ಪುಣ್ಯಕೋಟಿಯ ವ್ಯಥೆ ಮತ್ತು ಕಾನೂನು ಅವ್ಯವಸ್ಥೆ
– ರಾಕೇಶ್ ಶೆಟ್ಟಿ
ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳಿರುವ
ಕಾಳಿಂಗನೆಂಬ ಗೊಲ್ಲನ ಪರಿಯನೆಂತು ಪೇಳ್ವೆನು
ಎಳೆಯ ಮಾವಿನ ಮರದ ಕೆಳಗೆ ಕೊಳಲನೂದುತ ಗೊಲ್ಲ ಗೌಡನು
ಬಳಸಿನಿಂದ ತುರುಗಳನ್ನು ಬಳಿಗೆ ಕರೆದನು ಹರುಷದಿ
ಗಂಗೆ ಬಾರೆ ಗೌರಿ ಬಾರೆ ತುಂಗ ಭದ್ರೆ ತಾಯಿ ಬಾರೆ …
ಪುಣ್ಯಕೋಟಿಯ ಕಥೆ ಅಚ್ಚಳಿಯದೇ ಮನದಲ್ಲಿ ಉಳಿಯುವಂತೆ ಮಾಡಿದ ಗೋವಿನ ಹಾಡನ್ನು ಕೇಳಿ ಬೆಳೆದವರು ನಾವು. ಆಗಿನ ಕಾಲದ ಗೊಲ್ಲಗೌಡನೇನೋ ತನ್ನ ಮುದ್ದಿನ ಗೋವುಗಳನ್ನು ಹರುಷದಿಂದ ಕರೆಯುವ ಪರಿಸ್ಥಿತಿ ಇತ್ತು. ಆದರೆ ಈಗಿನ ಕರಾವಳಿಯ ಗೋಪಾಲಕರ ಸ್ಥಿತಿ ಯಾವ ಶತ್ರುವಿಗೂ ಬೇಡವೆನಿಸುವಂತಿದೆ. ಕಣ್ಣೆದುರಿಗೆ ಆಡಿ ಬೆಳೆಯುತ್ತಿದ್ದ ಕರುಗಳು, ಲೀಟರ್ಗಟ್ಟಲೆ ಹಾಲು ಕೊಡುತ್ತ ಜೀವನಾಧಾರವಾಗಿರುವ ಗೋವುಗಳು ರಾತ್ರಿ ಬೆಳಗಾಗುವುದರೊಳಗೆ ಕೊಟ್ಟಿಗೆಯಿಂದ ಕಾಣೆಯಾಗಿರುತ್ತವೆ.ಹಾಗೆಂದು ಈ ಗೋವುಗಳು,ಎಳೆಗರುಗಳೇನೂ ಮಾಯವಾಗುವುದಿಲ್ಲ ಅಥವಾ ಭೂಮಿ ಬಾಯಿಬಿಟ್ಟು ಅವನ್ನು ನುಂಗಿಹಾಕುವುದಿಲ್ಲ. ನಟ್ಟ ನಡುರಾತ್ರಿ ತಲವಾರುಗಳನ್ನಿಡಿದು ನುಗ್ಗುವ ದನಗಳ್ಳರು ಮನೆಯವರನ್ನು ಬೆದರಿಸಿ ಅವರ ಕಣ್ಣೆದುರಿನಲ್ಲಿಯೇ ಸಾಕಿದ ಗೋವುಗಳನ್ನು ಕದ್ದೊಯ್ಯುತ್ತಾರೆ. ಕೇವಲ ಕದ್ದೊಯ್ಯುವುದು ಮಾತ್ರವಲ್ಲ,ಮತ್ತೆ ಬಂದು ಉಳಿದವನ್ನು ಕದ್ದೊಯ್ಯುತ್ತೇವೆ,ನಮ್ಮ ದಾರಿಗೆ ಅಡ್ಡ ಬಂದರೆ ನಿಮ್ಮನ್ನು ಉಳಿಸುವುದಿಲ್ಲವೆಂದು ಧಮಕಿ ಹಾಕಿ ಹೋಗುತ್ತಾರೆ.ಮಂಗಳೂರಿನ ಮೂಡುಶೆಡ್ಡೆಯೊಂದರಲ್ಲೇ ಕಳೆದ ಒಂದೆರಡು ತಿಂಗಳಲ್ಲಿ ೨೦ಕ್ಕೂ ಹೆಚ್ಚು ಹಸುಗಳನ್ನು ದನಗಳ್ಳರು ಕದ್ದೊಯ್ದಿದ್ದಾರೆ.ಮೂಡುಶೆಡ್ಡೆಯ ಜೊತೆಗೆ ಕಾವೂರು,ವಾಮಂಜೂರು,ಕುಳಾಯಿ,ಅತ್ತಾವರ,ಜಪ್ಪಿನಮೊಗರು ಹೀಗೆ ಕರಾವಳಿಯ ಹಲವು ಭಾಗಗಳ ಗೋಪಾಲಕರ,ಬಡರೈತರ ಜೀವನವನ್ನೇ ಹಾಳುಗೆಡವಿದ್ದಾರೆ ಈ ದನಗಳ್ಳರು.
ಇತ್ತಿಚೀಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋ ಒಂದು ಕರಾವಳಿಯ ಗೋಪಾಲಕರ ಸಂಕಟವನ್ನು ಬಿಚ್ಚಿಡುತ್ತದೆ. ದೈಜಿ ವರ್ಲ್ಡ್ ನವರು ಮಾಡಿದ್ದ ಈ ವಿಡಿಯೋದ ಕೇಂದ್ರ ಬಿಂದು ಕೊಣಾಜೆಯ ನಡುಪದವಿನ ಕಲ್ಯಾಣಿ ಅಮ್ಮ. ಒಂದು ಕಾಲದಲ್ಲಿ ಕಲ್ಯಾಣಿ ಅಮ್ಮನ ಕೊಟ್ಟಿಗೆಯಲ್ಲಿ ೫೦ ಗೋವುಗಳಿದ್ದವು.೪೦ ಲೀಟರಿನಷ್ಟು ಹಾಲನ್ನು ಡೈರಿಗೆ ಹಾಕುತ್ತಿದ್ದ ಕಲ್ಯಾಣಿ ಅಮ್ಮನವರು ಒಳ್ಳೆ ಆದಾಯವನ್ನು ಪಡೆಯುತ್ತಿದ್ದರು.ನೆಮ್ಮದಿಯಾಗಿದ್ದ ಕಲ್ಯಾಣಿಯವರ ಕೊಟ್ಟಿಗೆಯ ಮೇಲೆ ದನಗಳ್ಳರ ವಕ್ರದೃಷ್ಟಿ ಬಿದ್ದಿತ್ತು. ೨೦೧೦ರಿಂದ ಈಚೆಗೆ ಶುರುವಾದ ಕಳ್ಳತನದಿಂದಾಗಿ ಇವತ್ತಿಗೆ ಕಲ್ಯಾಣಿ ಅಮ್ಮನವರ ಕೊಟ್ಟಿಗೆ ಬರಿದಾಗಿದೆ.ಮಕ್ಕಳಂತೆ ಸಾಕಿ ಸಲಹುತ್ತಿದ್ದ ಗೋವುಗಳು ಕಾಣೆಯಾದಾಗಲೆಲ್ಲ ಊಟ-ನಿದ್ದೆ ಬಿಟ್ಟು ಕಲ್ಯಾಣಿ ಅಮ್ಮ ಕಣ್ಣೀರು ಹಾಕಿದ್ದಾರೆ.ಮೊದಲ ಬಾರಿ ಕಳ್ಳತನವಾದಾಗ ಪೋಲೀಸರ ಬಳಿ ಹೋಗಿದ್ದೆ,ಅವರು ನನಗೆ ಗದರಿಸಿ ಕಳುಹಿಸಿದರು ನಂತರ ಮತ್ತೆಂದೂ ನಾನು ಪೊಲೀಸ್ ಠಾಣೆಯ ಮೆಟ್ಟಿಲೇರಲಿಲ್ಲ ಎನ್ನುತ್ತಾರೆ ಕಲ್ಯಾಣಿ ಅಮ್ಮ.ಗೋವಿನೊಂದಿಗೆ ಅವಿನಾಭಾವ ಸಂಬಂಧವಿರುವ ಅವರಿಗೆ ಖಾಲಿ ಕೊಟ್ಟಿಗೆಯನ್ನು ನೋಡಲಾಗದೇ,ಈಗ ಮತ್ತೊಂದು ಗೋವನ್ನು ತಂದಿದ್ದಾರೆ.ಅದನ್ನೂ ದನಗಳ್ಳರು ಕದ್ದೊಯ್ಯಬಾರದೆಂದು ಪ್ರತಿರಾತ್ರಿ ಅದರ ಕಾವಲು ಕಾಯುತ್ತ ಕೊಟ್ಟಿಗೆಯ ಹೊರಗೆಯೇ ಮಲಗುತ್ತಿದ್ದಾರೆ ಎಂದರೆ ಕರಾವಳಿಯ ಕಾನೂನು ಅವ್ಯವಸ್ಥೆ ಯಾವ ಮಟ್ಟದಲ್ಲಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.