ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 27, 2020

1

ಮಹಾತ್ಮ ಬಸವಣ್ಣನವರು

‍ನಿಲುಮೆ ಮೂಲಕ

 – ಡಾ.ಸಂಗಮೇಶ ಸವದತ್ತಿಮಠ    

(ಕಳೆದ ವರ್ಷ (2019) ನಾನು ಕೆನಡಾ ದೇಶದ ಟೊರೊಂಟೊ ನಗರದಲ್ಲಿ ವೀರಶೈವ ಸಮಾಜ ಏರ್ಪಡಿಸಿದ್ದ ಬಸವಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಡಿದ ಭಾಷಣದ update ಮಾಡಿದ ಲೇಖನ ಪ್ರಸ್ತುತ ಬಸವಜಯಂತಿ ಸಂದರ್ಭದಲ್ಲಿ ಆಸಕ್ತ ಓದುಗರಿಗಾಗಿ ಇಲ್ಲಿದೆ)  

ಆತ್ಮೀಯ ನಾರ್ತ್ ಅಮೇರಿಕಾ ಟೋರೊಂಟೊ ಚಾಪ್ಟರ್‍ನ ವೀರಶೈವ ಸಮಾಜ ಬಾಂಧವರೆ,

ತಮಗೆಲ್ಲ ಬಸವಜಯಂತಿಯ ಹಾರ್ದಿಕ ಶುಭಾಶಯಗಳು.

ಕನ್ನಡನಾಡಿನ ಸೌಭಾಗ್ಯ ಎಂಬಂತೆ ಬಸವಣ್ಣನವರು ನಮ್ಮ ನಾಡಿನಲ್ಲಿ ಜನ್ಮತಳೆದರು. ಬಸವಣ್ಣನವರ ವ್ಯಕ್ತಿತ್ವ ಅಗಾಧವಾದದು, ಅದ್ಭುತವಾದದ್ದು, ಪರಿಪೂರ್ಣವಾದದ್ದು, ಬಹುಮುಖಿಯಾದದ್ದು. ಅವರನ್ನು ಒಬ್ಬೊಬ್ಬರೂ ಒಂದೊಂದು ದೃಷ್ಟಿಯಿಂದ ನೋಡಿದಾಗ ಅವರವರ ಭಾವದಂತೆ ಅವರು ಗೋಚರಿಸುತ್ತಾರೆ. ಅದೇ ಅವರÀ ವ್ಯಕ್ತಿತ್ವದ ವೈಶಿಷ್ಟ್ಯ.

1.ಒಬ್ಬನೆಂದ – ಬಸವಣ್ಣ ಒಬ್ಬ ರಾಜಕಾರಣಿ. ಹೌದು ಬಿಜ್ಜಳನ ಆಸ್ಥಾನದಲ್ಲಿದ್ದುದರಿಂದ ಅವರು political thinker .

  1. ಒಬ್ಬನೆಂದ – ರಾಜಕಾರಣಿಗಿಂತ ಅವರು ಒಬ್ಬ ಶ್ರೇಷ್ಠ ಅಧಿಕಾರಿ, ಆಡಳಿತಗಾರ. ಹೌದು ಅವರು Prime minister
  2. ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ಅಧಿಕಾರಿ ಎನ್ನುವುದಕ್ಕಿಂತ ಅವರೊಬ್ಬ ದಾರ್ಶನಿಕರು. ಹೌದು ಅವರು philosopher. ತತ್ತ್ವಜ್ಞಾನಿ.
  3. ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ದಾರ್ಶನಿಕ ಎನ್ನುವುದಕ್ಕಿಂತ ಅವರೊಬ್ಬ ಅಧ್ಯಾತ್ಮಜೀವಿ. ಹೌದು ಧರ್ಮದ ಚೌಕಟ್ಟಿನೊಳಗೆ ಭಕ್ತಿಯ ಸೋಪಾನಗಳನ್ನು ಇಟ್ಟು ಅಧ್ಯಾತ್ಮದ ಬೆಳಸು ತೆಗೆದವರು ಬಸವಣ್ಣನವರು.
  4. ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ದಾರ್ಶನಿಕ, ಅಧ್ಯಾತ್ಮಜೀವಿ ಎನ್ನುವುದಕ್ಕಿಂತ ಅವರೊಬ್ಬ ಸಮಾಜ ಸುಧಾರಕ. ಹೌದು Social reformer. ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ಬೇಕಾದುದೆಲ್ಲವನ್ನೂ ಅವರು ಮಾಡಿತೋರಿಸಿದ ಧೀಮಂತ ಸಮಾಜೋದ್ಧಾರಕರು.
  5. ಒಬ್ಬನೆಂದ – ರಾಜಕಾರಣಿ, ಆಡಳಿತಗಾರ, ದಾರ್ಶನಿಕ, ಅಧ್ಯಾತ್ಮಜೀವಿ, ಸಮಾಜ ಸುಧಾರಕ ಎನ್ನುವುದಕ್ಕಿಂತ ಅವರೊಬ್ಬ ಕ್ರಾಂತಿಪುರುಷ. ಹೌದು ತನ್ನ ಕಾಲದಲ್ಲಿ ಇದ್ದ ಸಾಮಾಜಿಕ ಅನಿಷ್ಟಗಳನ್ನು ಹೋಗಲಾಡಿಸಿ ಜನರ ಬದುಕಿನಲ್ಲಿ ಬದಲಾವಣೆಗಳನ್ನು ತಂದವರು.

ಹೀಗೆಯೇ ಜಂಗಮಪ್ರೇಮಿ, ಭಕ್ತಾನುಕಂಪಿ, ಬಾಗಿದ ತಲೆಯ ಮುಗಿದ ಕೈಯ ವಿನಯಶೀಲ, ಸಿಟ್ಟು, ಸೆಡವು, ದ್ವೇಷ, ಅಸೂಯೆ, ಈರ್ಷೆ ಇಲ್ಲದ ಎಲ್ಲರನ್ನೂ ಸಮಾನ ಗೌರವದಿದ ಕಾಣುವವ ಇತ್ಯಾದಿ ಇತ್ಯಾದಿ ಹೇಳುತ್ತಲೇ ಹೋಗಬಹುದು. ಒಂದೊಂದೇ ಮಗ್ಗಲುಗಳನ್ನು ಬಿಡಿಸುತ್ತ ಹೋದಂತೆ ಬಸವಣ್ಣನವರ ಒಟ್ಟು ವ್ಯಕ್ತಿತ್ವದ ಪದರು ಪದರುಗಳು ಬಿಚ್ಚಿಕೊಳ್ಳುತ್ತಲೇ ಹೋಗುತ್ತವೆ. ಎಂತಹ ಅದ್ಭುತ ! ಜಗದ ಅಚ್ಚರಿ ಅಲ್ಲವೆ?

ಬಸವಣ್ಣನವರ ಬಗೆಗೆ ತಿಳಿಯಲು ವಚನಗಳೇ ಪ್ರಥಮ ಮೂಲ ಆಕರಗಳು (Basic sources). ಇವಲ್ಲದೆ ಶಿಲಾಶಾಸನಗಳು, ಕಾವ್ಯ, ಚರಿತ್ರ, ಪುರಾಣ, ಇತ್ಯಾದಿ ಗ್ರಂಥಗಳು ಸಹಾಯಕವಾಗುತ್ತವೆ. ಆದರೆ ಬಸವಣ್ಣನವರ ಬದುಕಿನ ಎಷ್ಟೋ ಅಂಶಗಳು ಇನ್ನೂ ಅಸ್ಪಷ್ಟವಾಗಿ ಉಳಿದುಕೊಂಡಿವೆ. ಈ ವರೆಗೆ ತಿಳಿದ ಮಟ್ಟಿಗೆ ಬಸವಣ್ಣನವರು ಜನಿಸಿದ್ದು ಇಂಗಳೇಶ್ವರದಲ್ಲಿ. ಅವರ ತಂದೆ ಬಾಗೇವಾಡಿ ಅಗ್ರಹಾರದ ಮುಖ್ಯಸ್ಥನಾಗಿದ ಮಂಡಗೆ ಮಾದಿರಾಜ, ತಾಯಿ ಇಂಗಳೇಶ್ವರದ ಮಾದಲಾಂಬೆ. ಬಸವಣ್ಣನವರು ಕೂಡಲಸಂಗಮದಲ್ಲಿ ವಿದ್ಯಾಭ್ಯಾಸ ಮಾಡಿದರು. ಅಲ್ಲಿ ಜಾತವೇದ ಮುನಿಗಳಿಂದ ಲಿಂಗದೀಕ್ಷೆ, ಗುರೂಪದೇಶ ನಡೆಯಿತು.

ಮಡಿವಾಳ ಮಾಚಿದೇವ “ಕಪ್ಪಡಿಸಂಗಯ್ಯದೇವರ ಸ್ವಹಸ್ತದಿಂದಲುಪದೇಶಮಂ ಪಡೆದು” ಎಂದು ಹೇಳಿದ್ದಾರೆ (569) ಜಾತವೇದ ಮುನಿಗಳೇ ಕೂಡಲಸಂಗಮೇಶ್ವರ ದೇವಾಲಯದ ಹಿರಿಯ ಮುಖ್ಯಸ್ಥರಾಗಿದ್ದರಿಂದ ಅವರಿಗೆ ಕಪ್ಪಡಿಸಂಗಮೇಶ್ವರ ದೇವರೆಂದೂ ಕರೆಯುತ್ತಿದ್ದರು. ಬಸವಣ್ಣನವÀರಿಗೆ ದೇವರಾಜ ಎಂಬ ಅಣ್ಣನಿದ್ದ. ಅವನಿಗೆ ಕಲಿದೇವ ಎಂಬ ಮಗನಿದ್ದ. ಕಲಿದೇವನಿಗೆ ಹಾಲಬಸವದೇವ ಎಂಬ ಮಗನಿದ್ದ. ಬಸವಣ್ಣನವರಿಗೆ ಗಂಗಾಂಬಿಕೆ ನೀಲಾಂಬಿಕೆ ಎಂಬ ಇಬ್ಬರು ಹೆಂಡಂದಿರು. ಗಂಗಾಂಬಿಕೆ ಬಸವಣ್ಣನವರ ಸೋದರಮಾವ ಬಲದೇವನ ಮಗಳು. ನೀಲಾಂಬಿಕೆ ಬಿಜ್ಜಳನ ಸಾಕುಮಗಳು. ಬಸವಣ್ಣನವರ ವೈಚಾರಿಕ ವ್ಯಕ್ತಿತ್ವಕ್ಕೆ ಮಾರುಹೋಗಿ ಅವರನ್ನು ಪ್ರೀತಿಸಿ ಮದುವೆಯಾದವಳು. ಬಸವಣ್ಣನವರವರ ಕೊನೆಯ ದಿನಗಳಲ್ಲಿ ಬಸವಣ್ಣನವರಿಂದ ದೂರವಾದವಳು. ಬಲದೇವನು ಬಿಜ್ಜಳನ ಪ್ರಧಾನಿಯಾಗಿದ್ದವ. ಅವನೇ ಬಸವಣ್ಣನವರನ್ನು ಕೂಡಲಸಂಗಮದಿಂದ ಮಂಗಳವಾಡಕ್ಕೆ ಕರೆದುಕೊಂಡು ಹೋಗಿ ಬಿಜ್ಜಳನಲ್ಲಿ ಲೆಕ್ಕಾಧಿಕಾರಿ ಹುದ್ದೆಗೆ ನೇಮಿಸಿದವ. ಬಿಜ್ಜಳನು ಚಾಲುಕ್ಯ ಚಕ್ರವರ್ತಿ 6ನೇ ವಿಕ್ರಮಾದಿತ್ಯನ ಮಗಳ ಮಗ, ಅಂದರೆ ಮೊಮ್ಮಗ.  ಬಸವಣ್ಣನವರಿಗೆ ಬಾಲಸಂಗಯ್ಯ ಎಂಬ ಮಗನಿದ್ದನು. ಬಸವಣ್ಣನವರಿಗೆ ನಾಗಲಾಂಬಿಕೆ ಅಥವಾ ನಾಗಮ್ಮ ಎಂಬ ಸಹೋದರಿ ಇದ್ದಳು. ಅವಳು ತನ್ನ ತಮ್ಮನಾದ ಬಸವಣ್ಣನವರ ಮೇಲೆ ಅಪಾರ ಪ್ರೀತಿಯುಳ್ಳವಳಾಗಿದ್ದಳು. ಅವಳು ತನ್ನ ಪತಿ ಶಿವದೇವನೊಂದಿಗೆ ಕೂಡಲಸಂಗಮದಲ್ಲಿರುತ್ತಿದ್ದಳು. ಈ ದಂಪತಿಗಳಿಗೆ ಚೆನ್ನಬಸವಣ್ಣ ಎಂಬ ಮಗನಿದ್ದನು. ಬಸವಣ್ಣವರು ತಮ್ಮ 8 ನೇ ವಯಸ್ಸಿನಲ್ಲಿಯೇ ಮುಂಜಿವೆಯನ್ನು ತಿರಸ್ಕರಿಸಿ ಕೂಡಲಸಂಗಮಕ್ಕೆ ತಮ್ಮ ಅಕ್ಕನ ಮನೆಗೆ ಬಂದು ನಂತರ ಅಲ್ಲಿ ಕೂಡಲಸಂಗಮದ ಕ್ಷೇತ್ರಾಧಿಪತಿಗಳೂ ಪ್ರಕಾಂಡ ಪಂಡಿತರೂ ಆಗಿದ್ದ ಆಚಾರ್ಯ ಜಾತವೇದಮುನಿಗಳ ವಿದ್ಯಾಕೇಂದ್ರಕ್ಕೆ ಸೇರಿಕೊಂಡರು. ಅವರಿಂದ ಇಷ್ಟಲಿಂಗದೀಕ್ಷೆ ಪಡೆದರು.

ಕೂಡಲಸಂಗಮ ಕ್ಷೇತ್ರ ಬಹುದೊಡ್ಡ ವಿದ್ಯಾಕೇಂದ್ರವಾಗಿತ್ತು. ಕೂಡಲಸಂಗಮದ ಸುತ್ತ ಮುತ್ತಲಿದ್ದ ಮುದನೂರು, ಕೊಂಡಗುಳಿ, ಇಂಗಳೇಶ್ವರ ಮುಂತಾದ ಪ್ರದೇಶಗಳಲ್ಲಿ ಆಗಲೆ ಶೈವದಿಂದ ಭಿನ್ನವಾಗಿ ‘ಅಭಿನವ ಪಾಶುಪತ’ ಅಥವಾ ‘ವೀರಶೈವ’ ಧರ್ಮವು ಪ್ರಚಾರದಲ್ಲಿತ್ತು. ಮಲೆಯಾಳಪಂಡಿತರೆಂಬ ಆಚಾರ್ಯರು ಆ ಧರ್ಮದ ಪ್ರಸಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು ಎಂದು ಶಿಲಾಶಾಸನಗಳು ಉಲ್ಲೇಖಿಸಿವೆ. ಆ ಭಾಗದ ಪ್ರಕಾಂಡ ಶಿವಾಚಾರ್ಯರು ಕೂಡಲಸಂಗಮಕ್ಕೆ ಭೇಟಿ ನೀಡಿ ಧರ್ಮೋಪದೇಶ ನೀಡುತ್ತಿರಬೇಕು. ಇದರಿಂದ ಚಿಕ್ಕವಯಸ್ಸಿನಲ್ಲಿಯೇ ವೇದಾಧ್ಯಯನ, ಆಗಮಾಧ್ಯಯನ, ವೀರಶೈವ ಅಧ್ಯಯನಗಳನ್ನು ಮಾಡುವ ಸುಯೋಗ ಬಸವಣ್ಣನವರವರಿಗೆ ಮತ್ತು ಚೆನ್ನಬಸವಣ್ಣನವರಿಗೆ ಸಿಕ್ಕಿತು. ಶೈವ ಬ್ರಾಹ್ಮಣರೂ ಕೂಡಲಸಂಗಮ ವಿದ್ಯಾಕೇಂದ್ರದಲ್ಲಿ ಇದ್ದರು. ಅವರು ಶೈವ ಬ್ರಾಹ್ಮಣಧರ್ಮವನ್ನು ಧಿಕ್ಕರಿಸಿ ಬಂದ ಬಸವಣ್ಣನವರನ್ನು ತಿರಸ್ಕರಿಸುತ್ತಿದ್ದರು. ಹೀನಾಯವಾಗಿ ಕಾಣುತ್ತಿದ್ದರು. “ನೀನು ಯಾರವ? ಯಾರವ? ಬ್ರಾಹ್ಮಣನೂ ಅಲ್ಲ,  ಶೈವನೂ ಅಲ್ಲ ನೀನು ಯಾರವ?” ಎಂದು ಹೀಯಾಳಿಸತೊಡಗಿದರು. ಅಕ್ಕ ನಾಗಮ್ಮನ ಮಗ ಅಗಾಧ ಜ್ಞಾನಿ ಚೆನ್ನಬಸವಣ್ಣ ಅದಾಗಲೇ ಅದೇ ವಿದ್ಯಾಕೇಂದ್ರದಲ್ಲಿ ಓದುತ್ತಿದ್ದ.

ಶೈವಬ್ರಾಹ್ಮಣರು ತನ್ನನ್ನು ತೆಗಳುತ್ತಿರುವುದನ್ನು ಬಸವಣ್ಣನವರು ಅಳಿಯ ಚೆನ್ನಬಸವಣ್ಣನ ಮುಂದೆ ಹೇಳಿಕೊಂಡು ಇದಕ್ಕೇನು ಮಾಡಬೇಕು? ತಿಳಿಯದಾಗಿದೆ ಎಂದಾಗ ವಯಸ್ಸಿನಲ್ಲಿ ಚೆನ್ನಬಸವ ಚಿಕ್ಕವನಾದರೂ ತನ್ನ ಜ್ಞಾನದ ಮೇರೆಗೆ ವೀರಶೈವ ಧರ್ಮದ ವೈಶಿಷ್ಟ್ಯವನ್ನು ಬಸವಣ್ಣನವರಿಗೆ ತಿಳಿಯಹೇಳಿ ಆ ಧರ್ಮವನ್ನು ಸ್ವೀಕರಿಸಿದರೆ ಒಳಿತು ಎಂದು ಸೂಚಿಸುತ್ತಾರೆ. (ಈ ವಿಚಾರವನ್ನು ಬಸವಣ್ಣನವರೇ ತಮ್ಮ ವಚನಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ವಚನ ಸಂಖ್ಯೆ 1093, 1004)  ಅಷ್ಟೇ ಅಲ್ಲದೆ ಚೆನ್ನಬಸವಣ್ಣನವರು ಧೈರ್ಯಮಾಡಿ ಜಾತವೇದಮುನಿಗಳ ಬಳಿಗೆ ಕರೆದುಕೊಂಡು ಹೋಗಿ ಈ ವಿಚಾರ ಅವರ ಮುಂದೆ ಇಡುತ್ತಾರೆ. “ಶೈವಬ್ರಾಹಣ್ಯವನ್ನು ಬಿಟ್ಟು ಬಂದ ನಮ್ಮ ಮಾವನವರಿಗೆ ದಾರಿ ತೋರಿ” ಎಂದಾಗ  ಜಾತವೇದ ಮುನಿಗಳು ಬಸವಣ್ಣನವರಿಗೆ ಇಷ್ಟಲಿಂಗದೀಕ್ಷೆಯನ್ನು ನೀಡುತ್ತಾರೆ. ನಂತರ ಬಸವಣ್ಣನವರು  ತಮ್ಮ ಪೂರ್ವಾಶ್ರಮದ ಶೈವಬ್ರಾಹ್ಮಣರನ್ನು ತರಾಟೆಗೆ ತೆಗೆದುಕೊಳ್ಳತೊಡಗುತ್ತಾರೆ. ಶೈವಬ್ರಾಹ್ಮಣರಿಗೆ ಆಹ್ವಾನ ನೀಡುತ್ತಾರೆ. ವೇದಾಗಮಗಳನ್ನೇ ಮುಂದು ಮಾಡಿಕೊಂಡು ತೆಗಳುತ್ತಿದ್ದ ಅವರಿಗೆ ‘ನಿಮ್ಮ ಆಗಮ, ನಿಮ್ಮ ವೇದಗಳನ್ನು ಕಣ್ಣು ತೆಗೆದು ನೋಡಿ. ನಿಮ್ಮ ವೇದಾಗಮಗಳನ್ನು ಒರೆಗೆ ಹಚ್ಚಿ ನೋಡುವೆ ಅವುಗಳ ಮೂಗ ಕೊಯ್ಯುವೆ.’ ಎಂದು ಮುಂತಾಗಿ ತಮ್ಮನ್ನು ತೆಗಳುತ್ತಿದ್ದ ಶೈವರನ್ನು ಛೇಡಿಸುತ್ತಾರೆ. ನಂತರ ನಿರಂತರವಾಗಿ ವೇದಾಗಮಗಳ ಬ್ರಾಹ್ಮಣರನ್ನು ಅವರ ಹುಸಿತನವನ್ನು ತಮ್ಮ ವಚನಗಳಲ್ಲಿ ಎತ್ತಿ ಆಡುತ್ತಾರೆ.

ಬಸವಣ್ಣನವರು ಬಾಗೇವಾಡಿಯನ್ನು ಮತ್ತು ತಮ್ಮ ಧರ್ಮವನ್ನೂ ಬಿಟ್ಟು ಕೂಡಲಸಂಗಮಕ್ಕೆ ಬಂದ ವಿಷಯವನ್ನು ತಿಳಿದ ಸೋದರಮಾವನೂ ಬಿಜ್ಜಳನ ಪ್ರಧಾನಮಂತ್ರಿಯೂ ಆಗಿದ್ದ ಬಲದೇವನು ರಾಜಧಾನಿ ಮಂಗಳವಾಡಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಹಣಕಾಸು ಇಲಾಖೆಯ ಲೆಕ್ಕಪತ್ರ ಮುಖ್ಯಸ್ಥನನ್ನಾಗಿ ನೇಮಿಸುತ್ತಾನೆ. ತನ್ನ ಮಗಳು ಗಂಗಾಬಿಕೆಯನ್ನು ಕೊಟ್ಟು ಲಗ್ನಮಾಡುತ್ತಾನೆ. ಅಲ್ಲಿದ್ದ ಬಿಜ್ಜಳನ ಮಗಳು ನೀಲಲೋಚನೆಗೂ ಬಸವಣ್ಣನವರ ಮೇಲೆ ಪ್ರೀತಿ ಹುಟ್ಟುತ್ತದೆ, ಅವಳೂ ಬಸವಣ್ಣನವರ ಪತ್ನಿಯಾಗುತ್ತಾಳೆ.

ಬಿಜ್ಜಳ ತಾನು ಚಕ್ರವರ್ತಿ ಅಲ್ಲದಿದ್ದರೂ ಚಕ್ರವರ್ತಿ ಎಂದು ಹೇಳಿಕೊಳ್ಳುತ್ತಲಿದ್ದ ಮಹತ್ವಾಕಾಂಕ್ಷಿ ಅರಸು. ತನ್ನ ರಾಜ್ಯವಿಸ್ತಾರದ ಉದ್ದೇಶದಿಂದ  ಮಂಗಳವಾಡದಿಂದ ಕಲ್ಯಾಣಕ್ಕೆ ತನ್ನ ರಾಜಧಾನಿಯನ್ನು ಬದಲಿಸುತ್ತಾನೆ. ಹಾಗಾಗಿ ಬಸವಣ್ಣನವರೂ ಕುಟುಂಬ ಸಮೇತ ಕಲ್ಯಾಣಕ್ಕೆ ಬರುವಂತಾಗುತ್ತದೆ. ಬಸವಣ್ಣನವರಿಗೆ ಹುದ್ದೆ, ಮಂತ್ರಿಗಿರಿ, ಕೀರ್ತಿಲಾಲಸೆ, ರಾಜಭಾರ, ಯುದ್ಧ ಇತ್ಯಾದಿ ಯಾವುದರ ಕಡೆಗೂ ಗಮನವಿರುತ್ತಿದ್ದಿಲ್ಲ. ಅವರದ್ದೇನಿದ್ದರೂ ಧರ್ಮ, ಅಧ್ಯಾತ್ಮ, ಸಮಾಜಸೇವೆ, ಮಾನವತೆ ಕಡೆಗೆ ಲಕ್ಷ. ಸಮಾಜಮುಖಿಯಾದ ಚಿಂತನೆ, ವ್ಯಕ್ತಿಶುದ್ಧನಾಗುವುದರಿಂದ ಸಮಾಜವೂ ಶುದ್ಧವಾಗಬೇಕೆಂಬ  ಹಂಬಲ.

ಒಂದೆಡೆ ಮಂತ್ರಿಪದದ ಕರ್ತವ್ಯ, ಇನ್ನೊಂದೆಡೆ ಧಾರ್ಮಿಕ ಸಾಮಾಜಿಕ ಸೇವೆ ಎರಡನ್ನೂ ಒಟ್ಟಿಗೆ ನಿಭಾಯಿಸುವುದು ದುಸ್ತರವಾದ ಕಾರಣಕ್ಕೆ ಮಂತ್ರಿಪದವಿಯನ್ನೆ ಬಸವಣ್ಣನವರು ಬಿಡಬೇಕಾಯಿತು. ಅದೇ ಸಮಯದಲ್ಲಿ ಹರಳಯ್ಯ ಮಧುವರಸರ ಮಕ್ಕಳ ಮದುವೆಯ ಪ್ರಸಂಗ ನಡೆಯಿತು. ಇದು ಅಂತರ್‍ಜಾತಿ/ಧರ್ಮ ವಿವಾಹವಾಗಿತ್ತು. ಆಗಿನ ಕಾಲದಲ್ಲಿ ಇಂತಹ ಮದುವೆಗೆ ಸಾಮಾಜಿಕ ಮನ್ನಣೆ ಇರಲಿಲ್ಲ. ಆದರೆ ವಾಸ್ತವವಾಗಿ ಬಸವಣ್ಣನವರು ಲಿಂಗಧಾರಣೆ ಮಾಡಿಸಿದ್ದರಿಂದ ಅವರ ಪೂರ್ವಾಶ್ರಮದ ಜಾತಿಧರ್ಮಗಳು ಅವರ ಸಂಬಂಧವನ್ನು ಕಳಚಿಕೊಂಡಿದ್ದವು. ಈ ಘಟನೆಯನ್ನು ಉಪಯೋಗಿಸಿಕೊಂಡ ಕುಹಕಿಗಳು ಬಸವಣ್ಣನವರವರ ವಿರುದ್ಧ ರಾಜದ್ರೋಹದ ಧರ್ಮದ್ರೋಹದ ಆರೋಪಗಳನ್ನು ಹೊರಿಸಿದರು. ಶಿವಶರಣರಿಗೆ ರಾಜರಕ್ಷಣೆ ಇಲ್ಲದಂತಾಯಿತು. ವಿರೋಧಿಗಳು ಇದೇ ಸಮಯವನ್ನು ಉಪಯೋಗಿಸಿಕೊಂಡು ಬಿಜ್ಜಳನ ಕೊಲೆ ಮಾಡಿಸಿ ಮೊಲ್ಲೆ ಬೊಮ್ಮಯ್ಯರ ಮೇಲೆ ಹಾಕಿ ಅಪವಾದವನ್ನು ಶರಣರ ತಲೆಗೆ ಕಟ್ಟಿದರು. ಬಿಜ್ಜಳನ ಮಗ ರಾಯಮುರಾರಿ ಸೋಯಿದೇವ ತನ್ನ ತಂದೆಯ ಕೊಲೆಗೆ ಶಿವಶರಣರೇ ಕಾರಣವಿರಬಹುದೆಂಬ ಪಿಸುಣರ ಮಾತಿಗೆ ಬೆಲೆಕೊಟ್ಟು ಶರಣರ ಚಂಡಾಡಲು ತನ್ನ ಸೈನ್ಯಕ್ಕೆ ಆಜ್ಞೆ ಮಾಡಿದ.

ಶಿವಶರಣರ ರಕ್ತದ ಕೋಡಿ ಕಲ್ಯಾಣದ ಬೀದಿಬೀದಿಗಳಲ್ಲಿ ಹರಿಯಿತು. ಶರಣರು ಮೂರು ದಿಕ್ಕುಗಳಲ್ಲಿ ಗುಂಪು ಗುಂಪಾಗಿ ಪಲಾಯನ ಮಾಡಿದರು. ಅದ್ಭುತವಾಗಿ ಉತ್ತುಂಗಕ್ಕೇರುತ್ತಿದ್ದ ಬಸವಣ್ಣನವರ ಕನಸಿನ ಸಾಮಾಜಿಕ ಕ್ರಾಂತಿಯು ರಾಜಕೀಯ ವಿಪ್ಲವದಿಂದಾಗಿ ಕಳೆಕುಂದಿಹೋಯಿತು. ಬಸವಣ್ಣನವರು ತಮ್ಮ ಕಣ್ಣ ಮುಂದೆಯೇ ತಾವು ಕಟ್ಟಬಯಸಿದ್ದ ಆದರ್ಶ ಸಾಮಾಜಿಕ ಕ್ರಾಂತಿಯು ರಕ್ತಕ್ರಾಂತಿಯಾಗಿ ಮಾರ್ಪಟ್ಟಿದ್ದನ್ನು ಕಂಡು ಕಡುನೊಂದು ಕೂಡಲಸಂಗಮಕ್ಕೆ ಬರುತ್ತಾರೆ. ಮನಸ್ಸಿನ ಗಾಯ ಹೃದಯಕ್ಕೆ ತಟ್ಟಿ ಸಂಗಮನಾಥನಲ್ಲಿ ಐಕ್ಯವಾಗುತ್ತಾರೆ.

ಅವರು ಐಕ್ಯವಾದದ್ದು ಕ್ರಿ.ಶ. 1185-86ರ ವೇಳೆಗೆ. ಪ್ರಾಯಃ ಅವರಿಗೆ ಆಗ ಇನ್ನೂ ಮಧ್ಯವಯಸ್ಸು. ಚೆನ್ನಬಸವಣ್ಣನವರು ನೂರಾರು ಶರಣರೊಡನೆ ಕಲಬುರ್ಗಿ, ಜೇವರ್ಗಿ, ಅರಳಗುಂಡಗಿ, ಮೋರಟಗಿ, ಜೇರಟಗಿ, ಹಿಪ್ಪರಗಿ, ಸಿಂದಗಿ, ಇಂಗಳೇಶ್ವರ, ಬಾಗೇವಾಡಿ, ಮುತ್ತಗಿ, ತೆಲಗಿ, ಬೀಳಗಿ, ಗೊಡಚಿ, ಮುರಗೋಡ, ಹೊಸೂರ, ಮುಗಟಖಾನ ಹುಬ್ಬಳ್ಳಿ, ಕಾದರೊಳ್ಳಿ, ಧಾರವಾಡ, ದಾಂಡೇಲಿ ಮೂಲಕ ಉಳವಿಗೆ ತಲುಪಿದರು. ಇದು ಬಸವಣ್ಣನವರವರ ಜೀವಿತದ ಕಥೆ. ಇದಕ್ಕಿಂತ ಅವರ ಸಾಧನೆಯ ಕಥೆ ಹೆಚ್ಚು ಮಹತ್ವದ್ದು. ಬಸವಣ್ಣನವರು ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಬಸವಣ್ಣನವರ ವ್ಯಕ್ತಿತ್ವದ ಚಿತ್ರಣವನ್ನು ಲೆಕ್ಕವಿಲ್ಲದಷ್ಟು ಜನ ವರ್ಣಿಸಿದ್ದಾರೆ ಇನ್ನೂ ವರ್ಣಿಸುತ್ತಲೇ ಇರುತ್ತಾರೆ. ಬಸವಣ್ಣನವರನ್ನು ಮೆಚ್ಚದೇ ಇರುವ ಯಾವೊಬ್ಬನೂ  ಜಗತ್ತಿನಲ್ಲಿ ಸಿಗಲಾರ.

ಕೊನೆಗೊಂದು ಮಾತು, ಇಂದಿನ ಕರೋನಾ ವೈರಸ್ ಸಂದರ್ಭದಲ್ಲಿ ಬಸವಣ್ಣನವರ ಮಾನವತಾವಾದದ ಸಂದೇಶವನ್ನು ನೆನಪಿಸಿಕೊಂಡು ಆಚರಣೆಯಲ್ಲಿ ತರುವುದರ ಮೂಲಕ ಬಸವಣ್ಣನವರ ಕನಸಿನ ಜಾತಿರಹಿತ, ಕಾಯಕನಿಷ್ಠ, ಮೇಲುಕೀಳಿಲ್ಲದ, ಸರ್ವಮಾನತೆಯ, ಮನುಜಮನುಜರಲ್ಲಿ ಭೇದಭಾವವಿಲ್ಲದ, ಪರಸ್ಪರ ಪ್ರೀತಿವಿಶ್ವಾಸವನ್ನು ಬೆಳೆಸುವ ಹೊಸ ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡೋಣ. ಬಸವಣ್ಣನವರು ಕಟ್ಟಬೇಕೆಂಬ ಸಮಾಜ ನಿರ್ಮಾಣವಾಗಬೇಕಾದರೆ  ಧರ್ಮ ಜಾತಿಗಳ ಬಗ್ಗೆ ನಾವು ಕಟ್ಟಿಕೊಳ್ಳುತ್ತಿರುವ ಗೋಡೆಗಳನ್ನು ಮೊದಲು ಕೆಡವಬೇಕು. ಅವರು ನಮ್ಮವರಲ್ಲ, ನಮ್ಮವರಿಗಷ್ಟೇ ನಮ್ಮ ಸಮಾಜ ಎನ್ನುವ ಸಂಕುಚತತೆ ತೊಲಗಬೇಕು. ವಿಶ್ವಸಂಸ್ಥೆಯಲ್ಲಿ ಈಚೆಗೆ ಸರ್ವಧರ್ಮ ಸಮಾವೇಶದಲ್ಲಿ ಎಸ್.ಎನ್.ಗೋಯಲ್ ಒಂದು ಮಾತಿನಿಂದ ತಮ್ಮ ಭಾಷಣವನ್ನು ಆರಂಭಿಸಿದ್ದರು ಆ ಮಾತು ಹೀಗಿದೆ: Religion is a religion only when it unites the people. Religion is no more a religion when it divides the people. ಯಾವಧರ್ಮವು ಜನರನ್ನು ಒಗ್ಗೂಡಿಸುತ್ತದೆಯೆಯೋ ಅದು ಧರ್ಮ. ಇಷ್ಟಲಿಂಗ ಪೂಜಕರೆಲ್ಲ ಒಂದೇ ಎಂದು ಸಾರಿದ ಬಸವಣ್ಣನವರ ಒಂದು ನುಡಿಯನ್ನು ನಾವು ಪಾಲಿಸಿದರೆ ಸಾಕು. ನಾವು ಲಿಂಗಿಗಳಧರ್ಮ, ವೀರಮಾಹೇಶ್ವರಧರ್ಮ, ವೀರಶೈವಧರ್ಮ, ಬಸವಧರ್ಮ, ಶರಣಧರ್ಮ, ಲಿಂಗಾಯತ ಧರ್ಮ ಆ ಧರ್ಮ ಈ ಧರ್ಮ ಎಂದು ಲಿಂಗವಂತರನ್ನು ಧರ್ಮದ ಹೆಸರಿನಲ್ಲಿ ವಿಭಜನೆ ಮಾಡುತ್ತ ಜನರ ಭಾವನೆಗಳನ್ನು ಒಡೆಯುತ್ತಹೋದರೆ ಜಗತ್ತಿನಲ್ಲಿ ನಮ್ಮಷ್ಟು ಕ್ಷುಲ್ಲಕರು ಯಾರೂ ಆಗುವುದಿಲ್ಲ. ಬಸವಣ್ಣನವರ ಆತ್ಮವಂತೂ ಇದನ್ನು ಮೆಚ್ಚುವುದಿಲ್ಲ.

ಇನ್ನಾದರೂ ಬುದ್ಧಿಜೀವಿಗಳು ಈ ಭೇದಭಾವದ ಬರೆಹಗಳನ್ನು ನಿಲ್ಲಿಸಲಿ. ಮತ್ತೊಬ್ಬರ ಆಚಾರಗಳು ವಿಚಾರಗಳು ನಮಗೆ ಸೇರದಿರಬಹುದು. ಆದರೆ ಅವರನ್ನು ಟೀಕಿಸಿ, ತುಚ್ಛೀಕರಿಸುವುದು ಸಲ್ಲದೆಂಬುದನ್ನು ಬಸವಣ್ಣನವರೇ ಒಂದು ವಚನದಲ್ಲಿ ಸ್ಪಷ್ಟಪಡಿಸಿದ್ದಾರೆ. ಆ ವಚನ ಹೀಗಿದೆ: “ಚಿಕ್ಕದೊಂದು ಹೊತ್ತಗೆ, ಬೆನಕನ ಕರಡಿಗೆಯಯ್ಯಾ | ನೀ ಡುಂಡುಟಿ ಗೊರವನಯ್ಯ, ಪುಣ್ಯವೇನಾದರಾಗಲಿ ಡಕ್ಕೆಯ ಮೇಲೆ ಅಕ್ಕಿಯ ತಳೆದೆನು | ನಮ್ಮ ಕೂಡಲಸಂಗಮದೇವನಲ್ಲದೆ ಅನ್ಯ ದೈವ ಉಂಟೆನ್ನದಿರು ಕಂಡಾ||.” ಈ ವಚನದ ಸಂದರ್ಭ ಹೀಗಿದೆ: ಬಸವಣ್ಣನವರ ಮನೆಯ ಮುಂದೆ ಒಮ್ಮೆ ತಲೆಯ ಮೇಲೆ ಒಂದು ಬುಟ್ಟಿಯಲ್ಲಿ ಗಣಪತಿ ಮೂರ್ತಿ, ಚಿಕ್ಕದಾದ ಒಂದು ಪುಸ್ತಕ ಇಟ್ಟುಕೊಂಡು ದುಂಡುಚಿ ಬಾರಿಸುತ್ತ ಭಿಕ್ಷೆ ಬೇಡುತ್ತ ಗೊರವನ ವೇಷಧಾರಿಯೊಬ್ಬ ಬರುತ್ತಾನೆ. ಬಸವಣ್ಣನವರು ಇಷ್ಟಲಿಂಗವಲ್ಲದೆ ಬೇರೆ ಯಾವ ದೇವರನ್ನೂ ಪೂಜಿಸುವಂತಿಲ್ಲ ಎಂಬ ಏಕದೇವೋಪಾಸನೆಯ ತತ್ತ್ವದವರು. ಆದರೂ ಈ ಗೊರವನನ್ನು ಅವರು ತುಚ್ಛ ಮಾಡದೆ ಪಾಪ ಪುಣ್ಯ ಏನಾದರಾಗಲಿ ಎಂದು ಅವನಿಗೆ ಅಕ್ಕಿ ಹಾಕಿ ಕಳಿಸುತ್ತಾರೆ. ಇದು ಬಸವಣ್ಣನವರ ರೀತಿ.

ಕೂಡಲಸಂಗಮದಲ್ಲಿ ಸ್ಥಾವರ ಸಂಗಮೇಶ್ವರನನ್ನೂ ಪೂಜಿಸಿ ತಾವು “ಉಭಯಲಿಂಗಸಂಗಿ” ಎಂದು ಹೇಳಿ ಆಚರಿಸಿದವರು ಬಸವಣ್ಣನವರು. ತಮಿಳುನಾಡಿನ 63 ಪುರಾತನ ಶೈವರನ್ನು ಅತ್ಯಂತ ಗೌರವದಿಂದ ಕಂಡವರು ಬಸವಣ್ಣನವರು ಮತ್ತು ಅವರನ್ನು ಅನುಸರಿಸಿದ್ದ ಅಸಂಖ್ಯಾತ ಶಿವಶರಣರು. ಇತಿಹಾಸದ ವ್ಯಕ್ತಿಗಳನ್ನು ಸಮಾಜವನ್ನು ವರ್ತಮಾನದ ವ್ಯಕ್ತಿ ಸಮಾಜಕ್ಕೆ ಅನವಶ್ಯಕವಾಗಿ ಹೋಲಿಸಿ ಅವರು ಮತ್ತು ಅವರನ್ನು ಹೊಂದಿರುವ ಇವರು ನಮ್ಮವರಲ್ಲ ಅವರು ಹೊರಗಿನಿಂದ ಬಂದವರು ನಮ್ಮಲ್ಲಿ ಸೇರಿಕೊಂಡು ನಮ್ಮನ್ನು ಹಾಳುಮಾಡಿದವರು ಎಂದೆಲ್ಲ ಭೇದಕಲ್ಪಿಸಿ ಹೀಯಾಳೀಕೆಯ ಬರೆಹ ಮತ್ತು ಮಾತಿನಲ್ಲಿ ತುಚ್ಛಮಾಡುವವರನ್ನು ಇಂದಿನ ಬುದ್ಧಿವಂತ ಸಮಾಜದವರು ತಿರಸ್ಕರಿಸಬೇಕಾಗಿದೆ. ನಮ್ಮ ದೇಶಕ್ಕೆ ಹೊರಗಿನಿಂದ ಅನೇಕ ಧರ್ಮಗಳು ಬಂದಿವೆ. ಅವೆಲ್ಲವನ್ನೂ ಸಹಿಸಿಕೊಂಡಿರುವ ನಾವು ಲಿಂಗವಂತರಾದ ಸರ್ವರನ್ನೂ ಸಮಾನವಾಗಿ ಸಹಿಸಿಕೊಳ್ಳುವುದಕ್ಕೆ ಆಗುವುದಿಲ್ಲವೆ? ಮನುಷ್ಯರಲ್ಲಿ ಧರ್ಮಗಳಲ್ಲಿ ಭೇದಭಾವವನ್ನು ಕಾಣದಿರುವ, ಅನ್ಯರನ್ನು ತುಚ್ಛ ಮಾಡದಿರುವುದೇ ಬಸವಣ್ಣನವರು ಹೇಳಿದ ಧರ್ಮವಾಗುತ್ತದೆ. ಇಂದಿನ ಸಂದರ್ಭದಲ್ಲಿ ನಮ್ಮ ಪ್ರತಿಷ್ಠೆ ಅಹಂಕಾರ ಸ್ವಾರ್ಥಗಳನ್ನು ಬಿಟ್ಟು ಎಲ್ಲ ಮಾನವರನ್ನೂ ಪ್ರೀತಿಸುವ ಧರ್ಮವನ್ನು ನಾವು ಕಟ್ಟೋಣ ಅದುವೇ ಮಹಾತ್ಮ ಬಸವಣ್ಣನವರ ಧರ್ಮ.

ಶರಣು ಶರಣಾರ್ಥಿಗಳು.

1 ಟಿಪ್ಪಣಿ Post a comment
  1. ಪ್ರಕಟಿಸಿದ ತಮಗೆ ಅನಂತ ಧನ್ಯವಾದಗಳು. ಪ್ರೊ.ಸವದತ್ತಿಮಠರ ಲೇಖನ ಅತ್ಯಂತ ಸಕಾಲಿಕ. ವ್ಯವಸ್ಥೆ ಗೆ ಹಿಡಿದ ಕನ್ನಡಿ! ನಾನು ತುಂಬಾ ಮೆಚ್ಚಿಕೊಂಡೆ. ನಮ್ಮ ಜನ ಈಗಲಾದರೂ ತಮ್ಮ ಡಾಂಭಿಕ ಪ್ರವೃತ್ತಿಗೆ ಗುಡ್ಬೈ ಹೇಳಿ ಆಚಾರ ವಿಚಾರ ಗಳು ಅಂತರ ನೀಗಿ ಬಸವಣ್ಣ ಮತ್ತು ಶರಣರು ತೋರಿದ ಮಾರ್ಗವನ್ನು ಅನುಸರಿಸಿ ಮಾನವರಾಗಿ ಯೂ ಮಾಧವರಾಗಿಯೂ (ಶಿವ-ಶರಣ ಎನ್ನೋಣ, ಬೇಕಾದರೆ) ಬಾಳಲು ಮನಸು ಮಾಡಲಿ. ಇದು ಪ್ರಸ್ತುತ ಲೇಖನದ/ಲೇಖಕರ ಧ್ಯೇಯವಾಗಿದೆ.
    ನನ್ನ ಸಂಪೂರ್ಣ ಸಹಮತವಿದೆ. Endorseed by every sane minded person.ಅನ್ನಲಡ್ಡಿಯಿಲ್ಲ. ಇವರ ಉದಾತ್ತ ವಿಚಾರಗಳು ಎಲ್ಲೆಡೆ ಪ್ರತಿಧ್ವನಿಸಿ ಬಸವ ಜಯಂತಿಯಂದೇ ಕೇಳಿಬರುವ rhetoric ಆಗದೆ ನಿಜ ಜೀವನದಲ್ಲಿ ಅಳವಡಿಕೆಯಾದೊಡೆ ಸ್ವರ್ಗ ಮತ್ತೆಲ್ಲಿ ಇರಲು ಸಾಧ್ಯ ಹೇಳಿ ಮಿತ್ರರೇ?

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments