ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 13, 2013

19

ಪ್ರಜಾಪ್ರಭುತ್ವಕ್ಕೇ ಮಾರಕವಾಗುವ ವ್ಯಕ್ತಿ ಪೂಜೆ

‍Dr Ashok K R ಮೂಲಕ

ಡಾ ಅಶೋಕ್ ಕೆ ಆರ್Modi12

‘ಒಂದೂರಲ್ಲಿ ಒಬ್ಬ ರಾಜ ಇದ್ದ. ಆತನಿಗೊಬ್ಬಳು ಸುರಸುಂದರಿ ಮಗಳು. ರಾಜನ ವೈರಿಗಳು ರಾಜನ ಮೇಲಿನ ದ್ವೇಷಕ್ಕೆ ಯುವರಾಣಿಯನ್ನು ಅಪಹರಿಸಿಬಿಟ್ಟರು. ಯುವರಾಣಿ ಅಘಾತಕ್ಕೊಳಗಾಗಿ ಮೂರ್ಛೆ ತಪ್ಪಿದಳು. ಆಘಾತದಿಂದ ಹೊರಬಂದ ಮೇಲೆ ನೋಡುತ್ತಾಳೆ ಯಾವುದೋ ಗುಹೆಯೊಳಗೆ ಕೈ ಕಟ್ಟಿಹಾಕಿಹಾಕಿದ್ದಾರೆ. ಹೊರಗಡೆ ಪಹರೆ. ಚಾಕಚಕ್ಯತೆಯಿಂದ ಕೈಗೆ ಕಟ್ಟಿದ್ದ ಹಗ್ಗವನ್ನು ಬಿಡಿಸಿ ವೈರಿಗಳೊಂದಿಗೆ ಶೌರ್ಯದಿಂದ ಹೊಡೆದಾಡಿ……..’ ರೀ ರೀ ರೀ ಕಥೆ ಹೋಗೋದು ಆ ರೀತಿ ಅಲ್ಲ …… ‘ಪಕ್ಕದ ದೇಶದ ಯುವರಾಜ ಏಕಾಂಗಿಯಾಗಿ ವೈರಿಗಳ ಮೇಲೆ ಕಾದಾಡಿ ಯುವರಾಣಿಯನ್ನು ರಕ್ಷಿಸುತ್ತಾನೆ. ಯುವರಾಜನ ಸಾಹಸಕ್ಕೆ ಮನಸೋತ ಯುವರಾಣಿಗೆ ಪ್ರೇಮಾಂಕುರವಾಗುತ್ತದೆ. ಹಿರಿಯರ ಆಶೀರ್ವಾದದೊಂದಿಗೆ ಮದುವೆಯಾಗಿ ನೂರ್ಕಾಲ ಚೆನ್ನಾಗಿ ಬಾಳಿ ಬದುಕುತ್ತಾರೆ’ ಇದು ಕಥೆ ಸಾಗುವ ರೀತಿ! ಚಿಕ್ಕಂದಿನಿಂದಲೂ ಈ ರೀತಿಯ ಕಥೆಗಳನ್ನೇ ಕೇಳಿ ಬೆಳೆದ ನಮಗೆ ಯುವರಾಣಿ ಅಬಲೆಯಲ್ಲ ಬಲಿಷ್ಠೆ, ತನ್ನನ್ನು ತಾನು ಕಾಪಾಡಿಕೊಳ್ಳಲು ಎಂದರೆ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದಲ್ಲವೇ? ಯುವರಾಣಿಯ ಸಹಾಯಕ್ಕೆ ಯುವರಾಜನೊಬ್ಬ ಬೇಕೇ ಬೇಕು ಎಂಬ ಸಿದ್ಧಾಂತ ನಮ್ಮದು!

ಮುಂದಿನ ವರುಷದ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ಸಿದ್ಧತೆ ಜೋರಾಗಿಯೇ ನಡೆದಿದೆ. ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿಯೆಂಬುದು ಹೆಚ್ಚೂ ಕಡಿಮೆ ಖಚಿತವಾಗಿದೆ. ಇನ್ನು ಕಾಂಗ್ರೆಸ್ಸಿನಿಂದ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾ? ಖಚಿತವಾಗಿ ಹೇಳುವುದು ಕಷ್ಟ. ಮಾಧ್ಯಮಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅಭಿಮಾನಿಗಳ “ಯುದ್ಧ” ಜೋರಾಗಿಯೇ ನಡೆದಿದೆ. ಬಿಜೆಪಿ ಸಾಮಾಜಿಕ ತಾಣದ ಪ್ರಚಾರಕ್ಕೆ ವರುಷಗಳಿಂದ ಕೊಟ್ಟ ಪ್ರಾಮುಖ್ಯತೆಯಿಂದ ಅಂತರ್ಜಾಲದಲ್ಲಿ ನರೇಂದ್ರ ಮೋದಿಯ ಬೆಂಬಲಿಗರೇ ಹೆಚ್ಚಿರುವುದು ನಿಜ. ನರೇಂದ್ರ ಮೋದಿಯ ವಿರುದ್ಧವಾಗಿಯೋ ಅಥವಾ ರಾಹುಲ್ ಗಾಂಧಿಯ ಪರವಾಗಿಯೋ ನೀವೇನಾದರೂ ಅಂತರ್ಜಾಲದಲ್ಲಿ ಬರೆದಿರೋ ನಿಮ್ಮ ಜನ್ಮ ಜಾಲಾಡಿ, ಹೀಯಾಳಿಸಿ, ಖಂಡಿಸಿ, ದೇಶದ್ರೋಹಿಯೆಂದು ಜರೆಯುವ ಅಸಂಖ್ಯ ಕಮೆಂಟುಗಳು ಬರುವುದು ಖಂಡಿತ!!

ನಮ್ಮ ಪ್ರಜಾಪ್ರಭುತ್ವ ತೆಗೆದುಕೊಳ್ಳುತ್ತಿರುವ ಅಪಾಯಕಾರಿ ತಿರುವಿಗೂ ಈ ಕಾಲಘಟ್ಟ ಸಾಕ್ಷಿಯಾಗುತ್ತಿರುವುದು ಪ್ರಜಾಪ್ರಭುತ್ವಕ್ಕೇ ಮಾರಕವಾಗುವ ಎಲ್ಲ ಲಕ್ಷಣಗಳೂ ಇದೆ. ಪತ್ರಿಕೆ, ಮಾಧ್ಯಮ, ಅಂತರ್ಜಾಲದ ಸಂಪರ್ಕಕ್ಕೆ ಬರುವವರು ಶಿಕ್ಷಿತರೇ ಹೌದಾದರೂ ನಮ್ಮ ಶಿಕ್ಷಣ ನಮಗೆ ಅಕ್ಷರಗಳನ್ನಷ್ಟೇ ಕಲಿಸಿ ವಿದ್ಯೆ ಕಲಿಸುವುದನ್ನು ಮರೆತುಬಿಟ್ಟಿತಾ ಎಂಬ ಅನುಮಾನ ಬಾರದೇ ಇರದು. 2002ರಲ್ಲಿ ನಡೆದ ಗೋದ್ರಾ ಹತ್ಯಾಕಾಂಡ ಮತ್ತು ಅದರ ನಂತರ ಸರಕಾರದ ಅಂಕುಶದಲ್ಲೇ ನಡೆದುಹೋದ ಮಾರಣಹೋಮ ದೇಶದ ಇತಿಹಾಸದಲ್ಲಿ ಒಂದು ಘೋರ ದುರಂತದ ಘಟನೆ. ಹತ್ಯಾಕಾಂಡದ ಸಂದರ್ಭದಲ್ಲಿ ಗುಜರಾತಿನಲ್ಲಿದ್ದದ್ದು ನರೇಂದ್ರ ಮೋದಿಯ ಆಡಳಿತ. ಸಹಜವಾಗಿ ನರೇಂದ್ರ ಮೋದಿಯ ಬಗ್ಗೆ ಟೀಕೆ – ಆರೋಪಗಳು ಬಂದೇ ಬರುತ್ತವಲ್ಲವೇ? ‘ನರೇಂದ್ರ ಮೋದಿ ತಪ್ಪು ಮಾಡಿದರು’ ಎಂದ ಕೂಡಲೇ ಹರಿಹಾಯುವ ನಮೋ ಭಕ್ತರು ‘ಸಿಖ್ ನರಮೇಧ’ ‘ಮುಂಬೈ ಗಲಭೆ’ಗಳನ್ನು ಉದಹರಿಸಿ “ಮುಚ್ಕೊಂಡ್ ಇರ್ರೀ” ಎನ್ನುತ್ತಾರೆ. ಸಿಖ್ ನರಮೇಧ, ಮುಂಬೈ ಗಲಭೆಗಳಷ್ಟೇ ಗೋದ್ರಾ ಮತ್ತು ಗೋದ್ರೋತ್ತರ ಹಿಂಸಾಚಾರಗಳೂ ತಪ್ಪಲ್ಲವೇ? ಎಂಬ ಪ್ರಶ್ನೆಯನ್ನೇ ಕೇಳಲು ಬಿಡದೆ “ಗುಜರಾತಿನ ಅಭಿವೃದ್ಧಿ ನೋಡ್ರಿ. ಅಷ್ಟು ವರ್ಷದಿಂದ ಗೆಲ್ಲುತ್ತಲೇ ಬಂದಿಲ್ಲವಾ ನಮ್ಮ ನಮೋ. 2002 ಮರೆತು ಮುಂದೆ ನಡೀರಿ. ನಮೋ ಅಷ್ಟೇ ನಮ್ಮ ದೇಶವನ್ನು ಉಳಿಸಲು ಸಾಧ್ಯ. ನೀವು ‘ಪ್ರಗತಿಪರರೆಂಬ’ ಸೋಗಿನಲ್ಲಿರೋ ದೇಶದ್ರೋಹಿಗಳು, ಸ್ಯೂಡೋ ಸೆಕ್ಯುಲರ್ ಗಳು, ರಾಹುಲ್ ನ ಚಮಚಾಗಳು” ಎಂದು ಒಂದೇ ಸಮನೆ ಚೀರಲಾರಂಭಿಸುತ್ತಾರೆ!! ನರೇಂದ್ರ ಮೋದಿಯ ಆಡಳಿತಾವಧಿಯಲ್ಲಿ ನಡೆದ ಮಾರಣಹೋಮ ಮಾನವೀಯ ದೃಷ್ಟಿಕೋನವಿರುವವರೆಲ್ಲರಿಗೂ ತಪ್ಪಾಗಿಯೇ ಕಾಣುತ್ತದಲ್ಲವೇ? ಇದರಲ್ಲಿ ಸೆಕ್ಯುಲರಿಸಂ, ರಾಹುಲ್ ಗಾಂಧಿಗಳೆಲ್ಲ ಯಾಕೆ ಬಂದರು? ಜಾತಿವಾದಿಯಾಗಿರುವ, ರಾಹುಲ್ ಗಾಂಧಿಯನ್ನು ಒಪ್ಪದ ವ್ಯಕ್ತಿಯೊಬ್ಬ ಮಾನವೀಯತೆಯ ದೃಷ್ಟಿಯಿಂದ ಗುಜರಾತಿನಲ್ಲಿ ನಡೆದಿದ್ದು ತಪ್ಪು ಎಂದರೆ ಅದನ್ನು ಒಪ್ಪಿಕೊಳ್ಳಲಾಗದಷ್ಟು ಅಸಹನೆ ತೋರ್ಪಡಿಸುವುದಾದರೂ ಏಕೆ? ಮೊದಲಿನಿಂದಲೂ ನಾವು ಕಾಂಗ್ರೆಸ್ಸಿನವರಂತಲ್ಲ ನಾವು ಕಾಂಗ್ರೆಸ್ಸಿನವರಂತಲ್ಲ ಎಂದೇ ಹೇಳುತ್ತಿದ್ದ ಬಿಜೆಪಿ ಮತ್ತದರ ಬೆಂಬಲಿಗರು ಕಾಂಗ್ರೆಸ್ ನೇತ್ರತ್ವದಲ್ಲಿ ನಡೆದಹೋದ ಪೈಶಾಚಿಕ ಸಿಖ್ ನರಮೇಧವನ್ನು ಗೋದ್ರೋತ್ತರ ಹತ್ಯಾಕಾಂಡಕ್ಕೆ ಸಮರ್ಥನೆಯೆಂಬಂತೆ ಬಳಸಿಕೊಳ್ಳುವುದಕ್ಕೆ ಏನೆನ್ನಬೇಕು? ಇವರಿಗೆ ಗೋದ್ರಾ ರೈಲಿನಲ್ಲಿ ಹತ್ಯೆಯಾದ ಹಿಂದೂಗಳು ನರಮೇಧ ನಡೆಸಲು ನೆಪವಾದರೆ ಅವರಿಗೆ ಹತ್ಯೆಯಾದ ಇಂದಿರಾ ಗಾಂಧಿಯ ನೆಪ. ನೆಪದ ಮರೆಯಲ್ಲಿ ನಡೆದುಹೋಗುವ ಹತ್ಯಾಕಾಂಡಗಳು ಸಮರ್ಥನೀಯವೇ?

ದಂಡಕಾರಣ್ಯ, ಬಸ್ತಾರ್ ಮುಂತಾದ ರೆಡ್ ಕಾರಿಡಾರ್ ಎಂದು ಗುರುತಿಸಿಕೊಂಡಿರುವ ನಕ್ಸಲ್ ಪ್ರಾಬಲ್ಯದ ಪ್ರದೇಶಗಳಲ್ಲಿ ನೀವು ಸರಕಾರವನ್ನು ವಿರೋಧಿಸಿ ಮಾತನಾಡಿದರೆ ನೀವು ನಕ್ಸಲ್! ನಕ್ಸಲರನ್ನು ವಿರೋಧಿಸಿ ಮಾತನಾಡಿದರೆ ನೀವು ಸರಕಾರಿ ಏಜೆಂಟ್! ಸರಕಾರ ಮತ್ತು ನಕ್ಸಲರಿಬ್ಬರ ತಪ್ಪುಗಳನ್ನೂ ವಿರೋಧಿಸಿ ತಟಸ್ಥ ನೀತಿ ಅನುಸರಿಸುವ ಅವಕಾಶವೇ ನಿಮಗಿಲ್ಲ! ಎರಡು ಕಡೆಯಲ್ಲೊಂದು ಕಡೆಗೆ ನಿಮಗೆ ಇಷ್ಟವಿಲ್ಲದಿದ್ದರೂ ಸೇರಿಸಿಬಿಡುತ್ತಾರೆ! ಇದೇ ಮಾದರಿ ಈಗ ರಾಷ್ಟ್ರರಾಜಕಾರಣದಲ್ಲೂ ಕಾಣಲಾರಂಭಿಸಿದೆ. ನರೇಂದ್ರ ಮೋದಿಯನ್ನು ನೀವು ಯಾವುದೇ ಕಾರಣಕ್ಕಾದರೂ ವಿರೋಧಿಸಿ ನಿಮಗೆ ಇಷ್ಟವಿಲ್ಲದಿದ್ದರೂ ನೀವು ಕಾಂಗ್ರೆಸ್ಸಿನ ಏಜೆಂಟ್ ಆಗಿಬಿಡುತ್ತೀರಿ, ರಾಹುಲ್ ಗಾಂಧಿಯ ಚಮಚಾ ಆಗಿಬಿಡುತ್ತೀರಿ! ಈ ದೇಶದಲ್ಲಿ ನರೇಂದ್ರ ಮೋದಿ, ರಾಹುಲ್ ಗಾಂಧಿ, ಬಿಜೆಪಿ, ಕಾಂಗ್ರೆಸ್ಸನ್ನು ಹೊರತುಪಡಿಸಿಯೂ ರಾಜಕೀಯವಿದೆ, ರಾಜಕಾರಣಿಗಳಿದ್ದಾರೆ ಎಂಬುದನ್ನು ಮರೆಯಬಾರದಲ್ಲವೇ? ಹೋಗಲಿ ನರೇಂದ್ರ ಮೋದಿ ಪ್ರಧಾನಿಯಾಗಿಯೇ ತೀರುತ್ತಾರೆ ಎಂದು ನಂಬಿರುವ ಅವರ ಕಟ್ಟಾ ಅಭಿಮಾನಿಗಳಿಗಾದರೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸಂಪೂರ್ಣ ಬಹುಮತ ಪಡೆಯುತ್ತದೆಂಬ ವಿಶ್ವಾಸವಿದೆಯಾ? ರಾಷ್ಟ್ರೀಯ ಪಕ್ಷವೆಂಬ ಹಣೆಪಟ್ಟಿ ಧರಿಸಿರುವ ಬಿಜೆಪಿ ಕಾಂಗ್ರೆಸ್ಸುಗಳೆರಡೂ ಅಧಿಕಾರದ ಗದ್ದುಗೆಯನ್ನೇರಲು ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆಯಲೇಬೇಕು. ಮತ್ಯಾಕೆ ಈ ನಮೋ ಮೇನಿಯಾ?

ನಮೋ ಭಕ್ತರು ಪದೇ ಪದೇ ಹೇಳುವುದು “2002ರನ್ನು ಮರೆತು ಮುಂದೆ ನಡೆಯಿರಿ. ಅಭಿವೃದ್ಧಿ ಅಭಿವೃದ್ಧಿ ಮುಖ್ಯ ಈಗ. ಭಾರತ ಸೂಪರ್ ಪವರ್ ಆಗಬೇಕೆಂದರೆ ನಮೋ ಪ್ರಧಾನಿಯಾಗಲೇಬೇಕು”. 2002ರಲ್ಲಿ ನಮ್ಮ ಬಂಧು ಬಳಗದವರಾರೂ ಹತ್ಯೆಯಾಗದ ಕಾರಣ ಅದನ್ನು ಕ್ಷಣಕಾಲ ಮರೆತೇ ಬಿಡೋಣ. ಗುಜರಾತಿನ ಅಭಿವೃದ್ಧಿ ಮಾದರಿ ಎಂಬ ಪದವನ್ನು ಈಗೊಂದಷ್ಟು ವರುಷಗಳಿಂದ ಕೇಳುತ್ತಲೇ ಇದ್ದೇವೆ. ಕರ್ನಾಟಕದಲ್ಲಿ ಯಡಿಯೂರಪ್ಪ ಅಧಿಕಾರವಿಡಿದಾಗ ಉಚ್ಛರಿಸಿದ್ದೂ ಅದೇ ಗುಜರಾಜ್ ಅಭಿವೃದ್ಧಿ ಮಾದರಿ! ಗುಜರಾತಿನಲ್ಲಿ ವಿದ್ಯುತ್ ರಸ್ತೆಗಳು ಚೆನ್ನಾಗಿ ಅಭಿವೃದ್ಧಿಯಾಗಿದೆ ಎಂದು ಹೇಳುತ್ತಾರೆ, ಇನ್ನು ಗುಜರಾತ್ ಸರಕಾರ ಉದ್ಯಮಿಗಳಿಗೆ ಸಹಾಯಹಸ್ತ ಚಾಚುವುದರಲ್ಲೂ ಮುಂದು. ಸಾವಿರಾರು ಎಕರೆ ಪ್ರದೇಶವನ್ನು ಉದ್ಯಮಿಗಳಿಗೆ ಕ್ಷಣಮಾತ್ರದಲ್ಲಿ ನೀಡುತ್ತದಂತೆ ಅಲ್ಲಿನ ಸರಕಾರ. ಇನ್ನು ನಮೋ ಭಕ್ತರು ಹೇಳುವ ಹಾಗೆ ಗುಜರಾತಿನಲ್ಲಿರುವ ಉತ್ತಮ ರಸ್ತೆಗಳು, ಸಾರಿಗೆ ವ್ಯವಸ್ಥೆ ಇನ್ನೆಲ್ಲಿಯೂ ಇಲ್ಲವಂತೆ! ಆ ರೀತಿಯ ಅಭಿವೃದ್ಧಿ ದೇಶದೆಲ್ಲೆಡೆ ಕಾಣಬೇಕೆಂದರೆ ನಮೋ ಪ್ರಧಾನಿಯಾಗಲೇಬೇಕಂತೆ! ಉತ್ತಮ ರಸ್ತೆ, ಸಾರಿಗೆ, ಉದ್ಯಮ, ವಿದ್ಯುತ್ ಇದಿಷ್ಟೇ ಅಭಿವೃದ್ಧಿಯೇ? ಇವುಗಳನ್ನು ಹೊರತುಪಡಿಸಿ ಆರೋಗ್ಯ, ಶಿಕ್ಷಣ, ವೈದ್ಯಕೀಯ ಸೇವೆ…ಇನ್ನು ಹತ್ತು ಹಲವಾರು ಕ್ಷೇತ್ರಗಳಿದ್ದಾವಲ್ಲವೇ? ಶಿಕ್ಷಣ ಆರೋಗ್ಯದಂತಹ ಸಮಾಜದ ಆರೋಗ್ಯವನ್ನು ನಿರ್ಧರಿಸುವ ವಿಷಯಗಳಲ್ಲಿ ಗುಜರಾತ್ ಉಳಿದ ರಾಜ್ಯಗಳಿಗಿಂತಲೂ ಹಿಂದಿರುವುದು ಸುಳ್ಳಲ್ಲವಲ್ಲ. 45 % ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಗುಜರಾತಿನಲ್ಲಿ, ಇದು ಅಭಿವೃದ್ಧಿಯ ಸಂಕೇತವಾ? ಶಿಕ್ಷಣದ ಪ್ರಮಾಣ ಕೂಡ ಅತಿ ಹೆಚ್ಚೆನಿಸುವಷ್ಟು ಇಲ್ಲ. ಇವೆಲ್ಲವೂ ಕೂಡ ಅಭಿವೃದ್ಧಿಯ ಮಾನದಂಡವಾಗಬೇಕಲ್ಲವೇ? ಎಲ್ಲವನ್ನೂ ಮಾನದಂಡವಾಗಿ ತೆಗೆದುಕೊಂಡರೆ ಖಂಡಿತವಾಗಿಯೂ ಗುಜರಾತ್ ದೇಶದ ಮೊದಲ ಮೂರು ರಾಜ್ಯಗಳಲ್ಲಿ ಸ್ಥಾನ ಪಡೆಯಲಾರದು. ಇನ್ನು ನರೇಂದ್ರ ಮೋದಿಯವರಿಗೆ ಗುಜರಾತಿನಲ್ಲಿರುವ ಅಪೌಷ್ಟಿಕ ಮಕ್ಕಳ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರ – ಗುಜರಾತಿಗಳು ಡಯೆಟ್ ಕಾನ್ಶಿಯಸ್ ಆಗಿದ್ದಾರೆ!! ನಮೋ ನಮಃ!

ಉದ್ಯಮಿಗಳಿಗೆ ಅಪಾರ ಪ್ರಮಾಣದ ಆರ್ಥಿಕ ಬೆಂಬಲ ಕೊಡುವ ನರೇಂದ್ರ ಮೋದಿಗೆ ಕಾರ್ಪೋರೇಟ್ ವಲಯದ ಬೆಂಬಲ ಸಹಜವಾಗಿಯೇ ಸಿಗುತ್ತಿದೆ. ನರೇಂದ್ರ ಮೋದಿ ಪ್ರಧಾನಿಯಾಗಿಬಿಟ್ಟರೆ ಜಮೀನು ಪಡೆಯಲು, ಅದಿರು ತೆಗೆಯಲು ಸಲೀಸಾಗಿಬಿಡುತ್ತದೆಂಬ ಭಾವನೆ ಅವರೆಲ್ಲರಲ್ಲಿ. ಉದ್ಯಮಿಗಳಿಗೆ ನರೇಂದ್ರ ಮೋದಿ ಪ್ರಿಯವಾಗುತ್ತಿರುವ ಸಂದರ್ಭದಲ್ಲೇ ಮಾಧ್ಯಮಗಳಲ್ಲೂ ಮೋದಿಯ ಬಗೆಗಿನ ಧೋರಣೆ ಬದಲಾಗುತ್ತಿರುವುದು ಏನನ್ನು ಸೂಚಿಸುತ್ತದೆ? ಮೋದಿಯಂತಹ ಧಾರ್ಮಿಕ ಮೂಲಭೂತವಾದಿ ಪ್ರಧಾನಿಯಾಗಲೇಬಾರದೆಂದು ಬರೆಯುತ್ತಿದ್ದ – ಹೇಳುತ್ತಿದ್ದ ಮಾಧ್ಯಮಗಳಲ್ಲಿ ಕ್ರಮೇಣವಾಗಿ ಮೋದಿ ಪ್ರಧಾನಿಯಾದರೆ ತಪ್ಪೇನಿಲ್ಲ ಎಂದು ಧ್ವನಿಸುತ್ತಿರುವುದರ ಹಿಂದೆ ಕಾರ್ಪೋರೇಟ್ ವಲಯದ ಕೈವಾಡವಿರುವುದನ್ನು ಅಲ್ಲಗೆಳೆಯಲಾಗದು. ಇನ್ನು ನವಮಧ್ಯಮ ವರ್ಗದ ಯುವಜನತೆ ಮೋದಿಯನ್ನು ಅಪಾರವಾಗಿ ಬೆಂಬಲಿಸುತ್ತಿರುವುದು (ಈ ಬೆಂಬಲ ಸದ್ಯದ ಮಟ್ಟಿಗೆ ಅಂತರ್ಜಾಲದಲ್ಲಿ, ಬರವಣಿಗೆಗಳಲ್ಲಿ ಕಾಣುತ್ತಿದೆ) ಅಭಿವೃದ್ಧಿಯ ಕಾರಣಕ್ಕಾಗಿ ಮಾತ್ರವಾ? ಅಥವಾ ಕಾಲಕ್ರಮೇಣ ಹೆಚ್ಚುತ್ತಿರುವ ಧಾರ್ಮಿಕ ಮೂಲಭೂತತನ ಕಾರಣವಾ?

ಹತ್ತು ವರುಷದ ಅಧಿಕಾರ, ಮಾಡಿಕೊಂಡ ಹತ್ತಾರು ಹಗರಣಗಳು, ಜಾಗತೀಕರಣದ ಪ್ರಭಾವದಿಂದ ಹೆಚ್ಚುತ್ತಲೇ ಹೋಗುತ್ತಿರುವ ಹಣದುಬ್ಬರ ಇವೆಲ್ಲವೂ ಸೇರಿ ಕಾಂಗ್ರೆಸ್ಸನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೈರಾಣು ಮಾಡುವುದು ಸಹಜ. ಜೊತೆಗೆ ಹತ್ತು ವರುಷದ ಅಧಿಕಾರ ಸೃಷ್ಟಿಸುವ ಆಡಳಿತವಿರೋಧಿ ಅಲೆ ಕೂಡ ಕಾಂಗ್ರೆಸ್ಸನ್ನು ಸೋಲಿಸುವ ಸಾಧ್ಯತೆ ಹೆಚ್ಚು. India shining ಎಂಬ ಅಬ್ಬರದ ಅಲೆ ಕೂಡ ಹಿಂದೊಮ್ಮೆ ಬಿಜೆಪಿ ಸರಕಾರವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ವಿಫಲವಾಯಿತು. ಕಾಂಗ್ರೆಸ್ ಈ ಬಾರಿ ಸೋಲಬೇಕು ಸರಿ, ಆದರೆ ನರೇಂದ್ರ ಮೋದಿಯೇ ಪ್ರಧಾನಿಯಾಗಬೇಕಾ? ಆಗುತ್ತಾರಾ? ಬಿಜೆಪಿಯೊಳಗಿನ ವಿರೋಧಿಗಳನ್ನೇ ಸಮಾಧನಪಡಿಸಲೆತ್ನಿಸದೆ ಅವರನ್ನು ಮೂಲೆಗೆ ತಳ್ಳಿ ಸರ್ವಾಧಿಕಾರತ್ವದ ಸೂಚನೆಗಳನ್ನು ಕೊಡುತ್ತಿರುವ ನರೇಂದ್ರ ಮೋದಿ ಅಧಿಕಾರ ಹಿಡಿಯಲು ಅವಶ್ಯಕವಾಗಿ ಬೇಕಾಗಿರುವ ಪ್ರಾದೇಶಿಕ ಪಕ್ಷಗಳ ಜೊತೆ ಯಾವ ರೀತಿ ವರ್ತಿಸುತ್ತಾರೆ? ನರೇಂದ್ರ ಮೋದಿ ಪ್ರಧಾನಿಯಾಗುವುದು ನಿಮಗೆ ಬೇಕಿಲ್ಲದಿದ್ದರೆ ದೇಶ ಬಿಟ್ಟು ತೊಲಗಿ ಎಂದು ಅಪ್ಪಟ ಪಾಕಿ ಮತಾಂಧನ ರೀತಿ ಕೂಗುವವರನ್ನು ಹೇಗೆ ಸಂಭಾಳಿಸುತ್ತಾರೆ?

ಲೇಖನದಾರಂಭದಲ್ಲಿ ಹೇಳಿದ ಕಥೆ ನಮ್ಮ ದೇಶದ ಸದ್ಯದ ಪರಿಸ್ಥಿತಿ ಪ್ರತಿಬಿಂಬ. ನಮಗೆ ನಮ್ಮ ಶಕ್ತಿಯ ಅರಿವಿಲ್ಲ, ನಮ್ಮಲ್ಲೂ ಹುಳುಕಗಳಿದ್ದಾವೆ ಅವುಗಳನ್ನು ಸರಿಪಡಿಸಿಕೊಂಡರಷ್ಟೇ ದೇಶ ಮುಂದುವರೆಯಲು ಸಾಧ್ಯ ಎಂಬುದನ್ನು ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ವೈಯಕ್ತಿಕವಾಗಿ ನಾವೆಷ್ಟೇ ಭ್ರಷ್ಟರಾಗಿದ್ದರೂ ದೇಶದ ಇನ್ನಿತರರು ಶುದ್ಧವಾಗಿರಬೇಕು ಎಂಬ ಮನಸ್ಥಿತಿ ನಮ್ಮದು. ಎಲ್ಲಿಂದಲೋ ಒಬ್ಬ ‘ಯುವರಾಜ’ ಬಂದು ನಮ್ಮೆಲ್ಲರನ್ನು ಕಾಪಾಡಿ ಉದ್ಧರಿಸಿಬಿಡುತ್ತಾನೆ ಎಂಬ ಕುರುಡು ನಂಬುಗೆ ನಮ್ಮದು. ಇಂದು ನರೇಂದ್ರ ಮೋದಿ ಆ ‘ಯುವರಾಜ’ನಾಗಿ ಗೋಚರಿಸುತ್ತಿದ್ದಾರೆ! ಇಡೀ ದೇಶವನ್ನು ಅನಾಮತ್ತಾಗಿ ಸಂಕಷ್ಟಗಳಿಂದ ಮೇಲೆತ್ತಿ ಬಿಡುವ ದೇವರು ಈ ನಮೋ ಎಂದು ನಂಬಿಕೊಂಡಿದ್ದಾರೆ. ದಶಕಗಳ ಹಿಂದೆ ಅನಕ್ಷರಸ್ಥ ಜನತೆ ‘ನಿಮ್ಮ ಮತ ಯಾರಿಗೆ?’ ಎಂದರೆ ಕೈ ತೋರಿಸುತ್ತಿದ್ದರಂತೆ. ಚುನಾವಣೆಗೆ ನಿಂತಿರುವವರು ಯಾರೆಂದು ಕೇಳಿದರೆ ತಲೆಯಾಡಿಸುತ್ತಿದ್ದರಂತೆ! ಕೈ ಗುರುತಿಗಷ್ಟೇ ಕುರುಡಾಗಿ ಮತ ಹಾಕುತ್ತಿದ್ದ ಅವರಿಗೂ ನರೇಂದ್ರ ಮೋದಿಯೊಬ್ಬರೇ ನಮ್ಮ ರಕ್ಷಕನೆಂದುಕೊಳ್ಳುತ್ತಿರುವ ಈಗಿನ ಅಕ್ಷರಸ್ಥರಿಗೂ ವ್ಯತ್ಯಾಸಗಳಿದೆಯೇ? ವ್ಯಕ್ತಿ ಪೂಜೆಯ ಪರಾಕಾಷ್ಠೆ ತಲುಪಿದ್ದ ಇಂದಿರಾ ಗಾಂಧಿ ಎಮರ್ಜೆನ್ಸಿಯನ್ನು ಉಡುಗೊರೆಯಾಗಿ ನೀಡಿದರು. ಇನ್ನು ನರೇಂದ್ರ ಮೋದಿಯ ಉಡುಗೊರೆಯನ್ನು ನಿರೀಕ್ಷಿಸಬೇಕೇ?

 

 

19 ಟಿಪ್ಪಣಿಗಳು Post a comment
  1. Nagaraj's avatar
    Nagaraj
    ಆಗಸ್ಟ್ 13 2013

    I don’t think this article deserves single star. This is vasahatushahi thinking.It is not Modi who was reason for post Godhra rights,but people.

    ಉತ್ತರ
  2. Ajay (@raikudla)'s avatar
    ಆಗಸ್ಟ್ 13 2013

    In democracy court is the one place where everything is decided, if he was wrong it would have found by court, so you telling he responsible for Gujarat riot is against democracy of our country. Stop fooling us.

    ಉತ್ತರ
  3. ಗಿರೀಶ್'s avatar
    ಗಿರೀಶ್
    ಆಗಸ್ಟ್ 13 2013

    ಶೀರ್ಷಿಕೆ ಆಕರ್ಷಣೀಯವಾಗಿದೆ, ಆದರೆ ಲೇಖನ ಮತ್ತದೆ ಕಾಂಗ್ರೆಸಿಗರ ಹಳಸಲು ಹಪಾಹಪಿ. ಅದನ್ನು ಲೇಖನದ ಸಮಯೋಚಿತತೆಯೇ ತೋರಿಸುತ್ತದೆ. ಏಕೆಂದರೆ ಇದೇ ಲೇಖಕರು ಈ ದೇಶದಲ್ಲಿ ಕೌಟುಂಬಿಕ ವ್ಯಕ್ತಿ ಪೂಜೆಯ ಬಗ್ಗೆ ಸೊಲ್ಲೆತ್ತಲು ವಿಫಲವಾಗಿರುವುದು. ಮರಳುಗಾಡಿನಲ್ಲಿ ಓಯಸಿಸ್ ಅತ್ಯಂತ ಆತ್ಮೀಯ ಅಪೇಕ್ಷಣೀಯ ತಾಣವಾಗುತ್ತದೆ. ಅಂತೇಯೇ ಮೋಡಿ ಕೂಡ. ಸಾಲು ಸಾಲು ಚಿತ್ರಗಳು ಸೋಲುತ್ತಿದ್ದಾಗ ಮುಂಗಾರುಮಳೆಯಂತ ಸಾಧಾರಣ ಚಿತ್ರ ಗೆಲ್ಲಲು ಕಾರಣ ಯೋಗರಾಜ್ ಭಟ್ ಕಾರಣರಲ್ಲ. ಅದಕ್ಕೂ ಮುನ್ನ ಕೆಟ್ಟ ಚಿತ್ರಗಳನ್ನು ಕೊಟ್ತ ನಿರ್ದೇಶಕರು.

    ನರೇಂದ್ರ ಮೋದಿಯನ್ನು ಹಳಿಯಲು ಬೇರೆ ಕಾರಣಗಳು ಸಿಗದಿದ್ದಾಗ ಗೋಧ್ರೋತ್ತರ ಗಲಭೆಗಳನ್ನು ಹಿಡಿದು ಜಗ್ಗಾಡುವವರಿಗೆ ಮೋದಿ ಅಭಿಮಾನಿಗಳು ಕೊರಳು ಕೊಟ್ಟು ಕುಯ್ಯಿಸಿಕೊಳ್ಳಬೇಕು ಎಂಬ ನಿಮ್ಮ ನಿಲುವು ಹಾಸ್ಯಾಸ್ಪದ. ಸಾಮಾಜಿಕ ತಾಣಗಳ ಬಂದ ನಂತರವೇ ಮಾಧ್ಯಮಗಳ ಏಕಮುಖ ಪ್ರಚಾರಕ್ಕೆ ಹೊಡೆತ ಬಿದ್ದು ಸಾಮಾನ್ಯ ಜನರೂ ತಮ್ಮ ಧ್ವನಿಯನ್ನು ಎಲ್ಲರಿಗೂ ಕೇಳುವಂತೆ ಮಾಡಿದ್ದು ಕೂಡ ಮೋದಿಯ ವಿರೋಧಿಗಳಿಗೆ ಅರಗಿಸಿಕೊಳ್ಳಕಾಗದ ತುತ್ತು.

    ೨೦೦೨ ರ ಗಲಭೆಗೆ ಬೇರೆ ಗಲಭೆಗಳನ್ನು ತೋರಿಸುವುದು ಸಮರ್ಥನೆಗಲ್ಲ, ಬದಲಿಗೆ ಇಂತದೇ ಘಟನೆಗಳಲ್ಲಿ ಒಬ್ಬ ವ್ಯಕ್ತಿಯನ್ನು ಗುರಿ (victimise) ಮಾಡಿ ಮಾತನಾಡದವರು ಈ ಘಟನೆಯಲ್ಲಿ ಮಾತ್ರ ಏಕೆ ಮಾಡುತ್ತೀರೆಂಬ ಮರು ಪ್ರಶ್ನೆ. ಅದೆಲ್ಲದರ ಹೊರತಾಗಿಯೂ ಬೇರೆಲ್ಲ ಗಲಭೆಗಳಲ್ಲಿ ಕಾರಣರಾದವರನ್ನು ನ್ಯಾಯಾಲಯಗಳು ಹೆಸರಿಸಿವೆ. ಕೆಲವು ಗಲಭೆಗಳಲ್ಲಿ ಕಾಂಗ್ರೆಸ್ ತನ್ನ ಜನರನ್ನು ಸಮರ್ಥಿಸಿಕೊಂಡಿದೆ. ಮೋದಿ ಅಂತಹ ಕೆಲಸ ಮಾಡಿಲ್ಲವಲ್ಲ? ಕೊಡ್ನಾನಿ ಯವರನ್ನು ಜೈಲಿಗಟ್ಟಲಾಗಿದೆ. ಜಗಧೀಶ್ ಟೈಟ್ಲರ್ ವಿಷಯದಲ್ಲಿ ಇದೇಕಾಗಿಲ್ಲ? ಎಂದಾದರೂ ತಾವು ಕೇಳಿದ್ದೀರಾ? ೨೦೦೨ ರ ಘಟನೆಯನ್ನು ಹೆಸರಿಸಲು ಹಿಂಜರಿಯದ ತಾವು ಬೇರೆ ಘಟನೆಗಳನ್ನು ಹೆಸರಿಸಲು ಹಿಂಜರಿಯುವುದೇಕೆ? ಮೋದಿ ಸಮರ್ಥಕರನ್ನು ಚೆಡ್ಡಿಗಳೆಂದು ಅಣಕಿಸುವಾಗ, ತಾವು ಕಾಚ (ಕಾಂಗ್ರೆಸ್ ಚಮಚಾ) ಗಳೆಂದು ಕರೆಸಿಕೊಳ್ಳಲೇಕೆ ಹಿಂಜರಿಕೆ?

    ಮೋದಿಯನ್ನು ವಿರೋಧಿಸಲು ತಾವು ಎತ್ತಿದಂತೆ ಬೇರೆ ವಿಚಾರಗಳಲ್ಲಿ ಮಣಿಸಲು ಪ್ರಯತ್ನಿಸಿದಾಗ ಮಾತ್ರ ಚರ್ಚೆ ನಡೆಗಾಗಲೂ ಮೋದಿ ಪರರು ಬೇರೆ ಗಲಭೆಗಳ ಉದಾಹರಣೆ ತಂದರೆ ನಿಮ್ಮ ಆರೋಪದಲ್ಲಿ ಹುರುಳಿದೆ. ನೀವು ೨೦೦೨ ರ ಗಲಭೆ ಉದ್ದರಿಸಿ ಮೋದಿ ವಿರೋಧಿಗಳು ಸೌಮ್ಯವಾಗಿ ಆತನ ಬೇರೆ ಅಭಿವೃದ್ಧಿ ಕೆಲವನ್ನು ಮಾತ್ರ ಉದ್ದರಿಸ ಬೇಕೆಂಬ ಅಪೇಕ್ಷೆ ಅದು ಹೇಗೆ ಸಾಧು.

    ನಾನು ಕಲ್ಲಲ್ಲಿ ಹೊಡೆಯುತ್ತೇನೆ, ಆದರೆ ನೀವು ಮಾತ್ರ ನನಗೆ ಹೊಡೆಯಬಾರದು, ಹೊಡೆದರೂ ಹೂವಿನಲ್ಲೇ ಹೊಡೆಯಬೇಕೆಂಬ ನಿಮ್ಮ ಧೋರಣೆ ಕಾಂಗ್ರೆಸಿನದಲ್ಲವೆ?
    ಹೌದು ಮೋದಿ ನವ ಮಧ್ಯಮ ವರ್ಗದ ಯುವಕರಿಗೆ ಆಶಾಕಿರಣವಾಗಲು ಕಾರಣ ಅವರನ್ನು ಅಂಧಕಾರದಲ್ಲಿಟ್ಟವರಲ್ಲವೆ? ಆ ಅಂಧಕಾರದಿಂದ ಹೊರ ಬಂದು ತಾವೂ ಒಮ್ಮೆ ಬೆಳಕನ್ನು ಕಾಣಿ ಎಂಬ ಆಶಯದೊಂದಿಗೆ

    ವಂದನೆಗಳು

    ಉತ್ತರ
  4. ಗಿರೀಶ್'s avatar
    ಗಿರೀಶ್
    ಆಗಸ್ಟ್ 13 2013

    ಕಳೆದ ೬೦ ವರ್ಷಗಳು ವ್ಯಕ್ತಿಪೂಜೆ ಪ್ರಜಾಪ್ರಭುತ್ವಕಕ್ಕೆ ಮಾರಕವೆಂದೆನಿಸಿದೆ, ಈಗ ಮಾತ್ರ ಮಾರಕ ಎಂದೆನಿಸಿದ್ದೇಕೆ ಎಂಬ ಬಗ್ಗೆಯೂ ತಾವು ವಿವರಣೆ ನೀಡಿದ್ದರೆ ಚೆನ್ನಿತ್ತು. ಮೂಲಭೂತ ಸೌಕರ್ಯಗಳು ಅಭಿವೃದ್ದಿ ಮಾತ್ರವಲ್ಲ ಬೇರೆಯದೂ ಇದೆ ಎನ್ನುವ ತಾವು ಮೂಲಭೂತ ಸೌಕರ್ಯಗಳೂ ಅಭಿವೃದ್ದಿಗೆ ಸಹಕಾರಿಯಲ್ಲವೆನ್ನುತ್ತಿರಾ?

    ಉತ್ತರ
  5. Sandesh Prabhu M S's avatar
    ಆಗಸ್ಟ್ 13 2013

    My analysis after reading the complete article:
    1) Author is a fence sitter & may be a 3rd front/4th front supporter – We should ask him to read my “OLD” website: http://www.NDAorUPA.com
    2) People who were telling we should bring military rule in India start telling Mr. Modi is a dictator – such an irony!!
    3) Author is having EGO problem with Modi (clearly visible)
    4) We should ask the author to read this
    http://www.fakingnews.com/2013/04/after-receiving-constant-online-abuses-on-twitter-man-happily-decides-to-vote-for-modi/

    ಉತ್ತರ
  6. ravidvg's avatar
    ಆಗಸ್ಟ್ 13 2013

    ಲೇಖಕರಿಗೆ ಪ್ರಜಾಪ್ರಭುತ್ವ ಹೇಗೆ ಕೆಲಸ ಮಾಡುತ್ತೆ ಅಂತಾನೆ ಗೊತ್ತಿಲ್ಲ ಅನ್ನಿಸುತ್ತೆ… ಅಲ್ಲಾ ಸ್ವಾಮಿ, ಯಾರೋ ಯುವರಾಣಿ ಯುವರಾಜನನ್ನ ಬಯಸ್ತಾ ಇರೋ ಕಥೆಗೆ ಹೊಲಿಸ್ತೀರಲ್ಲ ನಿಮಗೆ ಏನನ್ನಬೇಕು.. ನಮ್ಮ ದೇಶದ ಆಡಳಿತ ನಡೆಯೋದೇ ಪ್ರಧಾನ ಮಂತ್ರಿ ಮತ್ತೆ ಅವರ ಸಚಿವ ಸಂಪುಟದಿಂದ ಅನ್ನೋದು ನಿಮಗೆ ಗೊತ್ತಿರಬೇಕು ಅಂದುಕೊಂಡಿದ್ದೇನೆ… ಇಲ್ಲಿಯವರೆಗೆ ಭಾರತವನ್ನಾಳಿದವರೆಲ್ಲ ಯುವರಾಜರ ನಿಮ್ಮ ಪಾಲಿಗೆ.? ನಿಮ್ಮ ಪ್ರಕಾರ ಈ ದೇಶದ ಪ್ರಧಾನಿ ನಿಮ್ಮ ಪ್ರಕಾರ ಯಾರಾದರೂ ಆಗುತ್ತೆ (ಕೊನೆಗೆ ರಾಹುಲ್ ಗಾಂಧಿ ಅದರೂ ನಿಮಗೆ ಸರಿ) ಆದರೆ ಮೋದಿ ಮಾತ್ರ ಆಗಬಾರದು..

    ನರೇಂದ್ರ ಮೋದಿಯ ಬೆಂಬಲಿಗರು ಸಾಮಾಜಿಕ ತಾಣಗಳಲ್ಲಿ ಹೆಚ್ಚಿದ್ದಾರೆ, ಇದಕ್ಕೆ ನೀವು ಕೊಡುವ ಕಾರಣ “ಬಿಜೆಪಿ ಸಾಮಾಜಿಕ ತಾಣದ ಪ್ರಚಾರಕ್ಕೆ ವರುಷಗಳಿಂದ ಕೊಟ್ಟ ಪ್ರಾಮುಖ್ಯತೆ”.. ಬೇರೆ ಪಕ್ಷಗಳನ್ನು ಯಾರದರೂ ಕಟ್ಟಿ ಹಾಕಿದ್ದಾರೆಯೇ.?

    ಹತ್ಯಾಕಾಂಡಗಳು ಎಲ್ಲಿಯೇ ನಡೆಯಲಿ, ಅದಕ್ಕೆ ಯಾರೇ ಕಾರಣರಾಗಿರಲಿ ಅದಕ್ಕೆ ನಮ್ಮ ವಿರೋಧವಿದೆ ಮತ್ತೆ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇ ಬೇಕು ಎನ್ನುವುದು ನಮ್ಮ ನಿಲುವು… ಆದರೆ ನೀವು ಮಾಡುತ್ತಾ ಇರುವುದೇನು.? ಬೇರೆ ಯಾವ ದಂಗೆಗಳು ನಿಮಗೆ ನೆನಪಿನಲ್ಲಿಯೇ ಇಲ್ಲವಲ್ಲಾ.. ಇಷ್ಟೆಲ್ಲಾ ಗೊಣಗುವ ನೀವು ಬೇರೆ ಯಾವುದೇ ಹತ್ಯಾಕಾಂಡಗಳಿಗೆ ಸಂಬಂಧಿಸಿದ ಒಬ್ಬರನ್ನಾದರೂ ನಿಮ್ಮ ಲೇಖನದಲ್ಲಿ ಹೆಸರಿಸಿದ್ದೀರಾ.?? ಕೇವಲ ಮೋದಿಯೇ ಯಾಕೆ ನಿಮ್ಮ ಟಾರ್ಗೆಟ್.? ನಿಮ್ಮ ಈ selective approach ಗೆ ನಮ್ಮ ವಿರೋಧವೇ ಹೊರತು ತಪ್ಪಿತಸ್ಥರಿಗೆ ಶಿಕ್ಷೆ ಆಗಬಾರದು ಎಂದಲ್ಲಾ..
    ಮೊದಿಯಾನ್ನು ವಿರೋಧಿಸುವ ಭರದಲ್ಲಿ ಅವರನ್ನು ಆಯ್ಕೆ ಮಾಡಿದ ಗುಜರಾತಿನ ೬ ಕೋಟಿ ಜನರು ಮತ್ತೆ ಅವರ ಅಭಿಮಾನಿಗಳು ಅಜ್ಞಾನಿಗಳು, ಮೂಲಭೂತವಾದಿಗಳು ಎನ್ನುವ ನೀವೊಬ್ಬರೇ ಜಾಣರು, ಧರ್ಮ ಸಹಿಷ್ಣುಗಳು ಅಂದುಕೊಡಿದ್ದರೆ ನಾವು ಕೇವಲ ಸಂತಾಪ ಸೂಚಿಸಬಹುದಷ್ಟೇ..
    ನಿಮಗೆ ಮೋದಿಯ ಬೆಂಬಲಿಗರು ಕೇವಲ ಅಂತರ್ಜಾಲಗಳಲ್ಲಿ ಮತ್ತೆ ಬರವಣಿಗೆಗಳಲ್ಲಿ ಮಾತ್ರ ಕಾಣುತ್ತಿರುವುದು ನೋಡಿ ನನಗೆ ಕೂಪ ಮಂಡೂಕ ದ ನೆನಪು ಬರುತ್ತಿದೆ… ತಾವು ಟಿವಿ ನೋಡೋದಿಲ್ವಾ..?? ಮುಂದಿನದು ನಿಮಗೆ ಅರ್ಥ ಆಗಿದೆ ಅಂದ್ಕೊಳ್ತೀನಿ..

    ಇಷ್ಟೆಲ್ಲಾ ಮಾತಾಡುವ ನೀವು ಒಮ್ಮೆಯಾದರು ಗುಜರಾತಿಗೆ ಭೇಟಿ ನೀಡಿದ್ದೀರಾ.? ಒಮ್ಮೆ ಭೇಟಿ ಕೊಟ್ಟು ಅಲ್ಲಿಯ ಜನರನ್ನು ( ಕಾಂಗ್ರೆಸ್ ಚಮಚ – ಕಾಚಗಳನ್ನಲ್ಲ) ಮಾತನಾಡಿಸಿ ಸುತ್ತಾಡಿ ಬನ್ನಿ.. ಸುಮ್ಮನೆ ಕಾಂಗ್ರೆಸ್ಸ್ ವಕ್ತಾರಂತೆ ಸುಮ್ಮನೆ ವಿಷ ಉಗುಳುವುದನ್ನು ಬಿಡಿ..
    ನಿಮಗೆ ಒಳ್ಳೆಯದಾಗಲಿ..

    ಉತ್ತರ
  7. ಶ್ರೀಪತಿ ಗೋಗಡಿಗೆ's avatar
    ಆಗಸ್ಟ್ 13 2013

    ಉತ್ತಮವಾದ ಲೇಖನ.

    ಉತ್ತರ
  8. Akshaya Rama's avatar
    Akshaya Rama
    ಆಗಸ್ಟ್ 13 2013

    ನಮ್ಮ ದೇಶವನ್ನು ದಶಕಗಳ ಕಾಲ ಆಳಿದ ‘ಪ್ರತಿಷ್ಠಿತ’ ಕುಟುಂಬದ ಬಗ್ಗೆ ನಿಮ್ಮ ದಿವ್ಯ ದೃಷ್ಟಿ ಒಮ್ಮೆ ಹರಿಸಿ ಅಶೋಕ್ ಸಾಹೇಬ್ರೆ 🙂 ನಾಲ್ಕು ತಲೆಮಾರಿನಿಂದ ವ್ಯಕ್ತಿ ಪೂಜೆ ಅಹರ್ನಿಶಿಯಾಗಿ ನಡೆದು ಬಂದಿರುವ ಕಡೆಗೂ ಸ್ವಲ್ಪ ದಯೆ ತೋರಿ 🙂

    ದೇಶದ ಯಾವುದೇ ಮೂಲೆಗೆ ಹೋದರೂ “ಜವಾಹರ್ ಲಾಲ್ ನೆಹರು, ಇಂದಿರಾ ಗಾಂಧೀ, ರಾಜೀವ್ ಗಾಂಧಿ” ಹೆಸರಿನಲ್ಲೇ ಯೋಜನೆಗಳು, ಪ್ರತಿಮೆಗಳು, ಕಟ್ಟಡಗಳು !!!!! (ಸಾರ್ವಜನಿಕ ಶೌಚಾಲಯಕ್ಕೂ ಇವೇ ಹೆಸರು ಸ್ವಾಮೀ) ಇದು ವ್ಯಕ್ತಿ ಪೂಜೆ ಅಲ್ವಾ ??? ಓಹ್ !!! ಕ್ಷಮಿಸಿ ವ್ಯಕ್ತಿ ಪೂಜೆಗೂ ಕುಟುಂಬ ಪೂಜೆಗೂ ಸಾಕಷ್ಟು ವ್ಯತ್ಯಾಸ ಇದೆ ಅಲ್ವಾ ? ನಿಮ್ ಪ್ರಕಾರ ವ್ಯಕ್ತಿ ಪೂಜೆ ಮಾತ್ರ ತಪ್ಪು 🙂

    ದೇಶದ ಪ್ರತಿ ನೋಟಿನ ಮೇಲೂ ಗಾಂಧೀಜಿ ಫೋಟೋ ಇದೆ ಆಲ್ವಾ ಅದು ವ್ಯಕ್ತಿ ಪೂಜೆ ಎನ್ನಿಸಿಕೊಳ್ಳುವುದಿಲ್ಲವೇ ????

    ಹೋಗ್ಲಿ ಬಿಡಿ ಅದೆಲ್ಲಾ ಕಣ್ಣಿಗೆ ಕಾಣಿಸೋದು ಸ್ವಲ್ಪ ಕಷ್ಟವೇ 🙂

    “ನವಮಧ್ಯಮ ವರ್ಗದ ಯುವಜನತೆ ಮೋದಿಯನ್ನು ಅಪಾರವಾಗಿ ಬೆಂಬಲಿಸುತ್ತಿರುವುದು (ಈ ಬೆಂಬಲ ಸದ್ಯದ ಮಟ್ಟಿಗೆ ಅಂತರ್ಜಾಲದಲ್ಲಿ, ಬರವಣಿಗೆಗಳಲ್ಲಿ ಕಾಣುತ್ತಿದೆ) ಅಭಿವೃದ್ಧಿಯ ಕಾರಣಕ್ಕಾಗಿ ಮಾತ್ರವಾ? ಅಥವಾ ಕಾಲಕ್ರಮೇಣ ಹೆಚ್ಚುತ್ತಿರುವ ಧಾರ್ಮಿಕ ಮೂಲಭೂತತನ ಕಾರಣವಾ?”

    ಅದ್ಭುತವಾಗಿದೆ ನಿಮ್ಮ ಕಲ್ಪನೆ 🙂 ಸಮಸ್ತ ಯುವ ಜನಾಂಗವನ್ನೇ “ಕೋಮುವಾದಿ” ಮಾಡಿ ಬಿಟ್ರಲ್ಲಾ ??? ಶಭಾಶ್ 🙂

    ನೀವು ಬರೆದ ಪ್ರತಿ ವಾಕ್ಯಕ್ಕೂ ಸರಿಯಾದ ಉತ್ತರ ನೀಡಬಹುದು ಆದರೆ ಅದನ್ನು ಸ್ವೀಕರಿಸಲು ನೀವು ತಯಾರಿಲ್ಲ ಎಂಬುದನ್ನು ನೀವೇ ಲೇಖನದ ಉದ್ದಕ್ಕೂ ಸಾರಿದ್ದೀರಿ ಉದಾಹರಣೆಗೆ,
    “ನರೇಂದ್ರ ಮೋದಿಯ ವಿರುದ್ಧವಾಗಿಯೋ ಅಥವಾ ರಾಹುಲ್ ಗಾಂಧಿಯ ಪರವಾಗಿಯೋ ನೀವೇನಾದರೂ ಅಂತರ್ಜಾಲದಲ್ಲಿ ಬರೆದಿರೋ ನಿಮ್ಮ ಜನ್ಮ ಜಾಲಾಡಿ, ಹೀಯಾಳಿಸಿ, ಖಂಡಿಸಿ, ದೇಶದ್ರೋಹಿಯೆಂದು ಜರೆಯುವ ಅಸಂಖ್ಯ ಕಮೆಂಟುಗಳು ಬರುವುದು ಖಂಡಿತ!!”

    ಹಿಟ್ (ಸ್ಪಿಟ್) ಆಂಡ್ ರನ್ ಕೇಸು ಗೆಲ್ಲೋದು ಕಷ್ಟ 🙂

    ಶುಭವಾಗಲಿ ನಿಮಗೆ 🙂

    ಉತ್ತರ
    • Akshaya Rama's avatar
      Akshaya Rama
      ಆಗಸ್ಟ್ 13 2013

      Sorry The name “Ashok” came in my reply by mistake. Very sorry for that 😦

      ಉತ್ತರ
      • Akshaya Rama's avatar
        Akshaya Rama
        ಆಗಸ್ಟ್ 13 2013

        ವ್ಯಕ್ತಿ “ಪೂಜೆ”ಯ ಉದ್ದೇಶ ಖಂಡಿತಾ ಇಲ್ಲ 😦

        ಉತ್ತರ
  9. M A Sriranga's avatar
    M A Sriranga
    ಆಗಸ್ಟ್ 15 2013

    Dear Dr. Ashok

    I donot understand why your in so much of hurry. Please wait upto 2014 Lokasabha elections. The party which gets more seats will rule us. This is the simple logic of our democracy. Now our younger generation is showing some interest in politics. Donot try to discourage them with your psuedo arguments. Please see some comedy cinemas, serials and even tom and jerry so that your mental pressure strain and stress will decrease. Over all after reading very long article I suspect that you are against democracy.

    ಉತ್ತರ
  10. ವಿಜಯ್ ಪೈ's avatar
    ವಿಜಯ್ ಪೈ
    ಆಗಸ್ಟ್ 15 2013

    [ಚಿಕ್ಕಂದಿನಿಂದಲೂ ಈ ರೀತಿಯ ಕಥೆಗಳನ್ನೇ ಕೇಳಿ ಬೆಳೆದ ನಮಗೆ ಯುವರಾಣಿ ಅಬಲೆಯಲ್ಲ ಬಲಿಷ್ಠೆ, ತನ್ನನ್ನು ತಾನು ಕಾಪಾಡಿಕೊಳ್ಳಲು ಎಂದರೆ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದಲ್ಲವೇ? ಯುವರಾಣಿಯ ಸಹಾಯಕ್ಕೆ ಯುವರಾಜನೊಬ್ಬ ಬೇಕೇ ಬೇಕು ಎಂಬ ಸಿದ್ಧಾಂತ ನಮ್ಮದು!]
    ದೇಶ ತನ್ನನ್ನು ತಾನು ಕಾಪಾಡಿಕೊಳ್ಳುವುದು ಎಂದರೆ ಏನು? ದೇಶಕ್ಕೆ ಸಮರ್ಥ ಪ್ರಧಾನಿಯ, ಮುಖಂಡರ ಅವಶ್ಯಕತೆ ಇಲ್ಲವೆಂದು ತಾನೆ? ಅಂದ ಮೇಲೆ ನಿಮಗೆ ಯಾರೇ ಪ್ರಧಾನಿ ಆದರೂ ಏನಾಗುವುದು ಬಿದ್ದಿದೆ?

    [ಸಾಮಾಜಿಕ ತಾಣಗಳಲ್ಲಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅಭಿಮಾನಿಗಳ “ಯುದ್ಧ” ಜೋರಾಗಿಯೇ ನಡೆದಿದೆ. ]
    ನೆಟ್ ನಲ್ಲಿ ಇರುವುದು ಮೋದಿ ಪರ ಮತ್ತು ಮೋದಿ ವಿರುದ್ಧ. ರಾಹುಲ್ ಗಾಂಧಿ ಪರ ಯುದ್ಧ ಮಾಡುವವರನ್ನು ನೀವು ಪಟ್ಟಿ ಮಾಡಬೇಕಷ್ಟೆ.

    [ಸಿಖ್ ನರಮೇಧ, ಮುಂಬೈ ಗಲಭೆಗಳಷ್ಟೇ ಗೋದ್ರಾ ಮತ್ತು ಗೋದ್ರೋತ್ತರ ಹಿಂಸಾಚಾರಗಳೂ ತಪ್ಪಲ್ಲವೇ?]
    ಹುಂ..ಆದ್ರೆ ನಿಮಗೆ ನೆನಪಿಗೆ ಬರುವುದು..ಬರುತ್ತಿರುವುದು..ಮುಂದೆ ಬರಬಹುದಾದದ್ದು ಗೋದ್ರಾ ಜಪವೊಂದೆ. ಜನ ಪ್ರಶ್ನೆ ಮಾಡುವುದು ನಿಮ್ಮ ಮಾನವೀಯತೆಯನ್ನಲ್ಲ..ಜಾಣ ಕುರುಡನ್ನು. ಸುಮ್ಮನೆ ಕನ್‌ಫ್ಯೂಜ್ ಮಾಡಿಕೊಳ್ಳಬೇಡಿ!. ಜಾಣಕುರುಡಿನಿಂದ, ಜಾಣಕಿವುಡಿನಿಂದ ಮುಕ್ತಿ ಹೊಂದಿ..ಜನ ನಂಬುತ್ತಾರೆ. ನಾನು ಇದುವರೆಗೆ ಓದಿದ ಲೇಖನಗಳಲ್ಲಿ ಟ್ರೇನ್ ಗೆ ಬೆಂಕಿ ಹಚ್ಚಿದ್ದನ್ನು ಖಂಡಿಸಿದ, ಗುಜರಾತ ನ ಹಿಂಸಾಚಾರದಲ್ಲಿ ಸತ್ತ ಜನರಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಿಂದುಗಳೂ ಇದ್ದರು ಎಂಬುದನ್ನು ಬರೆದ ಒಬ್ಬ ‘ಮಾನವತಾ’ವಾದಿಯನ್ನು ನೋಡಿಲ್ಲ. ಯಾಕೆ ಅಂತ ಕೇಳಬಹುದಾ?

    [ಶಿಕ್ಷಣ ಆರೋಗ್ಯದಂತಹ ಸಮಾಜದ ಆರೋಗ್ಯವನ್ನು ನಿರ್ಧರಿಸುವ ವಿಷಯಗಳಲ್ಲಿ ಗುಜರಾತ್ ಉಳಿದ ರಾಜ್ಯಗಳಿಗಿಂತಲೂ ಹಿಂದಿರುವುದು ಸುಳ್ಳಲ್ಲವಲ್ಲ. ]
    ಮೋದಿ ಆಡಳಿತದ ಮೊದಲು ಎಲ್ಲಿತ್ತು..ಈಗ ಎಲ್ಲಿದೆ, ವರ್ಷದಿಂದ ವರ್ಷಕ್ಕೆ ಪ್ರಗತಿ ಕಂಡಿದೆಯೊ ಅಥವಾ ಹಿಮ್ಮುಖವಾಗಿ ಚಲಿಸಿದೆಯೊ? ಇದರ ಅಂಕಿ-ಅಂಶ ನಿಮ್ಮಲ್ಲಿದೆಯಾ? ಅಥವಾ ಇನ್ನೊಬ್ಬರ ಗಿಳಿಪಾಠ ನಿಮ್ಮದಾಗಿಸಿಕೊಂಡಿದ್ದಿರೊ?

    ಉತ್ತರ
  11. ವಿಜಯ್ ಪೈ's avatar
    ವಿಜಯ್ ಪೈ
    ಆಗಸ್ಟ್ 15 2013

    [45 % ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಗುಜರಾತಿನಲ್ಲಿ, ಇದು ಅಭಿವೃದ್ಧಿಯ ಸಂಕೇತವಾ?]
    .ಅಪೌಷ್ಠಿಕತೆ ನಮ್ಮ ದೇಶವನ್ನೇ ಕಾಡುತ್ತಿರುವ ಸಮಸ್ಯೆ..ಗುಜರಾತ ಬಗ್ಗೆ ತೆಗೆಳಲು ಏನು ಸಿಗಲಿಲ್ಲ ಎಂದಾಗ ಸಿಕ್ಕ ಅಂಶ ಇದು..ನಮ್ಮ ‘ಶಿಕ್ಷಿ’ತರ ವಾದವೈಖರಿ ಹೀಗಿರುತ್ತದೆ..
    ಗುಜರಾತನಲ್ಲಿ ರೋಡಗಳು ಉತ್ತಮವಾಗಿವೆ – ಅದಿರಲಿ, ಅಪೌಷ್ಟಿಕತೆಯ ಬಗ್ಗೆ ಮಾತನಾಡಿ
    ಗುಜರಾತನಲ್ಲಿ ಮೂಲಭೂತ ಸೌಕರ್ಯಗಳು ಚೆನ್ನಾಗಿವೆ – ಅದಿರಲಿ, ಅಪೌಷ್ಟಿಕತೆಯ ಬಗ್ಗೆ ಮಾತನಾಡಿ
    ೨೪ಗಂಟೆ ವಿದ್ಯುತ್ ಕೊಡ್ತಾರಂತೆ – ಅದಿರಲಿ, ಅಪೌಷ್ಟಿಕತೆಯ ಬಗ್ಗೆ ಮಾತನಾಡಿ
    ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆಗಳಲ್ಲಿ ಪ್ರಗತಿ ತುಂಬ ಉತ್ತಮವಾಗಿದೆಯಂತೆ – ಸರಿ, ಸರಿ..ಅದಿರಲಿ, ಅಪೌಷ್ಟಿಕತೆಯ ಬಗ್ಗೆ ಮಾತನಾಡಿ
    ಕೋಟ್ಯಾಂತರ ರೂಗಳ ಹೂಡಿಕೆಯಾಗಿದೆಯಂತೆ – ಅದೆಲ್ಲ ಇರಲಿ, ಅಪೌಷ್ಟಿಕತೆಯ ಬಗ್ಗೆ ಮಾತನಾಡಿ
    ಮೋದಿ ಬೃಷ್ಟಾಚಾರಿ ಅಲ್ವಂತೆ – ಸ್ವಾಮಿ, ಬೃಷ್ಟಾಚಾರ ಈಗ ಮಾಮೂಲು..ಅದೆಲ್ಲ ಇರಲಿ..ಅಪೌಷ್ಟಿಕತೆಯ ಬಗ್ಗೆ ಮಾತನಾಡಿ
    ಜಿ,ಡಿ.ಪಿ ರಾಷ್ಟ್ರೀಯ ಸರಾಸರಿಗಿಂತ ಮೇಲಿದೆಯಂತೆ – ಇರಲಿ ಬಿಡ್ರಪ್ಪಾ..ಅಪೌಷ್ಟಿಕತೆಯ ಬಗ್ಗೆ ಮಾತನಾಡಿ
    ಕೃಷಿ ಅಭಿವೃದ್ದಿ ವರ್ಷದಿಂದ ವರ್ಷಕ್ಕೆ ಏರ್ತಾನೆ ಇದೆಯಂತೆ- ಸ್ವಾಮಿ..ಥೋ..ಅಪೌಷ್ಟಿಕತೆಯ ಬಗ್ಗೆ ಮಾತನಾಡಿ

    [ಇನ್ನು ನರೇಂದ್ರ ಮೋದಿಯವರಿಗೆ ಗುಜರಾತಿನಲ್ಲಿರುವ ಅಪೌಷ್ಟಿಕ ಮಕ್ಕಳ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರ – ಗುಜರಾತಿಗಳು ಡಯೆಟ್ ಕಾನ್ಶಿಯಸ್ ಆಗಿದ್ದಾರೆ!! ನಮೋ ನಮಃ!]
    ಮೋದಿ ಹೇಳಿದ್ದು..ಈಗೀಗ ಹೆಣ್ಣುಮಕ್ಕಳು ಹೆಚ್ಚೆಚ್ಚು ಬ್ಯೂಟಿಕಾನ್ಸಿಯಸ್ ಆಗಿ ಶಿಶುಗಳಿಗೆ ಮೊಲೆಹಾಲು ಕುಡಿಸಲ್ಲ ಅಂತ.. ಹೇಳಿಕೆಗಳನ್ನು ನಿಮಗೆ ಬೇಕಾದಂತೆ ಬಳಸಿಕೊಂಡರೆ, ‘ ನಾಯಿ ಮರಿ ಕಥೆ’ ಯಾಗುತ್ತದೆ.

    ಉತ್ತರ
  12. ವಿಜಯ್ ಪೈ's avatar
    ವಿಜಯ್ ಪೈ
    ಆಗಸ್ಟ್ 15 2013

    [ ನರೇಂದ್ರ ಮೋದಿ ಪ್ರಧಾನಿಯಾಗಿಬಿಟ್ಟರೆ ಜಮೀನು ಪಡೆಯಲು, ಅದಿರು ತೆಗೆಯಲು ಸಲೀಸಾಗಿಬಿಡುತ್ತದೆಂಬ ಭಾವನೆ ಅವರೆಲ್ಲರಲ್ಲಿ]
    ಅಬ್ಬಾ..ಏನೇನು ಕಥೆಗಳು!..ಭರ್ಜರಿ ಇಮ್ಯಾಜಿನೇಶನ್ . ಕಾಂಗ್ರೆಸ್ ಬಂದರೆ ನೆಲ-ಜಲ ಎಲ್ಲದರ ಅತ್ಯುತ್ತಮ ರಕ್ಷಣೆಯಾಗುತ್ತದೆ ನನಗೆ ಇಲ್ಲಿವರೆಗೆ ಗೊತ್ತಿರಲಿಲ್ಲ!

    [ಇನ್ನು ನವಮಧ್ಯಮ ವರ್ಗದ ಯುವಜನತೆ ಮೋದಿಯನ್ನು ಅಪಾರವಾಗಿ ಬೆಂಬಲಿಸುತ್ತಿರುವುದು (ಈ ಬೆಂಬಲ ಸದ್ಯದ ಮಟ್ಟಿಗೆ ಅಂತರ್ಜಾಲದಲ್ಲಿ, ಬರವಣಿಗೆಗಳಲ್ಲಿ ಕಾಣುತ್ತಿದೆ) ಅಭಿವೃದ್ಧಿಯ ಕಾರಣಕ್ಕಾಗಿ ಮಾತ್ರವಾ? ಅಥವಾ ಕಾಲಕ್ರಮೇಣ ಹೆಚ್ಚುತ್ತಿರುವ ಧಾರ್ಮಿಕ ಮೂಲಭೂತತನ ಕಾರಣವಾ?]
    ಅಥವಾ ಜಾಣಕುರುಡಿನ ಬುದ್ದಿಜೀವಿಗಳ ಉಪಸ್ಥಿತಿ, ಪ್ರಲಾಪ ಕಾರಣವಾ?

    [ನರೇಂದ್ರ ಮೋದಿ ಪ್ರಧಾನಿಯಾಗುವುದು ನಿಮಗೆ ಬೇಕಿಲ್ಲದಿದ್ದರೆ ದೇಶ ಬಿಟ್ಟು ತೊಲಗಿ ಎಂದು ಅಪ್ಪಟ ಪಾಕಿ ಮತಾಂಧನ ರೀತಿ ಕೂಗುವವರನ್ನು ಹೇಗೆ ಸಂಭಾಳಿಸುತ್ತಾರೆ?]
    ನೀವು ಹೋಗಲು ಲಗೇಜ್ ರೆಡಿ ಇಟ್ಟಿರುವವರ ತರಹ ಮಾತನಾಡ್ತಿದಿರ!

    [ವ್ಯಕ್ತಿ ಪೂಜೆಯ ಪರಾಕಾಷ್ಠೆ ತಲುಪಿದ್ದ ಇಂದಿರಾ ಗಾಂಧಿ ಎಮರ್ಜೆನ್ಸಿಯನ್ನು ಉಡುಗೊರೆಯಾಗಿ ನೀಡಿದರು. ಇನ್ನು ನರೇಂದ್ರ ಮೋದಿಯ ಉಡುಗೊರೆಯನ್ನು ನಿರೀಕ್ಷಿಸಬೇಕೇ?]
    ಹೊಚ್ಚ ಹೊಸ ಹೆದರಿಕೆಯ ಸೃಷ್ಟಿ!

    ಉತ್ತರ
  13. M A Sriranga's avatar
    M A Sriranga
    ಆಗಸ್ಟ್ 16 2013

    Very good reply mr. Vijay pai. The intellectuals of karnataka in particular and our India in general are sitting in their good apartments and see in TV and read in news paper what they want! . They donot want to come out and see what is happening out side. This is the main problem. We have to forgive and ignore them.

    ಉತ್ತರ
  14. Chenna's avatar
    Chenna
    ಆಗಸ್ಟ್ 20 2013

    ree ashok, vykthi pooje maadiddu maadta irodu yaaru antha kaleda 65 varshagala history odi nanthara maatadi… e thara useless articles baredu prajegala haadi thappisabedi. thu… first learn how to give respect for our Supreme court.

    ಉತ್ತರ
  15. M A Sriranga's avatar
    M A Sriranga
    ಆಗಸ್ಟ್ 20 2013

    Sri Ashok please read some articles and books which says the other side of our history.The reality will come to your notice.Indian history after indipendance is far away from the stories of
    english channels which are daily brain washing!

    ಉತ್ತರ
  16. Manjesh Alase's avatar
    Manjesh Alase
    ಆಗಸ್ಟ್ 22 2013

    Good article Mr Ashok,
    Narendra Modi becoming india’s magical stick. What he did for Gujarath and going to do for India is to be debatable issue. But his achivement in Gujarath only will not count as a qualification for PM. There is lot of things(impotantly basic things) we should discuss before accepting Modi as our prime ministed candidate.

    I think India need a Prime Minister, who basically have a good charecter and dont have a criminal case on him.These are the very basic qualification what i am asking. PM candidate will represent 120+ crore people of India and their dignity. I dont like to see Modi as India’s PM.

    ಉತ್ತರ
    • Nagendra's avatar
      Nagendra
      ಆಗಸ್ಟ್ 22 2013

      Mr Manjesh could u find such a person in india u expect for pm who proved his ablity..

      ಉತ್ತರ

Leave a reply to ವಿಜಯ್ ಪೈ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments