ವಿಷಯದ ವಿವರಗಳಿಗೆ ದಾಟಿರಿ

Posts from the ‘ನಾಡು-ನುಡಿ: ಮರುಚಿಂತನೆ’ Category

29
ಏಪ್ರಿಲ್

ನಾಡು-ನುಡಿ : ಮರುಚಿಂತನೆ – ಹಿಂದೂ ಶಬ್ದಕ್ಕೆ ನಕಾರಾತ್ಮಕ ಅರ್ಥವೇಕೆ?

– ಪ್ರೊ.ರಾಜಾರಾಮ್ ಹೆಗಡೆ
ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ

ಹಿಂದೂದಲಿತರನ್ನು ಹಿಂದೂ ಸಮಾಜದ ಒಳಗೆ ತರಬೇಕೆಂಬ ಪ್ರತಿಪಾದನೆ ಕಳೆದ ನೂರಾರು ವರ್ಷಗಳಿಂದ ನಡೆದು ಬಂದಿದೆ. ಹಿಂದೂ ಸಮಾಜದ ಐಕ್ಯತೆಯನ್ನು ಸಾಧಿಸಬೇಕೆನ್ನುವ ರಾಷ್ಟ್ರೀಯ ನಾಯಕರೆಲ್ಲರೂ ಇಂಥ ಕಾರ್ಯಕ್ರಮಗಳ ಮಹತ್ವವನ್ನು ಒಪ್ಪಿದ್ದಾರೆ. ಮತ್ತೊಂದೆಡೆ ಈ ಕಾರ್ಯಕ್ರಮವನ್ನು ಒಂದು ಹುನ್ನಾರವೆಂಬಂತೆ ನೋಡುವ ಹಾಗೂ ಆ ಕಾರಣದಿಂದ ಅದನ್ನು ತಿರಸ್ಕರಿಸುವ ಪ್ರಯತ್ನಗಳೂ ನೂರಾರು ವರ್ಷಗಳಿಂದ ನಡೆದಿವೆ. ಹುನ್ನಾರವೇಕೆಂದರೆ, ಜಾತಿ ವ್ಯವಸ್ಥೆಯ ಹಿಂದೂ ಸಮಾಜದೊಳಗೆ ದಲಿತರನ್ನು ಮತ್ತೆ ಸೇರಿಸಿ ಶೋಷಿಸುವ ಉದ್ದೇಶದಿಂದ ಸಂಪ್ರದಾಯಸ್ಥ ಹಿಂದೂಗಳು ಈ ಕಾರ್ಯಕ್ರಮವನ್ನು ಹಾಕಿಕೊಂಡಿದ್ದಾರೆ ಎಂಬ ಆರೋಪ. ಆದರೆ ಜಾತಿ ವ್ಯವಸ್ಥೆಯು ಹಿಂದೂ ಸಮಾಜದ ಲಕ್ಷಣವಾದರೆ, ಹಾಗೂ ದಲಿತರು ಹಿಂದೂ ಸಮಾಜದೊಳಗೆ ಇಲ್ಲ ಅಂತಾದರೆ ಅವರು ಇದುವರೆಗೆ ಜಾತಿ ವ್ಯವಸ್ಥೆಗೆ ಒಳಪಟ್ಟಿಲ್ಲ ಎಂದು ಇಂಗಿತವೆ? ಅಥವಾ ಜಾತಿವ್ಯವಸ್ಥೆಯ ಹೊರಗಿದ್ದೂ ಅವರನ್ನು ಸಾವಿರಾರು ವರ್ಷಗಳ ವರೆಗೆ ಶೋಷಿಸಲು ಹಿಂದೂಗಳಿಗೆ ಸಾಧ್ಯವಾಗಿದ್ದೇ ಹೌದಾದಲ್ಲಿ ಆ ಕೆಲಸವನ್ನೇ ಮಾಡಲು ಹಿಂದೂ ಸಮಾಜದೊಳಗೆ ಅವರನ್ನು ಹೊಸತಾಗಿ ಸೇರಿಸಿಕೊಳ್ಳುವ ಅಗತ್ಯವೇಕೆ? ಒಟ್ಟಿನಲ್ಲಿ ಇದು ಒಂದು ಒಗಟಾಗಿ ಬಿಡುತ್ತದೆ.

ಈ ಒಗಟು ಏಕೆ ಹುಟ್ಟುತ್ತದೆಯೆಂದರೆ ನಮ್ಮ ಸಂಸ್ಕೃತಿಯ ಇತಿಹಾಸವನ್ನು ಕಟ್ಟುವಾಗ ಪರಸ್ಪರ ಸುಸಂಬದ್ಧವಲ್ಲದ ಅನೇಕ ವಿವರಗಳನ್ನು ಒಟ್ಟಿಗೆ ತರಲಾಗಿದೆ.  ಅವುಗಳಲ್ಲಿ ಒಂದು ಹಿಂದೂಯಿಸಂ ಎಂಬ ರಿಲಿಜನ್ನಿನ ಕಲ್ಪನೆ, ಮತ್ತೊಂದು ಆರ್ಯರ ಆಕ್ರಮಣದ ಕಥೆ. ಭಾರತದಲ್ಲಿ ಹಿಂದೂಯಿಸಂ ಎಂಬ ರಿಲಿಜನ್ನಿದೆ, ಅದಕ್ಕೆ ಬ್ರಾಹ್ಮಣರು ಪುರೋಹಿತಶಾಹಿಗಳು, ಇದರಲ್ಲಿ ಮೂರ್ತಿಪೂಜೆ ಜಾತಿ ವ್ಯವಸ್ಥೆಗಳಂಥ ಅನಿಷ್ಟ ಆಚರಣೆಗಳಿವೆ ಎಂಬ ಕಥೆ 19ನೆಯ ಶತಮಾನದಲ್ಲೇ ಗಟ್ಟಿಯಾಯಿತು. ಪಾಶ್ಚಾತ್ಯರು ಕ್ಯಾಥೋಲಿಕ್ ಚರ್ಚಿನಂತೇ ಇದೊಂದು ಭ್ರಷ್ಟವಾದ ರಿಲಿಜನ್ನು ಎಂದು ಭಾವಿಸಿದ್ದರು. ಆ ಸಂದರ್ಭದಲ್ಲಿ ರಾಜಾ ರಾಮಮೋಹನರಾಯರಂಥವರು ಹಿಂದೂಯಿಸಂ ಮೂಲತಃ ಉದಾತ್ತವಾದ ರಿಲಿಜನ್ನಾಗಿದೆ ಎಂಬ ನಿರೂಪಣೆಯನ್ನು ಗಟ್ಟಿಮಾಡತೊಡಗಿದರು.ಈ ನಿರೂಪಣೆಗೆ ಪ್ರೊಟೆಸ್ಟಾಂಟ್ ಕ್ರಿಶ್ಚಿಯಾನಿಟಿಯ ಏಕದೇವತಾ ತತ್ವವೇ ಆಧಾರವಾಯಿತು.ಅಂದರೆ ಹಿಂದೂಯಿಸಂನ ಶುದ್ಧ ರೂಪವು ವೇದಾಂತದಲ್ಲಿ ಇದೆ ಎಂದಾಯಿತು.

ಮತ್ತಷ್ಟು ಓದು »

21
ಏಪ್ರಿಲ್

ನಾವು, ನಮ್ಮ ಹರಕೆ, ನಮ್ಮ ಸೇವೆ!

– ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
ಆಚರಣೆದಿನಾಂಕ 19-04-2015 ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ “ಮಾದಪ್ಪನ ಸನ್ನಿಧಿಯಲ್ಲಿ ಸಣ್ಣ ಸ್ವಚ್ಛಭಾರತ್” ಲೇಖನ ಪ್ರಕಟವಾಯಿತು. ಇದರಲ್ಲಿ ಜಾಗದ ಮಿತಿಯಿಂದಲೋ ಸೈದ್ಧಾಂತಿಕ ಮಿತಿಯಿಂದಲೋ ಲೇಖನದ ಬಹುತೇಕ ಭಾಗಗಳಿಗೆ ಕತ್ತರಿ ಪ್ರಯೋಗವಾಗಿತ್ತು. ಅದರ ಪೂರ್ಣಪಾಠ ಇಲ್ಲಿದೆ.

ಮಲೆ ಮಹದೇಶ್ವರ ಬೆಟ್ಟ. ಬೆಳಿಗ್ಗೆ ಆರು ಗಂಟೆಯ ಸಮಯ. ದೇವಾಲಯದ ಮುಂಭಾಗ ರಾತ್ರಿ ಬಂದ ಯಾತ್ರಿಗಳು ಅನುದ್ದೇಶಪೂರ್ವಕ ಚೆಲ್ಲಿದ ಕಸಕಡ್ಡಿಗಳು ಅಲ್ಲಲ್ಲಿ ಹರಡಿದ್ದವು. ಹರಕೆ ತೀರಿಸಲು ಬಂದ ಭಕ್ತಾದಿಗಳಿಂದ ಬಗೆಬಗೆಯ ಆಚರಣೆಗಳು ಸುತ್ತಲೂ ನಡೆಯುತ್ತಿದ್ದವು. ಮುಖ್ಯ ದೇಗುಲದ ಮುಂಭಾಗದಲ್ಲಿರುವ ಕಲ್ಯಾಣಿ ಪಕ್ಕದ ಜಡೆ ಮಾದೇಶ್ವರ ಗುಡಿಯ ಮುಂದೆ ಹತ್ತಾರು ಹೆಂಗಸರು ಮಕ್ಕಳು ಸೇರಿಕೊಂಡಿದ್ದರು. ಒಬ್ಬ ಹುಡುಗ “ಹಾಲುಮಲೆ ಏಳುಮಲೆ, ಜೇನುಮಲೆ, ಎಪ್ಪತ್ತೇಳುಮಲೆ ನಮ್ಮ ಮುದ್ದು ಮಾದೇಶ್ವರನಿಗೆ ಉಘೇ ಅನ್ರಪ್ಪಾ” ಅನ್ನುತ್ತಿದ್ದಂತೆ ಸುತ್ತ ನೆರೆದಿದ್ದವರು ಒಕ್ಕೊರಲಲ್ಲಿ “ಉಘೇ ಉಘೇ” ಅನ್ನುತ್ತಿದ್ದರು. ಗುಡಿಯ ಮುಂದೆ ಕತ್ತೆಯೊಂದು ತರಬೇತಿ ನೀಡಿದ್ದಾರೇನೋ ಎಂಬಂತೆ ಸ್ತಬ್ದವಾಗಿ ನಿಂತಿತ್ತು. ಕೆಲವು ಹೆಂಗಸರು ಅದರ ಕಾಲು ತೊಳೆದರು. ಮತ್ತೆ ಕೆಲವರು ಅದಕ್ಕೆ ಮಲ್ಲಿಗೆ ಹಾರ ತೊಡಿಸಿದರು. ಮತ್ತೆ ಹಲವರು ಅರಿಶಿಣ ಕುಂಕುಮ ಹಾಕಿ ಅದರ ಕಾಲಿಗೆ ಅಡ್ಡ ಬಿದ್ದರು. ಇನ್ನು ಕೆಲವರು ಆರತಿ ಬೆಳಗಿದರು.

ಕತ್ತೆಯ ಪಕ್ಕದಲ್ಲಿ ಹೊಚ್ಚ ಹೊಸ ತೆಂಗಿನ ಗರಿಯಿಂದ ತಯಾರಿಸಿದ ಒಂದಿಷ್ಟು ಪೊರಕೆಗಳನ್ನು ಸಾಲಾಗಿ ಜೋಡಿಸಿದ್ದರು. ಈ ಪೊರಕೆಗಳಿಗೆ ಅರಿಶಿನ ಕುಂಕುಮ ಹಾಕಿ, ಹೂವು ಏರಿಸಿ ಎಲ್ಲರೂ ಕೈ ಮುಗಿದರು. ಒಬ್ಬೊಬ್ಬರೂ ಒಂದೊಂದು ಪೊರಕೆಯನ್ನು ಕೈಗೆತ್ತಿಕೊಂಡರು. ಹುಡುಗ “ಹಾಲುಮಲೆ ಏಳುಮಲೆ, ಜೇನುಮಲೆ, ಎಪ್ಪತ್ತೇಳುಮಲೆ ನಮ್ಮ ಮುದ್ದು ಮಾದೇಶ್ವರನಿಗೆ ಉಘೇ ಅನ್ರಪ್ಪಾ” ಅನ್ನುತ್ತಿದ್ದ. ಉಳಿದವರು “ಉಘೇ ಉಘೇ” ಅನ್ನುತ್ತ ಸುತ್ತಲ ಕಸ ಕಡ್ಡಿಗಳನ್ನು ಗುಡಿಸಿ ಸ್ವಚ್ಛಮಾಡತೊಡಗಿದರು. ಅರ್ಧಗಂಟೆಯಲ್ಲಿ ಸುತ್ತಲ ಪರಿಸರ ತೊಳೆದಿಟ್ಟಂತೆ ಕಂಗೊಳಿಸತೊಡಗಿತು.

ಮತ್ತಷ್ಟು ಓದು »

7
ಏಪ್ರಿಲ್

ನಾಡು-ನುಡಿ : ಮರುಚಿಂತನೆ – ನೆಹರು ಸೆಕ್ಯುಲರಿಸಂ ಯಾರ ವಾರಸುದಾರ?

ಪ್ರೊ.ರಾಜಾರಾಮ್ ಹೆಗಡೆ

ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ

ನೆಹರೂನೆಹರು ಅವರು ಮಹಾತ್ಮಾ ಗಾಂಧಿಯವರ ಪಟ್ಟದ ಶಿಷ್ಯ. ಅಷ್ಟಾಗಿಯೂ ನೆಹರೂ ಅವರ ನೀತಿಗಳು ಹಾಗೂ ಕಾರ್ಯಕ್ರಮಗಳು ದೇಶವನ್ನು ಗಾಂಧಿವಾದದ ವಿರುದ್ಧ ದಿಶೆಗೆ ಒಯ್ದವು ಎಂಬುದಾಗಿ ವಿದ್ವಾಂಸರ ಅಂಬೋಣ. ಉದಾಹರಣೆಗೆ ಗಾಂಧಿಯವರ ಗ್ರಾಮ ಸ್ವರಾಜ್ಯ ಕಲ್ಪನೆ, ಆಧುನೀಕರಣದ ಕುರಿತ ವಿರೋಧ, ಇವೆಲ್ಲವೂ ನೆಹರೂ ಯುಗದ ನಂತರ ರಾಜಕಾರಣದ ಕಸದ ಬುಟ್ಟಿ ಸೇರಿದ್ದು ಈಗ ಇತಿಹಾಸವಾಗಿದೆ. ಹಾಗಾಗಿ ಯಾರೂ ಈ ವಿಷಯದಲ್ಲಿ ನೆಹರೂ ಅವರು ಗಾಂಧಿಯವರ ಶಿಷ್ಯತ್ವವನ್ನು ಪೂರೈಸಿದರು ಎನ್ನುವ ಸಾಹಸಕ್ಕೆ ಹೋಗಲಾರರು. ಆದರೆ ಅಷ್ಟಾಗಿಯೂ ಕೂಡ ನೆಹರೂ ಅವರು ಗಾಂಧಿಯವರ ಶಿಷ್ಯರಾಗಿ ಉಳಿದುಕೊಳ್ಳುವುದು ಸೆಕ್ಯುಲರ್ ನೀತಿಯಲ್ಲಿ ಎಂಬುದು ನೆಹರೂ ಅವರ ಪರ ವಿರೋಧಿಗಳಿಬ್ಬರಲ್ಲೂ ಮನೆಮಾಡಿರುವ ಅನ್ನಿಸಿಕೆ. ಭಾರತದಲ್ಲಿ ಹಿಂದುತ್ವವಾದಿಗಳನ್ನು ನಿಯಂತ್ರಿಸುವ ಹಾಗೂ ಅಲ್ಪಸಂಖ್ಯಾತರ ಹಿತವನ್ನು ರಕ್ಷಿಸುವ ಕುರಿತಂತೆ ತಮ್ಮ ಗುರುವಿನ ಆಲೋಚನೆಗಳನ್ನು ನೆಹರೂ ಕಾರ್ಯರೂಪಕ್ಕೆ ಸಮರ್ಥವಾಗಿ ಇಳಿಸಿದವರು ಎಂಬುದರಲ್ಲಿ ಇಂದು ಯಾರಿಗಾದರೂ ಸಂದೇಹವಿದೆ ಎನ್ನಿಸುವುದಿಲ್ಲ. ಈ ಮೇಲಿನ ಕೊನೆಯ ಅಂಶವನ್ನು ಮಾತ್ರ ಕಾಂಗ್ರೆಸ್ಸು ಒತ್ತಿ ಹೇಳಿ ತಾನು ಗಾಂಧೀಜಿಯವರ ನಿಜವಾದ ವಾರಸುದಾರ ಎನ್ನುತ್ತ ಬಂದಿದೆ. ಆದರೆ ನೆಹರು ಸೆಕ್ಯುಲರಿಸಂಗೆ ಗಾಂಧಿಯವರ ವಾರಸುದಾರಿಕೆ ಎಷ್ಟಿದೆ?

ಇಂದು ಗಾಂಧೀ ಸೆಕ್ಯುಲರಿಸಂ ಅಂತ ಪ್ರತ್ಯೇಕವಾಗಿ ಯಾವುದೂ ಕಣ್ಣಿಗೆ ಕಾಣುವುದಿಲ್ಲ. ನೆಹರು ಸೆಕ್ಯುಲರಿಸಮ್ಮಿನ ಇಂದಿನ ವಾರಸುದಾರರ ಚಿಂತನೆಗೂ ಗಾಂಧೀ ಚಿಂತನೆಗೂ ಇರುವ ಬಿರುಕುಗಳನ್ನು ಗಮನಿಸಿದರೆ ಈ ವಾರಸುದಾರಿಕೆಯ ಸ್ವರೂಪವು ಸ್ಪಷ್ಟವಾಗಬಹುದು. ನೆಹರೂ ಕಾಲದಲ್ಲಿ ಪ್ರಚಲಿತದಲ್ಲಿ ಬಂದ ಸೆಕ್ಯುಲರಿಸಂಗೆ ಅಲ್ಪಸಂಖ್ಯಾತರ ಓಲೈಕೆಯ ರಾಜಕೀಯವನ್ನು ಬಿಟ್ಟರೆ ಅದರಲ್ಲಿ ಸೆಕ್ಯುಲರ್ ಆದದ್ದು ಏನೂ ಕಾಣಿಸುವುದಿಲ್ಲ. ಹಾಗೂ ಹಿಂದೂ ಸಂಪ್ರದಾಯಗಳ ಕುರಿತು ಜಿಗುಪ್ಸೆ, ಅವಹೇಳನವೂ ಕೂಡ ಈ ಸೆಕ್ಯುಲರಿಸಂನ ಒಂದು ಲಕ್ಷಣ. ಅಂದರೆ ಹಿಂದೂ ಪರಂಪರೆಯು ಅನೈತಿಕ ಸಮಾಜ ವ್ಯವಸ್ಥೆಯನ್ನು, ಅರ್ಥಾತ್ ಜಾತಿವ್ಯವಸ್ಥೆಯನ್ನು ಎತ್ತಿ ಹಿಡಿಯುತ್ತದೆ, ಸಮಸ್ತ ಸಂಸ್ಕೃತ ಗ್ರಂಥಗಳೆಲ್ಲವೂ ಬ್ರಾಹ್ಮಣೇತರರ ಶೋಷಣೆಗಾಗಿಯೇ ರಚನೆಯಾಗಿವೆ, ಈ ಸಮಾಜವನ್ನು ಆದಷ್ಟೂ ಹಿಂದೂ ಸಂಪ್ರದಾಯಗಳ ಹಿಡಿತದಿಂದ ಹೊರತಂದ ಹೊರತೂ ಅದರ ಉದ್ಧಾರ ಸಾಧ್ಯವಿಲ್ಲ ಎನ್ನುವುದೇ ಇಂದಿನ ಸೆಕ್ಯುಲರಿಸಂ ಆಗಿದೆ. ಈ ಸೆಕ್ಯುಲರಿಸಂ ಪ್ರಕಾರ ಹಿಂದೂ ಸಂಪ್ರದಾಯಗಳಲ್ಲಿನ ಮೌಢ್ಯದ ನಿರ್ಮೂಲನೆಗಾಗಿ ಕಾನೂನುಗಳನ್ನು ಮಾಡುವುದೇ ಮುಖ್ಯ ಕಾರ್ಯಕ್ರಮ. 

ಮತ್ತಷ್ಟು ಓದು »

2
ಏಪ್ರಿಲ್

“ಧರ್ಮ”ದ ದಾರಿ ತಪ್ಪಿಸುತ್ತಿರುವ ಹಿರಿಯರು;ಇಲ್ಲದ ಹಿಂದೂ ರಿಲಿಜನ್ನಿನ ಭ್ರಮೆಯಲ್ಲಿ ಕಿರಿಯರು

 – ರಾಕೇಶ್ ಶೆಟ್ಟಿ

Chimu Kalburgiಕಳೆದ ಜೂನ್ ೯ರಂದು ನಡೆದಿದ್ದ ಮೌಢ್ಯಮುಕ್ತ ಸಮಾಜ,ಕರ್ನಾಟಕ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಅನುಷ್ಠಾನ ಚರ್ಚಾ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಡಾ.ಕಲ್ಬುರ್ಗಿಯವರು,ದೇವರ ವಿಗ್ರಹಗಳ ಮೇಲೆ ಮೂತ್ರ ಮಾಡಿದರೂ ಏನೂ ಆಗದುಎಂದು ಹೇಳಿ ಸುದ್ದಿಯಾಗಿದ್ದರು. ಈಗ ಮತ್ತೆ, ಗದುಗಿನಲ್ಲಿ ಆಯೋಜಿಸಲಾಗಿದ್ದ ’ಸಮಾಜಶಾಸ್ತ್ರ,ಕನ್ನಡಶಾಸ್ತ್ರ ಮತ್ತು ಅರ್ಥಶಾಸ್ತ್ರ ವಿಚಾರಗೋಷ್ಠಿ’ಯಲ್ಲಿ, ಹಿಂದುಗಳಿಗೆ ಧರ್ಮಗ್ರಂಥವೇ ಇಲ್ಲ.ಭಗವದ್ಗೀತೆ ಹಿಂದುಗಳ ಧರ್ಮ ಗ್ರಂಥವಲ್ಲ,ಅದೊಂದು ವಚನ ಸಾಹಿತ್ಯರಾಜ್ಯ ಸರ್ಕಾರ ನಡೆಸಲು ತೀರ್ಮಾನಿಸಿರುವ ಜಾತಿಜನಗಣತಿಯ ಪ್ರಶ್ನಾವಳಿಯಲ್ಲಿ ಧರ್ಮ,ಜಾತಿ,ಉಪಜಾತಿಗೊಂದು ಪ್ರತ್ಯೇಕ ಕಾಲಂ ನಿಗದಿಪಡಿಸಲಾಗಿದೆ.ಜಾತಿ ಜನಗಣತಿಯಲ್ಲಿ ಧರ್ಮ ಯಾಕೆ ಬೇಕು.ಏಕೆಂದರೆ ಧರ್ಮ ಮತ್ತು ಜಾತಿ ಎರಡೂ ಒಂದೇ.ಜೈನ ಧರ್ಮವೂ ಹೌದು,ಜಾತಿಯೂ ಹೌದು.ಅದರಂತೆ ಮುಸ್ಲಿಂ,ಕ್ರಿಶ್ಚಿಯನ್ ಮತ್ತು ಬೌದ್ಧ ಧರ್ಮವೂ ಹೌದು,ಜಾತಿಯೂ ಹೌದು.ಹೀಗಿದ್ದಾಗ ಇಂತಹ ಅನವಶ್ಯಕ ಕಾಲಂಗಳು ಏಕೆ ಬೇಕು?” ಎಂದು ಪ್ರಶ್ನಿಸಿದ್ದಾರೆಂದು ವರದಿಯಾಗಿತ್ತು.

ಡಾ.ಕಲ್ಬುರ್ಗಿಯವರ ಹೇಳಿಕೆಯನ್ನು ವಿರೋಧಿಸಿ,ಹಿರಿಯ ಸಂಶೋಧಕರಾದ ಡಾ.ಎಂ ಚಿದಾನಂದ ಮೂರ್ತಿಗಳು ವಿಜಯವಾಣಿಯ ಜನಮತ ವಿಭಾಗದಲ್ಲಿ ಪತ್ರವೊಂದನ್ನು ಬರೆದು ಕಲ್ಬುರ್ಗಿಯವರು ಗದುಗಿನಲ್ಲಿ ಮಾತನಾಡುತ್ತ ಹಿಂದೂ ಎಂಬ ಧರ್ಮವೇ ಇಲ್ಲಎಂದು ವಿತಂಡವಾದ ಮಾಡಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆಎನ್ನುತ್ತಾ ಮುಂದುವರೆದೂ ಧರ್ಮ ಎಂಬ ಶೀರ್ಷಿಕೆಯಡಿಯಲ್ಲಿ ಹಿಂದೂ ಎಂದು ದಾಖಲಿಸಲು ಸುಪ್ರೀಂ ಕೋರ್ಟ್ ಅವಕಾಶ ಮಾಡಿಕೊಟ್ಟಿದೆ.’ಹಿಂದೂ ವಿವಾಹ ಕಾನೂನುಎಂಬ ಕಾನೂನು ಕೂಡ ಇದೆ.ಕಲ್ಕತ್ತೆಯ ಮಠವೊಂದು ತಾನು ಹಿಂದು ವ್ಯಾಪ್ತಿಗೆ ಬರುವುದಿಲ್ಲವೆಂದಾಗ,೧೯೯೫ರಲ್ಲಿ ಸರ್ವೋಚ್ಚ ನ್ಯಾಯಾಲಯದ ಪೂರ್ಣಪೀಠವು ಅದು ಹಿಂದು ಧರ್ಮಕ್ಕೆ ಸೇರಿದ ಮಠಎಂದು ತೀರ್ಪು ನೀಡಿದೆ.ಗಾಂಧೀಜಿ ತಮ್ಮನ್ನು ಸನಾತನಿ ಹಿಂದೂಎನ್ನುತ್ತಾರೆ.ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿ ತಮ್ಮನ್ನು ಹಿಂದುಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ… ” ಇತ್ಯಾದಿ ಉದಾಹರಣೆಗಳನ್ನು ನೀಡಿದ್ದಾರೆ.

ಮತ್ತಷ್ಟು ಓದು »

3
ಮಾರ್ಚ್

ನಮ್ಮದು ಜ್ಞಾನ ಮಾರ್ಗ.ನಿಮ್ಮ ಮಾರ್ಗ ಯಾವುದು ಬುದ್ಧಿಜೀವಿಗಳೇ?

– ರಾಕೇಶ್ ಶೆಟ್ಟಿ

ಬುದ್ಧಿಜೀವಿ/ಸೆಕ್ಯುಲರ್/ಪ್ರಗತಿಪರರಿಗೆ ನಮಸ್ಕಾರ,

 

ವೈಚಾರಿಕ ಅಸ್ಪೃಷ್ಯತೆಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ನಡೆದಿರುವ,ನಡೆಯುತ್ತಿರುವ ಬೌದ್ಧಿಕ ಫ್ಯಾಸಿಸಂನ ವಿರುದ್ಧ ನೀವೆಲ್ಲರೂ ಜನವರಿ ೩೦ನೇ ತಾರೀಖು ಬೆಂಗಳೂರಿನಲ್ಲಿ ಮೆರವಣಿಗೆ ಮತ್ತು ಬಹಿರಂಗ ಸಭೆಯೊಂದನ್ನು ಮಾಡಿದ್ದೀರಿ.ಆ ಸಭೆಯ ಕರಪತ್ರದ ಕೆಲವು ಸಾಲುಗಳ ಮೂಲಕ ನನ್ನ ಈ ಬಹಿರಂಗ ಪತ್ರವನ್ನು ಪ್ರಾರಂಭಿಸುತಿದ್ದೇನೆ.

“ತಾತ್ವಿಕವಾದ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಪರಸ್ಪರ ಗೌರವದಿಂದ ನಡೆದುಕೊಳ್ಳುವ ಸಂಸ್ಕೃತಿ ಕರ್ನಾಟಕದಲ್ಲಿತ್ತು. ಚಾರ್ವಾಕರಿಗೆ ಕೂಡ ನಮ್ಮ ಚರ್ಚೆಯ ಚಾವಡಿಯಲ್ಲಿ ಒಂದಿಷ್ಟು ಜಾಗವಿತ್ತು.ಆದರೆ ಈಗ ಇದ್ದಕ್ಕಿದ್ದ ಹಾಗೆ ಸಾಹಿತಿಗಳು, ಚಿಂತಕರು,ಬುದ್ಧಿಜೀವಿಗಳು,ಪತ್ರಕರ್ತರು ಹೋರಾಟಗಾರರಲ್ಲಿ ಒಬ್ಬೊಬ್ಬರನ್ನೇ ಆಯ್ದು ಹಂಗಿಸಿ,ನಿಂದಿಸಿ,ಅಪಹಾಸ್ಯ ಮಾಡಿ, ಸುಳ್ಳು ಆರೋಪಗಳ ಮೂಲಕ ಅವರ ಚಾರಿತ್ರ್ಯ ಹನನ ಮಾಡಲಾಗುತ್ತಿದೆ.ಇದು ಸತ್ಯ,ನ್ಯಾಯ ಮತ್ತು ನಿಜವಾದ ಧರ್ಮದ ಪರ ಮಾತನಾಡುವವರ ನೈತಿಕ ಸ್ಥೈರ್ಯ ಕುಸಿದುಹೋಗುವಂತೆ ಮಾಡುವ ಹುನ್ನಾರ.ಈ ಕುಟಿಲ ಉದ್ದೇಶಕ್ಕಾಗಿ ಮಾಧ್ಯಮಗಳನ್ನು ಕೂಡ ಬಳಸಿಕೊಳ್ಳಲಾಗುತ್ತಿದೆ. ಜನವಿರೋಧಿ ನಿಲುವು ಹೊಂದಿರುವ ಹಿಡಿಯಷ್ಟಿರುವ ವ್ಯಕ್ತಿಗಳು ತಮ್ಮ ಅಭಿಪ್ರಾಯವನ್ನೇ ಸಾರ್ವಜನಿಕ ಅಭಿಪ್ರಾಯವೆಂದು ಬಿಂಬಿಸಲು ಹೊರಟಿದ್ದಾರೆ.ಇದನ್ನೇ ಬಳಸಿಕೊಂಡು ಮಾಧ್ಯಮಗಳು ತಮ್ಮ ತೀರ್ಮಾನಗಳನ್ನು “ಜನಭಿಪ್ರಾಯ”ದ ಹೆಸರಲ್ಲಿ ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ…”

ಹೌದೇ? ನಿಜವಾಗಿಯೂ ಕರ್ನಾಟಕದಲ್ಲಿ ನಮ್ಮ ಸೆಕ್ಯುಲರ್ ‘ಆಪ್ತ ಮಿತ್ರ’ರು ಹೇಳುತ್ತಿರುವಂತೆ ಬೌದ್ಧಿಕವಾಗಿ ಉಸಿರು ಕಟ್ಟಿಸುವ ವಾತವರಣ ನಿರ್ಮಾಣವಾಗಿದೆಯೇ? ಅವರ ಆತಂಕ ಸಕಾರಣವೇ? ಹೌದು ಎನ್ನುವುದು ನನ್ನ ಅಭಿಪ್ರಾಯ.ರಾಜ್ಯದಲ್ಲಿ ನಡೆದ “ಬೌದ್ಧಿಕ ಫ್ಯಾಸಿಸಂ”ನ ಘಟನೆಗಳ ಉದಾಹರಣೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.

ಮೊದಲನೆಯ ಉದಾಹರಣೆ :ಬೆಲ್ಜಿಯಂನ ಗೆಂಟ್ ವಿವಿಯ ಸಹಭಾಗಿತ್ವದಲ್ಲಿ ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಪ್ರೊ.ಎಸ್ ಎನ್ ಬಾಲಗಂಗಾಧರ ಅವರ ನೇತೃತ್ವದಲ್ಲಿ ಭಾರತೀಯ ಸಮಾಜ ಮತ್ತು ಸ್ಥಳಿಯ ಸಂಸ್ಕೃತಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದ “ಸ್ಥಳಿಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ(CSLC)”ವನ್ನು ಮುಚ್ಚಿಸಲಾಯಿತು.ಕಾರಣ ಆ ಸಂಸ್ಥೆ ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿಯದೇ ತನ್ನ ಸಂಶೋಧನೆಯ ವಿಷಯಗಳನ್ನು ಮಂಡಿಸಿದ್ದು. ಮತ್ತಷ್ಟು ಓದು »

1
ಸೆಪ್ಟೆಂ

ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’-ಭಾಗ 3

– ಪ್ರೊ.ರಾಜಾರಾಮ್ ಹೆಗಡೆ,

ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ.

Social Science Column Logo

ಕರ್ನಾಟಕದ ಕುರಿತಂತೆ ವೃತ್ತಿಪರ ಇತಿಹಾಸಕಾರರ ಒಂದು ಇತಿಹಾಸ ಬಂದಿದ್ದೇ 1970 ರಲ್ಲಿ. ಅಂದರೆ, ವಿಶ್ವವಿದ್ಯಾನಿಲಯಗಳಲ್ಲಿ ಕರ್ನಾಟಕದ ಇತಿಹಾಸಕ್ಕೇ ಪ್ರತ್ಯೇಕ ಪತ್ರಿಕೆಗಳನ್ನು ಪ್ರಾರಂಭಿಸಿದ ನಂತರ. ಕರ್ನಾಟಕದ ಕುರಿತ ವೃತ್ತಿಪರ ವ್ಶೆಜ್ಞಾನಿಕ ಇತಿಹಾಸವು ಒಂದು ಶೈಕ್ಷಣಿಕ ಕಾರ್ಯಕ್ರಮದ ಅಂಗವಾಗಿ ವಸಾಹತು ಮತ್ತು ರಾಷ್ಟ್ರೀಯ ಇತಿಹಾಸದ ಚೌಕಟ್ಟಿನಲ್ಲಿ ಮೂಡಿಬಂದಿದೆ. ಏಕೀಕೃತ ಕರ್ನಾಟಕದ ಇತಿಹಾಸವಾಗಿ ಪಿ. ಬಿ. ದೇಸಾಯಿ ಮತ್ತಿತರರು 1970ರಲ್ಲಿ ಹೊರತಂದ A History of Karnataka ದ ಮುನ್ನುಡಿಯಲ್ಲಿ ಈ ಕರ್ನಾಟಕದ ಗಾಥೆಯನ್ನು ಈ ರೀತಿ ಇಡಲಾಗಿದೆ: ‘ ಈ ಶತಮಾನದ ಪ್ರಾರಂಭದ ಏಕೀಕರಣ ಪೂರ್ವದ ಕರ್ನಾಟಕದ ಇತಿಹಾಸವು ಅತ್ಯಂತ ಕತ್ತಲೆಯ ಕಾಲವಾಗಿದೆ, ಇದಕ್ಕೆ ನೆಲವಿರಲಿಲ್ಲ, ಭಾಷೆಯಿರಲಿಲ್ಲ, ಇತಿಹಾಸವಿರಲಿಲ್ಲ.. ಆದರೆ ಈಗ ಕರ್ನಾಟಕಕ್ಕೆ ಇತಿಹಾಸವರುವುದೊಂದೇ ಅಲ್ಲದೇ, ಅದು ವೈಭವೊಪೇತವೂ, ಅಸೂಯೆ ಹುಟ್ಟಿಸುವಂಥದ್ದೂ ಆಗಿದೆ ಎಂಬುದು ಗೊತ್ತಾಗಿದೆ.. ಆದಿಮ ಗತಕಾಲದಿಂದ ಅನೇಕ ಶತಮಾನಗಳ ಸುದೀರ್ಘ ಕಾಲದವರೆಗೆ ಅಡೆತಡೆಯಿಲ್ಲದೇ ಅಭಿಮುಖವಾಗಿ ಅದು ಚಲಿಸುತ್ತಿದೆ… ಕರ್ನಾಟಕದ ಜನತೆಗೆ ಯಾವುದೇ ನಾಗರಿಕ ರಾಷ್ಟ್ರವು ನ್ಯಾಯೋಚಿತವಾಗಿ ಹೆಮ್ಮೆಪಡಬಹುದಾದಂಥ ಉನ್ನತ ಸಾಧನೆಗಳಿವೆ.’ (ಸಂಕ್ಷಿಪ್ತಗೊಳಿಸಲಾಗಿದೆ) ಇಷ್ಟೇ ಅಲ್ಲದೆ, ಪ್ರಸ್ತುತ ಇತಿಹಾಸವು ಏನನ್ನು ನಿರ್ದೇಸುತ್ತದೆ? ಇದು ಒಂದು ಜನತೆಯು ನಾಗರೀಕ ಪೂರ್ವ ಅವಸ್ಥೆಯಿಂದ ನಾಗರೀಕ ಅವಸ್ಥೆಗೆ ಪದಾರ್ಪಣ ಮಾಡಿದ ಕಥನವಾಗಿದೆ. ಸದಾಕಾಲವೂ ಮಹೋನ್ನತ ಭಾರತ ರಾಷ್ಟ್ರದ ಅವಿಭಾಜ್ಯ ಅಂಗವಾಗಿ ಉಳಿದುಕೊಂಡೇ ಒಂದು ಒಟ್ಟಂದದ ಸಾಂಸ್ಕೃತಿಕ ಘಟಕವಾಗಿ ಅವರ ವಿಕಾಸ, ಏಳ್ಗೆ, ಅವನತಿ ಮತ್ತು ವಿಘಟನೆಗಳು, ಹಾಗೂ ಆಧುನಿಕ ಕಾಲದಲ್ಲಿ ಮತ್ತೆ ಒಂದು ಏಕೀಕೃತ ಪ್ರಭುತ್ವದ ಜನತೆಯಾಗಿ ಅವರ ಪುನರುತ್ಥಾನ..(ಗಳ ಕಥನವಾಗಿದೆ)’ ಇವುಗಳ ಜೊತೆಗೇ ಇಂದಿನ ಕರ್ನಾಟಕದ ಹೊರಗಿನ ಪ್ರದೇಶಗಳ ಮೇಲೆ ಹಿಂದೆ ಅದಕ್ಕಿದ್ದ ಪ್ರಭುತ್ವ ಮತ್ತು ಪ್ರಭಾವಗಳನ್ನು ‘ಮಹಾನ್ ಕರ್ನಾಟಕ’ (Greater Karnataka) ಎಂಬ ಪರಿಭಾಷೆಯಲ್ಲಿ ವರ್ಣಿಸಲಾಗಿದೆ. ‘ ಅತ್ಯಂತ ಹೆಚ್ಚಿನ ರಾಜರನ್ನು ಸೃಷ್ಟಿಸಿದ ಏಕಮೇವ ಪ್ರದೇಶ ಇದಾಗಿದೆ. ಇಲ್ಲಿನ ರಾಜರು ಓರಿಸ್ಸಾ, ಗೋವಾ, ಗುಜರಾಥ್, ಬಿಹಾರ, ರಾಜಸ್ಥಾನ, ಬೆಂಗಾಲ ಇತ್ಯಾದಿ ಪ್ರದೇಶಗಳಲ್ಲಿ ಆಳಿದ್ದಾರೆ. ಅದರ ಸಂಸ್ಸೃತಿಯ ಪ್ರಭಾವ ಹೊರಭಾಗಗಳಮೇಲೆ ಹೇಗಾಯಿತು, ಹಾಗೂ ‘ಮಹಾನ್ ಭಾರತ’ ಕ್ಕೆ ಕರ್ನಾಟಕದ ಕಾಣಿಕೆ ಏನು? ಇತ್ಯಾದಿಗಳ ಕುರಿತೂ ಪ್ರಸ್ತಾವನೆಯಲ್ಲಿ ಚರ್ಚಿಸಲಾಗಿದೆ.

ಮತ್ತಷ್ಟು ಓದು »

18
ಆಗಸ್ಟ್

ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’-ಭಾಗ 2

– ಪ್ರೊ.ರಾಜಾರಾಮ್ ಹೆಗಡೆ,

ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ.

Social Science Column Logoನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’- ಭಾಗ 1

3. ಇಪ್ಪತ್ತನೆಯ ಶತಮಾನದ ನಾಲ್ಕನೆಯ ದಶಕದಿಂದ ಆರನೆಯ ದಶಕದ ವರೆಗೆ ಕನ್ನಡ ರಾಷ್ಟ್ರೀಯತೆಯ ಇತಿಹಾಸವನ್ನು ನಿರ್ವಚಿಸಿದ ಶಂಬಾ ಜೋಶಿಯವರು ಈ ಇತಿಹಾಸದ ಒಂದು ಮಹತ್ವಪೂರ್ಣ ಘಟ್ಟವನ್ನು ಪ್ರತಿಬಿಂಬಿಸುತ್ತಾರೆ. ಅವರು ಈ ಇತಿಹಾಸದ ರೂಪುರೇಷೆಗಳನ್ನು ಆಲೂರರ ಮಾದರಿಯಿಂದ ಪಡೆದುಕೊಂಡು ಅದನ್ನು ವಿಭಿನ್ನ ದಿಕ್ಕುಗಳಲ್ಲಿ ವಿಸ್ತರಿಸುತ್ತಾರೆ. ಈ ಪ್ರಯತ್ನದಲ್ಲಿ ಕನ್ನಡ ಎಂಬ ಗುರುತನ್ನು ಮತ್ತಷ್ಟು ಸತ್ವಪೂರ್ಣ ಪ್ರಭೇದವನ್ನಾಗಿ ರೂಪಿಸಿ ಅದಕ್ಕೆ ಇತಿಹಾಸವು ಒಂದು ಮೂಲಭೂತವಾದ ಅಗತ್ಯ ಎಂಬುದನ್ನು ನಿರೂಪಿಸಲಿಕ್ಕೆ ಇತಿಹಾಸದ ದರ್ಶನವನ್ನು ತಂದು ಅದಕ್ಕೆ ಸೇರಿಸುತ್ತಾರೆ. ಅವರ ‘ಕನ್ನಡದ ನೆಲೆ’ ಕೃತಿಯಲ್ಲಿ (1939) ಇದು ವ್ಯಕ್ತವಾಗಿದೆ. ಇಲ್ಲಿನ ಅವರ ಪ್ರಾರಂಭಿಕ ಜಿಜ್ಞಾಸೆಯ ಪ್ರಕಾರ ಕನ್ನಡಿಗರ ಮೂಲ ಜನಾಂಗವು ಯಾವುದು? ಅವರ ಗುಣಸ್ವಭಾವಗಳು ಎಂಥವು? ಎಂಬುದನ್ನು ತಿಳಿಯದೇ ಕನ್ನಡ ಸಂಸ್ಕೃತಿ ಸ್ಪಷ್ಟವಾಗಿ ಅರಿವಿಗೆ ಬಾರದು. ಈ ಅರಿವನ್ನು ಹೊಂದಲಿಕ್ಕೆ ಇತಿಹಾಸ ಅತ್ಯಗತ್ಯ. ಇತಿಹಾಸ ಎಂದರೆ ಸತ್ಯಶೋಧನೆ, ಅದು ಸ್ವ ಸ್ವರೂಪ ಜ್ಞಾನ, ಇದರ ಜ್ಞಾನವಿಲ್ಲದೇ ನಾಡನ್ನು ಕಟ್ಟುವುದು ಸಾಧ್ಯವಿಲ್ಲ. ಈ ರೀತಿ ಶಂಬಾ ಜೋಶಿಯವರು ಪಾಶ್ಚಾತ್ಯ ವ್ಶೆಜ್ಞಾನಿಕ ಇತಿಹಾಸದ ದರ್ಶನವನ್ನು ತಿಳಿಸುತ್ತಾರೆ. ಅವರ ಇತರ ಕೃತಿಗಳಲ್ಲಿಯೂ ಪ್ರಾರಂಭದಲ್ಲಿ ಇಂಥ ಹೇಳಿಕೆಗಳು ಬರುತ್ತವೆ. ಅಂದರೆ ಕನ್ನಡತ್ವದ ಸ್ವ ಸ್ವರೂಪ ದರ್ಶನ ಇಂದು ಆಗಬೇಕಾದ ಮೂಲಭೂತ ಕೆಲಸವಾಗಿದ್ದು, ತಾವು ಆ ಕಾಯಕದಲ್ಲಿ ತೊಡಗಿಸಿಕೊಂಡಿರುವುದಾಗಿ ಅವರು ಭಾವಿಸಿಕೊಂಡಿದ್ದು ಸ್ಪಷ್ಟ. ಈ ಸ್ವ-ಸ್ವರೂಪ ಐತಿಹಾಸಿಕ ವಿವರಗಳಿಂದ ಎದ್ದು ಬರುತ್ತದೆ. ಈ ವಿವರಗಳಲ್ಲಿ ರಾಜಮನೆತನಗಳ ಇತಿಹಾಸಕ್ಕೆ ಪ್ರಮುಖ ಸ್ಥಾನವಿಲ್ಲ, ಬದಲಾಗಿ ಕನ್ನಡತ್ವದ ಶೋಧನೆಯೇ ಅದರ ಪ್ರಮುಖ ಗುರಿ.

ಅವರ ‘ ಕರ್ಣಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ’ ಯಲ್ಲಿ ಪಾಶ್ಚಾತ್ಯ ವ್ಶೆಜ್ಞಾನಿಕ ಇತಿಹಾಸದ ಮತ್ತೊಂದು ಗ್ರಹಿಕೆ ಕಾಣಿಸಿಕೊಂಡಿದೆ: ಇತಿಹಾಸ ಒಂದು ಮಾನವವಾದೀ ಹುಡುಕಾಟವಾಗಿದೆ. ನೆನ್ನೆಯ ಸಂಗತಿಗಳು ನಮ್ಮ ಬಾಲ್ಯಸಂಗತಿಗಳಿದ್ದ ಹಾಗೇ. ಇಲ್ಲಿ ದೈವವಾದಕ್ಕೆ ಶರಣಾದರೆ ನಮ್ಮ ಕತೃತ್ವವನ್ನು ಕಳೆದುಕೊಂಡುಬಿಡುತ್ತೇವೆ. ‘ಇಂದು ತಮ್ಮ ನಾಡಿನ ಹೆಸರನ್ನೂ ಉಳಿಸಿಕೊಳ್ಳಲು ಸಾಧ್ಯವಾಗದ ಇವರು ಅಂದು ಅದು ಹೇಗೆ ಮಹೋನ್ನತ ಕತೃತ್ವವನ್ನು ಹೊಂದಿದ್ದರು ಎಂಬುದನ್ನು ತಿಳಿದುಕೊಳ್ಳಲು ಇತಿಹಾಸ ಜ್ಞಾನ ಬೇಕು. ರಾಷ್ಟ್ರ ಚರಿತೆ ವ್ಯಕ್ತಿ ಚರಿತೆಯ ಸಮಷ್ಟಿ ಆಬಿವ್ಯಕ್ತಿಯಾಗಿದೆ. ಪುರಾಣಕಥೆಗಳನ್ನು ನಂಬಿ ಇತಿಹಾಸವನ್ನು ಸೃಷ್ಟಿಸಿದರೆ ಮನುಷ್ಯ ಸಾಮರ್ಥ್ಯದ ನಿಜ ಸಂಗತಿ ತಿಳಿಯಲಾರದು. ಈ ರೀತಿ ಕನ್ನಡ ನಾಡು ಇನ್ನೂ ನಿರ್ಮಾಣವಾಗಬೇಕಾದ ವಾಸ್ತವವಾಗಿರುವುದರಿಂದ ಇತಿಹಾಸವನ್ನು ಮನುಷ್ಯ ಕತೃತ್ವವನ್ನು ಜಾಗೃತಿಗೊಳಿಸುವ ಸಾಧನವನ್ನಾಗಿ ಬಳಸಿಕೊಳ್ಳಬೇಕಾದರೆ ಅದನ್ನೂ ಮಾನವವಾದೀ ನೆಲೆಯಮೇಲೇ ನಿಲ್ಲಿಸುವ ಅಗತ್ಯವನ್ನು ಜೋಶಿಯವರು ಗುರುತಿಸುತ್ತಾರೆ. ಅಂದರೆ ಇತಿಹಾಸವು ಮನುಷ್ಯ ಸತ್ಯಗಳ ಶೋಧನೆಯೇ ಆಗಬೇಕು. ಆದರೆ ಈ ಮಾನವವಾದೀ ಇತಿಹಾಸವು ಪಾಶ್ಚಾತ್ಯ ಮಾನವವಾದದ ಇತರ ಮುಖಗಳನ್ನೂ ಹೊತ್ತೇ ಬರುವುದನ್ನೂ ಗಮನಿಸಬಹುದು. ಉದಾಹರಣೆಗೆ, ಈ ಇತಿಹಾಸವು ಮಾನವರ ಉಗಮ, ವಿಕಾಸಗಳ ಕುರಿತು ಶೋಧಿಸುತ್ತದೆ, ಇದು ಮಾನವ ಜ್ಞಾನೋಪಲಬ್ಧಿಯ ಇತಿಹಾಸವಾಗಿದೆ. ಮತ್ತಷ್ಟು ಓದು »

28
ಜುಲೈ

ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’-ಭಾಗ 1

ಪ್ರೊ.ರಾಜಾರಾಮ್ ಹೆಗಡೆ, ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ.

Social Science Column Logo

ಕರ್ಣಾಟಕ ಶಬ್ದದ ವ್ಯುತ್ಪತ್ತಿ ಹಾಗೂ ಇತಿಹಾಸದ ಕುರಿತು ಏಕೀಕರಣ ಹೋರಾಟ ಕಾಲದಲ್ಲಿ ಶಂಬಾ ಜೋಶಿಯವರಾದಿಯಾಗಿ ಅನೇಕ ವಿದ್ವಾಂಸರು ಚರ್ಚಿಸಿದ್ದಾರೆ. ಈ ಶಬ್ದದ ಉಲ್ಲೇಖವನ್ನು ಬಹುಶಃ ಕ್ರಿಸ್ತಶಕದ ಆದಿಯಿಂದ ವಿಭಿನ್ನ ಸಂಸ್ಕೃತ ಗ್ರಂಥಗಳಲ್ಲಿ ಗುರುತಿಸಬಹುದು. ಕನ್ನಡ ಶಾಸನಗಳಲ್ಲಿ ಈ ಶಬ್ದವು ರಾಷ್ಟ್ರಕೂಟರ ಕಾಲದಿಂದ ಕಾಣಿಸಿಕೊಳ್ಳುವುದಾಗಿ ತಿಳಿದುಬರುತ್ತದೆ. ತದನಂತರ ಇಲ್ಲಿಯ ರಾಜರನ್ನು ಕರ್ಣಾಟ ರಾಜರೆಂದೂ, ಸೈನ್ಯವನ್ನು ಕರ್ಣಾಟ ಬಲವೆಂದೂ ಸಂಸ್ಕೃತದಲ್ಲಿ ಕರೆದರೆ, ಕನ್ನಡ ನುಡಿ, ಕನ್ನಡನಾಡು ಎಂಬುದಾಗಿ ಇಲ್ಲಿಯ ಜನರು ರಾಷ್ಟ್ರಕೂಟರ ಕಾಲದಿಂದಲೇ ಕನ್ನಡ ಸಾಹಿತ್ಯದಲ್ಲಿ ಈ ಶಬ್ದವನ್ನು ಬಳಸಿದ್ದಾರೆ. ತಮಿಳರು ಇವರನ್ನು ಕನ್ನಡಿ, ಕನ್ನಡಿ ಅರಸರ್ ಎಂದು ಕರೆದಿರುವುದೂ ಕಂಡುಬರುತ್ತದೆ. ಈ ಕುರಿತು ಇಲ್ಲಿ ನೀಡಿದ ವಿವರಗಳಿಗೆ ಇನ್ನಷ್ಟು ಈಚೆಗಿನ ಹಾಗೂ ಮುಂದಿನ ವಿವರಗಳು ಸೇರಿ ಈ ಶಬ್ದ ಇನ್ನೂ ಪ್ರಾಚೀನವೆಂದು ಸಿದ್ಧವಾಗಲೂಬಹುದು. ಅದರಿಂದ ಕರ್ನಾಟಕವೊಂದು ಭೂಪ್ರದೇಶ, ಹಾಗೂ ಅದರಲ್ಲಿ ಆಡುತ್ತಿದ್ದ ಭಾಷೆ ಕನ್ನಡ ಎಂಬ ಸತ್ಯಗಳಿಗೇನೂ ಕುಂದುಬರಲಾರದೆಂಬ ತರ್ಕದಿಂದ ಮುಂದುವರಿಯೋಣ.

ನಮಗೆ ಇಲ್ಲಿರುವ ಸಮಸ್ಯೆ ಎಂದರೆ ಈ ಶಬ್ದವನ್ನು ಇಂದಿನ ನಮ್ಮ ವ್ಶೆಜ್ಞಾನಿಕ ಇತಿಹಾಸದ ಪರಿಕಲ್ಪನೆಗೆ ನಾವು ಹೇಗೆ ಒಗ್ಗಿಸಿದ್ದೇವೆ ಹಾಗೂ ಅದು ಆ ಕಲ್ಪನೆಗೆ ಎಷ್ಟರಮಟ್ಟಿಗೆ ಒಗ್ಗುತ್ತದೆ ಎಂಬ ವಿಚಾರ. ಕರ್ನಾಟಕದ ಏಕೀಕರಣ ಕಾಲದಲ್ಲಿ ಕರ್ನಾಟಕದ ಇತಿಹಾಸವನ್ನು ವ್ಶೆಜ್ಞಾನಿಕವಾಗಿ ರಚಿಸಲಾಯಿತು. ಈ ರಚನೆಯಲ್ಲಿ ಇದ್ದ ಪೂರ್ವಗೃಹೀತಗಳೆಂದರೆ: 1) ಕನ್ನಡ ಭಾಷೆಯ ಮೂಲಕ ಒಂದು ಪ್ರದೇಶವನ್ನು ಕಲ್ಪಿಸಿಕೊಳ್ಳಲು ಸಾಧ್ಯ, ಅಂಥ ಪ್ರದೇಶವೇ ಕರ್ನಾಟಕವಾಗಿದೆ. ಕರ್ನಾಟಕ ಎಂಬುದು ಒಂದು ಪ್ರಕಾರದ ರಾಷ್ಟ್ರ ಕಲ್ಪನೆ ಹಾಗೂ ಅದು ಭಾರತ ಎಂಬ ರಾಷ್ಟ್ರದ ಅಂಗಭೂತವಾಗಿದೆ. 2) ಇದೊಂದು ಸಾಂಸ್ಕೃತಿಕ ಪ್ರಭೇದವಾಗಿದೆ ಹಾಗೂ ಇದು ಭಾಷೆಯನ್ನು ಆಧರಿಸಿದೆ, ಅಂದರೆ ಕನ್ನಡ ಬಾಷೆಯ ಮೂಲಕ ಕನ್ನಡ ಸಂಸ್ಸೃತಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯ. 3) ಈಗ ಈ ಎರಡೂ ಸಂಗತಿಗಳನ್ನು ನಾವು ಮರೆತಿರುವುದರಿಂದ ಅವನ್ನು ಕಲ್ಪಿಸಿಕೊಳ್ಳುವ ಅವಸ್ಥೆ ಬಂದಿದೆ. ಆದರೆ ಅವು ಸತ್ಯವಾಗಿದ್ದಲ್ಲಿ ಅವು ಇತಿಹಾಸದಲ್ಲಿ ಸಿಕ್ಕಲೇಬೇಕು. 4) ಈ ಸಂಸ್ಕೃತಿ ಈ ಕರ್ನಾಟಕವೆಂಬ ಪ್ರದೇಶದ ಇತಿಹಾಸದ ಮೂಲಕ ಮೈದಳೆದಿರುವುದರಿಂದ ಇದರ ಇತಿಹಾಸವನ್ನು ತಿಳಿದುಕೊಂಡರೆ ಈ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಸಾಧ್ಯ. 5) ಹಾಗಾಗಿ ಕರ್ನಾಟಕದ ಇತಿಹಾಸದ ಕುರಿತ ತಿಳುವಳಿಕೆಯಿಂದ ಅದರ ಸಂಸ್ಕೃತಿಯ ಕುರಿತ ಜಾಗೃತಿ ಮೂಡುತ್ತದೆ. 6) ಈ ಜಾಗೃತಿ ಏಕೆ ಬೇಕೆಂದರೆ: ಈ ಭಾಷೆ, ಪ್ರದೇಶ, ಸಂಸ್ಕೃತಿ ಹಾಗೂ ಇತಿಹಾಸದ ಆಧಾರದ ಮೇಲೆ ಒಂದು ಪ್ರಭುತ್ವವನ್ನು ರಚಿಸುವುದು ಸಾಧ್ಯ ಹಾಗೂ ಅಂಥ ಪ್ರಭುತ್ವವು ಈ ಭಾಷೆಯನ್ನಾಡುವ ಜನರ ಸರ್ವತೋಮುಖ ಏಳ್ಗೆಗೆ ಮಾರ್ಗವಾಗಲು ಸಾಧ್ಯ. ಈ ರೀತಿ ಇಲ್ಲಿಯ ಜನರ ಏಳ್ಗೆಗೂ ಇವರ ಇತಿಹಾಸಕ್ಕೂ ಅವಿನಾಭಾವಿ ಸಂಬಂಧ ಇದೆ ಎಂದು ನಂಬಿಕೊಂಡು ಕರ್ನಾಟಕದ ಇತಿಹಾಸದ ರಚನೆಯಾಯಿತು. ಮತ್ತಷ್ಟು ಓದು »

3
ಏಪ್ರಿಲ್

ನಾಡು- ನುಡಿ: ಮರುಚಿಂತನೆ- ಪ್ರಜಾಪ್ರಭುತ್ವ ಹಾಗೂ ಪ್ರತಿನಿಧಿಗಳು- ಭಾಗ:೧

-ಶ್ರೀ. ಆಯನೂರು ಮಂಜುನಾಥ್, ರಾಜ್ಯಸಭಾ ಸದಸ್ಯರು (-ಅಕ್ಷರಕ್ಕೆ ಇಳಿಸಿದವರು: ಸಂತೋಷ ಈ. ಕುವೆಂಪು.ವಿ.ವಿ, ಶಂಕರಘಟ್ಟ)

Social Science Column Logo

ರಾಜಕಾರಣಿಗಳಾದ ನಾವು ಒಂದು ತರಹ ವಿಚಿತ್ರವಾದ ಪರಿಸ್ಥಿತಿಯಲ್ಲಿ ಇದ್ದೇವೆ. ಹೊರಜಗತ್ತಿನಲ್ಲಿ ನಾವು ಬರುತ್ತಿರವಾಗ ನಮಸ್ಕಾರ ಎನ್ನುತ್ತಾರೆ. ನಾವು ದಾಟಿದ ಮೇಲೆ ನಮ್ಮನ್ನು ಬಯ್ಯುತ್ತಾರೆ. ನನ್ನಿಂದ ಅವನಿಗೆ ಏನೋ ಆಗಬೇಕು ಆದ್ದರಿಂದ ಅವನು ನಮಗೆ ಬಹಳ ಗೌರವ ಕೊಡುತ್ತಾನೆ. ಇಲ್ಲವಾದರೆ ನಮಗೆ ಗೌರವ ಕೊಡುವುದಿಲ್ಲ. ಇಂದು ಸಮಾಜದಲ್ಲಿ ನಮ್ಮ ಬಗ್ಗೆ ಗೌರವಗಳು, ಪ್ರೀತಿಗಳು ಪ್ರಾಮಾಣಿಕವಾಗಿ ಪ್ರಕಟವೆ ಆಗುತ್ತಿಲ್ಲ. ಜನರಿಗೆ ನಮ್ಮ ವಿರುದ್ಧವಾದ ಭಾವನೆಗಳು ಇದ್ದಲ್ಲಿ ಅ ಭಾವನೆಗಳನ್ನು ನಮ್ಮ ವಿರುದ್ಧ ವ್ಯಕ್ತಪಡಿಸಿದರೆ ನಾವು ನಮ್ಮ ತಪ್ಪನ್ನು ತಿದ್ದುಕೊಳ್ಳವುದಕ್ಕೆ, ಅದನ್ನು ಸರಿಪಡಿಸಿಕೊಳ್ಳವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬಹುದು. ಅಥವಾ ನಾವು ಒಳ್ಳೆಯ ಕೆಲಸ ಮಾಡಿದಾಗ ಅದನ್ನು ನೇರವಾಗಿ ಹೇಳಿದರೆ ಮತ್ತಷ್ಟು ಪುಷ್ಟಿಕರಿಸಿಕೊಂಡು ಬೆಳೆಸಬಹುದು. ಆದರೆ ಸಮಾಜವೇ ಹೈ ಡಿಗ್ರಿಯ ಹಿಪೋಕ್ರಟಿಕ್ ಪರಿಸರದಲ್ಲಿ ಬದುಕುತ್ತಿದೆ. ಜನರು ತಮಗೆ ನೇರವಾಗಿ ಅನ್ನಿಸಿದ್ದನ್ನು ಹೇಳುತ್ತಿಲ್ಲ. ಹಿಪೋಕ್ರಟಿಕ್ ಜನರ ಮಧ್ಯೆ ಬೆಳದು ಬರುವ ನನ್ನಂತ ರಾಜಕಾರಣಿ ಇನ್ನೂ ಎಷ್ಟು ಹಿಪ್ರೋಕ್ರಟಿಕ್ ಆಗಿರಬಹುದು ನೀವೆ ಯೋಚನೆ ಮಾಡಿ.

ಈ ಜನರ ಮಧ್ಯೆಯೇ ರಾಜಕಾರಣಿಗಳಾದ, ನಾವು ಇರಬೇಕು. ವಿದ್ಯಾವಂತ ಅವಿದ್ಯಾವಂತರ ಮಧ್ಯೆ, ಜಾತಿ ಪ್ರೇಮಿಗಳ ಮಧ್ಯೆ, ಜಾತಿ ಮೀರದವರ ಮಧ್ಯೆ, ನಾನು ಅನ್ನುವವರ ಮಧ್ಯೆ, ಊರು ಅನ್ನುವವರ ಮಧ್ಯೆ, ಅನ್ಯಾಯವನ್ನ ಮಾಡುವವರ ಮಧ್ಯೆ, ಅನ್ಯಾಯವನ್ನು ವಿರೋಧಿಸುವವರ ಮಧ್ಯೆ, ಈ ರೀತಿಯ ವ್ಯವಸ್ಥೆಯ ಮಧ್ಯೆ ಜನಪ್ರತಿನಿಧಿ ಬೆಳೆದುಬರಬೇಕಾದರೆ, ಭವಿಷ್ಯ ನಮ್ಮ ಕಷ್ಟ ಅ ದೇವರಿಗೆ ಪ್ರೀತಿ. ಇತ್ತೀಚೆಗೆ ಬಹಳ ಸುಲಭವಾಗಿದೆ. ಸಮಾಜ ಹೇಗೆ ಭ್ರಷ್ಟವಾಗುತ್ತದೆಯೋ ಅದರ ಮಧ್ಯೆ ಅದೇ ರೀತಿಯ ಪ್ರತಿನಿಧಿಯು ಹುಟ್ಟಿಬರುತ್ತಿದ್ದಾನೆ. ಮತ್ತಷ್ಟು ಓದು »

21
ಮಾರ್ಚ್

ನಾಡು- ನುಡಿ: ಮರುಚಿಂತನೆ- ಭಾರತೀಯ ಪ್ರಭುತ್ವ ಮತ್ತು ಭ್ರಷ್ಟಾಚಾರ ಭಾಗ-2

– ಡಾ.ಎ.ಷಣ್ಮುಖ, ಸಹಪ್ರಾಧ್ಯಾಪಕರು, ಕುವೆಂಪು ವಿಶ್ವವಿದ್ಯಾನಿಲಯ

Social Science Column Logoಸಾರ್ವಭೌಮ ಪ್ರಭುತ್ವ(State) ಮತ್ತು ಸಾರ್ವಜನಿಕ ವಲಯ

ಇಂದಿನ ಭಾರತೀಯ ಪ್ರಭುತ್ವ ಎನ್ನುವ ಕಲ್ಪನೆಯು ಪಶ್ಚಿಮದ ರಾಜಕೀಯ ವ್ಯವಸ್ಥೆಯಿಂದಲೇ ಎರವಲಾಗಿ ಬಂದಿದೆ. ಈ ವಿಷಯವು ನಿಸ್ಸಂಶಯವಾಗಿ ಇಂದು ರಾಜ್ಯಶಾಸ್ತ್ರದ ವಲಯದಲ್ಲಿ ಒಂದು ಸಾಮಾನ್ಯ ತಿಳುವಳಿಕೆಯೇ ಆಗಿದೆ. ಅದನ್ನು ಒಂದು ರೀತಿಯಲ್ಲಿ ಸಕಾರಾತ್ಮಕವಾಗಿಯೇ ವಿವರಿಸಿಕೊಳ್ಳಲಾಗಿದೆ. ಪಶ್ಚಿಮದ ವಿವಿಧ ರಾಷ್ಟ್ರಗಳಲ್ಲಿ ನೂರಾರು ವರ್ಷಗಳಿಂದ ಪ್ರಾಯೋಗಿಕವಾಗಿ ದೃಢಪಡಿಸಿಕೊಂಡು, ಅಳವಡಿಸಿಕೊಂಡು ಬರಲಾದ ರಾಜಕೀಯ ರಚನೆಗಳಿಂದ ಅತ್ಯುತ್ತಮವಾದ ಅಂಶಗಳನ್ನು ಭಾರತದ ಸಂವಿಧಾನ ಕರ್ತೃಗಳು ಪಡೆದು ಭಾರತಕ್ಕೆ ಅಳವಡಿಸಿದ್ದಾರೆ ಎನ್ನುವುದೇ ಆ ಹೆಗ್ಗಳಿಕೆಯಾಗಿದೆ. ಆದರೆ ಈ ಹೆಗ್ಗಳಿಕೆಯ ಮೇಲೆ ಅಳವಡಿಸಿಕೊಂಡಿರುವ ರಾಜಕೀಯ ರಚನೆಗಳು, ಇಲ್ಲಿಯ ಸಾಮಾಜಿಕ ಸಂದರ್ಭದಲ್ಲಿ ಇಲ್ಲಿಯ ಸಾಂಸ್ಕೃತಿಕ ಹಿನ್ನೆಲೆಯ ಜನರು ಇವುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಅವುಗಳಿಗೆ ಪೂರಕವಾಗಿ ನಡೆದುಕೊಳ್ಳದೇ ಇರುವುದರಿಂದ, ಅವು ಇಲ್ಲಿ ಅಪಭ್ರಂಶ (distortion) ಕ್ಕೆ ಒಳಗಾಗಿ ಸಮಸ್ಯೆಗಳು ಸೃಷ್ಟಿಯಾಗುತ್ತಿವೆಯೇ ಎನ್ನುವಂತಹ ಪ್ರಶ್ನೆಗಳು ಏಳುತ್ತವೆ. ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಪಶ್ಚಿಮದಲ್ಲಿ ಪ್ರಭುತ್ವ ಪರಿಕಲ್ಪನೆ ಬೆಳವಣಿಗೆಯ ಸ್ವರೂಪಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ.

ನಮಗೆ ಗೊತ್ತಿರುವ ಹಾಗೆ ಸ್ಟೇಟ್ ಎನ್ನುವುದು ಒಂದು ಸಾರ್ವಭೌಮ ಸಂಸ್ಥೆ. ಯಾರೂ ಪ್ರಶ್ನಿಸಲಾರದ ಅಧಿಕಾರ ಅದಕ್ಕಿದೆ. ಜನರ ಜೀವನವು ಈ ಸ್ಟೇಟ್ನ ಸಾರ್ವಭೌಮ ಕಾನೂನುಗಳ ನಿಯಂತ್ರಣ ಮತ್ತು ನಿರ್ದೇಶನಕ್ಕೆ ಒಳಪಟ್ಟು ನಡೆಯಬೇಕು. ಈ ಸ್ವರೂಪದ ಸ್ಟೇಟ್ ಎಂದೆಂದಿಗೂ ಸಾರ್ವತ್ರಿಕವಾಗಿಯೇ ಇತ್ತೇ? ಖಂಡಿತವಾಗಿಯೂ ಇಲ್ಲ. ಈ ರೀತಿಯ ಸ್ಟೇಟ್ ಬೆಳೆದು ಬಂದಿದ್ದು ಪಶ್ಚಿಮ/ಯೂರೋಪಿನಲ್ಲಿ ಮತ್ತು ಈ ರೀತಿಯ ಸಾರ್ವಭೌಮ ನಿಯಂತ್ರಕ ಮತ್ತು ನಿರ್ದೇಶಕನ ಸ್ವರೂಪವನ್ನು ಪಡೆದುಕೊಂಡಿದ್ದು ಹೆಚ್ಚುಕಡಿಮೆ 17-18ನೇ ಶತಮಾನದ ನಂತರ ಎಂದೇ ಹೇಳಬಹುದು (Mukherji, Partha Nath, 2010). ಮತ್ತಷ್ಟು ಓದು »