CAA ಮತ್ತು NRC: ಬೆಂಕಿಯ ಭ್ರಮೆಯಲ್ಲಿ ಬಾವಿಗೆ ಧುಮುಕುವುದೇಕೆ?
– ಸಂಕೇತ್ ಡಿ ಹೆಗಡೆ
‘Citizenship Amendment Bill’ – ಇಂಥದ್ದೊಂದು ಬಾಂಬ್ ಅನ್ನೇ ಅಮಿತ್ ಶಾ ಆವತ್ತು ಪಾರ್ಲಿಮೆಂಟ್ ನಲ್ಲಿ ಹಾಕಿದರು. ಇದು ಇಷ್ಟೊಂದು ಶಕ್ತಿಯುತ ಬಾಂಬ್ ಎಂದು ಬಹುಶಃ ಗೃಹಮಂತ್ರಿಯಾಗಿ ಸ್ವತಃ ಅವರೂ ಯೋಚಿಸಿರಲಿಕ್ಕಿಲ್ಲ. ಡಿಸೆಂಬರ್ ನಾಲ್ಕಕ್ಕೆ ಕ್ಯಾಬಿನೆಟ್ ಅನುಮೋದನೆ ಪಡೆದ ಈ ಮಸೂದೆ, 9 ಡಿಸೆಂಬರ್ ರಂದು ಲೋಕಸಭೆಯಲ್ಲಿ ಮಂಡನೆಯಾಯಿತು. ಮರುದಿನ ಅಲ್ಲಿ ಸಲೀಸಾಗಿ ಅನುಮೋದನೆಯಾದ ಈ ಪ್ರಸ್ತಾವನೆ, ’ರಾಜ್ಯಸಭೆ’ಯಲ್ಲೂ ಈಜಿ ದಡ ಸೇರುವುದೇ ಎಂಬುದೇ ಎಲ್ಲರ ಪ್ರಶ್ನೆಯಾಗಿತ್ತು. ಆದರೆ ಡಿಸೆಂಬರ್ 11ರಂದು 20 ಮತಗಳ ಅಂತರದಲ್ಲಿ ಇದು ರಾಜ್ಯಸಭೆಯಲ್ಲೂ ಅನುಮೋದನೆಗೊಂಡಿತು. ಮರುದಿನವೇ ರಾಷ್ಟ್ರಪತಿಗಳ ಅಂಕಿತವೂ ಬಿದ್ದು, ’Bill’ ಇದ್ದದ್ದು ‘Act’ ಆಯಿತು. ‘ಮಸೂದೆ’ ಅಧಿಕೃತವಾಗಿ ಕಾಯಿದೆಯಾಯಿತು. ಈಗ ಶುರುವಾಯಿತು ನೋಡಿ ಈ ಬಾಂಬಿನ ಆಟಾಟೋಪ!
ಇದ್ದಕ್ಕಿದ್ದಂತೆ ಯೂನಿವರ್ಸಿಟಿಗಳು ರಣಾಂಗಣಗಳಾದವು. ’ಜಾಮಿಯಾ ಇಸ್ಲಾಮಿಯಾ’ ವಿಶ್ವವಿದ್ಯಾಲಯದ ಒಳಬದಿಯಿಂದ ಕಲ್ಲುಗಳು ತೂರಿಬಂದವು. ಇಂಥವುಗಳಿಗೆ ಸದಾ ’ಹೆಸರುವಾಸಿ’ಯಾದ ಜೆಎನ್ಯೂ ಸುಮ್ಮನಿರಲು ಸಾಧ್ಯವೇ? ಅಲ್ಲಿಯೂ ಪರಿಸ್ಥಿತಿ ಭುಗಿಲೆದ್ದಿತು. ’ಜಾಮಿಯ’ದಿಂದ ಶುರುವಾದದ್ದು ಸಾಂಕ್ರಾಮಿಕ ರೋಗದಂತೆ ’ಆಲಿಗಡ್ ಮುಸ್ಲಿಮ್ ಯುನಿವರ್ಸಿಟಿ’, ‘ನಾದ್ವಾ’ ಹೀಗೆ ದೇಶದ ಅನೇಕ ಯೂನಿವರ್ಸಿಟಿಗಳಿಗೆ ಹಬ್ಬಿತು. ಅದಲ್ಲದೇ ಯೂನಿವರ್ಸಿಟಿಗಳ ಹೊರಗೂ, ಸದ್ಯದ ಕೇಂದ್ರ ಸರ್ಕಾರದ ಸೈದ್ಧಾಂತಿಕ ವೈರಿಗಳ ಸಕಲ ಗುಂಪುಗಳಿಂದ ದೊಡ್ಡ ಹಿಂಸಾಚಾರಗಳೇ ನಡೆದವು. ಇಂಥ ಕಾಯ್ದೆಯೊಂದು ಈ ಮಟ್ಟಿಗೆ ಪ್ರತಿಕ್ರಿಯೆಗಳನ್ನು ಪಡೆಯಬೇಕಾಗುತ್ತದೆ ಎಂಬುದನ್ನು ಬಹುಶಃ ನೀರಿಕ್ಷಿಸದಿದ್ದ ಸರ್ಕಾರಕ್ಕೆ, ಇದೊಂದು ಆಘಾತವೇ ಸರಿ. ನೇಮಿಸಿದ್ದ ಪೋಲೀಸ್ ತುಕಡಿಗಳು ಸಾಕಾಗಲಿಲ್ಲ. ಬೆರಳೆಣಿಕೆಯಷ್ಟಿದ್ದ ಪೋಲೀಸರು ಸಾವಿರ ಸಂಖ್ಯೆಗಳಲ್ಲಿದ್ದ ಗಲಭೆನಿರತರನ್ನು ಸಂಭಾಳಿಸಲು ಸಾಧ್ಯವಾಗಲಿಲ್ಲ. ಪೋಲೀಸರು ದೇಶದ ಅನೇಕ ಕಡೆ ಹೊಡೆತ ತಿಂದರು, ಗಾಯಗೊಂಡರು. ಲಕ್ನೋ ನಗರದಲ್ಲೊಂದರಲ್ಲೇ 250ಕ್ಕೂ ಅಧಿಕ ಪೋಲಿಸರು ಗಾಯಗೊಂಡರು ಮತ್ತು ದೇಶವೇ ನಿಬ್ಬೆರಗಾಗುವಂತೆ 50ಕ್ಕೂ ಹೆಚ್ಚು ಪೋಲಿಸರಿಗೆ ಗುಂಡೇಟಾಯಿತು. ಪೋಲೀಸರಿಗೆ ಗುಂಡೇಟಾಯಿತು! ಪ್ರತಿಭಟನಾಕಾರರ ಕಿಸೆಯಲ್ಲಿ ಗುಂಡು ತುಂಬಿ, ಮರೆಯಲ್ಲೆಲ್ಲೋ ಕೈಯಲ್ಲಿ ಬಂದೂಕು ಕೊಟ್ಟದ್ದು ಯಾರು ಅಂತ ಮಾತ್ರ ’ಜಾಮಿಯಾ’, ’ಜೆ ಎನ್ಯೂ’ಗಳಲ್ಲಿ ಪಿಎಚ್ಡಿ ಮಾಡುತ್ತಿರುವವರಿಗೇ ಗೊತ್ತಿರಬೇಕು, ನನಗಂತೂ ಗೊತ್ತಿಲ್ಲ.
ಇಂಥ ಭಯಾನಕ ಗಲಭೆಗಳು ಅನೀರಿಕ್ಷಿತವಾಗಿ ನಡೆದಾಗ, ಇದ್ದಬದ್ದ ಪೋಲೀಸರೇ ಹೊಡೆತ ತಿಂದಾಗ, ಸಹಜವಾಗಿ ಹೆಚ್ಚುವರಿ ತುಕಡಿಗಳು ಪ್ರತಿಭಟನಾ ಸ್ಥಳವನ್ನು ತಲುಪುತ್ತವೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಕಾರಣದಲ್ಲಿ, ಅಲ್ಲಿ ಪೋಲೀಸ್ ಹಿಂಸಾಚಾರ ಕೂಡ ನಡೆಯುತ್ತದೆ. ಲಾಠಿ ಚಾರ್ಜ್ ಗಳಾಗುತ್ತವೆ, ಅಶ್ರುವಾಯುಗಳು ಸಿಡಿಯುತ್ತವೆ, ಗಾಳಿಯಲ್ಲಿ ಗುಂಡು ಹಾರುತ್ತದೆ, ಕೆಲವೊಮ್ಮೆ ಗೋಲೀಬಾರ್ ಕೂಡ ನಡೆದುಹೋಗುತ್ತದೆ. ದುರದೃಷ್ಟಕರವಾಗಿ ಎಲ್ಲವೂ ಹೀಗೇ ಆಯಿತು. ಇವೇನು ವಿಶ್ವವಿದ್ಯಾಲಯಗಳೋ, ಯುದ್ಧಭೂಮಿಗಳೋ ಎಂದು ಜನರಿಗೆ ಗೊಂದಲವಾಗುವಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿತ್ತು. ಅದು ದೇಶಕ್ಕೆ ಒಳಿತಿರಲಿ ಅಥವಾ ಕೆಡುಕಿರಲಿ, ಏನೇ ಇರಲಿ, ಈ ಸರ್ಕಾರ ಯಾವ ಹೆಜ್ಜೆಯಿಟ್ಟರೂ ದೇಶದಲ್ಲಿ ‘ಕೆಂಪು’ ರಕ್ತ ಹರಿಸಬೇಕು ಎಂದು ಸದಾಕಾಲ ಕಾದುಕುಳಿತಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಟ್ಟೆಂದು ಎದ್ದುನಿಂತವು. ಪರಿಸ್ಥಿತಿ ವಿಕೋಪಕ್ಕೆ ಹೋಗಲು ಏನೇನು ಮಾಡಬಹುದೋ ಅದನ್ನೆಲ್ಲ ಚಾಚೂ ತಪ್ಪದೇ ಮಾಡಿದವು. “ನಿಮ್ಮ ಅಸ್ತಿತ್ವವೇ ಅಪಾಯದಲ್ಲಿದೆ” ಎಂಬ ತಪ್ಪುಸಂದೇಶವನ್ನು ಅತ್ಯಂತ ಅಚ್ಚುಕಟ್ಟಾಗಿ ಒಂದು ನಿರ್ದಿಷ್ಟ ಸಮುದಾಯಕ್ಕೆ ತಲುಪುವ ಹಾಗೆ ನೋಡಿಕೊಂಡವು. ’ಇನ್ನೇನು ನಿಮ್ಮನ್ನು ದೇಶದಿಂದ ಹೊರಹಾಕಿಯೇ ಬಿಡುತ್ತಾರೆ’ ಅಂತ ಹುಚ್ಚು ಕಲ್ಪನೆಯನ್ನು ಒಂದು ದೊಡ್ಡ ಸಂಖ್ಯೆಯ ಜನರ ತಲೆಯಲ್ಲಿ ವ್ಯವಸ್ಥಿತವಾಗಿ ತೂರಿಬಿಟ್ಟರು. ಆಹ್.. ಹೊತ್ತುತ್ತಿದ್ದ ಬೆಂಕಿಗೆ ಗಾಳಿ ಊದಿದಂತಾಯಿತು.
ಹ್ಮ್… ಇಷ್ಟೆಲ್ಲ ಏಕಾಯಿತು? ಅಂಥ ’ಸ್ಫೋಟಕ ವಸ್ತು’ ಈ ಕಾಯ್ದೆಯಲ್ಲಿದೆಯೇ? ಇದು ಅಸಾಂವಿಧಾನಿಕವೇ? ಇದು ಧರ್ಮಗಳ ನಡುವೆ ಪಕ್ಷಾತೀತ ಮಾಡುವ ಹುನ್ನಾರವೇ? ನಾಳೆ ನಮ್ಮನ್ನೂ ಹೊರಹಾಕಿಬಿಡುತ್ತಾರೆಯೇ?
ಇಂಥ ಪ್ರಶ್ನೆಗಳನ್ನೆಲ್ಲ ಕೇಳಿದಾಗ ಅಳಬೇಕೋ ನಗಬೇಕೋ ಗೊತ್ತಾಗುವುದಿಲ್ಲ. ಆದರೆ ಇಂಥ ಅಸಂಬದ್ಧಗಳನ್ನೇ ಅಷ್ಟು ವ್ಯವಸ್ಥಿತವಾಗಿ ಒಂದಿಷ್ಟು ಜನರ ತಲೆಗೆ ನಮ್ಮೆದುರೇ ತುಂಬಿ ಹುಯಿಲೆಬ್ಬಿಸಿಬಿಟ್ಟರಲ್ಲ ಎಂದು ನೆನೆಸಿಕೊಂಡರೆ ಬೇಸರವಾಗುತ್ತದಷ್ಟೇ. ಸರಿ ಈಗ ಕಾಯ್ದೆಯ ವಿಷಯಕ್ಕೆ ಬರೋಣ.
ಈ ಕಾಯ್ದೆ ಏನು ಹೇಳುತ್ತದೆ ಎಂದು ಬಹುಶಃ ನೀವೆಲ್ಲ ಇಷ್ಟುದಿನದಲ್ಲಿ ಖಂಡಿತವಾಗಿ ತಿಳಿದುಕೊಂಡಿರುತ್ತೀರಿ. ಆದರೂ ಒಂದು ಚಿಕ್ಕ ವಿವರಣೆ ಕೊಡುವುದು ನನ್ನ ಕರ್ತವ್ಯ. ಇದು ನಮ್ಮ ನೆರೆಹೊರೆಯಲ್ಲಿರುವ 3 ರಾಷ್ಟ್ರಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ, ಅವರು ಅಲ್ಲಿ ಧಾರ್ಮಿಕ ನೆಲೆಗಟ್ಟಿನಲ್ಲಿ ಹಿಂಸೆಗೊಳಗಾಗಿ ಭಾರತಕ್ಕೆ ಐದು ವರ್ಷಗಳ ಹಿಂದೆ – ಅಂದರೆ ಡಿಸೆಂಬರ್ 31, 2014ಕ್ಕೂ ಮೊದಲು ಓಡಿ ಬಂದಿದ್ದರೆ, ಅವರಿಗೆ ಭಾರತೀಯ ಪೌರತ್ವವನ್ನು ದಯಪಾಲಿಸುವ ಕಾಯ್ದೆ. ಈ ಕಾಯ್ದೆಯಡಿ ಆ ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಅನ್ನಿಸಿಕೊಂಡಿರುವ ಆರು ಧರ್ಮಗಳನ್ನು ಪಟ್ಟಿಮಾಡಲಾಗಿದೆ – ಹಿಂದು, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ. ಈ ಧರ್ಮಗಳ ಜನರು ತಾವು ಇತರ ಧರ್ಮದವರು ಎಂಬ ಏಕೈಕ ಕಾರಣಕ್ಕೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾಗಿ, ಅಪಕೃತ್ಯ- ಅತ್ಯಾಚಾರಗಳಿಗೆ ಒಳಗಾಗಿ ಭಾರತದ ಗಡಿಯೊಳಗೆ ದಾಖಲೆಗಳಿಲ್ಲದೆ, ಅನುಮತಿಯಿಲ್ಲದೆ ಓಡಿ ಬಂದಿದ್ದರೂ – ಮಾನವೀಯ ನೆಲೆಗಟ್ಟಿನಲ್ಲಿ ನಾವು ಅವರಿಗೆ ಪೌರತ್ವ ಕೊಡುತ್ತೇವೆ ಎಂಬುದು ಈ ಕಾಯ್ದೆಯ ವಾಗ್ದಾನ. ‘ಮುಸ್ಲೀಮರನ್ನೇಕೆ ಹೊರಗಿಟ್ಟಿರಿ?’ ಆಯ್ತು, ಅಲ್ಲಿಗೇ ಬರೋಣ.
1947ರಲ್ಲಿ ದೇಶದ ವಿಭಜನೆ ನಡೆಯಿತು. ಯಾಕೆ ನಡೆಯಿತು, ಅದು ಸರಿಯೇ, ತಪ್ಪೇ, ಮಾಡಬಾರದಿತ್ತೇ? ಇವೆಲ್ಲ ಪೋಸ್ಟ್ ಮಾರ್ಟಮ್ ಗಳಿಗೆ ನಾನು ಹೋಗುವುದಿಲ್ಲ. ಹೌದು, 70 ವರ್ಷಗಳ ಹಿಂದೆ ಅಂಥದ್ದೊಂದು ಭಯಾನಕ ಘಟನೆ ನಡೆದುಹೋಯಿತು. ಕೋಟ್ಯಂತರ ಜನ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹಾದು ಬಂದರು. ಮೊದಲೇ ಬ್ರಿಟೀಷರು ನುಂಗಿ-ನೀರ್ಕುಡಿದಿದ್ದ ಆರ್ಥಿಕ ಪರಿಸ್ಥಿತಿ, ಅದರ ಮೇಲೆ ’ವಿಭಜನೆ’ ಎಂಬ ಬರೆ! ಲಕ್ಷಾಂತರ ಜನ ಹಾದಿ ಮಧ್ಯೆ ಸತ್ತರು, ಹಸಿದು ದಣಿದು ಸತ್ತರು. ಎರಡೂ ಕಡೆ ನಡೆಯಲೇಬಾರದಂತಹ ಘಟನೆಗಳು ನಡೆದುಹೋದವು. ಆದರೆ ಎರಡೂ ಕಡೆ, ನೂರಾರು ವರ್ಷಗಳಿಂದ, ತಲೆತಲೆಮಾರುಗಳಿಂದ ಅಲ್ಲೇ ವ್ಯವಸಾಯ ಮಾಡಿ, ಅಲ್ಲೇ ಬದುಕುಕಟ್ಟಿಕೊಂಡಿರುವವರಲ್ಲಿ ಅನೇಕರಿಗೆ ಅದನ್ನು ಬಿಟ್ಟುಬರಲಾಗಲಿಲ್ಲ. ಹೌದು! ಯಾರೋ ಎಲ್ಲೋ ದೊಡ್ಡ ಮಟ್ಟದಲ್ಲಿ, ಸಹಿಹಾಕಿದರು, ಒಪ್ಪಂದಕ್ಕೆ ಬಂದರು ಎಂಬ ಮಾತ್ರಕ್ಕೆ – it simply doesn’t make any sense to normal people living around, striving for a livelihood everyday to just leave everything and migrate to some unknown land. ಅಂಥವರು ಅಲ್ಲೇ ಉಳಿದರು. ಆಗಿನ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳಾಗಿ ಒಂದೇ ದೇಶವೆನಿಸಿಕೊಂಡಿದ್ದ ಈಗಿನ ಬಾಂಗ್ಲಾ ಮತ್ತು ಪಾಕಿಸ್ತಾನಗಳು ಅವರ ನೆಲೆಬೀಡಾದವು. ಆದರೆ ತಾನು ’ಇಸ್ಲಾಮಿಕ್ ಗಣರಾಜ್ಯ’ ಎಂದು ಅಧಿಕೃತವಾಗಿ ಘೋಷಿಸಿಕೊಂಡಿತು ನೋಡಿ ಪಾಕಿಸ್ತಾನ – ಅಲ್ಲಿನ ಮತೀಯ ಮೃಗಗಳಿಗೆ ಸರ್ಕಾರದ ಬೆಂಬಲ ಸಿಕ್ಕಂತಾಯಿತು. ‘ಕಾಫಿರ’ರ ಮೇಲೆ ದೌರ್ಜನ್ಯ ಮಾಡುವುದು ಒಂಥರಾ ಕಾನೂನಿಗೆ ವಿರುದ್ಧವಲ್ಲದ ಸಂಗತಿ ಎಂಬಂತಾಗಿಹೋಯಿತು. ಏಕೆಂದರೆ ಇಸ್ಲಾಮ್ ರಾಷ್ಟ್ರೀಯ ಧರ್ಮ ನೋಡಿ. ಆ ದೇಶ ತನ್ನನ್ನು ಗುರುತಿಸಿಕೊಳ್ಳುವುದೇ ಧರ್ಮದ ಆಧಾರದ ಮೇಲೆ – ಪಾಕಿಸ್ತಾನದ ಧ್ವಜವನ್ನು ನೋಡಿದರೆ ನಿಮಗೆಲ್ಲವೂ ಅರ್ಥವಾಗಿಬಿಡಬೇಕು.
ಪಾಕಿಸ್ತಾನದಲ್ಲಿ 1947ರಲ್ಲಿ 22%ರಷ್ಟು ಇದ್ದ ಇಸ್ಲಾಮೇತರ ಜನಸಂಖ್ಯೆ 2011ರ ವೇಳೆಗೆ 7.8% ಗೆ ಇಳಿದಿತ್ತು ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ. ಈಗಿನ ಅಂದಾಜಿನ ಪ್ರಕಾರ 3.1% ಗೆ ಇಳಿದಿದೆ. ಇವೆಲ್ಲ ಅಧಿಕೃತ ಲೆಕ್ಕಗಳಾದರೆ ವಾಸ್ತವವಾಗಿ ಇನ್ನೆಂಥ ದುಸ್ವಪ್ನವಿದೆಯೋ! ಹೀಗೊಂದು ವ್ಯವಸ್ಥಿತ ನರಮೇಧ ಆ ನೆಲಗಳಲ್ಲಿ ನಡೆದಿದೆ. 2017ರ ವರೆಗೆ ಪಾಕಿಸ್ತಾನದಲ್ಲಿ ಹಿಂದೂ ಪದ್ಧತಿಯ ಮದುವೆಗಳು ಕಾನೂನುಬಾಹಿರವಾಗಿದ್ದವು ಎಂಬ ವಿಷಯ ನಿಮಗೆ ಗೊತ್ತೇ? ಒಬ್ಬನು ಹಿಂದೂ ರೀತಿಯಲ್ಲಿ ಮದುವೆಯಾಗಿದ್ದರೆ, ಅದನ್ನು ಕಾನೂನು ಗುರುತಿಸುವುದಿಲ್ಲ. ನಾಳೆ ಯಾರೋ ಬಂದು ಆತನ ಪತ್ನಿಯನ್ನು ಅವನ ಕಣ್ಣೆದುರೇ ಅಪಹರಿಸಿಕೊಂಡುಹೋದರೂ ಕಾನೂನು ಅವನ ಸಹಾಯಕ್ಕೆ ಬರದು! ಇಂಥ ಸಾವಿರಾರು ಕಥನಗಳು, ಅಮಾನುಷ ಘಟನೆಗಳಿಗೆ ಆ ನೆಲಗಳು ಕಳೆದ 70 ವರ್ಷಗಳಲ್ಲಿ ಸಾಕ್ಷಿಯಾಗಿವೆ. ಪತ್ನಿಯನ್ನು ಕದ್ದೊಯ್ದರೂ, ಮನೆಯ ಮಕ್ಕಳನ್ನು ಅತ್ಯಾಚಾರಕ್ಕೊಳಪಡಿಸಿದರೂ, ಕೊನೆಗೆ ಬಂದು ತನ್ನನ್ನು ಕೊಂದು ಹೋದರೂ ದೇಶ ಅಥವಾ ಕಾನೂನು ಸಹಾಯಕ್ಕೆ ಬರುವುದಿಲ್ಲ ಎಂದು ಗೊತ್ತಾದಮೇಲೆ, ಜೀವಿಸುವ ಪರಿಸರ ಮತ್ತು ಪರಿಸ್ಥಿತಿ ದಿನದಿನಕ್ಕೂ ವಿಷಮವಾಗುತ್ತ ಹೋದಮೇಲೆ ಅನೇಕರು ಅಲ್ಲಿಂದ ಇಲ್ಲಿಗೆ ಗುಳೆ ಬರಲು ಪ್ರಾರಂಭಿಸಿದರು. ಅವರೇ ನಾವು ಮಾತನಾಡುತ್ತಿರುವ ನಿರಾಶ್ರಿತರು. ಅವರಿಗೇ ನಾವು ಮಾನವೀಯ ನೆಲೆಗಟ್ಟಿನಲ್ಲಿ ಪೌರತ್ವವನ್ನು ಕೊಡಲು ಸಿದ್ಧರಿದ್ದೇವೆ ಎನ್ನುತ್ತಿರುವುದು.
ಹಾಗಿದ್ದರೆ ‘ಇಸ್ಲಾಂ’ ಧರ್ಮವನ್ನು ಈ ಕಾಯ್ದೆಯಿಂದ ಹೊರಗಿಟ್ಟಿರುವುದೇಕೆ? ಸರಿ ಆ ವಿಷಯಕ್ಕೆ ಬರೋಣ. ಈ ಕಾಯ್ದೆ ಇರುವುದು ಆ ಮೂರು ದೇಶಗಳಲ್ಲಿ ಧಾರ್ಮಿಕ ನೆಲೆಗಟ್ಟಿನಲ್ಲಿ ತುಳಿತಕ್ಕೊಳಗಾದ ಅಲ್ಪಸಂಖ್ಯಾತರನ್ನು ಉದ್ದೇಶಿಸಿ. ಅಲ್ಲಿಗೆ ಆ ದೇಶಗಳಲ್ಲಿ ಮುಸ್ಲೀಮರು ಅಲ್ಪಸಂಖ್ಯಾತರೂ ಅಲ್ಲ, ಶೋಷಿತರೂ ಅಲ್ಲ. ಹಾಗಿದ್ದರೆ ಅಹ್ಮದಿಯರೂ, ಶಿಯಾಗಳು ಮೇಲೂ ಅಲ್ಲಿ ದೌರ್ಜನ್ಯಗಳಗುತ್ತವಲ್ಲ? ಅವರನ್ನೂ ಸೆಳೆದುಕೊಳ್ಳಬಹುದಲ್ಲ? ಮಾಡಬಹುದೇನೋ.. ಆದರೆ ಇದು ಈ ಕಾಯ್ದೆಯಡಿ ಬರುವುದಿಲ್ಲ. ಏಕೆಂದರೆ ಭಾರತದ ಅತ್ಯುತ್ಕೃಷ್ಟ ಕಾನೂನು ತಜ್ಞರಲ್ಲಿ ಒಬ್ಬರಾದ ಹರೀಶ್ ಸಾಳ್ವೆ ಅವರೇ ಹೇಳುವಂತೆ – ಒಂದು ದೇಶದಲ್ಲಿ ಅನೇಕ ಕಾರಣಗಳಿಂದ ನಿರ್ದಿಷ್ಟ ಗುಂಪಿನ ಜನರು ಕಿರುಕುಳಕ್ಕೆ ಒಳಗಾಗಿರಬಹುದು. ಸಾಮಾಜಿಕ ಕಾರಣಗಳಿರಬಹುದು, ಆರ್ಥಿಕ ಕಾರಣಗಳಿರಬಹುದು, ನಂಬಿಕೆಯ ಆಧಾರದ ಮೇಲೆ ಮೇಲು-ಕೀಳೆಂಬ ಭೇದದಿಂದಿರಬಹುದು. ಆದರೆ ಈ ಕಾಯ್ದೆ ಉದ್ದೇಶಿಸುತ್ತಿರುವ ಸಮೂಹ ‘ಧಾರ್ಮಿಕ ನೆಲೆಗಟ್ಟಿನಲ್ಲಿ’ ಕಿರುಕುಳಕ್ಕೆ ಒಳಗಾದವರನ್ನು ಮಾತ್ರ. ಅಹ್ಮದೀಯರಿರಲಿ, ಶಿಯಾಗಳಿರಲಿ ‘ಧಾರ್ಮಿಕ ನೆಲೆಗಟ್ಟಿನಲ್ಲಿ’ ಕಿರುಕುಳಕ್ಕೆ ಒಳಗಾದವರಲ್ಲ. ಏಕೆಂದರೆ ಅವರ ಧರ್ಮ ಬೇರೆಯದು ಎಂದು ಕಾನೂನು ಪರಿಗಣಿಸುವುದಿಲ್ಲ. ಅವರ ಧರ್ಮವೂ ಇಸ್ಲಾಮೇ. ಒಳಗಿನ ಕೆಲವು ನಂಬಿಕೆಗಳಿಂದ ಅಲ್ಲವರು ಕಿರುಕುಳಕ್ಕೆ ಒಳಗಾಗಿರಬಹುದು. ಆದರೆ ಈ ಕಾಯ್ದೆ ಅದನ್ನು ಉದ್ದೇಶಿಸುವುದಿಲ್ಲ.
ಅವರನ್ನೂ ಸೇರಿಸಬಹುದಲ್ಲ? ಏಕೆ ಬಿಡುತ್ತೀರಿ? ಮತ್ತು ಮೂರೇ ದೇಶಗಳು ಏಕೆ? ಮಯನ್ಮಾರನ್ನೂ ಸೇರಿಸಿ.. ರೊಹಿಂಗ್ಯಾಗಳಿಗೂ ಕೊಡಿ. ಚೀನಾದಲ್ಲಿ ಕಿರುಕುಳಾಕ್ಕೊಳಗಾದ ಮುಸ್ಲೀಮರಿಗೆ ಕೊಡಿ ಅನ್ನೋದು ಇನ್ನು ಕೆಲವರ ವಾದ. ಅಲ್ಲೇ ಅವರು ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳದೇ ಇರುವುದು. ಈ ಕಾಯ್ದೆ ಯಾವ ಉದ್ದೇಶಕ್ಕೆ ತರಲ್ಪಟ್ಟಿತು ಎಂಬುದನ್ನೇ ಮರೆತಿರುವುದು. ಇದು ದೇಶ ವಿಭಜನೆಯಾದ ಕಾಲದಲ್ಲಿ ಇಲ್ಲಿ ಬರಲಾಗದೇ ಅಲ್ಲೇ ಉಳಿದುಕೊಂಡರಲ್ಲ, ನಂತರ ಪರಿಸ್ಥಿತಿ ವಿಷಮವಾದಾಗ ಇಲ್ಲಿಗೆ ಗುಳೆ ಬಂದರಲ್ಲ, ಆ ಸಮಸ್ಯೆಯನ್ನು ಬಗೆಹರಿಸಲು ರಚಿಸಲ್ಪಟ್ಟಿದ್ದು. ಹಾಗೂ ಅಫಘಾನಿಸ್ತಾನದಲ್ಲೂ ಕೊಂಚ ಹರಡಿಕೊಂಡಿದ್ದ ಹಿಂದೂ, ಸಿಖ್ ಮುಂತಾದ ಜನಾಂಗಗಳು ದಶಕಗಳ ಕಾಲ ನಡೆದ ’ಆಫ್ಘನ್ ಯುದ್ಧ’ದಲ್ಲಿ ನರಳಿದ್ದರಲ್ಲ, ಅವರನ್ನು ಉದ್ದೇಶಿಸಲು. ಜಗತ್ತಿನ ಎಲ್ಲಾ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾದವರ ಸಮಸ್ಯೆಯನ್ನು ಬಗೆಹರಿಸಲು ರಚಿಸಿದ್ದಲ್ಲ. 1947ರಲ್ಲಿ ಈ ದೇಶದಿಂದ ವಿಭಜನೆಯಾದದ್ದು ಯಾವುವು? ಪಾಕಿಸ್ತಾನ ಮತ್ತು ಬಾಂಗ್ಲಾ. ಮಯನ್ಮಾರ್ ಆಗಲೀ, ಶ್ರೀಲಂಕಾವಾಗಲೀ, ಚೀನಾವಾಗಲೀ ಸ್ವಾತಂತ್ರ್ಯ ಸಿಕ್ಕಾಗ ನಡೆದ ನಮ್ಮಿಂದ ವಿಭಜಿತವಾದ ರಾಷ್ಟ್ರಗಳಲ್ಲ. ಈ ಕಾಯ್ದೆ ಬಹುವಾಗಿ ಆಗ ನಡೆದ ಘನಘೋರ ವಿಭಜನೆಯ ಸಂತ್ರಸ್ತರೂ ಅಲ್ಲ. ಈ ಕಾಯ್ದೆ ಆಗ ನಡೆದ ವಿಭಜನೆಯ ಸಂತ್ರಸ್ತ ಕುಟುಂಬಗಳಿಗೇ ಹೊರತು ನೀವಂದುಕೊಂಡಿರುವ ಹಾಗೆ ಜಗತ್ತಿನ ಎಲ್ಲಾ ಸಂತ್ರಸ್ತರಿಗೂ ಅಲ್ಲ.
ಇಷ್ಟು ಹೇಳಿದ ಮೇಲೂ, ಇನ್ನೂ ಕೆಲವರು ಮತ್ತೂ ಮುಂದೆ ಹೋಗಿ ‘ಇರಲಿ. ಇವರು ವಿಭಜನೆಯ ಸಂತ್ರಸ್ತರಲ್ಲದಿರಬಹುದು. ಎಲ್ಲರಿಗೂ ಪೌರತ್ವ ಕೊಡೋಣ. ಎಲ್ಲಿಂದ ಬಂದರೂ ಕೊಡೋಣ’ ಎನ್ನಬಹುದು. ಸ್ವಾಮಿ, ನೀವು ಮಹಾ ಮನವತಾವಾದಿಯೇ ಇರಬಹುದು. ಆದರೆ ದಯವಿಟ್ಟು ಲ್ಯಾಪ್ ಟಾಪ್, ಫೇಸ್ಬುಕ್, ಟ್ವಿಟ್ಟರ್ ಬಿಟ್ಟು ಮನೆಯಿಂದ ಹೊರಬಂದು ನಮ್ಮ ದೇಶವನ್ನೊಮ್ಮೆ ಕಣ್ಣುಬಿಟ್ಟು ನೋಡಿ. ಈ ದೇಶದಲ್ಲಿ ಇನ್ನೂ ಅರ್ಧಕ್ಕರ್ಧ ಜನ ಹಸಿವಿನಿಂದಿದ್ದಾರೆ. ಶಿಕ್ಷಣದ ಮಟ್ಟ ಸುಧಾರಿಸಬೇಕಾಗಿದೆ. ಭ್ರಷ್ಟಾಚಾರವಿದೆ. ಬಡತನವಿದೆ. ನಿರುದ್ಯೋಗವಿದೆ. ಸ್ವಚ್ಛತೆಯ ಸಮಸ್ಯೆಯೂ ಇದೆ. ಇಲ್ಲೇ ಜನರಿಗೆ ಮೂಲಭೂತ ಸೌಕರ್ಯವನ್ನು ತಕ್ಕ ಮಟ್ಟಿಗೆ ಒದಗಿಸಲು ನಮ್ಮಿಂದ ಸಾಧ್ಯವಾಗಿರದೇ ಇರುವಾಗ, ಜಗತ್ತಿನ ಎಲ್ಲೆಡೆಯಿಂದ ಜನರನ್ನು ಬರಮಾಡಿಕೊಳ್ಳೋಣವೇನು? ನಿಮಗೆ ಒಂದು ದೇಶ ಹೇಗೆ ಕಾರ್ಯನಿರ್ವಹಿಸುತ್ತದೆ, ಒಂದು ಸಮಾಜ ಸುಸ್ಥಿತಿಯಲ್ಲಿರಲು ಏನೇನು ಮಾಡಬೇಕಾಗುತ್ತದೆ ಎಂಬ ಕಿಂಚಿತ್ತು ಅರಿವಾದರೂ ಇದೆಯೇ? ನಮ್ಮ ಜನರಲ್ಲೇ ಎಲ್ಲರಿಗೂ ನಾವು ಎರಡು ಹೊತ್ತು ಊಟ ಕೊಡಲು ಸಾಧ್ಯವಾಗದೇ ಇರುವಾಗ, ಅವರನ್ನೂ ಬರಮಾಡಿಕೊಂಡರೆ – ಇಲ್ಲಿರುವ ಹಾಗೂ ಹೊಸತಾಗಿ ಬರುವ ಇಬ್ಬರಿಗೂ ಗೌರವಯುತ ಜೀವನವನ್ನು ಒದಗಿಸಲು ನಮಗೆ ಸಾಧ್ಯವಾಗುವುದಿಲ್ಲ. ಅದು ಖಂಡಿತ ಮಾನವೀಯತೆಯಲ್ಲ.ಈಗ ನಾವು ಬರಮಾಡಿಕುಳ್ಳುತ್ತಿರುವವರು, ಬಹುವಾಗಿ 70 ವರ್ಷದ ಹಿಂದೇ ನಮ್ಮಲ್ಲಿಗೆ ಬರಬೇಕಾಗಿದ್ದು, ಕಾರಣಾಂತರಗಳಿಂದ ಬರದೇ, ಅಲ್ಲಿ ಪರಿಸ್ಥಿತಿ ವಿಷಮವಾಗಿ ಬದುಕಲು ಸಾಧ್ಯವಾಗದೇ ಗುಳೆ ಬಂದವರಿಗಾಗಿ.
ಒಂದು ಜವಾಬ್ದಾರಿಯುತ ದೇಶವಾಗಿ ಅಷ್ಟೂ ಮಾಡದಿದ್ದರೆ, ಅದು ನಮ್ಮ ಮಾನವೀಯತೆನ್ನು ನಾವೇ ಅಪಹಾಸ್ಯ ಮಾಡಿಕೊಂಡಂತೆ. ಕೇವಲ ಅಜೆಂಡಾಗಳನ್ನು, ಐಡಿಯಾಲಜಿಗಳನ್ನು ಹೊತ್ತುಕೊಂಡು ಮೂರುಹೊತ್ತೂ ಪ್ರತಿಭಟಿಸುವವರಿಗೆ, ಏನೋ ಮಾಡುತ್ತೇನೆ ಎಂದು ಅಂದುಕೊಂಡಿರುವವರಿಗೆ ವಾಸ್ತವಗಳು ಅರ್ಥವಾಗುವುದು ಕಷ್ಟ. ಅಥವಾ ಒಂದು ಮಾನವೀಯ ಮತ್ತು ಸುಭದ್ರ ದೇಶವನ್ನು ಕಟ್ಟುವ ಯಾವ ಆಸಕ್ತಿಯೂ ಇವರಿಗೆ ಇಲ್ಲ ಎಂದೆನಿಸುತ್ತದೆ. ತಾವು ಸುಭಗರು ಎನ್ನಿಸಿಕೊಳ್ಳಬೇಕು, ತಾವು ಪ್ರಸಿದ್ಧಿ ಪಡೆಯಬೇಕು, ತಮ್ಮ ಮೂಗಿನ ನೇರಕ್ಕೇ ಎಲ್ಲವೂ ನಡೆಯಬೇಕು ಎಂದಾಗಲು ಇವರು ದೇಶದ ತಲೆಯಮೇಲೆ ಕಲ್ಲು ಜರುಗಿಸಲೂ ಸಿದ್ಧ! ತಮ್ಮ ಹುಚ್ಚು ಚಪಲಗಳಿಗೆ ದೇಶದ ಹಿತಾಸಕ್ತಿಯನ್ನು, ಭದ್ರತೆಯನ್ನು ಬಲಿಕೊಡಲು ಸಿದ್ಧ. ದೇಶದೊಳಗೇ ಸುಳ್ಳುಸುದ್ದಿಗಳನ್ನು ಬಿಟ್ಟು, ಜನರನ್ನು ತಪ್ಪು ದಾರಿಗೆಳೆದು ಅಸ್ಥಿರತೆ ಸೃಷ್ಟಿಸುತ್ತಿರುವ ಇಂಥವರ ಮೇಲೆ ನಿಗಾ ಇಡುವುದು ಒಳಿತು. ಈ ನಾಟಕಗಳು ತುಂಬಾ ಬೆಳೆಯಲು ಬಿಟ್ಟರೆ, ಮುಂದೆ ನಮಗೇ ಅಪಾಯ. ಏಕೆಂದರೆ, ದೇಶವಿದ್ದರೆ ಮಾತ್ರ ನಾನು, ನೀವು. ದೇಶ ಅಸ್ಥಿರವಾದರೆ ನಮಗೇ ಮುಂದೊಂದು ದಿನ ಮತ್ತೊಂದು ದೇಶ CAA ಮಾಡಬೇಕಾದೀತು!
ಸುಂದರ, ಸುಲಲಿತ ವಿವರಣೆ. ಬರವಣಿಗೆ ಹೀಗೆ ಮುಂದುವರಿಯಲಿ ಸಂಕೇತ್!.
ಸಂಕೇತ, ಸಿಎಎ ಕುರಿತ ನಿನ್ನ ಬರಹ ನಿಜವಾಗಿಯೂ ತುಂಬ ಸರಳವಾದ, ಸುಂದರ ಬರಹ.ಅತಿ ಸಾಮಾನ್ಯನಿಗೂ ಅರ್ಥವಾಗುವಂತೆ ಇದೆ.ಬರೆಯುವ ಹವ್ಯಾಸ ಇನ್ನೂ ಬೆಳೆಯಲಿ.ನಿನಗೆ ಶುಭವಾಗಲಿ