ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 20, 2012

5

ಇಂಗ್ಲೀಷ್ ಹೋಯ್ತು ಹಿಂದಿ ಬಂತು ಢುಂ ಢುಂ ಢುಂ…

‍ನಿಲುಮೆ ಮೂಲಕ

ಸಾತ್ವಿಕ್ ಎನ್ ವಿ

ನಾನು ಮೊದಲೇ ಒಂದು ವಿಷಯ ಸ್ಪಷ್ಟಪಡಿಸಿ ಬರಹವನ್ನು ಮುಂದುವರೆಸುತ್ತೇನೆ. ನನಗೆ ಕನ್ನಡ ಬಿಟ್ಟು ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ. ಇಂಗ್ಲಿಷ್ ‘ಕೊಂಚ ಕೊಂಚ’ ಅರ್ಥವಾದರೂ, ಹಿಂದಿ ‘ಸುಟ್ಟು ತಿನ್ನಲಿಕ್ಕೂ’ ಬರುವುದಿಲ್ಲ. ಬರುವುದಿಲ್ಲ ಎಂಬುದು ಹೆಮ್ಮೆಯ ವಿಷಯವಲ್ಲದಿದ್ದರೂ ಕಲಿಯಲು ಪ್ರಯತ್ನಿಸಿ ಸೋತಿದ್ದೇನೆ. ಇರಲಿ ಈಗ ನೇರ ವಿಷಯಕ್ಕೆ ಬರೋಣ. ಹಿಂದೆ ಒಮ್ಮೆ ಲೇಖನವೊಂದನ್ನು  ಓದುವಾಗ- ಹಿಂದಿ ರಾಷ್ಟ್ರಭಾಷೆ, ಅದನ್ನು ಕಲಿಯುವುದು ನಮ್ಮ ದೇಶದ ಏಕತೆಯ ಸಂಕೇತ. ಇಂಗ್ಲೀಷ್ ಎಂಬುದು ಪರಕೀಯ ಭಾಷೆ. ಅದನ್ನು ಉಪಯೋಗಿಸಿಯೇ ಬ್ರಿಟಿಷರು ನಮ್ಮನ್ನು ೨೦೦ ಹೆಚ್ಚು ವರ್ಷ ಆಳಿದರು. ಇಂಥ ದಾಸ್ಯದ ಸಂಕೇತವನ್ನು ಒಪ್ಪಬೇಕೆ? ಅಂತೆಲ್ಲ ಬರೆದಿದ್ದರು.
ನನಗೆ ಅರ್ಥವಾಗದೇ ಇರುವುದು ಯಾವುದು ನಮ್ಮ ರಾಷ್ಟ್ರ ಭಾಷೆ? ಹಿಂದಿಗೂ ದೇಶಪ್ರೇಮಕ್ಕೂ ಏನು ಸಂಬಂಧ? ಸಮಾನತೆಯ ತಳಹದಿಯ ಮೇಲೆ ನಿಂತಿರುವ  ಸಂವಿಧಾನವಿರುವ ಭಾರತದಲ್ಲಿ ಹೆಚ್ಚು ಜನ ಒಂದು ಭಾಷೆಯನ್ನು ಮಾತಾಡುತ್ತಾರೆಂಬ ಕಾರಣಕ್ಕೆ ಅದನ್ನು ರಾಷ್ಟ್ರ ಭಾಷೆ ಎಂದು ಕರೆದು ಉಳಿದ ಭಾಷೆಗಳನ್ನು ಅಧೀನ ಭಾಷೆಗಳೆಂದು ಘೋಷಿಸಲು ಸಾಧ್ಯವೇ? (ಹಿಂದಿ ನಮ್ಮ ಸೇನೆಯ ಭಾಷೆಯಾಗಿದೆ. ಅದು ಅಗತ್ಯ. ಹಲವಾರು ರಾಜ್ಯಗಳಿಂದ ಬಂದ ಸಿಪಾಯಿಗಳು ಅಲ್ಲಿದ್ದು ಅವರು ಇಂಗ್ಲೀಷ್ ಗಿಂತ ಹಿಂದಿಯನ್ನು ಸುಲಭವಾಗಿ ಕಲಿಯಬಲ್ಲರೆಂಬ ಕಾರಣವಿರಬಹುದು. ಇದನ್ನು ನಮ್ಮ ಚರ್ಚೆಯಿಂದ ಹೊರಗಿಡುವ) ಹಿಂದಿಯನ್ನು ನಾವು ತೃತೀಯ ಭಾಷೆಯಾಗಿ ಕಲಿಯುತ್ತೇವೆ, ಯಾವ ಹಿಂದಿಯಾಡುವ ರಾಜ್ಯ, ಇತರೆ ಭಾರತೀಯ ಭಾಷೆಗಳನ್ನು ತಮ್ಮ ವಿದ್ಯಾರ್ಥಿಗಳಿಗೆ ಕಲಿಸುತ್ತಿದೆ? ಈ ದ್ವಂದ್ವ ನಿಲುವು ಯಾಕೆ? ಇದು ಹಿಂದಿಯೇತರ ವಿದ್ಯಾರ್ಥಿಗಳಿಗೆ ಹೊರೆಯಲ್ಲವೇ? ಸ್ವಲ್ಪ ಯೋಚಿಸಿ. ಭಾಷೆ ಎಂಬುದು ಕೇವಲ ಮಾಧ್ಯಮ ಮಾತ್ರ ಅಲ್ಲ. ಅದೊಂದು ಸಂಸ್ಕೃತಿವಾಹಕ ಕೂಡ. ಒಂದು ಭಾಷೆ ಬಂತು ಎಂದಾದರೆ ಅದರ ಜೊತೆಯಲ್ಲೇ ಅಲ್ಲಿನ ಸಂಸ್ಕೃತಿಯ ತುಣುಕುಗಳನ್ನು ಕಲಿಯುವ ವ್ಯಕ್ತಿಗಳಲ್ಲಿ ತುರುಕುತ್ತದೆ.
ನನ್ನ ಗೆಳೆಯರಲ್ಲೂ ಕೂಡ ಹಲವರು ಹಿಂದಿಯ ಅಗತ್ಯದ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತಾರೆ. ನನ್ನದು ಒಂದೇ ಪ್ರಶ್ನೆ. ಭಾಷೆಯೊಂದನ್ನು ನಮ್ಮ ಅಗತ್ಯಕ್ಕಾಗಿ ಕಲಿಯಬೇಕಾ ಇಲ್ಲ ಇಂಗ್ಲೀಷ್ ಗೆ ಬದಲಿಯಾಗಿ ಇರಲಿ ಅಂತಲಾ? ಜಾಗತೀಕರಣದ ಇಂದಿನ ದಿನಮಾನಗಳಲ್ಲಿ ಹೆಚ್ಚೆಚ್ಚು ಭಾಷೆಗಳನ್ನು ಕಲಿತಷ್ಟು ಒಳ್ಳೆಯದು ಎಂಬ ವಾದವೂ ಇದೆ. ಆದರೆ ಯಾವ ಭಾಷೆ ಕಲಿಯಬೇಕು? ಇಂಗ್ಲೀಷ್, ಹಿಂದಿ, ಫ್ರೆಂಚ್, ಜರ್ಮನ್ ಯಾವುದು?
ಇಲ್ಲಿ ಇನ್ನೊಂದು ವಿಶೇಷವಿದೆ. ಅಧಿಕಾರ ಸಂಬಂಧಗಳಷ್ಟೇ ಭಾಷೆಯೂ ಕೂಡ ಒಂದು ಪವರ್ ಫುಲ್ ವೆಪನ್. ಎಲ್ಲ ಭಾಷೆಗಳ ನಡುವೆಯೂ ಇಂಥ ಏಣಿಶ್ರೇಣಿಗಳಿರುತ್ತವೆ. ಅಧಿಕಾರ ಕೇಂದ್ರಕ್ಕೆ ಹತ್ತಿರವಾಗಿರುವ ಭಾಷೆ ಪ್ರಧಾನ ಸ್ಥಾನದಲ್ಲಿದ್ದರೆ ಉಳಿದ ಭಾಷೆಗಳು ಅಧೀನದಲ್ಲಿರುತ್ತವೆ. ಹೇರಿಕೆಯ ಮೂಲಕ ಒಂದು ಭಾಷೆ ಇನ್ನೊಂದು ಭಾಷೆಯ ಮೇಲೆ ಅಧಿಕಾರ ಸ್ಥಾಪಿಸುತ್ತದೆ. ಭಾಷೆ ಎಂಬುದು ಒಂದು ಜನಸಮುದಾಯವನ್ನು ರೆಪ್ರೇಸೆಂಟ್ ಮಾಡುವುದರಿಂದ ಒಂದು ಸಮುದಾಯ ಇನ್ನೊಂದು ಸಮುದಾಯದ ನಡುವೆ ಚಿಕ್ಕ ಅಂತರವೇರ್ಪಡುತ್ತದೆ. ಇಷ್ಟು ನನ್ನ ವಿಚಾರ ನಿಮ್ಮ ಅಭಿಪ್ರಾಯಗಳಿಗೂ ಸ್ವಾಗತ.

ಚಿತ್ರಕೃಪೆ: vipulgrover.blogspot.com

Read more from ಲೇಖನಗಳು
5 ಟಿಪ್ಪಣಿಗಳು Post a comment
  1. ಮಹೇಶ ಪ್ರಸಾದ ನೀರ್ಕಜೆ's avatar
    ಮಹೇಶ ಪ್ರಸಾದ ನೀರ್ಕಜೆ
    ಫೆಬ್ರ 8 2011

    ಯಾರು ಹೇಳಿದರು ಹಿಂದಿ ಏಕತೆಯ ಸಂಕೇತ ಅಂತ. ಸಾವಿರದಲ್ಲೊಬ್ಬ ಹೇಳಿದರೆ ಅದು ಸತ್ಯವಾಗಬೇಕಿಲ್ಲ. ಅಂತಹವರನ್ನು ಅಲಕ್ಷಿಸೋಣ. ನಮ್ಮ ಮುಂದಿರುವ ನಿಜವಾದ ಸವಾಲು ಇಂಗ್ಲೀಷ್. ಕರ್ನಾಟಕದಲ್ಲಿ ಇರುವ ಹಿಂದಿ ಮಾಧ್ಯಮ ಶಾಲೆಗಳ ಸಂಖ್ಯೆ, ಉರ್ದು ಮಾಧ್ಯಮ ಶಾಲೆಗಳ ಸಂಖ್ಯೆ, ಆಂಗ್ಲ ಮಾಧ್ಯಮ ಶಾಲೆಗಳ ಸಂಖ್ಯೆ ಮತ್ತು ಕನ್ನಡ ಮಾಧ್ಯಮ ಶಾಲೆಗಳ ಸಂಖ್ಯೆಗಳನ್ನು ಒಂದು ಕಡೆ ಬರೆದುಕೊಂಡು ವಿಚಾರ ಮಾಡಿದರೆ ಕನ್ನಡಕ್ಕೆ ಯಾವುದು ನಿಜವಾದ ವೈರಿ ಎಂದು ತಿಳಿಯುತ್ತದೆ.

    ಉತ್ತರ
  2. bhadravathi's avatar
    bhadravathi
    ಫೆಬ್ರ 8 2011

    ನೀವು ಏಕತೆ ಅನ್ನೋದನ್ನು ಪ್ರೊಫ್. ನಿಸಾರ್ ಅಹಮದ್ ಕೇಳಿಸಿಕೊಂಡಾರು. ಏಕತೆ ಅಲ್ಲ ಐಕ್ಯತೆ, ಕನ್ನಡ ಬರದವರ ಪ್ರಶ್ನೆಗಳಿಗೆ ಉತ್ತರಿಸೋಲ್ಲ ಎಂದು ಮೂಗು ಮುರಿದಿದ್ದರು. ಹಿಂದಿ, ಕನ್ನಡ, ಮಲಯಾಳಂ, ಉರ್ದು… ಈ ಯಾವ ಭಾಷೆಗಳೂ ಆಂಗ್ಲ ದ ಬಿರುಗಾಳಿಗೆ ತತ್ತರಿಸೋ dialect ಗಳಲ್ಲ. ಭಾಷೆ ವಿಷಯದಲ್ಲಿ ತೀರಾ chauvinistic ಆಗೋದು ಬ್ಯಾಡ.

    ಉತ್ತರ
    • ರಾಕೇಶ್ ಶೆಟ್ಟಿ's avatar
      ಫೆಬ್ರ 8 2011

      ನಿಜ.ಭಾಷೆಗಳ ವಿಶಯದಲ್ಲಿ ತೀರಾ chauvinistic ಆಗೋದು ಬ್ಯಾಡ. ಆದರೆ ಯಾವುದೇ ಭಾಷೆಯೆ ಅನಗತ್ಯ ಹೇರಿಕೆಯನ್ನ ಸಹಿಸೋದು ಬೇಡ

      ಉತ್ತರ
  3. bhadravathi's avatar
    bhadravathi
    ಫೆಬ್ರ 8 2011

    ಕ್ಷಮಿಸಿ, ಕೇಳಿಸಿ ಕೊಂಡಾರು, ಆಗಬೇಕಿತ್ತು.

    ಉತ್ತರ
  4. ಆಸು ಹೆಗ್ಡೆ's avatar
    ಫೆಬ್ರ 9 2011

    ಮಾತೃಭಾಷೆಯನ್ನುಳಿದು, ಕಲಿಕೆಗೆ ಇನ್ನಿತರ ಭಾಷೆಗಳ ಆಯ್ಕೆಯಲ್ಲಿ ಸ್ವಾತಂತ್ರ್ಯ ಇರಬೇಕು.
    ನಾವು ಅನ್ಯ ಭಾಷೆಗಳನ್ನು ದ್ವೇಷಿಸಬೇಕಾಗಿಲ್ಲ.
    ನಾವು ನೂರು ಭಾಷೆಗಳನ್ನಾದರೂ ಕಲಿಯಬಹುದು.
    ಆದರೆ ಬಲವಂತದಿಂದಲ್ಲ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments