ವಿಷಯದ ವಿವರಗಳಿಗೆ ದಾಟಿರಿ

Archive for

31
ಮಾರ್ಚ್

ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ ಚರ್ಚೆಯ ಸುತ್ತ

Nilume-CSLC - 4

29
ಮಾರ್ಚ್

ಉಪಖಂಡದಲ್ಲಿ ಏಕಾಂಗಿ ಭಾರತ?

– ಡಾ ಅಶೋಕ್ ಕೆ ಆರ್

ISPCತೀರ ಹಿಂದಿನ ಮಾತಲ್ಲ. ಕೆಲವೇ ದಿನಗಳ ಹಿಂದೆ ಅಫ್ಜಲ್ ಗುರುವನ್ನು ನೇಣಿಗೇರಿಸಿ ಅವನ ದೇಹವನ್ನು ಆತನ ಮನೆಯವರಿಗೆ ನೀಡದೆ ಜೈಲಿನಲ್ಲೇ ಮಣ್ಣು ಮಾಡಲಾಗಿತ್ತು. ಕಾಶ್ಮೀರದಲ್ಲಿ ಪ್ರತಿಭಟನೆಗಳಾದವು, ಅಫ್ಜಲ್ ಗುರು ಅಲ್ಲಿಯವನಾಗಿದ್ದರಿಂದ. ಇದೇ ಸಮಯದಲ್ಲಿ ಪಾಕಿಸ್ತಾನದ ರಾಜಕೀಯ ಪಕ್ಷಗಳು ಅಫ್ಜಲ್ ಗುರುವಿನ ದೇಹವನ್ನು ಆತನ ಮನೆಯವರಿಗೆ ಹಿಂದಿರುಗಿಸಬೇಕು ಎಂಬ ನಿರ್ಣಯ ತೆಗೆದುಕೊಂಡವು, ನಿರ್ಣಯ ಮಾಡಿದ್ದು ಹಾದಿಬೀದಿಯಲ್ಲಾಗಿರದೆ ಸಂಸತ್ತಿನಲ್ಲಾಗಿತ್ತು.ಈ ಕಾರಣದಿಂದ ನಿರ್ಣಯಕ್ಕೆ ಅಧಿಕೃತತೆಯ ಮುದ್ರೆ ಲಭಿಸಿತ್ತು. ಪಾಕಿಸ್ತಾನದ ಈ ನಡೆಗೆ ಭಾರತದಲ್ಲಿ ಅಗಾಧ ವಿರೋಧ  ವ್ಯಕ್ತವಾಗಿದ್ದು ಸಹಜ ಪ್ರತಿಕ್ರಿಯೆಯಾಗಿತ್ತು. ನಮ್ಮ ಮನೆಯ ವಿಷಯದಲ್ಲಿ ಅನ್ಯರು ಮೂಗು ತೂರಿಸುವುದು ಕೋಪ ತರಿಸುವ  ವಿಷಯವೇ ಸರಿ.

ಶ್ರೀಲಂಕಾದ ಎಲ್ ಟಿ ಟಿ ಇ ಸಂಘಟನೆಯ ಹುಟ್ಟಿಗೆ ಅನೇಕ ಐತಿಹಾಸಿಕ ಕಾರಣಗಳಿವೆ.ಶ್ರೀಲಂಕಾದ ಈ ಆಂತರಿಕ ಸಮಸ್ಯೆಯ ಉದ್ಭವವಾಗಿದ್ದು ಬ್ರೀಟೀಷರ ಆಡಳಿತದ ಕಾರಣದಿಂದ ಎಂದರೆ ತಪ್ಪಾಗಲಾರದು.ಶ್ರೀಲಂಕಾದ ಎಸ್ಟೇಟುಗಳಲ್ಲಿ ಕೆಲಸ ಮಾಡಲೆಂದು ಶ್ರಮಜೀವಿಗಳಾದ ತಮಿಳರನ್ನು ಕರೆದುಕೊಂಡು ಹೋಗಿತ್ತು ಅಂದಿನ ಬ್ರಿಟೀಷ್ ಆಡಳಿತ. ಬ್ರಿಟೀಷರು ಶ್ರೀಲಂಕ ತೊರೆದ ನಂತರ ಅಲ್ಲಿನ ಬಹುಸಂಖ್ಯಾತರಾದ ಸಿಂಹಳೀಯರು ಲಂಕ ತಮಿಳರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ನೋಡಕಲಾರಂಭಿಸಿದ್ದರು.

Read more »

27
ಮಾರ್ಚ್

ವಸಾಹತು ಪ್ರಜ್ಞೆಯ ವಿಶ್ವರೂಪ ೨ : ಏನೀ ಮೂಢನಂಬಿಕೆ?

ಕನ್ನಡ ನಿರೂಪಣೆ: ರಾಜಾರಾಮ ಹೆಗಡೆ

Prof Balu ವಿದ್ಯಾವಂತರಿಗೆ ಈ ಶಬ್ದ ಸುಪರಿಚಿತ. ‘ಭಾರತೀಯ ಸಮಾಜದಲ್ಲಿ ಮೂಢನಂಬಿಕೆ ಆಳವಾಗಿ ಬೇರುಬಿಟ್ಟಿದೆ’, ಅಥವಾ ‘ಭಾರತೀಯರು ಯಾವ್ಯಾವುದೋ ಮೂಢನಂಬಿಕೆಗಳನ್ನು ಇಟ್ಟುಕೊಂಡಿದ್ದಾರೆ’,‘ಈ ಮೂಢನಂಬಿಕೆಗಳನ್ನು ತೊಡೆದು ಹಾಕದ ಹೊರತೂ ನಮ್ಮ ಸಮಾಜ ಉದ್ಧಾರವಾಗುವುದಿಲ್ಲ, ಇತ್ಯಾದಿ ಹೇಳಿಕೆಗಳನ್ನು ಪ್ರತಿಯೊಬ್ಬನೂ ಭಾಷಣ-ಲೇಖನಗಳಲ್ಲಿ, ತರಗತಿಯ ಪಾಠಗಳಲ್ಲಿ ಸಾಕಷ್ಟು ಕೇಳಿರುತ್ತಾನೆ. ಈ ಶಬ್ದದ ಜೊತೆಗೆ ಸಮಾನಾರ್ಥಕವಾಗಿ ‘ಕುರುಡು ನಂಬಿಕೆ’, ‘ಅಂಧ ಶ್ರದ್ಧೆ’, ‘ಗೊಡ್ಡು ಸಂಪ್ರದಾಯಗಳು’ ಇತ್ಯಾದಿ ಶಬ್ದಗಳೂ ಬಳಕೆಯಲ್ಲಿವೆ. ಈ ಶಬ್ದಗಳೆಲ್ಲ ನಮಗೆ ಅರ್ಥವಾಗುತ್ತಿವೆ ಎಂಬುದಾಗಿ ಭಾವಿಸಿಕೊಂಡೇ ನಾವು ಅವನ್ನು ಉಪಯೋಗಿಸುತ್ತಿರುತ್ತೇವೆ. ಇವುಗಳ ಅರ್ಥವನ್ನು ಕೇಳಿದರೆ ‘ಅವು ಅವೈಜ್ಞಾನಿಕ, ಅಜ್ಞಾನದಿಂದ ಮಾಡುವಂಥವು, ಹಾಗಾಗಿ ಅವು ಮೌಢ್ಯ’ ಎಂಬ ಉತ್ತರ ಬರುತ್ತದೆ.

ಹೀಗೊಂದು ಪ್ರಶ್ನೆ ಕೇಳಿಕೊಳ್ಳುವಾ.ಒಂದು ಸಮಾಜದಲ್ಲಿ ಜನರು ಮಾಡುವ ಕೆಲಸಕ್ಕೆಲ್ಲವೂ ವೈಜ್ಞಾನಿಕ ಕಾರಣಗಳಿರಲು ಸಾಧ್ಯವೆ? ಅಂಥವೆಲ್ಲವೂ ಮೂಢನಂಬಿಕೆಯಾಗುತ್ತದೆಯೆ?  ಗುರು Mooda Nambikeಹಿರಿಯರಿಗೆ ಕಾಲುಮುಟ್ಟಿ ನಮಸ್ಕರಿಸುತ್ತೇವೆ, ಮನಸ್ಸಿಗೆ, ಸಂಬಂಧಕ್ಕೆ ಎಲ್ಲ ಹಿತವೇ, ಆದರೆ ವೈಜ್ಞಾನಿಕ ಕಾರಣ ಗೊತ್ತಿಲ್ಲ. ನಮ್ಮ ವಿದ್ಯಾವಂತರ ಆಧುನಿಕ ಸಮಾಜವನ್ನೇ ತೆಗೆದುಕೊಳ್ಳಿ: ಬೇಸಿಗೆಯಲ್ಲಿ ಸೆಕೆಯಾಗಿ ಬೆವರು ಕಿತ್ತುಕೊಂಡು ಹಿಂಸೆಯಾಗುತ್ತಿರುತ್ತದೆ. ಆದರೂ ಕೋಟು, ಟೈಗಳನ್ನು ಕಟ್ಟಿಕೊಂಡು ಆಫೀಸಿಗೆ ಬರುವುದು ಶಿಷ್ಟಾಚಾರ ಅಥವಾ ಡ್ರೆಸ್ ಕೋಡು. ಕೆಲವರಿಗೆ ಕಡ್ಡಾಯ. ಇದರಲ್ಲಿ ಏನು ವೈಜ್ಞಾನಿಕತೆಯಿದೆ?  ಹೀಗೆ ಯಾವುದೇ ಸಮಾಜವನ್ನು ನೋಡಿದರೂ ಕೂಡ ವೈಜ್ಞಾನಿಕ ಕಾರಣಗಳ ಯಾವುದೇ ಹಂಗಿಲ್ಲದೇ ಇಂಥ ಪದ್ಧತಿಗಳು ಅಥವಾ ರೂಢಿಗಳು ಸಮುದಾಯಗಳನ್ನು ಒಟ್ಟಿಗೇ ಹಿಡಿದಿರುತ್ತವೆ, ಸಂಬಂಧಗಳನ್ನು ಬೆಸೆಯುತ್ತಿರುತ್ತವೆ.‘ಅವೈಜ್ಞಾನಿಕ’ ಎಂಬ ಕಾರಣವನ್ನು ಇಟ್ಟುಕೊಂಡು ಇಂಥ ಆಚರಣೆಗಳನ್ನೆಲ್ಲ ತೊಡೆದುಹಾಕಿದರೆ ಯಾವುದಾದರೂ ಮನುಷ್ಯ ಸಮಾಜ ಅಸ್ತಿತ್ವದಲ್ಲಿರಲು ಸಾಧ್ಯವೆ? ಹಾಗಿದ್ದ ಪಕ್ಷದಲ್ಲಿ ಇಂಥ ರೂಢಿಗಳು ಭಾರತೀಯ ಸಮಾಜದಲ್ಲಿ ಮಾತ್ರವೇ ಉಚ್ಛಾಟಿಸಬೇಕಾದ ಪೆಡಂಭೂತವಾಗಿದ್ದು ಹೇಗೆ ಮತ್ತು ಯಾವಾಗ? ಮೂಢ ನಂಬಿಕೆ ಏಕೆ ತೊಡೆಯಬೇಕಾದ ಅನಿಷ್ಠವೆಂಬುದಾಗಿ ನಾವೆಲ್ಲ ನಂಬಿದ್ದೇವೆ?

ಈ ಮೂಢನಂಬಿಕೆ, ಅಂಧಶ್ರದ್ಧೆ ಇತ್ಯಾದಿ ಪದಗಳೆಲ್ಲ ಕನ್ನಡದಲ್ಲಿ ಅರ್ಥವಿಲ್ಲದ ಶಬ್ದಗಳು.ಅವು ಇಂಗ್ಲೀಷಿನ Superstition ಎಂಬ ಶಬ್ದದ ಕನ್ನಡಾನುವಾದಗಳು. ಭಾರತೀಯ ಭಾಷೆಗಳಲ್ಲಿ ಮೌಢ್ಯ ಎಂದರೆ ಅಜ್ಞಾನ ಎಂಬ ಅರ್ಥವಿದೆ. ಮೂಢ ಎಂದರೆ ಅಜ್ಞಾನಿ. ಆದರೆ ಮೂಢ ನಂಬಿಕೆ ಎನ್ನುವ ಪದಗುಚ್ಛವಿಲ್ಲ. ಅದೇ ಥರ ಅಂಧ ಶ್ರದ್ಧೆ. ಶ್ರದ್ಧೆ ಕುರುಡಾಗಿರುವುದು ಅಂದರೇನು? ಕಣ್ಣಿರುವ ಶ್ರದ್ಧೆ ಅಂತ ಒಂದಿದೆಯೆ? ಭಾರತೀಯ ಭಾಷೆಯಲ್ಲಿ ಈ ಪದವನ್ನು ಅರ್ಥೈಸಲು ಹೋದರೆ ನಗೆಪಾಟಲಾಗುತ್ತದೆ. ಸೂಪರ್‍ಸ್ಟಿಶನ್ ಎಂಬುದು ಕ್ರಿಶ್ಚಿಯನ್ ಥಿಯಾಲಜಿಯಲ್ಲಿ ಹಾಗೂ ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಒಂದು ಪರಿಕಲ್ಪನೆಯನ್ನು ಸೂಚಿಸುವ ಪರಿಭಾಷೆ. ಆ ಹಿನ್ನೆಲೆಯಲ್ಲಿ ಮಾತ್ರವೇ ಅರ್ಥವಾಗುವ ಶಬ್ದ.ಈ ಶಬ್ದವು ಮೂಲತಃ ರೋಮನ್ನರಲ್ಲಿ ಬಳಕೆಯಲ್ಲಿದ್ದು, ಅದರರ್ಥ ‘ದೇವರುಗಳ ಕುರಿತು ಅತಿಯಾದ ಹೆದರಿಕೆ’ ಎಂಬುದಾಗಿದೆ. ಇದನ್ನೊಂದು ಒಳ್ಳಯೆ ಲಕ್ಷಣ ಎಂಬುದಾಗಿ ರೋಮನ್ನರೇನೂ ಭಾವಿಸಿರಲಿಲ್ಲ. ಆದರೆ ರೋಮನ್ ಸಂಸ್ಕೃತಿಯನ್ನು ನಾಶಮಾಡಿ ಅದರ ಮೇಲೆ ಪ್ರತಿಷ್ಠಾಪಿತವಾದ ಕ್ರಿಶ್ಚಿಯಾನಿಟಿಯು ರೋಮನ್ನರ ದೇವತೆಗಳನ್ನು ಸುಳ್ಳು ದೇವತೆಗಳೆಂದು ನಿರೂಪಿಸಿತು. ಈ ಸುಳ್ಳು ದೇವತೆಗಳು ಕ್ರೈಸ್ತರ ಗಾಡ್‍ನ ವಿರೋಧಿಯಾದ ಡೆವಿಲ್ಲನ ಮೋಸಗಳು. ಈ ದೇವತೆಗಳ ಮೂಲಕ ಡೆವಿಲ್ಲನು ಜನರನ್ನು ದಾರಿತಪ್ಪಿಸುತ್ತಿದ್ದಾನೆ ಏಕೆಂದರೆ ಅವು ಗಾಡ್‍ನ ವೈರಿಗಳು ಎಂಬುದಾಗಿ ಶಾಸ್ತ್ರವನ್ನು ಬರೆದುಕೊಂಡರು. ಆಗ ಸೂಪರ್‍ಸ್ಟಿಶನ್ ಶಬ್ದಕ್ಕೆ ತನ್ನದೇ ಆದ ಹೊಸ ಅರ್ಥವೊಂದು ಪ್ರಾಪ್ತವಯಿತು. ಅದೆಂದರೆ ‘ ಸುಳ್ಳು ದೇವರುಗಳನ್ನು ಕುರಿತ ಭಯ ಅಥವಾ ಅವನ್ನು ಪೂಜಿಸುವುದು’ ಅಂತ.
Read more »

24
ಮಾರ್ಚ್

ಭಾನುಮತಿಯ ಸ್ವಗತ

– ಅನಿತ ನರೇಶ್ ಮಂಚಿ

ಸೌಂದರ್ಯ ಎಂದರೆ ಏನು BHanumati
ನೀನೇ  ನೀನು ..
ಎಣೆಯಾರು ನಿನಗೆ ಎಂದಿದ್ದವ
ದ್ರೌಪದಿಗೆ ಸ್ವಯಂವರ
ಎಂಬ ವಾರ್ತೆಗೆ
ಬಾಸಿಂಗ ಕಟ್ಟಿದ್ದ ಕೌರವ

ಭುಜಬಲದ  ಗದೆಯಲ್ಲ
ಎತ್ತಬೇಕಿದೆ ಬಿಲ್ಲು
ಹೂಡಬೇಕಿದೆ ಬಾಣ
ನೀರೊಳಗೆ ನಿಜವಲ್ಲದ
ಪ್ರತಿಬಿಂಬ ಗುರಿ
ತಿರುಗುವ ಮೀನ ಕಣ್ಣ

ಸೋತನಂತೆ ಆವ
ಗೆದ್ದೆ  ಎಂದುಕೊಂಡಿದ್ದೆ ನಾನು
ಒಳಗೆಲ್ಲ ಅವಮಾನದ ಗಾಳಿ
ಅವಳಿಗಾದರೋ
ಹೊರಲಾರದ ಭಾರ
ಕೊರಳೊಳಗೆ ಐವರ ತಾಳಿ
Read more »

23
ಮಾರ್ಚ್

‘ಸತ್ತು ಬದುಕುವುದು ಹೇಗೆ!?’ ಎಂದು ತೋರಿಸಿಕೊಟ್ಟವನ ನೆನಪಿಗೆ…

– ರಾಕೇಶ್ ಶೆಟ್ಟಿ

ಕ್ರಾಂತಿಕಾರಿಗಳೆಂದರೆ ಹಾದಿ ತಪ್ಪಿದ ದೇಶ ಭಕ್ತರಲ್ಲ, ಅವರಿಗೂ ಧ್ಯೇಯ,ಗುರಿ,ಆದರ್ಶಗಳಿರುತ್ತವೆ.ಮತ್ತು ಆ ಆದರ್ಶಗಳನ್ನ ಪಾಲಿಸಲು ತಮ್ಮ ಜೀವವನ್ನು ಸಹ ಅವರು ಅರ್ಪಿಸಬಲ್ಲರು ಅಂತ ಜಗತ್ತಿಗೆ ತೋರಿಸಿಕೊಟ್ಟವರು, ಹುಟ್ಟಿ ಬಂದು ಅಷ್ಟೇ ಬೇಗ ಅದಿನ್ಯಾವ್ದೋ ತುರ್ತು ಕೆಲಸವಿದೆ ಅನ್ನುವಂತೆ ಎದ್ದು ಹೊರಟವರು,ಸತ್ತು ಬದುಕುವುದು ಹೇಗೆ ಅಂತ ತೋರಿಸಿಕೊಟ್ಟು ಹೋದವರು ಭಗತ್ ಸಿಂಗ್,ರಾಜಗುರು ಮತ್ತು ಸುಖದೇವ್.

ಅವರು ಹುತಾತ್ಮರಾಗಿ ಇಂದಿಗೆ ೮೦ ವರ್ಷಗಳಾಯಿತು.ಬಹುಷಃ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ  ಕ್ರಾಂತಿಯ ಕಿಡಿಯನ್ನ ಭಾರತೀಯರಲ್ಲಿ ಬಡಿದ್ದೆಬ್ಬಿಸಿದ ಅಪ್ರತಿಮ ವ್ಯಕ್ತಿ ಭಗತ್ ಸಿಂಗ್.ಚಂದ್ರ ಶೇಖರ್ ಆಜಾದ್ರಂತ ಮಹಾನ್ ಗುರುವಿನ ಶಿಷ್ಯ ಗುರುವನ್ನು ಮೀರಿಸುವಂತೆ ಮುನ್ನಡೆದು ಬಿಟ್ಟರು.ಜಲಿಯನ್ ವಾಲ ಬಾಗ್ನ ದುರಂತ ಭಾರತದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಯ ಕಿಡಿಯ ಉದಯಕ್ಕೆ ಮುನ್ನುಡಿ ಬರೆದಿತ್ತು.ಗಾಂಧೀಜಿಯವರ ಅಸಹಕಾರ ಚಳುವಳಿಗೆ ಓ ಕೊಟ್ಟು ಬೀದಿಗಿಳಿದ ಭಾರತೀಯರಲ್ಲಿ ಪುಟ್ಟ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರು ಇದ್ದರು.ಅಂತವರ ಮಧ್ಯೆ ಬಾಲಕ ಭಗತ್ ಕೂಡ ಇದ್ದ.ಚೌರಿ-ಚೌರಾದ ಘಟನೆಯ ನಂತರ ಗಾಂಧೀಜಿ ಏಕಾಏಕಿ ಚಳುವಳಿಯನ್ನ ಹಿಂದೆ ಪಡೆದಾಗ,ಮತ್ತು ಆ ನಂತರ ಗಾಂಧೀಜಿಯ ಮಾತು ಕೇಳಿ ಶಾಲೆ ಬಿಟ್ಟು ಹೊರಬಂದು ಪಟ್ಟ ಪಾಡು ಇವೆಲ್ಲ ಭಗತ್ ಮನಸಿನಲ್ಲಿ ಗಾಂಧೀವಾದದ ಬಗ್ಗೆ ನಂಬಿಕೆ ಕಳೆಯುವಂತೆ ಮಾಡಿತು.ಬಹುಷಃ ಇವೆರಡು ಘಟನೆಗಳು ಭಗತ್ ಸಿಂಗ್ನ  ಮುಂದಿನ ಜೀವನ ದಿಕ್ಕನ್ನು ಬದಲಾಯಿಸಿದವು ಅನ್ನಬಹುದೇನೋ?

Read more »

22
ಮಾರ್ಚ್

ಕಿತ್ತಳೆ ಹಣ್ಣಿನ ಋಣ!?

– ನಿತ್ಯಾನಂದ.ಎಸ್.ಬಿ

kittale hannuಆಗಲೇ ನಾಲ್ಕು ಘಂಟೆ ಆಗಿಬಿಟ್ಟಿತ್ತು. ಇನ್ನು ಐದು-ಹತ್ತು ನಿಮಿಷದಲ್ಲಿ ರೈಲು, ನಿಲ್ದಾಣಕ್ಕೆ ಬರುವುದರಲ್ಲಿತ್ತು. ಕಾಲೇಜಿನಲ್ಲಿ ಕಬಡ್ಡಿ ತಂಡಕ್ಕೆ ಸೇರಿದ್ದ ಭರತ ಅಭ್ಯಾಸ ಮುಗಿಸಿ ಬರುವುದು ತಡವಾಗಿಬಿಟ್ಟಿತ್ತು. ರೈಲು ಸಿಗದಿದ್ದರೆ ಬಸ್ಸಿನಲ್ಲಿ ಹೋಗಬೇಕು. ಜೇಬಿನಲ್ಲಿ ನಯಾಪೈಸೆ ದುಡ್ಡಿಲ್ಲ. “ದೇವ್ರೇ ರೈಲು ಮಿಸ್ಸು ಮಾಡಿಸಬೇಡಪ್ಪಾ” ಅಂತ ಮನಸ್ಸಿನಲ್ಲಿಯೇ ಪ್ರಾರ್ಥಿಸುತ್ತಾ, ಒಂದೇ ಉಸಿರಿಗೆ ರೈಲು ನಿಲ್ದಾಣದ ಕಡೆಗೆ ಓಡುತ್ತಿದ್ದ. ಮದ್ಯಾಹ್ನ ಊಟ ಮಾಡದಿದ್ದುದರಿಂದ ಹೊಟ್ಟೆ ಬೇರೆ ಚುರುಗುಡುತ್ತಿತ್ತು. ರೈಲು ಸಿಕ್ಕಿಬಿಟ್ಟರೆ ಸಾಕೆಂದು ಶರವೇಗದಲ್ಲಿ ನಿಲ್ದಾಣದೆಡೆಗೆ ಧಾವಿಸುತ್ತಿದ್ದ.

ಭರತ ಹಳ್ಳಿಯ ಹುಡುಗ. ತೀರಾ ಬಡವನಲ್ಲದಿದ್ದರೂ ಮನೆಯ ಆರ್ಥಿಕ ಪರಿಸ್ಥಿತಿ ಅಂಥಾ ಉತ್ತಮವಾಗೇನೂ ಇರಲಿಲ್ಲ. ಮಗಳ ಮದುವೆಗಾಗಿ ಮಾಡಿದ್ದ ಸಾಲ ತೀರಿಸಲು ತಂದೆ ಹಗಲು ರಾತ್ರಿ ದುಡಿಯುತ್ತಿದ್ದರೆ, ಅಮ್ಮ ಮನೆಯ ಖರ್ಚನ್ನು ಸರಿಹೊಂದಿಸಲು ಬಟ್ಟೆ ಹೊಲಿಯುತ್ತಿದ್ದಳು. ತಂದೆ ತಾಯಿಯ ಕಷ್ಟವನ್ನು ಕಣ್ಣಾರೆ ಕಂಡಿದ್ದ ಭರತ, ಹೈಸ್ಕೂಲು ಮುಗಿದ ನಂತರ ಸ್ವಂತ ಖರ್ಚಿನಲ್ಲೇ ಓದಲು ತೀರ್ಮಾನಿಸಿದ್ದ. ಅದಕ್ಕಾಗಿಯೇ ರಜೆಯಲ್ಲಿ ಪಟ್ಟಣಕ್ಕೆ ಹೋಗಿ ಪೇಪರ್ ಹಾಕಿ, ಹಾಲು ಮಾರಿ, ಗಂಧದಕಡ್ಡಿ ಫ್ಯಾಕ್ಟರಿಗೆ ಹೋಗಿ ಒಂದಷ್ಟು ಹಣವನ್ನು ಸಂಪಾದಿಸಿದ್ದ. ಅದೇ ಹಣದಲ್ಲಿ ಕಾಲೇಜಿನ ಫೀಜು ಕಟ್ಟಿ, ಪುಸ್ತಕ, ಪೆನ್ನು, ಬ್ಯಾಗನ್ನು ಕೊಂಡುಕೊಂಡಿದ್ದ. ಒಂದು ರೈಲು ಪಾಸನ್ನೂ ಮಾಡಿಸಿಕೊಂಡಿದ್ದ. ಹೀಗಾಗಿ ಸದ್ಯ ಭರತನ ಹತ್ತಿರ ಒಂದು ಬಿಡಿಗಾಸೂ ಉಳಿದಿರಲಿಲ್ಲ. ಬೆಳಿಗ್ಗೆ ಊಟವನ್ನು ಡಬ್ಬಿಗೆ ಹಾಕಿಸಿಕೊಳ್ಳುವುದಕ್ಕೆ ತಡವಾಗುತ್ತದೆಂದು ಹಾಗೆಯೇ ಬಂದಿದ್ದರಿಂದ ಮದ್ಯಾಹ್ನದ ಊಟ ಖೋತಾ ಆಗಿತ್ತು.

“ಅಬ್ಭಾ.. ರೈಲು ಇನ್ನೂ ಬಂದಿಲ್ಲ”. ಎಂದು ನಿಟ್ಟುಸಿರು ಬಿಟ್ಟ ಭರತ, ದೂರದಿಂದಲೇ ಕಂಡ ಸ್ನೇಹಿತರ ಬಣ್ಣಬಣ್ಣದ ಬ್ಯಾಗುಗಳನ್ನು ನೋಡಿ ರೈಲು ಇನ್ನೂ ಬಂದಿಲ್ಲವೆಂಬುದನ್ನು ಖಚಿತಪಡಿಸಿಕೊಂಡ. ಬಹಳ ಆಯಾಸವಾಗಿದ್ದುದರಿಂದ ಓಡುವುದನ್ನು ನಿಲ್ಲಿಸಿ ನಡೆಯಲು ಪ್ರಾರಂಭಿಸಿದ.ಭರತ ಒಳ್ಳೆಯ ಕಬಡ್ಡಿ ಆಟಗಾರ. ಮುಂದಿನ ವಾರ ಚಿತ್ರದುರ್ಗದಲ್ಲಿ ನಡೆಯಲಿದ್ದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾಗಿದ್ದ. ಅದಕ್ಕಾಗಿಯೇ ದಿನನಿತ್ಯ ಕಠಿಣ ತಯಾರಿ ನಡೆದಿತ್ತು. ಜೊತೆಗೆ ಚಿತ್ರದುರ್ಗಕ್ಕೆ ಹೋಗಿಬರಲು ಬೇಕಾದ 340 ರೂಪಾಯಿಗಳನ್ನು ಒಟ್ಟು ಮಾಡಬೇಕಾಗಿತ್ತು. ಹೇಗೋ ಹೊಂದಿಸಿದರಾಯ್ತು ಎಂದುಕೊಂಡೇ ನಿಲ್ದಾಣ ಸೇರಿದ.

ಭರತನ ಬರುವಿಕೆಯನ್ನೇ ಕಾಯುತ್ತಾ ನಿಂತಿದ್ದ ಪ್ರಿಯಮಿತ್ರ ರಾಜೇಶ, ಭರತ ಹತ್ತಿರವಾಗುತ್ತಿದ್ದಂತೆ ಕೇಳಿದ. “ಏನೋ ಭರತ. ಇಷ್ಟು ಹೊತ್ತು ಮಾಡಿಬಿಟ್ಟೆ. ಕಬಡ್ಡಿ ಪ್ರಾಕ್ಟೀಸ್ ಮಾಡ್ತಿದ್ದಾ..?
ಭರತ ಹೂಂ ಎಂಬಂತೆ ತಲೆ ಆಡಿಸಿದ.
Read more »

21
ಮಾರ್ಚ್

“ಅರ್ನೆಸ್ಟೊ ಚೆಗುವಾರ ಕ್ರಾಂತಿಕಾರಿ ಭಾವಜೀವಿ”

– ನಾರಾಯಣ್ ಕೆ ಕ್ಯಾಸಂಬಳ್ಳಿ

Cheguvera‘ನಾನು ಎಂದಿಗೂ ಸೋತು ಮನೆಗೆ ಹಿಂತಿರುಗುವುದಿಲ್ಲ. ಸೋಲಿಗಿಂತ ಸಾವನ್ನೆ ಹೆಚ್ಚು ಇಚ್ಛಿಸುತ್ತೇನೆ’  ಎಂದು ಕ್ಯೂಬ ಬಿಡುವ ಮೊದಲು ಹೇಳಿದ ಮಾತಿನಂತೆಯೇ ನಿರಂತರವಾಗಿ ಹೋರಾಟದಲ್ಲೇ ತಮ್ಮ ಜೀವನವನ್ನು ಸವೆದು ಸೋಲಲು ಇಚ್ಛಿಸಿದೆ ತನನ್ನು ಸಾವಿಗೆ ಒಡ್ಡಿಕೊಂಡ ಮಹಾನ್ ಕ್ರಾಂತಿಕಾರಿ, ಮಾನವತಾವಾದಿ, ಗೆರಿಲ್ಲಾ ಯುದ್ಧ ತಂತ್ರ ನಿಪುಣ, ವೈದ್ಯ, ಬರಹಗಾರ, ಬುದ್ಧಿಜೀವಿ ಹಾಗೂ ಕ್ಯೂಬಾ ಕ್ರಾಂತಿಯ ಪ್ರಮುಖ ನೇತಾರ ಅರ್ನೆಸ್ಟೊ ಚೆಗುವರ ಜಗತ್ತಿನ ಕ್ರಾಂತಿಕಾರಿ ಹೋರಾಟಗಾರರಲ್ಲಿ ಪ್ರಮುಖರು. ಚೆಗುವಾರ ಹುಟ್ಟಿದ್ದು ಜೂನ್ 14, 1928ರಂದು ಅರ್ನೆಸ್ಟೊ ಚೆಗುವಾರ ಲಿಂಚ್ ಮತ್ತು ಸೀಲಿಯಾ ಡ ಲಾ ಸೆರ್ನ್ ಎಂಬ ಸ್ಪ್ಯಾನಿಷ್ ಮತ್ತು ಐರಿಷ್ ತಂದೆ ತಾಯಿಗಳ ಮೊದಲ ಮಗನಾಗಿ ಅರ್ಜೆಂಟೀನಾದ ರೊಸಾರಿಯೋ ಪಟ್ಟಣದಲ್ಲಿ. ಚೆಗುವರ ಚಿಕ್ಕಂದಿನಿಂದಲೇ ಬಡವರ, ಶ್ರಮಿಕರ ಪರವಾಗಿ ಹೆಚ್ಚು ಪ್ರೀತಿಯನ್ನು ಬೆಳೆಸಿಕೊಂಡವನು ಮತ್ತು ಎಡಪಂಥೀಯ ಒಲವು ಹೊಂದಿದ್ದ ಕುಟುಂಬದಲ್ಲಿ ಹುಟ್ಟಿಬೆಳೆದ ಅವನಿಗೆ ಚಿಕ್ಕಂದಿನಿಂದಲೇ ಸ್ಪಷ್ಟ ರಾಜಕೀಯ ದೃಷ್ಟಿಕೋನಗಳ ಬಗೆಗೆ ಪರಿಚಯ ದೊರೆಯುತಿತ್ತು.

ಸ್ಪ್ಯಾನಿಷ್ ಅಂತರ್‍ಯುದ್ಧದ ಕಾಲದಿಂದಲೂ ಗಣತಂತ್ರ ವಾದಿಗಳ ಪ್ರಬಲ ಸಮರ್ಥಕರಾಗಿದ್ದ ತಂದೆಯ ಪ್ರಭಾವ ಚೆಗುವಾರನ ಮೇಲೆ ಸಹಜವಾಗಿಯೇ ಬೀರಿತ್ತು.ಚೆಗುವಾರ ತನ್ನ 19ನೇ ವಯಸ್ಸಿನಲ್ಲಿ (1948) ವೈದ್ಯಕೀಯ ಕಲಿಕೆಗಾಗಿ ಬ್ಯೂನಸ್ ಐರ್ಸ್ ವಿಶ್ವವಿದ್ಯಾನಿಲಯಕ್ಕೆ ಸೇರುತ್ತಾನೆ. ಆದರೆ 1951ರಲ್ಲಿ ವಿಶ್ವವಿದ್ಯಾಲಯದಿಂದ ಒಂದು ವರ್ಷ ರಜೆ ಪಡೆದು ತನ್ನ ಆಪ್ತಮಿತ್ರ ಅಲ್ಬರ್ಟೊ ಗ್ರೆನಡೋ ಜೊತೆಗೂಡಿ ಮೋಟರ್ ಸೈಕಲ್ ಮೇಲೆ ದಕ್ಷಿಣ ಅಮೆರಿಕಾದ ಪ್ರವಾಸ ಹೊರಡುತ್ತಾನೆ. ಚೆಗುವಾರನ ಬದುಕಿನಲ್ಲಿ ಈ ಪ್ರವಾಸ ಬಹಳ ಪ್ರಮುಖವಾದದ್ದು ಮತ್ತು ಚೆಗುವಾರ ತಾನೊಬ್ಬ ಕ್ರಾಂತಿಕಾರಿಯಾಗಿರಲು ಪ್ರಮುಖ ಕಾರಣ ಈ ಪ್ರವಾಸದ ಅನುಭವಗಳೇ. ಅವನೆ ಹೇಳಿದ, ಬರೆದುಕೊಂಡಿರುವ ಹಾಗೆ “ಆಂಡೀಸ್ ಪರ್ವತಶ್ರೇಣಿಯ ಉನ್ನತ ಶಿಖರವಾದ ಮಾಚು ಪಿಚ್ಚುವಿಗೆ ಹೋಗುವ ದಾರಿಯಲ್ಲಿ ಶ್ರೀಮಂತ ಭೂಮಾಲೀಕರಿಂದ ತುಂಡು ಭೂಮಿಗಳನ್ನು ಪಡೆದು ಕೃಷಿ ಮಾಡುತಿದ್ದ ರೈತಾಪಿ ಜನಸಮುದಾಯಗಳ ಹೀನಾಯ ಬದುಕು, ಕಡುಬಡತನ, ನನ್ನ ಮನಸ್ಸಿಗೆ ತಾಕಿತು. ಈ ಜನರಿಗೆ ನೆರವಾಗಬೇಕಿದ್ದಲ್ಲಿ ನಾನು ವೈದ್ಯಕೀಯ ಅಭ್ಯಾಸವನ್ನು ಬಿಟ್ಟು ಸಶಸ್ತ್ರ ಹೋರಾಟದ ರಾಜಕೀಯ ರಂಗಕ್ಕೆ ಪ್ರವೇಶಿಸಬೇಕಿದೆ ಎಂದು ಮನವರಿಕೆಯಾಯಿತು” ಎಂದು ನಂತರ ಚೆಗುವಾರ ಬರೆದುಕೊಳ್ಲುತ್ತಾನೆ. ಹಾಗಾಗಿ ಈ ಮೋಟಾರ್ ಸೈಕಲ್ ಪ್ರವಾಸ್ ಚೆಗುವಾರನ ಕ್ರಾಂತಿ ಬದುಕಿನ ಬಹಳ ದೊಡ್ಡ ತಿರುವು. ಮೋಟಾರ್ ಸೈಕಲ್ ಪ್ರವಾಸದ ಜೊತೆಗಾರ ಆಲ್ಬರ್ಟೊ ಗ್ರಾನಡೊಸ್  ಚೆ ಕುರಿತು ಹೇಳುತ್ತಾ  ಟೆಟೆ (‘ಚೆ’ ನನ್ನು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು) ನನ್ನು ನಾನು ಮೊದಲು ಭೇೀಟಿ ಆಗಿದ್ದು 1941ರಲ್ಲಿ ಅದು ನನ್ನ ಸಹೋದರ ಥಾಮಸ್ ಮೂಲಕ. ಆಗ ನನಗೆ 13 ವರ್ಷ ವಯಸ್ಸು. ನಮ್ಮಿಬ್ಬರನ್ನು ಒಟ್ಟೊಟ್ಟಾಗಿ ತಂದ ವಿಷಯವೆಂದರೆ ಓದುವ ಅಭಿರುಚಿ ಮತ್ತು ನಿಸರ್ಗ ಪ್ರೇಮ. ಚೆ ಮನೆಗೆ ನಾನು  ವಾಡಿಕೆಯ ಅಥಿತಿಯಾಗಿದ್ದೆ. ಅಲ್ಲಿದ್ದ ಗ್ರಂಥಭಂಡಾರವನ್ನು ನನ್ನದೆಂಬತೆಯೇ ಬಳಸಿಕೊಳ್ಳುತ್ತಿದ್ದೆ. ಟೆಟೆ (ಚೆ) ಒಬ್ಬ ರೂಢಿಯ ಮಾತುಗಾರನಾಗಿದ್ದ.

Read more »

20
ಮಾರ್ಚ್

ಇಂತ ಸಾವಿಗೆ ಕೊನೆಯೆಂದು?

– ಗುರುಗಜಾನನ ಭಟ್

sainikaruಕೇವಲ ಎರಡು ಜನ ಉಗ್ರರು ಐದು ಜನ ಸೈನಿಕರನ್ನು ಕೊಂದರೆಂದರೆ ನಮ್ಮ ಸೈನಿಕರದ್ದು ಎಂತಹ  ಸಾವಾಗಿರಬೇಕು ?? ಎಂದಾದರೂ ಯೋಚಿಸಿದ್ದೇವೆಯೇ? ಕೈಯಲ್ಲಿ ಉಗ್ರರು ಆಧುನಿಕ ಮೆಷೀನ್ ಗನ್ನುಗಳನ್ನೂ ಹಿಡಿದು ಬಂದರೆ , ಭಾರತೀಯ ಸೈನಿಕನಲ್ಲಿ ಎಂತಹ ಗನ್ನುಗಳಿರುತ್ತವೆ ಎಂದು ಗಮನಿಸಿದ್ದೆವೆಯೇ?? ನಮ್ಮ ಮುಗ್ಧ ಯೋಧರ ಎದೆಯಲ್ಲಿ ಅಗಾಧ ದೇಶಪ್ರೇಮವನ್ನು ಬಿತ್ತಿ , ಅದನ್ನು ಬೆಳೆಸಿ ಹೆಮ್ಮರ ವಾಗಿಸಿ , ಕೈಯಲ್ಲಿ ಸರಿಯಾದ ಗನ್ನುಗಳನ್ನೂ ಕೊಡದೆ, ಎದೆಗೆ ರಕ್ಷಾ ಕವಚಗಳನ್ನು ನೀಡದೆ , ಯುದ್ದಕ್ಕೆ ನಿಲ್ಲಿಸಿ ಬಿಡುತ್ತೆವಲ್ಲ ಇದಾವ ನ್ಯಾಯ ?

ಸೈನಿಕರನ್ನು ಕೊಲ್ಲಲು ಬಿಟ್ಟು, ಸತ್ತಮೇಲೆ ಪರಮವೀರ ಚಕ್ರ ಕೊಡುವ ಸರ್ಕಾರ ಬಹುಶಃ ಯಾವ ದೇಶದಲ್ಲೂ ಇಲ್ಲ. ನಮ್ಮ ನೆಲದಲ್ಲೇ ನಮ್ಮ ಸೈನಿಕರ ಹತ್ಯೆ ನಡೆಯುತ್ತದಲ್ಲ ಇದಕ್ಕಿಂತ ವಿಪರ್ಯಾಸ ಎಲ್ಲಾದರೂ ಉಂಟೇ ?? ಕಟ್ಟ ಕಡೆಗೆ ಸೈನಿಕ ಸತ್ತಿದ್ದಾನೆ , ಅವನದು ಮಾತೃ ಭಕ್ತಿ , ನೆಲದ ಮಣ್ಣಿನ ಪ್ರೀತಿ , ಎಲ್ಲವೂ ಸರಿ , ಆದರೇ ಅದನ್ನು ತೋರಿಸಲು ಸಾಯಲೇ ಬೇಕಿತ್ತೆ??   ಅಥವಾ ಆ ಸಾವು ಅನಿವಾರ್ಯವಾಗಿತ್ತೆ ??

ಎಂದು ಕೊನೆ ಈ ಸಾವಿಗೆ ?? 1947 ರಿಂದಲೂ ನಮ್ಮ ಸೈನಿಕರು ಸಾಯುತ್ತಲೇ ಇದ್ದಾರೆ  ನಮ್ಮ ಸೈನಿಕನಿಗೆ , ಅವನ ವೀರಾವೇಶಕ್ಕೆ , ಅವನ ಆತ್ಮ ಸ್ತೈರ್ಯಕ್ಕೆ , ಅವನ ಮಣ್ಣಿನ ಪ್ರೀತಿಗೆ , ಸರ್ಕಾರ ಕೊಟ್ಟಿದ್ದಾದರೂ ಏನು ? ನಮ್ಮ ಸೈನಿಕರ ಆಲೋಚನೆಯನ್ನೇಕೆ ಬದಲು ಮಾಡಲಾಗದು ?? ನೀನು ಹೊರಟಿರುವುದು ವೀರಮರಣವನ್ನೊಪ್ಪಲು ಅಲ್ಲ , ನಿನ್ನನ್ನು ಕಳುಹಿಸುತ್ತಿರುವುದು , ಸಾಯಲಿ ಎಂದಲ್ಲ , ಸಾಯಿಸು ಎಂದು . ನಿನಗೆ ಮುಕ್ತ ಅವಕಾಶವಿದೆ , ದೇಶದ್ರೋಹಿಗಳನ್ನು ಸದೆ ಬಡಿ ಎಂದು ಯಾಕೆ ಆತನಿಗೆ ತಿಳಿಸಬಾರದು ??

Read more »

19
ಮಾರ್ಚ್

ರಾಮಸೇತು ಒಡೆದರೆ ಥೋರಿಯಮ್ ನಿಕ್ಷೇಪಕ್ಕೆ ಎಳ್ಳು ನೀರು…

-ಚಕ್ರವರ್ತಿ ಸೂಲಿಬೆಲೆ

Rama Sethuve1ನಮಗೇ ಅರಿವಿಲ್ಲದೇ ಭಯಾನಕ ಪರಿಸ್ಥಿತಿಯತ್ತ ತೆವಳಿಕೊಂಡು ಹೋಗುತ್ತಿದ್ದೇವೆ! ನಾವು ಬಳಸುವ ಪೆಟ್ರೋಲು – ಡೀಸೆಲ್ಲಿನ ಮುಕ್ಕಾಲು ಭಾಗ ಆಮದು ಮಾಡಿಕೊಳ್ಳುತ್ತಿದ್ದೇವೆ. ಕಳೆದ ವರ್ಷದ ಲೆಕ್ಕಾಚಾರದ ಪ್ರಕಾರ ೧೩೪ ಶತಕೋಟಿ ಡಾಲರುಗಳಷ್ಟು ತೈಲ ಆಮದು ಮಾಡಿಕೊಂಡಿದ್ದೇವೆ. ಆಮದು ಮಿತಿಮೀರಿ ರಫ್ತು ನೆಲ ಕಚ್ಚುತ್ತಿರುವುದರಿಂದ ಡಾಲರಿನೆದುರು ರೂಪಾಯಿ ಸೋಲುತ್ತಲೇ ಸಾಗುತ್ತಿದೆ. ಒಂದಷ್ಟು ಜನಕ್ಕೆ ರೂಪಾಯಿಯ ಅಪಮೌಲ್ಯ ಲಾಭದಾಯಕವೆನಿಸಿದರೂ ಭಾರತದ ದೃಷ್ಟಿಯಿಂದ ಬಲು ಭಯಾನಕ.
ಅದೇಕೋ ನೆಹರೂ ಕಾಲದಿಂದಲೂ ಈ ದೇಶಕ್ಕೆ ದೂರದೃಷ್ಟಿಯ ಕೊರತೆ ಇದೆ. ಮುಂದಿನ ನೂರು ವರ್ಷಗಳಿಗೆ, ಸಾವಿರ ವರ್ಷಗಳಿಗೆ ಯೋಜನೆ ರೂಪಿಸುವ ಪ್ರಯತ್ನಗಳೇ ಇಲ್ಲ. ಅದು ಬಿಡಿ, ಅಂತಾರಾಷ್ಟ್ರೀಯ ಒತ್ತಡಗಳಿಗೆ ಮಣಿದು ಇರುವ ಸಂಪತ್ತನ್ನೂ ನಾಶ ಮಾಡಿಕೋಳ್ಳುವ ಜಾಯಮಾನ ನಮ್ಮದು.

ಎನರ್ಜಿ ಇನ್‌ಫರ್ಮೇಶನ್ ಏಜೆನ್ಸಿಯ ಪ್ರಕಾರ ಅಮೆರಿಕಾ, ಚೀನಾ, ರಷ್ಯಾ ಬಿಟ್ಟರೆ ಹೆಚ್ಚು ತೈಲ ಬಳಸುವ ರಾಷ್ಟ್ರ ನಮ್ಮದೇ. ಉಳಿದ ಮೂರು ರಾಷ್ಟ್ರಗಳೂ ತೈಲ ಹೊರತೆಗೆದು ಸಂಸ್ಕರಿಸಿ ಬಳಸುವಲ್ಲಿ ಸ್ವಾವಲಂಬಿಯಾಗುವತ್ತ, ಅಷ್ಟೇ ಅಲ್ಲ, ತಮ್ಮ ತೈಲ ಕಂಪನಿಗಳನ್ನು ತೈಲ ರಾಷ್ಟ್ರಗಳಿಗೆ ಕಳಿಸುವತ್ತಲೂ ಗಮನ ನೀಡುತಿವೆ. ನಾವು ಮಾತ್ರ ಕಂಡುಹಿಡಿದಿರುವ ತೈಲ ಸಂಪತ್ತನ್ನು ಹೊರತೆಗೆಯಲೂ ಮೀನಾಮೇಷ ಎಣಿಸುತ್ತ ಬಿಲಿಯನ್‌ಗಟ್ಟಲೆ ಡಾಲರುಗಳನ್ನು ವ್ಯರ್ಥ ಮಾಡುತ್ತ, ಕಾಲ ಕಳೆಯುತ್ತಿದ್ದೇವೆ. ಅದೇ ಏಜೆನ್ಸಿಯ ಅಂಕಿ ಅಂಶದ ಪ್ರಕಾರ ೨೦೧೦ರಲ್ಲಿ ನಾವು ಏಳುವರೆ ಲಕ್ಷ ಬ್ಯಾರಲ್‌ನಷ್ಟು ತೈಲವನ್ನು ಪ್ರತಿ ನಿತ್ಯ ಹೊರತೆಗೆದರೆ, ಆ ವರ್ಷ ೩೨ ಲಕ್ಷ ಬ್ಯಾರಲ್‌ನಷ್ಟು ತೈಲವನ್ನು ಪ್ರತಿನಿತ್ಯ ಬಳಸಿದ್ದೇವೆ. ಅಂದಮೇಲೆ ಅಂತಾರಾಷ್ಟ್ರೀಯ ಒತ್ತಡಗಳು ನಮ್ಮ ಮೇಲೆ ಹೇಗಿರಬಹುದೆಂದು ಲೆಕ್ಕ ಹಾಕಿ. ನಮಗೆ ಪೆಟ್ರೋಲು- ಡೀಸೆಲ್ಲು ಕಳಿಸುವುದಿಲ್ಲವೆಂದು ತೈಲ ರಾಷ್ಟ್ರಗಳು ನಿರ್ಬಂಧ ಹೇರಿ ಕುಂತುಬಿಟ್ಟರೆ ನಮ್ಮ ಕಥೆ ಮುಗಿದೇಹೋಯ್ತು. ಹಾಹಾಕಾರ ಉಂಟಾಗಿಬಿಡುತ್ತೆ.

Read more »

18
ಮಾರ್ಚ್

ನರೇಂದ್ರ ಮೋದಿ v /s ರಾಹುಲ್ ಗಾಂಧಿ …ಅನುಭವಿ v /s ಅನನುಭವಿ

– ಅಜಿತ್ ಶೆಟ್ಟಿ,ಉಡುಪಿ

NaGa೨೦೧೪ ರ ಲೋಕಸಭೆ ಮಹಾಸಮರ ಇನ್ನೇನು ಬಂದೇ ಬಿಡುತ್ತೆ.ಎರಡು ಪ್ರಮುಖ ಒಕ್ಕೂಟಗಳಾದ ಎನ್.ಡಿ.ಎ ಹಾಗೂ ಯು.ಪಿ.ಎ ತನ್ನ ಪ್ರಧಾನಿ ಅಭ್ಯರ್ಥಿ ಯಾರೆಂದು ಅಧಿಕೃತವಾಗಿ ಘೋಷಿಸದಿದ್ದರೂ, ತಮ್ಮ ಪ್ರಧಾನಿ ಅಭ್ಯರ್ಥಿಗೆ ಸಕಲ ವೇಷ-ಭೂಷಣ ತೊಡಿಸಿ ರಂಗಕ್ಕೆ ಇಳಿಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿವೆ. ನೆಹರು ಕುಟುಂಬಕ್ಕೆ ಜೋತು ಬಿದ್ದಿರುವ ಕಾಂಗ್ರೆಸ್ ತಿಂಗಳ ಹಿಂದೆ ಜೈಪುರದಲ್ಲಿ ನಡೆದ ಚಿಂತನಾ ಶಿಬಿರ ದಲ್ಲಿ ಆ ವಂಶದ ಕುಡಿ , ನಲವತ್ತು ಮೀರಿದ ಯುವಕ ರಾಹುಲ್ ಗಾಂಧಿ ಯವರಿಗೆ ಪಕ್ಷದಲ್ಲಿ “ನಂಬರ್ ಟೂ” ಸ್ಥಾನ ಕೊಟ್ಟು ಅವರನ್ನೇ ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದೆ. ವೀರಪ್ಪ ಮೊಯಿಲಿ, ದಿಗ್ವಿಜಯ್ ಸಿಂಗ್ , ಜಿತೀನ್ ಪ್ರಸಾದ್ ರಂತವರು ರಾಹುಲ್ ಗುಣಗಾನದಲ್ಲೇ ತೊಡಗಿ ಬಹಿರಂಗವಾಗೇ ಅವರನ್ನು ಪ್ರಧಾನಿ ಅಭ್ಯರ್ಥಿಎಂದಿದ್ದಾರೆ.ಎನ್.ಡಿ.ಎಯ ಪ್ರಮುಖ ಪಕ್ಷ ಬಿಜೆಪಿ ಇತ್ತೀಚಿಗೆ ನಡೆದ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಗುಜರಾತ್ ನ ಮೂರುಬಾರಿಯ ಜನಪ್ರಿಯ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ವಿಶೇಷ ಆದ್ಯತೆ ನೀಡಿದೆ . ಪಕ್ಷದಲ್ಲಿ ಏನೇ ಗೊಂದಲ ಇದ್ದರೂ, ಕಾರ್ಯಕಾರಿ  ಸಭೆಯಲ್ಲಿ ಮೋದಿಗೆ ಕೊಟ್ಟ ಪ್ರಾಮುಖ್ಯತೆ ಸೂಚ್ಯವಾಗಿ ಮೋದಿನೇ ಮುಂದಿನ ಪ್ರಧಾನಿ ಅಭ್ಯರ್ಥಿ ಎನ್ನುವಂತಿತ್ತು.ಹಾಗೇ ಪಕ್ಷದ ರಾಷ್ಟೀಯ ಅಧ್ಯಕ್ಷ ರಾಜನಾಥ್ ಸಿಂಗ್ ರ ಹೇಳಿಕೆಗಳು ಕೂಡ ಇದಕ್ಕೆ ಪುಷ್ಟಿ ನೀಡುತಿತ್ತು .

ಒಂದು ವೇಳೆ ಈವರಿರ್ವರು ಪ್ರಧಾನಿ ಅಭ್ಯರ್ಥಿಗಳಾದರೆ, ಮೋದಿ ಮುಂದೆ ರಾಹುಲ್ ಎನ್ನುವುದು ಅನುಭವಿ ಭೀಷ್ಮನ ಮುಂದೆ ಅನನುಭವಿ ಬಡಾಯಿ ಉತ್ತರ ಕುಮಾರನನ್ನು ತಂದು ನಿಲ್ಲಿಸಿದಂತೆ.ಇದು ನಿಸ್ಸಂಶಯವಾಗಿ ಅನುಭವಿ v /s ಅನನುಭವಿ ನಡುವಿನ ಸಮರ.ಹೌದು ಮೇಷ್ಟ್ರ ಮಗ ಮೇಷ್ಟ್ರು ಅಗಬಾರದು, ಡಾಕ್ಟರ್ ಮಗ ಡಾಕ್ಟರ್ ಆಗಬಾರದು ಅಂತೇನು ಇಲ್ಲಾ ಹಾಗೇ ತಲತಲಾಂತರದಿಂದ ರಾಜಕೀಯ ವಂಶದಿಂದ ಬಂದ ರಾಜಕಾರಣಿ ಮಗ ಪ್ರದಾನಿ ಆಗಬಾರದಂತೆನೂ ಇಲ್ಲ.ಆದರೆ, ಅವನು ತನ್ನ ಸ್ವಂತ ಅರ್ಹತೆಯಿಂದ ಆ ಪದವಿ ಪಡೆಯಬೇಕೇ ವಿನಹ , ತನ್ನ ತಂದೆ ಅನುಭವಿಸಿದ ಹುದ್ದೆ, ತಂದೆ ಹೆಸರು , ಕುಟುಂಬದ ಹೆಸರು ಇವನ ಅರ್ಹತೆ ಆಗಬಾರದು. ರಾಹುಲ್ ತನ್ನ ಕುಟುಂಬ ನಡೆಸಿದ ಅಧಿಕಾರ ನೋಡಿದ್ದಾನೆ ಹೊರತು ಅಧಿಕಾರ ನಡೆಸಿ ಗೊತ್ತಿಲ್ಲ . ರಾಹುಲ್ ಈ ತನಕ ಉಸ್ತುವಾರಿ ವಹಿಸಿಕೊಂಡ ಬಿಹಾರ್ , ಗುಜರಾತ್ , ತಮಿಳುನಾಡು , ಮತ್ತು ಆತನ ಸ್ವಕ್ಷೇತ್ರ ಅಮೇಥಿಯನ್ನು ಹೊಂದಿರುವ ಉತ್ತರ ಪ್ರದೇಶದ  ಚುನಾವಣೆ  ಎಲ್ಲಾ ಕಡೆ ಕಾಂಗ್ರೆಸ್ ಮಕಾಡೆ ಮಲಗಿತ್ತು.ಉತ್ತರ ಪ್ರದೇಶದ ಚುನಾವಣೆಯಂತು ರಾಹುಲ್ v /s ಅಕಿಲೇಶ್ ಅಂತಾನೇ ಬಿಂಬಿತ ವಾಗಿತ್ತು.ಅಲ್ಲೂ ಕಾಂಗ್ರೆಸ್ಗೆ ಸೋಲು.ರಾಹುಲ್ ನ ಸ್ವಕ್ಷೇತ್ರ ಅಮೇಥಿಯಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳು ಸೋತು ತೀವ್ರ ಮುಖ ಭಂಗ ಅನುಭವಿಸಿತ್ತು.ಜನ ಸ್ಪಷ್ಟವಾಗಿ ರಾಹುಲ್ ರ ನಾಯಕತ್ವವನ್ನು ನಿರಾಕರಿಸಿದ್ದು ಎದ್ದು ಕಾಣುತ್ತಿತ್ತು.
Read more »