ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 24, 2012

1

ಕೌರವರ ನಾಶಕ್ಕೆ ಶ್ರೀಕಾರ ಹಾಕಿದ್ದು ದ್ರೌಪದಿಯೇ ತಾನೇ?

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

Dehli1ಬಹುಷಃ ಆಗಿನ ಕಾಲವೇ ಚೆನ್ನಾಗಿತ್ತೆನೋ.ಆಗಲಾದರು ಕುರು ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣವಾಗುವಾಗ ಅವಳ ಸಹಾಯಕ್ಕೆ ಕರೆದೊಡನೆಯೇ ಶ್ರೀ ಕೃಷ್ಣ ಪರಮಾತ್ಮ ಬಂದಿದ್ದ.ಪಾಪ! ಈ ಕಾಲದ ಹೆಣ್ಣು ಮಕ್ಕಳ ಕೂಗು ಆ ಕಾಣದ ದೇವರಿಗೂ,ಕಾನೂನು ಪಾಲಕರಾದ ಮನುಷ್ಯ(?)ರಿಗೂ ಕೇಳುತ್ತಿಲ್ಲ.ಕುರುಕ್ಷೇತ್ರದ ಯುದ್ಧದ ಮುಗಿದರೂ ಕೌರವರು ಇನ್ನೂ ಸತ್ತಿಲ್ಲ.ದ್ರೌಪದಿಯರ ಗೋಳು ಮುಗಿಯೋಲ್ಲ…

ಕಳೆದ ಶನಿವಾರದ ಬೆಳಗ್ಗಿನಿಂದ ಇಂಡಿಯಾ ಗೇಟ್,ರಾಷ್ಟ್ರಪತಿ ಭವನದ ಮುಂದೆ ನಿಂತು ನ್ಯಾಯ ಕೇಳಿದ ಯುವಕ-ಯುವತಿಯರ ಮೇಲೆಯೇ ಲಾಠಿ ಚಾರ್ಜ್,ಜಲಫಿರಂಗಿ,ಅಶ್ರು ವಾಯು ಪ್ರಯೋಗ ನಡೆಯುತ್ತಿದ್ದರೂ.ಪ್ರಧಾನಿ ಮೌನ ಮೋಹನ್ ಸಿಂಗ್ ತಮ್ಮ ಮೌನ ಮುರಿದಿದ್ದು ಸೋಮವಾರ ಬೆಳಿಗ್ಗೆ.ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ!,ಅದೂ ಸಹ ತಮ್ಮ ಭಾಷಣದ ಕೊನೆಯಲ್ಲಿ “ಟೀಕ್  ಹೈ” ಅಂದರಂತೆ! ಕ್ಯಾಮೆರಾ ಹಿಂದೆ ನಿಂತಿದ್ದ ನಿರ್ದೇಶಕ(ಕಿ) ಯಾರಿದ್ದಿರಬಹುದು? So Called ಯುವನಾಯಕ ರಾಹುಲ್ ಗಾಂಧಿಗೂ ಯುವಕ-ಯುವತಿಯರ ಮೇಲೆ ಪೋಲಿಸ್ ದೌರ್ಜನ್ಯ ಕಾಣಿಸಿಲ್ಲ.ರಷ್ಯಾದಿಂದ ಪುಟಿನ್ ಬರುತಿದ್ದಾರೆ ಅವರೆದುರು ನೀವು ಗಲಾಟೆ ಮಾಡಿದರೆ ಭಾರತದ ಬಗ್ಗೆ ಅವರೇನು ತಿಳಿದುಕೊಂಡಾರು ಅಂತ ಬುದ್ದಿ ಹೇಳುವ ಗೃಹ ಮಂತ್ರಿ ಶಿಂಧೆಗೇ,ವೃದ್ಧರು ,ಮಹಿಳೆಯರು,ಮಕ್ಕಳ ಮೇಲೆ ದೌರ್ಜನ್ಯವೆಸಗಿದ ಪೋಲಿಸರನ್ನು ಮನೆಗೆ ಕಳಿಸಲಾಗದಿದ್ದ ಮೇಲೆ ತಾನು ಕುಳಿತಿರುವ ಕುರ್ಚಿಯಿಂದ ಎದ್ದೋಗಬೇಕು ಅನ್ನುವ ನೈತಿಕತೆ  ಕೂಡ ಉಳಿದಿಲ್ಲವೇ? ಎದ್ದೋಗುವುದನ್ನು ಪಕ್ಕಕ್ಕಿಡಿ,ತನ್ನ  ಪೋಲಿಸ್ ಪಡೆ ಮಾಡಿದ ಘನಂದಾರಿ ಕೆಲಸಕ್ಕಾಗಿ ದೇಶದ ಜನರ ಕ್ಷಮೆ ಕೇಳಲು ಸಹ ಆತ ಸಿದ್ಧನಿಲ್ಲ. ಹಾಳು ಬಿದ್ದು ಹೋಗಲಿ ಕ್ಷಮೆಯೂ ಬೇಡ.ನ್ಯಾಯ ಕೇಳಲು ನಿಂತ ವಿದ್ಯಾರ್ಥಿಗಳನ್ನು ಭೇಟಿಯಾಗುವ ಕುರಿತು ಪ್ರಶ್ನೆ ಕೇಳಿದರೆ, “ಇವತ್ತು ವಿದ್ಯಾರ್ಥಿಗಳು ಪ್ರತಿಭಟಿಸುತ್ತಾರೆ.ನಾಳೆ ಮಾವೋವಾದಿಗಳು ಪ್ರತಿಭಟಿಸುತ್ತಾರೆ.ಹಾಗಂತ ಮಾವೋವಾದಿಗಳು ಭೇಟಿಯಾಗಲು ಸಾಧ್ಯವೇ?” ಅನ್ನುತ್ತಾನಲ್ಲ ಇದೆಂತ ಉಡಾಫೆ ತನದ ಮಾತು? ಎಲ್ಲಿಗೆ ಬಂದು ನಿಂತಿದೆ ನಮ್ಮ ವ್ಯವಸ್ಥೆ?

ಸ್ವಲ್ಪ ವಿಷಯಾಂತರ ಮಾಡಿದರೆ,ರಾಷ್ಟ್ರಪತಿ ಭವನದ ರಕ್ಷಣೆ ಇವರಿಗೆ ಮಹಿಳೆಯರು,ವೃದ್ಧರ ರಕ್ಷಣೆಗಿಂತ ಮೊದಲು ಕಾಣುತ್ತದೆ.ಅಸಲಿಗೆ ಈ ರಾಷ್ಟ್ರಪತಿ ಅನ್ನುವ ರಬ್ಬರ್ ಸ್ಟಾಂಪ್ ಸ್ಥಾನವೇ ಪ್ರಜಾ ಪ್ರಭುತ್ವಕ್ಕೆ ಬ್ರಿಟಿಷರು ನೀಡಿರುವ ಪಳೆಯುಳಿಕೆ.ಹೊಟ್ಟೆಗೆ ಇಟ್ಟಿಲ್ಲದೇ ಸಾಯುವ ಜನರಿರುವ ದೇಶಕ್ಕೊಬ್ಬ ಭವ್ಯ ಬಂಗಲೆಯಲ್ಲಿ ಕುಳಿತು ಪ್ರೋಟೋಕಾಲ್ ಪಾಲಿಸುವ ರಾಷ್ಟ್ರಪತಿ/ರಾಜ್ಯಪಾಲ ಅನ್ನುವ ಹುದ್ದೆಗಳು ಬೇಕಾ? ನಮ್ಮ ಹಿಂದಿನ ರಾಷ್ಟ್ರಪತಿ ಅತ್ಯಾಚಾರಿಗಳಿಗೆ ನೀಡಿದ್ದ ಗಲ್ಲು ಶಿಕ್ಷೆಯನ್ನು ಜೀವವಾದಿಯಾಗಿಸಿದ್ದ ಮಹಾನ್ ಮಾತೆ! ಅವರಲ್ಲೊಬ್ಬ ಶಾಲೆಗೇ ಹೋಗುವ ಪುಟ್ಟ ಹುಡುಗಿಯನ್ನು ಅತ್ಯಾಚಾರ ಮಾಡಿ ಕೊಂದ ಪಾಪಿ.

ಇಷ್ಟೆಲ್ಲ ಅನಾಚಾರಗಳ ನಡುವೆ ಶಾಂತಿ,ಸಂಯಮ ಕಾಪಾಡಿಕೊಳ್ಳಿ ಅನ್ನುವ ಈ ಊಸರವಳ್ಳಿ ರಾಜಕಾರಣಿಗಳು (ಎಲ್ಲ ಪಕ್ಷದ).ಒಂದು ವೇಳೆ ಅವರ ಮನೆ ಮಕ್ಕಳಿಗೆ ಈ  ರೀತಿಯಾಗಿದ್ದರೆ,ಆಗಲೂ ಸಂಯಮ ಕಾಪಾಡಿಕೊಳ್ಳುವಂತೆ ಭಾಷಣ ಬಿಗಿಯುತಿದ್ದರೇನು? ಈ ದೇಶದ ೩೬೯ ಸಂಸದರ ಮೇಲೆ,ಶಾಸಕರ ಮೇಲೆ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ,ಅತ್ಯಾಚಾರದ ಆರೋಪಗಳಿವೆ.ಇಂತ ಆರೋಪಿಗಳಿಗೆ ಬಹುತೇಕ ಎಲ್ಲ ಪಕ್ಷಗಳೂ ಟಿಕೇಟ್ ನೀಡಿವೇ.ಮಹಿಳೆಯರ ಬಗ್ಗೆ ಗೌರವ ಪ್ರದರ್ಶಿಸುವ ಎಲ್ಲಾ ಪಕ್ಷದ ಮುಖಂಡರನ್ನೊಮ್ಮೆ ಕೇಳಿ ನೋಡಿ “ಮಹಿಳೆಯರ,ಅಸಾಹಯಕರ ಮೇಲಿನ ಇಂತ ದೌರ್ಜನ್ಯಗಳು ನಿಲ್ಲಲೇಬೇಕು ಅನ್ನುವ ನೈಜ ಕಳಕಳಿಯಿದ್ದರೆ,ಮುಂದಿನ ಚುನಾವಣೆಗಳಲ್ಲಿ ಇಂತ ಕ್ರಿಮಿನಲ್ ಎಲಿಮೆಂಟುಗಳಿಗೆ ಟಿಕೇಟ್ ನೀಡಬೇಡಿ”ಎಂದು,ಮುಖ ಮುಚ್ಚಿಕೊಂಡು ಓಡಿಹೋಗುತ್ತಾರೆ ಇವರೆಲ್ಲ.ಇಂತ ಹಿನ್ನೆಲೆಯ ಜನ ಸೇವಕರು ಕುಳಿತಿರುವ ಸಂಸತ್ತು,ವಿಧಾನ ಸಭೆಗಳಿಂದ ಮಹಿಳಾ ದೌರ್ಜನ್ಯದ ವಿರುದ್ಧ ಕಠಿಣ ಕಾನೂನು ನಿರೀಕ್ಷಿಸಬಹುದೇ? ಇಂತ ಸಂಸದರು,ಶಾಸಕರು,ಮಂತ್ರಿಗಳ ಕೈ ಕೆಳಗೆ ಇರುವ ಪೋಲಿಸ್ ವ್ಯವಸ್ಥೆ ಶಾಂತಿಯುತ ಪ್ರತಿಭಟನೆ ಮಾಡುತಿದ್ದ ಮಹಿಳೆಯರು,ಮಕ್ಕಳು,ವೃಧ್ಧರ ಮೇಲೆ ಮುಗಿಬೀಳದೆ ಇರುತ್ತದೆಯೇ?

ಮಹಿಳಾ ದೌರ್ಜನ್ಯದ ವಿರುದ್ಧ ಕಠಿಣ ಕಾನೂನು ತರುವ ಮೊದಲು,ಕ್ರಿಮಿನಲ್ ಆರೋಪ ಮತ್ತು ಹಿನ್ನೆಲೆಯುಳ್ಳವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದಂತೆ ನಿರ್ಬಂಧ ಹೇರುವಂತ ಕಠಿಣ ಕಾನೂನುಗಳು ಮೊದಲು ಬರಬೇಕಿವೆ.ಆ ನಿಟ್ಟಿನಲ್ಲಿ ಶಾಂತಿ,ಸಂಯಮ ಕಾಪಾಡಿಕೊಳ್ಳುವಂತೆ ಭಾಷಣ ಬಿಗಿಯುತ್ತಿರುವ ಪವರ್ ಫುಲ್ ಮಹಿಳಾ ಮಣಿಗಳಾದ ಕಾಂಗ್ರೆಸ್ಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಸಂಸತ್ತಿನೊಳಗೆ ಈ ಬಗ್ಗೆ ದನಿಯೆತ್ತಬಲ್ಲರೇ? ಕ್ರಿಮಿನಲ್ ಹಿನ್ನೆಲೆಯವರು ಚುನಾಯಿಸಿ ಬಂದು ತಮ್ಮ ಕೆಟ್ಟ ಕೆಲಸಗಳಿಗೆ ಅಧಿಕಾರದ ಶ್ರೀ ರಕ್ಷೆ ಪಡೆದು ಪೋಲಿಸರನ್ನು ನಿಯಂತ್ರಿಸುವ ಅಡ್ಡ ದಾರಿಗೂ ಅಲ್ಲೇ ಪೆಟ್ಟು ಬೀಳುತ್ತದಲ್ಲವೇ? ಹಾಗಾಗಿ ಮೊದಲಿಗೆ ಕ್ರಿಮಿನಲ್  ಹಿನ್ನೆಲೆಯುಳ್ಳವರಿಗೆ,ಆರೋಪಿಗಳಿಗೆ ಚುನಾವಣೆಗೆ ಸ್ಪರ್ಧಿಸಿದಂತೆ ನಿರ್ಬಂಧ ಹೇರುವ ಕಾನೂನು ತರುವುದು ಮೊದಲನೇ ಹಂತದ ಹೆಜ್ಜೆಯಾದೀತು.ಸಾಫ್ಟ್ವೇರ್ ಭಾಷೆಯಲ್ಲಿ ಇದನ್ನು ನಾವು ‘Root Cause Analysis’ ಅನ್ನುತ್ತೇವೆ.ಅಂದರೆ ರೋಗದ ಮೂಲವನ್ನು ಹುಡುಕುವುದು.ಮೂಲವನ್ನೇ ಹುಡುಕಿ ಕಿತ್ತು ಬಿಸಾಡಿದರೆ “ವ್ಯಾಧಿ” ಮತ್ತೆ ಮತ್ತೆ ಮರುಕಳಿಸಲಾರದು ಅಲ್ಲವೇ? ಆದರೆ ಅಷ್ಟು ಸುಲಭವಾಗಿ ತಮ್ಮ “ಮೂಲ’ಕ್ಕೆ ಕೊಡಲಿ ಪೆಟ್ಟು ಹಾಕಿಕೊಳ್ಳಲು ಈ ರಾಜಕಾರಣಿಗಳು ಒಪ್ಪಬಲ್ಲರೇ?

ಇನ್ನು,ಅತ್ಯಾಚಾರಿಗಳಿಗೆ  ಗಲ್ಲು ಶಿಕ್ಷೆ  ನೀಡಬೇಕು ಅನ್ನುವ ಚರ್ಚೆ ಬಹಳ ಹಿಂದಿನಿಂದ ನಡೆಯುತ್ತಲೇ ಬಂದಿದೆ. ಅಡ್ವಾಣಿ ಉಪ ಪ್ರಧಾನಿಯಾಗಿದ್ದ ಕಾಲದಲ್ಲೇ ಚರ್ಚೆ ಜೀವ ಪಡೆದು ಮತ್ತೆ ಹಾಗೆ ಸತ್ತು ಹೋಗಿತ್ತು.ಈಗ ಮತ್ತೆ 23 ವರ್ಷದ ಅಮಾಯಕ ಹೆಣ್ಣು ಮಗಳ ಆರ್ತನಾದದ ನಡುವೆ ಮತ್ತೆ ಕೂಗೆದಿದ್ದೆ.ಈ ಬಾರಿಯಾದರೂ ಕಠಿಣ ಕಾನೂನು ಜಾರಿಯಾಗಲಿ.ಈ ಕಾನೂನು ಕೇವಲ ಅತ್ಯಾಚಾರಿಗಳ ಮೇಲೆ ಮಾತ್ರವಲ್ಲದೆ ಅತ್ಯಾಚಾರ ನಡೆದ ಜಾಗದ ಕಾನೂನು ಪಾಲನೆಯ ಹೊಣೆ ಹೊತ್ತವನನ್ನು ಗುರಿ ಮಾಡುವಂತಿರಬೇಕು.ಆಗಷ್ಟೇ ನಮ್ಮ ಪೋಲಿಸ್ ವ್ಯವಸ್ಥೆಗೂ ಬಿಸಿ ಮುಟ್ಟುವುದು.ಬಾಧಿತ ಯುವತಿಯ ಮುಂದಿನ ಜೀವನ ನಿರ್ವಹಣೆಗೆ ಸರಕಾರದ ನೆರವು ಹೇಗಿರಬೇಕು ಅನ್ನುವ ಅಂಶಗಳೂ ಸಹ ಇದರಲ್ಲಿ ಸೇರಿಕೊಳ್ಳಬೇಕು.

ನಾವೇನು ಮಾಡಿದರೂ ನಡೆಯುತ್ತದೆ.ಈ ದೇಶದ ಜನ ಮನೆ ಬಿಟ್ಟು ಹೊರಬರುವುದಿಲ್ಲ ಅಂದುಕೊಂಡಿದ್ದ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸಿ,ಇತ್ತೀಚಿನ ದಿನಗಳಲ್ಲಿ ಮತ್ತೆ ಜನರಲ್ಲಿ ಕಿಚ್ಚು ಹೊತ್ತಿಸಿದ್ದು 80ರ ವಯೋವೃದ್ಧ ಅಣ್ಣಾ ಅವರ ಭ್ರಷ್ಟಾಚಾರ ವಿರೋಧಿ ಹೋರಾಟ.ಅದೇ ಹೋರಾಟದ ಕಿಚ್ಚಿನಲ್ಲಿ ದೆಹಲಿಯ ವಿದ್ಯಾರ್ಥಿ ಮಿತ್ರರು ಪೋಲೀಸರ ಲಾಟಿ,ಜಲಫಿರಂಗಿ,ಅಶ್ರುವಾಯು ಪ್ರಯೋಗಕ್ಕೆ ಜಗ್ಗದೆ ಎದೆ ಕೊಟ್ಟು ನಿಲ್ಲುವ ಈ  ದೇಶಕ್ಕೆ ಖಂಡಿತ ಒಳ್ಳೆ ಭವಿಷ್ಯವಿದ್ದೇ ಇದೆ.ಅನ್ಯಾಯದ ವಿರುದ್ಧ React ಮಾಡುವುದು ಎಷ್ಟು ಮುಖ್ಯವೋ,ಹಾಗೆಯೇ ಇಂತ ಅನ್ಯಾಯಗಳನ್ನು ಪರಿಣಾಮಕಾರಿಯಾಗಿ ತಡೆಯಬಲ್ಲ ಧೀರ್ಘಕಾಲಿನ ಪರಿಹಾರಗಳ ಬಗ್ಗೆ ಯೋಚಿಸಿ Respond ಮಾಡಬೇಕಿರುವುದು ಕೂಡ ಇಂದಿನ ಅಗತ್ಯ.

ಹೋರಾಟದ ಕಿಡಿಯನ್ನು ದೆಹಲಿಯ ವಿದ್ಯಾರ್ಥಿ ಮಿತ್ರರು ಹಚ್ಚಿದ್ದಾರೆ,ಆ ಕಿಡಿಯನ್ನು ಮಹಿಳಾ ಸ್ವಾತಂತ್ರ್ಯದ ಜ್ಯೋತಿಯನ್ನಾಗಿಸುವ ಹೊಣೆ ಜಾಗೃತ ಮಹಿಳಾ ಸಮುದಾಯದ ಮೇಲಿದೆ.ಯಾವ ಕೌರವರಿಂದ ಅವಮಾನಿಸಲ್ಪಟ್ಟಳೋ,ಅದೇ    ಕೌರವರ ವಿನಾಶಕ್ಕೆ ಶ್ರೀಕಾರ ಹಾಕಿದವಳು ಕೂಡ ದ್ರೌಪದಿಯೇ ತಾನೇ? ದ್ರೌಪದಿಗೆ ಜೊತೆಯಾಗಿ ಶ್ರೀ ಕೃಷ್ಣ ಪರಮಾತ್ಮನ ನೇತೃತ್ವದಲ್ಲಿ ಒಂದಿಡಿ ಸೈನ್ಯವೇ ನಿಂತಿತ್ತು.ಹಾಗೆಯೇ,ಈ ಹೋರಾಟದ ಮುಂಚೂಣಿಯಲ್ಲಿ ನಿಲ್ಲಬೇಕಾದವರು ನೀವೇ.ನೀವುಗಳೇ ನಿಲ್ಲದಿದ್ದರೆ ಭಾನುವಾರದಂತೆ ಕಾಣದ “ಕೈ”ಗಳು ಹೋರಾಟವನ್ನೇ ಹಳ್ಳ ಹಿಡಿಸಿ ಬಿಡುತ್ತವೆ.ಈ ಬಾರಿ ಪದೇ ಪದೇ ಕಾಡುವ ಕೀಚಕ,ದುಷ್ಯಾಸನರಿಗೊಂದು ಅಂತ್ಯ ಕಾಣಿಸದೆ ವಿರಮಿಸದಿರೋಣ.

1 ಟಿಪ್ಪಣಿ Post a comment
  1. ದ್ರವ್ಪದಿಗೆ ನೀವೇನಾರ ಎದುರಾದರೆ ‘ದೂರ ಸರಿಯೋ ಸೂತಪುತ್ರ’ ಅನ್ನುತ್ತಿದ್ದಳು.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments