ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 25, 2013

4

‘ಸತ್ಯ ಹರಿಶ್ಚಂದ್ರ’ ನ ನೋಡಿದ ಮೋಹನ ದಾಸನೂ…‘ಕ್ರೈಂ ಡೈರಿ’ ನೋಡುವ ನಮ್ಮ ಮಕ್ಕಳೂ…

‍ನಿಲುಮೆ ಮೂಲಕ

-ನಿತ್ಯಾನಂದ.ಎಸ್.ಬಿ

TV“………. ಅದೊಂದು ದಿನ ಸಂಚಾರಿ ಬೊಂಬೆ ಪ್ರದರ್ಶಕರು ನಮ್ಮ ಊರಿಗೆ ಬಂದರು. ಅವರು ನನಗೆ ತೋರಿಸಿದ ಒಂದು ಚಿತ್ರ, ಶ್ರವಣ ಕುಮಾರ. ಆ ಚಿತ್ರದಲ್ಲಿ ಶ್ರವಣ ತನ್ನ ಕುರುಡು ತಂದೆ ತಾಯಿಯರನ್ನು ಅಡ್ಡೆಯಲ್ಲಿ ಕೂರಿಸಿಕೊಂಡು, ಅದನ್ನು ಹೆಗಲಿನ ಮೇಲೆ ಹೊತ್ತುಕೊಂಡು ಯಾತ್ರೆಗಾಗಿ ಹೋಗುತ್ತಿದ್ದ. ಅಂದು ಆ ದೃಶ್ಯ ನನ್ನ ಅಂತರಂಗದಲ್ಲಿ ಶಾಶ್ವತವಾಗಿ ಅಂಕಿತವಾಯಿತು. ಇಗೋ ಇಲ್ಲಿ ನಿನಗೊಂದು ಆದರ್ಶವಿದೆ. ಅದನ್ನು ಅನುಕರಿಸು ಎಂದು ನನಗೆ ನಾನೇ ಹೇಳಿಕೊಂಡೆ. ಶ್ರವಣ ಮರಣ ಹೊಂದಲು ಅವನ ಮಾತಾಪಿತೃಗಳು ಮಾಡಿದ ಆರ್ತವಿಲಾಪ ನನ್ನ ಕಿವಿಗೆ ಈಗಲೂ ಕೇಳುವಂತಿದೆ. ಆ ದೃಶ್ಯ ನನ್ನ ಹೃದಯವನ್ನು ಕರಗಿಸಿತು. ಅದೇ ಸಮಯದಲ್ಲಿ ನಾನು ನೋಡಿದ ಇನ್ನೊಂದು ನಾಟಕವೆಂದರೆ ಸತ್ಯ ಹರಿಶ್ಚಂದ್ರ. ಅದು ನನ್ನ ಮನಸ್ಸನ್ನು ಸೂರೆಗೊಂಡಿತ್ತು. ಅದನ್ನು ಎಷ್ಟು ಸಲ ನೋಡಿದರೂ ನನಗೆ ತೃಪ್ತಿಯೇ ಆಗಲಿಲ್ಲ. ಆದರೆ ನಮ್ಮ ತಂದೆ ಎಷ್ಟು ಸಲ ನೋಡಲು ಅನುಮತಿ ಕೊಟ್ಟಾರು? ಅದರ ಹುಚ್ಚು ನನ್ನನ್ನು ಹಗಲೂ ರಾತ್ರಿ ಬಿಡಲೇ ಇಲ್ಲ. ಲೆಕ್ಕವಿಲ್ಲದಷ್ಟು ಸಲ ನಾನೇ ಹರಿಶ್ಚಂದ್ರನಾಗಿ ಆ ನಾಟಕವನ್ನು ಅಭಿನಯಿಸಿಕೊಂಡೆ. ಎಲ್ಲರೂ ಏಕೆ ಸತ್ಯಹರಿಶ್ಚಂದ್ರನಂತೆ ಸತ್ಯಸಂಧರಾಗಿರಬಾರದು? ಇದೇ ಹಗಲೂ ರಾತ್ರಿ ನನ್ನನ್ನು ನಾನೇ ಕೇಳಿಕೊಳ್ಳುತ್ತಿದ್ದ ಪ್ರಶ್ನೆ. ಸತ್ಯವನ್ನು ಅನುಸರಿಸಬೇಕೆಂದು ಹರಿಶ್ಚಂದ್ರ ಪಟ್ಟ ಕ್ಲೇಶಗಳನ್ನೆಲ್ಲಾ, ಆಪತ್ತುಗಳನ್ನೆಲ್ಲಾ ನಾನೂ ಪಡಬೇಕು. ಇದೊಂದೇ ನನ್ನ ಮನಸ್ಸಿನಲ್ಲಿ ಸ್ಪೂರ್ತಿ ತುಂಬಿದ ಆದರ್ಶ. ಹರಿಶ್ಚಂದ್ರನ ಕಥೆಯನ್ನು ನಾನು ಅಕ್ಷರಶಃ ನಂಬಿದೆನು. ನೆನಪು ಮಾಡಿಕೊಂಡು ಪದೇ ಪದೇ ಅಳುತ್ತಿದ್ದೆನು. ಹರಿಶ್ಚಂದ್ರ ಐತಿಹಾಸಿಕ ವ್ಯಕ್ತಿ ಆಗಿರಲಾರ ಎಂಬುದು ಇಂದು ನನ್ನ ಬುದ್ಧಿಗೆ ಗೋಚರಿಸುತ್ತಿದೆ. ಆದರೆ ನನ್ನ ಮಟ್ಟಿಗೆ ಹರಿಶ್ಚಂದ್ರ, ಶ್ರವಣ ಇಬ್ಬರೂ ಜೀವಂತ ವ್ಯಕ್ತಿಗಳು. ಆ ನಾಟಕಗಳನ್ನು ಓದಿದರೆ ಮತ್ತೆ ಮೊದಲಿನಂತೆ ನಾನು ಕಣ್ಣೀರು ಹಾಕದೇ ಇರಲಾರೆನೆಂಬುದು ನನ್ನ ನಂಬಿಕೆ……..”

ಹೌದು. ಅನುಮಾನವೇ ಇಲ್ಲ. ಈ ಮೇಲಿನ ಸಾಲುಗಳನ್ನು ಬರೆದದ್ದು ನಮ್ಮ ದೇಶದ ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿಯವರೇ. ಆದರೆ ಘಟನೆ ನಡೆದದ್ದು ಮಹಾತ್ಮಾ ಗಾಂಧಿ 12 ವರ್ಷದ ಬಾಲಕ ಮೋಹನ ದಾಸನಾಗಿ ಪ್ರೌಢಶಾಲೆಯಲ್ಲಿ ಓದುತ್ತಿರಬೇಕಾದರೆ. ಸಾಮಾನ್ಯರಲ್ಲಿ ಸಾಮಾನ್ಯನಾಗಿದ್ದ, ಓದುವುದರಲ್ಲಿ ಅಷ್ಟೇನು ಬುದ್ಧಿವಂತನಲ್ಲದ, ಸಾಲದೆಂಬಂತೆ ಕಲಿಯಬಾರದ ಕೆಟ್ಟ ಹವ್ಯಾಸಗಳನ್ನೆಲ್ಲಾ ಕಲಿತಿದ್ದ ಮೋಹನದಾಸ ಇಡೀ ದೇಶಕ್ಕೇ ಪೂಜ್ಯನೆನಿಸಿದ ಪವಾಡದಲ್ಲಿ ಪ್ರಮುಖ ಪಾತ್ರ ವಹಿಸಿದ ಈ ಘಟನೆಗಳು ಇಂದಿಗೂ ಚಿರಸ್ಮರಣಿಯವಾಗಿವೆ. ಸತ್ಯದ ಹಾದಿಯಲ್ಲಿ ಅಂಜದೇ ಅಳುಕದೇ ಮುನ್ನುಗ್ಗಲು ಗಾಂಧೀಜಿಯಂಥಾ ದಿವ್ಯ ಆತ್ಮನಿಗೆ ಪ್ರಾರಂಭಿಕ ಶಕ್ತಿಯನ್ನೊದಗಿಸಿ ಅವರ ಹೃದಯದಲ್ಲಿ ಸತ್ಯದ ಜ್ವಾಲೆ ಧಗಧಗಿಸುವಂತೆ ಮಾಡಿದ ಐತಿಹಾಸಿಕ ಘನೆಗಳಿವು. ಮಹಾತ್ಮಾ ಗಾಂಧೀಜಿಯವರೇ ಸ್ವತಃ ಬರೆದಿರುವ ಈ ಸಾಲುಗಳು ಅವರ ಆತ್ಮ ಚರಿತ್ರೆ “ನನ್ನ ಸತ್ಯಾನ್ವೇಷಣೆ” ಯಲ್ಲಿದೆ.

ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಆತನ ಬಾಲ್ಯ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಆತ ನೋಡಿದ್ದು, ಕೇಳಿದು, ಕಲಿತದ್ದು, ಇಟ್ಟುಕೊಂಡ ಆದರ್ಶ, ಪಡೆದ ಪ್ರೇರಣೆ, ದೊರಕಿದ ಸಂಗ ಇವುಗಳು ಆತನ ಜೀವನದುದ್ದಕ್ಕೂ ಪ್ರಭಾವ ಬೀರುತ್ತದೆ. ಹೀಗಾಗಿಯೇ ಗಾಂಧೀಜಿ ತಮ್ಮ ವಿದ್ಯಾರ್ಥಿ ದೆಸೆಯಲ್ಲಿದ್ದಾಗ ನೋಡಿದ ಈ ಎರಡು ನಾಟಕಗಳು ಸತ್ಯದ ದಾರಿಯಲ್ಲಿ ನಡೆಯುವಂತೆ ಅವರನ್ನು ಪ್ರೇರೇಪಿಸಿದವು. ಅಂದು ಶ್ರವಣ ಮತ್ತು ಹರಿಶ್ಚಂದ್ರರಿಬ್ಬರೂ ಮೋಹನದಾಸನ ಪಾಲಿಗೆ ಆದರ್ಶ ವ್ಯಕ್ತಿಗಳಾದರು. ಅವರಿಬ್ಬರ ತ್ಯಾಗ, ಭಕ್ತಿ, ಸತ್ಯಸಂಧತೆಯಂಥಹಾ ಉತ್ಕøಷ್ಟ ಮೌಲ್ಯಗಳು ಅವರ ಪಾಲಿಗೆ ಆದರ್ಶವಾಯಿತು. ಈ ಆದರ್ಶದ ನೆರಳಿನಲ್ಲಿಯೇ ಬಾಳಿ, ಬದುಕು ರೂಪಿಸಿಕೊಂಡ ಗಾಂಧಿ ದೇಶಕ್ಕೇ ಆಸ್ತಿಯಾದರು. ಇಡೀ ಜಗತ್ತಿಗೇ ಬೆಳಕಾದರು. ಕೇವಲ ಗಾಂದೀಜಿಯಷ್ಟೇ ಅಲ್ಲ. ಶಿವಾಜಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಲಾಲ್ ಬಹದ್ದೂರ್ ಶಾಸ್ತ್ರಿ, ಸ್ವಾಮಿ ವಿವೇಕಾನಂದರಂಥಾ ಬಹುತೇಕ ಮಹಾನ್ ವ್ಯಕ್ತಿಗಳು ತಮ್ಮ ಬಾಲ್ಯದಲ್ಲಿ ಅನುಸರಿಸಿದ ಆದರ್ಶಗಳಿಂದಲೇ ಮಹಾತ್ಮರಾದರು.

ಆದರೆ ಪ್ರಸ್ತುತ ಸಮಸ್ಯೆ, ಅಂದು ಸತ್ಯಹರಿಶ್ಚಂದ್ರ ನಾಟಕ ನೋಡಿ ಮಹಾತ್ಮನಾದ ಗಾಂಧೀಜಿಯವರದ್ದಲ್ಲ. ಇಂದು ಕ್ರೈಂ ಸ್ಟೋರಿ ನೋಡುತ್ತಾ ಕುಳಿತಿರುವ ನಮ್ಮ ಮಕ್ಕಳ ಭವಿಷ್ಯದ್ದು! ಇದು ನಾವು ನೀವೆಲ್ಲಾ ಎಡಗೈಯಲ್ಲಿ ತಳ್ಳಿ ಹಾಕಿಬಿಡಬಹುದಾದ ಸರಳ ಸಮಸ್ಯೆಯಲ್ಲ. ಹಗಲೂ ರಾತ್ರಿ ತಲೆಕೆಡಿಸಿಕೊಂಡು ಬಗೆಹರಿಸಬೇಕಾದ ಅನಿವಾರ್ಯತೆಗೆ ನಮ್ಮನ್ನು ದೂಡಿರುವ ಗಂಭೀರ ಸಮಸ್ಯೆ! ಹೈಸ್ಕೂಲು ಅಂದರೆ ಮಕ್ಕಳು ಮಾನಸಿಕವಾಗಿ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಪೊರೆ ಕಳಚುವಂಥಾ ಕಾಲ. ರೇಶ್ಮೆ ಹುಳು ರೆಕ್ಕೆ ಮೂಡಿಸಿಕೊಂಡು ಗೂಡನ್ನು ಸೀಳಿ ಹೊರಬಂದು ಚಿಟ್ಟೆಯಾಗುವಂಥಾ ರೂಪಾಂತರಣೆಯ ಕಾಲ. ಇಂಥಾ ಸಮಯದಲ್ಲಿ ಮಕ್ಕಳು ಏನನ್ನು ನೋಡುತ್ತಾರೋ, ಏನನ್ನು ಕೇಳುತ್ತಾರೋ, ಏನನ್ನು ಚಿಂತಿಸುತ್ತಾರೋ, ಆಲೋಚಿಸುತ್ತಾರೋ, ಏನನ್ನು ಇಷ್ಟಪಡುತ್ತಾರೋ, ಆರಾಧಿಸುತ್ತಾರೋ ಅದು ಅವರ ಮುಂದಿನ ಜೀವನದ ಮೇಲೆ ಗುರುತರವಾದ ಪರಿಣಾಮವನ್ನು ಬೀರುವುದರಲ್ಲಿ ಸಂದೇಹವಿಲ್ಲ. ಹೀಗಾಗಿ ಪ್ರೌಢಶಾಲೆಯ ಮಕ್ಕಳು ಸಮಾಜಕ್ಕೆ ಒಳ್ಳೆಯ ಕೊಡುಗೆಯಾಗಬೇಕೆಂದರೆ, ದೇಶದ ಆಸ್ತಿಯಾಗಿ ಬೆಳೆಯಬೇಕೆಂದರೆ, ಮನುಕುಲಕ್ಕೆ ದಾರಿದೀಪವಾಗಬೇಕೆಂದರೆ ಅವರ ಈ ವಯಸ್ಸಿನ ಬಗ್ಗೆ ಅಗತ್ಯ ಗಮನ ನೀಡಲೇಬೇಕು. ಜವಾಬ್ದಾರಿಯುತವಾದ ಮತ್ತು ಸೂಕ್ಷ್ಮವಾದ ಕಾಳಜಿ ವಹಿಸಬೇಕು. ಆದರೆ ಇಂದೇನಾಗಿದೆ? ಯಾವ ವಯಸ್ಸಿನಲ್ಲಿ ಮಕ್ಕಳು ಉದಾತ್ತವಾದ, ಉನ್ನತವಾದ ಧ್ಯೇಯ ಆದರ್ಶಗಳ ಬಗ್ಗೆ ಚಿಂತಿಸಲು ಆರಂಭಿಸಬೇಕಿತ್ತೋ ಅಂಥಾ ಸಂದರ್ಭಗಳಲ್ಲಿ ಅಪಾಯಕಾರಿ ಹಾಗೂ ವಿನಾಶಕಾರಿ ಚಿಂತನೆಗಳು ಅವರ ತಲೆ ಹೊಕ್ಕುತ್ತಿವೆ. ಬದಲಾದ ಇಂದಿನ ಯುಗದಲ್ಲಿ ಆಧುನಿಕತೆಯ ಹೆಸರಿನಲ್ಲಿ ಮಕ್ಕಳನ್ನು ದುರ್ಬಲ ಮನಸ್ಸಿನವರನ್ನಾಗಿಸುವಂಥಾ ವಾತಾವರಣ ನಿರ್ಮಾಣವಾಗುತ್ತಿದೆ. ನೀವು ನಂಬಿ ಇಲ್ಲಾ ಬಿಡಿ ಇದೊಂದು ಕಟು ಸತ್ಯ.

ಇಂದು ಹೈಸ್ಕೂಲು ಓದುವ ಮಕ್ಕಳ ಮುಂದೆ ಸರಿಯಾದದ್ದೊಂದು ಆದರ್ಶವಿಲ್ಲ. ಆದರ್ಶ ತೋರಬೇಕಾಗಿದ್ದ ತಂದೆ ತಾಯಿಗಳು ಆಫೀಸಿನ ಕೆಲಸಗಳಲ್ಲಿ ಕಣ್ಮರೆಯಾಗಿ, ಕೇವಲ ದುಡ್ಡಿನ ಲೆಕ್ಕಾಚಾರದಲ್ಲಿ ತೊಡಗಿ ತಮ್ಮ ಸ್ಥಾನದಿಂದ ಕೆಳಗಿಳಿದು ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ಅಲ್ಪ ಸ್ವಲ್ಪ ಕಾಳಜಿ ಇರುವ ತಂದೆ ತಾಯಿಗಳ ಆಸೆ ಮಕ್ಕಳನ್ನು ಇಂಜಿನಿಯರ್ ಮತ್ತು ಡಾಕ್ಟರ್ ಮಾಡುವುದರ ಆಚೆಗೆ ಹೋಗುವುದಿಲ್ಲ. ಮಕ್ಕಳ ಸರ್ವ ಶಕ್ತಿಯೂ ಕೇವಲ ಇಂಜಿನಿಯರಿಂಗ್ ಮತ್ತು ಡಾಕ್ಟರ್ ಆಗುವುದಕ್ಕೆ ವಿನಿಯೋಗವಾಗಬೇಕೆಂದು ಅವರು ಬಯಸುತ್ತಿದ್ದಾರೆ. ಹೆಚ್ಚು ಕಡಿಮೆ ರೋಬಾಟ್‍ಗಳಂತೆ ಆಗುತ್ತಿರುವ ಮಕ್ಕಳು ಭಾವನೆಗಳೇ ಇಲ್ಲದೇ ಶುಷ್ಕವಾಗುತ್ತಿದ್ದಾರೆ. ಆದರೇನು? ಮಕ್ಕಳೆಂದರೆ ಜೀವ ಇಲ್ಲದ ಯಂತ್ರಗಳೇನಲ್ಲವಲ್ಲ. ಸಮಯ ಬಂದಾಗ ಭಾವನೆಗಳ ಸ್ಫೋಟವಾಗಲೇಬೇಕು. ಪ್ರಕೃತಿ ತನ್ನ ಆಟವನ್ನು ತೊರಲೇಬೇಕು. ಆಗ ಆದರ್ಶಗಳಿಲ್ಲದ ಮಗು ಗಾಳಿಗೆ ಸಿಕ್ಕ ತರಗೆಲೆಯಾಗುತ್ತದೆ. ಸೂತ್ರ ಕಳಚಿದ ಗಾಳಿಪಟವಾಗುತ್ತದೆ.

ಇನ್ನು ತಂದೆ ತಾಯಿಗಳನ್ನು ಬಿಟ್ಟರೆ ಮಕ್ಕಳಿಗೆ ಆದರ್ಶ ವಾಗಬೇಕಿದ್ದುದು ಶಿಕ್ಷಕರು. ಹೌದು ಶಿಕ್ಷಕರೇ. ಆದರೆ ಇಂದು ಸರ್ಕಾರಗಳ ಮತಿಹೀನ ಧೊರಣೆಯಿಂದಾಗಿ ಶಿಕ್ಷಕ ಹುದ್ದೆ ಮೂರು ಕಾಸಿಗೂ ಮರ್ಯಾದೆ ಇಲ್ಲದ ಗಂಜಿ ಕೇಂದ್ರದ ಸ್ಥಾನದಂತಿದೆ. ಸರ್ಕಾರಿ ಶಾಲೆಗಳ ಶಿಕ್ಷಕರು ಒಂದಷ್ಟು ನೆಮ್ಮದಿಯಾಗಿದ್ದರೂ ಖಾಸಗೀ ಶಿಕ್ಷಕರ ಸಂಬಳ ನಿಜಕ್ಕೂ ಕನಿಕರ ಹುಟ್ಟಿಸುವಂತಿದೆ. ಡಿ.ಇಡಿ. , ಬಿ.ಇಡಿ. ಓದಿಕೊಂಡು ಶಿಕ್ಷಕರಾಗಲು ಹೋದರೆ ಖಾಸಗಿ ಶಾಲೆಗಳು ಅವರಿಗೆ ನೀಡೋ ಸಂಬಳ 2,000 ದಿಂದ 3000 ಮಿರುವುದಿಲ್ಲ! ದೇಶದ ಭವಿಷ್ಯ ರೂಪಿಸೋ ಶಿಕ್ಷಕನಿಗೆ ತನ್ನ ಭವಿಷ್ಯವನ್ನೇ ರೂಪಿಸಿಕೊಳ್ಳಲಾಗದ ಸ್ಥಿತಿ! ಇಂಥಾ ಸಂದರ್ಭದಲ್ಲಿ ಮಕ್ಕಳಿಗೆ ಆದರ್ಶವಾಗಬೇಕಿದ್ದ ಶಿಕ್ಷಕ ಸಹಜವಾಗಿಯೇ ಕೆಲಸದ ಬಗ್ಗೆ ಆಸಕ್ತಿ ಕಳೆದುಕೊಂಡು ಕೇವಲ ಜೀವನೋಪಾಯಕ್ಕಾಗಿ ಶಿಕ್ಷಕ ವೃತ್ತಿ ಮಾಡುತ್ತಾ ಕಾರ್ಖಾನೆಗಳಲ್ಲಿ ಯಂತ್ರಗಳೊಂದಿಗೆ ಕೆಲಸ ಮಾಡುವ ಕಾರ್ಮಿಕನಂತಾಗಿದ್ದಾನೆ. ಹೃದಯದಿಂದ ಮೆದುಳಿಗೆ ಸಂಪರ್ಕವನ್ನು ಏರ್ಪಡಿಸಬೇಕಾಗಿದ್ದ ಶಿಕ್ಷಕ ಕೇವಲ ಮಕ್ಕಳ ಮೆದುಳಿಗೆ ಮಾಹಿತಿಯನ್ನು ತುರುಕುವ ಯಂತ್ರವಾಗಿದ್ದಾನೆ. ಇನ್ನು ಆದರ್ಶವಾಗೋದಂತೂ ದೂರವೇ ಉಳೀತು.

ಪೋಷಕರು, ಶಿಕ್ಷಕರು ಬಿಟ್ಟರೆ ನಮ್ಮ ಮಕ್ಕಳಿಗೆ ನೀತಿ ಹೇಳಲು ಸಾಧ್ಯವಿರೋದು ಸಮಾಜಕ್ಕೆ ಮಾತ್ರ. ಆದರೆ ಇಂದು ನಮ್ಮ ಸಮಾಜದ ಕಥೆ ಏನಾಗಿದೆ? ಹರಿಕಥೆ, ರಾಮಾಯಣ, ಮಹಾಭಾರತ, ಪೂಜೆ, ಪುನಸ್ಕಾರ, ಸಂಸ್ಕಾರಗಳಿಂದ ಕೂಡಿದ್ದ ನಮ್ಮ ಸಮಾಜ ಇಂದು ಆರ್ಕೇಸ್ಟ್ರಾ, ಬಾರ್, ರೆಸ್ಟೊರೆಂಟ್, ರೇವ್ ಪಾರ್ಟಿಗಳಲ್ಲಿ ಮಗ್ನವಾಗಿದೆ. ಸಮಾಜದ ಉನ್ನತ ಹುದ್ದೆಗಳಲ್ಲಿರುವವರೇ ಲಂಚ, ಹಗರಣಗಳಲ್ಲಿ ಸಿಲುಕಿ ಭ್ರಷ್ಟರಾಗಿದ್ದಾರೆ. ಹೀಗಾಗಿ ಸಮಾಜವೂ ನಮ್ಮ ಮಕ್ಕಳಿಗೆ ಆದರ್ಶವನ್ನು ನೀಡುವಲ್ಲಿ ಸೋತುಹೋಗುತ್ತಿದೆ. ಇನ್ನು ನಮ್ಮ ಮಕ್ಕಳು ಸ್ವತಃ ಆದರ್ಶವನ್ನು ಹುಡುಕಿಕೊಳ್ಳಲಿ ಎಂದು ಒಳ್ಳೆಯ ಪುಸ್ತಕಗಳನ್ನಾದರೂ ಕೊಡೋಣವೆಂದರೆ ಅದೂ ಸಾಧ್ಯವಿಲ್ಲ. ಏಕೆಂದರೆ ನಮ್ಮ ಮಕ್ಕಳು ಇಂಜಿನಿಯರ್ ಅಥವಾ ಡಾಕ್ಟರ್ ಆಗಿ ಕೋಟಿ ಕೋಟಿ ಸಂಪಾದಿಸಲೆಂಬ ಆಸೆಯಿಂದ ಹಗಲೂ ರಾತ್ರಿ ಓದು ಓದು ಓದು ಎನ್ನುವ ಪೋಷಕರ ಕರ್ಕಶ ಶಬ್ದವನ್ನು ಕೇಳಿ ಕೇಳಿ ಮಕ್ಕಳಿಗೆ ಪುಸ್ತಕವೆಂದರೆ ಅಲರ್ಜಿಯಾಗಿಬಿಟ್ಟಿದೆ. ಇಲ್ಲವೇ ಟೆಕ್ಸ್ಟ್ ಬುಕ್ ಮಾತ್ರ ಓದಿಬಿಟ್ಟರೆ ಸಾಕು ಎನ್ನುವ ಭಾವನೆ ಬೆಳೆಯತೊಡಗಿದೆ. ಇಂದು ‘ಐ ಹೇಟ್ ಬುಕ್ಸ್’ ಎಂದು ಯಾವುದೇ ಮುಜುಗರವಿಲ್ಲದೇ ಮುಕ್ತವಾಗಿ ಹೇಳಿಕೊಳ್ಳುವಂತಾ ಮಕ್ಕಳ ಸಂಖ್ಯೆ ಬೆಳೆಯುತ್ತಿದೆ.

ಇನ್ನು ಮಕ್ಕಳಿಗೆ ಉಳಿದವರಾರು? ಟಿ.ವಿ. ಮತ್ತು ಇಂಟರ್‍ನೆಟ್. ಮನೆ ಬಿಟ್ಟು ಹೊರಗೇ ಬಾರದಂಥಾ ನಮ್ಮ ಇಂದಿನ ಮಕ್ಕಳಿಗಂತೂ ಟಿ.ವಿ., ಸಿನಿಮಾ ಮತ್ತು ಇಂಟರ್‍ನೆಟ್‍ಗಳೇ ಸಮಾಜವನ್ನು ನೋಡಲು ಇರುವ ಸಾಧನಗಳು. ಆದರೆ ಈ ಸಾಧನಗಳು ಇಂದು ಕುಲಗೆಟುಹೋಗಿವೆ. ಅಲ್ಲೊಂದು ಇಲ್ಲೊಂದು ಪತ್ರಿಕೆಯನ್ನು ಬಿಟ್ಟರೆ ಉಳಿದ ಎಲ್ಲಾ ಸಮೂಹ ಮಾಧ್ಯಮಗಳಲ್ಲೂ ಇಂದು ವಿಜೃಂಬಿಸುತ್ತಿರುವುದು ಕ್ರೈಂ ಅಥವಾ ಲೈಂಗಿಕತೆ ಎರಡೇ. ನೀವು ನೋಡದಿದ್ದರೂ ಕಣ್ಣಿಗೆ ರಾಚುವಂತೆ ಕಾಣುತ್ತಿರುವ ಈ ಬೆಳವಣಿಗೆಗಳನ್ನು ಮಕ್ಕಳಿರಲಿ, ದೊಡ್ಡವರೇ ನೋಡಿ ಅರಗಿಸಿಕೊಳ್ಳಲಾಗುತ್ತಿಲ್ಲ. ನೋಡಬಾರದ, ಕೇಳಬಾರದ ಸುದ್ದಿಗಳು, ದೃಶ್ಯಗಳು ಇಂದು ಟಿ.ವಿ.ವಾಹಿನಿಗಳಲ್ಲಿ ಪದೇ ಪದೇ ಬಿತ್ತರವಾಗುತ್ತಿವೆ. ಮಕ್ಕಳ ಕೋಮಲ ಮನಸ್ಸನ್ನು ಕ್ಷಣ ಮಾತ್ರದಲ್ಲಿ ವಿಕಾರಗೊಳಿಸುವ ವಿಕೃತ ಕಾರ್ಯಕ್ರಮಗಳು ಇಂದು ಟಿ.ವಿ.ಗಳಲ್ಲಿ ಪ್ರಸಾರವಾಗುತ್ತಿವೆ. ಟಿ.ಆರ್.ಪಿ. ರೇಟ್ ಹೆಚ್ಚಿಸಿಕೊಳ್ಳಲೋ ಅಥವಾ ಜಾಹಿರಾತುಗಳನ್ನು ಆಕರ್ಷಿಸಲೋ ಟಿ.ವಿ. ಚಾನೆಲ್‍ಗಳು ಜಿದ್ದಿಗೆ ಬಿದ್ದಂತೆ ಸಂಸ್ಕøತಿಹೀನ ಕಾರ್ಯಕ್ರಮಗಳನ್ನು, ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ಯಾವುದೋ ರಾಜಕೀಯ ಪಕ್ಷಗಳ ಯಾವುದೋ ಚಾರಿತ್ರ್ಯಹೀನ ರಾಜಕಾರಣಿಗಳನ್ನೋ, ಉದ್ಯಮಿಗಳನ್ನೋ, ಕ್ರಿಕೇಟ್ ಆಟಗಾರನನ್ನೋ, ಸಿನಿಮಾ ತಾರೆಯನ್ನೋ ಸಮಾಜದ ಆದರ್ಶಗಳೆಂಬಂತೆ ಬಿಂಬಿಲಾಗುತ್ತಿದೆ.

ಇದು ನಮ್ಮ ಮಕ್ಕಳನ್ನು ಸಮಾಜದಲ್ಲಿ ಆದರ್ಶವಾಗಬಲ್ಲ ಯೋಗ್ಯತೆ ಇರೋದು ದುಡ್ಡು ಮತ್ತು ಅಧಿಕಾರ ಇರುವವರಿಗೆ ಮಾತ್ರ ಎಂಬ ತಪ್ಪು ಕಲ್ಪನೆಗೆ ಮತ್ತು ಸಮಾಜದಲ್ಲಿ ಒಳ್ಳೆಯವರೇ ಇಲ್ಲ ಎನ್ನುವಂಥಾ ಭ್ರಮೆಗೆ ಕೊಂಡೊಯ್ಯುತ್ತದೆ. ಉನ್ನತ ಆದರ್ಶಗಳೇ ಕಣ್ಣಿಗೆ ಕಾಣದ ಈ ಸ್ಥಿತಿಯಲ್ಲಿ ಮಕ್ಕಳು ತಮಗೆ ಕಂಡದ್ದನ್ನೇ ಆದರ್ಶವೆಂದುಕೊಳ್ಳುತ್ತಾರೆ ಅಥವಾ ತಾವು ಮಾಡಿದ್ದೇ ಆದರ್ಶವೆನ್ನುವ ಮಟ್ಟಿಗೆ ಬದಲಾಗುತ್ತಾರೆ. ಯಾವ ಮನಸ್ಸಿಗೆ ಉನ್ನತ ಆದರ್ಶಗಳು ದೊರೆಯುವುದಿಲ್ಲವೋ ಸಹಜವಾಗಿಯೇ ಆ ಮನಸ್ಸು ಕೆಳಮುಖವಾಗಿ ಹರಿಯಲಾರಂಭಿಸುತ್ತದೆ. ಅಂದರೆ ಪ್ರೇಮ, ತ್ಯಾಗ, ಸೇವೆ, ಸ್ವಾತಂತ್ರ್ಯ, ಧೈರ್ಯ, ದೇಶಪ್ರೇಮ, ಉತ್ಸಾಹಗÀಳು ಕಡಿಮೆಯಾಗಿ ಸ್ವಾರ್ಥ, ಅಸೂಯೆ, ದ್ವೇಷ, ಕಾಮ, ಕ್ರೋಧ, ಖಿನ್ನತೆ, ನಿರುತ್ಸಾಹಗಳು ಹೆಚ್ಚಾಗುತ್ತವೆ. ಕೊನೆಗೊಮ್ಮೆ ಮಾನಸಿಕವಾಗಿ ಬಲಹೀನರಾಗಿ ಸಿಗರೇಟಿನ ಹೊಗೆಯಲ್ಲೋ, ಗುಂಡಿನ ಮತ್ತಿನಲ್ಲೋ ಅಥವಾ ಇಂಟರ್‍ನೆಟ್‍ನ ಕಿಟಕಿಗಳಲ್ಲೋ ಕಳೆದುಹೋಗಿಬಿಡುತ್ತಾರೆ. ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡುಬಿಡುತ್ತಾರೆ. ಒಟ್ಟಾರೆಯಾಗಿ ಭವ್ಯ ಭಾರತದ ಸತ್ ಪ್ರಜೆಗಳಾಗಬೇಕಿದ್ದ ನಮ್ಮ ಮಕ್ಕಳು ಅರಳುವ ಮುನ್ನವೇ ಬಾಡಿಹೋಗಿ ಸತ್ತ ಪ್ರಜೆಗಳಾಗುತ್ತಾರೆ.

ಆದರೆ ದುರಾದೃಷ್ಟ ಅಂದ್ರೆ ಸಮಾಜದ ಬಹಳಷ್ಟು ಮಂದಿ ಇಂಥಾ ಒಂದು ಗಂಭೀರ ಸಮಸ್ಯೆಯ ಬಗ್ಗೆ ತಲೆಯೇ ಕೆಡಿಸಿಕೊಂಡಂತಿಲ್ಲ. ಇಡೀ ಜನಾಂಗಕ್ಕೆ ಜನಾಂಗವೇ ಅಧಃಪತನಕ್ಕೆ ಇಳಿಯುತ್ತಿರುವ ಈ ಪರಿಸ್ಥಿತಿಯನ್ನು ಸುಧಾರಿಸುವ ಯಾವುದೇ ಪ್ರಯತ್ನವೂ ಕಂಡುಬರುತ್ತಿಲ್ಲ. ಇಂದು ನಮ್ಮ ಶಾಲಾ ಕಾಲೇಜು ಮಕ್ಕಳನ್ನು ಕೇಳಿ ನೋಡಿ “ನಿಮ್ಮ ಆದರ್ಶ ಯಾರು?” ಅಂತ. ಅವರ ಬಾಯಲ್ಲಿ ಬರೋದು ಗೋಲ್ಡನ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್, ಪವರ್ ಸ್ಟಾರ್ ಎಂಬ ರೀಲ್ ಹೀರೋಗಳ ಹೆಸರು. ಇಲ್ಲದಿದ್ದರೆ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್ ಗಳ ಹೆಸರುಗಳು. ಇನ್ನು ಗಂಡುಮಕ್ಕಳ ಪಟ್ಟಿಯಂತೂ ಮುಗಿಯೋದೇ ಇಲ್ಲ. ರಮ್ಯ, ರಕ್ಷಿತಾ, ರಾಧಿಕಾ, ದೀಪಿಕಾ, ಐಂದ್ರಿತಾ, ಐಶ್ವರ್ಯಾ, ಸೌಂದರ್ಯಾ, ಮಲ್ಲಿಕಾ ಶೆರಾವತ್…….. ದೇಶದ ಭವಿಷ್ಯ ಎಷ್ಟು ಸ್ಪಷ್ಟವಾಗಿ ಕಾಣುತ್ತಿದೆಯಲ್ಲವೇ? ಯಾರಾದರೂ ನೂರಕ್ಕೆ ಒಬ್ಬ ಅಪ್ಪಿ ತಪ್ಪಿ ಸಂದೀಪ್ ಉನ್ನಿಕೃಷ್ಣನ್ ನನ್ನ ಆದರ್ಶ ಎಂದು ಹೇಳಿದರೆ ಅದು ನಿಮ್ಮ ಪುಣ್ಯ. ಆದರೆ ಹಾಗೆ ಹೇಳುವವನಿಗೆ ಕಾಲೇಜಿನಲ್ಲಿ ‘ಗಾಂಧಿ’ ಎನ್ನುವ ಪಟ್ಟ ಗ್ಯಾರಂಟಿ.

ಇಂದು ನಮ್ಮ ದೇಶದಲ್ಲಿ ಆಗಬೇಕಿರುವ ಅತ್ಯಂತ ತುರ್ತು ಕೆಲಸವೆಂದರೆ ಮಕ್ಕಳಿಗೆ ಉನ್ನತ ಆದರ್ಶಗಳನ್ನು ನೀಡೋದು. ನಮ್ಮ ದೇಶದಲ್ಲಿ ಮಹಾತ್ಮರಿಗೆ ಬರವಿಲ್ಲ. ತಮ್ಮ ಇಡೀ ಜೀವನವನ್ನೇ ದೇಶಕ್ಕಾಗಿ ಸಮರ್ಪಿಸಿದ ಮಹಾನ್ ತ್ಯಾಗ ಜೀವಿಗಳ ಆದರ್ಶಗಳು ನಮ್ಮ ಕಣ್ಮುಂದೆ ಇದೆ. ಇಡೀ ಜಗತ್ತು ಬಾರತದಲ್ಲಿ ಹುಟ್ಟಿದ ಸಂತರು, ವೀರರು ಮತ್ತು ಮಹಾತ್ಮರ ಬಗ್ಗೆ ವಿಶೇಷ ಅಧ್ಯಯನ ನಡೆಸುತ್ತಿದೆ. ಆದರೆ ನಾವು ಮಾತ್ರ ಅವರನ್ನು ನಮ್ಮ ಸ್ಮøತಿಯಿಂದ ಆಳಿಸಿಹಾಕಿಬಿಟ್ಟಿದ್ದೇವೆ. ಇಂದು ಅಂಥಾ ಆದರ್ಶ ವ್ಯಕ್ತಿಗಳ ಜೀವನಚರಿತ್ರೆಗಳನ್ನು ನಮ್ಮ ಮಕ್ಕಳು ಓದುವಂತಾಗಬೇಕು, ಕೇಳುವಂತಾಗಬೇಕು, ಆಲೋಚಿಸಿ ಚರ್ಚಿಸುವಂತಾಗಬೇಕು. ನಮ್ಮ ಮಕ್ಕಳು ಮಹಾನ್ ವ್ಯಕ್ತಿಗಳಾಗುವಂಥಾ ಕನಸು ಕಾಣಬೇಕು. ಮಹಾತ್ಮಾ ಗಾಂಧಿ, ಭಗತ್ ಸಿಂಗ್, ಶಿವಾಜಿ, ಕೃಷ್ಣದೇವರಾಯ, ಅಂಬೇಡ್ಕರ್, ಬುದ್ಧ, ಬಸವಣ್ಣ, ಜಯಪ್ರಕಾಶ್ ನಾರಾಯಣ್, ಜ್ಯೋತಿಬಾಪುಲೆ, ಶಂಕರಾಚಾರ್ಯ, ಸುಭಾಷ್ ಚಂದ್ರ ಬೋಸ್, ಸ್ವಾಮಿ ವಿವೇಕಾನಂದ, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಲಾಲ್ ಬಹಾದ್ದೂರ್ ಶಾಸ್ತ್ರಿ, ಸರ್ದಾರ್ ವಲ್ಲಭಭಾಯ್ ಪಟೇಲ್, ವಿಕ್ರಂ ಸಾರಾಭಾಯ್, ಅಬ್ದುಲ್ ಕಲಾಂ……  ಹೀಗೆ ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟ ಮಹಾತ್ಮರ ಜೀವನ ನಮ್ಮ ಮಕ್ಕಳ ಜೀವನವನ್ನು ಬದಲಾಯಿಸಬೇಕು. ಅವರಂತೆ ತಾವೂ ಮಹಾವ್ಯಕ್ತಿಗಳಾಗಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕು. ಮಕ್ಕಳು ಹೀಗೆ ಆಗುವಲ್ಲಿ ಪೋಷಕರ, ಶಿಕ್ಷಕರ ಹಾಗೂ ಸಮೂಹ ಮಾಧ್ಯಮಗಳ ಪಾತ್ರ ಬಹಳ ಮುಖ್ಯವಾದದ್ದು. ಹೀಗಾಗಿ ಇವರೆಲ್ಲಾ ತಮ್ಮ ತಮ್ಮ ಜವಾಬ್ದಾರಿ, ಕರ್ತವ್ಯಗಳನ್ನು ಅರಿತುಕೊಂಡು ಮಕ್ಕಳನ್ನು ರಾಷ್ಟ್ರಕ್ಕೆ ಉಪಯುಕ್ತ ವ್ಯಕ್ತಿಗಳನ್ನಾಗಿ ರೂಪಿಸಿದರೆ ರಾಷ್ಟ್ರ ನೆಮ್ಮದಿಯ ದಿನಗಳನ್ನು ಕಾಣಬಹುದು. ಇಲ್ಲದಿದ್ದಲ್ಲಿ ದೇಶ ಅಧಪತನಕ್ಕಿಳಿಯುವುದು ನಿಶ್ಚಿತ. ಈಗಾಗಲೇ ಅದರ ಮುನ್ಸೂಚನೆಗಳು ಅಲ್ಲಲ್ಲ್ಲಿ ಕಂಡುಬರುತ್ತಿವೆ. ಈಗಲೇ ಎಚ್ಚೆತ್ತರೆ ಉಳಿವು. ಇಲ್ಲದಿದ್ದಲ್ಲಿ ಜನಾಂಗದ ಸರ್ವನಾಶ. ನಮ್ಮ ವಿದ್ಯಾರ್ಥಿಗಳ ಆದರ್ಶ ಎಲ್ಲಿಗೆ ಬರುತ್ತಿದೆ ಅಂತ ಎಂದಾದರೊಮ್ಮೆ ಯೋಚಿಸಿದ್ದೀರಾ? ಈ ಸಮಸ್ಯೆಯ ಗಂಭೀರ ಅರಿವು ನಿಮಗಿದೆಯೇ? ಅಬ್ಭಾ! ನೆನೆಸಿಕೊಂಡರೆ ಭಯವಾಗುತ್ತದೆ. ಅಂದು ಸತ್ಯಹರಿಶ್ಚಂದ್ರ ನೋಡಿದ ಮೋಹನದಾಸ ಮಹಾತ್ಮಾ ಗಾಂಧಿಯಾದ. ಇಂದು ಕ್ರೈಂ ಸ್ಟೋರಿ, ಕ್ರೈಂ ಡೈರಿ ನೋಡುವ ನಮ್ಮ ಮಕ್ಕಳು ಏನಾಗಬಹುದು? ಒಮ್ಮೆ ಪ್ರಾಮಾಣಿಕವಾಗಿ ಯೋಚಿಸಿ ನೋಡಿ. ದೇಶದ ಭೀಕರ ಭವಿಷ್ಯದ ಸ್ವಪ್ನ ನಿಮ್ಮ ಕಣ್ಣು ತಿರುಗಿಸದಿದ್ದರೆ ಕೇಳಿ!

4 ಟಿಪ್ಪಣಿಗಳು Post a comment
  1. subhash's avatar
    subhash
    ಫೆಬ್ರ 25 2013

    ee vishaya karnatakada mane manege talupabeku. prati maneyallu deshapremigalirabeku. Bharatavannu bhavishyada jagadguruvannagisuva javabdari nammellara melide.
    ide vishayavagi Divangata Rajiv Dixitarau kooda idi deshakke tilisiddare.
    Mattomme tamage dhanyavadgalu.

    Subhash
    Yeriyur, yelandur tq, ch nagar dist

    ಉತ್ತರ
    • Nithyananda Vivekavamshi's avatar
      Nithyananda Vivekavamshi
      ಮಾರ್ಚ್ 20 2013

      dhanyavaad subhash:):):) ondu maatu!- e article ge haagu nanna jeevanakke neevu helida rajeev dixith re prerane!!!!!!
      – Nithyananda Vivekavamshi
      Mandya.

      ಉತ್ತರ
  2. * ಹರಿಹರಪ್ರಿಯ *'s avatar
    ಮಾರ್ಚ್ 1 2013

    Melinadellavoo Satya… !! Bhagavathgeethe mele Aane.. !!!

    ಉತ್ತರ
    • Nithyananda Vivekavamshi's avatar
      Nithyananda Vivekavamshi
      ಮಾರ್ಚ್ 20 2013

      Dhanvaad hariharapriya:):):)
      – Nithyananda Vivekavamshi
      Mandya.

      ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments