ವಿಷಯದ ವಿವರಗಳಿಗೆ ದಾಟಿರಿ

ಮಾರ್ಚ್ 27, 2015

6

ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ? – ಭಾಗ 1

‍ನಿಲುಮೆ ಮೂಲಕ

– ರೋಹಿತ್ ಚಕ್ರತೀರ್ಥ

Gopala Krishna Adigaಗೋಪಾಲಕೃಷ್ಣ ಅಡಿಗರು ನನ್ನ ಮೆಚ್ಚಿನ ಕವಿ.ಲ್ಯಾಟಿನ್ ಜಗತ್ತಿಗೆ ನೆರೂಡ ಇದ್ದ ಹಾಗೆ, ಶಿಷ್ಟ ಅಮೆರಿಕಕ್ಕೆ ಎಲಿಯೆಟ್ ಇದ್ದ ಹಾಗೆ ಕನ್ನಡ ಜಗತ್ತಿಗೆ ಅಡಿಗರು. ಅವರನ್ನು ಕೇವಲ ಕನ್ನಡದ ನೆಲಕ್ಕೆ ಸೀಮಿತಗೊಳಿಸುವುದು ತಪ್ಪಾಗಬಹುದು. ಅಡಿಗರು ಇಂಗ್ಲೀಷಿನಲ್ಲಿ ಬರೆದಿದ್ದರೆ ಅಥವಾ ಅವರು ಬರೆದಿದ್ದನ್ನು ಅಷ್ಟೇ ಸಮರ್ಥವಾಗಿ ಇಂಗ್ಲೀಷಿಗೆ ಅನುವಾದಿಸುವುದು ಸಾಧ್ಯವಿದ್ದರೆ, ನಮಗೆ ಇನ್ನೊಂದು ನೊಬೆಲ್ ಅನಾಯಾಸವಾಗಿ ದೊರೆಯುತ್ತಿತ್ತು. ಅಡಿಗರ ಕಾವ್ಯಕೃಷಿಯ ಬಗ್ಗೆ ಗೊತ್ತಿಲ್ಲದ ಕನ್ನಡಿಗ ಸಿಗುವುದು ಅಪರೂಪ. ಅವರ ಹೆಸರು ತಿಳಿಯದವರು ಕೂಡ “ಯಾವ ಮೋಹನ ಮುರಲಿ ಕರೆಯಿತು ದೂರ ತೀರಕೆ ನಿನ್ನನು” ಎಂಬ ಹಾಡು ಕೇಳಿದರೆ, ಕೊರಳು ತುರಿಸಿಕೊಳ್ಳುವ ಬೆಕ್ಕಿನಂತೆ ಕಣ್ಣುಮುಚ್ಚಿ ಕಾವ್ಯಾರ್ಥವನ್ನು ಆನಂದಿಸುತ್ತಾರೆ. ನವ್ಯ ಎಂಬ ಒಂದು ಪಂಥವನ್ನೇ ಕನ್ನಡದಲ್ಲಿ ಸೃಷ್ಟಿಸಿದ, ಕಾವ್ಯಲೋಕದಲ್ಲಿ ಹೊಸದಾರಿ ಕೊರೆದ, ಒಂದು ಯುಗದ ಕಣ್ಣು ತೆರೆಸಿದ ಕವಿ ಎಂದು ಕರೆಸಿಕೊಂಡ ಅಡಿಗರು ಕನ್ನಡಿಗರಿಗೆ ಕೊಟ್ಟಿರುವ ಸಫಲ ಕವಿತೆಗಳ ಸಂಖ್ಯೆ ದೊಡ್ಡದು. ಕುಮಾರವ್ಯಾಸನನ್ನು ಓದಿಕೊಂಡರೆ ಹೇಗೋ ಹಾಗೆಯೇ ಅಡಿಗರನ್ನು ಓದಿಕೊಂಡರೂ ಶಬ್ದ ಮತ್ತು ಅರ್ಥಗಳ ದಾರಿದ್ರ್ಯ ಬರುವುದಿಲ್ಲ ಎಂದು ಧೈರ್ಯವಾಗಿ ಹೇಳಬಹುದು.

ಚೈತ್ರ ಮಾಸದ ಶುಕ್ಲಪಕ್ಷದ ಒಂಬತ್ತನೆ ದಿನ ನವಮಿ. ರಾಮನ ಬರ್ತ್‍ಡೇ. ರಾಮಾಯಣದ ನಾಯಕಮಣಿ, ಮರ್ಯಾದಾಪುರುಷೋತ್ತಮ ಶ್ರೀರಾಮಚಂದ್ರನ ಬಗ್ಗೆ ಅಡಿಗರು ಒಂದು ಕವಿತೆ ಬರೆದಿದ್ದಾರೆ. ಉಡುಪಿಯ ರಥಬೀದಿಯ ಪರಿಸರದಲ್ಲಿ ಪ್ರತಿವರ್ಷದ ಬೇಸಗೆಯಲ್ಲಿ ನಡೆಯುವ ವಸಂತೋತ್ಸವದಲ್ಲೊಮ್ಮೆ ಅವರು ಈ ಕವನ ವಾಚಿಸಿದ್ದರಂತೆ. (ಪ್ರಾಸಂಗಿಕವಾಗಿ ಒಂದಷ್ಟು ಮಾತು: ಉಡುಪಿ ಮತ್ತು ಅಡಿಗರ ಸಂಬಂಧಕ್ಕೆ ಹಲವು ಕೊಂಡಿಗಳಿವೆ. ಅಡಿಗರು ಆಚಾರ್ಯ ಮಧ್ವರ ಮೇಲೆ “ಆನಂದತೀರ್ಥರಿಗೆ” ಎಂಬ ಕವಿತೆ ಬರೆದಿದ್ದಾರೆ. ಹಾಗೆಯೇ, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕ ಮತ್ತು ಪ್ರಿನ್ಸಿಪಾಲ್ ಆಗಿಯೂ ಕೆಲವರ್ಷ ಕೆಲಸ ಮಾಡಿದ್ದಾರೆ. ಅವರ “ಸುವರ್ಣಪುತ್ಥಳಿ” ಕವನಸಂಗ್ರಹಕ್ಕೆ ಉಡುಪಿಯ ಜಿ. ರಾಜಶೇಖರ ಮುನ್ನುಡಿ ಬರೆದರು)

ರಾಮನ ಬರ್ತ್‍ಡೇಗಾಗಿ ಬರೆದ “ಶ್ರೀ ರಾಮನವಮಿಯ ದಿವಸ” ಕವಿತೆ ಅಡಿಗರ ಅತ್ಯುನ್ನತ ಫಲಗಳಲ್ಲಿ ಒಂದು ಎನ್ನುವುದು ನಿರ್ವಿವಾದ. ಸ್ವಾರಸ್ಯವೆಂದರೆ, ಇದು, ಇತಿಹಾಸದಲ್ಲಿ ಆಗಿಹೋಗಿರುವ ಒಬ್ಬ ಮಹಾನ್ ಪ್ರತಿಭಾಶಾಲಿ ಕವಿಯ ಕಾವ್ಯ ಕಟ್ಟುವ ಕೆಲಸದ ಬಗ್ಗೆ ಇನ್ನೊಬ್ಬ ಅಷ್ಟೇ ಪ್ರತಿಭಾಪೂರ್ಣನಾದ ಕವಿ ಬೆರಗುಗಣ್ಣಿನಿಂದ ನೋಡುತ್ತ ವ್ಯಕ್ತಪಡಿಸಿರುವ ಪ್ರಶಂಸೆ! ಅದನ್ನು ಅರ್ಥಮಾಡಿಕೊಂಡು ಆಸ್ವಾದಿಸಲು ನಮಗೆ ಅಡಿಗರ ಕಾವ್ಯದಲ್ಲಿ ತುಸುಮಟ್ಟಿನ ಪ್ರವೇಶ ಇರುವುದು ಒಳ್ಳೆಯದು. ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಗಳು ಮಲ್ಲಿಗೆಯ ಬಳ್ಳಿಯಂತೆ ತನ್ನ ಬೇರಿನ ಸುತ್ತಲೇ ವೃತ್ತಾಕಾರವಾಗಿ ಹರಡಿಕೊಳ್ಳುವ ಗುಣದವಾದರೆ,ಅಡಿಗರ ಕಾವ್ಯ ಹೀಗೆ ಹರಡಿಕೊಳ್ಳುವುದಲ್ಲ, ಬದಲು ಒಂದು ನಿರ್ದಿಷ್ಟ ದಿಕ್ಕನ್ನು ಗುರಿಯಾಗಿಸಿಕೊಂಡು ಮುಮ್ಮುಖವಾಗಿ ಚಲಿಸುವ ಕಾವ್ಯ. ಅಡಿಗರ ಒಳ್ಳೆಯ ಕವಿತೆಗಳಲ್ಲಿ ಈ ಹಿಂದೆಮುಂದೆ ತುಯ್ದಾಡುವ ಗುಣವನ್ನು ನಾವು ಕಾಣಬಹುದು. ಒಂದು ಕಾವ್ಯವಸ್ತುವನ್ನು ಬಹಳ ಹೊತ್ತು ಧ್ಯಾನಿಸಿ, ಪೇಪರಿಗಿಳಿಸಿ, ಕಾವ್ಯಾಂಶಗಳನ್ನು ತುಂಬಿಸಿ ಅದನ್ನು ಮತ್ತೆಮತ್ತೆ ಪರಿಷ್ಕರಿಸುತ್ತಾ ಹೋಗುವುದು ಅಡಿಗರಿಗೆ ಪ್ರಿಯವಾಗಿತ್ತು. ಕುಮಾರವ್ಯಾಸನಂತೆ ಅಳಿಸದೆ ಬರೆಯುತ್ತಾ ಹೋಗಿಬಿಡುವ ಸ್ವೇಚ್ಛೆಯನ್ನು ಅವರು ತಮಗೆ ಕೊಟ್ಟುಕೊಳ್ಳಲಿಲ್ಲ. ಅದಕ್ಕೇ ಇರಬೇಕು, ಬೇಂದ್ರೆಯವರ ಕವಿತೆಗಳು ಸಂಜೆಯ ಹೊತ್ತು ಬಯಲಿನಿಂದ ಓಡೋಡಿ ಮನೆಗೆ ಬಂದ ಹಸುವಿನ ಹೆಜ್ಜೆಯಂತೆ ಕಂಡರೆ, ಅಡಿಗರ ಕವಿತೆಯ ಚಲನೆ ಒಬ್ಬ ಬುದ್ಧಿವಂತ ಚೆಸ್ ಆಟಗಾರ ನಡೆಸಿದ ಕಾಯಿಗಳ ನಡೆಯಂತೆ ಕಾಣುತ್ತದೆ. ಅವರ ಕಾವ್ಯದಲ್ಲಿ ಒಂದೇ ಶಬ್ದ ಕಾವ್ಯದ ಹಲವು ಕಡೆಗಳಲ್ಲಿ ಹಣಿಕಿ ಹಾಕುವುದು ಮತ್ತು ಪ್ರತಿ ಸಲವೂ ತನ್ನ ಅಕ್ಕಪಕ್ಕದ ಪದಗಳ ಸಾಹಚರ್ಯದಿಂದಾಗಿ ಹೊಸ ಅರ್ಥ ಹೊಳೆಸುವುದು ಹೊಸತೇನಲ್ಲ. ಕಣ್ಮುಚ್ಚಿ ವಿಷ್ಣುಸಹಸ್ರನಾಮ ಪಠಿಸುವಾಗ ಕೂಡ ಹೀಗೆ, ಹೇಳಿದ ಪದಗಳನ್ನೆ ಮತ್ತೆ ಹೇಳುತ್ತಿದ್ದೇವೇನೋ ಎಂಬ ಭಾವನೆ ಬರುವುದುಂಟಲ್ಲವೇ?

ಅಡಿಗರ ಕಾವ್ಯದಲ್ಲಿ ಹಿಂದೆಮುಂದೆ ತುಯ್ದಾಡುವ ವಿನ್ಯಾಸ ಇರುತ್ತದೆ ಎಂದೆ. ಇದನ್ನು ಉದಾಹರಣೆಗಳ ಮೂಲಕ ನೋಡಿದರೆ ಸ್ಪಷ್ಟವಾಗಬಹುದು.”ರಾಮನವಮಿಯ ದಿವಸ” ಕವಿತೆಯ ಓದಿಗೂ ಇದು ಬಹಳ ಪೂರಕವಾದ ಸಂಗತಿಯಾದ್ದರಿಂದ, ಈ ಆಂದೋಲನ ವಿನ್ಯಾಸದ ಬಗ್ಗೆಯೇ ಸ್ವಲ್ಪ ವಿಸ್ತಾರವಾಗಿ ನೋಡೋಣ. ಆಳ-ಎತ್ತರಗಳಿಗೆ ಸಂಬಂಧಿಸಿದ ಪ್ರತಿಮೆ, ಸಂಕೇತ, ರೂಪಕಗಳು ಅವರ ಕಾವ್ಯದಲ್ಲಿ ಮತ್ತೆಮತ್ತೆ ಬರುತ್ತವೆ. “ಭೂತ” ಕವಿತೆಯಲ್ಲಿ

ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು;
ಕೆಳಕ್ಕೆ, ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ
ಕಂಡೀತು ಗೆರೆಮಿರಿವ ಚಿನ್ನದದಿರು.

ಎನ್ನುತ್ತ ಆಳಕ್ಕಿಳಿಯುವ ಹಂಬಲವನ್ನು ಅವರು ತೋರಿಸುತ್ತಾರೆ. ಇಲ್ಲಿ ನೆಲಮಟ್ಟದಲ್ಲಿ ಶುರುವಾದ ಕೆಲಸ ಹಂತಹಂತವಾಗಿ ಕೆಳಕ್ಕೆ ಇಳಿಯುತ್ತ ಹೋಗುವ, ಕೊನೆಗೆ ಚಿನ್ನದದಿರಿಗೆ ಹೋಗಿ ಬಡಿಯುವ ಚಮತ್ಕಾರವನ್ನು ಗಮನಿಸಿ. ಮುಂದುವರಿದು,

ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ;
ಭತ್ತಗೋದುವೆ ಹಣ್ಣು ಬಿಟ್ಟ ವೃಂದಾವನ,
ಗುಡಿಗೋಪುರಗಳ ಬಂಗಾರ ಶಿಖರ.

ಎನ್ನುತ್ತ ಆ ಕವಿತೆ ಮುಕ್ತಾಯವಾಗುತ್ತದೆ. ಚಿನ್ನದ ಅದಿರು ತೆಗೆಯಬೇಕೆಂಬ ಹಂಬಲದಿಂದ ಆಳಕ್ಕೆ ಹೋದ ಹಾಗೆಯೇ, ಅದನ್ನು ಗುಡಿಯ ತುದಿಯಲ್ಲಿರುವ ಶಿಖರಕ್ಕೆ ತಂದು ಹೊದೆಸಬೇಕು ಎಂಬ ಊಧ್ರ್ವಮುಖಿ ಚಿಂತನೆಯೂ ಅಲ್ಲಿ ಮೂಡುತ್ತದೆ.

ಇದೇ ರೂಪಕ ಮತ್ತೆ “ಸ್ವಾತಂತ್ರ್ಯ” ಎಂಬ ಕವಿತೆಯಲ್ಲಿ
ನೆಲದೊಳಗೆ ಅದಿರಾಗಿ ಹೊದ್ದು ಮಲಗಿದ ಹೊನ್ನನ್ನು
ಹೊರತೆಗೆದು ಸುಟ್ಟು ಸೋಸಿ ಪರಿಶುದ್ಧ ಮಾಡಿದರೆ
ಅಪರಂಜಿ ಅಪ್ಪಟ, ಬಂಗಾರದಾದರ್ಶ ರೂಪ

ಎಂಬ ಮಾತುಗಳಲ್ಲಿ ಬರುವುದನ್ನು ನಾವು ನೋಡುತ್ತೇವೆ. ಈ ಭೂಮಿಯನ್ನು ಪ್ರಕೃತಿ ನಮಗಾಗಿ ಬಿಟ್ಟುಕೊಟ್ಟಿದೆ. ಇಲ್ಲಿ ಉತ್ತು-ಬಿತ್ತಿ ಬೆಳೆ ತೆಗೆದು ನಮ್ಮ ಪಾಲಿನ ಕರ್ತವ್ಯ ಮುಗಿಸಿಹೊರಡಬೇಕು ಎನ್ನುವುದು ನರಸಿಂಹಸ್ವಾಮಿಯವರ ಆದರ್ಶವಾದರೆ, ಅಡಿಗರ ಆದರ್ಶ ಅದೇ ಭೂಮಿಯಲ್ಲಿ ಗಣಿ ಕೊರೆದು ಅದಿರು ತೆಗೆದು ಅದನ್ನು ಸುಟ್ಟು ಸೋಸಿ ಅಪರಂಜಿ ಚಿನ್ನವನ್ನು ತೆಗೆಯಬೇಕು – ಎನ್ನುವುದು. ಮನುಷ್ಯ ತನ್ನ ಸಾಮಥ್ರ್ಯವನ್ನು ಎಷ್ಟು ಸಾಧ್ಯವೋ ಅಷ್ಟು ದೂರಕ್ಕೆ ಹಾಯಗೊಡಬೇಕು ಎನ್ನುವ ಧ್ವನಿ ಅವರದ್ದು. ಆಳಕ್ಕೆ ಇಳಿಯಬೇಕು, ಸಂಸ್ಕೃತಿ-ಪರಂಪರೆಗಳ ಸಾರ ಹೀರಿಕೊಳ್ಳಬೇಕು; ಜೊತೆಗೆ ಎತ್ತರಕ್ಕೂ ಏರಬೇಕು, ಮೈಚಾಚಿ ಹರಡಬೇಕು ಎನ್ನುವುದೇ ಅವರ ಹಲವಾರು ಕವಿತೆಗಳ ಕೇಂದ್ರಬಿಂದು. ಪೂರಕವೆಂಬಂತೆ, ಅಶ್ವತ್ಥ ಮರ ಅಡಿಗರ ಅನೇಕ ಕವಿತೆಗಳಲ್ಲಿ ಮತ್ತೆಮತ್ತೆ ಬಂದುಹೋಗುವ ಒಂದು ಉಪಮೆ. ಅಶ್ವತ್ಥಕ್ಕೆ ಸಂಸ್ಕೃತದಲ್ಲಿ “ಊಧ್ರ್ವಮೂಲಂ ಅಧಃಶಾಖಂ” ಎಂದೂ ಹೇಳುತ್ತೇವಲ್ಲವೆ? ಏರುಮುಖ-ಇಳಿಮುಖದ ಈ ಚಲನೆಯ ಸಂಕೀರ್ಣತೆ ಅಡಿಗರಿಗೆ ಸದಾ ಕಾಡಿದೆ ಇರಬೇಕು. “ಭೂಮಿಗೀತ” ಎಂಬ ಅವರ ಪ್ರಸಿದ್ಧ ಕವಿತೆಯಲ್ಲಿ ಶುರುವಾತಿನಲ್ಲೇ ಈ ಚಲನೆಯ ದೃಶ್ಯ ಕಣ್ಣಿಗೆ ಕಟ್ಟುತ್ತದೆ:

ಹುಟ್ಟು: ಮಲೆಘಟ್ಟ ಸೋಪಾನ ಕೆಳಪಟ್ಟಿಯಲಿ,
ಉರುಳು – ಮೂರೇ ಉರುಳು – ಕಡಲ ಕುದಿತದ ಎಣ್ಣೆ ಕೊಪ್ಪರಿಗೆಗೆ
– ಎಂಬ ಮಾತುಗಳನ್ನು ಅಲ್ಲಿ ನೋಡಬಹುದು. ಮಲೆಘಟ್ಟ ಎನ್ನುವಾಗ ನಮ್ಮ ಮನಸ್ಸು ಉನ್ನತಗಿರಿಶಿಖರಗಳನ್ನು ಯೋಚಿಸುತ್ತದೆ. ಅದರ ಪಕ್ಕದಲ್ಲೇ “ಸೋಪಾನ ಕೆಳಪಟ್ಟಿಯಲಿ” ಎನ್ನುವಾಗ, ಶಿಖರವನ್ನು ಹತ್ತಿ ಕೂತಿದ್ದ ಮನಸ್ಸು ಜಾರುತ್ತಾ ಕೆಳಗಿಳಿದು ಬರುತ್ತದೆ. ಹಾಗೆ ಅದು ಕೆಳಗಿಳಿಯುವಾಗಲೇ ಮುಂದಿನ ಸಾಲಲ್ಲಿ “ಉರುಳು – ಮೂರೇ ಉರುಳು” ಎನ್ನುವಾಗ ಕಲ್ಪನೆಗೆ ವೇಗ ಸಿಗುತ್ತದೆ. (“ಉರುಳು” ಎಂಬ ಚುರುಕಾದ ಚುಟುಕು ಪದ ಹುಟ್ಟಿಸುವ ಗಡಿಬಿಡಿ, ಧಾವಂತ ಗಮನಿಸಿ) ಬೆಟ್ಟ ಹತ್ತಿಕೂತಿದ್ದ ನಮ್ಮ ಮನಸ್ಸು ಇಳಿಜಾರಿನಲ್ಲಿ ವೇಗವಾಗಿ ಓಡುತ್ತಿರುವ ಜೀಪಿನಂತೆ ಇಳಿದಿಳಿದು ಕಡಲಮಟ್ಟಕ್ಕೆ ಬಂದು ನಿಲ್ಲುತ್ತದೆ! ಅದೇ ಕವಿತೆಯಲ್ಲಿ ಬರುವ ಇನ್ನೊಂದು ಭಾಗ ನೋಡಿ:
ಏನೋ ಉಳಿವುದು ಮತ್ತೆ:
ಒಂದು ವಿದ್ಯುತ್ತಂತಿ –
ತಾರೆ ನೀಹಾರಿಕೆಗಳಾಚೆಯ ಸಮಾಚಾರ;
ಪಾತಾಳದಾಳದಿಂದೆದ್ದು ಬರುವ ವಿಕಾರ;
ಒಂದನೊಂದಕೆ ಕೂಡಿಸಾಡಿಸುವ, ಕುಣಿಸುವ ಚಮತ್ಕಾರ.

ಇಲ್ಲೂ ಅಷ್ಟೆ, ಒಮ್ಮೆ ತಾರೆ ನೀಹಾರಿಕೆಗಳ ಆಚೆಗಿನ ಸಮಾಚಾರದ ಬಗ್ಗೆ ಮಾತಾಡುವ ಕವಿ, ಮುಂದಿನ ಸಾಲಿಗೆ ಬರುವಾಗ ನಮ್ಮನ್ನು ಪಾತಾಳದಾಳಕ್ಕೆ ಇಳಿಸಿಬಿಡುತ್ತಾರೆ! ಇವೆರಡನ್ನೂ ಕೂಡಿಸಿದ ಆ ಸೃಷ್ಟಿವೈಚಿತ್ರ್ಯ ಯಾವುದು ಎಂಬ ದಿಗ್ಭ್ರಮೆ, ಆಶ್ಚರ್ಯ ಕವಿಯಲ್ಲಿ, ಜೊತೆಗೆ ಓದುಗನಲ್ಲಿ ಉಳಿದುಬಿಡುತ್ತದೆ. “ಆಗಬೋಟಿ” ಎಂಬ ಕವಿತೆಯಲ್ಲಿ ಮತ್ತೆ ಅಡಿಗರು ಪಾತಾಳ-ಆಕಾಶಗಳ ಬಗ್ಗೆ ಮಾತಾಡುತ್ತಾರೆ.

ಹಳೆ ಹಲಗೆಗಳ ಹಿಡಿದು ಮಿಡಿದು ಬಡಿದು ನೋಡುವಗತ್ಯ
ಮತ್ತೆ ಬಂದಿದೆ. ಪುರಾತನ ಹಡಗುಪಟ್ಟಿಗಳನ್ನು ಇಂದಿನ ಪರಿಗೆ
ಜೋಡಿಸುವ ಕೆಲಸ; ಹೊಸ ಮರ, ಹೊಸ ಕಬ್ಬಿಣ, ಹೊಸ ತಂತ್ರ ಯಂತ್ರಗಳ
ಬೆಸೆವಾಧುನಿಕ ಬೋಟಿ, ಹೊಸ ಲಂಗರು
ಯಾನ ನಡೆಯಲಿ ತಂಗಿ ತಂಗಿ ಬಂದರಿನಲ್ಲಿ
ನವಖಂಡಗಳ ಸೋಸಿ ಪಾತಾಳದೆಡೆಗೆ
ಶಿಖರಗಳನಾಕ್ರಮಿಸಿ ಆಕಾಶದೆಡೆಗೆ.
ಹಾಗೆಯೇ, ಕೂಪಮಂಡೂಕದಲ್ಲಿ ನೋಡಿ –
ಏಳು ಹೊಂಡದ ನೀರು ಕುಡಿದ ಮಂಡೂಕಯ್ಯ
ನಾನು; ಕುಪ್ಪಳಿಸುವುದೆ ನನ್ನ ಧರ್ಮ;
ನೆಲದಿಂದ ಕೆಳಕೊಳಕ್ಕೆ, ಮತ್ತೆ ಮೇಲು ನೆಲಕ್ಕೆ;
ಎರಡಕ್ಕು ತೂಗುವುದು ನನ್ನ ಕೆಲಸ.
ಎನ್ನುವ ಮಾತು ಬರುತ್ತವೆ.
ಗಹ್ವರದ ಮುಖ ಅಲ್ಲಿ; ಆಚೆ ಬಯಲ ಬರಾವು;
ಹಣ್ಣುಹಂಪಲು ಹಸುರ ಬಲ್ಲೆ, ಬಲ್ಲೆ;
ಜೀವನನಿಧಾನಶ್ರುತಿ ಶುದ್ಧಿ ಮೊರೆವ ಕರಾವು;
ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ.

ಎಂಬ “ವರ್ಧಮಾನ” ಕವಿತೆಯಲ್ಲೂ, ಈ ಹನುಮನ ವಿಕಾಸಕ್ಕೆ ಮೇರೆ ಇಲ್ಲ, ಅವನು ಆಕಾಶದೆತ್ತರಕ್ಕೆ ಬೆಳೆಯುವ ಸಾಧ್ಯತೆ ಉಂಟು ಎಂಬ ಸೂಚನೆ ಓದುಗನಿಗೆ ಸಿಗುತ್ತದೆ. ಅವರ ಇನ್ನೊಂದು ಪ್ರಸಿದ್ಧ ಕವಿತೆಯಾದ “ಹಿಮಗಿರಿಯ ಕಂದರ”ದಲ್ಲಿ ಹೆಸರಲ್ಲೇ ಈ ಗಿರಿ-ಪಾತಾಳಗಳ ಮಾತು ಬಂದು ಹೋಗಿದೆ! ಅಷ್ಟೆಲ್ಲ ಯಾಕೆ, ಅಡಿಗರ ಜೀವನ ಚರಿತ್ರೆಯ ಹೆಸರೂ “ನೆನಪಿನ ಗಣಿಯಿಂದ” ಎಂದೇ!

ಇಷ್ಟೆಲ್ಲ ಯಾಕೆ ಹೇಳಬೇಕಾಯಿತೆಂದರೆ, ಅವರ “ಶ್ರೀ ರಾಮನವಮಿಯ ದಿವಸ” ಎಂಬ ಕವಿತೆಯನ್ನು ಅರ್ಥ ಮಾಡಿಕೊಳ್ಳಲು ನಮಗೆ ಈ ಮಾಹಿತಿ ಪೂರಕಪಠ್ಯದಂತೆ ಕೆಲಸ ಮಾಡಬಹುದು ಎಂಬ ಕಾರಣಕ್ಕಾಗಿ. ಅಡಿಗರ ಕಾವ್ಯದಲ್ಲಿ ಚಿತ್ರಕ ಪ್ರತಿಮೆಗಳ ಮೆರವಣಿಗೆ ಬಹಳ. ಯಾವುದೇ ಭಾವನೆ, ಕಲ್ಪನೆಗಳಿಗೂ ಮೂರ್ತರೂಪದ ಸಂಕೇತವನ್ನು ಬಳಸಿಬಿಡಬೇಕೆಂಬ ಪ್ರಬಲ ವಾಂಛೆಯ ಕವಿ ಅಡಿಗರು. ಹಳೆಯ ಸಂಪ್ರದಾಯ ಮತ್ತು ಸಂಸ್ಕೃತಿಯ ಅಂಶಗಳನ್ನು ಉಳಿಸಿಕೊಂಡು ಮುಂದೆಹೋಗಲು ಯತ್ನಿಸಬೇಕು ಎಂಬ ಆಶಯ ಇರುವ ಅವರ ಸಮರ್ಥ ಕವಿತೆ “ಭೂತ”ದಲ್ಲಂತೂ ಇಂತಹ ಮೂರ್ತ ಪ್ರತಿಮೆಗಳ ಮೆರವಣಿಗೆಯೇ ನಡೆದುಹೋಗಿದೆ ಎನ್ನಬಹುದು. ಇಲ್ಲೆಲ್ಲ ಅವರು ನಾಲ್ಕೈದು ಸಂಕೇತಗಳನ್ನು ಇಟ್ಟುಕೊಂಡು ಅದನ್ನು ಇದಕ್ಕೆ ಇದನ್ನು ಅದಕ್ಕೆ ಜೋಡಿಸುವ, ಅಕ್ಕಪಕ್ಕದಲ್ಲಿಟ್ಟು ಹೊಸ ಅರ್ಥ ಹೊಳೆಸುವ ಯತ್ನ ನಡೆಸುತ್ತಾರೆ. ಹಾಗೆ ಮಾಡುವಾಗ ಈ ಹಿಂದು-ಮುಂದಿನ ಚಲನೆ ಅನಿವಾರ್ಯವೂ ಕೂಡ. “ಭೂತ”ದಲ್ಲೇ ನೋಡಿ – ಅಲ್ಲಿ ಭೂತ (ಪಾಸ್ಟ್ ಮತ್ತು ಘೋಸ್ಟ್ ಎರಡೂ), ಬಾವಿ, ಗಣಿ, ಹೊಲ, ಗೋಪುರ ಮುಂತಾದ ಪ್ರತಿಮೆಗಳು ಒಂದರ ಜೊತೆಗೊಂದು ಬೆರೆತು ಕಲಸಿಹೋದಂತಾಗಿ ಓದುಗನಿಗೆ ತಾನು ಯಾವುದರ ಬಗ್ಗೆ ಓದುತ್ತಿದ್ದೇನೆ ಎನ್ನುವ ಗೊಂದಲ ಏಳುವುದುಂಟು! ಆದರೆ, ಆ ಅಷ್ಟೂ ಪ್ರತಿಮೆಗಳು ಜೊತೆಯಾಗಿ ಯಾವುದೋ ಒಂದು ಅನುಭವವನ್ನು ತನಗೆ ದಾಟಿಸಲು ಯತ್ನಿಸುತ್ತಿವೆ ಎನ್ನುವ ಅಂದಾಜೂ ಅವನಿಗೆ ಬರದಿರುವುದಿಲ್ಲ.

“ತಲೆಕೆಳಗು ತೆವಳುತ್ತೇರಿ” – “ತಿರುಗುಮುರುಗು ಪಾದದ ಪರಿಷೆ”;
“ಹಾಯುತ್ತಿದೆ ತುಳಸಿವೃಂದಾವನದ ಹೊದರಿಗೂ” – “ಭತ್ತಗೋಧುವೆ ಹಣ್ಣು ಬಿಟ್ಟ ವೃಂದಾವನ”;
“ಕತ್ತರಿಸಿದಿಲಿಬಾಲ ಮಿಡುಕುತ್ತದೆ” – “ನೆಲೆ ಸಿಕ್ಕಿಯೂ ದಕ್ಕದವರು”;
“ಹೊಳೆವುದು ಹಠಾತ್ತನೊಂದೊಂದು ಚಿನ್ನದ ಗೆರೆ” – “ಕಂಡೀತು ಗೆರೆಮಿರಿವ ಚಿನ್ನದದಿರು”

– ಹೀಗೆ ಪರಸ್ಪರ ಎದುರಾಬದುರಾ ನಿಂತು ಮಾತಾಡಿಕೊಳ್ಳುವ ಜೋಡಿಸಾಲುಗಳು, ಜೋಡಿ ಪ್ರತಿಮೆಗಳು ಅಡಿಗರ ಕವನಗಳಲ್ಲಿ ಬರುತ್ತವೆ. ಕಾವ್ಯ ಬರೆಯುವುದನ್ನು ವಿಜ್ಞಾನಿಯ ನಿಷ್ಠೆಯಿಂದ ಮಾಡುತ್ತಿದ್ದ ಅಡಿಗರು ಇಂತಹ ಶಬ್ದ-ಸಾಲುಗಳ ಆಟವನ್ನು ಬುದ್ಧಿಪೂರ್ವಕವಾಗಿ ಮಾಡುತ್ತಿದ್ದರು ಎನ್ನುವುದನ್ನು ಗಮನದಲ್ಲಿಡಬೇಕು. ಮತ್ತು ಆ ಬುದ್ಧಿಚಾತುರ್ಯಕ್ಕೂ ಮೀರಿದ ಕಾವ್ಯಪ್ರತಿಭೆ ಅವರಲ್ಲಿ ಇದ್ದದ್ದರಿಂದ, ಅದು ಕೇವಲ ಶಬ್ದಗಳ ಮೆರವಣಿಗೆಯಾಗದೆ ಕಾವ್ಯವೂ ಆಯಿತು. ಅವರ ಕುಸುರಿಕಲೆಯನ್ನು ಕಾವ್ಯಪ್ರತಿಭೆ ಇಲ್ಲದೆ ಅನುಸರಿಸಹೋದ ಕೆಲ ಶಿಷ್ಯರು ಮಾತ್ರ ಮುಂದೆ ನವ್ಯಕಾವ್ಯದ ಹೆಸರಲ್ಲಿ ರುಂಡ-ಮುಂಡ ಜೋಡಿಸಿದ ಫ್ರಾಂಕೈನ್‍ಸ್ಟೈನ್ ಭೂತಗಳನ್ನು ಸೃಷ್ಟಿಸಿದರು. ಹಾಗಾಗಿ ನವ್ಯಕಾವ್ಯದಲ್ಲಿ “ಗಣೇಶನನ್ನು ಮಾಡಹೋಗಿ ಅವನಪ್ಪನನ್ನು ಮಾಡಿದವರೂ” ಬಹಳ ಸಂಖ್ಯೆಯಲ್ಲಿದ್ದಾರೆ! ಇರಲಿ, ಆ ವಿಚಾರ ಈಗ ಬೇಡ. ಅಡಿಗರ ಕುಸುರಿಕಲೆಯ ಇಷ್ಟು ವಿವರಗಳನ್ನು ಇಟ್ಟುಕೊಂಡು, ರಾಮನವಮಿಯ ದಿವಸ ಅವರ ಅದೇ ಹೆಸರಿನ ಕವಿತೆಯನ್ನು ಎತ್ತಿಕೊಂಡು ಕಾವ್ಯಕರಬೂಜ ಸವಿಯೋಣ!

(ನಾಳೆಗೆ)

ಚಿತ್ರಕೃಪೆ : ಪ್ರಜಾವಾಣಿ.ನೆಟ್

6 ಟಿಪ್ಪಣಿಗಳು Post a comment
  1. Umesh
    ಮಾರ್ಚ್ 27 2015

    ಶ್ರೀ ಅಡಿಗರು ಕನ್ನಡದ ಶ್ರೇಷ್ಠ ಕಾವ್ಯ ಪರಂಪರೆಯ ಸಾಲಿಗೆ ಸೇರಿದವರು. ಅವರ ಕಾವ್ಯ ಜಗತ್ತಿನ ಮೇರು ಶಿಖರ. ಅತ್ತ್ಯುತ್ತಮ ಅನುವಾದಕರಿದ್ದಿದ್ದರೆ ಅವರಿಗೆ ನೋಬಲ್ ಪ್ರಶಸ್ತಿ ದೊರಕುತ್ತಿದ್ದುದರಲ್ಲಿ ಯಾವ ಸಂಶಯವೂ ಇಲ್ಲ.

    ಉತ್ತರ
  2. ಮಾರ್ಚ್ 27 2015

    ಅಡಿಗರು ನನಗೂ ಬಹಳ ಮೆಚ್ಚಿನ ಕವಿ. ಕೂಪಮಂಡೂಕದಲ್ಲಿ ಉದ್ಧರಿಸಬೇಕಾದ/ಬಹುದಾದ ಇನ್ನೊಂದು ಸಾಲು
    ಎಲೆಹಳದಿ ತಿರುಗಿದೀ ಹಲಸು ನಿಂತಿದೆ ಹೆಳವ;ಹದಬಿಸಿಲು ಸಾರಯಿ ನೆತ್ತಿಗೇರಿ
    ಗೊನೆ ಬಾಗಿ ಬಾಳೆ ಜೀವನ್ಮುಕ್ತ ಹಳಸುತಿದೆ ;ಹಿಂಡು ಹಿಳ್ಳುಗಳಲ್ಲಿ ಪ್ರಾಣವೂರಿ.

    ಹಾಗೇ, ಮೋಹನ ಮುರಳಿ, ನಗೆಯ ಹಾಯಿದೋಣಿ, ಮುಂತಾದ ಎಷ್ಟೋ ಗೀತಗಳು ಜನಮಾನಸದಲ್ಲಿದೆ.

    ಭೂತ, ಕೂಪಮಂಡೂಕ, ಶ್ರೀರಾಮನವಮಿಯ ದಿವಸ, ಭೂಮಿಗೀತ – ಇವುಗಳು ಸಾರ್ವಕಾಲಿಕ ಕವಿತೆಗಳು.

    ನೀವಂದಂತೆ ಕವನವನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಬೆಳೆಸಿದವರಲ್ಲಿ ಅಡಿಗರು ಮುಖ್ಯ. ಹಾಗೆಂದು ಅವರಿಗೆ ಷಟ್ಪದಿ ಕಾವ್ಯಗಳು, ಕಂದ ವೃತ್ತಾದಿ ಛಂದಸ್ಸುಗಳು ಗೊತ್ತಿತ್ತು. ಗೊತ್ತಿದ್ದು, ಬೇರೆ ಶೈಲಿಯನ್ನು ಬಳಸಿದವರು ಅಡಿಗರೇ. ಇನ್ನು ಈಗಿನ ನವ್ಯ ಕವಿಗಳಿಗೆ ಗೊತ್ತಿಲ್ಲದೇ ಬರೆಯುವ ಚಟವಷ್ಟೆ.

    ಉತ್ತರ
  3. Nagshetty Shetkar
    ಮಾರ್ಚ್ 28 2015

    “ಲ್ಯಾಟಿನ್ ಜಗತ್ತಿಗೆ ನೆರೂಡ ಇದ್ದ ಹಾಗೆ, ಶಿಷ್ಟ ಅಮೆರಿಕಕ್ಕೆ ಎಲಿಯೆಟ್ ಇದ್ದ ಹಾಗೆ ಕನ್ನಡ ಜಗತ್ತಿಗೆ ಅಡಿಗರು.”

    ನೆರೂಡ ೧೦೦% ಎಡಪಂಥೀಯ ವಿಚಾರಧಾರೆಗೆ ಬದ್ಧನಾಗಿದ್ದ, ಆತ ಸದಾ ಜೀವಪರನಾಗಿದ್ದು ಎಂದಿಗೂ ಬಲಪಂಥೀಯ ರಾಜಕಾರಣ ಮಾಡಲಿಲ್ಲ.

    ಉತ್ತರ
    • WITIAN
      ಮಾರ್ಚ್ 28 2015

      ನಾಶೆಶೇ ಎಂಬ ಈ ವಯ್ಯನಿಗೆ ಅಡಿಗರ ಕಾವ್ಯ ಕಾಣಲಿಲ್ಲ, ಕವಿತೆಯ ಗಂಧಗಾಳಿ ತಿಳಿಯಲಿಲ್ಲ..ಪಾಬ್ಲೋ ನೆರುದ ೧೦೦% ಎಡಪಂಥೀಯನಾಗಿದ್ದ..ಜೀವಪರನಾಗಿದ್ದ..(ನನಗೆ ಬಹಳ ಕುತೂಹಲವಾಗಿದೆ, ಜೀವಪರ ಎಂದರೆ ಏನು ಅಂತ ತಿಳಿದುಕೊಳ್ಳಬೇಕು)…ಬಲಪಂಥೀಯ ರಾಜಕಾರಣ ಮಾಡಲಿಲ್ಲ.. ಎಂದೇ ಗಳಹುತ್ತಿದ್ದಾನೆ. ಯಾಕೋ ಏನೋ..ಕನ್ನಡದಲ್ಲಿ ‘ಕತ್ತೆಗೇನು ಗೊತ್ತು ಕಸ್ತೂರಿಯ ಪರಿಮಳ’ ಎಂದೂ, ಹಿಂದಿಯಲ್ಲಿರುವ ‘ಬಂದರ್ ಕ್ಯಾ ಜಾನೆ ಅದ್ರಕ್ ಕಾ ಸ್ವಾದ್’ ಎಂದೂ ಇರುವ ಎರಡು ಗಾದೆಗಳು ಹೀಗೇ ನೆನಪಾದವು!

      ಉತ್ತರ

Trackbacks & Pingbacks

  1. ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ? – ಭಾಗ 2 | ನಿಲುಮೆ
  2. ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪ-ರೇಖೆ? – ಭಾಗ 2 – ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments