‘ಲೈಫ್ ಆಫ್ ಪೈ’ ಎಲ್ಲರಲ್ಲೂ ಕಾಡುವಂತಾಗಲಿ…
– ಚಕ್ರವರ್ತಿ ಸೂಲಿಬೆಲೆ
ಒಂದು ನಾಟಕ, ಸಿನಿಮಾ, ಕೊನೆಗೆ ಸಂಗೀತವೂ ಕೂಡ.. ಮುಗಿಸಿ ಬಂದ ನಂತರವೂ ಎಷ್ಟು ಹೊತ್ತು ನಿಮ್ಮನ್ನು ಕಾಡುತ್ತಿರುತ್ತದೆ ಎಂಬುದರ ಮೇಲೆ ಅದರ ಸಫಲತೆಯನ್ನು ಅಂದಾಜಿಸಬಹುದು. ಕಾಕತಾಳೀಯ ಅಂತಾದರೂ ಹೇಳಿ, ವಿಶ್ವಪ್ರಜ್ಞೆಯ ಪ್ರೇರಣೆ ಅಂತಲಾದರೂ ಕರೀರಿ. ಓಹ್ ಮೈ ಗಾಡ್ ನೋಡಿದ ಮರುವಾರವೇ ಲೈಫ್ ಆಫ್ ಪೈ ನೋಡುವ ಅವಕಾಶ ದಕ್ಕಿದ್ದು ನನ್ನ ಪಾಲಿಗೆ ವಿಶೇಷವೇ ಸರಿ. ಚಿತ್ರ ರಾತ್ರಿಯಿಡೀ ಕಾಡಿದೆ. ಕೆಲವು ಮಾತುಗಳು ಮತ್ತೆ ಮತ್ತೆ ನೆನಪಾಗುತ್ತಿವೆ. ದೃಶ್ಯಗಳ ವೈಭವದ ಹಿಂದೆ ಅಡಗಿ ಕುಳಿತಿರುವ ಬದುಕಿನ ಸೂಕ್ಷ್ಮ ಅರ್ಥಗಳು ಒಂದೊಂದಾಗಿ ಅನಾವರಣಗೊಳ್ಳುತ್ತವೆ. ದೇವರ ಕುತರಿತಂತೆ, ಮತಗಳ ಕುರಿತಂತೆ ಕೊನೆಗೆ ಬದುಕಿನ ಕುರಿತಂತೆಯೂ ಪೈ ಹುಟ್ಟು ಹಾಕುವ ಪ್ರಶ್ನೆಗಳಿವೆಯಲ್ಲ, ಅವು ನಿಮ್ಮನ್ನು ಕಾಡದಿದ್ದರೆ ಹೇಳಿ.
ಹೀಗೆ ಕಾಡುತ್ತಾನೆಂದೇ ಅವನು ’ಪೈ’. ಫ್ರಾನ್ಸಿನ ಸ್ವಚ್ಛ ನೀರಿನ ಈಜುಕೊಳದಿಂದಾಗಿ ಬಂದ ಹೆಸರು ಅವನದ್ದು. ಪಿಸಿನ್ ಪಟೇಲ್. ಉಳಿಯೋದು ಪೈ. ಅದೆಷ್ಟು ಸಾಂಕೇತಿಕವೆಂದರೆ, ಪೈನ ಬದುಕು ಗಣಿತದ ಪೈನಂತೆಯೇ. ಅದೊಂದು ಇರ‍್ಯಾಷನಲ್ ನಂಬರ್. ಆದರೆ ಗಣಿತದ ಸಮಸ್ಯೆಗಳನ್ನು ಪರಿಹರಿಸಲು ರ‍್ಯಾಷನಲ್ ಆಗಿಯೇ ಬಳಸಲ್ಪಡುತ್ತದೆ. ಭಗವಂತನೂ ಹಾಗೆಯೇ. ಯಾರೂ ಕಾಣಲೇ ಇಲ್ಲ. ಆದರೆ ಎಲ್ಲರೂ ಕಂಡಿದ್ದೇವೆ ಎಂಬಂತೆ ಜೊತೆಯಲ್ಲಿಟ್ಟುಕೊಂಡೇ ಬದುಕು ನಡೆಯುತ್ತದೆ. ಪೈ ವೃತ್ತದ ಪರಿಧಿ ಮತ್ತು ವ್ಯಾಸಗಳ ಅನುಪಾತವನ್ನು ತೋರಿಸುವ ಸಂಖ್ಯೆ. ವ್ಯಾಸವನ್ನು ಬದುಕಿನ ಯಾತ್ರೆ ಅಂತ ಭಾವಿಸುವುದಾದರೆ ಪರಿಧಿ ಧರ್ಮ, ದೇವರು, ವಿಶ್ವಾಸಗಳು. ಬದುಕು ಯಾರದ್ದಾದರೂ ಆಗಿರಲಿ, ಆತ ಆಸ್ತಿಕನಾಗಿರಲಿ, ನಾಸ್ತಿಕನೇ ಆಗಲಿ. ಕೊನೆಗೆ ಅವಕಾಶವಾದಿ ಆಸ್ತಿಕನಾದರೂ ಸರಿ. ಈ ಪರಿಧಿಯೊಳಗಿನ ವ್ಯಾಸವಾಗಿಯೇ ಬದುಕಬೇಕು. ಅದು ಪೈನಂತೆ ಸ್ಥಿರಾಂಕ!





