2004ರಲ್ಲಿ ಆಗಿದ್ದು, 2019ರಲ್ಲಿ ಆಗದಿದ್ದರೆ… ಭಾರತ ತಲೆ ಎತ್ತಿ ನಿಲ್ಲಬಹುದು..!
– ಕೆ ಎಸ್ ರಾಘವೇಂದ್ರ ನಾವಡ,ಹೊರನಾಡು
2004 ನೇ ಇಸವಿ ಕಣ್ಮುಂದೆ ಬರುತ್ತೆ! ಲೋಕಸಭೆಗೆ ಅವಧಿಪೂರ್ವ ಚುನಾವಣೆ ಘೋಷಿಸಿದ ಭಾಜಪಾ ಸರ್ಕಾರ. “ಪ್ರಕಾಶಿಸುತ್ತಿದೆ ಭಾರತ”ಎಂಬ ಭಾಜಪದವರ ಸ್ಲೋಗನ್…
ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಲಾಲ ಕೃಷ್ಣ ಅಡ್ವಾಣಿ ಹೆಸರು ಘೋಷಣೆ.. ಮತಕೇಳಲು ಬೆನ್ನ ಹಿಂದಿದ್ದ ಸಾಲು ಸಾಲು ಅಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನ.. ಶತ್ರುಗಳೂ ಒಪ್ಪುವ ಅಟಲ್ ಬಿಹಾರೀ ವಾಜಪೇಯಿಯವರ ಸ್ನೇಹ ಬಂಧನ.ಎಲ್ಲಾ ಮೈತ್ರಿ ಪಕ್ಷಗಳೂ ಮತ್ತೊಮ್ಮೆ ಒಟ್ಟಿಗೇ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡಿದ್ದು.ಎಲ್ಲವೂ ಸರಿಯೇ..!! ವಾಜಪೇಯಿಯವರು ಮತ್ತೊಮ್ಮೆ ಆರಿಸಿಬರಲು ಸಾಕಷ್ಟು ಅಂಶಗಳು ನೆರವಿಗಿದ್ದವು! ಆದರೆ ಬೇಕಾದುದೇ ಇರಲಿಲ್ಲ! ಸ್ವತಃ ವಾಜಪೇಯಿಯವರೇ ಲೋಕಸಭೆಯ ಅವಧಿ ಪೂರ್ವ ವಿಸರ್ಜನೆಗೆ ವಿರೋಧ ವ್ಯಕ್ತಪಡಿಸಿದ್ದರು.ಆಡಳಿತಾರಂಭದ ದಿನಗಳಲ್ಲಿ ಭಾರತಾದ್ಯಂತ ಇದ್ದ ಕೇಂದ್ರ ಸರ್ಕಾರದ ಪರವಾದ ಅಲೆ ಅಥವಾ “ಆಡಳಿತದ ಪರ ಅಲೆ”ಎಂಬ ಭದ್ರವಾದ ಗೋಡೆಯಲ್ಲಿ ಸಣ್ಣ ಸಣ್ಣ ಬಿರುಕುಗಳು ಕಾಣತೊಡಗಿದ್ದವು. ಜನ ಬದಲಾವಣೆಯನ್ನು ಬಯಸುತ್ತಿದ್ದುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು! “ಯಾಕೋ ಎಲ್ಲಿಯೋ ಏನೋ ಎಡವಟ್ಟಿದೆ” ಎಂಬುದು ಭಾಜಪಾದ “ಚಿಂತಕರ ಚಾವಡಿ”ಗೆ ಗೊತ್ತಾಗದಿದ್ದರೂ ವಾಜಪೇಯಿಯವರ ಸೂಕ್ಷ್ಮ ಮನಸ್ಸಿಗೆ ಹೊಳೆದು ಬಿಟ್ಟಿತ್ತು.