ನಮೋ ಅಭಿವೃದ್ಧಿ ಮಂತ್ರಕ್ಕೆ ಅನುಸರಿಸಬೇಕಾದ ಪ್ರಚಾರತಂತ್ರ ಯಾವುದು?
– ನವೀನ್ ನಾಯಕ್
ನರೇಂದ್ರ ಮೋದಿ ಇತ್ತೀಚೆಗೆ ಅತಿ ಹೆಚ್ಚಾಗಿ ಚರ್ಚೆಗೆ ತುತ್ತಾಗುತಿದ್ದಾರೆ. ಮೋದಿಯವರೇ ಮುಂದಿನ ಪ್ರಧಾನಿಯಾಗಬೇಕೆಂದು ಹಲವಾರು ರೀತಿಯಲ್ಲಿ ಉತ್ಸಾಹಿ ಯುವಕರು ಸ್ವಯಂಪ್ರೇರಣೆಯಿಂದ ಕೆಲಸ ನಿರ್ವಹಿಸುತಿದ್ದಾರೆ. ಅಭಿಮಾನಿಗಳ ಗುಂಪುಗಳಿರಬಹುದು, ಸಾಮಾಜಿಕ ತಾಣದಲ್ಲಿರುವ ಪೇಜ್, ಗ್ರೂಪ್ ಯಾವುದೇ ಆಗಬಹುದು. ರಾಜಕೀಯ ವಿಷಯದಲ್ಲಿ ಮಲಗಿದ್ದ ಯುವಪಡೆ ಎದ್ದು ನಿಂತಿರುವುದು ಸ್ವಾಗತಾರ್ಹ. ಪ್ರಸಕ್ತ ರಾಜಕೀಯ ದೊಂಬರಾಟದಲ್ಲಿ ಕಡಿವಾಣ ಹಾಕಬೇಕೆಂದರೆ ಯುವಕರ ಪಾತ್ರ ಬೇಕೆಬೇಕು. ಇತಿಹಾಸವೂ ಅದನ್ನೇ ಸಾರಿ ಸಾರಿ ಹೇಳಿದೆ. ನಮೋ ವಿಷಯದಲ್ಲಿ ಗಂಭೀರವಾದ ವಿಚಾರವೆಂದರೆ ಈ ಯುವಕರ ಕೆಲಸ ನೀರಿಕ್ಷಿತ ಮಟ್ಟವನ್ನು ತಲುಪುತ್ತದೆಯಾ. ಇವರ ಉತ್ಸಾಹಕ್ಕೆ 2014 ತಣ್ಣೀರೆರಚಬಹುದೇ ಎಂಬ ಅನುಮಾನ ನನಗೆ. ನನ್ನ ಅನುಮಾನಕ್ಕೆ ಕಾರಣವಿಲ್ಲದೆಯಿಲ್ಲ.
ಮೋದಿಯವರನ್ನು ಪ್ರಚಾರ ಮಾಡುತ್ತಿರುವ ಶೈಲಿ ಸ್ವತಃ ನಮೋ ಅಭಿವೃದ್ದಿ ಕನಸ್ಸಿನ ವಿರೋಧವಾಗಿದೆ. ಮುನ್ನುಗುತ್ತಿರುವ ವೇಗದಲ್ಲಿ ಗುರಿಯನ್ನೇ ಮರೆಯಲಾಗಿದೆ. ಮೋದಿ ನಾಯಕತ್ವದಲ್ಲಿ ಸರಕಾರ ರಚಿಸಬೇಕಾದರೆ ಆ ಸರಕಾರ ನಮ್ಮ ಕನಸ್ಸಿನ ಭಾರತ ಕಟ್ಟಬೇಕಾದರೆ ಮೋದಿ ಹೆಸರಲ್ಲಿ ಅಥವಾ ಬಿಜೆಪಿ ಹೆಸರಲ್ಲಿ ಗೆಲ್ಲುವ ಅಭ್ಯರ್ಥಿ ಹೇಗಿರಬೇಕು, ಅವನ ಕನಸುಗಳೇನಾಗಿರಬೇಕು, ಸಮಾಜ ಪರಿವರ್ತನೆಯಲ್ಲಿ ಆತನ ಸ್ಪಷ್ಟ ನಿರ್ಧಾರವೇನು. ಈ ಅಂಶಗಳು ಮುಖ್ಯವಾಗುವುದಿಲ್ಲವೇ? ಈ ಮಹತ್ತರ ಅಂಶಗಳನ್ನು ಮರೆತು ಅವರ ಹೆಸರಲ್ಲಿ ಅಯೋಗ್ಯರನ್ನು ಗೆಲ್ಲಿಸಿಬಿಟ್ಟರೆ. ಕಂಡ ಕನಸು ತಿರುಗಿ ಬೆಂಕಿ ಕೆಂಡವಾಗುತ್ತದೆಯಲ್ವಾ? ಕರ್ನಾಟಕದಲ್ಲಿ ಬದಲಾವಣೆ ಭರದಲ್ಲಿ ಬಿಜೆಪಿ ಬೆಂಬಲಿಸಿದಾಗ ಯಡವಟ್ಟಾಗಿದ್ದು ಈ ಅಂಶಗಳೇ. ಅಪಾತ್ರರೆಲ್ಲ ಗೆದ್ದು ಉಂಡಾಡಿ ಗುಂಡನ ಹಾಗೆ ಆಡಿದ್ದ ಉದಹಾರಣೆ ಕಣ್ಣ ಮುಂದಿರುವಾಗ ಮತ್ತದೇ ಹೆಜ್ಜೆಯನ್ನಿಟ್ಟರೆ ಏನು ಪ್ರಯೋಜನ ?.. ಬದಲಾವಣೆ ಎಲ್ಲರಿಗೂ ಬೇಕು ಅದೇ ಭರದಲ್ಲಿ ಯೋಗ್ಯರು ಮತ್ತು ಅಯೋಗ್ಯರ ನಡುವಿನ ವ್ಯತ್ಯಾಸ ಮರೆಯಬಾರದು.
ಇದು ಒಂದು ಮುಖವಾದರೆ ಉತ್ಸಾಹಿಗಳ ಕಾರ್ಯತಂತ್ರದಲ್ಲಿ ಮತ್ತೊಂದು ಮುಖದ ಗೊಂದಲವಿದೆ. ಕೇವಲ ನಮೋರನ್ನು ಪ್ರಚಾರ ಮಾಡಿಕೊಂಡು ಹೋಗುವುದರಿಂದ ಜನಗಳು ಗೊಂದಲಕ್ಕೀಡಾಗಬಹುದು. ಮತದಾನದ ಸಮಯದಲ್ಲಿ ನಮೋ ಚಿತ್ರವೇ ಕಾಣದಿದ್ದರೆ. ನಮೋ ಚಿತ್ರವನ್ನು ಹಾಕಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲವಲ್ಲ. ಜನರು ನಮೋರನ್ನು ತಮ್ಮ ಕ್ಷೇತ್ರದಲ್ಲಿ ಹೇಗೆ ಗುರುತಿಸಬೇಕು. ಹಳ್ಳಿಗಳಲ್ಲಿ ಇನ್ನೂ ನಮೋ ಬಗ್ಗೆ ಸರಿಯಾಗಿ ತಿಳಿದಿಲ್ಲ. ಪ್ರತಿನಿದಿಸುವ ಪಕ್ಷ ಬಿಜೆಪಿಯೆಂದರೆ ನಮ್ಮ ರಾಜ್ಯದ ಪುಂಡಾಟ ಕಣ್ಣ ಮುಂದೆ ಹಾಗೆ ಹಾದುಹೋಗುತ್ತೆ. ಈ ವಾಸ್ತವವನ್ನು ಕಣ್ಣ ಮುಂದಿಟ್ಟುಕೊಂಡು 2014 ರಲ್ಲಿ ನಿರೀಕ್ಷೆ ಸುಳ್ಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ದುಸ್ವಪ್ನವಾಗಿರುವ ಯುಪಿಎ 3 ಮತ್ತೆ ಬರಬಹುದು ಇದೇ ಕಾರ್ಯವನ್ನು ಮುಂದುವರೆಸಿಕೊಂಡುಹೋದರೆ. ಬದಲಾಗಬೇಕೆಂದರೆ ಪ್ರತಿ ಕ್ಷೇತ್ರದ ಯೋಗ್ಯರನ್ನು ಹುಡುಕಿ ಬೆಂಬಲಿಸಬೇಕು. ಅವರನ್ನು ಮತದಾರರ ಮುಂದೆ ನಿಲ್ಲಿಸಿ ಯೋಗ್ಯತೆಯನ್ನು ಸಾಭೀತುಪಡಿಸಬೇಕು. ಸಾಕಷ್ಟು ಸಮಯವಿದೆ. ಮೋದಿಯೊಂದಿಗೆ ಆಯಾ ಕ್ಷೇತ್ರದ ಅಭ್ಯರ್ಥಿಯು ಮತದಾರರಿಗೆ ಹತ್ತಿರವಾಗಬೇಕು. ಅವನ ಕನಸುಗಳನ್ನು ಮತದಾರರ ಮುಂದಿಡಬೇಕು. ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು. ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಹೊಸ ಹೆಜ್ಜೆಯಾದರೂ ಫಲಿತಾಂಶಕ್ಕೆ ಉತ್ತಮ ಹಾದಿಯನ್ನಂತೂ ಖಂಡಿತಾ ತೋರಿಸುತ್ತದೆ. ಈಗಲೇ ಎಚ್ಚೆತ್ತುಕೊಂಡರೆ ಉತ್ತಮ. ಇಲ್ಲವಾದಲ್ಲಿ ಮೋದಿ ಸರಕಾರ ಆಯ್ಕೆಯಾದರೂ ಅದರ ಆಡಳಿತ ರಾಜ್ಯ ಬಿಜೆಪಿಯ ತರ ಗಿರಗಿಟ್ಟಲೆ ಸುತ್ತುವುದರಲ್ಲಿ ಯಾವುದೇ ಅತಿಶಯೋಕ್ತಿಯಾಗಲಾರದು.
ಮತ್ತೊಂದು ವಿಚಾರ ಮೋದಿ ಮತ್ತು ಮುಸ್ಲಿಂ ವಿಚಾರಗಳ ಬಗ್ಗೆ. ಇದರಲ್ಲಿ ಮೋದಿಯವರದ್ದು ಸಮಾನತೆಯೆಂಬ ಸ್ಪಷ್ಟ ನಿರ್ಧಾರವಿದೆ. ಅದನ್ನು ಪ್ರಚಾರ ಮಾಡುವಲ್ಲಿ ಯುವಪಡೆ ಎಡವುತ್ತಿದೆ. ಮೋದಿಯ ಕನಸು ಸಮಗ್ರ ವಿಕಾಸ. ಅವರಿಲ್ಲಿ ಜಾತಿ, ಮತ, ಪಂಥ ಯಾವುದನ್ನೂ ಎಳೆದು ತಂದಿಲ್ಲ. ಇಂತ ವರ್ಗಕ್ಕೆ ಇಂತ ಸೌಲಭ್ಯವಂತ ಓಲ್ಯಸುವ ರಾಜಕಾರಣ ಮಾಡುತ್ತಿಲ್ಲ. ಅದನ್ನು ಪ್ರಚಾರ ಮಾಡುವಾಗ ಸ್ವಯಂಪ್ರೇರಿತ ಉತ್ಸಾಹಿಗಳು ಕಾಂಗ್ರೆಸ್ ಯೋಜನೆಯಂತೆ ಬಳಸಲಾಗುತ್ತಿದೆ. ಉದಾಃ ಮುಸ್ಲಿಂ ಜನರು ಗುಜರಾತಿನಲ್ಲಿ ಅಭಿವೃದ್ದಿ ಹೊಂದಿರುವುದು, ಅವರ ಜೀವನ ಶೈಲಿ ಉತ್ತಮವಾಗಿರುವುದು. ಹೀಗೆ ಮತ್ತೆ ಮುಸ್ಲಿಂ ಜನರನ್ನು ಓಲೈಸುವ ಕ್ರಿಯೆ ನಡೆಯುತ್ತಿದೆ. ಪ್ರಚಾರ ಮಾಡಬೇಕಾಗಿದ್ದು ರಾಮರಹೀಮರು ಒಂದಾಗಿ ಸಹೋದರರ ಹಾಗೆ ಬಾಳುವ ರೀತಿಯನ್ನು. ಪ್ರಸಕ್ತ ಸಮಯದಲ್ಲಿ ದೇಶ ಬಯಸುವುದು ಇದನ್ನೇ. ನಮಗೆ ಬೇಕಾಗಿರುವುದು ಓಲೈಸುವ ರಾಜಕಾರಣವಲ್ಲ ಪ್ರಭುದ್ದ ರಾಜಕಾರಣ. ಹಿಂದೆ ಮೋದಿಯೇ ಸ್ಪಷ್ಟ ಪಡಿಸಿದ್ದಾರೆ, ಧರ್ಮಾದರಿತ ಮೀಸಲಾತಿ ದೇಶಕ್ಕೆ ಹಾನಿಕರವೆಂದು. ಮುಸ್ಲಿಂ ತುಷ್ಟೀಕರಣ ಅನಗತ್ಯ. ಮಾಧ್ಯಮಗಳು 2002 ಹತ್ಯಾಕಾಂಡದಲ್ಲಿ ಮೋದಿ ಕೈಗೊಂಡ ಕ್ರಮಗಳ ಮರೆಮಾಚಿದನ್ನು ಸಂಪೂರ್ಣವಾಗಿ ಜನತೆಗೆ ವಿವರಿಸಬೇಕಾಗಿದೆ. ಕೆಲವು ಪತ್ರಿಕೆಗಳು ಬೇಕಂತಲೇ ಮೋದಿ ಕೈಯಲ್ಲಿ ದೇಶ ಅಸುರಕ್ಷಿತ, ಅಲ್ಪ ಸಂಖ್ಯಾತ ಜನರು ಅಸುರಕ್ಷಿತ ಎಂಬ ಭಾವನೆ ಹರಡುತಿದ್ದಾರೆ. ಇದಕ್ಕೆ ತಕ್ಕ ಉತ್ತರವನ್ನೂ ಮೋದಿಯವರು ನೀಡಿದ್ದಾರೆ. ನಾನೂ ಹಿಂದುಳಿದ ವರ್ಗದವನಾದರೂ ಅವರನ್ನು ಮುಂದಿಟ್ಟುಕೊಂಡು ಎಂದೂ ರಾಜಕೀಯ ಮಾಡಲಿಲ್ಲ. ನಿಜ ನಮಗೆ ಬೇಕಾಗಿದ್ದು ಸಮಾನತೆ. ಜಾತಿ ಹೆಸರಲ್ಲಿ ಜಾತ್ಯಾತೀತವಲ್ಲ.
ಕೈ ತುಂಬ ಕೆಲಸ, ನೆಮ್ಮದಿ ಜೀವನ ಇರಬೇಕಾದರೆ ಅವರೇಕೆ ವಂಚಕ “ಕೈ” ಸಹವಾಸ ಮಾಡಬೇಕು. ಸಮಾಜ ಶಾಂತಿ ಕದಡುವರು ಎಂಬ ಭಯ ಹುಟ್ಟಿಸುತ್ತಿರುವ ಸೋಕಾಲ್ಡ್ ಸೆಕ್ಯುಲರ್ ಗಳು, ಪತ್ರಿಕೆಗಳ ಸಂಪಾದಕರು ಒಮ್ಮೆ ಗುಜರಾತ್ ಪ್ರವಾಸ ಮಾಡುವುದು ಉತ್ತಮ. ಸಮಾನತೆಗೂ ಜಾತ್ಯಾತೀತತೆಗೂ ಇರುವ ವ್ಯತ್ಯಾಸ ತಿಳಿದೀತು. ರಾಮರಹೀಮರು ಒಂದಾಗಿರುವ ಕೋಮುವಾದವೇ ನಮಗೆ ಬೇಕು ಹೊರತು ರಾಮರಹೀಮ ಹೊಡೆದಾಡಿಕೊಳ್ಳುವ ಪೊಳ್ಳು ಜಾತ್ಯಾತೀತ ಬೇಕಿಲ್ಲ. 2014 ರಣರಂಗವಾಗುತ್ತಿದೆ. ಬಿಜೆಪಿ ಕೇಂದ್ರ ಸರ್ಕಾರದ ವೈಫಲ್ಯವನ್ನು ಜನತೆ ಮುಂದಿಡುವಲ್ಲಿ ವಿಫಲವಾಗುತ್ತಿದೆ. ಮೋದಿ ಅಡ್ವಾಣಿ ಹೆಸರಲ್ಲಿ ಗುಂಪುಗಾರಿಕೆ ಬಿಟ್ಟು ಒಗ್ಗಟ್ಟು ಪ್ರದರ್ಶಿಸುವುದು ಈಗ ಸೂಕ್ತ. ಭರವಸೆ ನುಡಿಗಳಿಂದ ಜನ ಏಸತ್ತು ಹೋಗಿದ್ದಾರೆ. ಮತ್ತೆ ಭರವಸೆ ಹಿಡಿದುಕೊಂಡು ಬಂದರೆ ಜನ ನಂಬುವುದಕ್ಕಂತು ತಯಾರಿಲ್ಲ. ಸಧ್ಯಕ್ಕೆ ಮೋದಿ ಮಾಡಿದ ಕೆಲಸಗಳನ್ನು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡುವುದು ಉತ್ತಮ. ಮಾಡುತ್ತೇವೆ ಎನ್ನುವುದಕ್ಕಿಂತ ಮಾಡಿ ತೋರಿಸಿದ್ದೇವೆ ಎನ್ನುವುದು ಉತ್ತಮ. ಕೇವಲ ಮಂತ್ರ ನುಡಿದರೆ ಸಾಲದು ಮಂತ್ರದ ಹಿಂದಿನ ಧ್ಯೇಯೋದ್ದದೇಶಗಳನ್ನು ಜನತೆಯ ಮುಂದಿಡಬೇಕು.





100% agreed