ವಿಷಯದ ವಿವರಗಳಿಗೆ ದಾಟಿರಿ

Archive for

28
ಆಗಸ್ಟ್

ದೇಶ ವಿಭಜನೆಯ ಕಾರ್ಯಕ್ರಮದ ಹೆಸರು ದ್ರಾವಿಡ ಸಮ್ಮೇಳನ

– ರಾಕೇಶ್ ಶೆಟ್ಟಿ

“ಯಾವುದರ ಉದ್ದೇಶ Constructive ಆಗಿರುತ್ತದೆಯೋ ಅಂತಹದ್ದು ಮಾತ್ರ ಈ ನೆಲದಲ್ಲಿ ಉಳಿಯುತ್ತದೆ. Destructive ಉದ್ದೇಶವಿರುವಂತವು ಒಂದಷ್ಟು ದಿನ ವಿಜೃಂಭಿಸಿದರೂ ಅಂತಿಮವಾಗಿ ಅವು ಇಲ್ಲಿಂದ ನಾಮಾವಶೇಷವಾಗುತ್ತವೆ”. ಭಾರತದಿಂದ ಬೌದ್ಧ ಮತವೇಕೆ ಹೊರಗೆ ಹೋಗಬೇಕಾಯಿತು ಎಂದು ಶಿಷ್ಯನೊಬ್ಬ ಕೇಳಿದ ಪ್ರಶ್ನೆಗೆ ಈ ಅರ್ಥದಲ್ಲಿ ಸ್ವಾಮಿ ವಿವೇಕಾನಂದರು ಉತ್ತರಿಸುತ್ತಾರೆ. ಅವರು ಹೇಳಿದ ಮಾತು ಎಷ್ಟು ಸತ್ಯವೆನ್ನಲು ಪಕ್ಕದ ತಮಿಳುನಾಡಿನಲ್ಲಿ ಶುರುವಾಗಿದ್ದ ದ್ರಾವಿಡ ಚಳವಳಿ ಎಂಬ ಅತಿರೇಕವು ಇಂದು ಕೊನೆಯುಸಿರುಳೆಯುತ್ತಿರುವುದೇ ಉದಾಹರಣೆ. ಕನ್ನಡ ಮನೆ ಭಾಷೆಯಾಗಿದ್ದ ರಾಮಸ್ವಾಮಿ ಅವರಿಂದ ಶುರುವಾದ ಈ ದ್ರಾವಿಡ ಚಳವಳಿಯ ಬೇರಿನಲ್ಲೇ ದ್ವೇಷದ ವಿಷ ತುಂಬಿಕೊಂಡಿತ್ತು.

ಹಾವು-ಹಾರವ ಎದುರಾದರೇ ಮೊದಲು ಹಾರವನನ್ನು ಕೊಲ್ಲು ನಂತರ ಹಾವನ್ನು ಎನ್ನುವ ವಿಷ ಚಿಂತನೆಯಿಂದ ಹುಟ್ಟಿಕೊಂಡ ಚಳವಳಿ ಹೇಗೆ ತಾನೇ ಇರಲು ಸಾಧ್ಯ? ದೇವರ ವಿಗ್ರಹಗಳನ್ನು ಹೊರಗೆ ಎಳೆದು ತಂದು ಚಪ್ಪಲಿ ಹಾರ ಹಾಕಿದರು. ಬ್ರಾಹ್ಮಣರ ಜುಟ್ಟು-ಜನಿವಾರಗಳನ್ನು ಕಿತ್ತುಹಾಕಿ ಎಂದು ಬೊಬ್ಬಿಟ್ಟರು.ತಮಿಳನ್ನು ಸಂಸ್ಕೃತದಿಂದ ಶುದ್ಧ ಮಾಡಬೇಕು ಎನ್ನುತ್ತಾ ತಮಿಳು ನಾಡನ್ನು ,ತಮಿಳರನ್ನು ಒಂದು ದ್ವೀಪವನ್ನಾಗಿ ಮಾಡಿಕೊಂಡರು. ಜೀವನವಿಡೀ ನಕಾರಾತ್ಮಕ ಚಿಂತನೆಯನ್ನೇ ಹೇಳಿಕೊಂಡು ಬಂದು,ತಮಿಳರಿಂದ ಪೆರಿಯಾರ್ ಎಂದು ಕರೆಸಿಕೊಂಡ ರಾಮಸ್ವಾಮಿಯವರ ಸಂಗ,ಅವರ ಒಂದು ಕಾಲದ ಶಿಷ್ಯರಿಗೆ ಸಾಕಾಯಿತು. ಅವರಿಂದ ಕಳಚಿಕೊಂಡು ಡಿಎಂಕೆ ಸ್ಥಾಪನೆಯಾಯಿತು. ಅದೇ ಡಿಎಂಕೆಯ ಒಡಲಿನಿಂದ ಎಐಡಿಎಂಕೆ ಹುಟ್ಟಿಕೊಂಡಿತು. ಮುಂದೆ ಅರ್ಧ ದಶಕಗಳಿಗೂ ಹೆಚ್ಚು ಕಾಲ ದ್ರಾವಿಡ ರಾಜಕೀಯವೆಂಬ ಹೆಸರಿನ  ಹೂವನ್ನೇ ತಮಿಳರ ಕಿವಿಗೆ ಮುಡಿಸಿ ಅಧಿಕಾರ ನಡೆಸಿದ್ದು ಇವೆರಡು ಪಕ್ಷಗಳೇ. ಅದರಲ್ಲೂ ಕರುಣಾನಿಧಿಯವರ ಕುಟುಂಬವಂತೂ ದೇಶಕ್ಕೆ ಅಮರಿಕೊಂಡ ನೆಹರೂ ಕುಟುಂಬದಂತೆಯೇ ಆಗಿ ಹೋಗಿತ್ತು. ದೊಡ್ಡ ಮಗನ ಕೋಟೆ ಮಧುರೈನಲ್ಲಿ,ಚಿಕ್ಕ ಮಗನ ರಾಜ್ಯಭಾರ ಚೆನ್ನೈನಲ್ಲಿ ಮತ್ತೊಬ್ಬ ಮಡದಿಯ ಮಗನದು ಕೊಂಗನಾಡು,ಹೀಗೆ ತುಂಡು ರಾಜರ ಕಾಲದ ಪಾಳೆಯಪಟ್ಟುಗಳಂತಹ ರಾಜಕೀಯವದು.ಇಂತಹ ರಾಜಕೀಯ ಅತಿರೇಕಗಳು ಮತ್ತು ನಕಾರಾತ್ಮಕ ಚಳವಳಿಯ ಪರಿಣಾಮ ಹೇಗಿರುತ್ತದೆ ಎನ್ನುವುದನ್ನು ಜಯಲಲಿತಾ ಸಾವು ಮೊದಲ ಬಾರಿಗೆ ತೋರಿಸಿಕೊಟ್ಟಿತು. ತಮ್ಮ ತಮಿಳು ದ್ವೀಪದಲ್ಲೇ ಕುಳಿತು ಅಮ್ಮಾ ಅಮ್ಮಾ ಎನ್ನುತ್ತ ಆಕೆಯ ಪಾದಾರವಿಂದಗಳಿಗೆ ಸಾಷ್ಟಾಂಗ ನಮಸ್ಕಾರ ಹಾಕುತ್ತಿದ್ದವರೇ ಪಕ್ಷವನ್ನು ಮೂರು ಹೋಳಾಗಿಸಿದರು.

ಮತ್ತಷ್ಟು ಓದು »

23
ಆಗಸ್ಟ್

ಸೃಷ್ಟಿಯ ಅಗಾಧತೆಗೆ ಸವಾಲೆಸೆಯುವ ಮುನ್ನ…!

– ಸುಜಿತ್ ಕುಮಾರ್

ಇಡೀ ಭೂಖಂಡವೇ ತನ್ನದೆಂದುಕೊಂಡು ಒಂತಿಷ್ಟು ತಂತ್ರಜ್ಞಾನದ ಉನ್ನತಿಯ ಶಿಖರದ ಹಿನ್ನಲೆಯಲ್ಲಿ ಬೀಗುವ ಮಾನವ ನಿಸರ್ಗದ ಅಗಾಧತೆಯ ಮುಂದೆ ತಾನು ಅದೆಷ್ಟು ಕುಬ್ಜ ಕನಿಷ್ಠ ಎಂಬುದು ಇತ್ತೀಚಿಗೆ ಜರುಗುತ್ತಿರುವ ಪ್ರವಾಹ ಪ್ರಳಯಗಳ ಹಿನ್ನಲೆಯಲ್ಲಿ ಗಮನಿಸಿದರೆ ಬಹಳ ಸವಿವರವಾಗಿ ತಿಳಿಯುತ್ತದೆ. 4ಜಿ ಸ್ಪೀಡಿನ ಇಂಟೆರ್ನೆಟ್ಟು, ಜಗತ್ತನೇ ತನ್ನ ಮುಷ್ಠಿಯೊಳಗೆ ಭದ್ರವಾಗಿಸಿರುವ ಸ್ಮಾರ್ಟ್ ಫೋನುಗಳು, ಜನರೇಟರ್ ಗಳು, ಯುಪಿಎಸ್ಗಳು, ದೇಶದ ಮೂಲೆ ಮೂಲೆಯನ್ನು ಜೋಡಿಸುವ ಹೈ ಸ್ಪೀಡ್ ಟ್ರೈನುಗಳು, ಸಾಗರದ ಆಳೆತ್ತರಕ್ಕೆ ಹತ್ತಿಳಿಯುವ ಹಡಗುಗಳು ಹೀಗೆ ಪ್ರಸ್ತುತ ತಂತ್ರಜ್ಞಾನದ ಲೋಕದಲ್ಲಿ ಇರದಿರುವ ವಸ್ತುಗಳ್ಯಾವುವು? ಇಷ್ಟೆಲ್ಲಾ ಆಧುನಿಕ ಪರಿಕರಗಳ ನಡುವೆ ಅಮೃತವಿಲ್ಲದೆಯೇ ಸಕಾಲಕ್ಕೂ ಅಮರನಾಗಿಬಿಡುವ ಮಾನವ ಇಂದು ಆಗಿರುವುದಾದರೂ ಏನು ಸ್ವಾಮಿ. ಕೇವಲ ನಾಲ್ಕೇ ನಾಲ್ಕು ದಿನದ ಮಳೆಗೆ ಆತ  ಗುಡಿ ಗೋಪುರಾದಿಗಳನ್ನು ತರಗಲೆಗಳಂತೆ  ಕಳೆದುಕೊಂಡು ಅಕ್ಷರಸಹ ಅನಾಥನಾಗುತ್ತಿರುವ ದೃಶ್ಯಾವಳಿಗಳನ್ನು ನೋಡಿದರೆ ದುಃಖ ಹಾಗು ಎದೆನಡುಕಗಳು ಒಟ್ಟೊಟ್ಟಿಗೆ ಮೂಡುತ್ತವೆ. ಪ್ರಸ್ತುತ ಜರುಗತ್ತಿರುವ ಪ್ರಕೃತಿ ವಿಕೋಪಗಳಿಗೆ ಕೇವಲ ಮಳೆಯೊಂದೇ ಕಾರಣವಲ್ಲದಾದರೂ ಇತರೆ ಮತ್ಯಾವುದೇ ಕಾರಣಗಳಾದರೂ ಅದಕ್ಕೆ ಮಾನವನೊಬ್ಬನೇ ನೇರ ಹೊಣೆಗಾರನಾಗುತ್ತಾನೆ ಎಂಬುದರಲ್ಲಿ ಸಂಶಯವೇ ಬೇಡ. ಸೃಷ್ಟಿಯ ಸಮಷ್ಟಿಯಲ್ಲಿ ನಾನೂ ಒಬ್ಬನೇ ಹೊರತು ನಾನೇ ಬೇರೆ, ಪ್ರಕೃತಿಯೇ ಬೇರೆ, ಇಡೀ ಭೂಮಿಯೇ ನನ್ನ ಅನುಭೋಕಕ್ಕೆ ಮಾತ್ರ ಎಂಬ ಭ್ರಮೆಯಲ್ಲಿ ಬದುಕುತ್ತಿರುವ ನಾವುಗಳಿಗೆ ನೇಸರ ಆಗೊಮ್ಮೆ ಹೀಗೊಮ್ಮೆ ಹೀಗೆ ಚಾಟಿ ಏಟನ್ನು ಬೀಸುತ್ತಿರುತ್ತದೆ. ಎಚ್ಚರಿಸುತ್ತಿರುತ್ತದೆ. ಏಟಿನಿಂದ  ಕಲಿಯುತ್ತೇವೆಯೋ ಅಥವಾ ಮತ್ತದೇ ನನ್ನದೇ ಎಲ್ಲವೆಂಬ ಅಮಲಿನಲ್ಲಿ ಕುಣಿಯುತ್ತೇವೆಯೋ ಅದು ನಮ್ಮ್ ನಮ್ಮ ನಾಗರೀಕತೆಯ ವಿವೇಕಕ್ಕೆ ಬಿಟ್ಟ ವಿಚಾರ.

ಮತ್ತಷ್ಟು ಓದು »

21
ಆಗಸ್ಟ್

ಅಜಾತ ಶತ್ರುವಿನ ನೆಪದಲ್ಲಿ ಆಂಧ್ರದ ಬೃಹಸ್ಪತಿಯ ನೆನೆಯುತ್ತ…

– ರಾಕೇಶ್ ಶೆಟ್ಟಿ

ಬದುಕಲಿಕ್ಕೆಂದೇ ದಿನ ಸಾಯುವವರು,ಬೇಗ ಸತ್ತರೆ ಸಾಕೆಂದು ಬದುಕುವವರ ನಡುವೆ, ಸತ್ತು ಬದುಕುವುದು ಹೇಗೆ ಎಂದು ತೋರಿಸಿಕೊಟ್ಟ ಪುಣ್ಯಾತ್ಮರಿಗೆ ಈ ದೇಶದಲ್ಲಿ ಕೊರತೆಯಿಲ್ಲ. ಅದು ಹದಿಹರೆಯದಲ್ಲೇ ನೇಣಿಗೆ ಕೊರಳೊಡ್ಡಿ ಬ್ರಿಟಿಷರ ನಿದ್ದೆಗೆಡಿಸಿದ ಭಗತನಿರಬಹುದು,ಮೈ ಆಜಾದ್ ಹೂಂ ,ಆಜಾದ್ ಹೀ ರಹೂಂಗ ಎಂದು ಬ್ರಿಟಿಷರ ಕೈಗೆ ಕಡೆಯವರೆಗೂ ಸಿಗದೇ ಹುತಾತ್ಮರಾದ ಚಂದ್ರ ಶೇಖರ್ ಆಜಾದ್ ಅವರಿರಬಹುದು,ದೇಶ ಬಿಟ್ಟು ಪರದೇಶದಲ್ಲೊಂದು ಸೈನ್ಯ ಕಟ್ಟಿ ಭಾರತವನ್ನು ದಾಸ್ಯ ಮುಕ್ತ ಮಾಡುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಿಗೂಢ ಕಣ್ಮರೆಯಿರಬಹುದು (ಅವರು ವಿಮಾನಾಪಘಾತದಲ್ಲಿ ಸಾಯಲಿಲ್ಲವೆಂದೇ ಬಲವಾಗಿ ನಂಬುವವನು ನಾನು), ೬೫ರ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿ,ಗಾಂಧಿಯವ ಥಿಯರಿಗಳನ್ನೇ,ವಾಸ್ತವದಲ್ಲಿ ಪಾಲಿಸುವಂತೆ ಬದುಕಿದ ಸಂತ ಲಾಲ್ ಬಹಾದ್ದೂರ್ ಶಾಸ್ತ್ರಿಗಳಿರಬಹುದು,ನೆಹರೂ ಕಾಲದ ಅಡಾಲೆದ್ದು ಹೋದ ಭಾರತದ ಅರ್ಥ ವ್ಯವಸ್ಥೆಯನ್ನು ಬದಲಿಸಿ ಭಾರತದ ಆರ್ಥಿಕ ಪಥವನ್ನೇ ಬದಲಿಸಿ ನಿಲ್ಲಿಸಿದ ಪಿವಿ ನರಸಿಂಹರಾವ್ ಅವರಿರಬಹುದು,ಸ್ವಾತಂತ್ರ್ಯ ಬಂದಾಗಿನಿಂದ ಅದೇ ಕಿತ್ತು ಹೋದ,ಡಾಂಬರು ಕಾಣದ ರಸ್ತೆಗಳನ್ನು ಸುವರ್ಣ ಚತುಷ್ಪತ,ಪ್ರಧಾನ್ ಮಂತ್ರಿ ಗ್ರಾಮೀಣ್ ಸಡಕ್ ಯೋಜನೆಗಳ ಮೂಲಕ ರಾವ್ ಅವರು ಹಾಕಿಕೊಟ್ಟ ಆರ್ಥಿಕ ತಳಹದಿಯ ಮೇಲೆ ನವಭಾರತ ನಿರ್ಮಾಣಕ್ಕೆ ಶರವೇಗ ನೀಡಿದ ಕವಿಹೃದಯಿ ಅಟಲ್ ಬಿಹಾರಿ ವಾಜಪೇಯಿಯವರಿರಬಹುದು… ಹೀಗೆ ಸತ್ತು ಬದುಕುವುದು ಹೇಗೆಂದು ಹೇಳಿಕೊಟ್ಟವರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ರಾಜಕಾರಣಿಯೊಬ್ಬ ಸತ್ತರೆ ಜನ ಸಾಮಾನ್ಯನೊಬ್ಬನಿಗೆ ತನ್ನದೇ ಕುಟುಂಬದ ಸದಸ್ಯನೊಬ್ಬ ಹೊರಟು ಬಿಟ್ಟನಲ್ಲ ಎನ್ನುವಷ್ಟು ದುಃಖವಾಗುತ್ತದೆಯೆಂದರೇ ಅದು ನಿಜಕ್ಕೂ ಬದುಕಿನ ಸಾರ್ಥಕತೆಯೇ ಸರಿ. ಕವಿ ಹೃದಯದ,ವಾಗ್ದೇವಿಯ ವರಪುತ್ರನಂತೆ ಮಂತ್ರಮುಗ್ಧ ವಾಗ್ಮಿಯಾಗಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಅಂತಹದ್ದೊಂದು ಬದುಕನ್ನು ಬದುಕಿ ಉದಾಹರಣೆಯಾಗಿ ಇಲ್ಲಿಂದ ಮುಂದಕ್ಕೆ ಹೊರಟಿದ್ದಾರೆ. ಆಗಸ್ಟ್ ೧೭ರ ಎಲ್ಲಾ ಪತ್ರಿಕೆ,ಚಾನೆಲ್ಲುಗಳ ತುಂಬಾ ವಾಜಪೇಯಿಯವರ ಜೀವನ ಚರಿತ್ರೆ, ಭಾಷಣಗಳು,ವ್ಯಕ್ತಿಚಿತ್ರಣ ತುಂಬಿ ಹೋಗಿತ್ತು.ಈಗಾಗಲೇ ವಾಜಪೇಯಿಯವರ ಬಗ್ಗೆ ಹಲವಾರು ಲೇಖನಗಳು ಬಂದಿವೆ,ಇನ್ನು ಅವರ ಬಗ್ಗೆ ಬರೆಯಲಿಕ್ಕೆ ಉಳಿದಿರುವುದಾದರೂ ಏನು ಅನ್ನಿಸುತ್ತದೆ.ಆದರೆ ಮಹಾನ್ ವ್ಯಕ್ತಿಗಳು ಬದುಕಿದ್ದಾಗ ಮಾತ್ರವಲ್ಲ,ಮರಣದಲ್ಲೂ ಸಂದೇಶಗಳನ್ನು ಬಿಟ್ಟು ಹೋಗುತ್ತಾರೆ ಅಥವಾ ಅವರ ಶಿಷ್ಯರು ಆ ಕೆಲಸವನ್ನು ಮಾಡುತ್ತಾರೆ. ವಾಜಪೇಯಿಯವರ ಅಂತಿಮ ಯಾತ್ರೆ ಅಂತಹದ್ದೊಂದು ಗಟ್ಟಿಯಾದ ಸಂದೇಶವನ್ನು ದೆಹಲಿ ರಾಜಕಾರಣದಲ್ಲಿ ಘಂಟಾಘೋಷವಾಗಿ ಮೊಳಗಿಸಿದೆ. ಅಂತಿಮ ಯಾತ್ರೆಯ ಐದು ಕಿಲೋಮಿಟರ್ರುಗಳನ್ನು ಪ್ರಧಾನಿ ನರೇಂದ್ರ ಮೋದಿ,ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ನಡೆದುಕೊಂಡೇ ಸಾಗಿದರು. ರಸ್ತೆಯ ತುಂಬೆಲ್ಲಾ ಜನಸಾಗರ ಸೇರಿತ್ತು. ರಾಜೀವ್ ಗಾಂಧೀಯವರ ಅವರ ಹತ್ಯೆಯಾಗಿ ಅಂತಿಮ ಯಾತ್ರೆ ನಡೆದಾಗ ಸೇರಿದ್ದು ಬಿಟ್ಟರೆ ದೆಹಲಿ ಮತ್ತೆ ಇಷ್ಟು ಜನರನ್ನು ನೋಡಿದ್ದು ಈಗಲೇ ಎನ್ನುವ ಮಾತುಗಳು ಕೇಳಿಬಂದವು.ನಿಜವಾಗಿಯೂ ದೆಹಲಿಗೆ ೧೪ ವರ್ಷಗಳ ಹಿಂದೆಯೇ ಅಂತಹದ್ದೊಂದು ದಿನ ಬಂದಿತ್ತು.ಅದು ಪಿ.ವಿ ನರಸಿಂಹರಾವ್ ಅವರು ಮರಣ ಹೊಂದಿದ್ದ ದಿನ. ನೆಹರೂ ಕಾಲದ ಹಳಿತಪ್ಪಿ ಅಡಾಲೆದ್ದು ಹೋಗಿದ್ದ ಅರ್ಥಿಕ ನೀತಿಯನ್ನೇ ೯೦ರ ದಶಕದವರೆಗೂ ನಡೆಸಿಕೊಂಡು ಭಾರತವನ್ನು ಜಗತ್ತಿನ ಬಲಾಢ್ಯ ರಾಷ್ಟ್ರಗಳ ಮುಂದೆ ಮಂಡಿಯೂರಿ ದೈನೇಸಿ ಸ್ಥಿಯಲ್ಲಿ ಕುಳಿತಿರುವಂತೆ ಮಾಡಲಾಗಿತ್ತಲ್ಲ,ಆ ಸ್ಥಿತಿಯನ್ನು ಬದಲಿಸಿ ಭಾರತದ ನವ ಆರ್ಥಿಕತೆಯಾ ರೂವಾರಿ,ಆಂಧ್ರದ ಜನರ ಪ್ರೀತಿಯ ಬೃಹಸ್ಪತಿ,ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್ ಅವರು ೨೦೦೪ರಲ್ಲಿ ತಮ್ಮ ದೇಹವನ್ನು ತ್ಯಜಿಸಿದರು. ಆದರೆ,ದೇಶದ ಜನರಿಗೆ ಅಂತಹದ್ದೇನೂ ನಡೆಯಲೇ ಇಲ್ಲ,ಅಸಲಿಗೆ ಆ ವ್ಯಕ್ತಿಯ ಸಾವು ಒಂದು ಸುದ್ದಿಯೇ ಅಲ್ಲವೆನ್ನುವಂತೆ ಮಾಡಿಸುವಲ್ಲಿ ನೆಹರೂ ಪರಿವಾರ ಮತ್ತು ಅವರ ಸಾಕು ನಾಯಿಗಳಂತೆ ವರ್ತಿಸುವವರು ಮಾಡಿದ್ದರು.

ಮತ್ತಷ್ಟು ಓದು »

14
ಆಗಸ್ಟ್

ಪುಣ್ಯಕೋಟಿಯ ವ್ಯಥೆ ಮತ್ತು ಕಾನೂನು ಅವ್ಯವಸ್ಥೆ

– ರಾಕೇಶ್ ಶೆಟ್ಟಿ

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು
ಎಳೆಯ ಮಾವಿನ ಮರದ ಕೆಳಗೆ ಕೊಳಲನೂದುತ ಗೊಲ್ಲ ಗೌಡನು
ಬಳಸಿನಿಂದ ತುರುಗಳನ್ನು ಬಳಿಗೆ ಕರೆದನು ಹರುಷದಿ
ಗಂಗೆ ಬಾರೆ ಗೌರಿ ಬಾರೆ ತುಂಗ ಭದ್ರೆ ತಾಯಿ ಬಾರೆ …

 

 

ಪುಣ್ಯಕೋಟಿಯ ಕಥೆ ಅಚ್ಚಳಿಯದೇ ಮನದಲ್ಲಿ ಉಳಿಯುವಂತೆ ಮಾಡಿದ ಗೋವಿನ ಹಾಡನ್ನು ಕೇಳಿ ಬೆಳೆದವರು ನಾವು. ಆಗಿನ ಕಾಲದ ಗೊಲ್ಲಗೌಡನೇನೋ ತನ್ನ ಮುದ್ದಿನ ಗೋವುಗಳನ್ನು ಹರುಷದಿಂದ ಕರೆಯುವ ಪರಿಸ್ಥಿತಿ ಇತ್ತು. ಆದರೆ ಈಗಿನ ಕರಾವಳಿಯ ಗೋಪಾಲಕರ ಸ್ಥಿತಿ ಯಾವ ಶತ್ರುವಿಗೂ ಬೇಡವೆನಿಸುವಂತಿದೆ. ಕಣ್ಣೆದುರಿಗೆ ಆಡಿ ಬೆಳೆಯುತ್ತಿದ್ದ ಕರುಗಳು, ಲೀಟರ್ಗಟ್ಟಲೆ ಹಾಲು ಕೊಡುತ್ತ  ಜೀವನಾಧಾರವಾಗಿರುವ ಗೋವುಗಳು ರಾತ್ರಿ ಬೆಳಗಾಗುವುದರೊಳಗೆ ಕೊಟ್ಟಿಗೆಯಿಂದ ಕಾಣೆಯಾಗಿರುತ್ತವೆ.ಹಾಗೆಂದು ಈ ಗೋವುಗಳು,ಎಳೆಗರುಗಳೇನೂ ಮಾಯವಾಗುವುದಿಲ್ಲ ಅಥವಾ ಭೂಮಿ ಬಾಯಿಬಿಟ್ಟು ಅವನ್ನು ನುಂಗಿಹಾಕುವುದಿಲ್ಲ. ನಟ್ಟ ನಡುರಾತ್ರಿ ತಲವಾರುಗಳನ್ನಿಡಿದು ನುಗ್ಗುವ ದನಗಳ್ಳರು ಮನೆಯವರನ್ನು ಬೆದರಿಸಿ ಅವರ ಕಣ್ಣೆದುರಿನಲ್ಲಿಯೇ ಸಾಕಿದ ಗೋವುಗಳನ್ನು ಕದ್ದೊಯ್ಯುತ್ತಾರೆ. ಕೇವಲ ಕದ್ದೊಯ್ಯುವುದು ಮಾತ್ರವಲ್ಲ,ಮತ್ತೆ ಬಂದು ಉಳಿದವನ್ನು ಕದ್ದೊಯ್ಯುತ್ತೇವೆ,ನಮ್ಮ ದಾರಿಗೆ ಅಡ್ಡ ಬಂದರೆ ನಿಮ್ಮನ್ನು ಉಳಿಸುವುದಿಲ್ಲವೆಂದು ಧಮಕಿ ಹಾಕಿ ಹೋಗುತ್ತಾರೆ.ಮಂಗಳೂರಿನ ಮೂಡುಶೆಡ್ಡೆಯೊಂದರಲ್ಲೇ ಕಳೆದ ಒಂದೆರಡು ತಿಂಗಳಲ್ಲಿ ೨೦ಕ್ಕೂ ಹೆಚ್ಚು ಹಸುಗಳನ್ನು ದನಗಳ್ಳರು ಕದ್ದೊಯ್ದಿದ್ದಾರೆ.ಮೂಡುಶೆಡ್ಡೆಯ ಜೊತೆಗೆ ಕಾವೂರು,ವಾಮಂಜೂರು,ಕುಳಾಯಿ,ಅತ್ತಾವರ,ಜಪ್ಪಿನಮೊಗರು ಹೀಗೆ ಕರಾವಳಿಯ ಹಲವು ಭಾಗಗಳ ಗೋಪಾಲಕರ,ಬಡರೈತರ ಜೀವನವನ್ನೇ ಹಾಳುಗೆಡವಿದ್ದಾರೆ ಈ ದನಗಳ್ಳರು.

ಇತ್ತಿಚೀಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋ ಒಂದು ಕರಾವಳಿಯ ಗೋಪಾಲಕರ ಸಂಕಟವನ್ನು ಬಿಚ್ಚಿಡುತ್ತದೆ. ದೈಜಿ ವರ್ಲ್ಡ್ ನವರು ಮಾಡಿದ್ದ ಈ ವಿಡಿಯೋದ ಕೇಂದ್ರ ಬಿಂದು ಕೊಣಾಜೆಯ ನಡುಪದವಿನ ಕಲ್ಯಾಣಿ ಅಮ್ಮ. ಒಂದು ಕಾಲದಲ್ಲಿ ಕಲ್ಯಾಣಿ ಅಮ್ಮನ ಕೊಟ್ಟಿಗೆಯಲ್ಲಿ ೫೦ ಗೋವುಗಳಿದ್ದವು.೪೦ ಲೀಟರಿನಷ್ಟು ಹಾಲನ್ನು ಡೈರಿಗೆ ಹಾಕುತ್ತಿದ್ದ ಕಲ್ಯಾಣಿ ಅಮ್ಮನವರು ಒಳ್ಳೆ ಆದಾಯವನ್ನು ಪಡೆಯುತ್ತಿದ್ದರು.ನೆಮ್ಮದಿಯಾಗಿದ್ದ ಕಲ್ಯಾಣಿಯವರ ಕೊಟ್ಟಿಗೆಯ ಮೇಲೆ ದನಗಳ್ಳರ ವಕ್ರದೃಷ್ಟಿ ಬಿದ್ದಿತ್ತು. ೨೦೧೦ರಿಂದ ಈಚೆಗೆ ಶುರುವಾದ ಕಳ್ಳತನದಿಂದಾಗಿ ಇವತ್ತಿಗೆ ಕಲ್ಯಾಣಿ ಅಮ್ಮನವರ ಕೊಟ್ಟಿಗೆ ಬರಿದಾಗಿದೆ.ಮಕ್ಕಳಂತೆ ಸಾಕಿ ಸಲಹುತ್ತಿದ್ದ ಗೋವುಗಳು ಕಾಣೆಯಾದಾಗಲೆಲ್ಲ ಊಟ-ನಿದ್ದೆ ಬಿಟ್ಟು ಕಲ್ಯಾಣಿ ಅಮ್ಮ ಕಣ್ಣೀರು ಹಾಕಿದ್ದಾರೆ.ಮೊದಲ ಬಾರಿ ಕಳ್ಳತನವಾದಾಗ ಪೋಲೀಸರ ಬಳಿ ಹೋಗಿದ್ದೆ,ಅವರು ನನಗೆ ಗದರಿಸಿ ಕಳುಹಿಸಿದರು ನಂತರ ಮತ್ತೆಂದೂ ನಾನು ಪೊಲೀಸ್ ಠಾಣೆಯ ಮೆಟ್ಟಿಲೇರಲಿಲ್ಲ ಎನ್ನುತ್ತಾರೆ ಕಲ್ಯಾಣಿ ಅಮ್ಮ.ಗೋವಿನೊಂದಿಗೆ ಅವಿನಾಭಾವ ಸಂಬಂಧವಿರುವ ಅವರಿಗೆ ಖಾಲಿ ಕೊಟ್ಟಿಗೆಯನ್ನು ನೋಡಲಾಗದೇ,ಈಗ ಮತ್ತೊಂದು ಗೋವನ್ನು ತಂದಿದ್ದಾರೆ.ಅದನ್ನೂ ದನಗಳ್ಳರು ಕದ್ದೊಯ್ಯಬಾರದೆಂದು ಪ್ರತಿರಾತ್ರಿ ಅದರ ಕಾವಲು ಕಾಯುತ್ತ ಕೊಟ್ಟಿಗೆಯ ಹೊರಗೆಯೇ ಮಲಗುತ್ತಿದ್ದಾರೆ ಎಂದರೆ ಕರಾವಳಿಯ ಕಾನೂನು ಅವ್ಯವಸ್ಥೆ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.

ಮತ್ತಷ್ಟು ಓದು »

8
ಆಗಸ್ಟ್

ಬಾಂಗ್ಲಾ ಬಾಂಬ್ ಮತ್ತು ಬೇಜವಾಬ್ದಾರಿ ರಾಜಕಾರಣಿಗಳು

– ರಾಕೇಶ್ ಶೆಟ್ಟಿ

ಬಂಗಾಳಿಗಳ ಬಗ್ಗೆ ಯೋಚಿಸುವಾಗ ಕನಿಕರವಾಗುತ್ತದೆ.ಸ್ವಾತಂತ್ರ್ಯಾ ನಂತರದ ಬರೋಬ್ಬರಿ ಮೂವತ್ತು ವರ್ಷವನ್ನು ಕಾಂಗ್ರೆಸ್ (INC ಮತ್ತು ಬಂಗಾಳಿ ಕಾಂಗ್ರೆಸ್) ಕೈಗೆ ಕೊಟ್ಟು ಪೆಟ್ಟು ತಿಂದು ನಂತರದ ಮೂವತ್ತೇಳು ವರ್ಷಗಳನ್ನು ಕಮ್ಯುನಿಸ್ಟರ ಕೈಯಲಿಟ್ಟು ಹೈರಾಣಾಗಿ ಕಡೆಗೆ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಕ್ಷದ ಕೈಗೆ ರಾಜ್ಯದ ಚುಕ್ಕಾಣಿಯನ್ನು ಕೊಟ್ಟರೂ ಅವರ ಕಷ್ಟಗಳು ಮಾತ್ರ ತೀರಲೇ ಇಲ್ಲ ಬದಲಾಗಿ ಹೆಚ್ಚಾಗುತ್ತಲೇ ಹೋದವು. ಅಯೋಗ್ಯರನ್ನೇ ಆರಿಸಿಕೂರಿಸಿದರೆ ಸಮಸ್ಯೆ ಉಲ್ಬಣವಾಗದೇ ಪರಿಹಾರವಾಗಲು ಸಾಧ್ಯವೇ? “ಊದೋದು ಬಿಟ್ಟು ಬಾರ್ಸೋದ್ ತಗೊಂಡರು” ಎನ್ನುವಂತಹ ಪರಿಸ್ಥಿತಿ ಪಶ್ಚಿಮ ಬಂಗಾಳ ರಾಜ್ಯಕ್ಕೆ ಅನ್ವಯವಾಗುತ್ತದೆ.

ಕಮ್ಯುನಿಸ್ಟರ ಹಿಂಸಾಚಾರ,ಓಲೈಕೆಯ ರಾಜಕಾರಣವನ್ನು ವಿರೋಧಿಸುತ್ತಲೇ ರಾಜಕೀಯ ಅಧಿಕಾರಕ್ಕೇರಿದ ಮಮತಾ ಬ್ಯಾನರ್ಜಿ,೨೦೧೧ರಲ್ಲಿ ಅಧಿಕಾರಕ್ಕೇರಿದ ನಂತರ ಅಳವಡಿಸಿಕೊಂಡಿದ್ದು ಕಮ್ಯುನಿಸ್ಟರ ಹಿಂಸಾಚಾರ,ಓಲೈಕೆಯ ರಾಜಕಾರಣವನ್ನೇ. ಆದರೆ ಕಮ್ಯುನಿಸ್ಟರು ತೀರಾ ಮಮತಾ ಬ್ಯಾನರ್ಜಿಯಷ್ಟು ಕ್ರಿಮಿನಲ್ ಎಲಿಮೆಂಟುಗಳನ್ನು ಸಾಬರನ್ನು ಈ ಮಟ್ಟಕ್ಕೆ ಓಲೈಸುತ್ತಿರಲಿಲ್ಲ ಎನ್ನುತ್ತಾರೆ ಬೆಂಗಾಲಿ ಗೆಳೆಯರು. ಅಧಿಕಾರವನ್ನು ಉಳಿಸಿಕೊಳ್ಳಲಿಕ್ಕಾಗಿ ಮಮತಾ ಯಾವುದೇ ಮಟ್ಟಕ್ಕಾದರೂ ಇಳಿಯಬಲ್ಲರು ಅದು ಮುಂದೆ ದೇಶವನ್ನೇ ಮತ್ತೊಮ್ಮೆ ವಿಭಜನೆಯ ಹಂತಕ್ಕೆ ತಂದಿಡುವಂತದ್ದಾದರೂ ಆಕೆಗದು ಸಮ್ಮತವೇ ಎನಿಸುತ್ತದೆ.ದೇಶಕಂಡ ಅತ್ಯಂತ ಬೇಜವಾಬ್ದಾರಿ ಮತ್ತು ಅಪಾಯಕಾರಿ ರಾಜಕಾರಣಿಗಳ ಪಟ್ಟಿಯಲ್ಲಿ ಸದ್ಯಕ್ಕೆ ಈಕೆಯದ್ದೇ ಅಗ್ರಸ್ಥಾನ.ಅಸ್ಸಾಂ ರಾಜ್ಯದಲ್ಲಿ, ಸುಪ್ರೀಂ ಕೋರ್ಟ್ ಕಣ್ಗಾವಲಿನಲ್ಲಿ ನಡೆಯುತ್ತಿರುವ National Register of Citizens (NRC)ಯ ಅಂತಿಮ ಕರಡು ಪಟ್ಟಿಯ ವಿಷಯದಲ್ಲಿ ಈಕೆ ಮಾಡುತ್ತಿರುವ ಕೊಳಕು ರಾಜಕೀಯ ನೋಡಿದರೆ ಅಧಿಕಾರಕ್ಕೋಸ್ಕರ ದೇಶವನ್ನೇ ಇಬ್ಭಾಗ ಮಾಡಿಸಿದ ನೆಹರೂ-ಜಿನ್ನಾ ಜೋಡಿಯ ಆತ್ಮವೇನಾದರೂ ಈಕೆಯ ಮೇಲೆ ಆವಾಹನೆಯಾಗಿರಬಹುದೇ ಎನ್ನುವ ಅನುಮಾನ ಮೂಡುತ್ತದೆ.

ಮತ್ತಷ್ಟು ಓದು »

7
ಆಗಸ್ಟ್

ದೇಶಕಟ್ಟುವ ಫ್ಯಾಂಟಸಿ..

– ಸುಜಿತ್ ಕುಮಾರ್

Sheikh-Zayed-bin-Sultan-Al-Nahyan-696x464ಇತಿಹಾಸದ ಕಾಲಘಟ್ಟದಲ್ಲಿ ಐವತ್ತು ವರ್ಷಗಳ ಸಮಯ ತೀರಾ ಚಿಕ್ಕದು. ಅರ್ಧ ತಲೆಮಾರಿನ ಈ ಐದು ದಶಕಗಳಲ್ಲಿ ಹೆಚ್ಚೆಂದರೆ ಏನೆಲ್ಲಾ ಜರುಗಬಹುದು ? ಸಾಮಾಜಿಕ ಬೆಳವಣಿಗೆಯ ದೃಷ್ಟಿಯಲ್ಲಿ ನೋಡುವುದಾದರೆ ದಾರಿಕಾಣದ ಹಳ್ಳಿಗಳಿಗೆ ರಸ್ತೆಗಳ ಮೇಣವೊಂದಿಷ್ಟು ಅಂಟಿಕೊಳ್ಳಬಹುದು, ಸೂರು ಕಾಣದ ತಲೆಗಳ ಮೇಲೆ ಸ್ವಂತ ಮನೆಯೊಂದರ ನೆರಳು ಮೂಡಬಹುದು, ಬೆಳಕು ಕಾಣದ ಮನೆಗಳು ಎಲ್ ಇ ಡಿ ಬಲ್ಬುಗಳ ಕಾಂತಿಯಿಂದ ಮಿನುಗಬಹುದು ಅಥವಾ ಅಷ್ಟೂ ಸರ್ಕಾರೀ ಸ್ಕೂಲುಗಳ ಜಾಗದಲ್ಲಿ ತಕಿದಿಮಿತ ಕುಣಿಯುವ ಕಷ್ಟಪಟ್ಟು ಇಷ್ಟಪಡುವ ಪ್ರೈವೇಟ್ ಸ್ಕೂಲುಗಳು ತಲೆಯೆತ್ತಬಹುದು, ಎಲ್ಲವೂ ಗೂಗಲ್ ಇಂಟರ್ನೆಟ್ಮಯವಾಗುವ ಹಾದಿಯಲ್ಲಿ ಮಾನವ ಓದು ಬರಹಗಳನ್ನೇ ಮರೆತು ಕೇವಲ ಮಾಂಸದ ಮುದ್ದೆಯಂತಾಗಲೂಬಹುದು. ಒಟ್ಟಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸರ್ವೋತೋಮುಖ ಅಭಿವೃದ್ಧಿ ಎಂದರೆ ಇವಿಷ್ಟೇ ಎಂದರೂ ಅದು ಉತ್ಪ್ರೇಕ್ಷೆಯಾಗದು! ಆದರೆ ಅಲ್ಲೊಂದು ದೇಶವಿತ್ತು. ದೇಶವೆನ್ನುವುದಕ್ಕಿಂತ ಮರಳುಗಾಡಿನ ರಾಶಿ ರಾಶಿ ಗುಡ್ಡೆಗಳ ಪ್ರದೇಶವೆನ್ನಬಹುದು. ಸುಟ್ಟು ಕರಕಲಾಗುವ ಉರಿಬಿಸಿಲಿಗೆ ಅಲ್ಲಿ ಮಾನವರಾಗಲಿ ಕನಿಷ್ಠ ಒಂದೆರೆಡು ಪ್ರಾಣಿಗಳೂ ಕಾಣಲು ಸಿಗುತ್ತಿರಲಿಲ್ಲ. ನಮ್ಮ ರಾಜ್ಯಕ್ಕಿಂತಲೂ ಸಣ್ಣದಾದ ಆ ಭೂಪ್ರದೇಶ ಅಕ್ಷರ ಸಹ ಮರಳುಗಾಡಿನ ಆಗರ. ಅಲ್ಲೊಂದು ಇಲ್ಲೊಂದು ಗುಂಪು ಜನಗಳು ನೇಸರರಾಜನೊಟ್ಟಿಗೆ ಸೆಣೆಸುತ್ತಾ ವಾಸಿಸುತ್ತಿದ್ದದ್ದು ಬಿಟ್ಟರೆ ಉಳಿದಷ್ಟೂ ಜಾಗ ಬಟಬಯಲಿನ ಜನವಿರಳ ಪ್ರದೇಶವಾಗಿತ್ತು. ದಿನಕ್ಕೊಂದು ಮುಡಿಯಷ್ಟು ಅನ್ನವನ್ನು ಬಿಟ್ಟರೆ ಖರ್ಜೂರದ ಹಣ್ಣುಗಳೇ ಇವರಿಗೆ ಮೂರೊತ್ತಿನ ಆಹಾರ! ವರ್ಷಕೊಮ್ಮೆ ಅಥವಾ ಕೆಲವೊಮ್ಮೆ ಒಮ್ಮೆಯೂ ಬಾರದ ಮಳೆರಾಯನನ್ನು ಇಲ್ಲಿ ಒಂದು ನರಪಿಳ್ಳೆಯೂ ನಂಬಿ ಬದುಕುತ್ತಿರಲಿಲ್ಲ. ಇನ್ನು ನೀರನಂತೂ ಕೇಳಬೇಕೆ, ಅದು ಜಗತ್ತಿನ ಅತಿ ಕೊನೆಯ ಹನಿಯೋ ಎಂಬಂತೆ ಕಾಪಾಡಿಕೊಂಡು ಬರುತ್ತಿದ್ದರು. ಅದೆಷ್ಟೇ ಬಾಯಾರಿದರೂ ದಿನಕೊಂದು ಸಣ್ಣ ಲೋಟದ ನೀರನಷ್ಟೇ ಕುಡಿಯಲು ಶಕ್ತರಾಗಿದ್ದರು! ಇಂತಹ ಬರಬಿದ್ದ ಮರಳು ರಾಶಿಯಲ್ಲಿ ಮೇಲೆ ಹೇಳಿದ ಐವತ್ತು ವರ್ಷಗಳಲ್ಲೇ ಏನೆಲ್ಲಾ ಜರುಗಿರಬಹದು ? ಹಳ್ಳಿಯೊಂದು, ಊರೊಂದು ಹುಟ್ಟಿರಬಹುದು. ಹುಟ್ಟಿದರೂ ಈ ಬೆಂಕಿಯ ನೆಲದಲ್ಲಿ ಜೀವ ಪಣಕ್ಕಿಟ್ಟು ಬದುಕುವುದಕ್ಕಿಂತ ಮೂರ್ಖತನ ಮತ್ತೊಂದಿರದು. ಅಥವಾ ಅಕ್ಕಪಕ್ಕದ ಯಾವುದಾದರೊಂದು ಸದೃಢ ದೇಶ ನ್ಯೂಕ್ಲಿಯರ್ ಪ್ಲಾಂಟ್ಗಳನ್ನೋ ಅಥವಾ ಪವನಶಕ್ತಿ ಕೇಂದ್ರಗಳನ್ನೂ ನಿರ್ಮಿಸಿದ್ದಿರಬಹುದು. ಅಥವಾ ಇದ್ದ ಮೂರು ಮತ್ತೊಂದು ಕುಟುಂಬಗಳೂ ಕಣ್ಮರೆಯಾಗಿ ಕೇವಲ ಬಿಸಿಲಿನ ಮೊರೆತವೇ ಸರ್ವವ್ಯಾಪ್ತಿಯಾಗಿದ್ದಿರಬಹುದು, ಅಲ್ಲವೇ?
ಬಿಲ್ಲಕುಲ್ ಇಲ್ಲ! ಮತ್ತಷ್ಟು ಓದು »