ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 15, 2013

1

ಗುಂಡಿಗೆ ಎದೆ ಕೊಟ್ಟವ ೧೩ರ ಪೋರ..!

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

ಸರಿಯಾಗಿ ಇಂದಿಗೆ ೬೯ ವರ್ಶದ ಹಿಂದಿನ,ಅಂದು ಆಗಸ್ಟ್ ೧೫ ,೧೯೪೨ನೆ ಇಸವಿ. ಆಗಿನ್ನೂ ಹುಬ್ಬಳಿಯ ಆಗಸದಲ್ಲಿ ಸ್ವಾತಂತ್ರ್ಯದ ಸೂರ್ಯ ಉದಯಿಸಿದ್ದ.ಹಕ್ಕಿಗಳ ಕಲರವದ ನಡುವೆ , ದುರ್ಗದ ಬಯಲಿನಲ್ಲಿ ‘ವಂದೇ ಮಾತರಂ’ ‘ಭಾರತ ಮಾತಾಕಿ ಜೈ’ ಘೋಷಣೆಗಳು ಮೊಳಗುತಿದ್ದವು. ಅಕ್ಕ ಪಕ್ಕದ ಮನೆಯ ಮಕ್ಕಳೆಲ್ಲ ಆಟವಾಡುತಿದ್ದರೆ ಅವನು ಮಾತ್ರ ಬೆಳಿಗ್ಗೆ ಬೇಗ ಎದ್ದು, ಶ್ವೇತವರ್ಣದ ಜುಬ್ಬಾ-ಪೈಜಾಮ ಧರಿಸಿ, ತನಗಿಂತಲೂ ಎತ್ತರವಿದ್ದ ಒಂದು ಬೊಂಬಿಗೆ ‘ತ್ರಿವರ್ಣ ಧ್ವಜ’ ಕಟ್ಟಿಕೊಂಡವನೇ ಮಲಗಿದ್ದ ತಾಯಿಯ ಬಳಿ ಹೋಗಿ ಅವಳನ್ನು ಎಬ್ಬಿಸಿ ಆಶೀರ್ವದಿಸುವಂತೆ ಕೇಳಿದ. ಶ್ವೇತ ವಸ್ತ್ರಧಾರಿಯಾಗಿ ‘ತ್ರಿವರ್ಣ ಧ್ವಜ’ವನ್ನಿಡಿದ ಮಗನನ್ನು ನೋಡಿ,

ಆ ತಾಯಿ ಕೇಳಿದಳು “ಎಲ್ಲಿ ಹೊರಟೆ ಮಗು?”
“ಅಮ್ಮ , ನಾನು ದುರ್ಗದ ಬಯಲಿನಲ್ಲಿ ನಡೆಯುತ್ತಿರುವ ‘ಕ್ವಿಟ್ ಇಂಡಿಯಾ ಚಳುವಳಿ’ಯಲ್ಲಿ ಪಾಲ್ಗೊಳ್ಳಲು ಹೊರಟಿದ್ದೇನೆ”

“ಆದರೆ ಮಗು, ಅಲ್ಲಿ ಹಿರಿಯರೇ ಇರುತ್ತಾರೆ ಕಣೋ!”
“ಅಮ್ಮ , ತಾಯಿ ಭಾರತಿಯ ಸೇವೆ ಮಾಡಲು ಹಿರಿಯರು ,ಕಿರಿಯರು ಯಾರದರೆನಮ್ಮ?” ಎಂದವನ ಮುಖದಲ್ಲಿನ ತೇಜಸ್ಸನ್ನು ಕಂಡು ಆ ತಾಯಿ ಮಗನನ್ನು ಹರಸಿ ಬೀಳ್ಕೊಟ್ಟಳು.
ಹಾಗೆ ಹೊರಟು ನಿಂತವನ ವಯಸ್ಸು ೧೩, ಹೆಸರು “ನಾರಾಯಣ ಮಹಾದೇವ ಧೋನಿ”. ಗಂಡು ಮೆಟ್ಟಿದ ನಾಡು ಹುಬ್ಬಳಿಯ ಆ ಧೀರ ಬಾಲಕ ಓದುತಿದ್ದ ಶಾಲೆಯ ಹೆಸರು ‘ಲಾಮಿಂಗ್ಟನ್ ಹೈಸ್ಕೂಲ್’.

ದುರ್ಗದ ಬಯಲಿಗೆ ಬಂದು ನಾರಾಯಣ ಸ್ವಾತಂತ್ಯ್ರ ಹೋರಾಟಗಾರರ ಜೊತೆ ಸೇರಿಕೊಂಡ.ಅವನ ಉತ್ಸಾಹ,ತೇಜಸ್ಸು ಕಂಡ ಹಿರಿಯರೆಲ್ಲ ಅವನನ್ನು ಅಪಾರ ಜನಸ್ತೋಮದ ಮುಂಚೂಣಿಯಲ್ಲಿ ಬಿಟ್ಟರು. ಇಡಿ ಜನಸಾಗರಕ್ಕೆ ಪುಟ್ಟ ಬಾಲಕ ‘ನಾರಾಯಣ’ ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಭಾರತ ಮಾತೆಯನ್ನು ಬಿಡಿಸಬಂದ ನಾಯಕನಂತೆ ಕಂಗೊಳಿಸುತಿದ್ದ.

‘ವಂದೇ ಮಾತರಂ’ ,’ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಘೋಷಣೆಗಳು ಪ್ರತಿಧ್ವನಿಸುತಿದ್ದವು.ಆ ಹರತಾಳವನ್ನು ನೋಡುತ್ತಾ ರಸ್ತೆಯ ಬದಿ ತಮ್ಮಷ್ಟಕ್ಕೆ ತಾವಿದ್ದ ಜನ,ಪುಟ್ಟ ವೀರನ ನೋಡಿ ತಮ್ಮ ಬಗ್ಗೆ ಅಸಹ್ಯ ಪಟ್ಟುಕೊಂಡು ಅವರು ಹೋರಾಟದಲ್ಲಿ ಪಾಲ್ಗೊಂಡರು.ನೋಡನೋಡುತಿದ್ದಂತೆ ಅಲ್ಲೊಂದು ಜನಪ್ರವಾಹವೇ ಸೃಷ್ಟಿಯಾಯಿತು.

ಹಾಗೆ ಸಾಗುತ್ತಿದ್ದ ಮೆರವಣಿಗೆಯ ಮೇಲೆ, ಆಂಗ್ಲ ಪೊಲೀಸರು ಏಕಾಏಕಿ ಗುಂಡಿನ ಮಳೆ ಸುರಿಸಲಾರಂಭಿಸಿದರು.ಜನ ದಿಕ್ಕಾಪಾಲಾಗಿ ಓಡಲಾರಂಭಿಸಿದರು, ಆದರೆ ಪುಟ್ಟ ಬಾಲಕ ನಾರಾಯಣ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ” ಘೋಷಣೆ ಕೂಗುತ್ತಲೇ ಇದ್ದ.ಅಷ್ಟರಲ್ಲಿ ನುಗ್ಗಿ ಬಂದ ಗುಂಡಿಗೆ ಎದೆ ಕೊಟ್ಟವನೇ ರಕ್ತದ ಮಡುವಲ್ಲಿ ಕುಸಿದು ಬಿದ್ದ.

ಜೀವನ್ಮರಣ ಹೋರಾಟ ನಡೆಸುತಿದ್ದ ನಾರಾಯಣನನ್ನು ನೋಡಲು ಆಸ್ಪತ್ರೆಗೆ ತೆರಳಿದ ಕೆಲ ಹಿರಿಯ ಅಧಿಕಾರಿಗಳು ಅವನಿಗೆ ಕೇಳಿದರು ‘ನಿನಗೇನು ಬೇಕು?’ “ಸ್ವರಾಜ್ಯ” ಎನ್ನುತ್ತಲೇ ನಾರಾಯಣ ಎಂಬ ಧೀರ ಬಾಲಕನ ಪ್ರಾಣ ಪಕ್ಷಿ ಹಾರಿತ್ತು.
ಇತಿಹಾಸದ ಪುಟದಲ್ಲಿ ಮರೆತು ಮರೆಯಾದ ಇಂತ ಅದೆಷ್ಟೋ ‘unsung hero’ ಗಳಿದ್ದಾರೋ ಅವರಿಗೆಲ್ಲ ನನ್ನ ನುಡಿನಮನಗಳು.

(ಈ ವೀರನ ಚಿತ್ರವಿಲ್ಲವಾದ್ದರಿಂದ, ಸೂಕ್ತ ಅನ್ನಿಸುವಂತ ಫೋಟೊ ಸಿಕ್ಕಿದ್ದರಿಂದ ಅದನ್ನ ಬಳಸಿಕೊಂಡಿದ್ದೇನೆ)

1 ಟಿಪ್ಪಣಿ Post a comment
  1. vishnupriya's avatar
    ಆಗಸ್ಟ್ 15 2011

    nice article, i too salute all unsung heros

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments