೆಯುವ ಕೊಂಡಿಯಾದರು. ಒಂದೇ ದಿನಾಂಕ ಆದರೆ ಕಾರ್ಯಗಳ ವೈಪರೀತ್ಯ ನೋಡಿ.
    ಸ್ವಾಮೀಜಿಗಳ ಬಗೆಗಿನ ವಿಚಾರಯುಕ್ತ ಲೇಖನಕ್ಕೆ ಧನ್ಯವಾದಗಳು, ಚಕ್ರವರ್ತಿಗಳೆ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments