ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 2, 2013

12

ಮಹಾರಾಷ್ಟ್ರಕ್ಕೆ ಬೆಳಗಾವಿ,ಕೇರಳಕ್ಕೆ ಕಾಸರಗೋಡು,ಕರ್ನಾಟಕಕ್ಕೆ…!?

‍ನಿಲುಮೆ ಮೂಲಕ
– ರಾಕೇಶ್ ಶೆಟ್ಟಿ
ಆಂಧ್ರ ಪ್ರದೇಶ ಹೋಳಾಗಿದ್ದಕ್ಕೆ ಕೆಲವು ಕನ್ನಡಿಗರು ಬಹಳ ವೇದನೆ ಅನುಭವಿಸುತಿದ್ದಾರೆ. ತಮ್ಮದೇ ರಾಜ್ಯದ ಭಾಗವಾಗಿದ್ದ “ಕಾಸರಗೋಡು” ಕೇರಳಕ್ಕೆ ಹೋದಾಗ ಇವರಿಗೆ ಏನು ಅನಿಸಿರಲಿಲ್ಲವೇ? ಏಕೀಕರಣದ ಸಮಯದಲ್ಲಿ “ಕಾಸರಗೋಡಿನವರ” ಸಹಾಯ ನಮಗೆ ಬೇಕಿತ್ತು.ಈಗ ಅದನ್ನು ಮರೆತು ಅವರ ನೋವಿಗೆ ದನಿಯಾಗದ ನಾವುಗಳು “ದ್ರೋಹಿ”ಗಳಲ್ಲವೇ…!? ೩ ವರ್ಷದ ಹಿಂದೆ ಕಾಸರಗೋಡಿನ ಬಗ್ಗೆ ಬರೆದ ಲೇಖನವಿದು.
————————————————

‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕಿ ಬಲುಹಿನ ನಿಧಿಯು ಸದಾಭಿಮಾನದ ಗೂಡು’
ಅಂತ ‘ಹುಯಿಲಗೋಳ ನಾರಾಯಣರಾಯ’ರು ಏಕೀಕರಣಕ್ಕೆ ಮೊದಲು ಬರೆದಿದ್ದರು.

‘ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ’
ಅಂತ ಏಕೀಕರಣದ ನಂತರ ಬರೆದವರು ‘ಸಿದ್ದಯ್ಯ ಪುರಾಣಿಕ್’.

ಇವೆರಡು ಹಾಡುಗಳನ್ನ ವರ್ಷಕ್ಕೊಮ್ಮೆ ರಾಜ್ಯೋತ್ಸವದ ದಿನಗಳಲ್ಲಿ(ದಿನಗಳಲ್ಲಾದರೂ!) ನಾವು ಹಾಗೂ ನಮ್ಮ ರಾಜಕಾರಣಿಗಳು ನೆನಪಿಸಿಕೊಳ್ಳುತ್ತೇವೆ. ಆದರೆ ಇಲ್ಲಿ ಕೆಳಗೆ ಇನ್ನೊಂದು ನತದೃಷ್ಟ ಹಾಡಿದೆ ನೋಡಿ.ಬಹಳಷ್ಟು ಜನ ಇದನ್ನ ಮರೆತಿದ್ದಾರೆ, ಹಲವರಿಗೆ ನೆನಪಿಸಿಕೊಳ್ಳುವುದು ಬೇಕಾಗಿಲ್ಲ,ಇನ್ನುಳಿದವರಿಗೆ ಇದರ ಬಗ್ಗೆ ಗೊತ್ತೇ ಇಲ್ಲ!

‘ಬೆಂಕಿ ಬಿದ್ದಿದೆ ನಮ್ಮ ಮನೆಗೆ
ಓ ಬೇಗ ಬನ್ನಿ
ಕನ್ನಡ ಗಡಿಯ ಕಾಯೋಣ ಬನ್ನಿ
ಕನ್ನಡ ನುಡಿಯ ಕಾಯೋಣ ಬನ್ನಿ’

ಅಂತ ಬರೆದ ‘ಕಯ್ಯಾರ ಕಿಞಞಣ್ಣ ರೈ’ ಇಡಿ ಕಾಸರಗೋಡಿನ ಜನತೆಯ ನೋವನ್ನ ಈ ಸಾಲುಗಳಲ್ಲಿ ಅಭಿವ್ಯಕ್ತ ಪಡಿಸಿದ್ದರು.

ಮೊದಲ ಹಾಡು ಕನ್ನಡಿಗರ ಒಗ್ಗೂಡುವಿಕೆಯ ತುಡಿತವನ್ನ ಬಿಂಬಿಸಿದರೆ ,ಎರಡನೆಯದು ‘ಕರ್ನಾಟಕ ಏಕೀಕರಣದ ವಿಜಯದ (ಭಾಗಶಃ) ಸಂಕೇತ ಮತ್ತು ಮೂರನೆಯದು ‘ಕರ್ನಾಟಕದ ಕಾಸರೋಗೋಡಿನ (?) ಜನರ ನೋವಿನ’ ಸಂಕೇತ.

೨ ತಿಂಗಳ ಹಿಂದೆ ಭರ್ಜರಿಯಾಗಿ ನಮ್ಮ ೫೪ನೆ ವರ್ಷದ ರಾಜ್ಯೋತ್ಸವವನ್ನ ಆಚರಿಸಿದೆವು.ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ರಾಜ್ಯೋತ್ಸವ ಆಚರಣೆ ನಡೆಯಿತು ಮತ್ತದು ಮುಂದಿನ ನವೆಂಬರ್ವರೆಗೆ ನಡೆಯುತ್ತಲೇ ಇರುತ್ತದೆ.ರಾಜ್ಯದ ಹಲವೆಡೆ ನಡೆಯುವ ಆಚರಣೆಗಳು ಪತ್ರಿಕೆ,ಟೀ.ವಿ ಗಳಲ್ಲಿ ವರದಿಯಾಗುತ್ತದೆ.ಅದೇ ದಿನ ಬೆಳಗಾವಿ ಕಡೆ ಕೆಲವರು ಭಗವಾಧ್ವಜ ಹಾರಿಸುತ್ತಾರೆ ಅದೂ ಸುದ್ದಿಯಾಗುತ್ತದೆ.ಕೊಡಗು,ಹೈದರಾಬಾದ್ ಕರ್ನಾಟಕದಲ್ಲಿ ಕರಾಳ ದಿನ ಅಂತಾರೆ ಅದೂ ಸಣ್ಣದಾಗಿಯಾದರೂ ಸುದ್ದಿಯಾಗುತ್ತದೆ.ಆದರೆ ಅಲ್ಲೊಂದು ‘ಕಾಸರಗೋಡು’ ಅಂತ ಇದೆ ನೋಡಿ.ಆ ಜನರ ಕೂಗು ಪತ್ರಿಕೆ, ಟೀ.ವಿ ಯವರಿಗೆ ಬಿಡಿ, ಕಡೆಗೆ ಅವರ ಪಕ್ಕದಲ್ಲೇ ಇರುವ ‘ದಕ್ಷಿಣ ಕನ್ನಡ’ದ ಜನರಿಗೆ,ರಾಜಕಾರಣಿಗಳಿಗೆ, ನಮ್ಮ ಮಹಾನ್ ಕರ್ನಾಟಕದ ಸರ್ಕಾರಕ್ಕೆ,ಕನ್ನಡಪರ ಹೋರಾಟಗಾರರಿಗೆ,ಸಂಘಟನೆಗಳಿಗೆ ಯಾರಂದ್ರೆ ಯಾರಿಗೂ ಕಾಣುವುದೇ ಇಲ್ಲ. ತೀರ ಕೆಲ ತಿಂಗಳುಗಳ ಹಿಂದೆ ‘ಕಾಸರಗೋಡು ಹೋರಾಟವನ್ನ ಬೆಂಗಳೂರಿಗೆ ತರುತ್ತೇವೆ’ ಅನ್ನುವ ಹೇಳಿಕೆಗಳು ಬಂದಿದ್ದವಾದರು ಅವು ಹೇಳಿಕೆಗಳಾಗೆ ಉಳಿದಿವೆ.ನವೆಂಬರ್ನಲ್ಲೊಂದು ಆರ್ಕೆಸ್ಟ್ರಾ ಮಾಡಿ ‘ರಾಜ್ಯೋತ್ಸವ’ ಆಚರಿಸಿ ಬಿಟ್ರೆ ಸಾಕಾ? ಗಡಿಯ ಅಂಚಿನಲ್ಲಿ ಅದೆಷ್ಟು ಕನ್ನಡ ಶಾಲೆಗಳಿವೆ?ಅಲ್ಲಿನ ಸ್ಥಿತಿ-ಗತಿಗಳೇನು?ನಾವು ತಲೆ ಕೆಡಿಸಿಕೊಳ್ಳೋದಿಲ್ಲ, ಇನ್ನ ಸರ್ಕಾರದವರನ್ನ ಕೇಳಲೇಬೇಡಿ ಬಿಡಿ ಪಾಪ ಅವರದು ‘ಕುರ್ಚಿ’ಗಾಗಿ ನಿರಂತರ ಹೋರಾಟ!.ರಾಷ್ಟ್ರ ಕವಿ ಕುವೆಂಪು ಅವರ ಭಾವ ಚಿತ್ರವನ್ನ ಹಾಕಿಕೊಂಡು ಹೋರಾಟ ಮಾಡುವ ನಾವು,ಮತ್ತೊಬ್ಬ ರಾಷ್ಟ್ರ ಕವಿ ‘ಗೋವಿಂದ ಪೈ’ ಅವರನ್ನು, ಅವರ ಊರನ್ನು ಮರೆತೇ ಬಿಟ್ಟಿದೇವೆಯೇ?

ಮಲಯಾಳಿ ‘ಪಣಿಕ್ಕರ್’ ಅವರು ಮಾಡಿದ ದ್ರೋಹಕ್ಕೆ ಬಲಿಯಾಗಿ ‘ಕಾಸರಗೋಡು’ ಕೇರಳಕ್ಕೆ ಸೇರಿತು. ನಮ್ಮನ್ನು ಸೇರಿಸಿಕೊಳ್ಳಿ ಅಂತ ಅವರು ಹೇಳುತ್ತಲೇ ಬಂದರೂ ನಾವು ಕೇಳುತ್ತ ಕೇಳುತ್ತ ಕೇಳಿಸದಂತಾಗಿ ಬಿಟ್ಟೆವು.ಈಗ ಹೇಳಿ ಹೇಳಿ ಅವರಿಗೂ ಸಾಕಗಿದೆಯೋ ಏನೋ? ಕಿಞಞಣ್ಣ ರೈ ಯವರು ಅಂದು ನೋವಿನಲ್ಲಿ ಬರೆದ ಆ ಸಾಲುಗಳನ್ನ ಅಂದಿಗೆ ಓದಿ ಒಂದೆರಡು ಹನಿ ಕಣ್ಣೀರು ಸುರಿಸಿ ಸುಮ್ಮನಾದವರಿಗೆ , ಇಲ್ಲೊಂದು  comfort zone  ಅಂತ  create  ಆದ ಮೇಲೆ ‘ಕಾಸರಗೋಡು’ ಹೋರಾಟದಲ್ಲಿ ಕೈ ಜೋಡಿಸಲು ಟೈಮು,ಮನಸ್ಸು ಎರಡು ಇರಲಿಲ್ಲ ಅನ್ನಿಸುತ್ತೆ. ಏಕೀಕರಣದ ನಂತರ ಭುಗಿಲೆದ್ದ ಅಸಮಾಧಾನಕ್ಕೆ ನೆಹರು ಪ್ರತಿಕ್ರಿಯಿಸಿ ‘೪ ಗ್ರಾಮಗಳು ಆ ಕಡೆ ಹೋಗಬಹುದು,೪ ಗ್ರಾಮಗಳು ಈ ಕಡೆ ಬರಬಹುದು.ಯಾರನ್ನೂ ನಾವೇನು ಅರಬ್ಬೀ ಸಮುದ್ರಕ್ಕೆ ಎಸೆಯುತ್ತಿಲ್ಲವಲ್ಲ’ ಅಂದಿದ್ದರು. ಬೆಂಕಿ ತಾಗಿದವ್ರಿಗೆ ಮಾತ್ರ ಬಿಸಿಯ ಅರಿವಾಗುವುದು. ಪಾಪ, ಅವರಿಗೆ ಇದೆಲ್ಲ ಅರ್ಥ ಮಾಡಿಕೊಳ್ಳುವಷ್ಟು ವ್ಯವಧಾನ,ಸಮಯ ಎರಡು ಇರಲಿಲ್ಲ ಬಿಡಿ.ಅವರಿಗಾದರೂ ನೋಡಲು ಇಡಿ ಭಾರತದ ಸಮಸ್ಯೆಗಳಿದ್ದವು!. ಆದರೆ ಕರ್ನಾಟಕದ ನಾಯಕರು ಏನು ನೋಡ್ತಾ ಇದ್ದಿರಬಹುದು!?

‘ಕಾಸರಗೋಡು’ ಕೇರಳಕ್ಕೆ ಸೇರಿದೆ ಅನ್ನುವುದು ಗೊತ್ತಾದಾಗ ಕಡೆ ಪಕ್ಷ ದಕ್ಷಿಣ ಕನ್ನಡ ಭಾಗದ ಜನ ಪ್ರತಿನಿಧಿಗಳು ತಮ್ಮ ಅಧಿಕಾರದಾಸೆ ಬಿಟ್ಟು ರಾಜಿನಾಮೆ ನೀಡಿ ಅಂದು ಅಖಾಡಕ್ಕೆ ಇಳಿಯುವ ಮನಸ್ಸು ಮಾಡಲಿಲ್ಲ.ಈಗ ‘ಕಾಸರಗೋಡು ಕರ್ನಾಟಕದ ಅವಿಭಾಜ್ಯ ಅಂಗ’ ಅನ್ನುವ ಭಾಷಣಗಳು ಅಪರೂಪಕ್ಕೆ ಅಲ್ಲೊಮ್ಮೆ ಇಲ್ಲೊಮ್ಮೆ ನೆನಪಾದಾಗ ಬರುತ್ತಿವೆ ಅಷ್ಟೇ! ಗಡಿ ಸಮಸ್ಯೆಗಳನ್ನ ಆಯಾ ರಾಜ್ಯ ಸರ್ಕಾರಗಳೇ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು ಅಂತ ಕೇಂದ್ರ ಸರ್ಕಾರ ಹೇಳಿ ಕೈ ತೊಳೆದುಕೊಂಡಿತು. ಮಾತಾಡಬೇಕಾದವರು ಸದಾ ಕಾಲ ಕುರ್ಚಿ ಉಳಿಸಿಕೊಳ್ಳುವ ಭರದಲ್ಲಿ ಎಲ್ಲ ಮರೆತು ಬಿಟ್ಟರು.

ನಮ್ಮ ರಾಜ್ಯದ ಜನ ಸೇವಕ(ನಾಯಕರಲ್ಲ!)ರನ್ನ ದೂರುವ ಮೊದಲು ನಾವುಗಳು (ಕನ್ನಡಿಗ ಮಹಾಪ್ರಭುಗಳು!) ಆತ್ಮ ವಿಮರ್ಶೆ ಮಾಡಿಕೊಳ್ಳುವುದು ಬೇಡವೇ? ಇತ್ತ ’ಕಾವೇರಿ’ದಾಗ ಅತ್ತ ಕರಾವಳಿ ಸೇರಿದಂತೆ ಹಲವೆಡೆ ಎಲ್ಲ ‘ತಣ್ಣ’ಗಿರುತ್ತದೆ.ನಾವ್ಯಾರು ಒಬ್ಬರಿಗೊಬ್ಬರು ಅಂತ ನಿಲ್ಲುವುದೇ ಇಲ್ಲ.ಅವರು ಕರೆದಾಗ ಇವರು ಹೋಗಲ್ಲ, ಇವ್ರು ಕರ್ದಾಗ ಅವ್ರು ಹೋಗಲ್ಲ ಅನ್ನೋ ತರ ಇದೆ ನಮ್ಮ ಸ್ಥಿತಿ. ನೆಲ-ಜಲದ ವಿಷಯಕ್ಕೆ  ‘ಕರ್ನಾಟಕ ಬಂದ್’ ಕರೆ ಕೊಟ್ರೆ ಹೆಚ್ಚೆಂದರೆ ೪-೫ ಜಿಲ್ಲೆಗಳು ‘ಬಂದ್’! .ಉಳಿದವರದು ‘ಹೇಯ್,ಬಿಡ್ರಿ ನಾವ್ ಯಾಕ್ ಮಾಡ್ಬೇಕು,ಅವ್ರಿಗೆ ಮಾಡೋಕೆನ್ ಕೆಲ್ಸ ಇಲ್ಲ’ ಅನ್ನೋ ಧೋರಣೆ!, ಬೆಂಬಲ ಕೊಡದೆ ಸುಮ್ನೆ ಇದ್ದ ನಾವ್ ಮಹಾನ್ ಬುದ್ದಿವಂತರು ಅನ್ನೋ ಮನೋಭಾವ.ತಮ್ಮ ಕಲೆಕ್ಷನ್ ಕಡಿಮೆಯಾದಾಗ ಬೀದಿಗಿಳಿಯುವ ಚಿತ್ರರಂಗಕ್ಕೆ ಆಗ ಅಸ್ತ್ರಗಳಾಗಿ ಸಿಗುವುದು ‘ಮಹಾಜನ್ ವರದಿ,ಸರೋಜಿನಿ ಮಹೀಷಿ ವರದಿ’ಗಳು.ಅವರ ಸಮಸ್ಯೆ ಮುಗಿತು ಅಂದ್ರೆ ಅಲ್ಲಿಗೆ ಮತ್ತೆ ಎಲ್ಲ ಶಾಂತಿ ಶಾಂತಿ!.

ನಮ್ಮ ರಾಜ್ಯದಲ್ಲಿರೋ ಕೊಡಗು,ಹೈದರಾಬಾದ್ ಕರ್ನಾಟಕದ ಕೆಲವರೇ ಪ್ರತ್ಯೇಕ ರಾಜ್ಯದ ಬೇಡಿಕೆಯಿಡುತಿದ್ದಾರೆ, ಮತ್ತಿನ್ಯಾಕೆ ಬೇರೆಯವರ ಹತ್ರ ಇರೋ ಭಾಗ ಕೇಳೋದು ಅಂತಾನು ನಮಗೆ ಅನ್ನಿಸಬಹುದು.ಹಾಸನದಿಂದ ಕೊಡಗಿನ ಕಡೆ ಹೊರಟರೆ ಹಾಸನ ಮುಗಿಯುವವರೆಗೆ ರಸ್ತೆ ಚೆನ್ನಾಗಿದೆ. ಕೊಡಗು ಪ್ರವೇಶಿಸುತ್ತಿದ್ದಂತೆ ಅಲ್ಲೊಂದು ಫಲಕವಿದೆ ‘ಕೊಡಗಿನ ಗಡಿ ಪ್ರಾರಂಭ’ ಅಂತ. ಆ ದಾರಿಯಲಿ ಹೋಗಿ ಬಂದ ಯಾರೋ ಪುಣ್ಯಾತ್ಮ ಅದನ್ನ ‘ಕೊಡಗಿನ ‘ಗುಂಡಿ’ ಪ್ರಾರಂಭ’ ಅಂತ ಬದಲಾಯಿಸಿದ್ದಾನೆ!.ಕಳೆದ ವರ್ಷ ಕೊಡಗಿಗೆ ಹೋದಾಗ ಇದನ್ನ ನೋಡಿದ್ದೇ, ಅದಕ್ಕಿಂತ ಮೊದಲು ಹೋಗಿದ್ದಾಗಲು  ನೋಡಿದ್ದೇ.ಈಗ ಆ ‘ಗುಂಡಿ-ಗಡಿ’ಯಾಗಿ ಪರಿವರ್ತನೆಯಾಗಿದೆಯೋ ಇಲ್ವೋ ಗೊತ್ತಿಲ್ಲ! ಬಹುಷಃ ಈಗಲೂ ಅದು ಗುಂಡಿಯೇ ಆಗಿದ್ದರೆ ಅವರು ಪ್ರತ್ಯೇಕ ‘ಗಡಿ’ ಕೇಳದೆ ಇನ್ನೇನು ತಾನೇ ಮಾಡಿಯಾರು ಹೇಳಿ?

ಮಹಾಜನ್ ಆಯೋಗ ಮಾಡುವಂತೆ ಪಟ್ಟು ಹಿಡಿದ ಮಹಾರಾಷ್ಟ್ರದವರು ವರದಿ ವ್ಯತಿರಿಕ್ತವಾಗಿ ಬಂದಿದ್ದರಿಂದ ಅದನ್ನ ಒಪ್ಪಲಿಲ್ಲ. ಒಂದು ವೇಳೆ ವರದಿಯೇನಾದರು ‘ಬೆಳಗಾವಿ’ ಅವರಿಗೆ ಸೇರಬೇಕು ಅಂದಿದ್ದಾರೆ ಸುಮ್ಮನಿರುತಿದ್ದರಾ? ಅವರು ಸುಮ್ಮನಾಗಿದ್ದರೂ ನಾವಾಗೆ ಮೈ ಮೇಲೆ ಬಿದ್ದು ತಗೊಂಡ್ ಹೋಗ್ರಪ್ಪ ಬೆಳಗಾವಿನ ಅಂತ ಕೊಡ್ತಿದ್ವೋ ಏನೋ?.ಬೆಳಗಾವಿ ಅವರಿಗೆ ಸೇರಿದ್ದಲ್ಲ ಅಂತ ಗೊತ್ತಿದ್ದರೂ,ಅದೇ ವಿಷಯವನ್ನ ಸಾಧ್ಯವಾದಗಾಲೆಲ್ಲ ಕೆದಕುವ ಮಹಾರಾಷ್ಟ್ರದ ರಾಜಕಾರಣಿಗಳಂತೆ ನಮ್ಮವರು atleast ಕಾಸರಗೋಡಿನ ವಿಷಯವನ್ನ ಜೀವಂತವಾಗಿಡಲು ಪ್ರಯತ್ನಿಸುತ್ತಿಲ್ಲ.ಬದಲಾಗಿ ‘ಸೀಮಾ ಪರಿಷತ್’ ನಂತಹ ಶಾಂತಿ ಕದಡುವ ಕಾರ್ಯಕ್ರಮಗಳಿಗೆ ಅನುಮತಿ ಕೊಡುತ್ತಾರೆ.ಹೆಚ್ಚೆಂದರೆ ನನ್ನಂತವರು ಕುಳಿತು ಅದರ ಬಗ್ಗೆ ಬರೆಯುತ್ತೇವೆ ಅಷ್ಟೇ, ಆದರೆ ಮೊನ್ನೆ ಅಲ್ಲಿ ಕ.ರ.ವೇ ಮಾಡಿದ ಹೋರಾಟಕ್ಕೆ ಅಭಿನಂದನೆ ಹೇಳಲೇಬೇಕು.ಇಂತ ಕೆಲವು ಕನ್ನಡ ಪರ ಸಂಘಟನೆಗಳಿರುವುದರಿಂದಲೇ ಬೆಳಗಾವಿಯಲ್ಲಿ ಎಂ.ಇ.ಎಸ್ ಆಟ ನಡೆಯುತ್ತಿಲ್ಲ.ಸರ್ಕಾರವನ್ನೇ ನಂಬಿ ಕೂತಿದ್ದರೆ ಬೆಳಗಾವಿಯು ಕೈ ಬಿಟ್ಟು ಹೋಗುತಿತ್ತೋ ಏನೋ? ಇದೆ ಹೋರಾಟದ ಸ್ಪೂರ್ತಿಯನ್ನ ಕಾಸರಗೋಡಿನ ವಿಲೀನದ ವಿಷಯದಲ್ಲೂ ತೋರಿಸಬಹುದಲ್ವಾ?

ಮಹಾಜನ್ ವರದಿಯನ್ನ ಜಾರಿಗೆ ತರಲು ಸಾಧ್ಯವಿಲ್ಲ ಅನ್ನೋದು  ಮಹಾರಾಷ್ಟ್ರ ಹಾಗು ಕೇರಳ ಸರ್ಕಾಗಳ ವಾದ.ಜಾರಿಯಾಗಲಿ ಅನ್ನೋದು ಕರ್ನಾಟಕದ ವಾದ.ಇದು ಮುಗಿಯದ ಕತೆ.ಅದರ ಬದಲು ಕೇಂದ್ರ ಸರ್ಕಾರವೇಕೆ ಬೇರೆ ಸೂತ್ರ ಹುಡುಕುತ್ತಿಲ್ಲ? ಅಂತಿಮವಾಗಿ ಎಲ್ಲಿಗೆ ಸೇರಬೇಕು ಅಂತ ನಿರ್ಧರಿಸಿಬೇಕಾದವ್ರು ಅಲ್ಲಿ ಜೀವನ ನಡೆಸುತ್ತಿರುವ ಜನಗಳು.ಸಮಸ್ಯೆ ಪರಿಹರಿಸ ಬೇಕಿರುವ ಸರ್ಕಾರಗಳು ಈ ಬಗ್ಗೆ ಚಿಂತಿಸಬೇಕಿದೆ.ಬಹುಷಃ ಜನಾಭಿಪ್ರಾಯಕ್ಕೆ ಮನ್ನಣೆ ಕೊಡಬೇಕಿದೆ. ಇದು ಸಾಧ್ಯವಿಲ್ಲ ವರದಿಯೇ ಅಂತಿಮ ಅಂತ ಕುಳಿತರೆ ಸಮಸ್ಯೆ ಬಗೆಹರಿಯುವುದೇ? ಬಗೆ ಹರಿದರೆ ಸಂತೋಷ ಇಲ್ಲದಿದ್ದರೆ,ಸ್ವಲ್ಪ ದಿನಗಳ ನಂತರ ಎಲ್ಲರ ನೆನಪಿನಿಂದ ಈ ವಿಷಯ ಮಾಸಿಯೂ ಹೋಗಬಹುದು (ಈಗಾಗಲೇ ಹೋಗಿಬಿಟ್ಟಿದೆ ಬಿಡಿ). ‘ಸ್ವಂತ ಮನೆ’ಯಿದ್ದುಕೊಂಡು ‘ಬಾಡಿಗೆ ಮನೆ’ಯಲ್ಲಿರುವ ನೋವು ಅವರಿಗೆ ಶಾಶ್ವತ!!

ಆಮೇಲೆ,

‘ಉದಯವಾಯಿತು ಚೆಲುವ ಕನ್ನಡ ನಾಡು’ ಅಂತ ಹಾಡಿಕೊಂಡು ಕಾಲ ತಳ್ಳೋಣ…

ಚಿತ್ರಕೃಪೆ:ಗೂಗಲ್ ಇಮೇಜ್

Read more from ಲೇಖನಗಳು
12 ಟಿಪ್ಪಣಿಗಳು Post a comment
  1. makara's avatar
    makara
    ಆಗಸ್ಟ್ 3 2013

    ಬೆಳಗಾವಿಯ ಕುರಿತು ಮಹಾರಾಷ್ಟ್ರ ಕ್ಯಾತೆ ತೆಗೆದಾಗ ನಾವು ಅಚ್ಚ ಕನ್ನಡ ಪ್ರದೇಶವಾದ ಸೊಲ್ಲಾಪುರ ಅಥವಾ ಅಕ್ಕಲಕೋಟೆಯನ್ನು ನಮಗೆ ಕೊಡಿ ಎಂದು ಕೇಳುವುದಿಲ್ಲ. ಕಾಸರಗೋಡಿನಂತೆ ಆಂಧ್ರ ಪ್ರದೇಶದಲ್ಲಿ ಆದೋನಿ, ಎಮ್ಮಿಗನೂರು, ಮಂತ್ರಾಲಯ, ಮಡಕಶಿರ, ಕಲ್ಯಾಣದುರ್ಗ, ರಾಯದುರ್ಗ ಹೀಗೆ ಅಚ್ಚ ಕನ್ನಡ ಪ್ರಾಂತಗಳೇ ಇವೆ. ಜೊತೆಗೆ ಹೈದರಾಬಾದಿಗೆ ಅಂಟಿಕೊಂಡಂತೆ ತಾಂಡೂರು ಎನ್ನುವ ಪ್ರಾಂತವಿದೆ, ಹಾಗೆಯೇ ಬೀದರ್‌ಗೆ ಹತ್ತಿರವಿರುವ ಆಂಧ್ರ ಪ್ರದೇಶಕ್ಕೆ ಸೇರಿರುವ ಕನ್ನಡ ಪ್ರಾಂತವಾದ ಝಹಿರಾಬಾದ್ ಇದೆ. ಸ್ವತಃ ರಾಜಕುಮಾರ್ ಹುಟ್ಟಿದ ತಾಳವಾಡಿ ಫಿರ್ಕಾ ತಮಿಳುನಾಡಿನಲ್ಲಿ ಇದೆ. ಇಂದಿಗೂ ಊಟಿ ಹಾಗು ಕೊಯಮತ್ತೂರುಗಳಲ್ಲಿ ಶೇಖಡಾ ೩೫% ಕನ್ನಡ ಮಾತನಾಡುವ ಜನರಿದ್ದಾರೆ; ಮೊದಲು ಊಟಿ ಕರ್ನಾಟಕದ ಭಾಗವೇ ಆಗಿತ್ತು, ಅಲ್ಲಿ ಮೈಸೂರು ಮಹಾರಾಜರ ಅತಿಥಿ ಗೃಹವೂ ಇದೆ. ಇನ್ನು ಬೆಂಗಳೂರಿನ ಬಳಿ ಇರುವ ಹೊಸೂರಿನ ಬಗ್ಗೆ ಹೇಳುವುದೇ ಬೇಡ ಬಿಡಿ. ಹೀಗೆ ಕನ್ನಡಿಗರು ಕಳೆದುಕೊಂಡ ಪ್ರದೇಶಗಳಿಗೆ ಲೆಕ್ಕವೇ ಇಲ್ಲ. ಹಿಂದುಳಿದ ಪ್ರಾಂತಗಳನ್ನು ಕೇಳಲು ಕನ್ನಡಿಗರು ಕೇಳಲು ಇಷ್ಟಪಡಲಿಲ್ಲ ಮತ್ತು ಸುಭಿಕ್ಷ ಪ್ರದೇಶಗಳನ್ನು ಕೊಡಲು ತಮಿಳಿಗರು, ಕೇರಳಿಗರು, ಮಹಾರಾಷ್ಟ್ರೀಯರು ಬಿಡಲಿಲ್ಲ. ಇದರೊಂದಿಗೆ ದಿವ್ಯನಿರ್ಲಕ್ಷದ ಕನ್ನಡಿಗರ ಗುಣವನ್ನು ಎಲ್ಲರೂ ಸರಿಯಾಗಿಯೇ ಉಪಯೋಗಿಸಿಕೊಳ್ಳುತ್ತಿದ್ದಾರೆ. ಕನ್ನಡಿಗರೆಲ್ಲರೂ ಒಂದೆಂಬ ಒಮ್ಮತ ಈಗೀಗ ಮೂಡುತ್ತಿದೆ ಎನ್ನುವುದು ಸಂತೋಷದ ಸಂಗತಿ. ಕರ್ನಾಟಕದಲ್ಲಿ ಸಾಕಷ್ಟು ಧನ ಸಹಾಯವನ್ನು ಮತ್ತು ಜನರಿಂದ ದೇಣಿಗೆ ಪಡೆಯುವ ವೀರಶೈವ ಮತ್ತು ಒಕ್ಕಲಿಗ ಮಠಗಳು ಗಡಿಭಾಗದಲ್ಲಿರುವ ಅವರ ಸಮುದಾಯಗಳ ಬಗೆಗೆ ಎಳ್ಳಷ್ಟೂ ಕಾಳಜಿ ಹೊಂದಿಲ್ಲ. ಆ ಭಾಗಗಳಲ್ಲಿ ಕನ್ನಡ ಶಾಲೆಗಳನ್ನು ತೆರೆಯುವುದು ಮತ್ತು ತಮ್ಮ ಮಠದ ಶಾಖೆಗಳನ್ನು ತೆರೆದು ಉಚಿತ ವಿದ್ಯೆ ಮತ್ತು ಊಟದ ವ್ಯವಸ್ಥೆಗಳನ್ನೂ ಮಾಡುತ್ತಿಲ್ಲ. ಅವರೇನಿದ್ದರೂ ಕರ್ನಾಟಕದಲ್ಲಿನ ರಾಜಕೀಯಕ್ಕೆ ತಮ್ಮ ಚಟುವಟಿಕೆಗಳನ್ನ ಸೀಮಿತವಾಗಿರಿಸಿಕೊಂಡಿದ್ದಾರೆ. ಇದಕ್ಕೆ ಬ್ರಾಹ್ಮಣ ಮಠಗಳೂ ಹೊರತಲ್ಲ. ಈ ಮಠಾದೀಶರೂ ಅವರೆಡೆಗೆ ದೃಷ್ಟಿ ಹರಿಸಿದಲ್ಲಿ ಅಲ್ಲೆಲ್ಲಾ ಕನ್ನಡ ವಾತಾವರಣ ಸೃಷ್ಟಿಯಾಗಿ ಅಲ್ಲಿನ ಕನ್ನಡಿಗರಿಗೆ ರಾಜಕೀಯ ಭದ್ರತೆ ಮೂಡುತ್ತದೆ. ಇದನ್ನು ಮಠ ಮಾನ್ಯಗಳೊಂದಿಗೆ ಸಾಮಾನ್ಯ ಕನ್ನಡಿಗನೂ ಮಾಡಬೇಕು. ಬಳ್ಳಾರಿಯ ಜನ ಮೊದಲು ತೆಲುಗು ಮಾತನಾಡುವುದನ್ನು ಮತ್ತು ಬೆಳಗಾವಿಯ ಜನ ಮರಾಠಿ ಮಾತನಾಡುವುದನ್ನು ಹಾಗೂ ಮಂಗಳೂರಿನ ಜನ ಮಲೆಯಾಳಂ ಮಾತನಾಡುವುದನ್ನು ಬಿಟ್ಟರೆ ಒಳಿತು. ಹಾಗೆಯೇ ಬೆಂಗಳೂರಿನ ಜನ ತೆಲುಗು/ತಮಿಳಿನಲ್ಲಿ ಮಾತನಾಡುವುದನ್ನು ಕೈಬಿಟ್ಟಾಗ ಮಾತ್ರ ಕನ್ನಡದ ಮತ್ತು ಕನ್ನಡಪರ ಹೋರಾಟಕ್ಕೆ ಒಂದು ಅರ್ಥ ಬಂದೀತು.

    ಉತ್ತರ
  2. Amaresh's avatar
    Amaresh
    ಆಗಸ್ಟ್ 4 2013

    Mr. Makara why are you unnecessarily bringing Lingayat mutts into this border dispute. I think your intention is to blame Lingayat Mutts and thats why you are exhibiting your prejudice.n There is no logical connection among your sentences and you are simply bluffing whatever comes to your mind.

    ಉತ್ತರ
  3. Annapurna's avatar
    Annapurna
    ಆಗಸ್ಟ್ 5 2013

    Yes Mr. amaresh this fellow is unnecessarily blaming Lingayat Mutts. Mostly he has written this article only to bring that matter into it He doesnt know the contribution of Naganur mutt in retainging Belgaum in Karnataka and he doesnt know that Bhalki mutt’s contribution in spreading kannada education in Bidar dt. These fellows simply bark on web without knowing the facts. There are no evidences and logic in their arguments. These are like monkeys creating mischief sitting on a tree

    ಉತ್ತರ
    • Sahana's avatar
      Sahana
      ಆಗಸ್ಟ್ 5 2013

      Ms. Annapurna you are absolutely right. These people more of mischief mongers than serious and genuine writers

      ಉತ್ತರ
    • Rudraprakash's avatar
      Rudraprakash
      ಆಗಸ್ಟ್ 10 2015

      Naanu Lingayata jangama. Aadare naavu satyavannu oppikondare nammalliruva donkannu saripadisuva modala hejje shuruvaguttade. Viparyasavendare karnataka mattu kannadada eeavastege namma mattu Gowda samajada koduge ide. Majority gowda haagu Lingayata matagalu indu kela rajakeeya nayakara kaigombeyaagive. Raajya eekikarana Aadamele namma rajyada rajakeeya kevala Gowda mattu Lingayata samajada melaatavallade mattenu alla. Kannadambeya eradu balista bhujagalu ondannondu khadga hididu yuddha maaduttive. Nidhaanavagi parakeeyaru nammannu aakramisikolluttiddare. Idu satya. Makara avaru heliruvudaralli tappenu illa. Nammalliruva hulukannu oppikondare saripadisuva Dari sugamavaagittade. Idu sari dikkinatta modala hejje. Samajadalli nindakarirabeku. Illavadare naavella nammannu devaru andukondubidutteve.

      ಉತ್ತರ
  4. Annapoorna's avatar
    Annapoorna
    ಆಗಸ್ಟ್ 5 2013

    ನಕಲಿ Amaresh ಹಾಗೂ Annapurna ರು ಭಾಗವತರ ಜೋಡಿ ಸೇರಿ ರಾಡಿ ಎಬ್ಬಿಸುತ್ತಿದ್ದಾರೆ. ಇದು ಖಂಡನೀಯವಾದ ವರ್ತನೆ. ನಿಲುಮೆಯ ಕಮೆಂಟು ವೇದಿಕೆ ಗಬ್ಬು ನಾರುವ ಮೊದಲು ಸಂಪಾದಕರು ದಯವಿಟ್ಟು ಇವರುಗಳಿಗೆ ಕಡಿವಾಣ ಹಾಕಬೇಕು.

    ಉತ್ತರ
    • ರಾಕೇಶ್ ಶೆಟ್ಟಿ's avatar
      ಆಗಸ್ಟ್ 5 2013

      ನಾಡಿಗ್,ಭಾಗವತ್,ಅಮರೇಶ್,ಸಹನ,ಅನ್ನಪೂರ್ಣ ಹೀಗೆ ಬೇರೆ ಬೇರೆ ಹೆಸರಿನಲ್ಲಿ ಬರೆದರೂ ಒಂದೇ ರೀತಿಯಲ್ಲಿ ಬರೆಯುತಿದ್ದೇನೆ ಅನ್ನುವ ಅರಿವು ಅವರಿಗಾಗುತ್ತಿಲ್ಲ… ಪರಲೋಕದ ಆ ದೇವರು ಅವರ ಈ ತಪ್ಪನ್ನು ಕ್ಷಮಿಸಿ ಅವರಿಗೆ ವೈವಿಧ್ಯಮಯವಾಗಿ ಬರೆಯುವುದನ್ನು ಕಲಿಸಲಿ ಅಂತ ಹಾರೈಸೋಣ

      ಉತ್ತರ
      • Annapooorna's avatar
        Annapooorna
        ಆಗಸ್ಟ್ 6 2013

        Mr. Shetty instead of presenting your ideas logically on the website u r investigating the details of the people who participate in this discussion. That itself is enough to show the real intentions of the coterie of this web people. Do you think people dont know who are these people in this web and with fake names they are presenting their ideas? When you are not genuine You blame others fake. Just escapism. I too call ur people as fake.

        ಉತ್ತರ
        • ರಾಕೇಶ್ ಶೆಟ್ಟಿ's avatar
          ಆಗಸ್ಟ್ 6 2013

          ನಾನು genuine ಹೌದೋ ಅಲ್ಲವೋ ಅನ್ನುವುದು ನಿಲುಮೆಯ ಓದುಗರಿಗೆ ತಿಳಿದಿದೆ.ತಾವು ಧೈರ್ಯವಿದ್ದರೆ ತಮ್ಮ ಮುಖವಾಡ ತೆಗೆದು ನಿಲ್ಲಿ.ಇಲ್ಲ ಡಬಲ್-ತ್ರಿಬಲ್ ಆಕ್ಟಿಂಗ್ ಮಾಡುವುದನ್ನು ನಿಲ್ಲಿಸಿ ನಾನು ಬರೆದಿರುವ ವಿಷ್ಯದ ಬಗ್ಗೆ ಏನಾದರೂ ಇದ್ದರೆ ಮಾತನಾಡಿ

          ಉತ್ತರ
  5. Maaysa's avatar
    Maaysa
    ಆಗಸ್ಟ್ 6 2013

    When MES can exist? Why not the people who wanna join Karnataka form a political party and fight for their rights?

    Just wondering!

    ಉತ್ತರ
  6. ಸಹನಾ's avatar
    ಸಹನಾ
    ಆಗಸ್ಟ್ 6 2013

    ಮೇಲಿನದ್ದು ನಕಲಿ Sahana, ಇದುವರೆಗೂ ಇಂಗ್ಲೀಷ್ ಹೆಸರಿನಲ್ಲಿ ಒಂದೂ ಬ್ಲಾಗ್ ಕಮೆಂಟುಗಳನ್ನು ನಾನು ಹಾಕಿಲ್ಲ. ಹಾಗೆಯೇ ದರ್ಗಾರ ಹಿಂಬಾಲಕರು ಎಂತಹ ಕೀಳು ಮಟ್ಟದಲ್ಲಿ ವಿದ್ವತ್ ಚರ್ಚೆಗಳನ್ನು ಇಳಿಸುತ್ತಾರೆ ಎನ್ನುವುದಕ್ಕೆ ಇದು ಜೀವಂತ ಸಾಕ್ಷಿ. ತಾವು ಉತ್ತರಿಸಲಾಗದ ಪ್ರಶ್ನೆಗಳನ್ನು ಕೇಳಿ ಅವರ ವಾದಗಳಲ್ಲಿರುವ ಪೊಳ‍್ಳುಗಳನ್ನು ಎತ್ತಿ ತೋರಿಸಿದವರ ಹೆಸರುಗಳಲ್ಲೇ ನಕಲಿ ಕಮೆಂಟುಗಳನ್ನು ಹಾಕಿ ದರ್ಗಾರವ ವಾದಗಳನ್ನು ಪ್ರತಿವಾದಿಗಳೆಲ್ಲರೂ ಒಪ್ಪಿಕೊಂಡಿರುವಂತೆ ಮಾಡುವ ಹುನ್ನಾರ ಮಾಡಿದ್ದಾರೆ. ಅವಧಿಯ ಸಂಪಾಧಕರೂ ಅವರ ಜೊತೆಗೆ ಕೈಜೋಡಿಸಿದ್ದಾರೆ. ಏಕೆಂದರೆ ಈ ನಕಲಿಗಳ ಕುರಿತ ನನ್ನ ಆಕ್ಷೇಪವನ್ನು ಅವರು ಪ್ರಕಟಿಸುವ ಸೌಜನ್ಯವನ್ನೇ ತೋರಿಲ್ಲ. ಅವಧಿಯು ನಕಲಿ ಹೆಸರುಗಳಲ್ಲಿ ಪ್ರತಿವಾದಿಗಳನ್ನು ಮಂಡಿಯೂರಿಸಿ ಈ ರೀತಿಯ ವಾಮ ಮಾರ್ಗದಲ್ಲಿ ದರ್ಗಾರ ಪೊಳ್ಳು ವಾದಗಳನ್ನು ಎತ್ತಿಹಿಡಿಯುವ ಕೆಲಸಮಾಡಿದ್ದು ಅತ್ಯಂತ ಶೋಚನೀಯ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments