ಕೆಲವು ವ್ಯಕ್ತಿತ್ವಗಳು ಅರ್ಥವಾಗಬಾರದು, ಅಮಿತ್ ಶಾರಂತೆ!
– ಸಂತೋಷ್ ತಮ್ಮಯ್ಯ
೨೦೧೫ರ ಅಕ್ಟೋಬರಿನಲ್ಲಿ ದೆಹಲಿಯ ಶ್ಯಾಮ್‌ಪ್ರಸಾದ್ ಮುಖರ್ಜಿ ಅಧ್ಯಯನ ಕೇಂದ್ರ ಯುವ ಬರಹಗಾರರನ್ನು ಕರೆಸಿ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಆಯೋಜಿಸಿತ್ತು. ದೇಶದ ಮೂಲೆಮೂಲೆಗಳಿಂದ ಆಗಮಿಸಿದ್ದ ಬರಹಗಾರರು ದೆಹಲಿಯ ಪಾಲಿಕಾ ಭವನದಲ್ಲಿ ಕಿಕ್ಕಿರಿದು ತುಂಬಿದ್ದರು. ಎರಡು ದಿನ ಪೂರ್ತಿ ರಾಷ್ಟ್ರೀಯತೆ, ರಾಜಕೀಯ ಸಿದ್ಧಾಂತಗಳು, ರಾಷ್ಟ್ರೀಯತೆಯ ಸವಾಲುಗಳು ಮತ್ತು ಅಪಾಯಗಳ ಬಗೆಗಿನ ಗೋಷ್ಠಿಗಳು ನಡೆದವು. ಅನಿರ್ಬನ್ ಗಂಗೂಲಿ, ವಿವೇಕ್ ಅಗ್ನಿಹೋತ್ರಿ, ಆರೆಸ್ಸೆಸ್ಸಿನ ನಂದಕುಮಾರ್ ಮುಂತಾದ ಖ್ಯಾತ ಚಿಂತಕರ ಗೋಷ್ಠಿಗಳು ಜರುಗಿದವು. ಸಮಾರೋಪ ಸಮಾರಂಭಕ್ಕೆ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾರವರು ಆಗಮಿಸಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಲಾಯಿತು. ಅಲ್ಲಿಯವರೆಗೂ ವೈಚಾರಿಕತೆಯ ಗುಂಗಲ್ಲಿದ್ದ ಕೆಲ ಯುವ ಬರಹಗಾರರು ಸಣ್ಣಗೆ ಗೊಣಗಲಾರಂಭಿಸಿದರು. ಇಷ್ಟು ಹೊತ್ತು ಚಿಂತಕರಿಂದ ಉಪನ್ಯಾಸ ಮಾಡಿಸಿದ ಕೇಂದ್ರದವರು ಈಗ ರಾಜಕಾರಣಿಯನ್ನೇಕೆ ಕರೆಸಿದ್ದಾರೆ? ಅದೂ ರಾಜಕಾರಣ ಮತ್ತು ರಾಜಕೀಯ ಸಿದ್ಧಾಂತಗಳ ಬಗ್ಗೆ ಅಮಿತ್ ಶಾರೇನು ಮಾತಾಡಬಲ್ಲರು? ಹೆಚ್ಚೆಂದರೆ ಜನಸಂಘದ ಒಂದೆರಡು ಕಥೆಗಳನ್ನು ಹೇಳಿ ಮುಗಿಸಬಲ್ಲರಷ್ಟೆ ಎಂದುಕೊಂಡರು. ಸಂಜೆಯಾಯಿತು. ಎಂದಿನಂತೆ ಮುಖ ಗಂಟಿಕ್ಕಿಕೊಂಡ ಅಮಿತ್ ಶಾ ವೇದಿಕೆಗೆ ಹತ್ತಿದರು. ಪೋಡಿಯಂ ಮುಂದೆ ನಿಂತರು.ಇದ್ದಕ್ಕಿದ್ದಂತೆ ಪಿಸುಗುಡುತ್ತಿದ್ದ ಪಾಲಿಕಾ ಭವನದ ಸಭಾಂಗಣ ಸೂಜಿ ಬಿದ್ದರೂ ಸದ್ದಾಗುವಷ್ಟು ಮೌನವಾಯಿತು, ಗಡಸು ಧ್ವನಿಗೆ ಸಭೆ ಸಮ್ಮೋಹನಕ್ಕೊಳಗಾಯಿತು. ಮುಂದಿನ ಒಂದೂವರೆ ಗಂಟೆ ಅಮಿತ್ ಶಾ ಅದೆಂಥಾ ವಾಗ್ಝರಿ ಹರಿಸಿದರೆಂದರೆ ತಿಲಕರು, ಸಾವರ್ಕರರು ಬಂದುಹೋದರು. ಗಾಂಧಿ ಚಳವಳಿ ಮತ್ತು ಸ್ವಾತಂತ್ರ್ಯಪೂರ್ವದ ಕಾಂಗ್ರೆಸಿನ ವಿಶ್ಲೇಷಣೆಯಾಯಿತು. ಲೋಹಿಯಾ ವಾಕ್ಯಗಳ ಉಲ್ಲೇಖವಾಯಿತು. ಜೆಪಿ ನುಸುಳಿದರು, ಹಳೆಯ ಯುಎಸ್‌ಎಸ್‌ಆರ್‌ನ ಪ್ರಾರಬ್ಧಗಳ ಮಂಡನೆಯಾಯಿತು. ನೆಹರೂ ಯುಗದ ಅದ್ವಾನಗಳು ಎಳೆಎಳೆಯಾಗಿ ಬಿಚ್ಚಲ್ಪಟ್ಟವು. ಮುಖರ್ಜಿ, ಉಪಾಧ್ಯಾಯರ ಆದರ್ಶಮಯ ಸಿದ್ಧಾಂತಗಳು ತೇಲಿಬಂದವು. ಅಟಲ್-ಅಧ್ವಾನಿಯವರ ರಾಜಕೀಯ ಬದ್ಧತೆಯವರೆಗೂ ಮಾತು ಸಾಗಿತು. ಕೆಲ ಚಿಂತಕರು ಘನಗಂಭೀರವಾಗಿ ತಲೆತೂಗುತಿದ್ದರೆ, ಇನ್ನು ಕೆಲವರು ಟಿಪ್ಪಣಿ ಮಾಡಿಕೊಳ್ಳತೊಡಗಿದರು! ಅಂದರೆ ಅಮಿತ್ ಶಾ ಸಂಶೋಧಕರಂತೆ, ಇವೆಲ್ಲಕ್ಕೂ ಪುರಾವೆ ಅಂಗೈಯಲ್ಲಿದೆ ಎನ್ನುವಂತೆ ಅಧಿಕಾರಯುತವಾಗಿ ಮಾತಾಡುತ್ತಿದ್ದರು. ಅವರು ಕಮ್ಯುನಿಸ್ಟ್ ಸಿದ್ಧಾಂತವನ್ನು, ಸಮಾಜವಾದವನ್ನು, ರಾಷ್ಟ್ರೀಯತೆಯ ಮಜಲುಗಳೆಲ್ಲವನ್ನೂ ಅರೆದು ಕುಡಿದಿದ್ದರು. ಅವರ ಅಂದಿನ ಮಾತುಗಳು ಸಭಿಕರಲ್ಲಿ ಎಂಥಾ ಗುಂಗು ಹಿಡಿಸಿತ್ತೆಂದರೆ ಭಾಷಣದ ನಂತರ ಆಯೋಜಕರು ಪ್ರಶ್ನೆಗಳಿಗೆ ಅವಕಾಶವಿದೆ ಎಂದು ಘೋಷಿಸಿದರು. ಆದರೆ ಯಾರಲ್ಲೂ ಪ್ರಶ್ನೆಗಳು ಉಳಿದಿರಲಿಲ್ಲ.
ಹಾಗೆ ನೊಡಿದರೆ ಅಮಿತ್ ಶಾ ಅಂದು ಹಾಗೆ ಕಂಡಿದ್ದು ನಮಗೆ ಮಾತ್ರವೇನೂ ಅಲ್ಲ, ಅವರು ಹಾಗೆ ಕಾಣುವುದು ಮೊದಲೂ ಆಗಿರಲಿಲ್ಲ!