“ಕೈ”ಲಾಗದ ಸರ್ಕಾರ ಮತ್ತು ನಮ್ಮ ಕಾಶ್ಮೀರ
– ರಾಕೇಶ್ ಶೆಟ್ಟಿ
ಬಡ ಬೆಸ್ತನೊಬ್ಬನ ಕತ್ತನ್ನು ಸೀಳಿ ಅವನದೇ ಬೋಟನ್ನೇರಿ ೧೦ ಜನರ ಪಾಕಿಸ್ತಾನದ ಸೈತಾನರ ತಂಡ ಗೇಟ್ ವೇ ಆಫ್ ಇಂಡಿಯಾ ಮೂಲಕ ಮುಂಬೈಗೆ ವಕ್ಕರಿಸಿಕೊಳ್ಳುತ್ತದೆ.೧೦ ಜನರಿಂದ ಬೇರ್ಪಟ್ಟ ಇಬ್ಬರು ಮೊದಲಿಗೆ ದಾಳಿಯಿಡುವುದು ’ಲಿಯೋಫೋಲ್ಡ್ ಕೆಫೆ”ಗೆ ಅಲ್ಲಿ ಕಂಡ ಕಂಡಂತೆ ಗುಂಡಿನ ಮಳೆ ಸುರಿಸಿದ ಆ ಇಬ್ಬರು ಪಾಕಿ ಉಗ್ರರು ಅಲ್ಲಿಂದ ರಾಜಾರೋಷವಾಗಿ ಹೊರಡುತ್ತಾರೆ.ಉಗ್ರರ ಕಣ್ಣಿಗೆ ಬೀಳದೆ ಅವಿತು ಕುಳಿತಿದ್ದವನೊಬ್ಬ ಮೆಲ್ಲಗೆ ಬಾಗಿಲ ಸಂದಿಯಿಂದ ರಾಕ್ಷಸರು ಇದ್ದಾರೋ ಅನ್ನುವುದನ್ನು ಖಾತ್ರಿ ಮಾಡಿಕೊಳ್ಳಲು ಇಣುಕಿದಾಗ ಬಾಗಿಲಿಗೆ ಕಲ್ಲೊಂದು ಬಡಿಯುತ್ತದೆ.ಮತ್ತೆ ನೋಡುತ್ತಾನೆ ಊಹೂಂ “ಗುಂಡಲ್ಲ… ಕಲ್ಲು…!”
ಉಗ್ರರು ಅಮಾಯಕರ ರಕ್ತ ಹರಿಸಿ ಅಲ್ಲಿಂದ ರಾಜಾರೋಷವಾಗಿ ಹೊರಟ ಮೇಲೆ ಬೀಟ್ ನಲ್ಲಿದ್ದ ಪೋಲಿಸ್ ಕಾನ್ಸ್ಟೇಬಲ್ ಗಳು ಒಂದು ಕೈಯಲ್ಲಿ ಲಾಠಿ ಹಿಡಿದು ಇನ್ನೊಂದು ಕೈಯಲ್ಲಿ ಕಲ್ಲು ಎಸೆದು ಒಳಗಿನಿಂದ “ಗುಂಡು” ಬರುತ್ತಿಲ್ಲ ಅನ್ನುವುದನ್ನು ಕನ್ಫರ್ಮ್ ಮಾಡಿಕೊಂಡು ಒಳಬರುತ್ತಾರೆ. ಹೇಗಿದೆ ನೋಡಿ ಉಗ್ರನ ಕೈಯಲ್ಲಿ “ಎ.ಕೆ ೪೭” ಅವನೆದುರಿಸಲು ಬಂದ ಪೋಲಿಸಣ್ಣನ ಕೈಯಲ್ಲಿ “ಕಲ್ಲು”…! ಇದು ನಮ್ಮ ಭಾರತದ ಆಂತರಿಕ ರಕ್ಷಣಾ ವ್ಯವಸ್ಥೆಯ ಸ್ಥಿತಿ.ಭಾರತದ ಬಂಡವಾಳವನ್ನು ಸರಿಯಾಗಿಯೇ ಅರಿತಿದ್ದ ಪಾಪಿ ಪಾಕಿಗಳು ಆ ೧೦ ಜನರ ತಂಡವನ್ನು ನುಗ್ಗಿಸಿ ಒಂದಿಡಿ ಭಾರತವನ್ನು ದಿನಗಳ ಮಟ್ಟಿಗೆ ಗಾಬರಿ ಬೀಳಿಸಿದ್ದರು. ಮುಂಬೈ ಮಾರಣ ಹೋಮದ ನಂತರ ಆಗಿದ್ದಾದರೂ ಏನು? ಭಾರತ-ಪಾಕಿಸ್ತಾನಗಳು ಸಮರದಂಚಿಗೆ ಬಂದು ನಿಂತವು.ನಮ್ಮ ಸರ್ಕಾರ “ಹೊಡಿಬೇಡಿ.ಹೊಡೆದ್ರೆ ನೋವಾಗುತ್ತೆ” ಅನ್ನುವಂತೆಯೇ ವರ್ತಿಸಿದ್ದಲ್ಲವೇ? ಅದಕ್ಕಿಂತ ಹೆಚ್ಚೆಂದರೆ “ಹೋಗಿ.ನಾವು ನಿಮ್ಮೊಂದಿಗೆ ನಾವು ಕ್ರಿಕೆಟ್ ಆಡುವುದಿಲ್ಲ” ಅಂದರು ಅಷ್ಟೇ…!
ಪಾಕಿಸ್ತಾನಕ್ಕೆ ಭಾರತದ ನಾಡಿಮಿಡಿತ ಚೆನ್ನಾಗೇ ತಿಳಿದಿದೆ.ಅದೇ ಕಾರಣಕ್ಕೇ ಅವರು ರಾಜರೋಷವಾಗಿಯೇ ೨೦೦೧ರ ಅಕ್ಟೋಬರಿನಲ್ಲಿ ಮೊದಲು ಜಮ್ಮು-ಕಾಶ್ಮೀರದ ಲೆಜಿಸ್ಲೇಟಿವ್ ಅಸೆಂಬ್ಲಿಯ ಮೇಲೆ ದಾಳಿ ಮಾಡಿದರು.ಘನ ಭಾರತ ಸರ್ಕಾರ ಪಾಕಿಸ್ತಾನಕ್ಕೆ ಕಠಿಣ ಮಾತುಗಳ ಸಂದೇಶ ನೀಡಿತು. ಪ್ರತಿಯಾಗಿ ಪಾಕಿಸ್ತಾನ ೨ ತಿಂಗಳ ನಂತರ ಡಿಸೆಂಬರ್ ೧೩ ರಂದು ಭಾರತದ ಪ್ರಜಾಪ್ರಭುತ್ವದ ಹೃದಯವಾದ ಸಂಸತ್ತಿನ ಮೇಲೆ ದಾಳಿ ಮಾಡಿಸಿತು.ನಾವೇನು ಮಾಡಿದೆವು.ಮತ್ತದೆ ಗಡಿಯಲ್ಲಿ ಸೇನಾ ಜಮಾವಣೆ ಮಾಡಿ ಹಿಂತೆಗೆದುಕೊಂಡೆವು.ಊಹೂಂ! ಬಿಲ್-ಕುಲ್ ಕ್ರಿಕೆಟ್ ಆಡಲಿಲ್ಲ.ಆಮೇಲೆ ಸ್ವಲ್ಪ ದಿನದ ನಂತರ ಮತ್ತೆ ಶಾಂತಿಯ ಬಾಗಿಲು ತೆಗೆದೆವು.ಈ ಬಾರಿ ಅವರು ದೊಡ್ಡ ಮಟ್ಟದ ದಾಳಿಗೆ ೭ ವರ್ಷ ತೆಗೆದುಕೊಂಡರು. (ಈ ೭ ವರ್ಷದ ಗ್ಯಾಪ್ನಲ್ಲಿ ಎಷ್ಟು ಬಾಂಬ್ ಗಳು ಸ್ಪೋಟವಾದವು,ಎಷ್ಟು ಜನ ಸತ್ತರು ಅನ್ನುವುದು ಬೇರೆಯ ಕತೆ ಬಿಡಿ). ೭ ವರ್ಷದ ನಂತರ ಅವರು ಕೊಟ್ಟ ಏಟಿಗೆ ಸ್ವಾಭಿಮಾನಿ ಸರ್ಕಾರವಾಗಿದ್ದರೆ ಪಾಕಿಸ್ತಾನದೊಳಗಿನ ಎಲ್ಲ ಉಗ್ರರ ಕ್ಯಾಂಪ್ ಗಳನ್ನು ಆಪೋಶನ ತೆಗೆದುಕೊಳ್ಳಬೇಕಿತ್ತು.ಆದರೆ ನಾವೇನು ಮಾಡಿದೆವು? ಗಡಿಯಲ್ಲಿ ಸೇನಾ ಜಮಾವಣೆ ಮಾಡಿದೆವು.ಹಾಗೆ ನೋಡಿದರೆ ಆ ಸನ್ನಿವೇಷದಲ್ಲಿ ಖುದ್ದು ಪಾಕಿಸ್ತಾನವೇ ನಮಗಿಂತ ಅಗ್ರೆಸ್ಸಿವ್ ಆಗಿತ್ತು.ನಮ್ಮದು ಅದೇ ಹಳೆಯ ಚಾಳಿ ಶಾಂತಿ ಮಂತ್ರ…!
ಆ ಸಮಯದಲ್ಲಿ ನಮ್ಮ ಘನ ಸರ್ಕಾರವನ್ನು ನೋಡಿಕೊಂಡು “ಭಾರತ – ಪಾಕಿಸ್ತಾನದ ಮಧ್ಯೆ ಅಣ್ವಸ್ತ್ರ ಸಮರ ನಡೆದರೆ?” ಅನ್ನುವ ಮಿಂಚೆಯೊಂದು ಸರಿದಾಡುತಿತ್ತು.
ಹೌದು!! ಅಣ್ವಸ್ತ್ರ ಸಮರ ನಡೆದರೆ ಏನಾಗುತಿತ್ತು?
‘ಶೀತಲ ಸಮರ’ದ ಸಮಯದಲ್ಲಿ ಅಮೇರಿಕಾವೆನಾದ್ರು ರಷ್ಯಾದ ಮೇಲೆ ಅಣ್ವಸ್ತ್ರ ಸಿಡಿತಲೆ ಪ್ರಯೋಗಿಸಿದ್ದರೆ, ರಷ್ಯಾಕ್ಕೆ ಅದು ೩ ಸೆಕೆಂಡ್ಗಳಲ್ಲಿ ತಿಳಿಯುತ್ತಿತ್ತು ಮತ್ತು ಅದಕ್ಕೆ ಪ್ರತಿ ಅಸ್ತ್ರ ಪ್ರಯೋಗಿಸಲು ಕೇವಲ ೪೫ ಸೆಕೆಂಡ್ಗಳು ಸಾಕಿತ್ತು”
ಪಾಕಿ ಸೈನ್ಯ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗಿಸಲು ತೀರ್ಮಾನಿಸುತ್ತದೆ, ಹಾಗೂ ಪ್ರಯೋಗಿಸಿಯೂ ಬಿಡುತ್ತದೆ.(ನೆನಪಿರಲಿ, ಹಾಗೆ ಮಾಡಲು ಅದಕ್ಕೆ ಸರ್ಕಾರದ ಆಜ್ಞೆಗೆ ಕಾಯುವ ಅಗತ್ಯ ಇಲ್ಲ)
ಭಾರತದ ತಂತ್ರಜ್ಞಾನ ಪಾಕಿಗಳಿಗಿಂತ ಚೆನ್ನಾಗಿರುವುದರಿಂದ ಕೇವಲ ೮ ಸೆಕೆಂಡ್ ಗಳಲ್ಲೇ ಅದಕ್ಕೆ ವಿಷಯ ತಿಳಿದು ಹೋಗುತ್ತದೆ, ಪ್ರತಿ ಅಸ್ತ್ರ ಪ್ರಯೋಗಿಸಲು ಭಾರತಿಯ ಸೈನ್ಯ ನಿರ್ಧಾರ ಮಾಡುತ್ತದೆ.ಆದರೆ ಅವರಿಗೆ ಹಾಗೆ ಮಾಡಲು ಸರ್ಕಾರದ ಆಜ್ಞೆ ಬೇಕಲ್ಲಾ!!
ಸೈನ್ಯವು ‘ರಾಷ್ಟ್ರಪತಿ’ಯವರಿಗೆ ಈ ಬಗ್ಗೆ ಪತ್ರವೊಂದನ್ನು ಕಳಿಸುತ್ತದೆ, ಅವರು ಅದನ್ನು ‘ಕ್ಯಾಬಿನೆಟ್’ನ ಮುಂದಿಡುತ್ತಾರೆ.ಪ್ರಧಾನಿ ತುರ್ತು ಲೋಕಸಭೆ ಅಧಿವೇಶನ ಕರೆಯುತ್ತಾರೆ. ಆದರೆ ಗೊತ್ತಲ್ಲ, ನಮ್ಮ ರಾಜಕೀಯ ನಾಯಕರು ‘ಸಭಾತ್ಯಾಗ’ ಹಾಗೂ ‘ಗದ್ದಲವೆಬ್ಬಿಸುತ್ತಾರೆ’. ಲೋಕಸಭೆಯ ಅಧಿವೇಶನ ಅನಿರ್ದಿಷ್ಟ ಅವಧಿಗೆ ಮುಂದೂಡಲ್ಪಡುತ್ತದೆ.ರಾಷ್ಟ್ರಪತಿಯವರು ತುರ್ತು ನಿರ್ಣಯ ಕೈಗೊಳ್ಳುವಂತೆ ಆದೇಶಿಸುತ್ತಾರೆ.
ಅತ್ತ ಪಾಕಿಗಳು ಹಾರಿಸಿದ ಮಿಸೈಲ್ ತಾಂತ್ರಿಕ ಕಾರಣದಿಂದ ಫೇಲ್ ಆಗಿ ಅವರು ಮತ್ತೊಮ್ಮೆ ಹಾರಿಸುವ ಯತ್ನದಲ್ಲಿರುತ್ತಾರೆ.ಇತ್ತ ಭಾರತದಲ್ಲಿ ಕೇಂದ್ರ ಸರ್ಕಾರಕ್ಕೆ ಬಾಹ್ಯ ಬೆಂಬಲ ಕೊಟ್ಟಿದ್ದ ಪಕ್ಷವೊಂದು ಬೆಂಬಲ ಹಿಂತೆಗೆದುಕೊಂಡು ಸರ್ಕಾರ ಬಿದ್ದು ಹಂಗಾಮಿ ಸರ್ಕಾರವೊಂದು ನಿರ್ಮಾಣವಾಗುತ್ತದೆ.ಹಂಗಾಮಿ ಪ್ರಧಾನಿಯವರು ಅಣ್ವಸ್ತ್ರ ಪ್ರಯೋಗಿಸಲು ಭದ್ರತಾ ಪಡೆಗಳಿಗೆ ಅನುಮತಿ ನೀಡುತ್ತಾರೆ.ಆದರೆ ಎಲೆಕ್ಷನ್ ಕಮಿಷನ್ ಹಂಗಾಮಿ ಸರ್ಕಾರ ಚುನಾವಣ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರುತ್ತದೆ. ನ್ಯಾಯಾಲಯ ಸರ್ಕಾರದ ಪರ ತೀರ್ಪು ನೀಡುತ್ತದೆ.
ಅಷ್ಟರಲ್ಲಿ ಪಾಕಿಗಳು ಒಂದು ಮಿಸೈಲ್ ಹಾರಿಸಿಯೇ ಬಿಡುತ್ತಾರೆ, ಆದರೆ ಅದು ಇಸ್ಲಾಮಾಬಾದ್ನಲ್ಲೆ ಸರ್ಕಾರಿ ಕಟ್ಟಡದ ಮೇಲೆ ಬೀಳುತ್ತದೆ…!
ಆದರೆ ಹಠ ಬಿಡದ ಪಾಕಿಗಳು ಮತ್ತೆ ಮತ್ತೆ ಪ್ರಯತ್ನಿಸಿ ವಿಫಲರಾಗಿ ಈ ಬಾರಿ ‘Made in China’ ಮಿಸೈಲ್ನ ಹಣೆ ಬರಹವೇ ಇಷ್ಟು ಎಂದು, ಅದನ್ನು ಬಿಟ್ಟು ‘Made in USA’ ಮಿಸೈಲ್ ಬಳಸಲು ತೀರ್ಮಾನಿಸುತ್ತಾರೆ.
ಇತ್ತ ಭಾರತದ ಸೇನೆ ಸರ್ಕಾರದ ಆಜ್ಞೆಗೆ ಕಾದ ೩ ತಿಂಗಳ ಬಳಿಕ, ಸರ್ಕಾರದ ಆದೇಶದ ಮೇರೆಗೆ ಸ್ವ-ನಿರ್ಮಿತ ಮಿಸೈಲ್ ಅನ್ನು ಹಾರಿಸಲು ನಿರ್ಧರಿಸುತ್ತದೆ. ಅಷ್ಟರಲ್ಲಿ ದೇಶಾದ್ಯಂತ ಅಣ್ವಸ್ತ್ರ ಪ್ರಯೋಗದ ವಿರುದ್ದ ಪ್ರತಿಭಟನೆ ನಡೆಯುತ್ತದೆ.
ಈ ನಡುವೆ ಪಾಕಿಗಳು ‘ಕಳ್ಳ ಸಾಗಣೆ’ಯಲ್ಲಿ ತಂದ ‘Made in USA’ ಮಿಸೈಲ್ ಅನ್ನು ಪ್ರಯೋಗಿಸಲು ಹೊರಡುತ್ತಾರೆ, ಅವರಿಗೆ ಅಮೇರಿಕಾದವರು ಬರೆದ ಸಾಫ್ಟವೇರ್ ಅರ್ಥವಾಗುವುದಿಲ್ಲವಾದರು ಹಾರಿಸಿಯೇ ಬಿಡುತ್ತಾರೆ, ಆದರೆ ಆ ಮಿಸೈಲ್ ಭಾರತ ಕಡೆ ನುಗ್ಗುವುದು ಬಿಟ್ಟು ಅದರ ನಿಜವಾದ ಗುರಿಯ ಕಡೆ ನುಗ್ಗುತ್ತದೆ.
ಗುರಿ : ರಷ್ಯಾ !!!
ರಷ್ಯಾ, ಪಾಕಿಗಳು ಹಾರಿಸಿದ ಮಿಸೈಲ್ ಅನ್ನು ಕ್ಷಣಾರ್ದದಲ್ಲಿ ಹೊಡೆದುರುಳಿಸಿ, ಪ್ರತಿಯಾಗಿ ತಾವು ಮಿಸೈಲ್ ಹಾರಿಸುತ್ತಾರೆ. ಪಾಕಿಸ್ತಾನ ದ್ವಂಸವಾಗಿ, ಸಹಾಯಕ್ಕಾಗಿ ವಿಶ್ವದ ಮೊರೆಯಿಡುತ್ತದೆ.
ತಕ್ಷಣ ಎಚ್ಚೆತ್ತ ಭಾರತ ಪಾಕಿಗಳಿಗೆ ಕಂಬನಿ ಮಿಡಿದು, ಮಿಲಿಯನ್ ಡಾಲರ್ನಷ್ಟು ಪಾರ್ಲೆ-ಜಿ ಬಿಸ್ಕೆಟ್ಗಳನ್ನೂ ಕಳಿಸಿಕೊಡುತ್ತದೆ.ಭಾರತದ ಮಾನವ ಹಕ್ಕು ಹೋರಾಟಗಾರರ ಕರುಳುಕಿತ್ತು ಬರುತ್ತದೆ.ಸೆಕ್ಯುಲರ್ ಗಳು ರೋದಿಸುತ್ತಾರೆ.ಕಮ್ಯುನಿಸ್ಟರಿಗೆ ಯಾವ ಕಡೆ ಮಾತನಾಡುವುದು ಎಂದು ತಿಳಿಯದೆ ಕೆಂಪಾದವೋ ಎಲ್ಲಾ ಕೆಂಪಾದವೋ ಅನ್ನುತ್ತಾರೆ.
ಹಾಗೆ ಭಾರತ ಅಣ್ವಸ್ತ್ರವನ್ನು ಬಳಸದೆ ಶಾಂತಿಯಿಂದಲೇ ಯುದ್ಧವನ್ನು ಗೆದ್ದು ಬಿಡುತ್ತದೆ!!!
***
ಸದ್ಯದ ಭಾರತದ ಸ್ಥಿತಿಯ ಕುರಿತು ಹೀಗೆ ಹಾಸ್ಯ ಮಾಡುತ್ತ ಕೂರಬೇಕೆ ಅಥವಾ ’ಕೈ’ಲಾಗದ ಸರ್ಕಾರವನ್ನು ಆರಿಸಿ ಕಳುಹಿಸಿದ ತಪ್ಪಿಗೆ ಕೈ ಕೈ ಹಿಸುಕಿಕೊಳ್ಳಬೇಕೆ? ಕೆಲತಿಂಗಳ ಹಿಂದೆ ನಮ್ಮ ಗಡಿಯೊಳಗೆ ನುಸುಳಿ ಅತಿಕ್ರಮಣ ಮಾಡಿ ಭಾರತೀಯ ಸೈನಿಕನೊಬ್ಬನ ತಲೆ ಕಡಿದ್ದು ಇನ್ನೊಬ್ಬನನ್ನು ಮಾಂಸದ ಮುದ್ದೆಯಾಗಿ ಬೀಸಾಡಿ ಹೋದ ಪಾಪಿ ಪಾಕಿ ಸೈನಿಕರ ಮೇಲಿನ ಸಿಟ್ಟು ಕುದಿಯುತ್ತಿರುವಾಗಲೇ ಅತ್ತ ಚೀನಿಗಳು ಚುಮರ್ ಸೆಕ್ಟರಿನ ನಮ್ಮದೇ ಗಡಿಯೊಳಗೆ ನುಸುಳಿ ಬಂದು ೧೮ ದಿನಗಳವರೆಗೆ ಮೊಕ್ಕಾಂ ಹಾಕಿದ್ದರು,ಅದು ಮಾಸುವ ಮುನ್ನವೇ ಮತ್ತೆ ಮತ್ತೆ ಚೀನಿಗಳ ಗಡಿ ತಗಾದೆ ಮುಂದುವರೆಯುತ್ತಲೇ ಇದೆ.ಇತ್ತ ಮತ್ತೊಮ್ಮೆ ಗಡಿರೇಖೆಯೊಳಗೆ ನುಗ್ಗಿ ಬಂದ ಪಾಕಿಸ್ತಾನ ಸೈತಾನರು ಭಾರತದ ಐವರು ಯೋಧರನ್ನು ಕೊಂದಿದ್ದಾರೆ.ದೇಶದೆಲ್ಲೆಡೆ ಆಕ್ರೋಶ ಮಡುಗಟ್ಟಿದ್ದರೆ, ಸಂಸತ್ತಿನಲ್ಲಿ ಹೇಳಿಕೆ ನೀಡಲು ಎದ್ದು ನಿಂತ ರಕ್ಷಣಾ ಸಚಿವ ಪಿ.ಆಂಟನಿ ಹೇಳುತ್ತಾರೆ,
“ಸೈನಿಕರ ವೇಷದಲ್ಲಿ ಬಂದವರು ಸೈನಿಕರಲ್ಲ”
ಆಂಟನಿ ಹೇಳಲು ಮರೆತ ಇನ್ನೊಂದಿಷ್ಟು ಸಾಲುಗಳು :
ಮಂತ್ರಿಗಳ ವೇಷದಲ್ಲಿ ಕುಳಿತವರು ಮಂತ್ರಿಗಳಲ್ಲ
ಪ್ರಧಾನಿಯ ಕುರ್ಚಿಯಲ್ಲಿ ಕುಳಿತವರು ಪ್ರಧಾನಿಯಲ್ಲ
ನಾವು ತೊಟ್ಟಿರುವ “ಬಳೆ” ನಿಮ್ಮ ಕಣ್ಣಿಗೆ ಕಾಣುತ್ತಿಲ್ಲ
ಇವರು ಬಳೆ ತೊಟ್ಟವರು ಅನ್ನದೇ ಇನ್ನೇನು ಹೇಳೋಣ ಹೇಳಿ.ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿಯನ್ನು ಮುಂದುವರೆಸುತ್ತಲೇ ಇದೆ ಮತ್ತೆ ಅದೇ ಪಾಕಿಸ್ತಾನವೇ ಭಾರತೀಯ ರಾಯಭಾರಿಗೆ ಸಮನ್ಸ್ ನೀಡುತ್ತದೆ.ಆದರೆ, “ಕೈ”ಲಾಗದ ಕೇಂದ್ರ ಸರ್ಕಾರದ್ದು ಮತ್ತದೇ ವ್ಯರ್ಥ ಶಾಂತಿಯ ಪ್ರಲಾಪ…! ಅಮೇರಿಕಾ ನಡೆಸುತ್ತಿರುವ ಅಂತರ್ಜಾಲದ ಗೂಢಚಾರಿಕೆಯನ್ನು ಹೊರಹಾಕಿ ದೊಡ್ಡಣ್ಣನ ಕೆಂಗಣ್ಣಿಗೆ ಗುರಿಯಾದ “ಸ್ನೋಡೆನ್”ಗೆ ಜಾಗ ನೀಡಿದ ರಷ್ಯಾದ ಮೇಲೆ ಮುನಿಸಿಕೊಂಡು “ಪುಟಿನ್”ರೊಂದಿಗಿನ ಭೇಟಿಯನ್ನೇ “ಒಬಾಮ” ರದ್ದುಗೊಳಿಸಿದರು.ಆದರೆ ನಮ್ಮ “ಮೌನ” ಮೋಹನರನ್ನೊಮ್ಮೆ ನೋಡಿ,ಪಾಪಿ ಪಾಕಿಸ್ತಾನ ಎಷ್ಟು ಸೈನಿಕರನ್ನು ಬೇಕಾದರೂ ಕೊಲ್ಲಲ್ಲಿ ನನಗೇನಾಗಬೇಕು ಅನ್ನುವಂತೆ ಅವರು ಬರುವ ನವೆಂಬರ್ನಲ್ಲಿ ಕಾರ್ಗಿಲ್ ಕುಖ್ಯಾತಿಯ ಪಾಕಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಭೇಟಿಯಾಗಿಯೇ ಆಗುವೆ ಅನ್ನುವಂತೆ ಕೂತಿದ್ದಾರೆ.ಇವರಿಗೇನು ಹೇಳೋಣ.
ಯುದ್ಧ ಅಂದಾಕ್ಷಣಕ್ಕೆ,ಮಾನವ ಹಕ್ಕುಗಳ ಬಗ್ಗೆ ಮಾತನಾಡುವ ಒಂದಿಷ್ಟು ಮಹಾಶಯರು ಹುಟ್ಟಿಕೊಳ್ಳುತ್ತಾರೆ ನಮ್ಮಲ್ಲಿ.ಅವರು ಮುಂಬೈ ಮಾರಣ ಹೋಮದ ನಂತರ ಶುರುವಾಗಿದ್ದ ಯುದ್ಧದ ವಾತವರಣದ ಸಮಯದಲ್ಲೂ ಬಂದಿದ್ದರು.ಈಗಲೂ ಮತ್ತೊಮ್ಮೆ ಅಂತ ಸನ್ನಿವೇಶವುಂಟಾದರೆ ಅರ್ಧ ನಿದ್ದೆಯೆಂದೆದ್ದು ಬಂದು ಮಾತನಾಡುತ್ತಾರೆ. “ಪಾಕಿಸ್ತಾನದಲ್ಲಿರುವವರು ಮುಗ್ಧ ಜನರು.ನಾವು ಯುದ್ಧ ಮಾಡಿದರೆ ಅವರ ಪ್ರಾಣ ಹಾನಿಯಾಗುವುದಿಲ್ಲವೇ? ಯುದ್ಧ ಬೇಕು ಅನ್ನುವ ನೀವೇನಾದರೂ ಗಡಿಯಲ್ಲಿ ನಿಂತು ಬಡಿದಾಡುತ್ತೀರಾ? ಇಲ್ಲವಲ್ಲ. ಅಲ್ಲಿ ಸಾಯುವುದು ಸೈನಿಕ ತಾನೆ. ನಿಮ್ಮ ದೇಶ ಭಕ್ತಿಯೆಲ್ಲ ಇಲ್ಲೇ ಸಾಗುತ್ತದೆ” ಹೀಗೆ ಸಾಗುತ್ತದೆ ಅವರ ಪ್ರಲಾಪಗಳು.ಆದರೆ ಈ ಮೂರ್ಖರಿಗೆ “ಪಾಕಿಸ್ತಾನದಲ್ಲಿರುವ ಮುಗ್ಧರು ಈ ಉಗ್ರರ ಕೈ ಕೆಳಗೆ ಹೀನಾಯವಾಗಿ ಬದುಕುವುದಕ್ಕಿಂತಲೂ ಮುಕ್ತಿ ಪಡೆದು ಕನಿಷ್ಟ ಅವರ ಮುಂದಿನ ಪೀಳಿಗೆಯಾದರೂ ನೆಮ್ಮದಿಯಿಂದ ಇರಲಿ ಅಂತ ಬಯಸುತ್ತಾರೆ.ಇನ್ನು ಯುದ್ಧವಾಗದಿದ್ದರೂ ಈಗ ನಮ್ಮ ಸೈನಿಕರು ಪಾಕಿಗಳ ಗುಂಡಿಗೆ ಅನ್ಯಾಯವಾಗಿ ಎದೆಯೊಡ್ಡುತ್ತಿಲ್ಲವೇ? ಪಾಕಿಸ್ತಾನದಿಂದ,ಪಾಕ್ ಆಕ್ರಮಿತ ಕಾಶ್ಮೀರದಿಂದ ವಲಸೆ ಬಂದು ಪ್ರಾಣಿಗಳಂತೆ ಬದುಕು ಸಾಗಿಸುತ್ತಿರುವ ಹಿಂದುಳಿದ ವರ್ಗದವರು,ದಲಿತರು ಇವರೆಲ್ಲ ನಿಮ್ಮ ಮಾನವ ಹಕ್ಕುಗಳ ಕಣ್ಣಿಗೆ ಕಾಣುವುದಿಲ್ಲವೇ?”
ಇವೆಲ್ಲದರ ನಡುವೆ ಜಮ್ಮು-ಕಾಶ್ಮೀರದ ಕಿಶ್ತವಾರ್ ನಲ್ಲಿ ಕೋಮುಗಲಭೆ ಶುರುವಾಗಿದೆ.ರಂಜಾನ್ ಹಬ್ಬದ ದಿನ ಪ್ರಾರ್ಥನೆ ಮುಗಿಸಿ ಹೊರಬಂದ ಕಿಡಿಗೇಡಿ ಗುಂಪು ಪಾಕಿಸ್ತಾನದ ಬಾವುಟಗಳನ್ನಿಡಿದು ಘೋಷಣೆ ಕೂಗುತ್ತ ಹೊರಟು ಇದ್ದಕ್ಕಿದ್ದಂತೆ ದಾಳಿ ಶುರುವಿಟ್ಟುಕೊಂಡಂತೆ ಗಲಭೆ ಶುರುವಾಯಿತು.ಖುದ್ದು ಅಲ್ಲಿ ಜಮ್ಮು-ಕಾಶ್ಮೀರದ ಗೃಹ ಸಚಿವರೇ ಮೊಕ್ಕಾಂ ಹೂಡಿದ್ದರು ಮತ್ತು ಅವರ ನೇತೃತವದಲ್ಲೇ ಅಲ್ಲಿನ ಸಮಸ್ತ ಪೋಲಿಸ್ ಪಡೆಯು ಹೊತ್ತಿ ಉರಿಯುತ್ತಿರುವ ಅಂಗಡಿ-ಮನೆಗಳನ್ನು ತಣ್ಣಗೆ ನೋಡುತ್ತ ಕುಳಿತಿದ್ದರು ಅನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.೧೯೯೦ರ ನಂತರ ಮತ್ತೊಮ್ಮೆ “Ethnic Cleansing” ಗೆ ಪ್ರತ್ಯೇಕತಾವಾದಿಗಳು ಮತ್ತು ಉಗ್ರರು ಕೈ ಹಾಕಿದ್ದರೆಯೇ? ಮತ್ತು ಎಂದಿನಂತೆ ಇದಕ್ಕೆ ಈ ಬಾರಿಯೂ ಬೆಂಬಲವಾಗಿ ಪಾಕಿಸ್ತಾನ ನಿಂತಿದೆಯೇ ಅನ್ನುವ ಪ್ರಶ್ನೆಗಳು ಮೂಡದಿರುವುದಿಲ್ಲ.
ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಹೀಗೆ ಗುಂಡಿನ ದಾಳಿ ಮಾಡುವುದು ಉಗ್ರರ ಒಳ ನುಸುಳುವಿಕೆಗೆ ಸಹಾಯ ಮಾಡಲು ಅನ್ನುವುದು ತಿಳಿದ ವಿಚಾರವೇ.ಆದರೆ ಈ ಬಾರಿ ಇಷ್ಟು ದೊಡ್ಡ ಮಟ್ಟದಲ್ಲಿ ಮಾಡುತ್ತಿರುವುದೇಕೆ? ಕಾಶ್ಮೀರ ಹೊತ್ತಿ ಉರಿಯುತ್ತಿರುವುದೇಕೆ? ಉತ್ತರ “ಆಪ್ಘಾನಿಸ್ತಾನ” …! ಹೌದು. ೨೦೧೪ಕ್ಕೆ ಆಪ್ಘನ್ನಿಂದ ನ್ಯಾಟೋ ಪಡೆಗಳು ಹೊರಡಲಿವೆ.ಹಾಗೇ ಅಲ್ಲಿ ಖಾಲಿಯಾದ ಜಾಗಕ್ಕೆ ಆಫ್ಘಾನಿಸ್ತಾನ ಹಳೆ ಮಿತ್ರ ಭಾರತ ಬಂದು ಕುಳಿತು ಆ ವಲಯದಲ್ಲಿ ತನ್ನ ಪ್ರಭಾವ ಬೀರಿದರೆ ಪಾಪಿ ಪಾಕಿಸ್ತಾನದ ಪಾಡೇನಾಗಬೇಕು.ಹಾಗೆಯೇ ಈಗ ಪಾಕಿಸ್ತಾನವನ್ನೇ ಮಗ್ಗುಲ ಮುಳ್ಳಾಗಿ ಕಾಡುತ್ತಿರುವ ತಾಲಿಬಾನಿ ಸೈತಾನರನ್ನು ತನ್ನ ದೇಶದಿಂದ ಸಾಗಿಸಲು ಒಂದು ಜಾಗ ಬೇಕಲ್ಲ. ಅದೇ “ಕಾಶ್ಮೀರ”…!
ಒಂದು ಕಡೆ ಗಡಿಯಲ್ಲಿ ಸಮರದ ವಾತವರಣ ಸೃಷ್ಟಿಸಿ ಚಳಿಗಾಲದ ಲಾಭ ಪಡೆದು ಉಗ್ರರನ್ನು ಒಳನುಸುಳುವಂತೆ ಮಾಡಿ ಭಾರತವನ್ನು ಆಂತರಿಕ ರಕ್ಷಣೆಯಲ್ಲೇ ತಲೆಕೆಡಿಸಿಕೊಳ್ಳುವಂತೆ ಮಾಡಿ ಆಪ್ಘನಿಸ್ತಾನದಲ್ಲಿ ತನ್ನ ಅಧಿಪತ್ಯ ಮುಂದುವರೆಸುತ್ತಲೇ ಇತ್ತ, ಪ್ರತ್ಯೇಕತವಾದಿ ದೇಶದ್ರೋಹಿಗಳ ಮತ್ತು ಉಗ್ರರ ಬೆಂಬಲದಿಂದ “Agitation Terrorism” ಅನ್ನು ಮುಂದುವರೆಸಿ ಆ ಮೂಲಕ ಅಲ್ಲಿನ ಅಲ್ಪ ಸಂಖ್ಯಾತ ಹಿಂದುಳಿದ ಸಮುದಾಯ, ದಲಿತರು, ಆದಿವಾಸಿಗಳು, ಸಿಖ್ಖರು,ಬೌದ್ಧರನ್ನು ಭಯದ ವಾತವರಣದಲ್ಲಿ ಬದುಕುವಂತೆ ಮಾಡಿ ಕಡೆಗೆ ಪಂಡಿತರನ್ನು ಕಾಶ್ಮೀರದಿಂದ “Ethnic Cleansing” ಮಾಡಿದಂತೆ ಮತ್ತೊಮ್ಮೆ ಮಾಡ ಹೊರಟಿದೆಯೇ?
ಕೇಂದ್ರ ಸರ್ಕಾರವೇನೋ “೧೯೯೦”ರ ಸ್ಥಿತಿಗೆ ತಲುಪಲು ಬಿಡುವುದಿಲ್ಲ ಅನ್ನುವ ಮಾತನಾಡುತ್ತಿದೆ.ಆದರೆ ಕಾಶ್ಮೀರ ಸರ್ಕಾರ, ಮಾಧ್ಯಮಗಳನ್ನೂ ದೂರವಿಟ್ಟಿರುವ ಕಾರಣವೇನು? ಅಲ್ಲಿ ನಡೆಯುತ್ತಿರುವುದು ಹೊರ ಜಗತ್ತಿಗೆ ಗೊತ್ತಾಗಬಾರದೆಂದೆ? ಹಾಗದರೇ ಅಲ್ಲಿ ನಿಜಕ್ಕೂ ನಡೆಯುತ್ತಿರುವುದೇನು? ನಾವಿನ್ನೆಷ್ಟು ದಿನ ಭಾರತೀಯರಾಗಿ ಹುಟ್ಟಿದ ತಪ್ಪಿಗೆ ಪಾಪಿ ಪಾಕಿಸ್ತಾನಿಗಳ ಕೈಯಲ್ಲಿ ಹುಳಗಳಂತೆ ಸಾಯಬೇಕು? ಅಸಲಿಗೆ ಪಾಕಿಸ್ತಾನವೆಂಬ ಕ್ಷುದ್ರ ದೇಶ ಭಾರತವೆಂಬುದು ಹಲ್ಲಿಲ್ಲದ ಹಾವು,ಅದು ಕನಿಷ್ಟ ನಮ್ಮೆಡೆಗೆ ತಿರುಗಿ ಬುಸುಗುಡಲಾರದು ಅನ್ನುವ ನಂಬಿಕೆಯಿಂದಲೇ ತಾನೇ ಹೀಗೆ ಆಡುತ್ತಿದೆ.ಇಲ್ಲೊಂದು ಗಂಡು ಸರ್ಕಾರ ಅನ್ನುವುದಿದ್ದರೆ ಯುದ್ಧದ ಮಾತು ಬಿಡಿ,ಕಡೆ ಪಕ್ಷ ಕಠಿಣ ರಾಜತಾಂತ್ರಿಕ ಕ್ರಮಗಳನ್ನಾದರೂ ಕೈಗಳ್ಳೊಬಹುದಿತ್ತಲ್ಲವೇ? ಅಂತದ್ದೊಂದು ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ದ ಮೇಲೆ ಈ ಕೇಂದ್ರ ಸರ್ಕಾರವೇಕೆ ಅಧಿಕಾರದಲ್ಲುಳಿಯಬೇಕು? ಕಾಶ್ಮೀರಕ್ಕಾಗಿ ಇನ್ನೆಷ್ಟು ದಿನ ನಮ್ಮ ಯೋಧರು ಬಲಿಯಾಗುತ್ತಲೇ ಇರಬೇಕು.ಅದರ ಬದಲಿಗೆ ಭಾರತದ ತಂಟೆಗೆ ಹೋಗಬಾರದು ಅನ್ನುವಂತ ಪಾಠವನ್ನು ಪಾಪಿ ಪಾಕಿಗಳಿಗೆ ಶಾಶ್ವತವಾಗಿ ಕಲಿಸುವುದು ಸರಿಯಲ್ಲವೇ?




