ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 18, 2014

1

ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’-ಭಾಗ 2

‍ನಿಲುಮೆ ಮೂಲಕ

– ಪ್ರೊ.ರಾಜಾರಾಮ್ ಹೆಗಡೆ,

ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ.

Social Science Column Logoನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’- ಭಾಗ 1

3. ಇಪ್ಪತ್ತನೆಯ ಶತಮಾನದ ನಾಲ್ಕನೆಯ ದಶಕದಿಂದ ಆರನೆಯ ದಶಕದ ವರೆಗೆ ಕನ್ನಡ ರಾಷ್ಟ್ರೀಯತೆಯ ಇತಿಹಾಸವನ್ನು ನಿರ್ವಚಿಸಿದ ಶಂಬಾ ಜೋಶಿಯವರು ಈ ಇತಿಹಾಸದ ಒಂದು ಮಹತ್ವಪೂರ್ಣ ಘಟ್ಟವನ್ನು ಪ್ರತಿಬಿಂಬಿಸುತ್ತಾರೆ. ಅವರು ಈ ಇತಿಹಾಸದ ರೂಪುರೇಷೆಗಳನ್ನು ಆಲೂರರ ಮಾದರಿಯಿಂದ ಪಡೆದುಕೊಂಡು ಅದನ್ನು ವಿಭಿನ್ನ ದಿಕ್ಕುಗಳಲ್ಲಿ ವಿಸ್ತರಿಸುತ್ತಾರೆ. ಈ ಪ್ರಯತ್ನದಲ್ಲಿ ಕನ್ನಡ ಎಂಬ ಗುರುತನ್ನು ಮತ್ತಷ್ಟು ಸತ್ವಪೂರ್ಣ ಪ್ರಭೇದವನ್ನಾಗಿ ರೂಪಿಸಿ ಅದಕ್ಕೆ ಇತಿಹಾಸವು ಒಂದು ಮೂಲಭೂತವಾದ ಅಗತ್ಯ ಎಂಬುದನ್ನು ನಿರೂಪಿಸಲಿಕ್ಕೆ ಇತಿಹಾಸದ ದರ್ಶನವನ್ನು ತಂದು ಅದಕ್ಕೆ ಸೇರಿಸುತ್ತಾರೆ. ಅವರ ‘ಕನ್ನಡದ ನೆಲೆ’ ಕೃತಿಯಲ್ಲಿ (1939) ಇದು ವ್ಯಕ್ತವಾಗಿದೆ. ಇಲ್ಲಿನ ಅವರ ಪ್ರಾರಂಭಿಕ ಜಿಜ್ಞಾಸೆಯ ಪ್ರಕಾರ ಕನ್ನಡಿಗರ ಮೂಲ ಜನಾಂಗವು ಯಾವುದು? ಅವರ ಗುಣಸ್ವಭಾವಗಳು ಎಂಥವು? ಎಂಬುದನ್ನು ತಿಳಿಯದೇ ಕನ್ನಡ ಸಂಸ್ಕೃತಿ ಸ್ಪಷ್ಟವಾಗಿ ಅರಿವಿಗೆ ಬಾರದು. ಈ ಅರಿವನ್ನು ಹೊಂದಲಿಕ್ಕೆ ಇತಿಹಾಸ ಅತ್ಯಗತ್ಯ. ಇತಿಹಾಸ ಎಂದರೆ ಸತ್ಯಶೋಧನೆ, ಅದು ಸ್ವ ಸ್ವರೂಪ ಜ್ಞಾನ, ಇದರ ಜ್ಞಾನವಿಲ್ಲದೇ ನಾಡನ್ನು ಕಟ್ಟುವುದು ಸಾಧ್ಯವಿಲ್ಲ. ಈ ರೀತಿ ಶಂಬಾ ಜೋಶಿಯವರು ಪಾಶ್ಚಾತ್ಯ ವ್ಶೆಜ್ಞಾನಿಕ ಇತಿಹಾಸದ ದರ್ಶನವನ್ನು ತಿಳಿಸುತ್ತಾರೆ. ಅವರ ಇತರ ಕೃತಿಗಳಲ್ಲಿಯೂ ಪ್ರಾರಂಭದಲ್ಲಿ ಇಂಥ ಹೇಳಿಕೆಗಳು ಬರುತ್ತವೆ. ಅಂದರೆ ಕನ್ನಡತ್ವದ ಸ್ವ ಸ್ವರೂಪ ದರ್ಶನ ಇಂದು ಆಗಬೇಕಾದ ಮೂಲಭೂತ ಕೆಲಸವಾಗಿದ್ದು, ತಾವು ಆ ಕಾಯಕದಲ್ಲಿ ತೊಡಗಿಸಿಕೊಂಡಿರುವುದಾಗಿ ಅವರು ಭಾವಿಸಿಕೊಂಡಿದ್ದು ಸ್ಪಷ್ಟ. ಈ ಸ್ವ-ಸ್ವರೂಪ ಐತಿಹಾಸಿಕ ವಿವರಗಳಿಂದ ಎದ್ದು ಬರುತ್ತದೆ. ಈ ವಿವರಗಳಲ್ಲಿ ರಾಜಮನೆತನಗಳ ಇತಿಹಾಸಕ್ಕೆ ಪ್ರಮುಖ ಸ್ಥಾನವಿಲ್ಲ, ಬದಲಾಗಿ ಕನ್ನಡತ್ವದ ಶೋಧನೆಯೇ ಅದರ ಪ್ರಮುಖ ಗುರಿ.

ಅವರ ‘ ಕರ್ಣಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ’ ಯಲ್ಲಿ ಪಾಶ್ಚಾತ್ಯ ವ್ಶೆಜ್ಞಾನಿಕ ಇತಿಹಾಸದ ಮತ್ತೊಂದು ಗ್ರಹಿಕೆ ಕಾಣಿಸಿಕೊಂಡಿದೆ: ಇತಿಹಾಸ ಒಂದು ಮಾನವವಾದೀ ಹುಡುಕಾಟವಾಗಿದೆ. ನೆನ್ನೆಯ ಸಂಗತಿಗಳು ನಮ್ಮ ಬಾಲ್ಯಸಂಗತಿಗಳಿದ್ದ ಹಾಗೇ. ಇಲ್ಲಿ ದೈವವಾದಕ್ಕೆ ಶರಣಾದರೆ ನಮ್ಮ ಕತೃತ್ವವನ್ನು ಕಳೆದುಕೊಂಡುಬಿಡುತ್ತೇವೆ. ‘ಇಂದು ತಮ್ಮ ನಾಡಿನ ಹೆಸರನ್ನೂ ಉಳಿಸಿಕೊಳ್ಳಲು ಸಾಧ್ಯವಾಗದ ಇವರು ಅಂದು ಅದು ಹೇಗೆ ಮಹೋನ್ನತ ಕತೃತ್ವವನ್ನು ಹೊಂದಿದ್ದರು ಎಂಬುದನ್ನು ತಿಳಿದುಕೊಳ್ಳಲು ಇತಿಹಾಸ ಜ್ಞಾನ ಬೇಕು. ರಾಷ್ಟ್ರ ಚರಿತೆ ವ್ಯಕ್ತಿ ಚರಿತೆಯ ಸಮಷ್ಟಿ ಆಬಿವ್ಯಕ್ತಿಯಾಗಿದೆ. ಪುರಾಣಕಥೆಗಳನ್ನು ನಂಬಿ ಇತಿಹಾಸವನ್ನು ಸೃಷ್ಟಿಸಿದರೆ ಮನುಷ್ಯ ಸಾಮರ್ಥ್ಯದ ನಿಜ ಸಂಗತಿ ತಿಳಿಯಲಾರದು. ಈ ರೀತಿ ಕನ್ನಡ ನಾಡು ಇನ್ನೂ ನಿರ್ಮಾಣವಾಗಬೇಕಾದ ವಾಸ್ತವವಾಗಿರುವುದರಿಂದ ಇತಿಹಾಸವನ್ನು ಮನುಷ್ಯ ಕತೃತ್ವವನ್ನು ಜಾಗೃತಿಗೊಳಿಸುವ ಸಾಧನವನ್ನಾಗಿ ಬಳಸಿಕೊಳ್ಳಬೇಕಾದರೆ ಅದನ್ನೂ ಮಾನವವಾದೀ ನೆಲೆಯಮೇಲೇ ನಿಲ್ಲಿಸುವ ಅಗತ್ಯವನ್ನು ಜೋಶಿಯವರು ಗುರುತಿಸುತ್ತಾರೆ. ಅಂದರೆ ಇತಿಹಾಸವು ಮನುಷ್ಯ ಸತ್ಯಗಳ ಶೋಧನೆಯೇ ಆಗಬೇಕು. ಆದರೆ ಈ ಮಾನವವಾದೀ ಇತಿಹಾಸವು ಪಾಶ್ಚಾತ್ಯ ಮಾನವವಾದದ ಇತರ ಮುಖಗಳನ್ನೂ ಹೊತ್ತೇ ಬರುವುದನ್ನೂ ಗಮನಿಸಬಹುದು. ಉದಾಹರಣೆಗೆ, ಈ ಇತಿಹಾಸವು ಮಾನವರ ಉಗಮ, ವಿಕಾಸಗಳ ಕುರಿತು ಶೋಧಿಸುತ್ತದೆ, ಇದು ಮಾನವ ಜ್ಞಾನೋಪಲಬ್ಧಿಯ ಇತಿಹಾಸವಾಗಿದೆ.

ಈ ರೀತಿ ಸತ್ಯದ ಆಧಾರದ ಮೇಲೆ ಕನ್ನಡದ ಇತಿಹಾಸವನ್ನು ನಿಲ್ಲಿಸುವ ಉದ್ದೇಶವನ್ನು ಹೊಂದಿದ ಜೋಶಿಯವರು ಎರಡು ಸಮಸ್ಯೆಗಳತ್ತ ತಮ್ಮ ದೃಷ್ಟಿಯನ್ನು ಕೇಂದ್ರೀಕರಿಸುತ್ತಾರೆ. ಮೊದಲನೆಯದೆಂದರೆ ಕನ್ನಡದ ಮೂಲ ಭೂಪ್ರದೇಶ, ಎರಡನೆಯದು ಕನ್ನಡದ ಮೂಲ ಜನಾಂಗಗಳು. ಭೂಗೋಲವನ್ನು ಅರಿಯಲು ಸ್ಥಳನಾಮಗಳನ್ನು ವಿಸ್ತೃತವಾಗಿ ಬಳಸಿಕೊಳ್ಳುವ ಅವರು ಇಂದಿನ ಮಹಾರಾಷ್ಟ್ರದ ತುಂಬೆಲ್ಲ ಕನ್ನಡ ಮೂಲದ ಹೆಸರುಳ್ಳ ಹಳ್ಳಿಗಳು ಇವೆ ಎಂಬುದನ್ನು ನಿದರ್ಶಿಸುತ್ತಾರೆ. ಹಾಗೂ ಅಲ್ಲಿ ಅನೇಕ ಕನ್ನಡ ಮೂಲದ ಜನರು ಇದ್ದರೆಂಬುದನ್ನು ಸಾಧಿಸಲೂ ಪ್ರಯತ್ನಿಸುತ್ತಾರೆ. ಜೊತೆಗೆ ಆ ಭಾಗವನ್ನಾಳಿದ ರಾಜಮನೆತನಗಳಾದ ಶಾತವಾಹನ, ವಾಕಾಟಕ, ಯಾದವ ಮುಂತಾದವರು ಕನ್ನಡ ಮೂಲದವರೆಂದು ಕೂಡ ವ್ಯಕ್ತಿನಾಮದ ಆಧಾರದ ಮೇಲೆ ವಾದಿಸುತ್ತಾರೆ. 1947 ರಲ್ಲಿ ರಚಿಸಿದ ‘ಎಡೆಗಳು ಹೇಳುವ ಕನ್ನಾಡ ಕಥೆ’ ಯನ್ನು ಪರಿಚಯಿಸುವಾಗ ಅವರು ಹೇಳಿಕೊಳ್ಳುವಂತೆ, ಕರ್ನಾಟಕದ ಅರಸುಮನೆತನಗಳ ಇತಿಹಾಸ ಲೇಖನ ನಡೆದಿದೆ, ಆದರೆ ಜನರ ಕಥೆ ಆಗಿಲ್ಲ, ವಿಸ್ತಾರದ ಕುರಿತು ಆಗಿಲ್ಲ, ಹಾಗಾಗಿ ಈ ಕೃತಿಯನ್ನು ರಚಿಸಲಾಗಿದೆ. ಬಹುಶಃ ಏಕೀಕೃತ ಕರ್ನಾಟಕಕ್ಕಾಗಿ ಹೋರಾಟ ನಡೆದ ಕಾಲದಲ್ಲಿ ಕರ್ನಾಟಕದ ಪ್ರಾಚೀನ ಮೇರೆಗಳನ್ನು ನಿರ್ಧರಿಸುವ ಕೆಲಸ ಮಹತ್ವಪೂರ್ಣವಾಗಿ ಕೂಡ ಕಾಣಿಸಿರಬಹುದು.

ಶಂಬಾ ಜೋಶಿಯವರು ಕರ್ನಾಟಕದ ಇತಿಹಾಸವನ್ನು ರಾಜಮನೆತನಗಳಿಂದಾಚೆಗೆ ವಿಸ್ತರಿಸುವ ಪ್ರಯತ್ನದಲ್ಲಿ ಮಾನವಶಾಸ್ತ್ರ, ಶಬ್ದಮೂಲಶಾಸ್ತ್ರ, ಪ್ರಾಕ್ತನಶಾಸ್ತ್ರ, ಮೌಖಿಕ ಸಂಪ್ರದಾಯಗಳು ಇತ್ಯಾದಿಯಾಗಿ ಬೇರೆಬೇರೆ ಶಾಸ್ತ್ರಗಳನ್ನು ಮಾಹಿತಿಗಾಗಿ ಆಧರಿಸಿದ್ದುದು ಗಮನಾರ್ಹ, ಹಾಗೂ ಆ ಕಾಲದಲ್ಲೇ ರಾಜಮನೆತನಗಳ ಜೊತೆಗೇ ಜನರ ಕಥೆಯನ್ನೂ ತಿಳಿಸುವುದು ಇತಿಹಾಸ ಲೇಖನದ ಗುರಿಯೆಂದು ಭಾವಿಸಿದ್ದು ಕೂಡ ಕುತೂಹಲಕಾರಿಯಾಗಿದೆ. ಹಾಗೂ ಅನೇಕ ಕಡೆಗಳಲ್ಲಿ ಜೋಶಿಯವರು ನಂತರ ಪ್ರಗತಿಶೀಲ ಎಂದು ಭಾವಿಸಲ್ಪಟ್ಟ ನಿಲುವುಗಳನ್ನು ತಳೆದು ಸಂಶೋಧನೆ ನಡೆಸಿದ್ದು ಕೂಡ ಕಂಡುಬರುತ್ತದೆ. ಹಾಗೂ ಇಂಥ ಪ್ರಗತಿಶೀಲ ವಿಚಾರಗಳನ್ನು ಇಡುವಾಗ ಅವರು ಜನಾಂಗಗಳ ಇತಿಹಾಸವನ್ನು ಸ್ಥೂಲವಾಗಿ ಆರ್ಯ-ದ್ರಾವಿಡ ಚೌಕಟ್ಟನ್ನು ಒಪ್ಪಿಕೊಂಡು ಅರ್ಥೈಸುತ್ತಾರೆ. ಹಾಗೂ ಆ ಕಾಲದ ಸಾಂಸ್ಕೃತಿಕ ಇತಿಹಾಸದಲ್ಲಿ ಪ್ರಚಲಿತದಲ್ಲಿದ್ದ ವಿಚಾರಗಳನ್ನೇ ಆಧರಿಸಿ ತಮ್ಮ ನಿರೂಪಣೆಗಳನ್ನು ಸಾಧಿಸುತ್ತಾರೆ.

ಜೋಶಿಯವರು ಕನ್ನಡದ ಇತಿಹಾಸವೊಂದರ ವಿಭಿನ್ನ ಯುಗಗಳನ್ನು ಗುರುತಿಸಿ ಕಟ್ಟಲು ಪ್ರಯತ್ನಿಸುತ್ತಾರೆ. ಹಾಗಾಗಿ ‘ಕಣ್ಮರೆಯಾದ ಕನ್ನಡ’ ದಲ್ಲಿ ರಾಜಮನೆತನಗಳನ್ನು ಭಾಷೆಗೆ ತಳಕುಹಾಕಿ ಕನ್ನಡದ ಐತಿಹಾಸಿಕ ಏಳುಬೀಳುಗಳನ್ನು ಗುರುತಿಸಿದ್ದು ಕಂಡುಬರುತ್ತದೆ. ಈ ಏಳುಬೀಳಿನ ಇತಿಹಾಸವನ್ನು ಗುರುತಿಸುವಾಗ ಅವರಿಗೆ ಯಾದವರ ಕಾಲದಲ್ಲಿ ಅದಕ್ಕೆ ಕುತ್ತುಂಟಾಗಿ, ವಿಜಯನಗರ ಕಾಲದಲ್ಲಿ ಏಳ್ಗೆಯಾಗಿದ್ದಂತೆ ಕಂಡುಬರುತ್ತದೆ. ನಂತರ ‘ಕನ್ನಡಿಗರ ಅಭಿಮಾನ ಜ್ಯೋತಿ ರಕ್ಕಸ ತಂಗಡಿ ಕಾಳಗದ ಬಿರುಗಾಳಿಗೆ ನಂದಿಹೋಯಿತು, 17 ನೇ ಶತಮಾನದಲ್ಲಿ ಮೈಸೂರು ಚಿಕ್ಕದೇವರಾಯನಲ್ಲಿ ಕಾಣಿಸಿಕೊಂಡಿತಾದರೂ, ಹೈದರ್-ಟಿಪ್ಪೂ ಕಾಲದಲ್ಲಿ ಆರಿ ಹೋಯಿತು’ ಎನ್ನುತ್ತಾರೆ. ಈ ರೀತಿ ವಿಜಯನಗರ ಕಾಲವು ಹಿಂದೂ ಅಭಿಮಾನವೊಂದೇ ಅಲ್ಲ, ಕನ್ನಡ ಅಭಿಮಾನದ ಸುವರ್ಣಕಾಲವಾಗಿಯೂ ಕ್ರಮೇಣ ಅವತರಿಸುತ್ತದೆ. ಮತ್ತೊಂದು ಗಮನಿಸಬಹುದಾದ ಸಂಗತಿಯೆಂದರೆ, ಕನ್ನಡಿಗರಂತೆ, ಅರಿಯರು, ತಮಿಳರು ಹಾಗೂ ತೆಲುಗರೂ ಕೂಡ ಜನಾಂಗಗಳಾಗಿ ಅವತರಿಸಿ, ಕನ್ನಡಿಗರಿಗೆ ಪ್ರತಿಸ್ಪರ್ಧಿಗಳಾಗುತ್ತಾರೆ.

4. ಆಲೂರರು ಮತ್ತು ಜೋಶಿಯವರ ಇತಿಹಾಸದ ಕುರಿತು ನೆನಪಿಡಬೇಕಾದ ಎರಡು ಮುಖ್ಯ ಅಂಶಗಳೆಂದರೆ: 1) ಅವರು ಒಂದು ಹೋರಾಟದ ಭಾಗವಾಗಿ, ವಿಧಾನವಾಗಿ ಕನ್ನಡತ್ವದ ಇತಿಹಾಸವನ್ನು ಕಟ್ಟಬಯಸಿದ್ದರು, 2) ಅವರು ಕರ್ನಾಟಕವು ಇನ್ನೂ ಭೌತಿಕ ವಾಸ್ತವವಾಗುವುದಕ್ಕೂ ಪೂರ್ವದಲ್ಲೇ ಬರೆಯುತ್ತಿದ್ದರು. ಹಾಗಾಗಿ ಇವನ್ನು ಹೋರಾಟಕ್ಕಾಗಿ ಕಟ್ಟಿಕೊಂಡ ಇತಿಹಾಸವೆಂದು ಗುರುತಿಸಬಹುದು. ಇಲ್ಲಿ ಇತಿಹಾಸ ಕಟ್ಟುವ ಕಾಯಕಕ್ಕಾಗಿಯೇ ಇತಿಹಾಸ ಕಟ್ಟುತ್ತಿಲ್ಲ. ಹಾಗಾಗಿ ಈ ಇತಿಹಾಸದ ಪ್ರಾಯೋಗಿಕತೆಯೇ ಅವರ ಇತಿಹಾಸದ ವಸ್ತುಗಳನ್ನು ಮತ್ತು ವಾದಗಳನ್ನು ನಿರ್ಧರಿಸಿದೆ. ಆ ಪ್ರಾಯೋಗಿಕತೆಗೆ ಪ್ರಸ್ತುತವಲ್ಲದ ಅಂಶಗಳು ಮತ್ತು ಪ್ರತಿಪಾದನೆಗಳು ಅವರ ಗಮನ ಸೆಳೆಯುವುದಿಲ್ಲ. ಹಾಗಾಗಿ ವೃತ್ತಿಪರ ಇತಿಹಾಸಕಾರರು ಬರೆದ ಇತಿಹಾಸಗಳಿಗೂ ಇವುಗಳಿಗೂ ಕಣ್ಣಿಗೆ ರಾಚುವಷ್ಟು ವ್ಯತ್ಯಾಸಗಳು ವಿಷಯ, ಹಾಗೂ ನಿರೂಪಣೆಯಲ್ಲಿ ಎದ್ದುಕಾಣುತ್ತವೆ.

ವೃತ್ತಿಪರ ಇತಿಹಾಸಗಳ ಸ್ವರೂಪ, ವಿಧಾನ, ಶೈಲಿ, ಹಾಗೂ ಉದ್ದೇಶಗಳನ್ನು ಗುರುತಿಸಿದರೆ ಹೇಗೆ ಅವುಗಳಿಗೆ ಈ ಹೋರಾಟಗಾರರ ಇತಿಹಾಸವನ್ನು ಅನುಕರಿಸುವುದಾಗಲೀ, ಆಧರಿಸುವುದಾಗಲೀ ಸಾಧ್ಯವಿರಲಿಲ್ಲ ಎಂಬುದು ತಿಳಿಯುತ್ತದೆ. ಹಾಗೂ ಈ ಎರಡು ಇತಿಹಾಸಗಳ ಮಧ್ಯೆ ಹೋರಾಟದ ಇತಿಹಾಸಗಳೇ ಈ ಕೆಲಸವನ್ನು ಮಾಡಬಲ್ಲವಾಗಿದ್ದವು. ಅದು ಸಹಜ ಕೂಡ, ಏಕೆಂದರೆ ಹೋರಾಟಗಾರರಿಗೆ ಇತಿಹಾಸ ಒಂದು ಬಳಕೆಯ ವಸ್ತುವಾದರೆ ಅದನ್ನು ಉತ್ಪಾದಿಸುವವರು ವೃತ್ತಿಪರ ಇತಿಹಾಸಕಾರರಾಗಿದ್ದಾರೆ. ಹಾಗಾಗಿ ಸ್ವಾಭಾವಿಕವಾಗಿ ಇವರ ಮಧ್ಯೆ ಬೆಳೆದುಬಂದ ಏಕಮುಖೀ ಸಂಬಂಧ ಅಥವಾ ಪೂರ್ವಾಗ್ರಹಗಳೇನಾದರೂ ಕೆಲಸಮಾಡಿರಬಹುದೆ? ಇಲ್ಲ ಇಂಗ್ಲೀಷ ಮತ್ತು ಕನ್ನಡ ಭಾಷೆಗಳ ಪೂರ್ವಾಗ್ರಹಪೀಡಿತ ಸಂಬಂಧಗಳೇನಾದರೂ ಕೆಲಸಮಾಡಿರಬಹುದೆ? ಆದರೆ ವೃತ್ತಿಪರರು ಈ ಕನ್ನಡತ್ವಕ್ಕೆ ತಟಸ್ಥರೇನೂ ಆಗಿರಲಿಲ್ಲ. ಅದು ಅವರ ನಿರ್ಣಯಗಳನ್ನು ಮತ್ತು ವಾದಗಳನ್ನು ಕೂಡ ಪ್ರಭಾವಿಸುವುದನ್ನು ಕಾಣಬಹುದು.

5. ಏಕೀಕರಣಕ್ಕೂ ಪೂರ್ವದಲ್ಲೇ 1955ರಲ್ಲಿ ರಂಗನಾಥ ದಿವಾಕರರ 60ನೇ ಹುಟ್ಟುಹಬ್ಬದ ಸ್ಮರಣಾರ್ಥ ಪ್ರಕಟಿಸಿದ Karnataka Darshana ದಲ್ಲಿ ಆರ್.ಎಸ್. ಪಂಚಮುಖಿಯವರಾದಿಯಾಗಿ ಕೆಲ ವೃತ್ತಿಪರ ಇತಿಹಾಸಕಾರರು ಕರ್ನಾಟಕದ ಇತಿಹಾಸದ ಕುರಿತು ಬರೆದದ್ದು ಕಂಡುಬರುತ್ತದೆ. ಅವುಗಳಲ್ಲಿ ಪಂಚಮುಖಿಯವರು History of Karnataka –A Birds Eye View ಎಂಬ 17 ಪುಟಗಳ ಒಂದು ಲೇಖನವನ್ನು ಬರೆದಿದ್ದಾರೆ. ಈ ಲೇಖನವು ಗಾತ್ರದಲ್ಲಿ ತೀರ ಚಿಕ್ಕದಾಗಿದ್ದರೂ ಕರ್ನಾಟಕ ಇತಿಹಾಸಕ್ಕೆ ಒಂದು ತಾತ್ವಿಕ ಚೌಕಟ್ಟನ್ನು ನೀಡಿ ಮುಂದಿನ ಕರ್ನಾಟಕ ಇತಿಹಾಸಗಳಿಗೆ ಮಾದರಿಯನ್ನು ನೀಡುತ್ತದೆ. ಇದರಲ್ಲಿ ಕನ್ನಡ ರಾಜಮನೆತನಗಳನ್ನು ಗುರುತಿಸಿ ಜೋಡಿಸಲಾಗಿದೆ. ಕದಂಬರನ್ನು ಮೊಟ್ಟಮೊದಲ ಕನ್ನಡ ಮನೆತನವೆಂದೂ, ಚಾಲುಕ್ಯರನ್ನು ಮೊಟ್ಟಮೊದಲ ಕನ್ನಡ ಸಾಮ್ರಾಜ್ಯವೆಂದೂ ಕರೆಯಲಾಗಿದೆ ಹಾಗೂ ವಿಜಯನಗರವನ್ನು ಹಿಂದೂ ಪ್ರಭುತ್ವದ ಪ್ರಾದುರ್ಭಾವ ಎನ್ನಲಾಗಿದೆ. ಈ ಲೇಖನದ ಕೊನೆಯ ಬಾಗದಲ್ಲಿ ಕರ್ನಾಟಕದ ಮಹತ್ವವನ್ನು ಈ ಮೂರು ಅಂಶಗಳಲ್ಲಿ ಗುರುತಿಸುತ್ತಾರೆ: ಅದೊಂದು ಅತ್ಯಂತ ಬಲಿಷ್ಠ ಶಕ್ತಿಯಾಗಿತ್ತು, ಕನ್ನಡ ಭಾಷೆಯನ್ನು ಗೋದಾವರಿಯಿಂದ ಕಾವೇರಿಯ ವರೆಗಿನ ಭೂಭಾಗದಲ್ಲಿ ಆಡುತ್ತಿದ್ದರು. ಕರ್ನಾಟಕದ ಹೊರಗೂ ಅದರ ಪ್ರಭಾವವು ಪಸರಿಸಿ ‘ಮಹಾನ್ ಕರ್ನಾಟಕ’ (greater Karnataka) ಅಸ್ತಿತ್ವದಲ್ಲಿತ್ತು. ಸ್ಥೂಲವಾಗಿ, ಆದರೆ ಮೂಲಭೂತವಾಗಿ ಈ ಚೌಕಟ್ಟು ರಾಷ್ಟ್ರೀಯವಾದೀ, ಹಾಗೂ ತನ್ಮೂಲಕ ವಸಾಹತುವಾದೀ ವ್ಶೆಜ್ಞಾನಿಕ ಇತಿಹಾಸದ ಬಳುವಳಿಯಾಗಿದೆ ಎಂಬುದನ್ನು ಎತ್ತಿ ಹೇಳಬೇಕಿಲ್ಲ.

ಕರ್ನಾಟಕದ ಏಕೀಕರಣವಾದ ಮೇಲೆ 1960 ರಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕದ ಇತಿಹಾಸವನ್ನು ಇಂಗ್ಲೀಷಿನಲ್ಲಿ Glimpses of Karnataka ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಿತು. ಇದನ್ನು ಸಂಪಾದಿಸಿದವರು ಎಂ. ವಿ. ಕೃಷ್ಣರಾವ್ ಹಾಗೂ ವೃತ್ತಿಪರ ಇತಿಹಾಸಕಾರರು ಇದಕ್ಕೆ ಬರವಣಿಗೆ ಮಾಡಿದ್ದರು. ಆದರೆ ಈ ಗ್ರಂಥವು ಕರ್ನಾಟಕ ಇತಿಹಾಸದ ಐಡಿಯಾಲಜಿಯ ಚೌಕಟ್ಟನ್ನು ನೀಡುವುದನ್ನು ಗಮನಿಸಬಹುದು. ಇದರಲ್ಲಿ ವಿಜಯನಗರ ಕಾಲವನ್ನು golden age of Karnataka ಎಂದೂ, ಅದರ ನಂತರದ ಕಾಲವನ್ನು disintegration of Karnataka Empire ಎಂದೂ ಕರೆದಿದ್ದಾರೆ. ಅದಕ್ಕಿಂತ ವಿಶೇಷವೆಂದರೆ ಈ ಗ್ರಂಥದ ಬಹುಭಾಗವನ್ನು ಕರ್ನಾಟಕದ ಕಲೆ, ಸಾಹಿತ್ಯ, ಆಡಳಿತ, ಧರ್ಮ, ಇತ್ಯಾದಿ ಸಾಂಸ್ಕೃತಿಕ ಇತಿಹಾಸಕ್ಕಾಗಿ ಮೀಸಲಾಗಿಡಲಾಗಿದೆ. 1968 ರಲ್ಲಿ ಕರ್ನಾಟಕ ಸರ್ಕಾರದಿಂದ ಪ್ರಕಟವಾದ Karnataka Through the Ages ಇನ್ನೂ ವಿಸ್ತ್ರತವಾಗಿ ಕರ್ನಾಟಕದ ಇತಿಹಾಸವನ್ನು ದಾಖಲಿಸುತ್ತದೆ. ಕರ್ನಾಟಕದ ಸಮಗ್ರ ಇತಿಹಾಸವನ್ನು ರಚಿಸುವಲ್ಲಿ ಮೊದಲು ಸರ್ಕಾರವೇ ಪ್ರವೃತ್ತವಾಗುವುದು ಆಸಕ್ತಿಪೂರ್ಣವಾಗಿದೆ. (ಮುಂದುವರೆಯುವುದು)

ಭಾಗ 1

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments