ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 16, 2012

3

ಕಾಯಕ ಯೋಗಿಗೊಂದು ನಮನ

‍parupattedara ಮೂಲಕ

ಮಧುಚಂದ್ರ ಭದ್ರಾವತಿ

ಭರತ ಖಂಡದ ಅಸಂಖ್ಯ ಭೂ ಪ್ರದೇಶಕ್ಕೆ ನೀರು ಹರಿಸಿದ  ಇವರನ್ನು  ಭಗೀರಥನೆನ್ನ ಬೇಕೆ?.  ಪ್ರತಿಯೊಬ್ಬ ಪ್ರಜೆಗೆ ಮೂಲಭೂತ ಹಕ್ಕಾದ ಶಿಕ್ಷಣವನ್ನು ನೀಡಲು ಶ್ರಮಿಸಿದ ಸರಸ್ವತಿ ಪುತ್ರನೆನ್ನ  ಬೇಕೆ ?  ಭರತ ಖಂಡವೇ ಆಂಗ್ಲರ ವಿರುದ್ದ ಹೋರಾಟ ಮಾಡುತ್ತಿದ್ದಾಗ ಅದೇ ಅಂಗ್ಲರನ್ನು ಉಪಯೋಗಿಸಿಕೊಂಡು ದೇಶದ ಅಭಿರುದ್ದಿಗೆ ಶ್ರಮಿಸಿದ ಚಾಣಾಕ್ಯನೆನ್ನ ಬೇಕೆ? ಅತ್ತ ಕಡೆ ಪರಕೀಯರು, ಇತ್ತ ಕಡೆ ದೂರ ದೃಷ್ಟಿಯಿಲ್ಲದ ಸ್ವದೇಶಿಯರು, ಸಾಲದೇ ಪ್ರಾಮಾಣಿಕತೆಯಿಲ್ಲದ  ಅಧಿಕಾರಿಗಳ ವರ್ಗ ಅವರೆಲ್ಲರನ್ನು ಮೀರಿ ಕಾರ್ಯ ಸಾಧನೆ ಮಾಡಿದ ಭೀಷ್ಮನೆ ?. ಆಂಗ್ಲರು ತಮ್ಮ ಸಚಿವ ಮಂಡಳಿಯಲ್ಲಿ ನೀಡಿದ ಸಚಿವ ಸ್ಥಾನವನ್ನು ನಯವಾಗಿ ನಿರಾಕರಿಸಿ ದೇಶಪ್ರೇಮ ಮೆರದ ದೇಶಭಕ್ತನೆ?.ಕೇವಲ ಭರತ  ಖಂಡಕ್ಕೆ ಅಲ್ಲದೆ ಇಡಿ ವಿಶ್ವದ ಮನುಕುಲದ ಉದ್ದಾರಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ವಿಶ್ವಮಾನವನೆನ್ನ ಬೇಕೆ ?.. 
 
ನಾ ಅರಿಯೇ.


ಮೇಲಿನ ಪೀಠಿಕೆ ನೋಡಿದರೆ ಬಹುಶಃ ಯಾರ ಬಗ್ಗೆ ಲೇಖನ ಅಂತ ನಿಮಗೆ ಅರಿವಿಗೆ ಬಂದಿರಬಹುದು. ಮೋಕ್ಷಗುಂಡಂ ವಿಶ್ವೇಶ್ವರಯ್ಯ ಹೆಸರು ಕೇಳಿರಬೇಕಲ್ಲ, ಇಂದು ಅವರ ಜನ್ಮ ದಿನ (ಸೆಪ್ಟೆಂಬರ್ ೧೫ ೧೮೬೧). ಭಾರತೀಯರೆಲ್ಲರೂ   ಇಂದು “ಅಭಿಯಂತರ ದಿನಾಚರಣೆ”  ಎಂದು ಆಚರಿಸುತ್ತೇವೆ.  ಸರ್ ಮ್ ವಿ  ಎಂದು ಹೇಳಿದಾಗ  ಶಿಸ್ತು , ದಕ್ಷತೆ , ವಿನಯತೆ , ಸಮಯ ಪಾಲನೆ, ನಿಪುಣತೆ, ನಿರಂಕುಶ ಆಡಳಿತ,  ಕರ್ತವ್ಯ ಪ್ರಜ್ಞೆ ಇನ್ನು ಹಲವು  ಪದಗಳು ನಮ್ಮ ಕಿವಿಗಳಿಗೆ  ಮಾರ್ದನಿಸುತ್ತದೆ. ಇಂದು ಸರ್ ಮ್ ವಿ  ಅವರ ಬಗ್ಗೆ  ನಿಮಗೆ ಗೊತ್ತಿರದ ಕೆಲವು ವಿಷಯಗಳನ್ನು ಹಂಚಿ ಕೊಳ್ಳಲು ಬಯಸುತ್ತೇನೆ.

ಪ್ರಾಮಾಣಿಕತೆ

 ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಸರ್ ಮ್ ವಿ , ಸರ್ಕಾರದ ಕೆಲಸಕ್ಕೆ ಸರ್ಕಾರದ ಕಾರು, ಪೆನ್ನು,ಮೊಂಬತ್ತಿ , ಸ್ವಂತ ಕೆಲಸಕ್ಕೆ ಸ್ವಂತ ಕಾರು, ಪೆನ್ನು ಮೊಂಬತ್ತಿ. ಅಂದು ಸರ್ ಎಂ ವಿ ಯವರು ಮೈಸೂರಿನ ದಿವಾನರ ಹುದ್ದೆಗೆ ರಾಜೀನಾಮೆ ಕೂಡಲು ಮಹಾರಾಜರ ಹತ್ತಿರ ಹೋದಾಗ ಸರ್ಕಾರದ ಕಾರನ್ನು ಬಳಸಿ, ಹಿಂತಿರುಗಿ ಬರುವಾಗ ತಮ್ಮ ಖಾಸಗಿ ಕಾರಿನಲ್ಲಿ ಬಂದರು. ತಕ್ಕ್ಷಣವೆ ತಾವಿದ್ದ ಸರ್ಕಾರೀ ಬಂಗಲೆಯನ್ನು ತ್ಯಜಿಸಿದರು.

ಸರ್ ಎಂ ವಿ ದಿವಾನರದಾಗ ಸರ್ಕಾರದ ಕೆಲದಲ್ಲಿ ಇದ್ದ ನೆಂಟರೊಬ್ಬರು ತಮಗೆ ಅದಕ್ಕಿಂತ ಮೇಲಿನ ಕೆಲಸ ಕೊಡಿಸಬೇಕೆಂದು ಕೇಳಿ ಕೊಂಡರು,ಅದಕ್ಕೆ ಆಗುವುದಿಲ್ಲ ಎಂದು ಅವರಿಗೆ ಹೇಳಿದರು. ಅ ಕೆಲಸ ಸಿಕ್ಕರೆ ಅವನಿಗೆ ೫೦ ರೊಪಾಯಿ ಹೆಚ್ಚು ಸಿಕ್ಕುತ್ತಿತ್ತು. ಅದ್ದರಿಂದ  ಅತ ಬದುಕಿರುವವರೆಗೆ ತಮ್ಮ ಸಂಬಳದಲ್ಲಿ ನೂರು ರೂಪಾಯಿಯನ್ನು ಆತನಿಗೆ ಕಳಿಸಿ ಕೊಡುತ್ತಿದ್ದರು.
ಸರಸ್ವತಿ ಪುತ್ರ

 
ವಾರಾನ್ನ ಮಾಡಿಕೊಂಡು , ಬೀದಿ ದೀಪದ ಕೆಳಗೆ ಓದುತ್ತಾ, ಬೇರೆಯ ಮಕ್ಕಳಿಗೆ ಪಾಠ ಹೇಳಿಕೊಡುತ್ತ ಮುಂದೆ ದೊಡ್ಡವರಾದ ಸರ್ ಎಂ ವಿ. ಮುಂದೆ  ಜನರ ಬಡತನ ಮತ್ತು ಕಷ್ಟಗಳಿಗೆ ಮೂಲ ಕಾರಣ ವಿದ್ಯೆ ಇಲ್ಲದಿರುವುದು ಎಂದು ಅರಿತು ಮೈಸೂರು ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಿದರು. ಅಂದು ಅವರು ದಿವಾನರದಾಗ ಕೇವಲ ೪೫೦೦ ಸಾವಿರ ಶಾಲೆಗಳು ಇದ್ದವು, ಆರು ವರ್ಷಗಳಲ್ಲಿ ೬೫೦೦ ಶಾಲೆಗಳನ್ನು ತೆರೆದರು. ೧೪೦೦೦೦   ಮಕ್ಕಳು ದಿವಾನರದಾಗ ಓದುತ್ತಿದ್ದರೆ, ೩೬೬೦೦೦ ಮಕ್ಕಳು  ದಿವಾನಗಿರಿ ಬಿಡುವ ಹೊತ್ತಿಗೆ ಓದುತ್ತಿದ್ದರು. ಹೆಣ್ಣು ಮಕ್ಕಳಿಗೆ ಕಲಿಯಲು ಅನುಕೂಲಗಳನ್ನು ಹಲವು ಯೋಜನೆ ಮಾಡಿಕೊಟ್ಟರು, ವಿಧ್ಯಾರ್ಥಿನಿಯರಿಗೆ ಮೂದಲ ಬಾರಿಗೆ ಹಾಸ್ಟೆಲ್ ಕಟ್ಟಿಸಿದರು.ಇದು ಇಲ್ಲಿಗೆ ನಿಲ್ಲದೆ ದೇಶದ ಮೊದಲ ವಿಶ್ವವಿದ್ಯಾಲಯವಾದ ಮೈಸೂರು ವಿಶ್ವವಿದ್ಯಾಲಯ , ತಾಂತ್ರಿಕ ಮಹಾವಿದ್ಯಾಲಯ, ಕೃಷಿ ವಿದ್ಯಾಲಯ ಮತ್ತು ಪ್ರತಿ ಜಿಲ್ಲೆಗಳಲ್ಲಿ ಕೈಗಾರಿಕಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದರು.
ಕನ್ನಡ ಭಾಷೆಯ ಅಭಿರುದ್ದಿ ಮತ್ತು ಕರ್ನಾಟಕದ ಏಕೀಕರಣಕಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಆರಂಭಿಸಿದರು.

ಚಾಣಕ್ಯ

  ಅಂದು ಕೆಂಪು ಮೂತಿಗಳ ವಿರುದ್ದ ಭರತ ಖಂಡವೇ ಅಖಾಡಕ್ಕೆ ಇಳಿದಿತ್ತು. ಅತ್ತ ಕಡೆ ಮಂದಗಾಮಿಗಳು , ಇತ್ತ ಕಡೆ ತೀವ್ರಗಾಮಿಗಳು ಹಾಗೂ ಕ್ರಾಂತಿಕಾರಿಗಳು ಸ್ವತಂತ್ರ ಚಳುವಳಿಯಲ್ಲಿ ದುಮಿಕಿದ್ದರು. ಇವರೆಲ್ಲರನ್ನು ಮೀರಿಸಿ ತಮ್ಮದೇ ಒಂದು ವಿಶಿಷ್ಟ ರೀತಿಯ ಹೋರಾಟದಿಂದ ಭಾರತ ಮಾತೆಯನ್ನು ಮತ್ತೆ ಕೆಂಪು ಮೊತಿಗಳು ದೊಚದಂತೆ, ಅವರ ಸಹಾಯವನ್ನೇ ಬಳಸಿ ಭರತ ಖಂಡವನ್ನೇ ಸಂರುದ್ದಗೊಳಿಸಿದರು. ದೇಶಕ್ಕೆ ಬೇಕಾದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿದೇಶಗಳಿಂದ ಪಡೆದು ದೇಶವನ್ನು ಯಶಸ್ಸೆಂಬ ಪರ್ವದ ಕಡೆಗೆ ನಡೆಸಿದರು. ದೇಶದ ತುಂಬೆಲ್ಲ ನೀರಾವರಿ , ಒಳಚರಂಡಿ ಮತ್ತು ಕುಡಿಯುವ ನೀರಿನ ಯೋಜನೆಗಳು, ಅಸಂಖ್ಯ ಕಾರ್ಖಾನೆಗಳು ,ಶಿಕ್ಷಣ ಕೇಂದ್ರಗಳು ಮತ್ತು ಅರ್ಥಿಕ ಸಲಹೆಗಳನ್ನು ಪರಂಗಿಗಳ ಇದ್ದ ಸಮಯದಲ್ಲಿ ನೀಡಿ ಚಾಣಕ್ಯನೆನಿಸಿ ಕೊಂಡರು.

ಕಲಿಯುಗದ ಭೀಷ್ಮ.

ಕೇವಲ ಆರು ವರ್ಷಗಲ್ಲಿ ಅಸಾಧಾರಣ ಪ್ರಗತಿ ತೋರಿಸಿದ ಸರ್ ಎಂ ವಿ ಸಹ ಪ್ರತೀ ಯೋಜನೆಯಲ್ಲಿ ಎಲ್ಲರಿಗಿಂತ ಹೆಚ್ಚು ವಿರೋಧಗಳನ್ನು ಅನುಭವಿಸಿ ಅದನ್ನೆಲ್ಲ ಮೆಟ್ಟಿ ನಿಂತು ತಮ್ಮ ಕಾರ್ಯ ಸಾಧನೆ ಮಾಡಿದ್ದರು ಅದಕ್ಕೊಂದು ಉದಾಹರಣೆ ನಮ್ಮ ಕನ್ನಂಬಾಡಿ ಕಟ್ಟೆ.
 
ಅಣೆಕಟ್ಟು ಕಟ್ಟುವ  ಪ್ರಸ್ತಾಪವನ್ನು ಮಹಾರಾಜರ ಮುಂದೆ ಇಟ್ಟಾಗ ಸರ್ ಎಂ ವಿಗೆ ಆಗದವರು ಮಹಾರಾಜರಿಗೆ ಇದೊಂದು ಹುಚ್ಚು ಯೋಜನೆ ಎಂದು ಹೇಳಿ , ಅನುಮತಿ ನಿರಾಕರಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಸರ್ ಎಂ ವಿ  ರಾಜೀನಾಮೆ ಕೂಡುವ ನಿರ್ಧಾರವನ್ನು ಮಹಾರಾಜರ ಮುಂದೆ ಪ್ರಸ್ತಾಪಿಸಿದಾಗ, ಸ್ವಲ್ಪ ಸಮಯ ಕೊಡಿ ಎಂದು ಮಹಾರಾಜರು ಸಮಯ ಕೇಳಿ ನಂತರ ಅಣೆಕಟ್ಟಿಗೆ ಅನುಮತಿ ಕೊಟ್ಟರು.

ನಂತರ ಎದುರಾದುದು  ಮತ್ತೊಂದು ವಿಘ್ನ ಆಣೆಕಟ್ಟು ಕಟ್ಟಿದರೆ ಎಲ್ಲಿ ತಮಗೆ ನೀರು ಸಿಗುವುದಿಲ್ಲವೋ ಎಂದು ಅಂದು ಮದರಾಸ್ ಪ್ರಾಂತ್ಯ ಅದಕ್ಕೆ ವಿರೋಧ ವ್ಯಕ್ತ ಪಡಿಸಿ ಅಡ್ಡಿ ಮಾಡಿತ್ತು. ಮುಕ್ಕಾಲು ಪಾಲು ಕಾವೇರಿ ನದಿ ಹರಿಯುವುದು ಕನ್ನಡ ನಾಡಿನಲ್ಲಿ ನಮಗಿಲ್ಲವೇ ಆದರ ಹಕ್ಕು ಎಂದು ಸರ್ ಎಂ ವಿ ಮಂಡಿಸಿದರು?. ಕೊನೆಗೆ ಭಾರತ ಸರ್ಕಾರ ೮೦ ಅಡಿಗೆ ಅಣೆಕಟ್ಟಲು ಅನುಮತಿ ನೀಡಿತು. ಆದರೆ ಸರ್ ಎಂ ವಿ ೧೩೦ ಅಡಿಗೆ ಆಣೆಕಟ್ಟು ಕಟ್ಟಲು ನೀಲನಕ್ಷೆ ಸಿದ್ದ ಮಾಡಿ ಕಾರ್ಯಾರಂಭ ಮಾಡಿದರು. ಕೊನೆಗೆ ಭಾರತ ಸರಕಾರದ ವಿರುದ್ದ ವಾದ ಮಾಡಿ ಮದರಾಸ್ ಪ್ರಾಂತ್ಯ ಇದರಿಂದ  ನಮಗಿಂತ ಜಾಸ್ತಿಯೇ ನೀರು ಸಿಕ್ಕುತ್ತದೆ ಎಂದು ಹೇಳಿ ಅನುಮತಿ ಪಡೆದು ಮುಂದೆ ಕನ್ನಂಬಾಡಿ  ಆಣೆಕಟ್ಟು ಕಟ್ಟಿದರು.

ಅರ್ಥಿಕ ತಜ್ಞ

 ಕೇವಲ ಇಂಜಿನಿಯರ್ ಆಗಿರದೆ ನಷ್ಟದಲ್ಲಿದ್ದ  ಮುಂಬೈ ಮತ್ತು  ಕರಾಚಿಯ ಪುರ ಸಭೆಗಳಿಗೆ ಸಲಹೆ ನೀಡಿ ಮತ್ತು ಭದ್ರಾವತಿಯ ಉಕ್ಕು ಮತ್ತು ಕಬ್ಬಿಣ  ಕಾರ್ಖಾನೆಯನ್ನು ಅರ್ಥಿಕ ಸಂಕಷ್ಟದಿಂದ ಪಾರು ಮಾಡಿದರು. ಭವಿಷ್ಯದ ಭಾರತಕ್ಕೆ ಬೇಕಾದ ರೂಪು ರೇಷೆಗಳನ್ನು ಸಿದ್ದಪಡಿಸಿದರು. ಪ್ರತಿಯೊಂದು ಯೋಜನೆಯನ್ನು ನಿಗದಿತ ವೆಚ್ಛ ಮತ್ತು ಸಮಯದಲ್ಲಿ ಯಶಸ್ವಿಯಾಗಿ ಅನುಷ್ಟಾನಗೊಳಿಸಿದರು. ಸುಭದ್ರ ದೇಶದ ಬೆನ್ನೆಲುಬು ದೇಶದ ಅರ್ಥಿಕ ಸ್ಥಿತಿ ಅದಕ್ಕಾಗಿ ಮೈಸೂರ್ ಬ್ಯಾಂಕಿನ ಸ್ಥಾಪನೆ ಮಾಡಿ.ಚೇಂಬರ್ ಆಫ್ ಕಾಮ್ಮೆರ್ಸೆ ಸಂಸ್ಥೆಯನ್ನು ಸ್ಥಾಪನೆ ಮಾಡಿದರು.ಬಡ ಕುಟುಂಬದಿಂದ ಬಂದ ಸರ್ ಎಂ ವಿ ದಿವಾನಗಿರಿ ಮಾಡುವಾಗಲು ಸಹ ಒಂದೊಂದು  ಪೈಸೆಯ ಬೆಲೆ ಅರಿತಿದ್ದರು ಎನ್ನುವುದಕ್ಕೆ ಅವರ ಬ್ಯಾಂಕಿನ ಖಾತೆಯೇ ಸಾಕ್ಷಿ.

ಮುಪ್ಪು ಕೇವಲ ದೇಹಕ್ಕೆ ಮನಸ್ಸಿಗೆ ಅಲ್ಲ..

 ೬೦ ಬಂತು ಅಂದರೆ ಅರಳು ಮರಳು ಅಂತಿವೆ ಆದರೆ ಅದಕ್ಕೆ ತದ್ವಿರುದ್ದ ನಮ್ಮ ಸರ್ ಎಂ ವಿ. ತಮ್ಮ ೭೫ನೇ  ವಯಸ್ಸಿನಲ್ಲಿ,  ಮಹಾನದಿಯ  ಪ್ರವಾಹದಿಂದ ತತ್ತರಿಸಿದ್ದ ಒರಿಸ್ಸಾದ ಜನತೆಗೆ, ಮುಂದಿನ ದಿನಗಳಲ್ಲಿ ಮುಂದೆಂದು ಪ್ರವಾಹಕ್ಕೆ ತತ್ತರಿಸದ ಹಾಗೆ ಸ್ಥಳ ಪರಿಶೀಲನೆ ಮಾಡಿ , ಮಹಾನದಿಗೆ ಅಡ್ಡಲಾಗಿ ಒರಿಸ್ಸಾದ ಹಿರಾಕುಡ್ನಲ್ಲಿ ಜಲಾಶಯ ನಿರ್ಮಾಣಕ್ಕೆ ನೀಲ ನಕ್ಷೆ ಸಿದ್ದಪಡಿಸಿದರು.೧೯೩೯, ಅಂದರೆ ಸರ್ ಎಂ ವಿಗೆ ೭೮ರ ಹರೆಯ ,ಅವರ ಬಹು ದಿನಗಳ ಕೂಸಾದ ವಾಹನ ತಯಾರಿಕೆಯ ಕಾರ್ಖಾನೆಯ ಯೋಜನೆಯ ಅನುಮೋದನೆ ಪಡೆದರು.  ಅ ಸಂಸ್ಥೆ ಮತ್ತಾವುದು ಅಲ್ಲ ಹಿಂದುಸ್ತಾನ್ ಏರೋನಾಟಿಕಲ್ ಲಿಮಿಟೆಡ್.  ೧೯೫೩,ತಮ್ಮ  ೯೨ರ ಹರೆಯದಲ್ಲಿ ಬಿಹಾರದ ಪಾಟ್ನಾ ನಗರದ ಗಂಗಾ ನದಿಯ ಸೇತುವೆಗೆ ನೀಲ ನಕ್ಷೆ ತಯಾರಿಸಲು  ಯೋಜನೆ ಅನುಷ್ಟಾನ ಮಾಡುವ ಸ್ಥಳಕ್ಕೆ ಸುಡು ಬಿಸಿಲನು ಲೆಕ್ಕಿಸದೆ ನಡೆದೆ ಹೋಗಿ ಯೋಜನೆ ಸಿದ್ದ ಮಾಡಿದರು. ವಯಸ್ಸು ತೊಂಬತ್ತು  ದಾಟಿದರು ಮನೆಗೆ ಅತಿಥಿಗಳು  ಬಂದಾಗ ಎದ್ದು ನಿಂತು ಗೌರವ ಸೂಚಿಸಿ ಮಾತನಾಡಿಸುತ್ತಿದ್ದರು. ಹೊಸಪೇಟೆಯ  ತುಂಗಭದ್ರ ಅಣೆಕಟ್ಟಿಗೆ ಸಲಹೆ ನೀಡಿದಾಗ ೮೬ರ ಪ್ರಾಯ, ಹಾಗೆ ತಮ್ಮ ಆತ್ಮ ಚರಿತ್ರೆ ಬರೆದಾಗ ೯೧ನೇ ವಸಂತ ಕಂಡರು.

ಸರ್ ಎಂ ವಿಯವರಿಗೆ ಆಗ ನೂರರ ಸಂಭ್ರಮ ಮನೆಯಲ್ಲಿದ್ದ ಅವರ ನೆಂಟರು ನಾನು ಮದರಾಸಿಗೆ ಹೋಗುತ್ತಿದ್ದೇನೆ ನಿಮಗೆ ಏನಾದರು ತರಲೆ, ಆಗ ಸರ್ ಎಂ ವಿ “ ನನಗೆ ಒಂದು ಹೊಸ ಅಂಗ್ಲ ಶಬ್ದ ಕೋಶ ತಂದು ಕೋಡಿ ” ಎಂದು ಹೇಳಿದರು. ವಯಸ್ಸು ನೂರಾದರು ಬುದ್ದಿ ಇನ್ನು ಚಿರಯವ್ವನದಲ್ಲಿತ್ತು ನಮ್ಮ ಸರ್ ಎಂ ವಿ ಯವರದು.

 
ಕೊನೆ ಮಾತು ..

ಅಧಿಕಾರ ಕೇವಲ ಅನುಭವಿಸಲು ಅಲ್ಲ, ಜನಕ್ಕಾಗಿ ಎಂದು ಅರಿತಿದ್ದ ಸರ್ ಎಂ ವಿ , ತಮ್ಮ ಬಹುಪಾಲು  ಸಮಯವನ್ನು ಜನರ ಸೇವೆಗೆ ಮೀಸಲಿಟ್ಟರು. ಮಾಡುವ ಕೆಲಸವನ್ನು ಸರಿಯಾಗಿ ಮಾಡಿದರೆ ಸಾಕು ಅದರ ಫಲ ತಡವಾದರೂ ಸಿಕ್ಕೆ ಸಿಗುತ್ತದೆ. ಸರ್ ಎಂ ವಿ ಒಂದು ಮಾತನ್ನು ಹೇಳುತ್ತಾರೆ. ಅ ಮಾತಿನೊಂದಿಗೆ ನನ್ನ ಲೇಖನವನ್ನು ಮುಕ್ತಾಯಗೋಳಿಸುತ್ತೇನೆ

“ಯಾವುದೇ ವೃತ್ತಿ ವ್ಯವಹಾರಗಳಲ್ಲಿ ಯಶಸ್ವಿಯಾಗುವುದು ವ್ಯಕ್ತಿಯ ಸಾಮರ್ಥ್ಯ , ವ್ಯಕ್ತಿತ್ವ , ಪ್ರಾಮಾಣಿಕತೆ ಮತ್ತು ಮುಂದಾಲೋಚನೆಗಳನ್ನೂ ಅಧರಿಸುತ್ತವೆ. ಮನುಷ್ಯನ ಬದುಕಿನ ಯಶಸ್ಸಿಗೆ ಅವನ ಪರಿಶ್ರಮವೇ ಆಧಾರ  ಯಾವ ಮನುಷ್ಯನ ಬದುಕಿನ ಸಿದ್ದಾಂತವು ನೋವನ್ನು ತಪ್ಪಿಸಿಕೊಂಡು ಕೇವಲ ಸಂತಸ ಅನುಭವಿಸುದಗಿದೆಯೋ ಅತ ಅಪಯಶಸ್ಸು ಗಳಿಸುವುದು ಸಿದ್ದ. ಸುಖ ದುಃಖಗಳೆರಡನ್ನು ಸಮನಾಗಿ ಸ್ವೀಕರಿಸುವುದು ಬದುಕಿನ ನಿತ್ಯ ನಿರಂತರ ಯಶಸ್ಸಿನ ಸಿದ್ದ ಸೂತ್ರ.”

 

Read more from ಲೇಖನಗಳು
3 ಟಿಪ್ಪಣಿಗಳು Post a comment
  1. Bindu's avatar
    ಸೆಪ್ಟೆಂ 16 2012

    BahaLa chennaagide. Sir M.V avara bagge tiliyada kelavu vishayagaLannu tilidantaayitu. Kevala namma raajyakkallade itara raajyagaLigoo ANekattu kattalu sahaaya maaDiruva vishaya nijakkoo hemme paDuvathahaddu

    ಉತ್ತರ
  2. laxminarayana's avatar
    laxminarayana
    ಸೆಪ್ಟೆಂ 16 2012

    Sir MV greate man ,antahavarannu bagavan ranta buddijeevi avahelana madiruvudu,swalpavu sariyilla,.Bagavantane avarige sadbuddi needali.

    ಉತ್ತರ
  3. ambi's avatar
    ambi
    ಸೆಪ್ಟೆಂ 16 2012

    niswarta baduku baali thorida visveswarayya tatanige namma namanagalu avara niswartate yuvashakthi ge madari

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments