ಚಂದ್ರಮನ ಚಂದ್ರಿಕೆ
– ರಂಜಿತಾ ಅಂಜು
ಅದು ಸುಂದರದ ಆ ಕ್ಷಣ , ಸೂರ್ಯನು ತನ್ನ ಕೋಪವನ್ನು ಇಂಗಿಸುತ್ತಾ , ನೆಮ್ಮದಿಯ ನಿಟ್ಟಿಸಿರು ಬಿಡುತ್ತಾ , ವನ್ಯ ಸಂಕುಲಗಳ ಮೇಲೆ ಪ್ರೀತಿ ತೋರುತ್ತಾ , ಆಗಸದಲ್ಲಿ ಮರೆಯಾಗುತಿದ್ದನು. ಹಕ್ಕಿಗಳು ಚಿಲಿಪಿಲಿ ಸದ್ದಿನೊಂದಿಗೆ , ತಮ್ಮ ಜೊತೆಗಾರರನ್ನು ಸೇರಲು ಗುಂಪಿನೊಂದಿಗೆ ತಮ್ಮ ತಮ್ಮ ಗೂಡನ್ನು ತಾವು ಸೇರಿಕೊಳ್ಳುತ್ತಿದ್ದವು…. ತಂಪನೆಯ ತಂಗಾಳಿ ಇಡೀ ಪ್ರಕೃತಿಗೆ ಉಲ್ಲಾಸದ ಅನುಭವ ನೀಡುತಲಿತ್ತು…
ಆ ರವಿಯ ಶಾಂತತೆಗೆ ಆಗಸವು ನಾಚಿ ತನ್ನ ಹೊಂಬೆಳಕಿನ ಮುಡಿಯಲ್ಲಿ ಕೆಂಪನೆಯ ಗುಲಾಬಿಯನ್ನು ಮುಡಿದಂತೆ , ಇಡೀ ಆಗಸದಲ್ಲಿ ಹಲವು ಬಣ್ಣಗಳ ರಂಗಿನಾಟದಲ್ಲಿ ಮುಳುಗಿತ್ತು. ನಿಸರ್ಗವು ತನ್ನ ನಲ್ಲನು ಅವಳನ್ನು ನೋಡಲು ಬರುತಿಹನೆಂದು ಖಾತರಿ ಪಡಿಸಿ , ತನ್ನನ್ನು ತಾನು ಸಿಂಗರಿಸಿಕೊಳ್ಳಲು ನಿರತಳಾದಳು….





