ತೇಜಃಪುಂಜ
– ರಾಜೇಶ್ ರಾವ್
ತಮಿಳುನಾಡಿನ ಒಂದು ಹಳ್ಳಿ. ಮರವೊಂದರ ಕೆಳಗೆ ಕುಳಿತು ಸಂತನೊಬ್ಬ ತನ್ನ ಶಿಷ್ಯರಿಗೆ ಹೇಳುತ್ತಿದ್ದಾನೆ…
“ಹಿಂದೂಸ್ಥಾನ ಮತಾಂಧರ ದಾಸ್ಯಕ್ಕೆ ಸಿಲುಕಿ ತನ್ನ ಕ್ಷಾತ್ರತ್ವ, ಸ್ವಾಭಿಮಾನ, ಅಸ್ಮಿತೆಯನ್ನು ಮರೆತು ನಿದಿರೆ, ಮದಿರೆ, ನಪುಂಸಕತ್ವದ ವಶವಾಗಿದ್ದಾಗ ದೇಶದ ಕ್ಷಾತ್ರ ತೇಜವನ್ನು ಬಡಿದೆಬ್ಬಿಸಿದನಾತ. ಮತಾಂಧ ಮೊಘಲ್, ಆದಿಲ್, ನಿಜಾಮ್, ಬರೀದ್, ಕುತುಬ್, ಇಮಾಮ್ ಶಾಹಿಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ಹಿಂದೂಗಳ ಮಾನ, ಪ್ರಾಣ ರಕ್ಷಣೆ ಮಾಡಿದ. ತೋರಣ, ಚಾಕಣ, ಪನ್ನಾಳ, ಪುರಂದರ…ಹೀಗೆ ಕೋಟೆಗಳ ಮೇಲೆ ಕೋಟೆ ಗೆದ್ದು…ಛತ್ರಪತಿಯಾಗಿ ಹಿಂದೂಸಾಮ್ರಾಜ್ಯದ ಶೌರ್ಯ, ಸ್ಥೈರ್ಯ, ಸಾಹಸವನ್ನು ಜಗತ್ತಿಗೆ ಪ್ರಚುರಪಡಿಸಿದ….”
ಶಿಷ್ಯರಿಗೋ ಆಶ್ಚರ್ಯ. ತಮ್ಮ ಗುರುಗಳ್ಯಾಕೆ ಆ ದರೋಡೆಕೋರ ಶಿವಾಜಿಯ ಬಗ್ಗೆ ಹೇಳುತ್ತಿದ್ದಾರೆ?
ಆ ಗುರು ಮತ್ಯಾರು ಅಲ್ಲ. ಮುಂದೊಂದು ದಿನ ಐದೇ ಐದು ನಿಮಿಷಗಳ ಭಾಷಣದಲ್ಲಿ ಜಗತ್ತಿನ ಎದುರು ತನ್ನ ದೇಶ ಜಗತ್ತಿನ ಗುರು, ತನ್ನ ಸಂಸ್ಕೃತಿ ಉತ್ಕೃಷ್ಟವಾದ ಸನಾತನ ಸಂಸ್ಕೃತಿ, ತನ್ನ ನಾಗರೀಕತೆ ಇಂದಿಗೂ ಅಳಿದಿಲ್ಲ ಎಂದು ಜಾಗತಿಕ ಧರ್ಮ ಸಮ್ಮೇಳನದಲ್ಲಿ ಭಾರತದ ಹಿರಿಮೆ, ಗರಿಮೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟನೋ, ನನ್ನ ಭಾರತಕ್ಕೆ ಶಿವಾಜಿಯಂತಹ ೧೦೦ ಮಂದಿ ತರುಣರು ಸಾಕೆಂದು ಯುವ ಜನತೆಯನ್ನು ಬಡಿದೆಬ್ಬಿಸಿದನೋ ಅಂತಹ ಸಿಡಿಲ ಸಂತ ಸ್ವಾಮಿ ವಿವೇಕಾನಂದ.
ಭಾರತದ ಯುವವರ್ಗದ ಚೈತನ್ಯವನ್ನು ಬಡಿದೆಬ್ಬಿಸಿದ ಸಿಡಿಲ ಸಂತ ಸ್ವಾಮಿ ವಿವೇಕಾನಂದ
-ಶ್ರೀವಿದ್ಯಾ
ಜನವರಿ ೧೨, ೧೮೬೩ ರಂದು ಕೊಲ್ಕತ್ತಾದ ಸಿಮ್ಲ ಎಂಬ ಭಾಗದಲ್ಲಿ ನರೇಂದ್ರನಾಥ ದತ್ತ ಜನಿಸಿದನು. ಸ್ವಾಮಿ ವಿವೇಕಾನಂದರ ಹುಟ್ಟು ಹೆಸರು ನರೇಂದ್ರನಾಥ ದತ್ತ. ತಂದೆ ವಿಶ್ವನಾಥ ದತ್ತ, ತಾಯಿ ಭುವನೇಶ್ವರಿ.
ತಂದೆ ವಕೀಲರಾಗಿದ್ದು, ಬೇಕಾದಷ್ಟು ವಿಷಯಗಳನ್ನು ತಿಳಿದುಕೊಂಡಿದ್ದರು ಮತ್ತು ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ತಾಯಿ ನೋಡುವುದಕ್ಕೆ ಮತ್ತು ನಡೆನುಡಿಗಳಲ್ಲಿ ರಾಣಿಯಂತಿದ್ದಳು. ಎಲ್ಲರೂ ಆಕೆಯನ್ನು ಗೌರವ ಆದರಗಳಿಂದ ಕಾಣುತ್ತಿದ್ದರು.ಅವಳಿಗೆ ಭಗವಂತನಲ್ಲಿ ತುಂಬ ಭಕ್ತಿ. ಅವಳಿಗೆ ಇದ್ದ ಒಂದು ವಿಶೇಷ ಶಕ್ತಿಯೆಂದರೆ ಅಸಾಧಾರಣವಾದ ನೆನಪು. ರಾಮಾಯಣ, ಮಹಾಭಾರತದ ಅನೇಕ ಭಾಗಗಳು ಅವಳಿಗೆ ಬಾಯಲ್ಲೇ ಬರುತ್ತಿದ್ದವು.
ನರೇನ್ ಬೆಳೆಯುತ್ತ ಬೆಳೆಯುತ್ತ ಅಸಾಧ್ಯ ತುಂಟನಾದ. ಅವನ ಬದುಕಿನಲ್ಲಿ ಮೊದಲ ದೊಡ್ಡ ಗುರು ತಾಯಿ. ತಾಯಿಯಿಂದ ನರೇನ್ ರಾಮಾಯಣ, ಮಹಾಭಾರತಗಳನ್ನು ಕೇಳಿದ್ದಷ್ಟೇ ಅಲ್ಲದೇ ಧೈರ್ಯ, ಸತ್ಯಪ್ರಿಯತೆಗಳನ್ನೂ ಕಲಿತ. ಜೊತೆಯಲ್ಲಿ ಔದಾರ್ಯ ಗುಣ ಬೆಳೆಯಿತು. ಬಡವರು ಹಾಗೂ ಸಂನ್ಯಾಸಿಗಳು ಭಿಕ್ಷೆ ಬೇಡಿದಾಗ ಅವನ ಮನಸ್ಸು ಕರಗಿ ಕೈಯಲ್ಲಿ ಏನು ಇರುತ್ತದೆಯೋ ಅದನ್ನು ದಾನ ಮಾಡುತ್ತಿದ್ದನು. ವೈರಾಗ್ಯ ಮತ್ತು ಅಲೌಕಿಕತೆಗಳು ಬಾಲ್ಯದಿಂದಲೇ ನರೇಂದ್ರನ ಸ್ವಭಾವವಾಗಿ ಮೈಗೂಡಿದ್ದವು. ಚಿಕ್ಕಂದಿನಿಂದಲೂ ನರೇಂದ್ರನಿಗೆ ಅಸಾಧಾರಣವಾದ ಅನುಭವವಿತ್ತು. ಅವನು ಕಣ್ಣು ಮುಚ್ಚಿದಾಗ ಅವನಿಗೆ ಹುಬ್ಬುಗಳ ನಡುವೆ ಒಂದು ಬೆಳಕು ಕಾಣಿಸಿಕೊಳ್ಳುತ್ತಿತ್ತು. ಅವನಲ್ಲಿ ವಿಶಿಷ್ಟವಾದ ಏಕಾಗ್ರತೆಯ ಗುಣ ಇತ್ತು. ವಿರಾಮದ ವೇಳೆಗಳಲ್ಲಿ ಧ್ಯಾನದಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದನು.





