ಮೋದಿ ಸಾಲದ ಶೂಲ – ಗಂಜಿಗಿರಾಕಿಗಳ ಕೋಲಾಹಲ
– ರಾಘವೇಂದ್ರ ಸುಬ್ರಹ್ಮಣ್ಯ
ನಿನ್ನೆ-ಮೊನ್ನೆಯಿಂದಾ ನಮ್ಮ ಮಾಧ್ಯಮಗಳದ್ದು ಒಂದೇ ಗಲಾಟೆ, “ಮೋದಿ ಅಧಿಕಾರವಧಿಯಲ್ಲಿ ಭಾರತದ ಸಾಲದ ಹೊರೆ ಬೃಹತ್ ಪ್ರಮಾಣದಲ್ಲಿ ಹೆಚ್ಚಾಗಿದೆ” ಅಂತಾ ಕೂಗಾಡ್ತಿವೆ. ಇಂಡಿಯಾಟುಡೇ “ಮೋದಿ ಸರ್ಕಾರದ ಅಡಿಯಲ್ಲಿ ಕೇಂದ್ರ ಸಾಲವನ್ನು 50% ಏರಿಕೆಯಾಗಿದೆ” ಅಂತಾ ಶುರುಮಾಡಿದ ಈ ಅರಚಾಟದ ಕಸದಂತಾ ಸುದ್ಧಿಯನ್ನು, ಎಕನಾಮಿಕ್ ಟೈಮ್ಸ್ ಕೂಡಾ ತಾನು ಎರವಲು ಪಡೆದ ಹಾಗೇ ಹಂಚಿತು. ಇವರೆಲ್ಲರೂ ಈ ಸುದ್ಧಿಯನ್ನ ಪಡೆದದ್ದೆಲ್ಲೆಂದಾ? ಕಳೆದ ಶುಕ್ರವಾರ ಕೇಂದ್ರ ಹಣಕಾಸು ಸಚಿವಾಲಯದ “ಸರ್ಕಾರೀ ಸಾಲದ ಸ್ಥಿತಿಪತ್ರದ 8 ನೇ ಆವೃತ್ತಿ” ಬಿಡುಗಡೆಯಾಯಿತು. ಅದರಿಂದ ತಮಗೆ ಬೇಕಾದಷ್ಟೇ ಸುದ್ಧಿಯನ್ನ ಈ ಸುದ್ಧಿಮನೆಗಳು ಹೆಕ್ಕಿತೆಗೆದು, ತಮಗೆ ಬೇಕಾದಂತೆ ತಿರುಚಿ, “ಮೋದಿ ಹೇಗೆ ಭಾರತಕ್ಕೆ ಮಾರಕ” ಎನ್ನುವಂತಾ ತಮ್ಮ ಹಳೇ ಕಥೆಗಳ ದೀಪಕ್ಕೆ ಹೊಂದುವಂತಾ ನಿರೂಪಣೆಯ ಬತ್ತಿಯನ್ನ ಹೊಸೆದರು.
ಈ ಸುದ್ಧಿಗಳು ಬಂದದ್ದೇ ತಡ, ಮೋದಿ ವಿರೋಧಿ ಬಳಗಗಳು ತಮ್ಮ ಮನೆ-ಮನಗಳಲ್ಲಿ ಸದಾಕಾಲ ಉರಿಯುತ್ತಿರುವ ಮೋದಿ ದ್ವೇಷದ ಬೆಂಕಿಗೆ ಇನ್ನೂ ಎರಡು ಲೀಟರ್ ಪೆಟ್ರೋಲ್ ಹೆಚ್ಚೇ ಸುರಿದು, ಈ ಸುದ್ಧಿಯನ್ನು ಎಲ್ಲೆಡೆ ಹರಡಲು ಪ್ರಾರಂಭಿಸಿದರು. “ಮೋದಿನಾಮಿಕ್ಸ್ ನೆಲಕಚ್ಚಿದೆ, ದೇಶದಲ್ಲಿ ಕೆಲಸಗಳೇ ಇಲ್ಲ, ಕೈಗಾರಿಕಾ ಉತ್ಪಾದನೆ ಮೇಲೇಳದಂತೆ ಕುಸಿದಿದೆ, ಇಂತಾ ಸಮಯದಲ್ಲಿ ಮೋದಿ ದೇಶಕ್ಕೆ ಇನ್ನೂ 28ಲಕ್ಷ ಕೋಟಿ ಸಾಲ ಹೆಚ್ಚಿಸಿ ನಮ್ಮನ್ನೆಲ್ಲಾ ಕೊಂದೇಬಿಟ್ಟಿದ್ದಾನೆ. ಚುನಾವಣಾ ಜುಮ್ಲಾಗಳ ಕಾಲ ಮುಗಿಯಿತು, 2019ರಲ್ಲಿ ಜನ ಬಿಜೆಪಿಯನ್ನು ಕಿತ್ತೆಯಸಲಿದ್ದಾರೆ” ಅಂತಾ ಒಂದೇ ಸಮವೆ ಕಿರುಚಾಡುತ್ತಿದ್ದಾರೆ.
ಈ ವಿಚಾರವನ್ನು ಎರಡು ರೀತಿಯಲ್ಲಿ ನಿಭಾಯಿಸಬಹುದು. ಒಂದನೇ ದಾರಿ: “ಜನಕ್ಕೆ ಇದೆಲ್ಲಾ ಅರ್ಥವಾಗೇ ಆಗುತ್ತೆ. ಈ ಕಿರುಚಾಟಗಳೆಲ್ಲಾ ಅರ್ಥಹೀನ ಅಂತಾ ಇವತ್ತಲ್ಲಾ ನಾಳೆ ತಿಳಿದುಕೊಂಡು ಇವನ್ನೆಲ್ಲಾ ನಿವಾಳಿಸಿ ಬದಿಗಿಡ್ತಾರೆ” ಅಂತಾ ಸುಮ್ಮನಾಗುವುದು. ಆದರೆ ಇದನ್ನು ಹಿಂಗೇ ಬಿಟ್ಟರೆ, ಏನೂ ಗೊತ್ತಿಲ್ಲದವರೂ ಇದನ್ನೇ ನಿಜವೆಂದು ನಂಬಿ ಕೂತರೇನು ಕಥೆ? ಇಂಗ್ಲೀಷ್ ಪತ್ರಿಕೆಗಳೇನೋ ಗಾಂಧಿ ಪರಿವಾರದ ಸಂಬಳದಲ್ಲಿವೆ. ತೀರಾ ಉದಯವಾಣಿಯವರೂ ಇದನ್ನೇ ಸತ್ಯವೆಂದು ಬಿಂಬಿಸಿ ಸುದ್ಧಿಪ್ರಕಟಿಸುತ್ತಿದ್ದಾರಲ್ಲಾ! ಅದೂ ದೇಶ ಚುನಾವಣೆಯ ಹೊಸ್ತಿಲಲ್ಲಿರುವಾಗ!! ಆ ಅರ್ಥವಾಗುವ “ಇವತ್ತಲ್ಲಾ ನಾಳೆ” ಅನ್ನೋ ಕಾಲ, ಚುನಾವಣೆ ಮುಗಿದಮೇಲೆ ಬಂದರೇನು ಸುಖ!? ನಾವೇ ದೇಶವನ್ನು ಅವಸಾನದೆಡೆಗೆ ತಳ್ಳಿದಂತಾಯ್ತಲ್ಲಾ! ಹೀಗಿದ್ದಾಗ ಎರಡನೇ ದಾರಿಯೇ ಬೇಕು. ಎರಡನೆಯ ದಾರಿ: “ಇದನ್ನು ಸಾಮಾನ್ಯರಿಗೂ ಅರ್ಥವಾಗುವ ಪದಗಳಲ್ಲಿ ಬಿಡಿಸಿ ಬರೆದು, ಸರಿದಾರಿಗೆಳೆಯುವುದು”. ಈ ಲೇಖನ ಆ ಎರಡನೆಯ ದಾರಿ.
- ಹಾಗಾದರೆ ಹಣಕಾಸು ಸಚಿವಾಲಯದ ಸಾಲಪತ್ರದಲ್ಲಿ ಹೇಳಿರುವ ವಿಚಾರಗಳು ಸುಳ್ಳೇ?
- ಈ ಪತ್ರಿಕೆಗಳು ಹೇಳುತ್ತಿರುವ ವಿಚಾರಗಳು ಸುಳ್ಳೇ?
- ಮೋದಿಯನ್ನು ಸಮರ್ಥಿಸುವ ಭರದಲ್ಲಿ, ನಾನು ಈ ದೇಶದ ಮೇಲೆ ಸಾಲವೇ ಇಲ್ಲ ಅಂತಾ ಹೇಳುತ್ತಿದ್ದೇನೆಯೇ?
ಇಲ್ಲ… ಖಂಡಿತಾ ಇಲ್ಲ. ಹಣಕಾಸು ಸಚಿವಾಲಯದ ವರದಿ ಸತ್ಯವೇ. ದೇಶದ ಮೇಲೆ ಸಾಲವಿರುವುದೂ ನಿಜ. ಅದು ಹೆಚ್ಚಿರುವುದೂ ನಿಜ. ಆದರೆ ನಮ್ಮ ಪತ್ರಿಕೆಗಳು ಬರೆದದ್ದು ಮಾತ್ರ ಅರ್ಧಸತ್ಯ. ಸಾಲದಿಂದ ದೇಶದ ಕುತ್ತಿಗೆ ಹಿಸುಕಿ, ಮೋದಿ ಭಾರತವನ್ನ ಕೊಲ್ಲುತ್ತಿದ್ದಾನೆ ಎನ್ನುತ್ತಿದ್ದಾರಲ್ಲಾ, ಅದು ಸುಳ್ಳು. ದೇಶದ ಕಥೆ ಮುಗಿದೇ ಹೋಯ್ತು, ಇದನ್ನ ಸರಿಪಡಿಸಲು ಅವನನ್ನ ಅಧಿಕಾರದಿಂದ ಇಳಿಸಬೇಕು ಅನ್ನುತ್ತಿದ್ದಾರಲ್ಲಾ, ಅದು ಕ್ರಿಮಿನಲ್ ಮಟ್ಟದ ಅಪ್ಪಟ ಸುಳ್ಳು.
ಮೊದಲನೆಯದಾಗಿ, ದೇಶದ ಸಾಲವೆಂದರೆ ನಾನು ನೀವು ಸ್ಟೇಟ್-ಬ್ಯಾಂಕೋ ಅಥವಾ ಐಸಿಐಸಿಐ ಬ್ಯಾಂಕಿಂದಲೋ ಪಡೆದ ಪರ್ಸನಲ್ ಲೋನ್ ಅಥವಾ ಬೈಕ್ ಲೋನುಗಳಂತಲ್ಲ. ಮ್ಯಾಕ್ರೋ-ಎಕಾನಮಿಕ್ಸಿನ ನೀತಿಗಳು ಮತ್ತವು ಕೆಲಸ ಮಾಡುವ ರೀತಿ ಸ್ವಲ್ಪ ಭಿನ್ನ. ಒಬ್ಬ ವ್ಯಕ್ತಿ ಅಥವಾ ಸಣ್ಣ ಸಂಸ್ಥೆಗಳ ವಿಷಯದಲ್ಲಿ ಸಾಲ ಎನ್ನುವುದು ಬಾಧ್ಯತೆಯಾದರೆ, ದೊಡ್ಡ ಸಂಸ್ಥೆಗಳ ಅಥವಾ ದೇಶದ ಅರ್ಥಶಾಸ್ತ್ರವನ್ನು ಅವಲೋಕಿಸುವಾಗ ಸಾಲ ಎನ್ನುವುದು ಒಂದು ಹಂತದವರೆಗೆ ಲಾಭಾದಾಯಕವಾಗಿಯೇ ಇರುತ್ತದೆ. ದೇಶದ ಸಾಲ ಎಷ್ಟೋಬಾರಿ “ಹೂಡಿಕೆದಾರರ ವಿಶ್ವಾಸ”ವನ್ನೂ (investor confidence) ತೋರಿಸುತ್ತದೆ. ಆದರೆ ಅದಕ್ಕೆ ತಕ್ಕುದಾದ ಬೆಳವಣಿಗೆ ದೇಶದಲ್ಲಿರಬೇಕು, ಅಷ್ಟೇ. ಕುಂಠಿತ ಜಿಡಿಪಿಯ ಜೊತೆಗೇ ದೇಶದಲ್ಲಿ ಆರ್ಥಿಕ ಬೆಳವಣಿಗೆಯಿಲ್ಲದಾಗ ಸಾಲವೆನ್ನುವುದು ಹೊರೆಯಾದರೆ, ಧನಾತ್ಮಕ ಜಿಡಿಪಿ ಬೆಳವಣಿಗೆಯೊಂದಿಗೆ ಹೆಚ್ಚಿದ ಸಾಲ “ನಿಮ್ಮ ದೇಶ ಹೇಗೆ ಅಂತರರಾಷ್ಟ್ರೀಯ ಹೂಡಿಕೆಗೆ ಸೂಕ್ತ ಜಾಗ” ಎನ್ನುವುದನ್ನು ತೋರಿಸುತ್ತದೆ. ಇದು ಬುದ್ಧಿವಂತ ಅರ್ಥಶಾಸ್ತ್ರಜ್ಞರಿಗೆ ಮಾತ್ರವಲ್ಲ, ಕೆಲ ಸರಳ ಆರ್ಥಿಕ ವಿದ್ಯಮಾನಗಳನ್ನು ಅರಿತಿರುವ ಅತ್ಯಂತ ಸಾಮಾನ್ಯರಿಗೂ ಅರ್ಥವಾಗುವ ವಿಚಾರ.
ವಾಸ್ತವದಲ್ಲಿ, ಭಾರತದ ಸಾಲಸ್ಥಿತಿ ಆರೋಗ್ಯಕರವಾಗಿಯೇ ಇದೆ. ಇನ್ನೂ ಗಟ್ಟಿಯಾಗಿ ಹೇಳಬೇಕೆಂದರೆ, ಭಾರತ ಈ ವಿಚಾರದಲ್ಲಿ ಬೇರೆಷ್ಟೋ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ದೇಶಗಳಿಗಿಂತಾ ಸುಸ್ಥಿರವಾಗಿದೆ.ವಿತ್ತೀಯ ಕೊರತೆಯನ್ನು ಸರಿದೂಗಿಸಲು ಕೇಂದ್ರ ಸರ್ಕಾರಗಳು ದೇಶದ ಹೊರಗಿನ ಮತ್ತು ಒಳಗಿನ ಮೂಲಗಳಿಂದಾ ಸಾಲ ಪಡೆಯುವುದು ಸರ್ವೇಸಾಮಾನ್ಯ. ವರ್ಷಾನುವರ್ಷದ ಈ ವಿತ್ತೀಯ ಕೊರತೆಗಳ ಮೊತ್ತವೇ ಸರ್ಕಾರೀ ಸಾಲ ಅಥವಾ ದೇಶದ ಸಾಲ.ಕೆಲಬಾರಿ ಖಾಸಗೀ ಸಂಸ್ಥೆಗಳು ಬಾಹ್ಯಮಾರುಕಟ್ಟೆಯಿಂದ ಪಡೆದ ಸಾಲಗಳೂ, ಸರ್ಕಾರದ ಗ್ಯಾರಂಟಿಯ ಮೇಲೆ ಯಾವುದಾದರೂ ಖಾಸಗೀ ಸಂಸ್ಥೆ ಅಥವಾ PPP ಸಂಸ್ಥೆಗಳು ಪಡೆದ ಸಾಲವೂ, ಈ “ದೇಶದ ಸಾಲ” ಎಂಬ ಕೆಟಗರಿಯಡಿಯಲ್ಲಿಯೇ ಬರುತ್ತದೆ. ಆ ಸಾಲಗಳಿಂದಾ ಸರ್ಕಾರಕ್ಕೆ ಒಂದು ರೂಪಾಯಿಯೂ ಬರದಿದ್ದರೂ, ಅದು ದೇಶದ ಸಾಲದ ಲೆಕ್ಕಕ್ಕೇ ಸೇರುತ್ತದೆ. ಕಳೆದ ಕೆಲ ದಶಕಗಳಿಂದ ಸರ್ಕಾರೀ ಸಾಲ ಹೆಚ್ಚುತ್ತಲೇ ಬಂದಿದೆ. ಇಲ್ಲಿ ನಾವು ಅವಲೋಕಿಸಬೇಕಾದ ಮುಖ್ಯವಿಚಾರವೆಂದರೆ ಈ ಸಾಲಗಳ ಸಮರ್ಥನೀಯತೆ. ಅಂದರೆ, ಈ ಸಾಲ ಪಡೆದದ್ದು ಸರಿಯೇ? ಅದನ್ನು ಮತ್ತದರ ಬಡ್ಡಿಯನ್ನು ಹೊರುವ ತಾಕತ್ತು ನಮಗಿದೆಯೇ? ಈ ಸಮರ್ಥನೀಯತೆಯನ್ನು ಅಳೆಯುವುದು ಹೇಗೆ? ಅರ್ಥಶಾಸ್ತ್ರಜ್ಞರು ಇದಕ್ಕೆ ಸಾಲ ಮತ್ತು ಜಿಡಿಪಿ ನಡುವಿನ ಅನುಪಾತ (Debt to GDP ratio)ವನ್ನು ಬಳಸುತ್ತಾರೆ. ಯಾಕೆಂದರೆ ಜಿಡಿಪಿ ಹೆಚ್ಚಾದಂತೆ, ಸರ್ಕಾರದ ಆದಾಯ ಹೆಚ್ಚಾಗುತ್ತದೆ. ಆದಾಯ ಹೆಚ್ಚಿದಂತೆ ಸರ್ಕಾರದ ಸಾಲ ತೀರಿಸುವ ಅಥವಾ ಹೆಚ್ಚುವರಿ ಸಾಲ ಪಡೆಯುವ ಸಾಮರ್ಥ್ಯವೂ ಹೆಚ್ಚುತ್ತದೆ. ಹಾಗಾಗಿ ನಾವು ನೋಡಬೇಕಾಗಿರುವುದು ಸಾಲದ ಲೆಕ್ಕವಲ್ಲ, ಸಾಲ-ಜಿಡಿಪಿ ಅನುಪಾತವನ್ನು. ಸಾಲದ ಬಗ್ಗೆ ಮಾತನಾಡಲೇ ಬೇಕೆಂದಿದ್ದಲ್ಲಿ, ಅದರೊಟ್ಟಿಗೆ ಈ ಅನುಪಾತದ ಬಗ್ಗೆಯೂ ಮಾತನಾಡಲೇ ಬೇಕು. ಇಲ್ಲವಾದಲ್ಲಿ ಆ ಚರ್ಚೆಗೆ ಅರ್ಥವೇ ಇಲ್ಲ. ನಮ್ಮ ಮಾಧ್ಯಮಗಳ ವರದಿ ಎಡವುತ್ತಿರುವುದು ಇಲ್ಲಿಯೇ. ಅರ್ಧಸತ್ಯದಲ್ಲಿ ತಮ್ಮ ದ್ವೇಷಸಾಧನೆಯ ಕೆಲಸ ಮುಗಿಯುತ್ತಿರುವಾಗ, ಅವರಾದರೂ ಯಾಕೆ ಪೂರ್ತಿ ವಿಷಯ ಹೇಳಿಯಾರು ಹೇಳಿ?
ಪೂರ್ತಿ ವಿಷಯ ನಾವು ಹೇಳ್ತೀವಿ ಕೇಳಿ. ಭಾರತದ ಸಾಲ ಮತ್ತು ಜಿಡಿಪಿಯ ಅನುಪಾತ 2010ರಿಂದಲೂ 44-47%ರ ಆಸುಪಾಸಿನಲ್ಲೇ ಇದೆ ಮತ್ತದು ಮೋದಿಯ ಅಧಿಕಾರವಧಿಯಲ್ಲಿ ಸುಧಾರಿಸಿದೆ ಕೂಡಾ
2013ರಲ್ಲಿ 46.98%ರಲ್ಲಿದ್ದ ಕೇಂದ್ರ ಸಾಲ-ಜಿಡಿಪಿಯ ಅನುಪಾತ, 2017ರಲ್ಲಿ ಸುಧಾರಿಸಿ 45.11%ಕ್ಕೆ ತಲುಪಿತು. ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡರ ಸಾಲವನ್ನೂ ಸೇರಿಸಿದರೆ, ಆ ಒಟ್ಟಾರೆ ಸಾಲ-ಜಿಡಿಪಿ ಅನುಪಾತ 2010ರಿಂದಲೂ 67-72% ಆಸುಪಾಸಿನಲ್ಲೇ ಇದೆ. ಇದು 2024ರವರೆಗೂ ಇಳಿಮುಖದಲ್ಲೇ ಸಾಗುವ ನಿರೀಕ್ಷೆಯಿದೆ. ಹೇಗೆ ನೋಡಿದರೂ ಈ ಸಾಲ 100%ಗಿಂತಾ ಕೆಳಗಿದೆ, ಅಂದರೆ “ಅಗತ್ಯಬಿದ್ದಲ್ಲಿ ಇನ್ನೂ ಸಾಲ ಪಡೆಯಲು ನಾವು ಯೋಗ್ಯರು”. ಹೀಗಂತಾ ನಾನು ಹೇಳ್ತಿಲ್ಲ. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ವರದಿಯೇ ಹೇಳುತ್ತೆ.
ಈ ಮಾಧ್ಯಮ ವರದಿಗಳು, ತಮ್ಮ ಮೂಲವಾದ ಹಣಕಾಸು ಸಚಿವಾಲಯದ ಪತ್ರಿಕಾ ಪ್ರಕಟಣೆಯನ್ನಾದರೂ ಪೂರ್ತಿಯಾಗಿ ಪ್ರಕಟಿಸಿದರೇ? ಇಲ್ಲ. ಇಲ್ಲಿ ನೋಡಿ, ಆ ಪ್ರಕಟಣೆ, ನಮ್ಮ ಸರ್ಕಾರದ ಸಾಲದ ಬಗ್ಗೆ ಹೀಗೆ ಹೇಳುತ್ತದೆ –
“ಕೇಂದ್ರ ಸರ್ಕಾರದ ಒಟ್ಟಾರೆ ಸಾಲಗಳು ಮಧ್ಯಮಾವಧಿಯಲ್ಲಿ ಕುಸಿತದ ಪಥದಲ್ಲಿವೆ ಮತ್ತು ಸರ್ಕಾರದ ಸಾಲನೀತಿ ವಿವೇಚನೆ ಮತ್ತು ವಿವೇಕಯುಕ್ತವಾದ ಅಪಾಯಗಳಿಗಷ್ಟೇ ಕೈಹಾಕುವ ಗುಣಲಕ್ಷಣಗಳನ್ನು ಹೊಂದಿದೆ. ಸರ್ಕಾರ ತನ್ನ ಹಣಕಾಸಿನ ಕೊರತೆಯನ್ನು ನೀಗಿಸುವುದಕ್ಕಾಗಿ, ಅಪಾಯಕಾರಿ ಯೋಜನೆಗಳಿಗೆ ಕೈ ಹಾಕದೇ, ಮಾರುಕಟ್ಟೆ-ಸಂಬಂಧಿತ ಸಾಲಗಳನ್ನಷ್ಟೇ ಅವಲಂಬಿಸಿದೆ. ನಾವು ಈ ಸಾಲಗಳ ಸಮರ್ಥನಾ ಸೂಚ್ಯಂಕಗಳಾದ ಸಾಲ/ಜಿಡಿಪಿ ಅನುಪಾತ, ಹಿಂದಿನ ಸಾಲಗಳಿಗೆ ನಿಯಮಿತವಾಗಿ ಪಾವತಿಸಲಾದ ಬಡ್ಡಿ, ಒಟ್ಟು ಸಾಲದಲ್ಲಿ ಅಲ್ಪಾವಧಿಯ ಸಾಲವೆಷ್ಟು / ಬಾಹ್ಯ ಸಾಲವೆಷ್ಟು / ವಿದೇಶಿ ವಿನಿಮಯ ಮೀಸಲು ಬಾಂಡ್ಗಳೆಷ್ಟು ಎಂಬಿತ್ಯಾದಿಗಳನ್ನು ಗಮನಿಸಿದರೆ, ಸರ್ಕಾರದ ಸಾಲ ಪರಿಸ್ಥಿತಿ ಅತ್ಯುತ್ತಮ ಪರಿಸ್ಥಿತಿಯಲ್ಲಿದೆ ಮತ್ತು ಸತತವಾಗಿ ಸುಧಾರಿಸುತ್ತಿದೆ ಎಂಬುದು ಕಂಡುಬರುತ್ತಿದೆ”.
ಆದರೆ ನಮ್ಮ ಮಾಧ್ಯಮಗಳು ಇವಿಷ್ಟೂ ಸಾಲುಗಳನ್ನು ಮುಚ್ಚಿಟ್ಟು, ಕೇವಲ “ಸಾಲದಲ್ಲಿ 50% ಹೆಚ್ಚಳವಾಗಿದೆ” ಅಂತಾ ಬಾಯಿಬಡಿದುಕೊಳ್ಳುತ್ತಿವೆ. ಒಂದು ವಿಷಯ ತಿಳಿದಿರಲಿ. ಸಾಲವಿಲ್ಲದ ದೇಶವೇ ಇಲ್ಲ. ಜಗತ್ತಿನ ಶ್ರೀಮಂತ ದೇಶವಾದ ಲಕ್ಸೆಂಬರ್ಗ್,ಕತಾರ್’ನಿಂದ ಹಿಡಿದು ಅತೀ ಬಡ ದೇಶಗಳಾದ ಡೆಮೋಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಮೊಝಾಂಬಿಕ್’ವರೆಗೆ ಎಲ್ಲರ ತಲೆಮೇಲೂ ಸಾಲವಿದೆ. ಇವುಗಳ ಮಧ್ಯದಲ್ಲಿರುವ ಅಮೇರಿಕಾ, ಸೌದಿ ಅರೇಬಿಯಾ, ಜರ್ಮನಿ, ಚೀನಾ, ಆಸ್ಟ್ರೇಲಿಯಾ, ಘಾನಾ, ತುರ್ಕಮೇನಿಸ್ತಾನ ಎಲ್ಲ ದೇಶಗಳಿಗೂ ಸಾಲವಿದ್ದೇ ಇರುತ್ತದೆ. ಬೇರೆ ಬೇರೆ ರೂಪದಲ್ಲಿದೆ ಅಷ್ಟೇ. ಇವೆಲ್ಲವುಗಳ ಸಾಲವೂ ವರ್ಷಾನುವರ್ಷ ಹೆಚ್ಚುತ್ತಲೇ ಇದೆ. ಹಾಗೂ ನಮಗಿಂತಾ ಹೆಚ್ಚಿನ ಸಾಲದ ‘ಹೊರೆ’ ಅವುಗಳ ಮೇಲಿದೆ. ಉದಾಹರಣೆಗೆ ಭಾರತದ ಒಟ್ಟು ಸಾಲ 82 ಲಕ್ಷ ಕೋಟಿ ರೂಪಾಯಿ (529 ಬಿಲಿಯನ್ ಡಾಲರ್), ಪ್ರತಿ ಪ್ರಜೆಯ ಮೇಲೆ 380 ಡಾಲರ್ ಸಾಲ. ಅಮೇರಿಕಾದ ಒಟ್ಟು ಸಾಲ 16,284 ಬಿಲಿಯನ್ ಡಾಲರ್ (ಪ್ರತಿ ಪ್ರಜೆಯ ಮೇಲೆ 58,200 ಡಾಲರ್ ಸಾಲ), ಜರ್ಮನಿಯ ಒಟ್ಟು ಸಾಲ 5,398 ಬಿಲಿಯನ್ ಡಾಲರ್ (ಪ್ರತಿ ಪ್ರಜೆಯ ಮೇಲೆ 65,600 ಡಾಲರ್ ಸಾಲ). ಆದರೆ, ಅದೇನೂ ಗಾಬರಿ ಪಡುವಂತಾ ವಿಷಯವಲ್ಲ. ಅದಕ್ಕೇ ಅಲ್ಲಿನ ಮಾಧ್ಯಮಗಳು ಇವುಗಳ ಬಗ್ಗೆ ಬಾಯಿಬಡಿದುಕೊಂಡಿಲ್ಲ. ಯಾಕೆಂದರೆ ದೇಶಗಳು ಸಾಲವೆಂದರೆ “ತೀರಿಸಬೇಕಾದ ಮೊತ್ತ”ವೆಂದಷ್ಟೇ ನೋಡುವುದಿಲ್ಲ. ಅವುಗಳ ಮೂಲಕ ಪರಸ್ಪರ ನಂಬಿಕೆಯನ್ನೂ ಭಾಂಧವ್ಯವನ್ನೂ ಹೆಚ್ಚಿಸಿಕೊಳ್ಳುತ್ತವೆ. ಆದರೆ ಅದಕ್ಕೆ ಪೂರಕವಾದ ಜಿಡಿಪಿ ಬೆಳವಣಿಗೆಯಿರಬೇಕಷ್ಟೇ. ಇದೇ ಅಂಶ, ಹಿಂದಿನ ಸರ್ಕಾರಗಳ ಸಾಲ ಏರಿಕೆಯನ್ನೂ ಮೋದಿಯ ಅವಧಿಯ ಸಾಲ ಏರಿಕೆಯನ್ನೂ ವಿಭಿನ್ನವಾಗಿಸುವುದು.
ನಿಜಕ್ಕೂ ಸಾಲ ಏರಿಕೆ ತಲೆಕೆಡಿಸಿಕೊಳ್ಳುವ ವಿಷಯವಲ್ಲವೆಂದು ಪ್ರತಿಪಕ್ಷಗಳಿಗೂ ಗೊತ್ತು. ಆದರೆ ಎಲ್ಲಾ ಸುದ್ಧಿಗಳನ್ನೂ ಮುಖಬೆಲೆಗೇ ನಂಬುವಂತಾ ಮೂರ್ಖ ಪ್ರಜೆಗಳನ್ನು ಹೆದರಿಸುವ ಯೋಜನೆಯಿಂದ ಹೀಗೆಲ್ಲಾ ಕೂಗಾಡುತ್ತಿವೆ. ಈಗ ಇವುಗಳ ಕೂಗಾಟವನ್ನೇ ನೋಡಿ. “ಮೋದಿಯ ಅಧಿಕಾರವಧಿಯಲ್ಲಿ ಸಾಲ 49-50% ಹೆಚ್ಚಾಗಿದೆ” ಅಂತಾ ಕೂಗುತ್ತಾ ಇದ್ದಾರಲ್ಲ, ಯಾರಾದರೂ ಈ ಏರಿಕೆಯ ಪ್ರಮಾಣ ಹಿಂದಿನ ಸರ್ಕಾರಗಳ ಅವಧಿಯಲ್ಲೆಷ್ಟಿತ್ತು! ಅಂತಾ ನೋಡಿದ್ದಾರೆಯೇ? ಇಲ್ಲ, ಯಾಕೆಂದರೆ ಅದು ಯಾರಿಗೂ ಬೇಕಾಗಿಲ್ಲ. ಅದನ್ನು ತೋರಿಸಿದರೆ ಜನರನ್ನು ಹೆದರಿಸಲಿಕ್ಕಾಗುವುದಿಲ್ಲವಲ್ಲ. ಕೆಳಗಿನ ಚಿತ್ರ ನೋಡಿ, ಯುಪಿಎ-1 ಮತ್ತು ಯುಪಿಎ-2ರ ಅವಧಿಯಲ್ಲಿ ಕೇಂದ್ರಸರ್ಕಾರದ ಸಾಲ ಕ್ರಮವಾಗಿ 68% ಮತ್ತು 89%ರಷ್ಟು ಹೆಚ್ಚಾಗಿತ್ತು. ಒಟ್ಟಾರೆಯಾಗಿ, ವಾಜಪೇಯಿಯವರ ಸರ್ಕಾರದ ಅವಧಿ ಮುಗಿದಾಗ ಅಂದರೆ 2004ರಲ್ಲಿ 17.2ಲಕ್ಷ ಕೋಟಿಯಿದ್ದ ಸಾಲ, ಯುಪಿಎ 10 ವರ್ಷಗಳಲ್ಲಿ ಮೂರು ಪಟ್ಟು, ಅಂದರೆ 300%, ಹೆಚ್ಚಾಗಿದೆ! ಈ ಅವಧಿಯಲ್ಲಿ ಭಾರತದ ಜಿಡಿಪಿ ಎಷ್ಟು ಏರಿತು? ದೇಶದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳೆಷ್ಟು? “10, ಜನಪಥ್ ರಸ್ತೆ”ಯ ಮನೆಯವರ ಆಸ್ತಿ ಹೆಚ್ಚಾಗಿದ್ದು ಬಿಟ್ಟರೆ, ದೇಶದಲ್ಲಿ ಯಾವ ಸೂಚ್ಯಂಕ ಮೇಲೇರಿತು? ದೇಶವನ್ನು ಒಂದಾದ ನಂತರ ಒಂದರಂತೆ ಹಗರಣಗಳ ಸಾಲನ್ನೇ ಕೊಟ್ಟರಷ್ಟೇ ಹೊರತು, ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾರ ಪ್ರೀತಿ ಗಳಿಸಿಕೊಂಡಿರಿ? ಮತ್ತ ಮತ್ತೆ ಅಮನ್-ಕೀ-ಆಶಾ ಅನ್ನೋ ಕಾರ್ಯಕ್ರಮದ ಮೂಲಕ ಪಾಕಿಸ್ಥಾನದ ಓಲೈಕೆ ಮಾಡಹೋಗಿ, ಮುಂಬೈ ನರಮೇಧವನ್ನು ಮೈಮೇಲೆಳೆದುಕೊಂಡಿದಷ್ಟೇ. ಬೇರಾವ ಸಾಧನೆ ನಿಮ್ಮಿಂದಾಯ್ತು? ಅಂತಾ ಕಾಂಗ್ರೆಸ್ಸಿಗರನ್ನು ಕೇಳಿ ನೋಡಿ. ಮಾತಿಲ್ಲದೇ ಪೇರಿ ಕೀಳುತ್ತಾರೆ. ನಿಮ್ಮನ್ನು ಚಡ್ಡಿ, ರಾಷ್ಟ್ರವಾದಿ, ಭಕ್ತನೆಂದು ನಿಂದಿಸುತ್ತಾರೆ, ಅಷ್ಟೇ.
17.2 ಲಕ್ಷ ಕೋಟಿಯಿದ್ದ ಸಾಲವನ್ನು 2014ರಲ್ಲಿ ಮೋದಿಯ ಕೈಗೆ ಹಸ್ತಾಂತರಿಸುವಾಗ, ಮುನ್ನೂರು ಪಟ್ಟು ಏರಿಸಿ 55 ಲಕ್ಷ ಕೋಟಿ ಮಾಡಿ ಕೊಟ್ಟಿರಲ್ಲಾ ಕಾಂಗ್ರೆಸ್ಸಿಗರೇ, ಇದನ್ನೇಕೆ ನಿಮ್ಮ “ಮೋದಿ ಸಾಲವನ್ನ 49% ಹೆಚ್ಚಿಸಿದ” ಎಂಬ ಕೂಗಿನಲ್ಲಿ ಸೇರಿಸುವುದಿಲ್ಲ!? ಆಗ ನಿಮ್ಮ ಪ್ರಚಾರಕ್ಕೆ ಹೊಡೆತ ಬೀಳುತ್ತದೆಯೆಂದೇ? ಅದೂ ಹೌದೆನ್ನಿ, ಜನರನ್ನು ಕತ್ತಲೆಯಲ್ಲಿಟ್ಟು ನಿಮ್ಮ ಬೇಳೆ ಬೇಯಿಸಿಕೊಳ್ಳುವುದೇ ನಿಮ್ಮ ಪಕ್ಷದ ಬಂಡವಾಳವಲ್ಲವೇ? “ನಮಗೆಷ್ಟು ಬೇಕೋ ಅಷ್ಟನ್ನೇ ತೋರಿಸುತ್ತೇವೆ, ಅದನ್ನೇ ಕೂಗುತ್ತೇವೆ” ಎಂಬ ನಿಮ್ಮ ಆಷಾಡಭೂತಿತನಕ್ಕೆ ಧಿಕ್ಕಾರವಿರಲಿ.
ಓದುಗರೇ, ನೆನಪಿರಲಿ….ಬಾಹ್ಯಸಾಲದ (ವಿದೇಶಿ ಸರ್ಕಾರಗಳಿಂದ ಮತ್ತು ವಿದೇಶಿ ಸಂಸ್ಥೆಗಳಿಂದ ಎರವಲು ಪಡೆದ ಹಣ) ವಿಚಾರಕ್ಕೆ ಬಂದಾಗ, ಈ ಸಾಲ ಯುಪಿಎ- 1ರ ಅವಧಿಯಲ್ಲಿ 443%, ಮತ್ತು ಯುಪಿಎ -2 ರ ಅವಧಿಯಲ್ಲಿ 60% ಹೆಚ್ಚಳವಾಗಿದೆ ಮತ್ತು ಮೋದಿ ಸರಕಾರದ ಅವಧಿಯಲ್ಲಿ ಇದು ಕೇವಲ 0.04%ರಷ್ಟು ಹೆಚ್ಚಾಗಿದೆ. ಹಣಕಾಸು ಸಚಿವಾಲಯ ತನ್ನ ಹೇಳಿಕೆಯಲ್ಲಿ ಒತ್ತು ನೀಡಿದಂತೆ, “ಕೇಂದ್ರ ಸರಕಾರ ಯಾರದ್ದೋ ಮುಂದೆ ಕೈಚಾಚಿ ನಿಲ್ಲುವುದರ ಬದಲು, ಪ್ರಾಥಮಿಕವಾಗಿ, ಹಣಕಾಸಿನ ಕೊರತೆಯ ನಿವಾರಣೆಗೆ ಆರ್ಥಿಕ ನೆರವನ್ನು (ಪಕ್ಕಾ ಬ್ಯುಸಿನೆಸ್-ಮ್ಯಾನ್’ನಂತೆ) ಮಾರುಕಟ್ಟೆ-ಸಂಬಂಧಿತ ಸಾಲಗಳಿಂದ ಪಡೆದಿದೆ. ಉಳಿದ ಸಾಲ ಅನಿವಾಸಿ ಭಾರತೀಯರಿಂದ ಪಡೆದ ಸಾಲ, ಅಭಿವೃದ್ಧಿಶೀಲ ದೇಶಗಳಿಗೆ ನೀಡಿದ ಹಣಕಾಸು ನೆರವು, ಡಾಲರ್’ನ ಅಪಮೌಲ್ಯಗಳ ಕಾರಣದಿಂದಾಗಿ ಆಗಿದೆ”.
ಹೀಗಾಗಿ, ಈ ಮೋದಿ ಕಾಲದಲ್ಲಿ 49% ನಷ್ಟು ಸಾಲ ಹೆಚ್ಚಾಗಿದೆ” ಎನ್ನುವುದು ಕೇವಲ ಪ್ರಚೋದನಾಕಾರಿ ಸುದ್ಧಿಯೇ ಹೊರತು ಅದರಲ್ಲಿ ಯಾವುದೇ ಹುರುಳಿಲ್ಲ. ಆದರೆ ಇದು ಚುನಾವಣಾ ಸಮಯ. ಆದ್ದರಿಂದ ಇಂತಹಾ ಅರ್ಧ ಸತ್ಯಗಳನ್ನಾಧರಿಸಿದ ದಾರಿತಪ್ಪಿಸುವ ಸುದ್ಧಿಗಳು ಹೆಚ್ಚೆಚ್ಚು ಬರುವುದನ್ನು ನಾವೆಲ್ಲರೂ ನಿರೀಕ್ಷಿಸೋಣ. ಮತ್ತು ಆ ಅರ್ಧಸತ್ಯಗಳನ್ನು ಅಲ್ಲಲ್ಲೇ ಖಂಡಿಸಿ ಅಂಕಿ-ಅಂಶಗಳೊಂದಿಗೆ ಅವರ ಸುಳ್ಳುಗಳನ್ನು ಬಯಲಿಗೆಳೆಯೋಣ.
ಹೆಚ್ಚಿದ ಸಾಲ “ನಿಮ್ಮ ದೇಶ ಹೇಗೆ ಅಂತರರಾಷ್ಟ್ರೀಯ ಹೂಡಿಕೆಗೆ ಸೂಕ್ತ ಜಾಗ” ಎನ್ನುವುದನ್ನು ತೋರಿಸುತ್ತದೆ. ಇದು ಬುದ್ಧಿವಂತ ಅರ್ಥಶಾಸ್ತ್ರಜ್ಞರಿಗೆ ಮಾತ್ರವಲ್ಲ, ಕೆಲ ಸರಳ ಆರ್ಥಿಕ ವಿದ್ಯಮಾನಗಳನ್ನು ಅರಿತಿರುವ ಅತ್ಯಂತ ಸಾಮಾನ್ಯರಿಗೂ ಅರ್ಥವಾಗುವ ವಿಚಾರ ಎಂದು ಹೆೇಳಿದಿರಿ. ಹಾಗಾದರೆ ಎನ್ ಡಿಎಗಿಂತ ಯುಪಿಎ ಅವಧಿಯೆ ಚೆನ್ನಗಿತ್ತು ಅಲ್ಲವೆ
ಇದಪ್ಪ ವರಸೆ, 2014 ನ್ನೂ ಸೇರಿಸಿ ತಮ್ಮ ಬೆನ್ನನ್ನು ತಟ್ಟಿಕೊಳ್ಳುತ್ತಿರುವ ಇವರು ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಇಷ್ಟು ದಿನ ಸಾಲವನ್ನೇ ಪಡೆಯದ ಭಾರತದ ಮೊದಲ ಪ್ರಧಾನಿ ಎಂದೆಲ್ಲಾ ಅರಚಾಡಿ, ಈಗ ಸಾಲ ಪಡೆಯುವುದು ಮತ್ತು ಅದರ ಉಪಯೋಗಗಳನ್ನು ಎಣಿಸುತ್ತಿದ್ದಾರೆ. ಒಂದು ಮನೆ ಕಟ್ಟಬೇಕಾದರೂ ಕನಿಷ್ಟ 1-2 ಬೇಕಾಗುತ್ತದೆ, ಆದರೆ ದೇಶ ಕಟ್ಟಲು ಇವರು ಸಾಲ ತೆಗೆದಾಕ್ಷಣ ಅಭಿವೃದ್ಧಿ ನಾಗಲೋಟದಿಂದ ಮುನ್ನುಗುತ್ತಿದೆ. ಮೊದಲೆಲ್ಲ ಸಾಲ ತೆಗೆದು ದೇಶ ಹಾಳು ಮಾಡುತ್ತಿದ್ದರು ಈಗ ದೇಶೋದ್ಧಾರ ಮಾಡುತ್ತಿದ್ದಾರೆ