ವಿಷಯದ ವಿವರಗಳಿಗೆ ದಾಟಿರಿ

ಜನವರಿ 12, 2013

1

ಭಾರತದ ಯುವವರ್ಗದ ಚೈತನ್ಯವನ್ನು ಬಡಿದೆಬ್ಬಿಸಿದ ಸಿಡಿಲ ಸಂತ ಸ್ವಾಮಿ ವಿವೇಕಾನಂದ

‍ನಿಲುಮೆ ಮೂಲಕ

-ಶ್ರೀವಿದ್ಯಾ

ಜನವರಿ ೧೨, ೧೮೬೩ ರಂದು ಕೊಲ್ಕತ್ತಾದ ಸಿಮ್ಲ ಎಂಬ ಭಾಗದಲ್ಲಿ ನರೇಂದ್ರನಾಥ ದತ್ತ ಜನಿಸಿದನು. ಸ್ವಾಮಿ ವಿವೇಕಾನಂದರ ಹುಟ್ಟು ಹೆಸರು ನರೇಂದ್ರನಾಥ ದತ್ತ. ತಂದೆ ವಿಶ್ವನಾಥ ದತ್ತ, ತಾಯಿ ಭುವನೇಶ್ವರಿ.

ತಂದೆ ವಕೀಲರಾಗಿದ್ದು, ಬೇಕಾದಷ್ಟು ವಿಷಯಗಳನ್ನು ತಿಳಿದುಕೊಂಡಿದ್ದರು ಮತ್ತು ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು. ತಾಯಿ ನೋಡುವುದಕ್ಕೆ ಮತ್ತು ನಡೆನುಡಿಗಳಲ್ಲಿ ರಾಣಿಯಂತಿದ್ದಳು. ಎಲ್ಲರೂ ಆಕೆಯನ್ನು ಗೌರವ ಆದರಗಳಿಂದ ಕಾಣುತ್ತಿದ್ದರು.ಅವಳಿಗೆ ಭಗವಂತನಲ್ಲಿ ತುಂಬ ಭಕ್ತಿ. ಅವಳಿಗೆ ಇದ್ದ ಒಂದು ವಿಶೇಷ ಶಕ್ತಿಯೆಂದರೆ ಅಸಾಧಾರಣವಾದ ನೆನಪು. ರಾಮಾಯಣ, ಮಹಾಭಾರತದ ಅನೇಕ ಭಾಗಗಳು ಅವಳಿಗೆ ಬಾಯಲ್ಲೇ ಬರುತ್ತಿದ್ದವು.

ನರೇನ್ ಬೆಳೆಯುತ್ತ ಬೆಳೆಯುತ್ತ ಅಸಾಧ್ಯ ತುಂಟನಾದ. ಅವನ ಬದುಕಿನಲ್ಲಿ ಮೊದಲ ದೊಡ್ಡ ಗುರು ತಾಯಿ. ತಾಯಿಯಿಂದ ನರೇನ್ ರಾಮಾಯಣ, ಮಹಾಭಾರತಗಳನ್ನು ಕೇಳಿದ್ದಷ್ಟೇ ಅಲ್ಲದೇ ಧೈರ್ಯ, ಸತ್ಯಪ್ರಿಯತೆಗಳನ್ನೂ ಕಲಿತ. ಜೊತೆಯಲ್ಲಿ ಔದಾರ್ಯ ಗುಣ ಬೆಳೆಯಿತು. ಬಡವರು ಹಾಗೂ ಸಂನ್ಯಾಸಿಗಳು ಭಿಕ್ಷೆ ಬೇಡಿದಾಗ ಅವನ ಮನಸ್ಸು ಕರಗಿ ಕೈಯಲ್ಲಿ ಏನು ಇರುತ್ತದೆಯೋ ಅದನ್ನು ದಾನ ಮಾಡುತ್ತಿದ್ದನು. ವೈರಾಗ್ಯ ಮತ್ತು ಅಲೌಕಿಕತೆಗಳು ಬಾಲ್ಯದಿಂದಲೇ ನರೇಂದ್ರನ ಸ್ವಭಾವವಾಗಿ ಮೈಗೂಡಿದ್ದವು. ಚಿಕ್ಕಂದಿನಿಂದಲೂ ನರೇಂದ್ರನಿಗೆ ಅಸಾಧಾರಣವಾದ ಅನುಭವವಿತ್ತು. ಅವನು ಕಣ್ಣು ಮುಚ್ಚಿದಾಗ ಅವನಿಗೆ ಹುಬ್ಬುಗಳ ನಡುವೆ ಒಂದು ಬೆಳಕು ಕಾಣಿಸಿಕೊಳ್ಳುತ್ತಿತ್ತು. ಅವನಲ್ಲಿ ವಿಶಿಷ್ಟವಾದ ಏಕಾಗ್ರತೆಯ ಗುಣ ಇತ್ತು. ವಿರಾಮದ ವೇಳೆಗಳಲ್ಲಿ ಧ್ಯಾನದಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದನು.

ಆರನೆಯ ವಯಸ್ಸಿನಲ್ಲಿ ನರೇಂದ್ರನನ್ನು ಒಂದು ಪ್ರೈಮರಿ ಶಾಲೆಗೆ ಹಾಕಿದರು. ಅಲ್ಲಿ ಅವನು ಕಲಿತದ್ದನ್ನು ಕೇಳಿ ಮನೆಯವರು ಗಾಬರಿಗೊಂಡರು. ಅವನು ಕಲಿತದ್ದು ಹೆಚ್ಚಾಗಿ ಬಯ್ಗುಳಿನ ಪದಗಳೇ.. !! ತಕ್ಷಣವೇ ಶಾಲೆ ಬಿಡಿಸಿ ಮನೆಯಲ್ಲೇ ಅವನ ಪಾಠಕ್ಕೆ ವ್ಯವಸ್ಥೆ ಮಾಡಿಸಿದರು. ಆಟಪಾಠಗಳಲೆಲ್ಲ ನರೇಂದ್ರನೇ ನಾಯಕ. ಯಾವಾಗಲೂ ಹರ್ಷ ತುಂಬಿ ತುಳುಕುತ್ತಿದ್ದ ಈ ಬಾಲಕ ನರೇಂದ್ರ ಈಜು, ಕುಸ್ತಿ, ಮುಷ್ಟಿಯುದ್ಧ, ಕುದುರೆಸವಾರಿ ಇವುಗಳಲ್ಲೇ ಕಾಲ ಕಳೆಯುತ್ತಿದ್ದ. ಸಂಗೀತವೆಂದರೆ ಅವನಿಗೆ ಪರಮ ಪ್ರೇಮ. ನರೇಂದ್ರನಿಗೆ ತಂದೆಯನ್ನು ಕಂಡರೆ ಅಪಾರವಾದ ಮೆಚ್ಚುಗೆ, ತುಂಬ ಪ್ರೀತಿ. ತಂದೆಯ ಔದಾರ್ಯ, ಪ್ರಸನ್ನತೆಗಳನ್ನು ಮನಸಾರೆ ಮೆಚ್ಚಿ ಗೌರವಿಸುತ್ತಿದ್ದ. ನರೇಂದ್ರ ಬೆಳೆದಂತೆ ಆಟವಾಡುವುದು ಕಡಿಮೆಯಾಯಿತು. ಪುಸ್ತಕಗಳನ್ನು ಓದುವುದರಲ್ಲಿ ಹೆಚ್ಚು ಆಸಕ್ತಿ ತಳೆದನು.

ಅವನ ಶಾಲಾವ್ಯಾಸಂಗ ಚೆನ್ನಾಗಿ ನಡೆಯುತ್ತಿತ್ತು. ಆದರೆ ಅವನ ತಂದೆ ಅವನನ್ನು ಎರಡು ವರ್ಷ ಬೇರೆ ಊರಿಗೆ ಕರೆದುಕೊಂಡು ಹೋದರು. ಎರಡು ವರ್ಷ ಅವನು ಶಾಲೆಗೆ ಹೋಗಲಾಗಲಿಲ್ಲ. ಅವನು ಹಿಂದಿರುಗಿದಮೇಲೆ ಮೂರು ವರ್ಷದ ಪಾಠಗಳನ್ನು ಒಂದು ವರ್ಷದಲ್ಲಿಯೇ ಓದಿ ಮುಗಿಸಿದನು. ಪರೀಕ್ಷೆ ಹತ್ತಿರ ಬಂದಂತೆ ಕಷ್ಟಪಟ್ಟು ಓದಿದನು. ಎಂಟ್ರೆನ್ಸ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದನು. ಆ ವರ್ಷ ಅವನ ಶಾಲೆಯಲ್ಲಿ ಹೀಗೆ ಪಾಸಾದವನು ಇವನೊಬ್ಬನೇ. ಮುಂದಿನ ವರ್ಷ ಅವನು ಜನರಲ್ ಅಸೆಂಬ್ಲೀಸ್ ಇನ್ಸ್‌ಟಿಟ್ಯೂಷನ್‍ಗೆ ಸೇರಿದನು. ನರೇಂದ್ರ ಎಷ್ಟು ಬುದ್ಧಿವಂತನೆಂದು ಅಲ್ಲಿನ ಪ್ರಾಧ್ಯಾಪಕರು ಆಶ್ಚರ್ಯಪಟ್ಟರು.

ಪ್ರಿನ್ಸಿಪಾಲರಾದ ಪ್ರೊ. ಡಬ್ಲ್ಯು. ಡಬ್ಲ್ಯು.ಹೇಸ್ಟಿಯವರು ನರೇಂದ್ರನಂತಹ ಮತ್ತೊಬ್ಬ ವಿದ್ಯಾರ್ಥಿಯನ್ನು ಎಂದೂ ನೋಡಿಲ್ಲವೆಂದು ಹೇಳಿದರು. ನರೇಂದ್ರ ಎಲ್ಲ ವಿಷಯಗಳ ಬಗ್ಗೆಯೂ, ಅವನಿಗೆ ಸಿಕ್ಕ ಎಲ್ಲ ಪುಸ್ತಕಗಳನ್ನೂ ಕಷ್ಟಪಟ್ಟು ಓದುತ್ತಿದ್ದನು. ೧೮೮೧ರಲ್ಲಿ ಎಫ್.ಎ. ಪರೀಕ್ಷೆಯನ್ನು ಪಾಸು ಮಾಡಿದನು. ಬಿ.ಎ. ಪದವಿಯನ್ನು ೧೮೮೪ರಲ್ಲಿ ಪಡೆದನು.

ನರೇಂದ್ರ ನಾಲ್ಕೈದು ವರ್ಷಗಳ ಕಾಲ ಸಂಗೀತವನ್ನೂ ಅಭ್ಯಾಸ ಮಾಡಿದ. ಅನೇಕ ವಾದ್ಯಗಳನ್ನು ನುಡಿಸುವುದನ್ನೂ ಕಲಿತ. ಒಳ್ಳೆಯ ಹಾಡುಗಾರನೆಂದೂ ಹೆಸರು ಪಡೆದ. ಅವನು ಚೆನ್ನಾಗಿ ಹಾಡುತ್ತಿದ್ದುದರಿಂದ ಅನೇಕ ಸಂಗೀತಕೂಟಗಳಿಗೆ ಅವನನ್ನು ಆಹ್ವಾನಿಸುತ್ತಿದ್ದರು. ಅಲ್ಲಿಯ ವಿನೋದದಲ್ಲಿ ಅವನು ಸಂತೋಷಪಡುತ್ತಿದ್ದ. ಆದರೆ ವೈಚಾರಿಕ ಸಂಭಾಷಣೆ ಅವನಿಗೆ ಹೆಚ್ಚು ಸಂತೋಷ ನೀಡುತ್ತಿತ್ತು. ಅನೇಕ ವೇಳೆ ಅವನ ಸ್ನೇಹಿತರೊಂದಿಗೆ ಮತ್ತು ವಯಸ್ಸಾದವರೊಂದಿಗೆ, ಗಂಭೀರವಾದ ಚರ್ಚೆಯಲ್ಲಿ ತೊಡಗುತ್ತಿದ್ದನು. ಅವನು ಚೆನ್ನಾಗಿ ವಾದಿಸುತ್ತಿದ್ದನು; ಅದರಲ್ಲಿ ಅವನನ್ನು ಮೀರಿಸುವುದು ಬೇರೆಯವರಿಗೆ ಅಸಾಧ್ಯವಾಗಿತ್ತು. ಆ ಸಮಯದಲ್ಲಿ ನರೇಂದ್ರ ಧರ್ಮದ ಸಮಸ್ಯೆಗಳಲ್ಲಿ ಆಸಕ್ತನಾದನು. ಆಗಿನ ಕಾಲದಲ್ಲಿ ಅನೇಕ ಯುವಕರಂತೆ ಅವನೂ ಬ್ರಹ್ಮ ಸಮಾಜದ ಸದಸ್ಯನಾದನು ಮತ್ತು ಶ್ರೀ ಕೇಶವಚಂದ್ರ ಸೇನರ ಉಪನ್ಯಾಸಗಳಿಗೆ ಹೋಗುತ್ತಿದ್ದನು. ಅನೇಕ ವೇಳೆ ಬ್ರಹ್ಮ ಸಮಾಜದಲ್ಲಿ ಅವನಿಗೆ ಹಾಡುವಂತೆ ಹೇಳುತ್ತಿದ್ದರು. ಆದರೆ ಅವನಿಗೆ ಕಾಡುತ್ತಿದ್ದ ಪ್ರಶ್ನೆಯೆಂದರೆ, ದೇವರಿರುವನೆ ಅಥವಾ ಇಲ್ಲವೆ; ಯಾರಾದರೂ ಅವನನ್ನು ನೋಡಿರುವರೆ ಎಂಬುದು. ಈ ಪ್ರಶ್ನೆಗೆ ಉತ್ತರವನ್ನು ಪಡೆಯಲು ಮಹರ್ಷಿ ದೇವೇಂದ್ರನಾಥರೂ ಸೇರಿದಂತೆ ಅನೇಕ ಧಾರ್ಮಿಕ ಮುಖಂಡರನ್ನು ಭೇಟಿಯಾದನು. ಆದರೆ ಯಾರೂ ಅವನ ಸಂದೇಹವನ್ನು ಪರಿಹರಿಸಲಾಗಲಿಲ್ಲ. ಹಿಂದೂಧರ್ಮದ ಅನೇಕ ಬೋಧನೆಗಳಲ್ಲಿ ಅವನು ವಿಶ್ವಾಸವನ್ನು ಕಳೆದುಕೊಂಡಿದ್ದನು.ಯಾವುದನ್ನು ನಂಬಬೇಕೆನ್ನುವುದು ಅವನಿಗೆ ಗೊತ್ತಾಗುತ್ತಿರಲಿಲ್ಲ.

ಒಂದು ದಿನ ಶ್ರೀರಾಮಕೃಷ್ಣರನ್ನು ಭೇಟಿಯಾಗಲು ಅವನು ನಿರ್ಧರಿಸಿದನು. ಶ್ರೀರಾಮಕೃಷ್ಣರು ಒಬ್ಬ ದೊಡ್ಡ ಹಿಂದೂಸಂತರು. ನರೇಂದ್ರ ಕೆಲವು ಸ್ನೇಹಿತರ ಜೊತೆ ಶ್ರೀರಾಮಕೃಷ್ಣರನ್ನು ನೋಡಲು ದಕ್ಷಿಣೇಶ್ವರಕ್ಕೆ ಹೋದನು. ಶ್ರೀರಾಮಕೃಷ್ಣರು ಅವರನ್ನೆಲ್ಲ ಪ್ರೀತಿಯಿಂದ ಸ್ವಾಗತಿಸಿದರು.ಶ್ರೀರಾಮಕೃಷ್ಣರ ಕೋರಿಕೆಯಂತೆ ನರೇಂದ್ರ ಎರಡು ಹಾಡುಗಳನ್ನು ಹಾಡಿದನು. ಅನಂತರ ಶ್ರೀರಾಮಕೃಷ್ಣರು ಅವನನ್ನು ಇನ್ನೊಂದು ಕೊಠಡಿಗೆ ಕರೆದುಕೊಂಡು ಹೋದರು. ನರೇಂದ್ರನನ್ನು ಅವರು ಬಹು ದೂರ ಪ್ರಯಾಣ ಮಾಡಿ ಆಗ ತಾನೆ ಬಂದ ತಮ್ಮ ಪ್ರಿಯ ಸ್ನೇಹಿತನಂತೆ ಕಂಡರು. ಅವರು ಸಂತೋಷದಿಂದ ಅತ್ತುಬಿಟ್ಟರು. ನರೇಂದ್ರನಿಗೆ ತಮ್ಮ ಕೈಯಿಂದಲೆ ಸಿಹಿತಿಂಡಿ ತಿನ್ನಿಸಿದರು. ನರೇಂದ್ರನಿಗೆ ಇವೆಲ್ಲ ಅರ್ಥವಾಗಲಿಲ್ಲ. ಶ್ರೀರಾಮಕೃಷ್ಣರು ಬಹುಶಃ ಹುಚ್ಚರಾಗಿರಬೇಕೆಂದು ಭಾವಿಸಿದನು. ಆದರೆ ಮತ್ತೊಮ್ಮೆ ಬರುವುದಾಗಿ ಆಶ್ವಾಸನೆ ಇತ್ತನು. ಕೊಠಡಿಯಿಂದ ಹಿಂದಿರುಗಿದಮೇಲೆ ಶ್ರೀರಾಮಕೃಷ್ಣರು ದೇವರ ಬಗ್ಗೆ ಮಾತನಾಡಿದರು. ನಾವು ನಮ್ಮ ಸ್ನೇಹಿತರನ್ನು ನೋಡುವಂತೆ, ಅವರೊಡನೆ ಮಾತನಾಡುವಂತೆ ದೇವರನ್ನೂ ನೋಡಬಹುದು ಮತ್ತು ಅವರೊಡನೆ ಮಾತುಕತೆಯನ್ನು ಆಡಬಹುದು ಎಂದು ಹೇಳಿದರು. ನರೇಂದ್ರನಿಗೆ ಏನೆಂದೂ ಅರ್ಥವಾಗಲಿಲ್ಲ. ಏಕೆಂದರೆ, ಶ್ರೀರಾಮಕೃಷ್ಣರು ಅಂತಹ ವಿಚಿತ್ರ ರೀತಿಯಲ್ಲಿ ನಡೆದುಕೊಂಡಿದ್ದರು. ಆದರೆ ಅವರು ಒಬ್ಬ ಮಹಾತ್ಮರಂತೆ ನರೇಂದ್ರನಿಗೆ ಕಂಡರು.
ನರೇಂದ್ರ ಸಾಧ್ಯವಾದಾಗಲೆಲ್ಲ ಶ್ರೀರಾಮಕೃಷ್ಣರನ್ನು ಭೇಟಿ ಮಾಡಲು ಪ್ರಾರಂಭಿಸಿದನು. ದಿನಗಳು ಕ್ರಮೇಣ ಕಳೆದಂತೆ ಶ್ರೀರಾಮಕೃಷ್ಣರು ಸಾಧಾರಣ ವ್ಯಕ್ತಿಗಳಲ್ಲ ಎಂಬುದು ಅವನಿಗೆ ಅರ್ಥವಾಯಿತು. ಉತ್ತರ ಸಿಕ್ಕದ ಅನೇಕ ಪ್ರಶ್ನೆಗಳು ಮನಸ್ಸಿನಲ್ಲಿದ್ದರೂ ನರೇಂದ್ರನಿಗೆ ಶ್ರೀರಾಮಕೃಷ್ಣರಲ್ಲಿ ಆಳವಾದ ಗೌರವ ಉಂಟಾಯಿತು. ಶ್ರೀರಾಮಕೃಷ್ಣರು ನರೇಂದ್ರನ ಅನೇಕ ಗುಣಗಳ ಬಗ್ಗೆ ಇತರ ಭಕ್ತರಿಗೆ ತಿಳಿಸುತ್ತಿದ್ದರು. ನರೇಂದ್ರ ಒಂದು ದಿನ ಮಹಾನ್ ವ್ಯಕ್ತಿಯಾಗುವನೆಂದು ಶ್ರೀರಾಮಕೃಷ್ಣರಲ್ಲಿ ವಿಶ್ವಾಸವಿತ್ತು. ಶ್ರೀರಾಮಕೃಷ್ಣರಲ್ಲಿ ನರೇಂದ್ರನಲ್ಲಿ ಅಪಾರ ವಿಶ್ವಾಸ; ಅವನೆಂದಿಗೂ ತಪ್ಪು ಮಾಡುವುದಿಲ್ಲವೆಂದು ಅವರಿಗೆ ಗೊತ್ತಿತ್ತು. ನರೇಂದ್ರನಿಗೂ ಶ್ರೀರಾಮಕೃಷ್ಣರ ಮೇಲೆ ಗಾಢಪ್ರೇಮ ಬೆಳೆಯಿತು. ತನ್ನ ವ್ಯಾಸಂಗದಲ್ಲಿ ನಿರತನಾಗಿದ್ದರೂ, ಆಗಾಗ ದಕ್ಷಿಣೇಶ್ವರಕ್ಕೆ ಹೋಗುತ್ತಿದ್ದನು. ನರೇಂದ್ರ ಹಾಡಿದರೆ ಶ್ರೀರಾಮಕೃಷ್ಣರು ಸಂತೋಷ ಪಡುತ್ತಿದ್ದರು; ಕೆಲವು ವೇಳೆ ಕೇಳುತ್ತ ಸಮಾಧಿಸ್ಥರಾಗುತ್ತಿದ್ದರು. ನರೇಂದ್ರ ಸ್ವತಂತ್ರವಾಗಿ ಆಲೋಚಿಸುತ್ತಿದ್ದನು. ತನ್ನ ಮನಸ್ಸಿಗೆ ಒಪ್ಪಿಗೆಯಾಗದ ಹೊರತು ಯಾವುದನ್ನೂ ನಂಬುತ್ತಿರಲಿಲ್ಲ. ಅನೇಕ ವೇಳೆ ಶ್ರೀರಾಮಕೃಷ್ಣರು ಹೇಳಿದುದು ಅವನಿಗೆ ಸರಿಯಾಗಿ ಕಾಣದಿದ್ದರೆ, ಅವರೊಂದಿಗೆ ವಾದಿಸುತ್ತಿದ್ದನು. ನರೇಂದ್ರನಿಗೆ ಸ್ವತಂತ್ರ ವಿಚಾರಶಕ್ತಿ ಇದೆ ಎಂದು ಶ್ರೀರಾಮಕೃಷ್ಣರು ಸಂತೋಷಪಟ್ಟರು. ಕಾಲ ಕಳೆದಂತೆ ನರೇಂದ್ರನಿಗೆ ಶ್ರೀರಾಮಕೃಷ್ಣರಲ್ಲಿ ಹೆಚ್ಚು ಹೆಚ್ಚು ನಿಷ್ಠೆ ಬೆಳೆಯಿತು. ಶ್ರೀರಾಮಕೃಷ್ಣರು ನರೇಂದ್ರನಿಗೆ ಅನೇಕ ಉಪದೇಶಗಳನ್ನು ಕೊಟ್ಟರು. ಅವನ್ನು ನರೇಂದ್ರ ಪಾಲಿಸಿದನು. ಹೇಗೆ ಧ್ಯಾನ ಮಾಡಬೇಕೆಂಬುದನ್ನು ರಾಮಕೃಷ್ಣರು ಅವನಿಗೆ ಹೇಳಿಕೊಟ್ಟರು. ಕ್ರಮೇಣ ನರೇಂದ್ರನು ಧ್ಯಾನ ಮತ್ತು ಇತರ ಆಧ್ಯಾತ್ಮಿಕ ಸಾಧನೆಗಳಲ್ಲಿ ಹೆಚ್ಚು ಆಸಕ್ತನಾದನು.

ನರೇಂದ್ರನ ತಂದೆ ೧೮೮೪ರ ಪ್ರಾರಂಭದಲ್ಲಿ ಕಾಲವಾದರು. ತಂದೆಯ ಮರಣದಿಂದ ಅವನ ಜೀವನ ಬುಡಮೇಲಾಯಿತು. ಅವನ ಮನಸ್ಸು ತಳಮಳಗೊಂಡಿತು. ಶ್ರೀರಾಮಕೃಷ್ಣರ ಪದತಲದಲ್ಲಿ ಮಾತ್ರವೇ ಅವನಿಗೆ ಶಾಂತಿ ಸಿಗುತ್ತಿತ್ತು. ೧೮೮೫ರಲ್ಲಿ ಶ್ರೀರಾಮಕೃಷ್ಣರು ಕಾನ್ಸರ್ ರೋಗದಿಂದ ನರಳುತ್ತಿದ್ದರು. ಕಾಶಿಪುರದ ಒಂದು ತೋಟದ ಮನೆಯಲ್ಲಿ ತಂಗಿದರು. ನರೇಂದ್ರ ಹಾಗೂ ಇತರ ಶಿಷ್ಯರು ರಾಮಕೃಷ್ಣರ ಸೇವೆಯನ್ನು ಮಾಡತೊಡಗಿದರು. ನರೇಂದ್ರ ಕೆಲವು ವೇಳೆ ಕುಟುಂಬದ ವ್ಯವಹಾರಕ್ಕಾಗಿ ಕೊಲ್ಕತಾಗೆ ಹೋಗಬೇಕಾಗುತ್ತಿತ್ತು. ಆದರೆ ಅವನು ಉಳಿದ ಕಾಲವನ್ನೆಲ್ಲ ಶ್ರೀರಾಮಕೃಷ್ಣರ ಬಳಿ ಕಳೆಯುತ್ತಿದ್ದನು. ನರೇಂದ್ರ ಶಿಷ್ಯರ ನಾಯಕನಾಗಿದ್ದನು. ಅವನು ಭಗವಂತನ ಸಾಕ್ಷಾತ್ಕಾರಕ್ಕಾಗಿ, ಭಗವಂತನ ದರ್ಶನಕ್ಕಾಗಿ ಹಾತೊರೆಯುತ್ತಿದ್ದನು. ಶ್ರೀರಾಮಕೃಷ್ಣರು ಅವನಿಗೆ ಧ್ಯಾನದ ಬಗ್ಗೆ ಅನೇಕ ಸೂಕ್ಷ್ಮ ಸಲಹೆಗಳನ್ನು ಕೊಟ್ಟರು. ನರೇಂದ್ರ ಧ್ಯಾನದಲ್ಲಿ ಬಹಳ ಸಮಯ ಕಳೆಯುತ್ತಿದ್ದನು. ಅವನಿಗೆ ಧ್ಯಾನದ ಸಮಯದಲ್ಲಿ ಅದ್ಭುತ ಅನುಭವಗಳಾದುವು; ಕೆಲವು ವೇಳೆ ಅವನು ಬಾಹ್ಯಪ್ರಪಂಚವನ್ನು ಸಂಪೂರ್ಣವಾಗಿ ಮರೆಯುತ್ತಿದ್ದನು. ಒಂದು ಸಂಜೆ ನರೇಂದ್ರನಿಗೆ ಅತ್ಯಂತ ಶ್ರೇಷ್ಠ ಆಧ್ಯಾತ್ಮಿಕ ಅನುಭವವಾಯಿತು. ಧ್ಯಾನ ಮಾಡುತ್ತಿದ್ದಾಗ ಅವನಿಗೆ ಬಾಹ್ಯಪ್ರಪಂಚದ ಅರಿವು ಸಂಪೂರ್ಣವಾಗಿ ಹೊರಟುಹೋಯಿತು. ಅವನಿಗೆ ದೇಹದ ಅರಿವು ಇರಲಿಲ್ಲ. ಅವನು ಕೇವಲ ಪರಮಾತ್ಮನನ್ನು ಚಿಂತಿಸುತ್ತಿದ್ದ. ಅವನ ಮನಸ್ಸು ಸಂಪೂರ್ಣವಾಗಿ ಪರಮಾತ್ಮನಿಂದ ತುಂಬಿತ್ತು. ಇದರಿಂದ ಅವನು ಅಪಾರ ಆನಂದ ಮತ್ತು ಸಂತೋಷವನ್ನು ಅನುಭವಿಸಿದನು. ಈ ಅನುಭವಕ್ಕೆ ಸಮಾಧಿ ಎಂದು ಹೆಸರು.

ಶ್ರೀರಾಮಕೃಷ್ಣರು ನರೇಂದ್ರನನ್ನು, ಅವನು ಮುಂದೆ ಮಾಡಬೇಕಾಗಿರುವ ಕಾರ್ಯಕ್ಕೆ ತಯಾರು ಮಾಡಲು ಪ್ರಾರಂಭಿಸಿದರು. ಇತರ ಯುವಶಿಷ್ಯರನ್ನು ನೋಡಿಕೊಳ್ಳುವಂತೆ ಮತ್ತು ಅವರು ಧ್ಯಾನದ ಅಭ್ಯಾಸವನ್ನು ಮುಂದುವರಿಸಲು ಉತ್ತೇಜನ ನೀಡಲು ಅವನಿಗೆ ಹೇಳಿದರು. ಅವರ ಶಿಷ್ಯರೆಲ್ಲರನ್ನೂ, ಸಾಧುಗಳು ಮಾಡುವಂತೆ, ಮನೆಯಿಂದ ಮನೆಗೆ ಹೋಗಿ ಭಿಕ್ಷೆ ಬೇಡುವಂತೆ ಹೇಳಿದರು. ನಂತರ ಕಾವಿ ಬಟ್ಟೆಯನ್ನು ಶಿಷ್ಯರಿಗೆಲ್ಲ ಕೊಟ್ಟು ಅವರನ್ನು ಸಂನ್ಯಾಸ ಜೀವನಕ್ಕೆ ತೊಡಗಿಸಿದರು.

ಶ್ರೀರಾಮಕೃಷ್ಣರ ಅಂತ್ಯ ಬಹು ಬೇಗನೆ ಬಂದಿತು. ೧೮೮೬ರ ಆಗಸ್ಟ್ ೧೬ರಂದು ಶ್ರೀರಾಮಕೃಷ್ಣರು ತಮ್ಮ ಶಿಷ್ಯರನ್ನು ದುಃಖದಲ್ಲಿ ಮುಳುಗಿಸಿ ಕಾಲವಾದರು. ಬಾರಾನಗರದಲ್ಲಿ ಒಬ್ಬ ಭಕ್ತರ ಸಹಾಯದಿಂದ ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ಕೆಲವು ಶಿಷ್ಯರ ಜೊತೆ ತಂಗಿದರು. ಅಲ್ಲಿ ಒಂದು ಶ್ರೀರಾಮಕೃಷ್ಣ ಮಹಾಸಂಘದ ಮೊದಲ ಮಠವನ್ನು ಸ್ಥಾಪಿಸಿದರು. ನರೇಂದ್ರ ಭಾರತದಲ್ಲೆಲ್ಲ ಸಂಚರಿಸುವಾಗ ಜನರು ಅವರನ್ನು ಕರೆಯುವಾಗ ‘ಸ್ವಾಮೀಜಿ’ ಎಂದು ಕರೆಯುತ್ತಿದ್ದರು.

ಸ್ವಾಮೀಜಿ ಬಾರಾನಗರಮಠದಲ್ಲಿ ಎರಡು ವರ್ಷಗಳ ಕಾಲ ಇದ್ದರು. ಅವರು ೧೮೮೮ರಲ್ಲಿ ಮಠವನ್ನು ಬಿಟ್ಟು ಒಂದು ವಾರ ಕಾಲ ವಾರಣಾಸಿಗೆ ಹೋದರು. ಅನಂತರ ಸ್ವಾಮೀಜಿ ಉತ್ತರ ಭಾರತದ ಅನೇಕ ಪಟ್ಟಣಗಳಿಗೆ ಭೇಟಿಯಿತ್ತರು. ಹಾತ್ರಾಸ್ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಆಗಿದ್ದ ಶರತ್‍ಚಂದ್ರ ಗುಪ್ತ ಎನ್ನುವವರು ಸ್ವಾಮೀಜಿಯ ಶಿಷ್ಯರಾಗಿ ‘ಸ್ವಾಮಿ ಸದಾನಂದ’ ಎಂಬ ಹೆಸರನ್ನು ಪಡೆದರು. ಅವರಿಬ್ಬರೂ ಹೃಷೀಕೇಶಕ್ಕೆ ಹೋಗಿ ಅಲ್ಲಿ ಸ್ವಲ್ಪ ಕಾಲ ತಪಸ್ಸಿನಲ್ಲಿ ಕಳೆದರು. ಅಲ್ಲಿಯ ಜೀವನ ಕಷ್ಟವಾಗಿತ್ತು. ಆರೋಗ್ಯ ಕೆಟ್ಟಿದ್ದರಿಂದ ಬಾರಾಮಠಕ್ಕೆ ಹಿಂತಿರುಗಿ ಸುಧಾರಿಸಿಕೊಂಡರು.

ಒಂದು ವರ್ಷದ ನಂತರ ಸ್ವಾಮೀಜಿ ಮತ್ತೆ ಪರಿವ್ರಾಜಕರಾಗಿ ಹೊರಟರು. ೧೮೯೦ರಲ್ಲಿ ಬಾರಾನಗರಮಠವನ್ನು ಬಿಟ್ಟು ವಾರಣಾಸಿ ಮತ್ತು ಇತರ ಸ್ಥಳಗಳಿಗೆ ಹೋದರು. ಅನಂತರ, ಹಿಮಾಲಯದಲ್ಲಿ ಸುತ್ತಾಡಿದರು. ಹೃಷಿಕೇಶಕ್ಕೆ ಬಂದರು. ಅಲ್ಲಿ ಸ್ವಾಮೀಜಿಗೆ ಜ್ವರ ಬಂದಿತು. ಸುಧಾರಿಸಿಕೊಂಡು ಅನಂತರ, ಬಯಲುಪ್ರದೇಶಕ್ಕೆ ಬಂದು ಮೀರತ್‍ನಲ್ಲಿ ಕೆಲವು ವಾರಗಳು ತಂಗಿದರು.

ಮೀರತ್‍ನಿಂದ ಹೊರಟು, ಸ್ವಾಮೀಜಿ ವೀರಭೂಮಿಯಾದ ರಜಪುಟಾಣಕ್ಕೆ ಹೋದರು. ಅಲ್ಲಿನ ರಾಜ ಸ್ವಾಮೀಜಿಯಿಂದ ಸ್ಫೂರ್ತಿಗೊಂಡರು. ಸ್ವಾಮೀಜಿ ಇನ್ನೂ ಅನೇಕ ಸ್ಥಳಗಳಿಗೆ ಹೋದರು. ಮೌಂಟ್ ಅಬುವಿನಲ್ಲಿ ಖೇತ್ರಿಯ ಮಹಾರಾಜರನ್ನು ಭೇಟಿಯಾಗಿ ಅವರೊಂದಿಗೆ ಖೇತ್ರಿಗೆ ಹೋದರು. ಸ್ವಾಮೀಜಿ ರಾಜರನ್ನು ಬಹಳವಾಗಿ ಪ್ರೀತಿಸುತ್ತಿದ್ದರು. ರಾಜ ಸ್ವಾಮೀಜಿಗೆ ಅನೇಕ ವಿಧದಲ್ಲಿ ಸಹಾಯವನ್ನು ಮಾಡಿದರು. ಸ್ವಾಮೀಜಿ ಖೇತ್ರಿಯಿಂದ ಹೊರಟು ಈಗಿನ ಮಹಾರಾಷ್ಟ್ರದ ಮೂಲಕ ಹಾದು ದಕ್ಷಿಣ ಭಾರತದ ಅನೇಕ ಸ್ಥಳಗಳಿಗೆ ಭೇಟಿಯಿತ್ತರು. ಮೈಸೂರಿನ ಹಾಗೂ ರಾಮನಾಡಿನ ರಾಜರುಗಳನ್ನು ಭೇಟಿಯಾದರು.

ಅನಂತರ ರಾಮೇಶ್ವರ, ಕನ್ಯಾಕುಮಾರಿಗೆ ಹೋದರು. ಕನ್ಯಾಕುಮಾರಿಯಲ್ಲಿ ಸಮುದ್ರವನ್ನು ಈಜಿ, ಬೃಹತ್ ಬಂಡೆಯೊಂದನ್ನು ಏರಿ ಕುಳಿತು ತಮ್ಮ ಮಾತೃಭೂಮಿಯನ್ನು ಕುರಿತು ಚಿಂತಿಸಿದರು. ಅವರು ಇಡೀ ಭರತಖಂಡವನ್ನು ಉತ್ತರದಿಂದ ದಕ್ಷಿಣದವರೆಗೆ ಮತ್ತು ಪೂರ್ವದಿಂದ ಪಶ್ಚಿಮದವರೆಗೆ ಕಂಡು ಬಂದಿದ್ದರು. ಎಲ್ಲೆಡೆ ಬಡತನ ಮತ್ತು ಕಷ್ಟ. ಸ್ವಾಮೀಜಿ ಜನರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಬಲ್ಲವರಾಗಿದ್ದರು. ಸ್ವಾಮೀಜಿಯವರು ಭಾರತದ ಜನರಿಗಾಗಿ ಮರುಗಿದರು. ತಮ್ಮ ದೇಶವಾಸಿಗಳಿಗೆ ಸಹಾಯ ಮಾಡಲು ಮುಂದೇನು ಮಾಡಬೇಕೆಂದು ಆಲೋಚನಾಮಗ್ನರಾದರು. ಶ್ರೀರಾಮಕೃಷ್ಣರ ಇಚ್ಛೆ ಪೂರೈಸಲು ಅಮೆರಿಕದ ಸರ್ವಧರ್ಮ ಸಮ್ಮೇಳನಕ್ಕೆ ಹೋಗಲು ನಿರ್ಧರಿಸಿದರು.

ಅನಂತರ ಸ್ವಾಮೀಜಿ ಮದರಾಸಿಗೆ ಹೋದರು. ಅಲ್ಲಿ ಅನೇಕ ಬುದ್ಧಿವಂತ ಉತ್ಸಾಹಿ ತರುಣರು ಅವರ ಅನುಯಾಯಿಗಳಾದರು. ಅವರಿಗೆ ಸ್ವಾಮೀಜಿ ಸರ್ವಧರ್ಮ ಸಮ್ಮೇಳನಕ್ಕೆ ಹೋಗುವ ವಿಷಯವನ್ನು ತಿಳಿಸಿದರು. ಅಲ್ಲಿನ ತರುಣ ಶಿಷ್ಯರು ಹಣವನ್ನು ಸಂಗ್ರಹಿಸಿದರು ಹಾಗೂ ಖೇತ್ರಿಯ ಮಹಾರಾಜ ಟಿಕೆಟ್, ಪ್ರಯಾಣಕ್ಕೆ ಬೇಕಾಗುವ ಎಲ್ಲ ವ್ಯವಸ್ಥೆಗಳನ್ನು ಮಾಡಿಸಿದರು. ಹಾಗೂ ಸ್ವಾಮೀಜಿಯವರಿಗೆ ಮಹಾರಾಜ ‘ವಿವೇಕಾನಂದ’ ಎಂಬ ಹೆಸರನ್ನು ಸೂಚಿಸಿದರು. ಸ್ವಾಮೀಜಿಯವರು ಒಪ್ಪಿ ಆ ಹೆಸರನ್ನು ಇಟ್ಟುಕೊಂಡರು.

ಸ್ವಾಮಿ ವಿವೇಕಾನಂದರು ೧೮೯೩ ರ ಮೇ ೩೧ರಂದು ಬೊಂಬಾಯಿಯಲ್ಲಿ ಹಡಗನ್ನು ಹತ್ತಿದರು. ಸಿಲೋನ್, ಸಿಂಗಪುರ, ಜಪಾನ್ ಇವುಗಳ ಮೂಲಕವಾಗಿ ಹಡಗು ಅಮೇರಿಕಾ ದೇಶವನ್ನು ಮುಟ್ಟಿತು. ಅಲ್ಲಿಂದ ಸ್ವಾಮೀಜಿ ಚಿಕಾಗೋ ನಗರಕ್ಕೆ ಬಂದರು. ಕೆಲವು ದಿನಗಳ ನಂತರ ಸ್ವಾಮೀಜಿ ವಿಚಾರಿಸಲು ಮಾಹಿತಿಕೇಂದ್ರಕ್ಕೆ ಹೋದರು. ಸಮ್ಮೇಳನವು ಸೆಪ್ಟೆಂಬರ್‍ ತಿಂಗಳಲ್ಲಿ ನಡೆಯುವುದು ಎಂದು ತಿಳಿದು ಕಂಗಾಲಾದರು. ಪ್ರತಿದಿನವು ಹಣ ನೀರಿನಂತೆ ಖರ್ಚಾಗುತ್ತಿತ್ತು. ಚಿಕಾಗೋಗಿಂತ ಬಾಸ್ಟನ್ನಿನಲ್ಲಿದ್ದರೆ ಖರ್ಚು ಕಡಿಮೆ ಎಂದು ತಿಳಿದು ಅಲ್ಲಿಗೆ ಹೊರಟರು.

ರೈಲಿನಲ್ಲಿ ಶ್ರೀಮಂತಳೂ ಸುಸಂಸ್ಕೃತಳೂ ಆದ ಮಿಸ್ ಸ್ಯಾನ್‍ಬಾನ್ ಎಂಬ ಮಹಿಳೆ ಸ್ವಾಮೀಜಿಯವರ ಗಂಭೀರ ವ್ಯಕ್ತಿತ್ವ ಮತ್ತು ಸೊಗಸಾದ ಸಂಭಾಷಣೆಯನ್ನು ಮೆಚ್ಚಿ ತಮ್ಮ ಮನೆಯಲ್ಲಿ ಇರಬಹುದೆಂದು ಕೇಳಿಕೊಂಡಳು. ಸ್ವಾಮೀಜಿ ಒಪ್ಪಿ ಇವರ ಮನೆಗೆ ಹೋದರು. ಆಕೆಯಿಂದ ಸ್ವಾಮೀಜಿಯವರಿಗೆ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ರೈಟರ ಪರಿಚಯವಾಯಿತು. ಸ್ವಾಮೀಜಿಯವರನ್ನು ಜನರಿಗೆ ಪರಿಚಯ ಮಾಡಿಸಲು ರೈಟರು ಒಂದು ಪತ್ರವನ್ನು ಬರೆದು ಹಾಗೂ ಟಿಕೆಟ್ ತೆಗೆದು ಚಿಕಾಗೋಗೆ ಕಳುಹಿಸಿದರು. ಆದರೆ ಸ್ವಾಮೀಜಿ ಚಿಕಾಗೋದಲ್ಲಿ ಎಲ್ಲಿ ಇಳಿಯಬೇಕೆಂದು ಮರೆತಿದ್ದರು. ಒಂದು ಸಣ್ಣ ಸ್ಟೇಷನ್‍ನಲ್ಲಿ ಇಳಿದುಬಿಟ್ಟರು. ಆ ನಗರದ ಜನರಿಗೆ ಇಂಗ್ಲೀಷ್ ಗೊತ್ತಿರಲಿಲ್ಲ. ಅವರು ಜರ್ಮನರು. ಎಲ್ಲಿಗೆ ಹೋಗಬೇಕು ಎಲ್ಲಿ ತಂಗಬೇಕು ಎಂದು ಸ್ವಾಮೀಜಿಯವರಿಗೆ ತೋಚುತ್ತಿರಲಿಲ್ಲ. ದೇವರ ಕೃಪೆಯಿಂದ ಒಬ್ಬಳು ಶ್ರೀಮಂತ ಮಹಿಳೆ ಅವರನ್ನು ತಮ್ಮ ಮನೆಯಲ್ಲಿ ಉಪಚರಿಸಿ ಮರುದಿನ ಸರ್ವಧರ್ಮ ಸಮ್ಮೇಳನಕ್ಕೆ ಕರೆದುಕೊಂಡುಹೋದಳು.

ವಿಶ್ವಧರ್ಮ ಸಮ್ಮೇಳನದಲ್ಲಿ (ಸೆಪ್ಟೆಂಬರ್ ೧೧ರ ಸೋಮವಾರ) ಹಲವಾರು ದೇಶಗಳಿಂದ ವಿವಿಧ ಧರ್ಮಗಳ ಅನೇಕ ಪ್ರತಿನಿಧಿಗಳು ಹಾಜರಾಗಿದ್ದರು. ಭಾಷಣಗಳು ಆರಂಭವಾಯಿತು. ಸ್ವಾಮೀಜಿಯವರ ಸರದಿ ಬಂದಾಗ ಅವರು ಪ್ರೇಕ್ಷಕರನ್ನು ‘ಅಮೇರಿಕಾದ ನಹೋದರ ಸಹೋದರಿಯರೇ’ ಎಂದು ಸಂಬೋಧಿಸಿದರು. ಹಾಗೂ ಹಿಂದೂ ಧರ್ಮದ ಮಹತ್ವಗಳನ್ನು ಸಾರಿದರು. ಅಂದಿನಿಂದ ಸ್ವಾಮಿ ವಿವೇಕಾನಂದರ ಕೀರ್ತಿ ಅಮೇರಿಕಾದಲ್ಲಿ ಗಳಿಸಿತು. ಸ್ವಾಮೀಜಿಯವರ ಕೀರ್ತಿ ಕೇಳಿ ಭಾರತೀಯರಿಗೆ ಪಾರವಿಲ್ಲದ ಆನಂದವಾಯಿತು. ಸ್ವಾಮೀಜಿ ಭಾರತಕ್ಕೆ ಮರಳುವುದಕ್ಕೆ ಕಾಯುತ್ತಿದ್ದರು. ಸ್ವಾಮೀಜಿ ಶ್ರೀರಾಮಕೃಷ್ಣರ ಸಂದೇಶಗಳನ್ನುಜಗತ್ತಿಗೆಲ್ಲ ಸಾರಿದರು. ಅಮೇರಿಕಾ, ಲಂಡನ್ ದೇಶಗಳಲ್ಲಿ ಉಪನ್ಯಾಸ ಮಾಡಿದರು. ಸ್ವಾಮೀಜಿ ಎಲ್ಲೇ ಇದ್ದರೂ ಭಾರತದಲ್ಲಿನ ಬಡಜನರನ್ನು ಮರೆಯುತ್ತಿರಲಿಲ್ಲ. ಅವರಿಗೆ ಹೇಗಾದರೂ ಮಾಡಿ ಸಹಾಯ ಮಾಡಬೇಕೆಂದು ಯಾವಾಗಲೂ ಚಿಂತಿಸುತ್ತಿದ್ದರು. ಭಾರತದಲ್ಲಿ ಇದ್ದ ಶಿಷ್ಯರಿಗೆ ಪತ್ರವನ್ನು ಬರೆದು ಕಳುಹಿಸುತ್ತಿದ್ದರು.

ಮೂರು ವರ್ಷಗಳ ನಂತರ ೧೮೯೭ರಲ್ಲಿ ಭಾರತಕ್ಕೆ ಹಿಂತಿರುಗಿದರು. ಮೊದಲು ಕೊಲ್ಕತ್ತೆಗೆ ಬಂದರು. ಜನರು ಹಾಗೂ ರಾಜರುಗಳು ಅವರನ್ನು ಆದರ ಗೌರವಗಳಿಂದ ಸನ್ಮಾನಿಸಿದರು, ಪಾದಪೂಜೆ ಮಾಡಿದರು.

ಸ್ವಾಮೀಜಿ ದೇಶದಲ್ಲೆಲ್ಲ ಒಂದು ಪ್ರಚಂಡ ಸುಂಟರಗಾಳಿಯಂತೆ ಸಂಚರಿಸಿದರು. ಶ್ರೀರಾಮಕೃಷ್ಣ ಮಹಾಸಂಘವನ್ನು ಸ್ಥಾಪಿಸಿದರು. ಭರತಖಂಡದ ನಾನಾ ಕಡೆಗಳಲ್ಲಿ ಶಾಖೆಯನ್ನು ತೆರೆದರು. ಜನಜಾಗೃತಿಯನ್ನು ಮೂಡಿಸಿದರು. ಪರೋಪಕಾರಕ್ಕಾಗಿ ಹಲವು ಸಂಸ್ಥೆಗಳನ್ನು ಸ್ವಾಮೀಜಿ ತೆರೆದರು. ಆಸ್ಪತ್ರೆಗಳು, ವಿದ್ಯಾಸಂಸ್ಥೆಗಳು, ವೃದ್ಧಾಶ್ರಮಗಳು, ತಾಂತ್ರಿಕ ಮತ್ತು ಔದ್ಯೋಗಿಕ ಶಿಕ್ಷಣಾಲಯಗಳು ಮುಂತಾದವುಗಳನ್ನು ತೆರೆದರು. ಶ್ರೀರಾಮಕೃಷ್ಣರ ಮಹಾಕಾರ್ಯವನ್ನು ವಿವೇಕಾನಂದರು ಪೂರ್ಣಗೊಳಿಸಿದರು. ವಿಶ್ರಾಂತಿ ಇಲ್ಲದೆ ದುಡಿಯುತ್ತಿರುವ ವಿವೇಕಾನಂದರ ದೇಹ ಜರ್ಜರಿತವಾಗಿತ್ತು. ಮೂವತ್ತೊಂಬತ್ತು ವರ್ಷ ತುಂಬಿತ್ತು. ೧೯೦೨ನೇ ಜುಲೈ ೪ರಂದು ಇಹಲೋಕದ ಯಾತ್ರೆಯನ್ನು ಸಮಾಪ್ತಿಗೊಳಿಸಿದರು… !!

ಸ್ವಾಮಿ ವಿವೇಕಾನಂದರು ಎಲ್ಲೇ ಹೋದರೂ ಭಾರತದ ಬಡಸ್ಥಿತಿಯನ್ನು ಕುರಿತು ಚಿಂತಿಸುತ್ತಿದ್ದರು. ಭಾರತದ ಧೂಳೇ ಅವರ ಪವಿತ್ರಸ್ಥಾನವೆಂದು ಹೇಳಿದ್ದರು. ಭಾರತದ ಯುವಕರು ಬಲಿಷ್ಠರಾಗಬೇಕೆಂದು ಹಾಗೂ ನಮ್ಮ ಹಿಂದೂ ಧರ್ಮದ ಮಹತ್ವ ಎಲ್ಲರಿಗೂ ತಿಳಿಯಬೇಕೆಂದು ಅವರ ಕನಸಾಗಿತ್ತು. ಮಹಿಳೆಯರು ವಿದ್ಯಾವಂತರಾಗಬೇಕು, ಮಹಿಳೆಯರಿಗೆ ಬೆಂಬಲ ನೀಡಿ ಗೌರವಿಸಬೇಕು ಎಂದು ಹೇಳುತ್ತಿದ್ದರು. ಹಳ್ಳಿಯ ಮಕ್ಕಳಿಗೆ, ಮಹಿಳೆಯರಿಗೆ ಶಾಲೆ ತೆರೆಸಿ ಉತ್ತಮ ಶಿಕ್ಷಣ ನೀಡಬೇಕೆಂದು ವ್ಯವಸ್ಥೆ ಮಾಡಿಸಿದ್ದರು. ಅವರ ಕನಸನ್ನು ನನಸಾಗಿ ಮಾಡಲು ಪ್ರಯತ್ನ ಪಟ್ಟವರು ನಮ್ಮ ಸೋದರಿ ನಿವೇದಿತಾ !! ವಿವೇಕಾನಂದರು ರಾಣಿ ಲಕ್ಷ್ಮೀಬಾಯಿಯ ಜೀವನವನ್ನು ಜನರ ಮುಂದೆ ಆದರ್ಶವಾಗಿಟ್ಟು ಸ್ಫೂರ್ತಿ ನೀಡುತ್ತಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟಗರರನ್ನು ಹೊಗಳುತ್ತಿದ್ದರು. ಭಾರತಮಾತೆಯನ್ನು ಅಪಾರ ಭಕ್ತಿಯಿಂದ ಗೌರವಿಸಿ ಪ್ರೀತಿಸುತ್ತಿದ್ದರು. ಅವರಿಂದಲೇ ಇಂದು ಭಾರತದ ಯುವಕರು ಜಾಗೃತರಾಗುತ್ತಿದ್ದಾರೆ. ನಮ್ಮ ಮುಂದೆ ಅವರ ಆದರ್ಶಗಳು ಸದಾ ಇರಲಿ !!

ಇಂದಿಗೂ ಭಾರತದ ಅನೇಕ ಕಡೆಗಳಲ್ಲಿ ವಿವೇಕವಾಣಿ ಮೊಳಗುತ್ತಿದೆ. ಅವರ ಸಂದೇಶಗಳು ನಮ್ಮ ಜೀವನಕ್ಕೆ ಸ್ಫೂರ್ತಿಯನ್ನು ನೀಡುತ್ತಿವೆ. ಅವರ ಆತ್ಮ ಭಾರತಕ್ಕಾಗಿ ದುಡಿಯುವ ಜನರ ಹೃದಯದಲ್ಲಿ ನೆಲೆಸಿರುತ್ತಿದೆ ಹಾಗೂ ಪ್ರೇರೆಪಿಸುತ್ತಿದೆ. ಅವರ ಜನ್ಮದಿನ ಇಂದು. ಹಾಗಾಗಿ ೧೫೦ನೇ ಸಂಭ್ರಮದ ಜನ್ಮದಿನವನ್ನು ಭಾರತದ ಹಲವಾರು ಕಡೆಗಳಲ್ಲಿ ಆಚರಿಸುವರು. ಹಾಗೂ ಸಮಾರಂಭಗಳನ್ನು ಏರ್ಪಡಿಸುವರು. ಇಂತಹ ಮಹಾನ್ ವ್ಯಕ್ತಿಗೆ ಕೋಟಿ ಕೋಟಿ ಪ್ರಣಾಮಗಳು .. !!  ಸಾವಿರಾರು ವಿವೇಕಾನಂದರು ಈ ಪವಿತ್ರನಾಡಿನಲ್ಲಿ ಹುಟ್ಟಿ ಬರಲಿ !!

* * * * * * * *

ಚಿತ್ರಕೃಪೆ : http://www.news24online.com

1 ಟಿಪ್ಪಣಿ Post a comment
  1. Naresh Bharadwaj's avatar
    ಜನ 19 2013

    saviraru varshagalu huttibandaru antha mahan karya asadhya, but avara adharsha yendendhu nammadhagirali. intha putranige janma nididha bharathamaathege anantha-natha pranamagalu.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments