ದೈವಭಕ್ತಿಯ ಸಾಕಾರ ಮೂರ್ತಿ ವಿಶ್ವ ಮಾತೆ ಶ್ರೀಶಾರದಾದೇವಿ
-ಶ್ರೀವಿದ್ಯಾ,ಮೈಸೂರು
ನಮ್ಮ ತಾಯಿಯಂತೆ ಕಾಣುವ ಮಾತೆ ಶ್ರೀಶಾರದಾದೇವಿಯವರ ಜೀವನ ನಮ್ಮ ಲೌಕಿಕ ಜೀವನಕ್ಕೆ ಆದರ್ಶವಾಗಿದೆ. ಅವರು ನಮ್ಮ ತರಹ ಸಾಮಾನ್ಯ ಮಹಿಳೆ, ದೇವಿಭಕ್ತೆ, ಎಲ್ಲರನ್ನೂ ಸ್ವಂತ ಮಕ್ಕಳಂತೆ ಕಾಣುವ ತಾಯಿ, ಪತಿಗೆ ಸೇವೆ, ಸಹಾಯ ಮಾಡುವ ಪತ್ನಿ, ಪತಿ ಹೇಗೆ ನಡೆದುಕೊಂಡಿದ್ದರೋ ಹಾಗೆಯೇ ಇರುವ ಪತ್ನಿ, ತಪಸ್ವಿನಿ, ಪತಿಯಿಂದ ತನ್ನ ಪೂಜೆ ಮಾಡಿಸಿಕೊಂಡು ಜಗನ್ಮಾತೆ ದೇವಿಯ ದರ್ಶನ ಪಡೆದ ಪುಣ್ಯಾತ್ಮೆ. ಇವೆಲ್ಲ ನಮ್ಮ ಜೀವನಕ್ಕೆ ಆದರ್ಶವಾಗಲಿವೆ. ಆದರೂ ಪತಿ – ಪತ್ನಿ ಸಂಬಂಧ, ಲೌಕಿಕ ಆಸೆಗಳು, ಕಾಮ, ಪ್ರೇಮ ಇವೆಲ್ಲ ಶಾರದಾದೇವಿಯವರ ಮನಸ್ಸಿನಿಂದ ಸಂಪೂರ್ಣ ದೂರವಾಗಿದ್ದವು. ಅವರ ಮನಸ್ಸು ಯಾವಾಗಲೂ ದೇವಿಯ ಮೇಲೆ, ಪತಿಯ ಸೇವೆಗೆ, ಜನರ ಸುಧಾರಣೆಗೆ, ಬಡವರಿಗೆ ಊಟ ಹಾಕೋದು ಇವೆಲ್ಲ ಇತ್ತು. ನಾವು ಅವರನ್ನು ನೆನೆಸಿಕೊಂಡರೆ ಕೆಟ್ಟ ಮನಸ್ಸುಗಳೆಲ್ಲ ದೂರವಾಗುವುದು. ಇಂತಹ ನಮ್ಮ ಪವಿತ್ರ ತಾಯಿಯ ದೇಶದಲ್ಲಿ ನಾವು ಹುಟ್ಟಿದ್ದು ನಮ್ಮ ಪುಣ್ಯ …
೧೮೫೩ನೆಯ ಡಿಸೆಂಬರ್ ೨೨ರಂದು ಜಯರಾಮವಟಿ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀಶಾರದಾದೇವಿಯವರು ದೇವರ ಅನುಗ್ರಹದಿಂದ ರಾಮಚಂದ್ರ ಮುಖರ್ಜಿ, ಶ್ಯಾಮಸುಂದರಿದೇವಿಯವರಿಗೆ ಜನಿಸಿದಳು.ಈ ಕುಟುಂಬದವರು ಬ್ರಾಹ್ಮಣರಲ್ಲ ಆದರೂ ಶೀಲ ಹಾಗೂ ನಡೆ-ನುಡಿಗಳಲ್ಲಿ ಬ್ರಾಹ್ಮಣರೇ ಆಗಿದ್ದರು. “ಬ್ರಾಹ್ಮಣ” ಎಂಬ ಪದದ ಅರ್ಥವನ್ನು ಸಂಪೂರ್ಣವಾಗಿ ಗ್ರಹಿಸಿ, ಅನುಷ್ಠಾನ ರೀತಿಯಲ್ಲಿಯೂ ಅಳವಡಿಸಿಕೊಂಡಿದ್ದರು. ಬಡವರಾದರೂ ಸೌಜನ್ಯತೆಗೆ ಬಡತನ ಇರಲಿಲ್ಲ. ದೀನರೆನಿಸಿದ್ದರೂ ಧಾರಾಳಿ ಆಗಿದ್ದರು. ಒಂದಿಷ್ಟು ಗದ್ದೆ ಇತ್ತು, ಕಣಜ ತುಂಬುವಷ್ಟು ಭತ್ತ ಬರುತ್ತಿತ್ತು. ಪೌರೋಹಿತ್ಯ ಜನಿವಾರವನ್ನು ಮಾಡಿ, ಮಾರುವ ವೃತ್ತಿಯನ್ನೂ ಇಟ್ಟುಕೊಂಡಿದ್ದರು. ಹಳ್ಳಿಯ ಜನರಿಗೆ ಕಷ್ಟ ಕಾಲದಲ್ಲಿ ಉದಾರವಾಗಿ ದಾನ ಮಾಡುತ್ತಿದ್ದರು. ಪರರ ನೋವಿಗೆ ಅಯ್ಯೋ ಅನ್ನುವ ಆದರ್ಶ ಗುಣ ಇವರಲ್ಲಿ ಮನೆ ಮಾಡಿತ್ತು.
ಶಾರದಾದೇವಿ ರಾಮಚಂದ್ರ ಮುಖರ್ಜಿ ಅವರ ಮನೆಯ ಹಿರಿಯ ಮಗಳು. ತಾಯ್ತಂದೆಯರ ಮುದ್ದಿನ ಮಗಳು. ಐದು ವರ್ಷದ ಮಗು ಆಗಿದ್ದಾಗಲೇ ತಾಯ್ತಂದೆಯರ ಕೆಲಸಕಾರ್ಯಗಳಲ್ಲಿ ನೆರವಾಗುತ್ತಿದ್ದಳು. ದಿನವೂ ತಂದೆಯ ಪೂಜಾ ಸಮಯದ ವೇಳೆಗೆ ಹೂವು, ತುಳಸಿ, ದರ್ಭೆ ಮೊದಲಾದವುಗಳನ್ನು ಶ್ರದ್ಧೆಯಿಂದ ತಂದೊದಗಿಸುತ್ತಿದ್ದಳು. ಹಲವೊಮ್ಮೆ ದೇವರ ನೈವೇದ್ಯಕ್ಕಾಗಿ ಅನ್ನವನ್ನು ಈ ಪುಟ್ಟ ಬಾಲಕಿಯೇ ಮಾಡಿ ಮುಗಿಸುತ್ತಿದ್ದಳು. ಮನೆಯಲ್ಲಿ ಇದ್ದ ಹಸುವಿಗೆ ದಿನವೂ ಮೇವು ತರುವ ಕಾರ್ಯವೂ ಸಹ ಈ ಪುಟ್ಟ ಬಾಲಕಿಯದೇ ಆಗಿತ್ತು. ಮಳೆಗಾಲದಲ್ಲಿ ದಾರಿಗಳಲ್ಲಿ ಹರಿಯುತ್ತಿರುವ ನೀರಿನಲ್ಲೇ ನಡೆದು ದೂರದ ಗದ್ದೆಯ ಬದುಗಳಲ್ಲಿ ಬೆಳೆದು ನಿಂತಿರುವ ಹಸಿರು ಹುಲ್ಲನ್ನು ಶ್ರದ್ಧಾಸಕ್ತಿಯಿಂದ ಕೊಯ್ದು ತರುತ್ತಿದ್ದಳು. ಗದ್ದೆಗಳಲ್ಲಿ ಆಳುಗಳು ಕೆಲಸ ಮಾಡುವಾಗ ಮಂಕರಿಯಲ್ಲಿ ಊಟವನ್ನು ಹೊತ್ತುಕೊಂಡು ಹೋಗಿ ಉಣಬಡಿಸುವ ಕಾರ್ಯವೂ ಈ ಕಿರಿಯ ಕಿಶೋರಿ, ಶಾರದಾಮಣಿ ದೇವಿಯದೇ ಆಗಿತ್ತು.
ಆಗಿನ ಕಾಲದಲ್ಲಿ ಹೆಣ್ಣುಮಕ್ಕಳನ್ನು ಓದಲು ಶಾಲೆಗೆ ಕಳುಹಿಸುತ್ತಿರಲಿಲ್ಲ. ಆದರೂ ತನ್ನ ತಮ್ಮಂದಿರೆಲ್ಲರನ್ನೂ ತಾನೇ ಆಸಕ್ತಿಯಿಂದ ದಿನವೂ ಶಾಲೆಗೆ ಬಿಟ್ಟು ಬರುತ್ತಿದ್ದಳು. ಆಟಗಳಲ್ಲಿ ಅಪೇಕ್ಷೆ ಇರಲಿಲ್ಲ. ದೇವ-ದೇವಿಯರ ವಿಗ್ರಹಗಳನ್ನು ಪೂಜಿಸುವುದೆಂದರೆ ತುಂಬಾ ಇಷ್ಟ. ಎಷ್ಟೋ ಸಲ ಪೂಜಾರಾಧನೆಯ ಸಮಯದಲ್ಲಿ ಪ್ರಜ್ಞಾಶೂನ್ಯತೆಯಲ್ಲಿ ಮುಳುಗಿರುತ್ತಿದ್ದುದೂ ಉಂಟು.
ಶಾಲೆಯಲ್ಲಿ ವಿದ್ಯೆ ಕಲಿಯದಿದ್ದರೂ ತಾಯ್ತಂದೆಯರ ನಡೆ-ನುಡಿಯನ್ನು ಮನೆಯಲ್ಲಿ ಕಣ್ಣಾರೆ ಕಂಡು, ಮನೆಯೇ ಮೊದಲ ಪಾಠಶಾಲೆ ಎಂಬಂತೆ ಸಾಕಷ್ಟು ಜೀವನೋಪಯುಕ್ತ ಪಾಠಗಳನ್ನು ಮನೆಯಲ್ಲಿಯೇ ಕಲಿತಳು. ತಾಯಿಯಾದ ಶ್ಯಾಮ ಸುಂದರೀದೇವಿ ಅವರು ಹಲವೊಮ್ಮೆ ಮಗಳನ್ನು ತೊಡೆಯ ಮೇಲೆ ಕುಳ್ಳಿರಿಸಿಕೊಂಡು, ಮಗಳ ಎಳೆಯ ಮನದಲ್ಲಿ ವಿವೇಕದ ಬೀಜಗಳನ್ನು ಬಿತ್ತುತ್ತಿದ್ದರು. ಸೀತೆ, ಸಾವಿತ್ರಿ, ಶಬರಿ, ಅನುಸೂಯಾ, ಅಹಲ್ಯೆ ಮೊದಲಾದ ಪತಿಪ್ರತೆಯರ ಕಥೆಗಳನ್ನು ಹೃದ್ಯವೆನಿಸುವಂತೆ ಹೇಳುತ್ತಿದ್ದರು. ನೀನು ಅವರಂತೆ ಆಗಬೇಕೆಂದು ಪ್ರೋತ್ಸಾಹಿಸುತ್ತಿದ್ದರು.
ಹಿಂದೆ ಬ್ರಾಹ್ಮಣಕುಲದಲ್ಲಿ ಹೆಣ್ಣುಮಕ್ಕಳಿಗೆ ಬಾಲ್ಯವಿವಾಹ ಮಾಡಿಸುತ್ತಿದ್ದರು. ಜನರು ಕೇಳುತ್ತಿದ್ದಂತೆಯೇ ರಾಮಚಂದ್ರ ಮುಖರ್ಜಿಯವರಿಗೆ ತನ್ನ ಮಗಳಿಗೆ ವರ ನೋಡಬೇಕೆಂದು ಚಿಂತೆಯಾಯಿತು. ಎಲ್ಲೂ ಮಗಳಿಗೆ ಸರಿಹೊಂದುವ ವರ ದೊರೆಯದೆ ಮನೋವ್ಯಥೆಯಿಂದ ಕೊರಗತೊಡಗಿದರು.
ಇದೇ ಸಮಯದಲ್ಲಿ ಜಯರಾಮವಟಿಯಿಂದ ಕೆಲವೇ ಮೈಲಿಗಳ ದೂರದಲ್ಲಿದ್ದ ಕಾಮಾರಪುಕುರ ಎಂಬ ಹಳ್ಳಿಯಲ್ಲಿ ಚಂದ್ರಮಣಿದೇವಿ ಎಂಬ ಬ್ರಾಹ್ಮಣಿ, ಅವರಿಗೆ ಗದಾಧರ ಎಂಬ ಮಗ. ದೈವಿಕ ಚಿಂತನೆಯಲ್ಲಿಯೇ ಸದಾಕಾಲ ಮುಳುಗಿರುತ್ತಿದ್ದ. ದೇವರನ್ನು ಕಾಣುವ ಒಂದೇ ಆಕಾಂಕ್ಷೆಯಿಂದ ತೊಳಲಾಡುತ್ತಿದ್ದ. ಇವನ ತೊಳಲಾಟ, ಗೊಂದಲವನ್ನು ಕಂಡು ಎಲ್ಲರೂ ಇವನನ್ನು ಹುಚ್ಚ ಎನ್ನುತ್ತಿದ್ದ. ಇದನ್ನು ಕೇಳಿ ಕೇಳಿ ಅವನ ತಾಯಿಗೆ ಚಿಂತೆಯಾಯಿತು, ಮದುವೆ ಮಾಡಿಸೋಣ ಅಂದರೆ ವಧು ಸರಿಯಾಗಿ ಸಿಗುತ್ತಿರಲಿಲ್ಲ. ಒಂದು ದಿನ ಗದಾಧರನೇ “ನಾನು ಮದುವೆ ಆಗುವ ಹೆಣ್ಣು ಜಯರಾಮವಟಿಯಲ್ಲಿ ರಾಮಚಂದ್ರಮುಖರ್ಜಿ ಅವರ ಮನೆಯಲ್ಲಿ ಬೆಳೆಯುತ್ತಿದೆ. ನೀವು ಅಲ್ಲಿ ಹೋಗಿ ವಿಚಾರಿಸಿ” ಎಂದನು. ಮಗನ ಮಾತು ಪರೀಕ್ಷಿಸಲು ತಾಯಿ ತನ್ನ ಹತ್ತಿರದ ಸಂಬಂಧಿಕರನ್ನು ನೋಡಿಕೊಂಡು ಬರಲು ಜಯರಾಮವಟಿಗೆ ಕಳುಹಿಸಿಕೊಟ್ಟರು. ಮಗನ ಮಾತು ನಿಜವೇ ಆಗಿತ್ತು. ಐದು ವರ್ಷದ ಶಾರದಾದೇವಿಯನ್ನು ಇಪ್ಪತ್ತಮೂರು ವರ್ಷದ ಗದಾಧರನೊಂದಿಗೆ ಕೊಟ್ಟು ಮದುವೆ ಮಾಡಲು ಸಮ್ಮತಿ ಸಿಕ್ಕಿತು. ಮದುವೆಯೂ ಕಾಮಾರಪುಕುರದಲ್ಲಿಯೇ ವಿಜೃಂಭಣೆಯಿಂದ ಜರುಗಿಹೋಯಿತು. ಹುಚ್ಚನೆಂದುಕೊಂಡಿದ್ದ ಗದಾಧರನ ಮದುವೆ ಇಷ್ಟೊಂದು ಅದ್ದೂರಿಯಾಗಿ ನಡೆದುದನ್ನು ಕಂಡು, ಬಂದಿದ್ದವರೆಲ್ಲರಿಗೂ ಆನಂದ, ಆಶ್ಚರ್ಯ ಎರಡೂ ಒಮ್ಮೆಲೇ ಆಯಿತು.
ಮದುವೆಯ ಸಮಯದಲ್ಲಿ ಬಡ ವಿಧವೆಯಾದ ಚಂದ್ರಮಣಿದೇವಿ ಅವರು ಸೊಸೆ ಶಾರದಾದೇವಿಗಾಗಿ, ನೆರೆಮನೆಯಿಂದ ಒಡವೆಗಳನ್ನು ಎರವಲು ತಂದಿದ್ದರು. ಮದುವೆಯ ನಂತರ ಅವೆಲ್ಲವನ್ನೂ ನೆರೆಮನೆಯವರಿಗೇ ಹಿಂದಿರುಗಿಸಬೇಕಾಗಿತ್ತು. ಆದರೆ ಕಿರಿಯ ವಯಸ್ಸಿನ ಸೊಸೆಯ ಮೈಮೇಲಿಂದ ಅವನ್ನು ಕಳಚಿ ಕೊಡುವುದಾದರೂ ಹೇಗೆ? ಎಂದು ಚಂದ್ರಮಣಿದೇವಿ ಅವರು ಹಿಂಜರಿದರು. ಗದಾಧರನೇ ತಾಯಿಗೆ ಸಮಾಧಾನ ಹೇಳಿ, ರಾತ್ರಿ ತನ್ನ ನವವಧು ಆನಂದ ಮಗ್ನತೆಯಲ್ಲಿ ಗಾಢ ನಿದ್ರೆಯಲ್ಲಿದ್ದಾಗ, ಒಡವೆಗಳನ್ನೆಲ್ಲಾ ನಿಧಾನವಾಗಿ ಕಳಚಿ, ತಾಯಿಯ ಕೈಯಲ್ಲಿಟ್ಟ. ಬೆಳಗಾದ ಕೂಡಲೇ ಮೈ ಮೇಲೆ ಒಡವೆಗಳೊಂದೂ ಇಲ್ಲದಿರುವುದನ್ನು ಕಂಡು, ಬಾಲಿಶ ಸ್ವಭಾವದಂತೆ ತನ್ನ ಪ್ರಾಣವನ್ನೇ ಕಳೆದುಕೊಂಡವಳಂತೆ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಚಂದ್ರಮಣಿದೇವಿ ಸೊಸೆಯನ್ನು ಮುದ್ದುಮಗುವಿನಂತೆ ಎತ್ತಿಕೊಂಡು, ಮುದ್ದಾಡುತ್ತಾ ಸಮಾಧಾನ ಪಡಿಸಿದರು. ಆದರೆ ಶಾರದಾದೇವಿಯ ಜೊತೆಯಲ್ಲಿ ಬಂದಿದ್ದ ಸೋದರ ಮಾವನಿಗೆ ಮರುದಿನ ಈ ವಿಚಾರ ಕೇಳಿ, ಇಲ್ಲದ ಕೋಪ ಬಂತು. ಶಾರದಾದೇವಿಯನ್ನು ಎತ್ತಿಕೊಂಡು, ಯಾರಿಗೂ ಹೇಳದೇ ಜಯರಾಮವಟಿಗೆ ತೆರಳಿದ. ಕಕ್ಕಾಬಿಕ್ಕಿಯಂತಾದ ತಾಯಿಯನ್ನು ಕಂಡು, ಗದಾಧರನೇ ಸಮಾಧಾನ ಮಾಡಿದ.
ದಿನಗಳೆದಂತೆ ಗದಾಧರರು ಕಾಮಾರಕುಕುರದಿಂದ ದಕ್ಷಿಣೇಶ್ವರಕ್ಕೆ ಬಂದರು. ಅಲ್ಲಿ ರಾಣಿ ರಾಸಮಣಿ ಎಂಬಾಕೆಯು ನಿರ್ಮಿಸಿದ್ದ ಕಾಳಿಮಾತೆಯ ದೇವಾಲಯದಲ್ಲಿ ಪೂಜಾರಿಯ ಕೆಲಸ ದೊರಕಿತು. ಆಕೆಯ ತಮ್ಮ ಮಧುರನಾಥ ಗದಾಧರನ ಆತ್ಮೀಯನಾದ. ಮೊದಲೇ ದೈವಭಕ್ತನಾದ ಗದಾಧರನಿಗೆ ಈಗ ಇನ್ನಷ್ಟು ಹುರುಪು ಸಿಕ್ಕಿತು. ಕಾಳಿಮಾತೆಯನ್ನು ಭಕ್ತಿಯಿಂದ ಆರಾಧಿಸುವುದರ ಜೊತೆಗೆ ಯೋಗ ವಿದ್ಯೆಯಲ್ಲಿಯೂ ನಿರತರಾದರು. ದೇವರ ದಶಾವತಾರಗಳನ್ನೂ ಕಣ್ಣಾರೆ ಕಾಣುವಷ್ಟು ಸಾಮರ್ಥ್ಯ ಪಡೆದರು. ಶ್ರೀ ರಾಮಕೃಷ್ಣ ಆದರು. ಯೋಗಾವಸ್ಥೆಯಲ್ಲಿದ್ದಾಗ ದೀರ್ಘಾವಧಿಯವರೆಗೆ ಸಮಾಧಿಸ್ಥರಾಗಿಯೇ ಇರುತ್ತಿದ್ದರು. ಜನರೆಲ್ಲರೂ ಇವರ ಯೋಗಬಲವನ್ನು ಅರ್ಥ ಮಾಡಿಕೊಳ್ಳದೆ ಹುಚ್ಚ ಎಂದೇ ಮೂದಲಿಸತೊಡಗಿದರು.
ಈಗ ಜಯರಾಮವಟಿಯಲ್ಲಿ ಇದ್ದ ಶಾರದಾದೇವಿ ಹದಿನಾಲ್ಕು ವರ್ಷದ ಕನ್ಯೆ ಎನಿಸಿದ್ದಳು. ಲೌಕಿಕ ವ್ಯವಹಾರ ಜ್ಞಾನ ಆಗ ಆಕೆಗೆ ಪ್ರಾಪ್ತವಾಗಿತ್ತು. ರಾಮಕೃಷ್ಣರ ಹುಚ್ಚುತರದ ದೈವಭಕ್ತಿಯ ಬಗ್ಗೆ ಜನರು ಆಡಿಕೊಳ್ಳುತ್ತಿದ್ದ ಮಾತುಗಳು ಜಯರಾಮವಟಿಗೂ ಹರಡಿತ್ತು. ಶಾರದಾದೇವಿಯವರಿಗೆ ತನ್ನ ಪತಿಯನ್ನು ನೋಡುವ ತವಕ ತಳಮಳಿಸತೊಡಗಿತು. ‘ನನ್ನ ಪತಿ ಜನರೆಲ್ಲರೂ ಜರಿಯುವಂತೆ ನಿಜಕ್ಕೂ ಹುಚ್ಚರೇ? ಅವರೇನೇ ಆಗಿರಲಿ, ನನ್ನ ಭಾಗದ ದೇವರು. ಪತಿಯೇ ಪರದೈವ ಎಂದು ಹಿರಿಯರು ಹೇಳುವುದನ್ನು ಮರೆಯಲಾಗದೀತೇ? ನಾನೀಗ ಅವರಿರುವೆಡೆಯಲ್ಲಿಯೇ ಇರುವುದು ಸೂಕ್ತ. ಹೆಣ್ಣಿಗೆ ತಾಯಿಯ ಮನೆ ಜಾಲಿಯ ಮರದ ನೆರಳಿದ್ದ ಹಾಗೆ. ನಾನು ಆದಷ್ಟು ಬೇಗ ನನ್ನ ಪತಿಯ ಸನ್ನಿಧಿಯನ್ನು ಸೇರಬೇಕು. ಅವರ ಸೇವೆಯ ಭಾಗ್ಯವನ್ನು ಪಡೆಯಬೇಕು’ ಎಂದು ಒಂದೇ ಸಮನೆ ಉದ್ವೇಗದೊಂದಿಗೆ ತವಕಿಸತೊಡಗಿದರು. ತಾಯಿ ಶ್ಯಾಮಸುಂದರೀದೇವಿ ತನ್ನ ಮಗಳನ್ನು ಆಶೀರ್ವದಿಸಿ ಕಳುಹಿಸಿಕೊಟ್ಟರು.
ತುಂಬಾ ದೂರದ ಪಯಣ. ನಾಲ್ಕೈದು ದಿನ ಕಾಲ್ನಡಿಗೆಯಲ್ಲಿಯೇ ಪ್ರಯಾಣ ಮಾಡಬೇಕಿತ್ತು. ಎರಡು ದಿನಗಳ ಪ್ರಯಾಣ ಮುಗಿಸುವಷ್ಟರಲ್ಲಿ ಶಾರದಾದೇವಿಯವರಿಗೆ ಜ್ವರ ಬಂದಿತ್ತು. ದೇವಿಯೇ ಶ್ಯಾಮಲ ವರ್ಣದ ಸುಂದರಿಯ ವೇಷದಲ್ಲಿ ಬಂದು ಶಾರದಾದೇವಿಯವರಿಗೆ ಸಮಾಧಾನ ಮಾಡಿ, ಧೈರ್ಯ ಕೊಟ್ಟು ಅದೃಶ್ಯಳಾದಳು. ಅನಂತರ ಶಾರದಾದೇವಿಯವರಿಗೆ ದೀರ್ಘ ನಿದ್ರೆ ಬಂದಿತು. ಅವರಿಗೆ ದೇವಿಯ ದರ್ಶನವಾಯಿತೆಂದು ತಿಳಿದಿರಲಿಲ್ಲ. ಅಂತೂ ಬೆಳಗಾಗುವ ವೇಳೆ ಜ್ವರ ಬಿಟ್ಟಿತ್ತು. ಶರೀರ ಲವಲವಿಕೆಯಿಂದಿತ್ತು. ನಿಧಾನವಾಗಿ ದಕ್ಷಿಣೇಶ್ವರಕ್ಕೆ ಬಂದಳು.
ಆಗ ರಾತ್ರಿ ೧೦ ಗಂಟೆಯ ಸಮಯ. ಎಲ್ಲರ ಊಟ ಮುಗಿದಿತ್ತು. ಶಾರದಾದೇವಿಯನ್ನು ಕಂಡೊಡನಯೇ ಶ್ರೀರಾಮಕೃಷ್ಣರ ಬಾಯಿಂದ ಉದ್ಗಾರ : “ಓ ನೀನಾ? ಮಧುರನಾಥನೂ ಈಗಿಲ್ಲ. ಇದ್ದಿದ್ದರೆ ನಿನಗೆ ಒಂದು ವ್ಯವಸ್ಥಿತ ಕೋಣೆಯನ್ನು ಇರಲು ಅಣಿ ಮಾಡಿಕೊಡುತ್ತಿದ್ದ. ಈಗ ನೀನು ಮಂದಿರದ ಮೇಲ್ಭಾಗದ ಕೋಣೆಯಲ್ಲಿ ನನ್ನ ತಾಯಿಯೊಂದಿಗೆ ಇರಬೇಕಾಗುವುದು” ಎಂದರು.
ರಾತ್ರಿ ತಾನು ಕಂಡ ಶ್ಯಾಮಲ ಸುಂದರಿಯ ವಿಚಾರವನ್ನು ತಿಳಿಸಿದಳು. ಶ್ರೀ ರಾಮಕೃಷ್ಣರಿಗೆ ಹಿಡಿಸಲಾರದ ಆನಂದ ಉಂಟಾಯಿತು. ಆಕೆ ಕಾಳಿಮಾತೆ ಎಂದೇ ತಮ್ಮ ಯೋಗಬಲದಿಂದ ಅರಿತ ಅವರು ತಮ್ಮ ಮಡದಿಯ ಅದೃಷ್ಟ ಹಾಗೂ ಸೌಭಾಗ್ಯದ ಬಗ್ಗೆ ಕೊಂಡಾಡಿದರು. ಅವರು ಹಾಗೆಯೇ ನೋಡುತ್ತಾ ಶಾರದಾದೇವಿಯನ್ನು ಪ್ರಶ್ನಿಸಿದರು : “ನೋಡು, ನಾನು ಎಲ್ಲಾ ಮಹಿಳೆಯರಲ್ಲೂ ಕಾಳಿಮಾತೆಯ ಸ್ವರೂಪವನ್ನು ನೋಡುತ್ತಿದ್ದೇನೆ. ಆದರೆ ನಾನು ನಿನ್ನನ್ನು ಮದುವೆ ಆಗಿರುವುದು ನಿಜ. ನೀನು ಸಾಮಾನ್ಯ ಮಹಿಳೆಯಂತೆ ಪ್ರಾಪಂಚಿಕ ಸುಖವನ್ನು ನನ್ನಿಂದ ಬಯಸುವುದಾದರೆ, ಎತ್ತರದಲ್ಲಿರುವ ನಾನು ತಗ್ಗಿಗೆ ಇಳಿಯಲೂ ಸಿದ್ಧ.”
ಶಾರದಾದೇವಿಯವರು ಶಾಲೆಯಲ್ಲಿ ಓದಿರಲಿಲ್ಲ, ನಿಜ. ಆದರೆ ಸಂಸ್ಖೃತಿ-ಸಂಸ್ಕಾರದಿಂದ ಕೂಡಿದ್ದ ಮನೆಯಿಂದ ಬಂದ ಮಾನಿನಿ. ಪತಿಯ ಮಾತಿನ ಇಂಗಿತವನ್ನು ಬೇಗ ಅರ್ಥ ಮಾಡಿಕೊಂಡಳು. ನಸುನಗುತ್ತಾ ಹೇಳಿದಳು : “ನಿಮ್ಮಂತಹ ತಪಸ್ವಿಗಳನ್ನು ಕೈಹಿಡಿದಿರುವ ತಪಸ್ವಿನಿಯಾದ ನಾನು ನಿಮ್ಮನ್ನೇಕೆ ಕೆಳಗೆ ಇಳಿಸಲಿ? ನಾನೂ ಕೂಡ ತಪಸ್ವಿನಿಯಂತೆಯೇ ಇದ್ದು, ನಿಮ್ಮ ಸೇವೆ ಮಾಡುತ್ತಾ ಕೃತಾರ್ಥಳಾಗಬಯಸುತ್ತೇನೆ.” ಶ್ರೀರಾಮಕೃಷ್ಣರು ಇಂತಹ ಉತ್ತರವನ್ನು ತಮ್ಮ ಹೃದಯೇಶ್ವರಿಯ ಬಾಯಿಂದ ನಿರೀಕ್ಷಿಸಿರಲಿಲ್ಲ. ಇಂತಹ ಸಾಧ್ವಿಯ ಬಾಯಿಂದ ಬಂದ ಸಾರ್ಥಕದ ಮಾತುಗಳನ್ನು ಕೇಳುತ್ತಿದ್ದಂತೆ ಅವರ ಹೃದಯ ಅಲೌಕಿಕ ಆನಂದಸಾಗರದಲ್ಲಿ ಮುಳುಗಿತು. ಅವರ ಕಣ್ಣುಗಳಿಂದ ಆನಂದ ಬಾಷ್ಪಗಳು ಫಳಫಳನೆ ಉದುರತೊಡಗಿದವು. ಶಾರದಾದೇವಿ ಕೃತಕೃತ್ಯಳಾದವಳಂತೆ ತಲೆ ತಗ್ಗಿಸಿ , ತನ್ನ ಹೃದಯದಲ್ಲಿಯೇ ಪತೀಶ್ವರನನ್ನು ನೋಡತೊಡಗಿದಳು. ಈಗ ಆಕೆ ಕೇವಲ ಶಾರದಾದೇವಿ ಆಗಿರಲಿಲ್ಲ; ಮಾತೆ ಶಾರದಾದೇವಿ ಆಗಿಹೋಗಿದ್ದಳು.
ಪತಿಯ ಸಾನ್ನಿಧ್ಯಕ್ಕಾಗಿ, ಸೇವೆಯ ಸೌಭಾಗ್ಯಕ್ಕಾಗಿ ತೊಳಲಾಡುತ್ತಿದ್ದ ಸಾಧ್ವಿಸತಿ ಮಾತೆ ಶಾರದಾದೇವಿ ಅವರು ಜಯರಾಮವಟಿಯಿಂದ ದಕ್ಷಿಣೇಶ್ವರಕ್ಕೆ ಬಂದು ತಿಂಗಳುಗಳು ಉರುಳಿದವು. ಪತಿಯೊಂದಿಗೆ ವೈರಾಗ್ಯ ಮಾರ್ಗದಲ್ಲಿಯೇ, ಕಾಮಗಂಧಹೀನಳಾಗಿ ಪಡೆಯುವ ನಿರ್ಧಾರ ಮಾಡಿ ಮುಗಿಸಿದ್ದುದರಿಂದ, ಶ್ರೀರಾಮಕೃಷ್ಣರ ಯೋಗಸಾಧನೆಯಲ್ಲಿ ಸಂಪೂರ್ಣ ಸಹಯೋಗ ನೀಡುವ ನಿಷ್ಠಾವಂತ ಯೋಗಿಣಿಯೇ ಆಗಿ ಹೋಗಿದ್ದರು, ಮಾತೆ ಶಾರದಾದೇವಿಯವರು.
ಅವರ ದಿನಚರಿ ದಿನವೂ ಮುಂಜಾನೆ ನಾಲ್ಕು ಗಂಟೆಗೇ ಪ್ರಾರಂಭ ಆಗುತ್ತಿತ್ತು. ಆ ಪ್ರಶಾಂತ ಸಮಯದಲ್ಲಿಯೇ ಗಂಗಾನದಿಯಲ್ಲಿ ಮಿಂದು, ಶುಭ್ರಮನದ ಉಲ್ಲಾಸದಲ್ಲಿ ಹೃದಯೇಶ್ವರನ ವ್ರತನಿಷ್ಠೆಯ ಪೂಜೆಗೆ ಬೇಕಾಗುವ ಪತ್ರ, ಪುಷ್ಪಗಳನ್ನು ಪ್ರಕೃತಿಯ ಮಡಿಲಲ್ಲಿ ಬೆಳೆದು ನಿಂತಿರುವ ಗಿಡ-ಮರಗಳಿಂದ ಸಂಗ್ರಹಿಸುತ್ತಿದ್ದರು. ಪೂಜಾ ಗೃಹವನ್ನು ಚೊಕ್ಕಗೊಳಿಸುವುದರೊಂದಿಗೆ ಸಾರಣೆ-ರಂಗವಲ್ಲಿಯ ಕಾರ್ಯಗಳನ್ನು ಒಪ್ಪವಾಗಿ ಮಾಡಿ ಮುಗಿಸುತ್ತಿದ್ದರು. ಪೂಜಾ ಪಾತ್ರೆಗಳನ್ನು ಶುಚಿಗೊಳಿಸಿ, ಅಂತರಂಗ ಶುದ್ಧಿಯೊಂದಿಗೆ ಬಹಿರಂಗ ಶುದ್ಧಿಗೂ ಆದ್ಯತೆ ನೀಡುತ್ತಿದ್ದರು. ಪತಿದೇವರು ಎದ್ದು ಸ್ನಾನಾಹ್ನಿಕಗಳನ್ನು ಮುಗಿಸುವುದರೊಳಗಾಗಿ ದೇವರ ನೈವೇದ್ಯ, ಊಟೋಪಚಾರದ ಕೆಲಸಗಳನ್ನು ಮಾಡಿ ಮುಗಿಸುತ್ತಿದ್ದರು. ಪತಿದೇವರೊಂದಿಗೆ ತಾವೂ ಭಕ್ತಿಯೋಗದ ಸಾಧನೆಯ ಮಾರ್ಗದಲ್ಲಿ ಪತಿಯಿಂದಲೇ ಗುರುವಿನಿಂದ ಪಡೆಯಬಹುದಾದ ದೀಕ್ಷೆ ಹಾಗೂ ಮಾರ್ಗದರ್ಶನವನ್ನು ಪಡೆದು, ಮುಂದುವರಿಯತೊಡಗಿದರು.
ದಿನೇ ದಿನೇ ಭಕ್ತರ ತಂಡ ಕಾಳಿಮಾತೆಯ ದೇಗುಲದಲ್ಲಿ ಹೆಚ್ಚಾದಂತೆ, ಶಾರದಾಮಾತೆಯ ಜವಾಬ್ದಾರಿಯೂ ಹೆಚ್ಚುತ್ತಲೇ ಹೋಯಿತು. ನಿಜಕ್ಕೂ ಪರಮಹಂಸರೇ ಶಾರದಾಮಾತೆಯನ್ನು ತಮ್ಮ ಕಾಳಿಮಾತೆಯೆಂದೇ ಮೆಚ್ಚಿಕೊಂಡಿದ್ದರು. ವರ್ಷಕ್ಕೊಮ್ಮೆ ಕಾಳಿ ಮಂದಿರದಲ್ಲಿ ಘೋಡಶ ಪೂಜೆ ನಡೆಯುತ್ತಿತ್ತು. ಅಂದು ಸುತ್ತಮುತ್ತಲ ಹಳ್ಳಿಗಳಿಂದ ಜನರು ಜಾತ್ರೆಯಂತೆ ನೆರೆದಿರುತ್ತಿದ್ದರು. ಪರಮಹಂಸರ ಪೂಜಾವಿಧಾನ, ಧ್ಯಾನದ ಮಹಿಮೆಯನ್ನು ಕಂಡು ಮೈಮರೆಯುತ್ತಿದ್ದರು. ಸಂಜೆಯವರೆಗೂ ವ್ರತನಿಷ್ಠ ಪೂಜೆಯಲ್ಲಿ ನಿರತರಾಗಿದ್ದ ಶ್ರೀ ರಾಮಕೃಷ್ಣರು ಶಾರೀರಕವಾಗಿ ಬಳಲಿದ್ದರು. ಆದರೆ ಅವರ ಅಂತರಂಗದಿಂದ ಚೈತನ್ಯದ ಚಿಲುಮೆ,ನವ್ಯಸ್ಫೂರ್ತಿಯ ಬುಗ್ಗೆ ತಾನೇ ತಾನಾಗಿ ಚಿಮ್ಮುತ್ತಿರುವುದು ಅವರ ಮುಖಮಂಡಲದಲ್ಲಿ ಕಾಣುತ್ತಿತ್ತು.
ಅವರ ಸೋದರಳಿಯ, ಹೃದಯರಾಮ ಆ ದಿನ ಪೂಜಾಗೃಹವನ್ನು ಬಿಟ್ಟು ಕದಲಿರಲಿಲ್ಲ. ಕಾಳಿಮಾತೆಯ ಪೂಜೆ ಮುಗಿದಿದ್ದರೂ, ಇನ್ನೊಂದು ಪೂಜೆಗೆ ಅಣಿಮಾಡುತ್ತಿದ್ದ. ಅಣಿ ಆದಕೂಡಲೇ ಪರಿಶುದ್ಧ ಹೃದಯದ ಅರ್ಚಕರಂತೆ ಶ್ರೀರಾಮಕೃಷ್ಣರು ಶಾರದಾಮಾತೆ ಅವರನ್ನು ಕರೆದರು. ಶಾರದಾಮಾತೆ ಅವರು ವಿಚಾರವೇನೆಂಬುದನ್ನೇ ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಮಂದಗಮನೆಯಂತೆ ಮಂದಿರದೊಳಗೆ ಪ್ರವೇಶಿಸಿದರು. ಶ್ರೀರಾಮಕೃಷ್ಣರು ಭಕ್ತಿಯಿಂದ ಕೈಜೋಡಿಸುತ್ತಾ, ಕಾಳಿಮಾತೆಯ ಪೂಜಾಲಂಕೃತ ಪ್ರತಿಮೆಯ ಪಕ್ಕದಲ್ಲಿಯೇ ಹಾಕಿದ್ದ ಮಣೆಯ ಮೇಲೆ ಕುಳಿತುಕೊಳ್ಳಲು ತಿಳಿಸಿದರು. ತನ್ನ ಹೃದಯೇಶ್ವರನಿಗೇ ಸರ್ವಾರ್ಪಣೆ ಮಾಡಿ ಮುಗಿಸಿರುವ ಶಾರದಾಮಾತೆಯವರಿಗೆ ಆಶ್ಚರ್ಯ ಆದರೂ, ಮರುಮಾತಾಡುವ ಧೈರ್ಯ ಬರಲಿಲ್ಲ. ಸದ್ದಿಲ್ಲದೆ, ಸಿಗ್ಗಿಲ್ಲದೆ ಈಶ್ವರಾಜ್ಞೆ ಅಂದುಕೊಂಡೇ ಅಣತಿಯಂತೆ ಬಂದು ಕುಳಿತರು. ಸ್ಫುಟವಾದ, ಸ್ವಚ್ಛ ಉಚ್ಚಾರಣೆಯೊಂದಿಗೆ ಮಂತ್ರವನ್ನು ಜಪಿಸುತ್ತಾ ಶಾರದಾದೇವಿ ಅವರ ಪಾದಗಳನ್ನು ತೊಳೆದರು. ಅರಿಶಿನ-ಕುಂಕುಮವನ್ನು ಮಂತ್ರೋಚ್ಛಾರದೊಂದಿಗೇ ಲೇಪಿಸಿದರು. ಶಾಸ್ತ್ರೋಕ್ತವಾಗಿ ದೇವಿಯನ್ನು ಆರಾಧಿಸುವ ರೀತಿಯಲ್ಲಿಯೇ ಅರ್ಚನೆಯನ್ನು ಕಿಂಚಿತ್ತೂ-ಲೋಪವಿಲ್ಲದಂತೆ ಮಾಡಿ ಮುಗಿಸಿದರು. ನೈವೇದ್ಯವನ್ನೂ ಸಹ ಕಾಳಿಮಾತೆಗೆ ತಿನ್ನಿಸುವಂತೆಯೇ ತಿನ್ನಿಸಿದರು. ಜಗನ್ಮಾತೆ ಎಂದೇ ಪತಿಗಣಿಸಿ, ಸಾಷ್ಟಾಂಗವಾಗಿ ನಮಸ್ಕರಿಸುತ್ತಾ “ಮಹಾಮಾತೆ, ಜಗನ್ಮಾತೆ, ಅನುಗ್ರಹಿಸು, ಅನುಗ್ರಹಿಸು” ಎಂದು ಬಾರಿ ಬಾರಿ ಉಚ್ಚರಿಸುತ್ತಾ ಕಣ್ಣೆತ್ತಿ ಶಾರದಾಮಾತೆಯ ಕಡೆ ನೋಡಿದರು. ಶಾರದಾಮಾತೆ ಸಾಮಾನ್ಯ ಸ್ತ್ರೀ ಆಗಿರದೆ ಕಣ್ಮುಚ್ಚಿ ಯೋಗನಿದ್ರೆಯಲ್ಲಿದ್ದರು.
ಪರಮಹಂಸರಿಗೆ ದಿನಕ್ರಮೇಣ ಶಾರದಾಮಾತೆಯ ಬಗ್ಗೆ ಪ್ರೀತಿ-ಪ್ರೇಮ ಭಕ್ತಿಭಾವದಲ್ಲಿ ಪುಷ್ಪಿದಾಯಕ ರೀತಿಯಲ್ಲಿ ಬಲಿಯತೊಡಗಿತು. ತಮ್ಮ ಹೃದಯ ಮಂದಿರದ ಈಶ್ವರಿ ಎಂದೇ ಅವರನ್ನು ಸಂಪೂರ್ಣವಾಗಿ ಭಾವಿಸುವ ಮಟ್ಟದಲ್ಲಿ ಶಾರದಾಮಾತೆ ಪತಿಗೆ ತಕ್ಕ ಸತಿಯಾಗಿಯೇ ನಡೆದುಕೊಂಡರು. ಪರಮಹಂಸರು ಶಾರದಾದೇವಿ ಅವರನ್ನು ಎಂದೂ ಏಕವಚನದಲ್ಲಿ ಸಂಬೋಧಿಸಿದುದೇ ಇಲ್ಲ.
ಶಾರದಾದೇವಿ ಅವರಿಗೆ ಭಕ್ತ ಜನರಿಗೆ ತಾವು ಎಸಗುವ ನಿಷ್ಕಾಮ ಕರ್ಮ ಸೇವೆಯೇ ಜೀವನದ ಸಾರ್ಥಕತೆ ಎನಿಸಿತ್ತು. ಅವರನ್ನು ಸಂತುಷ್ಟಿ, ಸಂತೃಪ್ತಿಗೊಳಿಸುವುದೇ ಹೃದಯೇಶ್ವರನ ನಿಜವಾದ ಆರಾಧನೆ ಎಂದೆನಿಸಿತ್ತು. “ತನಗಾಗಿ” ಎಂಬ ಭಾವನೆ ಕಿಂಚಿತ್ತೂ ಇರಲಿಲ್ಲ. “ತನ್ನವರೆಲ್ಲರಿಗಾಗಿ” ಎಂಬ ಬೃಹದ್ಭಾವನೆಯೇ ಹೃದಯಲ್ಲಿ ಹೆಮ್ಮರವಾಗಿ ಬೆಳೆದು, ಬೇರೂರಿತ್ತು. ಭಕ್ತರು ಹಣ್ಣು ಹಂಪಲುಗಳನ್ನು ಗುರುಕಾಣಿಕೆಯ ರೂಪದಲ್ಲಿ ತಂದರೆ, ಅವೆಲ್ಲವನ್ನೂ ಸ್ವೀಕರಿಸುವ ಹೊಣೆ, ಮಾತೆ ಶಾರದಾದೇವಿ ಅವರದಾಗಿತ್ತು. ಒಂದೆರಡು ಹಣ್ಣುಗಳನ್ನು ಮಾತ್ರ ಶ್ರೀರಾಮಕೃಷ್ಣರಿಗೆ ತೆಗೆದಿಟ್ಟು, ಮಿಕ್ಕೆಲ್ಲವಗಳನ್ನು ನೆರೆದಿರುತ್ತಿದ್ದ ಭಕ್ತಾದಿಗಳಿಗೇ ಮನ ತುಂಬಿದ ಮಾತೃವಾತ್ಸಲ್ಯದೊಂದಿಗೆ ಹಂಚಿಬಿಡುತ್ತಿದ್ದರು.
ಶ್ರೀಮಾತೆ ಶಾರದಾದೇವಿ ಹಾಗೂ ಶ್ರೀರಾಮಕೃಷ್ಣರ ಪ್ರೀತಿ ಕಾಮಗಂಧ ವಿಹೀನವೆನಿಸಿದ ಅಲೌಕಿಕವಾದುದು, ವಿಶ್ವವ್ಯಾಪಕವೆನಿಸಿದುದು.ದೈಹಿಕ ಸಂಬಂಧದ ಪ್ರೀತಿಯೇ ಇಲ್ಲ ಎನ್ನುವಂತಿಲ್ಲ. ಆದರೆ ದೈಹಿಕ ಸಂಬಂಧದಿಂದ ದೂರವಾದುದು ಎಂಬುದು ಮಾತ್ರ ನಿಜ. ಇಂತಹ ಅಪೂರ್ವ ಬಗೆಯ ಪ್ರೀತಿಯ ಪ್ರಾಪ್ತಿಗೆ ಸಾಧನೆಯೂ ಅಪೂರ್ವವೇ ಆದುದೆನಿಸಿರಬೇಕು.ಕಾಮುಕತೆಯಿಂದ ವಿಮುಕ್ತವೆನಿಸಿದ ಹೃದಯ ತುಮುಲದ ಪಾವನಪ್ರೀತಿ ಈ ದಂಪತಿಗಳದು. ಇಷ್ಟಾದರೂ ದಂಪತಿಗಳಲ್ಲಿ ಯಾರೊಬ್ಬರಿಗೂ ಏನೇ ಕಿಂಚಿತ್ ತೊಂದರೆ ಉಂಟಾದರೂ ಆಗುತ್ತಿದ್ದ ಹೃದಯ್ ವೇದನೆ ಕರುಣಾಜನಕ, ಭಕ್ತ ಭಗವಂತನ ಪ್ರೀತಿ ಈ ಅಪೂರ್ವ ದಂಪತಿಗಳದು. ಇವರ ಪ್ರೀತಿಯಲ್ಲಿ ವಾತ್ಸಲ್ಯವೂ ಹಾಸೂ-ಹೊಕ್ಕಿನ ರೀತಿಯಲ್ಲಿ ಸೇರಿಕೊಂಡಿತ್ತು. ಈ ದಂಪತಿಗಳು ಪರಸ್ಪರ ತಮ್ಮ ಯೋಗಕ್ಷೇಮವನ್ನು ವಿಚಾರಿಸಿ ನೋಡಿಕೊಳ್ಳುತ್ತಿದ್ದರು. ಅವರಿಗೆ ಹಣದ ಮೇಲೆ ಕಿಂಚಿತ್ತೂ ಆಸೆ, ಮೋಹ ಇರಲಿಲ್ಲ.
ಗುರುವಿನ ಅನುಗ್ರಹ ಮಾತ್ರದಿಂದಲೇ ಯೋಗಸಾಧನೆಯಲ್ಲಿ ಪೂರ್ಣ ಸಾಫಲ್ಯ ದೊರೆಯುವುದೆಂದು ಶ್ರೀರಾಮಕೃಷ್ಣರು ಭಾವಿಸಿರಲಿಲ್ಲ. ಅನುಗ್ರಹ ನಿಜಕ್ಕೂ ಭವ್ಯ ಬೆಳಕು.ದಿವ್ಯ ಪ್ರಕಾಶ. ಆ ಬೆಳಕನ್ನೇ ನೋಡುತ್ತಾ ಕೇವಲ ಕುಳಿತರೆ ಸಾಧನೆ ಪೂರ್ಣವಾಗದು. ಬೆಳಕಿನ ಆಸರೆಯಲ್ಲಿ ದಿವ್ಯಪಥದಲ್ಲಿ ಸತತವೂ ಮನಸ್ಸನ್ನು ಸಾಗಿಸುತ್ತಿರಬೇಕು. ಮನೋಮಾರ್ಗವು ಬೆಳಕಿನ ಮಾರ್ಗದಲ್ಲಿಯೇ ನಿರಂತರವೂ ನಡೆಯುತ್ತಿದ್ದರೆ ಕ್ರಮೇಣ ಯೋಗ ಸಾಧನೆಯು ಸಿದ್ಧಿ ಪಡೆಯುವುದು. ಶ್ರೀರಾಮಕೃಷ್ಣರು ಹೀಗೆ ತಮ್ಮ ಶಿಷ್ಯರನ್ನು ಅನುಗ್ರಹದ ಬೆಳಕಿನಲ್ಲಿ ಸ್ವಪ್ರಯತ್ನ, ಸ್ವಸಾಮರ್ಥ್ಯದಿಂದ ಮುಂದೆ-ಮುಂದೆ ಸಾಗಲು ಬಿಡುತ್ತಿದ್ದರು. ತಾವು ಹಿನ್ನೆಲೆಯಲ್ಲಿ ಕೇವಲ ಮಾರ್ಗದರ್ಶಕರಾಗಿ ನಿಂತಿರುತ್ತಿದ್ದರು. ಸ್ವಾಮಿ ವಿವೇಕಾನಂದರಿಂದ ಹಿಡಿದು ಎಲ್ಲಾ ಶಿಷ್ಯರನ್ನು ಶ್ರೀರಾಮಕೃಷ್ಣರು ಲೌಕಿಕತೆಯಿಂದ ಅಲೌಕಿಕತೆಯ ಕಡೆಗೆ ಎಳೆದುದು ಈ ರೀತಿಯಲ್ಲಿಯೇ.
ಶ್ರೀರಾಮೃಷ್ಣರು ತಮ್ಮ ಸನ್ನಿಧಿಯ ಬಳಿ ಶ್ರೀಶಾರದಾದೇವಿ ಅವರು ಪ್ರವೇಶಿಸುತ್ತಿದ್ದಂತೆ ಲೌಕಿಕ ಸುಖಕ್ಕೆ ತಮ್ಮನ್ನೂ ಎಳೆಯದೆ, ತಾವು ತೊಳಲಾಡದೆ ಜೀವನದ ದಾರಿಯಲ್ಲಿ ಮುನ್ನುಗುತ್ತಾ, ಮುಕ್ತಿ ಪ್ರಾಪ್ತಿಗಳಿಸಲು ಸುಲಭ ಸಾಧನೆಯನ್ನು ತಿಳಿಸಿದರು. ಶ್ರೀಶಾರದಾದೇವಿ ಅವರನ್ನು ಕೈಹಿಡಿದಂದಿನಿಂದಲೇ ಕಾಮಗಂಧ ಹೀನಳನ್ನಾಗಿ ಮಾಡಲು ಜಗನ್ಮಾತೆಯನ್ನು ಕೇಳಿಕೊಂಡರು. ಶ್ರೀರಾಮಕೃಷ್ಣರು ಶ್ರೀಮಾತೆ ಶಾರದಾದೇವಿ ಅವರಿಗೆ ಸಮಯ ದೊರೆತಾಗಲೆಲ್ಲಾ ಜಪ-ತಪ, ಸ್ನಾನ-ಧ್ಯಾನಗಳ ಬಗ್ಗೆ ಸೂಕ್ತ ಸಲಹೆಗಳನ್ನು ಸವಿಮಾತುಗಳಲ್ಲಿ ನೀಡುತ್ತಲೇ ಇರುತ್ತಿದ್ದ. ಅಂತರಂಗ ವಿಚಾರಗಳೊಂದಿಗೆ ಬಹಿರಂಗ ವಿಚಾರಗಳ ಬಗ್ಗೆಯೂ, ತಿಳುವಳಿಕೆ ಕೊಡುತ್ತಿದ್ದರು. ಆಧ್ಯಾತ್ಮ ಜೀವನದಲ್ಲಿ ಮುಕ್ಷುವಿಗೆ ಎಷ್ಟು ಆಸಕ್ತಿ ಇರುತ್ತದೆಯೋ ಅಷ್ಟೇ ಆಸಕ್ತಿ ಮನಗೆಲಸಗಳಲ್ಲಿಯೂ ಇರಬೇಕೆಂಬುದು ಶ್ರೀರಾಮಕೃಷ್ಣರ ಅಭಿಪ್ರಾಯವಾಗಿತ್ತು. ಇದೇ ವಿಧಾನದಲ್ಲಿ ಲೌಕಿಕತೆಯಲ್ಲಿಯೇ ಇದ್ದು ಅಲೌಕಿಕತೆಯ ಸುಖವನ್ನು ಹೇಗೆ ಪಡೆಯಬಹುದೆಂಬುದರ ಬಗ್ಗೆ ತಾಯಿ ಮಗುವಿಗೆ ಕಲಿಸುವಂತೆ ಶ್ರೀ ಶಾರದಾಮಾತೆಗೆ ತಿಳಿಸಿದರು.
ಹೀಗೆ ಶ್ರೀಶಾರದಾದೇವಿ ಅವರಿಗೆ ಮಹಾತೇಜಸ್ಸಿನ ಬಳಿಯೇ ಇದ್ದ, ಆ ತೇಜಸ್ಸಿನಲ್ಲಿ ತೇಜಹೀನೆಯೆನಿಸಿದ ತಾನೂ ಸಹ ಅದೇ ತೇಜಸ್ಸಿನಲ್ಲಿಯೇ ಲೀನವಾಗುವ ಸೌಭಾಗ್ಯ ಸಂದಿತ್ತು.
ಶ್ರೀರಾಮಕೃಷ್ಣರ ಸೇವೆಯನ್ನು ಶ್ರದ್ಧೆಯಿಂದ ಭಕ್ತಿಯಿಂದ ಮಾಡುತ್ತಿದ್ದರು. ಸೇವೆಯ ಸೌಭಾಗ್ಯ ಹಲವೊಮ್ಮೆ ಅವರ ಕೈತಪ್ಪಿ, ಭಕ್ತಾದಿಗಳ ಪಾಲಿಗೆ ಬರುತ್ತಿತ್ತು. ಆಗಲೂ ಅಸೂಯೆಪಡುತ್ತಿರಲಿಲ್ಲ. ಶ್ರೀಶಾರದಾಮಾತೆ ಅವರನ್ನು ಶ್ರೀರಾಮಕೃಷ್ಣರು ಪ್ರೀತಿಯ ಸಲುವಾಗಿ ಅತಿಸನಿಹದಲ್ಲಿ ನೋಡುತ್ತಿದ್ದುದುಂಟು. ಅವರ ಮನಸ್ಸಿಗೆ ತಮ್ಮಿಂದ ಯಾವ ರೀತಿಯ ನೋವೂ ಉಂಟಾಗದಂತೆ ನೋಡಿಕೊಳ್ಳುತ್ತಿದ್ದರು.
ಶ್ರೀರಾಮಕೃಷ್ಣರ ಮಹಿಮೆಗಳ ಸುತ್ತಮುತ್ತಲ ಊರಿನ ಜನರಿಗೆ ತಿಳಿಯುತ್ತಿದ್ದಂತೆ ದಿನವೂ ಜಾತ್ರೆಯಂತೆ ಜನರು ನೆರೆಯುತ್ತಿದ್ದರು. ಹಲವಾರು ವಿಧದ ಭಕ್ತಜನರ ಜೊತೆ ಸವಿನಯದಿಂದ ಮಾತಾಡಿ, ತೊಂದರಗಳಿಗೆ ಸೂಕ್ತ ಸಲಹೆಗಳನ್ನು ನೀಡಿ, ಸಮಾಧಾನಪಡಿಸಿ ಕಳುಹಿಸುವವರೆಗೂ ಶ್ರೀರಾಮಕೃಷ್ಣರಿಗೆ ತೃಪ್ತಿ ಇರುತ್ತಿರಲಿಲ್ಲ. ಇಂತಹ ಪ್ರಯಾಸದ, ವಿರಾಮವಿಲ್ಲದ ದುಡಿಮೆಯಿಂದ ಶರೀರ ಕೃಶವಾಗುವುದರ ಜೊತೆಗೆ ಗಂಟಲಿನಲ್ಲಿ ಗಾಯವಾಯಿತು. ಗಾಯ ದಿನಕ್ರಮೇಣ ಹಿರಿದಾಗತೊಡಗಿತು. ಸಾಕಷ್ಟು ಮಂದಿ ವೈದ್ಯ ತಜ್ಞರಿಂದ ಶುಶ್ರೂಷೆ ಹಾಗೂ ಚಿಕಿತ್ಸೆ ನಡೆದರೂ ಫಲಕಾರಿ ಆಗಲಿಲ್ಲ. ಶಾರದಾದೇವಿಗೆ ಚಿಂತೆಯಾಯಿತು. ದಿನಗಳು ಕಳೆದಂತೆ ಅವರ ಸಾವು ಸಮೀಪಿಸಿತ್ತು.
ಅಂದು ೧೮೮೬ ನೆಯ ಆಗಸ್ಟ್ ೧೫ರಂದು ಶ್ರೀರಾಮಕೃಷ್ಣರ ಸ್ಥಿತಿ ಚಿಂತಾಜನಕವಾಗಿತ್ತು. ಶಿಷ್ಯನೊಬ್ಬನ ಹೆಗಲಿಗೆ ತಲೆಕೊಟ್ಟು ಹಾಗೆಯೇ ನೆಟ್ಟನೆಯ ದೃಷ್ಟಿಯಲ್ಲಿ ಆಕಾಶದ ಕಡೆ ನೋಡತೊಡಗಿದರು “ಜೈ ಜಗನ್ಮಾತಾ ಜೈ ಕಾಳಿಮಾತಾ” ಎಂದು ಬಾರಿಬಾರಿ ಉಚ್ಚರಿಸುತ್ತಾ ಕಣ್ಣು ಮುಚ್ಚಿದರು. ಚಿರನಿದ್ರೆಯಲ್ಲಿ ಮುಳುಗಿದರು. ಭಕ್ತರು ಶೋಕಸಾಗರದಲ್ಲಿ ಮುಳುಗಿದರು. ಶಾರದಾದೇವಿಯವರು ಅಳಲಿಲ್ಲ , ಪತಿದೇವ ಹೇಳಿದಂತೆ ಕೈಬಳೆಗಳನ್ನು ಒಡೆದುಕೊಳ್ಳಲಿಲ್ಲ.
ತಮ್ಮ ನೊಂದು-ಬೆಂದು ಬೇಗುದಿಯಲ್ಲಿರುವ ಹೃದಯಕ್ಕೂ ನೆಮ್ಮದಿ ಕಿಂಚಿತ್ತಾದರೂ ದೊರೆಯುವುದೆಂದು ಭಾವಿಸಿ, ತಮ್ಮ ಆತ್ಮೀಯ ಶಿಷ್ಯರೊಂದಿಗೆ ಬೃಂದಾವನದಲ್ಲಿ ಕೆಲ ದಿನಗಳ ಕಾಲ ಕಳೆದರು. ಇದಕ್ಕೂ ಮೊದಲು ಅಯೋಧ್ಯೆ, ವೈದ್ಯನಾಥ, ಕಾಶಿ ಮೊದಲಾದ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ ಬಂದರು. ಹರಿದ್ವಾರ, ಪ್ರಯಾಗ ಮೊದಲಾದ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸಿ ೧೮೮೭ ನೇ ಆಗಸ್ಟ್ ವೇಳೆಗೆ ಕಲ್ಕತ್ತೆಗೆ ಹಿಂದಿರುಗಿದರು. ಕಾಮಾರಪುಕರದಲ್ಲಿ ಹೋಗಿ ತಮ್ಮ ಮನೆಯಲ್ಲಿಯೇ ಉಳಿದರು. ಸಮಾಜ ಶ್ರೀಮಾತೆಯವರು ವಿಧವೆ ಆದರೂ ಕೈಯಲ್ಲಿ ಚಿನ್ನದ ಬಳೆಗಳನ್ನು ಧರಿಸಿರುವುದನ್ನು ಕಂಡು ತಪ್ಪು ತಿಳಿದರು. ವೈಯಾರಿ ಎಂದು ಜರಿದರು. ಜನನಿಂದೆಯಿಂದ ಬೇಸತ್ತ ಶ್ರೀಮಾತೆ ವಿಧಿ ಇಲ್ಲದೆ ಬಳೆಗಳನ್ನು ಕಳಚಿಟ್ಟರು. ಇವರ ಪಾಡನ್ನು ನೋಡಿ ನೊಂದ ಭಕ್ತರು ಒತ್ತಾಯಪಡಿಸಿ ಕಲ್ಕತ್ತೆಗೆ ಕರೆಯಿಸಿಕೊಂಡರು. ಒಂದು ಮನೆ ಕಟ್ಟಿಸಿಕೊಟ್ಟರು. ಈಗ ಶ್ರೀಮಾತೆಯವರು ಕಲ್ಕತ್ತೆ, ಜಯರಾಮವಟಿ ಎರಡೂ ಕಡೆ ಕಳೆಯತೊಡಗಿದರು. ತಮ್ಮ ತಪಸ್ಸಾಧನೆಯನ್ನು ಮುಂದುವರೆಸಿದರು.
೧೮೯೩ರಲ್ಲಿ ಕೆಲಕಾಲ ನೀಲಾಂಬರ ಮುಖರ್ಜಿ ಅವರ ಮನೆಯಲ್ಲಿದ್ದಾಗ ‘ಪಂಚತಪ’ ಎಂಬ ಅದ್ಭುತ ಯೋಗಸಾಧನೆಯಲ್ಲಿ ಗೆದ್ದರು. ಕಾಡು ಬೇಸಿಗೆಯ ದಿನದಲ್ಲಿ ಸುತ್ತಲೂ ಬೆಂಕಿ ಹೊತ್ತಿಸಿಕೊಂಡು, ಭಗವನ್ನಾಮಸ್ಮರಣೆಯಲ್ಲಿಯೇ ನಿರತರಾಗಿದ್ದು, ಚಿತ್ತಶುದ್ಧಿಯನ್ನು ಪ್ರಜ್ವಲಿಸಿಕೊಂಡರು. ಇದಾದ ನಂತರ ಹೆಚ್ಚು ಕಾಲ ತುಂಬಾ ಅಂತರ್ಮುಖಿಯಾಗಿಯೇ ಇರುತ್ತಿದ್ದರು. ಇವರ ಮುಖ ಕಮಲದಲ್ಲಿ ಅಚ್ಚಳಿಯದ ಪ್ರಭೆ ಪ್ರಜ್ವಲಿಸುತ್ತಿತ್ತು. ಸಮಾಧಿಯಲ್ಲಿ ಮುಳುಗುವುದನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಂಡರು. ಅದರಲ್ಲೂ ನಿರ್ವಿಕಲ್ಪ ಸಮಾಧಿಯ ಸಾಧನೆಯಲ್ಲೂ ಸಾರ್ಥಕತೆ ಪಡೆದರು. ಈಗ ಅವರಿಗೆ ದೇಹ ಹಕ್ಕಿಯನ್ನು ಬಂಧನದಲ್ಲಿಟ್ಟು ಪಂಜರದಂತಿರಲಿಲ್ಲ. ಬೇಕಾದಾಗ ಹಾರಿಹೋಗಿ ಬರಬಲ್ಲ ಗೂಡಿನಂತಾಗಿತ್ತು.
ಈಗ ಅವರ ಮನಸ್ಸು ದೀನದಲಿತರ ಸೇವೆಯ ಕಡೆ ತಿರುಗಿತು. ದೀನದಲಿತರು ಅಂದರೆ ಹೊಟ್ಟೆಗಿಲ್ಲದೆ ಬಡತನದಲ್ಲಿರುವವರನ್ನು ಮಾತ್ರ ದೀನದಲಿತರು ಎನ್ನುವ ಸಂಕುಚಿತ ಭಾವ ಮಾತೆ ಅವರದಲ್ಲ. ಯಾವುದೇ ಹಾರ್ದಿಕ ಅಭಾವದಿಂದ ನರಳುವವರೆಲ್ಲರೂ ಇವರ ದೃಷ್ಟಿಯಲ್ಲಿ ದೀನರೇ ಆಗಿರುತ್ತಿದ್ದರು.ಇವರಲ್ಲಿದ್ದ ಅತಿ ಹೆಚ್ಚಿನ ಮಹಿಮಾಪೂರ್ಣ ಗುಣ ಎಂದರೆ ತಾಯಿಯ ಒಲುಮೆ, ಮಾತೃವಾತ್ಸಲ್ಯ.
ನಾನಾಕಡೆಯಿಂದ ಜನಕೋಟಿ ನೀಡಿದ ಗೌರವ, ಕೀರ್ತಿ ಎಲ್ಲವನ್ನೂ ತನ್ನ ಆದರ್ಶದೇವನಾದ ಶ್ರೀರಾಮಕೃಷ್ಣರಿಗೇ ಅರ್ಪಿಸಿ, ತಮ್ಮ ೬೭ನೆಯ ವಯಸ್ಸಿನಲ್ಲಿ ಅಂದರೆ ೧೯೨೦ನೇ ಜುಲೈ ೨೦ರಂದು ರಾಮಕೃಷ್ಣೈಕರಾದರು. ಬೇಲೂರು ಮಠದಲ್ಲಿ ಇವರಿಗಾಗಿ ಭಕ್ತಾದಿಗಳು ಒಂದು ಮಂದಿರವನ್ನು ನಿರ್ಮಿಸಿದರು. ಇಂದಿಗೂ ಈ ಮಂದಿರದಲ್ಲಿ ಶ್ರೀಮಾತೆ ಅವರ ಭಾವಚಿತ್ರ ಕಂಗೊಳಿಸುತ್ತಿದೆ.
ಇಂತಹ ಮಾತೆಯನ್ನು ಪಡೆದ ನಾವು ಧನ್ಯರು. ಇಂದು ಅವರ ಜನ್ಮಜಯಂತಿಯನ್ನು ನೆನೆಸಿಕೊಂಡು ನಮಸ್ಕರಿಸೋಣ. ಶ್ರೀರಾಮಕೃಷ್ಣ ಮತ್ತು ಶ್ರೀಶಾರದಾದೇವಿಯವರಂತಹ ದೈವಭಕ್ತಿ, ಅಲೌಕಿಕ ಜೀವನ ನಮ್ಮ ಜೀವನಕ್ಕೆ ಆದರ್ಶವಾಗಲಿದೆ.
ಚಿತ್ರ ಕೃಪೆ : bharatjanani.com




