ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 24, 2012

2

‘ಈಗ ಮದುವೆ ಆಗಿದೆ, ಆದರೆ ಕೆಲವು ಗಂಡಸರಿಗೆ ತಾಳಿಯೂ ಕಾಣೋದಿಲ್ಲ

‍ನಿಲುಮೆ ಮೂಲಕ

-ರೂಪಾರಾವ್

ಒಂದು ಹುಡುಗಿ ಹೆಣ್ಣಾಗುವ ಘಳಿಗೆ ಅತಿ ಸಂಭ್ರಮದ ಘಳಿಗೆ. ಆದರೆ ಅ ಘಳಿಗೆ ಸುಮಾರು ಎಲ್ಲಾರ ಅಮ್ಮಂದಿರು ಅಳುತ್ತಾರೆ. ಮಗಳು ಹೆಣ್ಣಾದಳಲ್ಲ ಎಂಬ ಕಾರಣಕ್ಕಲ್ಲ. ತಾನು ಅನುಭವಿಸಿದ ನೋವು ನರಕಗಳನ್ನು ಮಗಳೂ ಅನುಭವಿಸಬೇಕಾಗುತ್ತಲ್ಲ ಎಂದು.

ಅಂತಹ ಘಳಿಗೆ ಬರುವುದಕ್ಕೂ ಮುಂಚೆಯೇ ಆ ಭಯ ನನಗೆ ಕಾಡಿತ್ತು. ಆಗಿನ್ನೂ ಒಂಬತ್ತನೇ ತರಗತಿಗೆ ಕಾಲಿಟ್ಟಿದ್ದೆ. ಯಾವುದೋ ಅಂಗಡಿಗೆ ಹೋಗುವ ಕಾರಣಕ್ಕಾಗಿ ಹೋದಾಗ , ಯಾವುದೋ ಗಂಡಸು ಏನೇನೋ ಅಸಭ್ಯವಾಗಿ ಹೇಳುತ್ತಾ ನನ್ನ ಹಿಂದೆಯೇ ಬರತೊಡಗಿದ.ಎಂಥ ವಿಷಮ ಘಳಿಗೆ ಎಂದರೆ ಅವನ್ಯಾಕೆ ಹಾಗೆಲ್ಲಾ ಹೇಳ್ತಿದಾನೆ ಅಂತಲೂ ನನಗೆ ಅರ್ಥ ಆಗಿರಲಿಲ್ಲ. ಮನೆಗೆ ಬಂದು ಯಾರಿಗೂ ಹೇಳದೆ ಅತ್ತಿದ್ದೆ.

ಅಲ್ಲಿಂದ ಮುಂದೆ ನಾನು ಹೇಗಿರಬೇಕೆಂಬ ಪಾಠ ಅಮ್ಮನಿಂದ ಬಂತು. ಆಗ ಹೆಣ್ಣಾಗಿದ್ದೆ…. ಒಳ್ಳೆಯ ಸ್ಪರ್ಷ ಕೆಟ್ಟ ಸ್ಪರ್ಷ ನೋಟಗಳ ವ್ಯತ್ಯಾಸ ತಿಳಿಯುತ್ತಿತ್ತು. ಆದರೂ ಬಸ್ ನಲ್ಲಿ ಸ್ಕೂಲಿಗೆ ಹೋಗುವಾಗ ಬೇಕಾಗಿಯೇ ಕೈ ಹಾಕಿ ನೂಕುವ ಕಂಡಕ್ಟರ್, ನನ್ನ ಹಿಂದೆ ಬಂದು ನಿಲ್ಲು ಎನ್ನುತ್ತಿದ್ದ ಡ್ರೈವರ್ ಇವರುಗಳನ್ನು ಎದುರಿಸಲಾಗಿರಲಿಲ್ಲ. ಸುಮ್ಮನೆ ಇವರುಗಳ ಸ್ಪರ್ಷ ತೀಟೆಗೆ ಮೂಕ ಪಶುಗಳಾಗುತ್ತಿದ್ದೆವು(ಅಕಸ್ಮಾತ್ ತಿರುಗಿಸಿ ಕೇಳಿದರೆ ಆ ಬಸ್ ನಮ್ಮ ಸ್ಟಾಪಿನಲ್ಲಿ ನಿಲ್ಲುತ್ತಿರಲಿಲ್ಲ. ನಿಂತರೂ ಒಂದಷ್ಟು ದೂರ ನಿಲ್ಲುತ್ತಿದ್ದೆವೆ. ನಾವುಗಳು ಓಡಿ ಹೋಗಿ ಹತ್ತಬೇಕಿತ್ತು.)

ಅಲ್ಲಿಂದ ಕಾಲೇಜಿಗೆ ಬಂದೆ . ಅಷ್ಟರಲಿ ಈವ್ ಟೀಸಿಂಗ್ಗೆ ಹೊಂದಿಕೊಂಡುಬಿಟ್ಟಿದ್ದೆ. ಜೊತೆಗೆ ಒಳ್ಳೆಯ ಹುಡುಗರೂ ಪರಿಚಯವಾದರು. ಕೆಟ್ಟವರಷ್ಟೆ ಅಲ್ಲ ಒಳ್ಳೆಯವರೂ ಇದ್ದಾರೆ ಈ ಲೋಕದಲ್ಲಿ ಅಂತನ್ನಿಸಿ ಸಂತೋಷವಾಗಿತ್ತು. ನಾನಾಗೆ ಸುರಕ್ಷಿತವಲಯಕ್ಕೆ ಸೇರಿದ್ದೆ. ಯಾವುದಾದರೂ ಹುಡುಗ ರೇಗಿಸಿದರೆ, ಅಥವ ಅಂದರೆ ಬೇರೆ ಹುಡುಗರು ಹೆದರಿಸಿ ಜಗಳವಾಡುತ್ತಿದ್ದರು . ಆಗ ಅನ್ನಿಸಿದ್ದು ಬಹುಷ ನನಗೂ ಅಣ್ಣನೋ ತಮ್ಮನೋ ಇದ್ದಿದ್ದರೆ ಅಥವ ಅಪ್ಪ ಎನಿಸಿಕೊಂಡ ವ್ಯಕ್ತಿ ನಮ್ಮನ್ನೂ ಸರಿಯಾಗಿ ನೋಡಿಕೊಂಡಿದ್ದರೆ ನಾನು ಅಷ್ಟೆಲ್ಲಾ ಕಷ್ಟ ಪಡಬೇಕಿತ್ತಿರಲಿಲ್ಲವೇನೋ ಅಂತ

ಓದು ಮುಗಿಸಿ ಕೆಲಸದ ಜಗತ್ತಿಗೆ ಬಂದೆ. ಸಾಫ್ಟ್ವೇರ್ ಜಗತ್ತಿಗೆ ಸೇರಿದ್ದೆ. ಆದರೆಅಲ್ಲಿನ ಕೊನೆಯ ದಿನ ಕರಾಳ ದಿನ ನನ್ನನು ಕೆಲಸದಿಂದ ತೆಗೆಯಲಾಗಿತ್ತು(ರಿಸೆಶನ್ ನೆಪ)… ಮೊದಲೇ ಕೆಲಸ ಕಳೆದುಕೊಂಡ ನೋವು ಮಾರನೆದಿನ ಪುಸ್ತಕಗಳನ್ನು ಹಿಂದಿರುಗಿಸಲು ಲೈಬ್ರರಿಗೆ ಹೋಗಿದ್ದೆ. ಇದಕ್ಕೂ ಮುಂಚೆ ಹಲವು ಬಾರಿ ಹೋಗುತ್ತಿದ್ದೆ. ಲೈಬ್ರೆರಿಯನ್ ಜೊತೆ ಮಾತನಾಡುತ್ತಿದ್ದೆ. ಆತನೂ ಚೆನ್ನಾಗಿ ಗೌರವದಿಂದಲೇ ಕಾಣುತ್ತಿದ್ದ. ಅಂದು ನನ್ನ ಕೊನೆಯ ದಿನವಾದ್ದರಿಂದ ಶನಿವಾರವಾದರೂ ಹೋಗಿದ್ದೆ. ಆವತ್ತು ಅಲ್ಲಿ ಜನ ಕಡಿಮೆ. ಕಡಿಮೆ ಏನು ಅಂದು ಯಾರೂ ಇರಲಿಲ್ಲ.

ಪುಸ್ತಕ ವಾಪಾಸ್ ತೆಗೆದುಕೊಂಡ ಆತ ಸಂದರ್ಶನದ ಬಗ್ಗೆ ಹೊಸ ಪುಸ್ತಕ ನಿಮಗೆ ಮುಂದೆ ಬೇರೆ ಕೆಲಸಕ್ಕೆ ಸೇರೋಕೆ ಯೂಸ್ ಆಗುತ್ತೆ ನೋಡಿ ಎಂದು ಕೊಟ್ಟ. ನಾನು ನಿಂತುಕೊಂಡೇ ಪುಸ್ತಕ ಹಾಗೆ ಪುಟಗಳನ್ನು ತಿರುಗಿಸುತ್ತಿದ್ದೆ . ಹಿಂದೆಯಿಂದ ಅಮಾನತ್ತಾಗಿ ಯಾರೋ ಹಿಡಿದರು. ಕಿರುಚದಂತೆ ಬಾಯಿ ಭದ್ರವಾಗಿ ಹಿಡಿದ…. ಎಂಥ ಅಸಹಾಯಕತೆ ಅದು. ………. ಕೈ ಕಾಲುಗಳು ನನ್ನ ವಶದಲ್ಲಿರಲಿಲ್ಲ. ಯಾರೋ ನನ್ನ ಆಕ್ರಮಿಸುತ್ತಿದ್ದಾರೆ ಎಂದನಿಸುತ್ತಿತ್ತು. ಇನ್ನು ತಡೆಯಲಾಗಲ್ಲಿಲ್ಲ ಎಲ್ಲೋ ಓದಿದ್ದ ನೆನಪು ಹಿಂದಿನ ಕಾಲನ್ನೆತ್ತಿ ಹಿಂದೆ ಜಾಡಿಸಿದೆ. ಗುರಿ ತಪ್ಪಿತ್ತು. ಏಟು ಅವನ ತೊಡೆಗೆ ಬಿತ್ತು ಅಷ್ಟೇ ಆ ನೋವಿಗೇನೋ ಬಾಯಿ ಹಿಡಿದಿದ್ದ ಆತನ ಕೈ ಸಡಿಲವಾಯ್ತು. ಕೂಡಲೇ ಕೈ ಕಚ್ಚಿ ಲೈಬ್ರರಿಯಿಂದ ಓಡಿ ಬಂದಿದ್ದೆ. ಗೇಟ್ ಬಳಿ ಇದ್ದ ಸೆಕ್ಯೂರಿಟಿಗಳು ಕಟ್ಟಿ ಹಾಕಿದ ನಾಯಿಗಳಂತೆ ಕಂಡವು. ಮನೆಗೆ ಧಾವಿಸಿದೆ . ಅಮ್ಮನಿಗೆ ಏನೂ ಹೇಳಲು ಮನಸು ಬರಲಿಲ್ಲ. ಮನೆಗೆ ನಾನೊಬ್ಬಳೆ ದಿಕ್ಕು . ನನಗೆ ಹೀಗಾಯ್ತು ಅಂದರೆ…. ಅಕ್ಕನ ಮದುವೆ ಬೇರೆ ಇತ್ತು. ಹಾಗಾಗಿ ಆ ವಿಷಯ ಯಾರಿಗೂ ಹೇಳಲಿಲ್ಲ . ವಿಷಯ ಮ್ಯಾನೇಜ್ಮೆಂಗಟ್ಗೆ ಹೇಳಬೇಕೆಂದುಕೊಂಡರೂ ಮನೆಗೆ ಕಳಿಸಿದ್ದ ಕಂಪೆನಿ ನನಗೆ ಸಹಾಯ ಮಾಡುತ್ತದೆ ಎಂಬ ನಂಬಿಕೆ ಇರಲಿಲ್ಲ. ಹಾಗಾಗಿ ಆ ವಿಷಯವನ್ನು ಅಲ್ಲಿಗೆ ಬಿಟ್ಟು ಹಾಕಿದೆ.

ಅದಾದ ನಂತರ ಎಷ್ಟೋ ಘಟನೆಗಳು ನಡೆಯುತ್ತಲೇ ಇದವು ಎಮ್ ಜಿ ರೋಡಿನಲ್ಲಿ ನಡೆದುಕೊಂಡು ಹೋಗುವಾಗ ದಾರಿಯಲ್ಲಿ ಕಾರ್ ನಿಲ್ಲಿಸಿ ಬರ್ತೀಯ ಎನ್ನುವಂತಹದ್ದು. ಹಿಂದೆಯೇ ಬಂದು ಮೈನಲ್ಲಿ ನಡುಕ ಹುಟ್ಟಿಸುವುದು. ಆದರೆ ತೀರ ಅಂತಹ ಕೆಟ್ಟ ಸನ್ನಿವೇಶ ಬಲವಂತ ಮಾಡುವುದು ನಡೆದಿರಲಿಲ್ಲ. ಅದಾದ ಮೇಲೆ ಕೆಲಸದಿಂದ ರೇಜಿಗೆ ಹುಟ್ಟಿ ಸ್ವಂತ ಉದ್ಯೋಗ ಆರಂಭಿಸಬೇಕಿತ್ತು. ಹತ್ತುವರ್ಷದ ಹಿಂದಿನ ಮಾತು ಸರಿಯಾಗಿ ೨೦೦೨

ಆಗ ೨೨ ವರ್ಷ ಇರಬೇಕು ನನಗೆ . ಬ್ಯಾಂಕ್ ಒಂದರಲ್ಲಿ ಸ್ವಂತ ಉದ್ಯೋಗಕ್ಕಾಗಿ ಲೋನ್ ಪಡೆಯಲು ಅರ್ಜಿ ಗುಜಾರಾಯಿಸಿದ್ದೆ. ಸರಕಾರದಿಂದ ಮಂಜೂರಾಗಿತ್ತು. ಅದನ್ನು ನನಗೆ ಕೊಡಲು ಬ್ಯಾಂಕ್ ಮ್ಯಾನೇಜರ್ ಲಂಚ ಕೇಳಿದ. ಕೊಟ್ಟೆವು.

ನಂತರ ಅವನ ಮನೆಯಲ್ಲಿದ್ದ ಕಂಪ್ಯೂಟರ್ಸ್ಗೆ ಸಾಫ್ಟವೇರ್ಸ್ ಇನ್ಸ್ಟಾಲ್ ಮಾಡಿಕೊಡಬೇಕೆಂದ. ಆಮೇಲೆ ಕಂಪ್ಯೂಟರ್ ರಿಪೇರಿಯಾಗುತ್ತಿದೆ ಅಂತ ಕರೆಯುತ್ತಿದ್ದ. ಹಾಗಾಗಿ ಒಂದೆರೆಡು ಬಾರಿ ಅವನ ಮನೆಗೆ ಹೋಗಿಯೂ ಇದ್ದೆ. ಅವನ ಹೆಂಡತಿ ತುಂಬಾ ಒಳ್ಳೆಯಾಕೆ. ನೋಡಲೂ ತುಂಬಾ ಚೆನ್ನಾಗಿದ್ದರು. ಚೆನ್ನಾಗಿ ಮಾತಾಡಿಸುತ್ತಿದ್ದರು. ಎಷ್ಟೋ ಬಾರಿ ಅಂದುಕೊಂಡಿದ್ದೆ ಎಷ್ಟು ಒಳ್ಳೆ ಹೆಂಡತಿ ಆದರೆ ಇವನುಮಾತ್ರ ಲಂಚಬೋಕ ಅಂತ.

ಹೀಗೆ ಒಂದು ಬಾರಿ ಒಮ್ಮೆಫೋನ್ ಮಾಡಿ ಕರೆದ. ಮನೆಯಲ್ಲಿ ಕಂಪ್ಯೂಟರ್ ಕೆಟ್ಟು ಹೋಗಿದೆ ಕೂಡಲೇ ಹೊರಟು ಬಾ. ಅಂತ.. ನಿಂತಕಾಲಲ್ಲಿ ರಾಜಾಜಿನಗರದ ಅವನ ಮನೆಗೆ ಹೋದೆ. ಬಾಗಿಲು ತೆರೆದು ಒಳ ಕರೆದ ಕಂಪ್ಯೂಟರ್ ಕೈ ಕೊಟ್ಟಿದೆ ಚೆಕ್ ಮಾಡು ಎಂದ . ಆಗಲೇ ಮನೆಯಲ್ಲಿ ಯಾರೊ ಇಲ್ಲದಿದ್ದದು ನನ್ನ ಗಮನಕ್ಕೆ ಬಂತು. ಯಾಕೋ ಭಯವಾಯ್ತು, ಏನೋ ನಡೆಯಬಹುದು ಅಂತ ನನ್ನ ಸಿಕ್ಸ್ಥ್ ಸೆನ್ಸ್ ಹೇಳುತ್ತಿತ್ತು. ಆದರೂ ಧೈರ್ಯಮಾಡಿಕೊಂಡು ಅವನ ಕಂಪ್ಯೂಟರ್ ನತ್ತ ಹೋದೆ..೪೪ ವರ್ಷದ ಆತ ಇದ್ದಕಿದ್ದ ಹಾಗೆ ಕೈ ಹಿಡಿದು ಎಳೆದುಕೊಂಡ ಅಪ್ಪಿಕೊಳ್ಳಲು ಹವಣಿಸತೊಡಗಿದ. ,ಮೊದಲೇ ಎಚ್ಚರಿಕೆ ಮತ್ತು ಅನುಮಾನದಲ್ಲಿ ಇದ್ದ ನಾನು ಸುಲಭವಾಗಿ ಅವನಿಂದ ತಪ್ಪಿಸಿಕೊಂಡೆ ಅವನತ್ತ ನೋಡದೇ ಅಲ್ಲಿಂದ ಓಡಿ ಬಂದೂ ಬಿಟ್ಟೆ. ಆದರೆ ಮಾರನೇ ದಿನದಿಂದ ಅವನ ಕಾಟ ಶುರುವಾಯ್ತು. ನೀನು ಒಪ್ಪಿಕೊಳ್ಳದಿದ್ದರೆ ನಿನಗೆ ಲೋನ್ ಕೊಡೋದಿಲ್ಲ ಅಂತ. ಅಕ್ಷರಷ: ಬ್ಲಾಕ್ ಮೇಲ್ ಮಾಡತೊಡಗಿದ. ಹತ್ತು ಪರ್ಸೆಂಟ್ ತಿಂಗಳಿಗೆ ಬಡ್ದಿ ಕೊಡುತ್ತಿದ್ದ ನಾನು ಈ ತೊಂದರೆಯನ್ನ ಯಾರಿಗೊ ಹೇಳಲಾಗದೆ ದಿನವೂ ಒದ್ದಾಡುತ್ತಿದ್ದೆ. ಲೋಕಾಯುಕ್ತರಿಗೆ ಮೇಲ್ ಮಾಡಿದೆ ನನ್ನ ಅಸಹಾಯಕತೆ ಕುರಿತು. ಅವರು ಇದು ನಮ್ಮ ವ್ಯಾಪ್ತಿಗೆ ಬರೋದಿಲ್ಲ ಅಂದರು . ನನ್ನ ಮುಂದೆ ಎರೆಡೇ ಆಪ್ಷನ್ ಒಂದು ಅವನೊಂದಿಗೆ ಆಡ್ಜಸ್ಟ್ ಮಾಡಿಕೊಳ್ಳುವುದು ಇಲ್ಲವೇ ಲೋನ್ ಆಸೆ ಮರೆತುಬಿಡುವುದು(ಇದನ್ನ ನನಗೆ ಅವನೇ ಹೇಳಿದ್ದ). ಕೊನೆಗೊಮ್ಮೆ ಆಗಿನ ಮುಖ್ಯಮಂತ್ರಿಗೆ ಮೇಲ್ ಮಾಡಿದೆ ಯಾವುದೇ ಹೋಪ್ಸ್ ಇರಲಿಲ್ಲ. ಆದರೆ ದೇವರು ನನ್ನಪಾಲಿಗಿದ್ದ. ಅವರೂ ನನ್ನ ತೊಂದರೆಗೆ ಸ್ಪಂದಿಸಿದರು. ಯಾರಿಗೂ ತಿಳಿಯದಂತೆ ಆ ಮ್ಯಾನೇಜರ್ ಅಲ್ಲಿಂದ ಎತ್ತಂಗಡೆ ಮಾಡಲ್ಪಟ್ಟು ಬೆಳಗಾವಿಗೆ ವರ್ಗವಾದ. ಇತ್ತ ಬ್ಯಾಂಕಿಗೆ ಹಂಗಾಮಿ ಮ್ಯಾನೇಜರ್ ಒಬ್ಬರು ಬಂದು , ನನ್ನ ಲೋನ್ ಸಿಕ್ಕಿಯೂ ಆಯ್ತು ಅದನ್ನು ಎರೆಡೇ ವರ್ಷದಲ್ಲಿ ತೀರಿಸಿಯೂ ಆಯ್ತು. . ಯಶಸ್ವಿ ಉದ್ಯಮಿ ಎನಿಸಿಕೊಂಡೆ.. ಅಗಿನ ಮುಖ್ಯಮಂತ್ರಿಯವರು ನನಗೆ ಕಳಿಸಿದ್ದ ಸಂದೇಶದಲ್ಲಿ ನೀನು ನಿನ್ನಂತೆ ಅನ್ಯಾಯ, ಆಕ್ರಮ, ತೊಂದರೆಗೊಳಗಾದ ಯುವತಿಯರಿಗೆ ಮಾರ್ಗದರ್ಶಿಯಾಗಬೇಕು ಅದೇ ನೀನು ಸಲ್ಲಿಸುವ ಧನ್ಯವಾದ ನನಗೆ ಎಂದಿದ್ದರು. ಆ ಮಾತನ್ನ ಪೂರ್ಣ ಮಾಡಬೇಕಿದೆ

ಈಗ ಮದುವೆ ಆಗಿದೆ. ಮತ್ತಾರ ಕಾಟವೂ ಇರೋದಿಲ್ಲ ಅಂದುಕೊಂಡರೆ ಕೆಲವು ಗಂಡಸರಿಗೆ ತಾಳಿಯೂ ಸಹಾ ಕಾಣೋದಿಲ್ಲ.

ಆದರೆ ಎಷ್ಟು ಜನ ಹೆಣ್ಣು ಮಕ್ಕಳು ಹೀಗೆ ಪಾರಾಗಬಲ್ಲರು?…….

ಅಪ್ಪ ಅಣ್ಣ ತಮ್ಮ ಯಾರ ಬೆಂಬಲವೂ ಇಲ್ಲದ ನನ್ನಂತಹ ಹೆಣ್ಣುಗಳಿಗೆ ಹೆಜ್ಜೆ ಹೆಜ್ಜೆಗೂ ನೂರಾರು ಕಾಮುಕ ಕಣ್ಣುಗಳು ಕಣ್ಣಿಂದಲೇ ತಿನ್ನುತ್ತಿವೆ….

ಅವಕಾಶ ಸಿಕ್ಕರೆ ವಯಸಾದ ಅಜ್ಜಿಯನ್ನೂ ಬಿಡದ ಗಂಡುಗಳನ್ನ ತಡೆಯೋಕೆ ಒಂದೆ ಉಪಾಯ ಎಂದರೆ ಭಯ ಹುಟ್ಟಿಸುವುದು . ಬಲವಂತವಾಗಿ ಅವಳನ್ನ ಅನುಭವಿಸಬೇಕು ಅನ್ನೋ ಯೋಚನೆ ಕೂಡ ತಲೆಯಲ್ಲಿ ಸುಳಿಯಬಾರದು.

ಅಂತಹ ಶಿಕ್ಷೆ ಯನ್ನ ಈಗ ಸೆರೆಸಿಕ್ಕಿರುವ ಎಲ್ಲಾ ಅತ್ಯಾಚಾರಿಗಳಿಗೂ ಕೊಡಬೇಕು, ಹಾಗೆ ಮಾಡಿದಲ್ಲಿ ಮಾತ್ರ ಅತ್ಯಾಚಾರ ತಡೆಗಟ್ಟಲು ಸಾಧ್ಯ. ಮನೋಭಾವವನ್ನ ಬದಲಾಯಿಸಬೇಕು ಎಂಬ ಮಾತೊ ಆಗಾಗ ಕೇಳುತ್ತಿರುತ್ತೇನೆ.

ಈಗಾಗಲೇ ಹೆಮ್ಮರವಾಗಿರುವ ಗಂಡಿನ ಮನಸ್ಥಿತಿ ಬದಲಾಯಿಸಲು ಸಾಧ್ಯವಿಲ್ಲ. ಅದೆನಿದ್ದರೂ ಹುಟ್ಟಿನಿಂದಲೇ ಪ್ರತಿಯೊಬ್ಬ ತಾಯಿ, ತಂದೆ ಶಿಕ್ಷಣ ಅಂದರೆ ಹೆಣ್ಣುಗಳನ್ನು ಗೌರವಿಸದಿದ್ದರೂ ಪರವಾಗಿಲ್ಲ. ಅವರನ್ನ ಸೆಕ್ಸೆ ಸಿಂಬಲ್ ಆಗಿ ನೋಡಬಾರದೆಂಬ ಶಿಕ್ಷಣ ಕೊಡಬೇಕು, ಅದು ಮುಂದಿನ ಪೀಳಿಗೆಗೆ ಆಯ್ತು. ಈಗಿನವರಿಗೆ ಕೇವಲ ದಂಡಂ ದಶಗುಣ್ಂ ಭವೇತ್. ಅಷ್ಟೇ

ಪ್ರತಿ ಹೆಣ್ಣೂ ತನ್ನ ಬಳಿ ಚೂರಿಯಂತಹ ಆಯುಧ ಇಟ್ಟುಕೊಳ್ಳಬೇಕು. ಗನ್ ಲೈಸೆನ್ಸ್ ಇದ್ದಲ್ಲಿ ಇನ್ನೂ ಒಳ್ಳೆಯದು. ಸುಟ್ಟಬಿಡಬೇಕು ಅಥವ ಚುಚ್ಚಿಬಿಡಬೇಕು, ಇಂತಹ ಅತ್ಯಾಚಾರಿಗಳನ್ನ ಒಂದೆರ್ಡು ಬಾರಿ ಹೀಗೆ ಆಯಿತು ಎಂದು ಸುದ್ದಿ ಹರಡಿದರೆ ಅತ್ಯಾಚಾರ ಮನೋಭಾವ ಬಲವಂತವಾಗಿ ಮಾಯವಾಗುತ್ತದೆ ಭಯದ ಕಾರಣದಿಂದ..

* * * * * * * * *

ಚಿತ್ರಕೃಪೆ : http://www.flickr.com/photos/ram_iyer/8147099396/

2 ಟಿಪ್ಪಣಿಗಳು Post a comment
  1. jyothi's avatar
    ಫೆಬ್ರ 2 2013

    houdu neevu heliddu sari heege madbeku innthavarige (aadre nanna officenallu nam boss heege madtare adke tumba bejarinda kelaskke bartidini)

    ಉತ್ತರ
  2. raguks's avatar
    ಫೆಬ್ರ 4 2013

    ಈ ರೀತಿ ಜೀವನದ ವಾಸ್ತವತೆಯನ್ನು ಎದುರಿಸುವುದು ಕಷ್ಟವಾದರೂ ಕೆಲವು ವ್ಯತ್ಯಾಸವನ್ನು ಗಮನಿಸಲೇ ಬೇಕು. ಗಂಡಸರೆಲ್ಲ ಹೀಗೆ ಎನ್ನುವ ಅಭಿಪ್ರಾಯವೂ ಸರಿಯಲ್ಲ. ಗಂಡು ಹೆಣ್ಣಿನ ನಡುವಿನ ಆಕರ್ಷಣೆ ಜೈವಿಕ ಮತ್ತು ಸಹಜ. ಈ ಪ್ರಾಣಿಸಹಜ ಸ್ವಭಾವಗಳಿಗೆ ನಾಗರಿಕತೆಯ ಕಡಿವಾಣ ಸಾಲುವುದಿಲ್ಲ. ನಮ್ಮ ನೋಟ, ಪ್ರಭಾವಕ್ಕೊಳಗಾದ ದೇಹದ ಭಾಷೆಯಿಂದ ಆಕರ್ಷಣೆ ವ್ಯಕ್ತವಾಗಬಹುದು. ಅದು ತಪ್ಪು ಎನ್ನುವುದು ಸರಿಯಲ್ಲ. ಆದರೆ ಅದು ಬೇರೆಯವರಿಗೆ ಕಿರುಕುಳವಾಗುವಂತಹ ಕ್ರಿಯೆಯಾಗಿ ಮಾರ್ಪಾಡಾದರೆ ಅಕ್ಷೇಪಣೀಯ. ತಡವಾಗುತ್ತಿರುವ ಮದುವೆ ಒಡೆದುಹೋಗುತ್ತಿರುವ ಸಮುದಾಯ ಇವಕ್ಕೆಲ್ಲ ಕಾರಣ ಇರಬಹುದು. ಅಸಹಾಯಕರೆಂದು ಮೈ ಮುಟ್ಟಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಹೆದರಿಕೆ ಗಂಡು ಮತ್ತು ಹೆಣ್ಣು ಇಬ್ಬರಿಗೂ ಬರುವಂತಾಗಬೇಕು.

    ಉತ್ತರ

Leave a reply to raguks ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments