ಕರ್ನಾಟಕದಲ್ಲಿ ಅಶಾಂತಿಯ ಗಾಳಿ ಬೀಸಬೇಕೆಂದು ಕಾಂಗ್ರೆಸ್ಸ್ ನಿರ್ಧರಿಸಿದೆಯೇ?
– ರಾಕೇಶ್ ಶೆಟ್ಟಿ
ಪ್ರಶಾಂತವಾಗಿರುವ ಕರ್ನಾಟಕದಲ್ಲಿ ಅಶಾಂತಿಯ ಗಾಳಿ ಬೀಸಬೇಕೆಂದು ಕಾಂಗ್ರೆಸ್ಸ್ ನಿರ್ಧರಿಸಿದೆಯೇ? ಬಹುಶಃ ಹೌದು ಅನ್ನಿಸುತ್ತಿದೆ. ಶ್ರೀರಂಗ ಪಟ್ಟಣದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 50 ಪ್ರತಿಶತ ಮೀಸಲು ನೀಡುವಂತ ವಿವಿಯೊಂದನ್ನು ಸ್ಥಾಪಿಸುವ ಯೋಜನೆ ಕೇಂದ್ರ ಸರ್ಕಾರದ ಮುಂದಿದೆ ಮತ್ತು ಆ ವಿವಿಗೆ ‘ಟಿಪ್ಪು ವಿಶ್ವವಿದ್ಯಾಲಯ’ ಅಂತ ನಾಮಕರಣ ಮಾಡುತ್ತೇವೆ ಅನ್ನುವ ಹೇಳಿಕೆಯನ್ನು ಕೇಂದ್ರ ಸಚಿವರು ಕೊಟ್ಟ ದಿನದಿಂದಲೇ,’ಟಿಪ್ಪು’ ಬಗ್ಗೆ ಚರ್ಚೆ ಶುರುವಾಗಿದೆ.ಚಿದಾನಂದ ಮೂರ್ತಿ,ಎಸ್.ಎಲ್ ಭೈರಪ್ಪ ಮತ್ತು ಇತರರು, ಟಿಪ್ಪು ಕಾಲದಲ್ಲಿ ನಡೆದ ಮತಾಂತರ,ಪರ್ಷಿಯಾ ಭಾಷೆಯ ಹೇರಿಕೆ ಮತ್ತು ಮಲಬಾರಿನ ಸೇನಾಧಿಪತಿಗಳಿಗೆ ಮತ್ತು ಇತರರಿಗೆ ಟಿಪ್ಪು ಬರೆದ ಪತ್ರವನ್ನು ಮುಂದಿಟ್ಟು ‘ಟಿಪ್ಪು ಹೆಸರಿನ ವಿವಿ’ಯನ್ನು ವಿರೋಧಿಸುತಿದ್ದರೆ, ಇನ್ನೊಂದು ಕಡೆ ಟಿಪ್ಪು ಪರ ನಿಂತವರು, ಟಿಪ್ಪು ಒಬ್ಬ ದೇಶ ಭಕ್ತ, ಮಕ್ಕಳನ್ನು ದೇಶಕ್ಕಾಗಿ ಅಡ ಇಟ್ಟವನು ಅನ್ನುತಿದ್ದಾರೆ. ಟಿಪ್ಪು ಕುರಿತ ಈ ಚರ್ಚೆ ನಡೆಯುತ್ತಿರುವುದೂ ಇದೇ ಮೊದಲೇನಲ್ಲ.ಟಿಪ್ಪು ಕಾಲದ ಇತಿಹಾಸದ ಬಗ್ಗೆ ಅನೇಕ ಸಾಕ್ಷಿಗಳು ಸಿಗುವುದರಿಂದ ಟಿಪ್ಪು ಏನು ಅಂತ ನಿರ್ಧರಿಸುವುದು ಬೇರೆಯದೇ ವಿಷಯ.ಹಾಗಾಗಿ ಈ ಲೇಖನದಲ್ಲಿ ಟಿಪ್ಪು ಬಗ್ಗೆ ಗಮನ ಹರಿಸುವುದಕ್ಕಿಂತ,’ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವಿವಿ (ಅಥವಾ 50% ಮೀಸಲು ನೀಡುವ ವಿವಿ) ಅಗತ್ಯವಿದೆಯೇ?’ ಅನ್ನುವ ಪ್ರಶ್ನೆಯನ್ನು ಕೇಂದ್ರ ಸರ್ಕಾರಕ್ಕೆ ಮತ್ತು ಟಿಪ್ಪು ವಿವಿ ಬೆಂಬಲಿಸುತ್ತಿರುವವರಿಗೆ ಕೇಳ ಬಯಸುತ್ತೇನೆ?
ರಾಜ್ಯದಲ್ಲಿ ಈಗಾಗಲೇ ಇರುವ 20ಕ್ಕೂ ಹೆಚ್ಚು ರಾಜ್ಯದ ವಿವಿ ಮತ್ತು ಡೀಮ್ದ್ ವಿವಿಗಳಲ್ಲಿ ಇಲ್ಲದಿರುವ ಹೊಸತನವೇನಾದರೂ, ಶ್ರೀರಂಗ ಪಟ್ಟಣದಲ್ಲಿ ನಿರ್ಮಿಸ ಬಯಸಿರುವ ವಿವಿಯಲ್ಲಿ ಇರಲಿದೆಯೇ? ಮೈಸೂರಿನಲ್ಲೇ 2 ವಿವಿ ಇರುವಾಗ ಶ್ರೀರಂಗಪಟ್ಟಣದಲ್ಲಿ ಇನ್ನೊಂದ್ಯಾಕೆ ಅನ್ನುವುದು ಒಂದು ಪ್ರಶ್ನೆಯಾದರೆ, ಜ್ಞಾನರ್ಜನೆಗಾಗಿಯೇ ವಿವಿಯನ್ನು ಸ್ಥಾಪಿಸುವ ಉದ್ದೇಶವಿದ್ದರೆ,ಅದರಲ್ಲಿ ಅಲ್ಪಸಂಖ್ಯಾತರಿಗೆ 50 ಪ್ರತಿಶತ ಮೀಸಲು ಯಾತಕ್ಕಾಗಿ? ಜ್ಞಾನಕ್ಯಾವ ಧರ್ಮ? ವಿದ್ಯೆ ಕಲಿಯಲು ಬರುವವರು ಪದವಿಯ ವಿಷಯಗಳ ಮೇಲೆ ನಿರ್ಧರಿಸಿ ಒಂದು ವಿವಿಗೆ ಹೋಗುತ್ತಾರೋ? ಅಥವಾ ಅವರ ಧರ್ಮಕ್ಕೆ ಅನುಗುಣವಾಗಿ ವಿವಿಗಳನ್ನು ಆಯ್ಕೆ ಮಾಡಿಕೊಳ್ಳುತಾರೆಯೋ?
ಸ್ವಾತಂತ್ರ ಪೂರ್ವದಲ್ಲೇನೊ,ಬನಾರಸ್ ಹಿಂದೂ ವಿವಿ ಮತ್ತು ಅಲಿಘಡ ಮುಸ್ಲಿಂ ವಿವಿ ಸ್ಥಾಪನೆಯಾಗಿದ್ದವು.ಆದರೆ ಸ್ವಾತಂತ್ರ್ಯಾನಂತರ ತಮ್ಮನ್ನು ‘ಜಾತ್ಯಾತೀತ’ ಅಂತ ಘೋಷಿಸಿಕೊಂಡಿರುವ ಈ ದೇಶದಲ್ಲಿ ಧರ್ಮದ ಆಧಾರದ ಮೇಲೆ ಪ್ರತ್ಯೇಕ ವಿವಿಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಹೊರಟಿರುವುದರ ಔಚಿತ್ಯವೇನು?
ಅಲಿಘಡ ಮುಸ್ಲಿಂ ವಿವಿಯಲ್ಲಿ ಜನ್ಮ ತಳೆದ ‘ಸಿಮಿ’ ಅನ್ನುವ ವಿದ್ಯಾರ್ಥಿ ಸಂಘಟನೆ ದೇಶದ ಆಂತರಿಕ ಭದ್ರತೆಗೆ ಭಂಗ ತಂದು,ಕಡೆಗೆ ನಿಷೇಧಿತ ಸಂಘಟನೆಯಾಗಿ, ವಿವಿಧ ರೂಪದಲ್ಲಿ ಹಂಚಿಹೋಗಿ ಇವತ್ತಿಗೂ ಜೀವಂತವಾಗಿ ಉಳಿದು ದೇಶವನ್ನು ಕಾಡುತ್ತಿರುವ ಸತ್ಯ,ಕೇಂದ್ರ ಸರ್ಕಾರಕ್ಕಾಗಲಿ ಅಥವಾ ಶ್ರೀರಂಗಪಟ್ಟಣದಲ್ಲಿ ವಿವಿಯನ್ನು ಸ್ಥಾಪಿಸಲು ಬೆಂಬಲಿಸುತ್ತಿರುವವರಿಗೆ ತಿಳಿಯದ್ದೇನಲ್ಲ.ಆದರೆ, ಚುನಾವಣಾ ಹತ್ತಿರ ಬಂದಾಗ ದೇಶ,ದೇಶದ ಜನರ ಪ್ರಾಣಕ್ಕಿಂತಲೂ ಹೆಚ್ಚು ರುಚಿಸುವುದು “ವೋಟ್” ತಾನೇ? ಅಲ್ಲ ಅನ್ನುವುದಾದರೆ,ಟಿಪ್ಪು ವಿವಿ ಸ್ಥಾಪನೆ ಹೆಸರಿನಲ್ಲಿ ಕೋಮುವಾದಿ ರಾಜಕೀಯವನ್ನು ತಂದಿಟ್ಟು,ಪ್ರಶಾಂತವಾಗಿರುವ ಕರ್ನಾಟಕದಲ್ಲಿ ಅಶಾಂತಿಯ ಕಿಡಿ ಹೊತ್ತಿಸಲು ಕೇಂದ್ರದ ಕಾಂಗ್ರೆಸ್ಸ್ ಸರ್ಕಾರ ಹೊರಟಿದೆ ಅನ್ನಿಸುವುದಿಲ್ಲವೇ? ಒಂದುವೇಳೆ ಕಾಂಗ್ರೆಸ್ಸ್ ಈ ಹಾದಿಯಲ್ಲಿ ಹೊರಟು ನಿಂತರೆ ಬಿಜೆಪಿ ಸುಮ್ಮನಿದ್ದೇತೆ ?
ಬಿಜೆಪಿ ವಕ್ತಾರ ಗೋ.ಮಧುಸೂದನ `ದೇಶದಲ್ಲಿ ಅಲ್ಪಸಂಖ್ಯಾತರ ಹೆಸರಿನಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸುವುದನ್ನು ಬಿಜೆಪಿ ವಿರೋಧಿಸುತ್ತದೆ. ಗುಜರಾತ್, ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಸಲು ಈ ಪ್ರಯತ್ನಕ್ಕೆ ಕೈ ಹಾಕಿದೆ. ಎರಡು ಸಾವಿರ ಎಕರೆ ಭೂಮಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಅಷ್ಟು ಜಮೀನು ಶ್ರೀರಂಗಪಟ್ಟಣದಲ್ಲಿ ಇಲ್ಲ. ಯಾವುದೇ ಕಾರಣಕ್ಕೂ ಟಿಪ್ಪುಸುಲ್ತಾನ್ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಬಿಜೆಪಿ ಅವಕಾಶ ನೀಡುವುದಿಲ್ಲ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರೇ, ಅದನ್ನು ಆಕ್ಷೇಪಿಸಿ `ಬಿಜೆಪಿ ಸರ್ಕಾರ ಇನ್ನೇನು ಮೂರು ತಿಂಗಳು ಅಧಿಕಾರದಲ್ಲಿ ಇರಬಹುದು, ಮುಂದಿನ ಬಾರಿ ಅದು ಅಧಿಕಾರಕ್ಕಂತೂ ಬರುವುದಿಲ್ಲ. ಯಾವುದೋ ಒಬ್ಬ ಬಿಜೆಪಿ ನಾಯಕನ ಮಾತಿಗೆ ಬೆಲೆ ಕೊಡುವ ಅಗತ್ಯವಂತೂ ಇಲ್ಲ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿಶ್ವವಿದ್ಯಾಲಯಕ್ಕೆ ಅಗತ್ಯವಾದ ಜಮೀನನ್ನು ತಕ್ಷಣ ಒದಗಿಸುವುದು ನಿಶ್ಚಿತ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳುತ್ತಾರೆ.ಇನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ರೆಹಮಾನ್ ಖಾನ್ “ಟಿಪ್ಪು ವಿವಿ ಸ್ಥಾಪಿಸಿಯೇ ಸಿದ್ಧ” ಅನ್ನುವ ಜಿದ್ದಿಗೆ ಬಿದ್ದಂತೆ ಹೇಳಿಕೆ ನೀಡುತಿದ್ದಾರೆ…!, ಹೀಗೆ ಜಿದ್ದಿಗೆ ಬೀಳುವುದು ಬರುವ ದಿನಗಳಲ್ಲಿ ಕರ್ನಾಟಕದ ಕೋಮು ಸೌಹಾರ್ದವನ್ನು ಕದಡುವಲ್ಲಿಗೆ ಸಾಗುವಂತೆ ಮಾಡದಿರಲಿ ಅನ್ನುವುದೇ ಆಶಯ.
ಟಿಪ್ಪು ವಿವಿ ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡುತ್ತಿರುವುದು,ಇದರಲ್ಲಿ ಯಾವುದೇ ಅಲ್ಪಸಂಖ್ಯಾತ ಓಲೈಕೆಯಿಲ್ಲ ಅನ್ನುವುದಾದರೆ, ಅದನ್ನು ಈಗ ಇರುವ ವಿವಿಗಳ ಜೊತೆಗೆ ಇದನ್ನು ಇನ್ನೊಂದು ವಿವಿ ಅನ್ನುವಂತೇಕೆ ಸ್ಥಾಪಿಸಬಾರದು? ಅಲ್ಪಸಂಖ್ಯಾತರಿಗೇಕೆ ಮೀಸಲು? ಶಿಕ್ಷಣ ಬಯಸುವ ಪ್ರತಿಯೊಬ್ಬ ಪ್ರಜೆಗೂ ಅವಕಾಶ ಮುಕ್ತವಾಗಿರಲಿ ಬಿಡಿ.ಧರ್ಮಕ್ಕೊಂದು ವಿವಿ ಅಂತ ಮಾಡ ಹೊರಡುವುದಾದರೆ ಎಷ್ಟು ವಿವಿ ಮಾಡುತ್ತಿರಿ? ನಾಳೆ, ಬಿಜೆಪಿಯವರು ‘ಹಿಂದೂ ವಿವಿ’ ಸ್ಥಾಪನೆ ಮಾಡುತ್ತೇವೆ ಅಂತ ಹೊರಟರೇ,ಈಗ ಟಿಪ್ಪು ವಿವಿಯ ಪರ ನಿಂತವರೆಲ್ಲ ಆಗ ಬಿಜೆಪಿಯನ್ನು ಬೆಂಬಲಿಸುತ್ತಾರೇನು? ಹೀಗೆ ಧರ್ಮಾಧಾರಿತ ವಿವಿಯಲ್ಲಿ ಓದಿಕೊಂಡು ಬಂದ ಜನರ ಮನಸ್ಥಿತಿಗಳು ಹೇಗಿರಬಹುದು ಮತ್ತದು ದೇಶದ ಸೌಹಾರ್ದತೆಯ ಸ್ವಾಸ್ಥ್ಯದ ಮೇಲೆ ಹೇಗೆ ಪರಿಣಾಮ ಬೀರಬಹುದು ಅನ್ನುವ ಕಿಂಚಿತ್ ಯೋಚನೆಯೂ ವೋಟ್ ಬ್ಯಾಂಕ್ ಪಕ್ಷಕ್ಕೆ ಕಾಣಿಸುತ್ತಿಲ್ಲವೇ?
ಅಂದು,’ಶಾ ಬಾನು’ ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಕಾನೂನು ತಿರುಚುವಲ್ಲಿ ಶುರುವಾದ ಕಾಂಗ್ರೆಸ್ಸಿನ ತುಷ್ಟೀಕರಣ ರಾಜಕೀಯ,ಕಡೆಗೆ ಅಯೋಧ್ಯೆಯ ರಾಮ ಮಂದಿರದ ಬಾಗಿಲು ತೆರೆಯುವಲ್ಲಿಗೆ ಬಂದು ನಿಂತಿತು. ಅಯೋಧ್ಯೆಯ ಮಾತು ಬಂದ ತಕ್ಷಣ ಸಾಮಾನ್ಯವಾಗಿ ದೂಷಿಸುವುದು ಸಂಘ ಪರಿವಾರ ಮತ್ತು ಬಿಜೆಪಿಯನ್ನು.ಆದರೆ,ಬಿಜೆಪಿಗೆ ರಾಮಮಂದಿರ ಚಳುವಳಿಯ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ರಾಜಕೀಯ ನೆಲೆ ತಂದುಕೊಟ್ಟಿದ್ದು ಆಗಿನ ರಾಜೀವ್ ಗಾಂಧೀಯವರ ಕಾಂಗ್ರೆಸ್ಸ್ ತುಷ್ಟೀಕರಣ ರಾಜಕಾರಣವೇ ತಾನೇ? ಮಂದಿರದ ಬಾಗಿಲು ತೆಗೆದು ಬೀಗದ ‘ಕೈ’ ಬಿಜೆಪಿಯ ಕೈಗೆ ಕೊಟ್ಟವರ್ಯಾರು? ಇತಿಹಾಸವನ್ನು ತಿರುಗಿ ನೋಡುವಾಗ “ರೇ” ಅನ್ನುವ ಪದ ಬಹಳ ಕಾಡುತ್ತದೆ. ಒಂದು ವೇಳೆ ಆವತ್ತು ರಾಜೀವ್ ಗಾಂಧಿಯ ಸರ್ಕಾರ ನೊಂದ ಹೆಣ್ಣು ಮಗಳು ಶಾ ಬಾನು ಪರವಾಗಿ ನಿಂತಿದ್ದ”ರೇ”…! ಈ ದೇಶದ ಸೌಹಾರ್ದತೆಯ ವಿಶ್ವಾಸಕ್ಕೆ ಈ ಪರಿ ಪೆಟ್ಟು ಬೀಳುತ್ತಿರಲಿಲ್ಲ .(ಅಯೋಧ್ಯೆ ಚಳುವಳಿಗೂ ಮೊದಲು ಬೇಕಾದಷ್ಟು ಬಾರಿ ಕೊಮು ಗಲಭೆಗಳಾಗಿದ್ದರೂ ಅವುಗಳು ಎಂದಿಗೂ ದೇಶವ್ಯಾಪಿ ಹರಡಿರಲಿಲ್ಲ ಅನ್ನುವುದನ್ನು ನೆನಪಿಡಬೇಕು),ಸಾವಿರಾರು ಅಮಾಯಕರ ರಕ್ತಪಾತವಾಗುತ್ತಿರಲಿಲ್ಲ.ಆದ…”ರೇ”!
ಇತಿಹಾಸದಿಂದ ಕಾಂಗ್ರೆಸ್ಸ್ ಪಾಠ ಕಲಿತಂತಿಲ್ಲ. ಇಲ್ಲ ಇಲ್ಲ,ಕೇಂದ್ರದ ಕಾಂಗ್ರೆಸ್ಸ್ ಸರ್ಕಾರಕ್ಕೆ ಈ ವಿವಿ ಸ್ಥಾಪನೆಯ ಹಿಂದೆ ಯಾವುದೇ ಕೋಮುವಾದಿ ಉದ್ದೇಶವಿಲ್ಲ, ಇದು ಕೇವಲ ಶಿಕ್ಷಣ ಕ್ಷೇತ್ರದ ಮೇಲೆ ಅದಕ್ಕಿರುವ ಕಾಳಜಿ ಅನ್ನುವುದಾದರೆ,ದಯಮಾಡಿ ಅವರು ಮೊದಲು ತಮ್ಮ ಕಾಳಜಿಯನ್ನು ಅವರೇ ಜಾರಿಗೆ ತಂದು ಇನ್ನು ಸರಿಯಾಗಿ ಅನುಷ್ಠಾನಕ್ಕೆ ಬಾರದಿರುವ ಶಿಕ್ಷಣ ಹಕ್ಕು ಕಾಯ್ದೆಯನ್ನು (ಆರ್.ಟಿ .ಇ) ಗಂಭೀರವಾಗಿ ಜಾರಿಗೆ ತರುವ ಬಗ್ಗೆ ಯೋಚಿಸಿದರೆ, ಬಡತನದಲ್ಲಿ ಹುಟ್ಟಿದ ತಪ್ಪಿಗೆ ಶಿಕ್ಷಣದಿಂದ ವಂಚಿತರಾಗುತ್ತಿರುವ ಹಿಂದೂ,ಮುಸ್ಲಿಂ,ಕ್ರೈಸ್ತ,ಅಥವಾ ಮತ್ಯಾವುದೋ ಧರ್ಮದ ಮತ್ತು ಧರ್ಮವೇ ಇಲ್ಲದ ಎಲ್ಲ ಮಕ್ಕಳಿಗೂ ಶಿಕ್ಷಣ ಕೊಟ್ಟು ಪುಣ್ಯ ಕಟ್ಟಿಕೊಳ್ಳಲಿ.ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಭಿಗಳಿಗೊಂದು ಬ್ರೇಕ್ ಹಾಕುವಲ್ಲಿ ತಮ್ಮ ಶಿಕ್ಷಣ ಕ್ಷೇತ್ರದ ಕಾಳಜಿ ತೋರಲಿ. ಅದು ಬಿಟ್ಟು ಚುನಾವಣಾ ಹತ್ತಿರ ಬಂದಿರುವುದರಿಂದ ‘ಟಿಪ್ಪು’ ಹೆಸರಿಡಿದು ರಾಜಕೀಯ ದಾಳ ಉರುಳಿಸುವುದರ ಅರ್ಥವೇನು?
ವೋಟ್ ಬ್ಯಾಂಕ್ ಹಿಂದೆ ಬಿದ್ದು ಪ್ರಶಾಂತವಾಗಿರುವ ಕರ್ನಾಟಕದಲ್ಲಿ ಅಶಾಂತಿಯ ಗಾಳಿ ಬೀಸದಂತೆ ನೋಡಿಕೊಳ್ಳುವ ಹೊಣೆಯು ಈ ಎರಡೂ ಜವಬ್ದಾರಿಯುತ ರಾಷ್ಟ್ರೀಯ ಪಕ್ಷಗಳದ್ದೇ ಆಗಿದೆ.”ಟಿಪ್ಪು” ಹೆಸರಿನ ಚರ್ಚೆಯ ಜೊತೆಯಲ್ಲೇ “ಧರ್ಮಕ್ಕೊಂದು ವಿವಿ”ಯ ಅಗತ್ಯವೇನು ಅನ್ನುವುದರ ಬಗ್ಗೆಯೂ ನಾಡಿನ ಬುದ್ಧಿ ಜೀವಿವಲಯ ಯೋಚಿಸಬೇಕಿದೆ.





ಧರ್ಮ ಮತ್ತು ಧಾರ್ಮಿಕ ನಂಬಿಕೆಗಳು ಮನೆಯಿಂದಾಚೆಗೆ ಯಾಕೆ ಬರುತ್ತಿವೆ ಮತ್ತು ಯಾಕೆ ಬರಬೇಕು ಎನ್ನುವುದೇ ಅರ್ಥವಾಗುತ್ತಿಲ್ಲ.
ವಿಷಯ ಸ್ಪಷ್ಟ. ಒತ್ತು ವಿ.ವಿ ಯ ಹೆಸರಿಗಿಂತ, ಧರ್ಮದ ಆಧಾರದ ಮೇಲೆ ಇನ್ನೊಂದು ಪ್ರತ್ಯೇಕ ವಿ.ವಿ ಯಾಕೆ ಎಂಬುದಕ್ಕೆ.. ಈಗಾಗಲೇ ಎರಡು ಇವೆ..ಬನಾರಸ ಹಿಂದೂ ಯುನಿವರ್ಸಿಟಿ ಮತ್ತು ಅಲಿಘರ್ ಮುಸ್ಲಿಂ ಯುನಿವರ್ಸಿಟಿ… ಎರಡೂ ಸ್ವಾತಂತ್ರ್ಯ ಪೂರ್ವದವು..ಅಷ್ಟು ಸಾಕು
ಶಿಕ್ಷಣದಲ್ಲಿ ಕೇಸರಿಕರಣ ಎಂದು ಆಗಾಗ ಬೊಬ್ಬೆ ಹೊಡೆಯುತ್ತಿದ್ದವರಿಗೆ, ಈಗ ವಿಷಯವನ್ನು ಟಿಪ್ಪು ಮೇಲೆ ತಿರುಗಿಸಲು ಅವಕಾಶ ಕೊಡಬಾರದು. ಈ ಜನ ಈಗ ಜಾಣತನದಿಂದ (ಎಷ್ಟಾದರೂ ‘ಬುದ್ಧಿ’ಜೀವಿಗಳಲ್ಲವೆ?) ಟಿಪ್ಪು ಹೆಸರಿನ ಸುತ್ತ ವಿವಾದ ಎಬ್ಬಿಸುತ್ತಾರೆಯೆ ಹೊರತು, ಧರ್ಮದ ಆಧಾರದ ಮೇಲೆ ಮೀಸಲು ಯಾಕೆ, ಪ್ರತ್ಯೇಕ ವಿ.ವಿ ಯಾಕೆ ಎಂಬುದನ್ನು ಚರ್ಚಿಸುವುದಿಲ್ಲ.
ಟಿಪ್ಪು ದೇಶಪ್ರೇಮಿಯೊ ಅಥವಾ ಇನ್ನೇನೊ ಅನ್ನುವುದು ಇಲ್ಲಿ ಭೂತಕಾಲದ ಪ್ರಶ್ನೆ. ನಮ್ಮ ಆಗಿ, ಅಳಿದು ಹೋದ ರಾಜರುಗಳ ‘ಭಾರತ’ ದೇಶ ಪ್ರೇಮ ಯಾವತ್ತೂ ಪ್ರಶ್ನಾರ್ಹ, ಚರ್ಚಾರ್ಹ. ಈ ತರಹದ ಯುನಿವರ್ಸಿಟಿಗಳು ‘ಕೂಡ ತಮ್ಮ’ ದೇಶಕ್ಕಾಗಿ ಹೋರಾಡುವವರನ್ನು ಪ್ರೇರೇಪಿಸದಿರಲಿ, ಹುಟ್ಟು ಹಾಕದಿರಲಿ!.
ರಾಕೇಶ್, ಈ ಪ್ರತ್ಯೇಕ ವಿ.ವಿ ಬಗೆಗಿನ ವಿವಾದ ರಾಜಕೀಯ ಪ್ರೇರಿತ. ವೋಟು ಬ್ಯಾಂಕ್ ರಾಜಕಾರಣದ ಮತ್ತೊಂದು ಮಜಲು. ಅಲ್ಪಸಂಖ್ಯಾತರ ಮತ ಗಳಿಸಲು ಹೂಡುವ ತಂತ್ರಗಳು ಆ ಸಮುದಾಯದವರಿಗೆ ಯಾವ ಫಲವನ್ನೂ ನೀಡುತ್ತಿಲ್ಲ ಎನ್ನುವುದನ್ನು ಬೇಗ ಅರಿತು ಕೊಂಡರೆ ದೇಶಕ್ಕೆ ತುಂಬಾ ಒಳ್ಳೆಯದು. ಈ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬರೀ ಅಲ್ಪಸಂಖ್ಯಾತರು ಮಾತ್ರವಲ್ಲ ಬಹು ಸಂಖ್ಯಾಕರೂ ಬಲು ಯಾಗಿರುವುದು ಖೇದಕರ. ರಾಮ ಮಂದಿರ ಕಟ್ಟುತ್ತೇವೆ ಎಂದು ವೋಟು ಕೇಳುತ್ತಾ ಅಧಿಕಾರ ಹಿಡಿಯಲು ನಡೆದ ಹವಣಿಕೆ ನಮಗೆ ತಿಳಿದೇ ಇದೆ. ಅತ್ಯಾಚಾರ, ಲಂಚಗುಳಿತನ, ಭ್ರಷ್ಟಾಚಾರ, ಕೊಲೆ ಸುಳಿಗೆ, ನಕ್ಸಲ್, ಮಾವೋ ಮುಂತಾದ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿ ವಿಲ ವಿಲ ಒದ್ದಾಡುತ್ತಿರುವ ನಮ್ಮ ದೇಶಕ್ಕೆ ವೋಟ್ ಬ್ಯಾಂಕ್ ರಾಜಕಾರಣ ದಂಥ ಮತ್ತೊಂದು ಪೀಡೆ ಕಾಡುವುದು ಬೇಡ. Let us learn to put our nation first, above everything else.
P.S. ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ, ಅವರ ಆಮಿಷಗಳಿಗೆ ತನ್ನನ್ನು ತಾನು ಮಾರಿಕೊಳ್ಳದೆ ಭಾರತದ ಮೇಲಿನ ಉತ್ಕಟ ಪ್ರೀತಿಯಿಂದ ರಣರಂಗಕ್ಕೆ ಧುಮುಕಿ ತನ್ನ ಪ್ರಾಣ ಕಳೆದುಕೊಂಡ ಹುತಾತ್ಮ, ವೀರ ಚೇತನ ಟಿಪ್ಪೂ ಸುಲ್ತಾನರ ಬಗ್ಗೆ ಯಾವ ಶಿಫಾರಸು ಪತ್ರವನ್ನೂ ದೇಶ ನಿರೀಕ್ಷಿಸುತ್ತಿಲ್ಲ. ಟಿಪ್ಪು ರವರ ಅಮೋಘ ದೇಶ ಭಕ್ತಿಗೆ, ತಲೆ ಬಾಗಲು, ನಮನ ಸಲ್ಲಿಸಲು ನಮಗೆ ಸಾಧ್ಯವಿಲ್ಲದಿದ್ದರೂ ಅಪಚಾರ ಎಸಗೋದು ಬೇಡ. ಅದೇ ಟಿಪ್ಪು ವಿನ ನೆನಪಿಗೆ ನಾವು ಕೊಡುವ ದೊಡ್ಡ ಕೊಡುಗೆ.
ತಮ್ಮ ಕೊನೆಯ ಮಾತು ಸರಿಯಾಗಿದೆ ಭದ್ರಾವತಿಯವರೆ. ನಾವು ಯಾರ ಶಿಫಾರಸು ಪತ್ರವನ್ನು ನಿರೀಕ್ಷೆ ಮಾಡಬಾರದು. ಈ ದೇಶದಲ್ಲಿ ಉದಾರತೆ, ದೊಡ್ಡ ಮನಸ್ಸು ತುಂಬ ಕಡಿಮೆ. ಎಲ್ಲೊ ನಮ್ಮ ಪುಣ್ಯಕ್ಕೆ ಅಲ್ಲಲ್ಲಿ ಒಬ್ಬ ಗಿರೀಶ ಕಾರ್ನಾಡ, ಅನಂತಮೂರ್ತಿಯವರು,ಗೋವಿಂದರಾಯರು,ಜವರಯ್ಯನವರಂತಹ ದೊಡ್ಡ ಮನಸ್ಸುಳ್ಳವರು, ಕೇಳದೆಯೇ ಶಿಫಾರಸು ಪತ್ರ ಕೊಡುವವರು ಸಿಗುತ್ತಾರೆ. ಆದರೂ ಬೇರೆಯವರನ್ನು ಎಷ್ಟು ಅಂತ ನಂಬಬಹುದು?. ಅದಕ್ಕೆ ನಮಗೆ ನಾವೇ ಅಥವಾ ನಮಗೆ ಬೇಕಾದವರಿಗೆ ಶಿಫಾರಸು ಪತ್ರ, ಬಿರುದು,ಬಾವಲಿ ಕೊಟ್ಕೊಬೇಕು ಅಥವಾ ಕೊಡೊ ವ್ಯವಸ್ಥೆ ಮಾಡ್ಕೊಬೇಕು.
ತಮ್ಮ ಮಾತು ನನಗೆ ಹಿಡಿಸಿತು ತಮ್ಮ ಪ್ರತಿಕ್ರಿಯೆಗಳ ಅಭಿಮಾನಿ.