ವಿಷಯದ ವಿವರಗಳಿಗೆ ದಾಟಿರಿ

ಜುಲೈ 28, 2014

5

ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’-ಭಾಗ 1

‍ನಿಲುಮೆ ಮೂಲಕ

ಪ್ರೊ.ರಾಜಾರಾಮ್ ಹೆಗಡೆ, ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ.

Social Science Column Logo

ಕರ್ಣಾಟಕ ಶಬ್ದದ ವ್ಯುತ್ಪತ್ತಿ ಹಾಗೂ ಇತಿಹಾಸದ ಕುರಿತು ಏಕೀಕರಣ ಹೋರಾಟ ಕಾಲದಲ್ಲಿ ಶಂಬಾ ಜೋಶಿಯವರಾದಿಯಾಗಿ ಅನೇಕ ವಿದ್ವಾಂಸರು ಚರ್ಚಿಸಿದ್ದಾರೆ. ಈ ಶಬ್ದದ ಉಲ್ಲೇಖವನ್ನು ಬಹುಶಃ ಕ್ರಿಸ್ತಶಕದ ಆದಿಯಿಂದ ವಿಭಿನ್ನ ಸಂಸ್ಕೃತ ಗ್ರಂಥಗಳಲ್ಲಿ ಗುರುತಿಸಬಹುದು. ಕನ್ನಡ ಶಾಸನಗಳಲ್ಲಿ ಈ ಶಬ್ದವು ರಾಷ್ಟ್ರಕೂಟರ ಕಾಲದಿಂದ ಕಾಣಿಸಿಕೊಳ್ಳುವುದಾಗಿ ತಿಳಿದುಬರುತ್ತದೆ. ತದನಂತರ ಇಲ್ಲಿಯ ರಾಜರನ್ನು ಕರ್ಣಾಟ ರಾಜರೆಂದೂ, ಸೈನ್ಯವನ್ನು ಕರ್ಣಾಟ ಬಲವೆಂದೂ ಸಂಸ್ಕೃತದಲ್ಲಿ ಕರೆದರೆ, ಕನ್ನಡ ನುಡಿ, ಕನ್ನಡನಾಡು ಎಂಬುದಾಗಿ ಇಲ್ಲಿಯ ಜನರು ರಾಷ್ಟ್ರಕೂಟರ ಕಾಲದಿಂದಲೇ ಕನ್ನಡ ಸಾಹಿತ್ಯದಲ್ಲಿ ಈ ಶಬ್ದವನ್ನು ಬಳಸಿದ್ದಾರೆ. ತಮಿಳರು ಇವರನ್ನು ಕನ್ನಡಿ, ಕನ್ನಡಿ ಅರಸರ್ ಎಂದು ಕರೆದಿರುವುದೂ ಕಂಡುಬರುತ್ತದೆ. ಈ ಕುರಿತು ಇಲ್ಲಿ ನೀಡಿದ ವಿವರಗಳಿಗೆ ಇನ್ನಷ್ಟು ಈಚೆಗಿನ ಹಾಗೂ ಮುಂದಿನ ವಿವರಗಳು ಸೇರಿ ಈ ಶಬ್ದ ಇನ್ನೂ ಪ್ರಾಚೀನವೆಂದು ಸಿದ್ಧವಾಗಲೂಬಹುದು. ಅದರಿಂದ ಕರ್ನಾಟಕವೊಂದು ಭೂಪ್ರದೇಶ, ಹಾಗೂ ಅದರಲ್ಲಿ ಆಡುತ್ತಿದ್ದ ಭಾಷೆ ಕನ್ನಡ ಎಂಬ ಸತ್ಯಗಳಿಗೇನೂ ಕುಂದುಬರಲಾರದೆಂಬ ತರ್ಕದಿಂದ ಮುಂದುವರಿಯೋಣ.

ನಮಗೆ ಇಲ್ಲಿರುವ ಸಮಸ್ಯೆ ಎಂದರೆ ಈ ಶಬ್ದವನ್ನು ಇಂದಿನ ನಮ್ಮ ವ್ಶೆಜ್ಞಾನಿಕ ಇತಿಹಾಸದ ಪರಿಕಲ್ಪನೆಗೆ ನಾವು ಹೇಗೆ ಒಗ್ಗಿಸಿದ್ದೇವೆ ಹಾಗೂ ಅದು ಆ ಕಲ್ಪನೆಗೆ ಎಷ್ಟರಮಟ್ಟಿಗೆ ಒಗ್ಗುತ್ತದೆ ಎಂಬ ವಿಚಾರ. ಕರ್ನಾಟಕದ ಏಕೀಕರಣ ಕಾಲದಲ್ಲಿ ಕರ್ನಾಟಕದ ಇತಿಹಾಸವನ್ನು ವ್ಶೆಜ್ಞಾನಿಕವಾಗಿ ರಚಿಸಲಾಯಿತು. ಈ ರಚನೆಯಲ್ಲಿ ಇದ್ದ ಪೂರ್ವಗೃಹೀತಗಳೆಂದರೆ: 1) ಕನ್ನಡ ಭಾಷೆಯ ಮೂಲಕ ಒಂದು ಪ್ರದೇಶವನ್ನು ಕಲ್ಪಿಸಿಕೊಳ್ಳಲು ಸಾಧ್ಯ, ಅಂಥ ಪ್ರದೇಶವೇ ಕರ್ನಾಟಕವಾಗಿದೆ. ಕರ್ನಾಟಕ ಎಂಬುದು ಒಂದು ಪ್ರಕಾರದ ರಾಷ್ಟ್ರ ಕಲ್ಪನೆ ಹಾಗೂ ಅದು ಭಾರತ ಎಂಬ ರಾಷ್ಟ್ರದ ಅಂಗಭೂತವಾಗಿದೆ. 2) ಇದೊಂದು ಸಾಂಸ್ಕೃತಿಕ ಪ್ರಭೇದವಾಗಿದೆ ಹಾಗೂ ಇದು ಭಾಷೆಯನ್ನು ಆಧರಿಸಿದೆ, ಅಂದರೆ ಕನ್ನಡ ಬಾಷೆಯ ಮೂಲಕ ಕನ್ನಡ ಸಂಸ್ಸೃತಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯ. 3) ಈಗ ಈ ಎರಡೂ ಸಂಗತಿಗಳನ್ನು ನಾವು ಮರೆತಿರುವುದರಿಂದ ಅವನ್ನು ಕಲ್ಪಿಸಿಕೊಳ್ಳುವ ಅವಸ್ಥೆ ಬಂದಿದೆ. ಆದರೆ ಅವು ಸತ್ಯವಾಗಿದ್ದಲ್ಲಿ ಅವು ಇತಿಹಾಸದಲ್ಲಿ ಸಿಕ್ಕಲೇಬೇಕು. 4) ಈ ಸಂಸ್ಕೃತಿ ಈ ಕರ್ನಾಟಕವೆಂಬ ಪ್ರದೇಶದ ಇತಿಹಾಸದ ಮೂಲಕ ಮೈದಳೆದಿರುವುದರಿಂದ ಇದರ ಇತಿಹಾಸವನ್ನು ತಿಳಿದುಕೊಂಡರೆ ಈ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಸಾಧ್ಯ. 5) ಹಾಗಾಗಿ ಕರ್ನಾಟಕದ ಇತಿಹಾಸದ ಕುರಿತ ತಿಳುವಳಿಕೆಯಿಂದ ಅದರ ಸಂಸ್ಕೃತಿಯ ಕುರಿತ ಜಾಗೃತಿ ಮೂಡುತ್ತದೆ. 6) ಈ ಜಾಗೃತಿ ಏಕೆ ಬೇಕೆಂದರೆ: ಈ ಭಾಷೆ, ಪ್ರದೇಶ, ಸಂಸ್ಕೃತಿ ಹಾಗೂ ಇತಿಹಾಸದ ಆಧಾರದ ಮೇಲೆ ಒಂದು ಪ್ರಭುತ್ವವನ್ನು ರಚಿಸುವುದು ಸಾಧ್ಯ ಹಾಗೂ ಅಂಥ ಪ್ರಭುತ್ವವು ಈ ಭಾಷೆಯನ್ನಾಡುವ ಜನರ ಸರ್ವತೋಮುಖ ಏಳ್ಗೆಗೆ ಮಾರ್ಗವಾಗಲು ಸಾಧ್ಯ. ಈ ರೀತಿ ಇಲ್ಲಿಯ ಜನರ ಏಳ್ಗೆಗೂ ಇವರ ಇತಿಹಾಸಕ್ಕೂ ಅವಿನಾಭಾವಿ ಸಂಬಂಧ ಇದೆ ಎಂದು ನಂಬಿಕೊಂಡು ಕರ್ನಾಟಕದ ಇತಿಹಾಸದ ರಚನೆಯಾಯಿತು.

ಈ ರೀತಿ ಇದರ ಇತಿಹಾಸವು ಸತ್ಯ ಶೋಧನೆಯ ಮಾರ್ಗವಾಗಿತ್ತು ಹಾಗೂ ಅದಕ್ಕೊಂದು ವರ್ತಮಾನದ ಕಾರ್ಯಕ್ರಮ ಹಾಗೂ ಭವಿಷ್ಯದ ಉದ್ದೇಶವಿತ್ತು. ಇಂಥ ಕರ್ನಾಟಕದ ಇತಿಹಾಸವನ್ನು ಕಟ್ಟಿದ ವಿಭಿನ್ನ ಹಂತಗಳನ್ನು ಗುರುತಿಸುವ ಆಶಯದಿಂದ ಮುಂದಿನ ವಿವರಗಳನ್ನು ಸಾದರಪಡಿಸಲಾಗುವುದು. ಈ ವಿವರಗಳಿಂದ ಒಟ್ಟಾರೆಯಾಗಿ ಸಿಗುವ ಚಿತ್ರ ಈ ಕೆಳಗಿನಂತಿದೆ:
1)ಕರ್ನಾಟಕದ ಇತಿಹಾಸವು ಕನ್ನಡ ಏಕೀಕರಣ ಚಳುವಳಿಯಿಂದ ತನ್ನ ಮೂಲ ಪ್ರೇರಣೆಯನ್ನು ಪಡೆಯುತ್ತದೆ. ಕನ್ನಡ ಚಳುವಳಿಕಾರರು ಹಾಗೂ ಸಂಶೋಧಕರು ಕರ್ನಾಟಕದ ಇತಿಹಾಸಕ್ಕಾಗಿ ತಡಕಾಡುತ್ತ ಅದರ ರೂಪುರೇಷೆಗಳನ್ನು ಐತಿಹ್ಯಗಳು, ಸ್ಥಳನಾಮಗಳು ಇತ್ಯಾದಿಗಳಿಂದ ಅದನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ, ಕರ್ನಾಟಕದ ವೃತ್ತಿನಿರತ ಇತಿಹಾಸಕಾರರು ಅದಕ್ಕೊಂದು ವ್ಶೆಜ್ಞಾನಿಕ ರೂಪು ನೀಡಿದ್ದು ಏಕೀಕರಣದ ನಂತರವೇ.
2)ಕರ್ನಾಟಕದ ವ್ಶೆಜ್ಞಾನಿಕ ಇತಿಹಾಸದ ಅಸ್ತಿಭಾರವನ್ನು ಈ ರೀತಿ ಕನ್ನಡ ಸಂಶೋಧಕರು ಹಾಗೂ ಚಳುವಳಿಕಾರರೇ ಹಾಕಿದರೂ ಅವರು ಅದಕ್ಕೆ ಪ್ರೇರಣೆಯನ್ನು ಆಗ ಅಸ್ತಿತ್ವದಲ್ಲಿದ್ದ ರಾಷ್ಟ್ರೀಯ ಇತಿಹಾಸದಿಂದಲೇ ಪಡೆಯುತ್ತಾರೆ. ಹಾಗಾಗಿ ಆಧುನಿಕ ರಾಷ್ಟ್ರೀಯ ಇತಿಹಾಸದ ಹಾಗೂ ಐತಿಹಾಸಿಕ ಸನ್ನಿವೇಶಗಳ ಹಿನ್ನೆಲೆಯಲ್ಲೇ ಈ ಕನ್ನಡ ಇತಿಹಾಸದ ರೂಪುಗೊಂಡಿದೆ. ಈ ರಾಷ್ಟ್ರೀಯ ಇತಿಹಾಸವು ಕರ್ನಾಟಕದ ಇತಿಹಾಸಕ್ಕೆ ವಿಧಾನಗಳನ್ನು ಹಾಗೂ ನಿಬಂಧನೆಗಳನ್ನು ಸೃಷ್ಟಿಸಿದೆ.
3)ಭಾರತೀಯ ರಾಷ್ಟ್ರೀಯ ಇತಿಹಾಸವು ವಸಾಹತು ಕಾಲದ ವ್ಶೆಜ್ಞಾನಿಕ ಇತಿಹಾಸದ ನಿಬಂಧನೆಗಳಿಗೆ ಒಳಪಟ್ಟಿರುವುದರಿಂದ ಒಟ್ಟಾರೆಯಾಗಿ ವಸಾಹತು ಇತಿಹಾಸದ ನಿಬಂಧನೆಗಳಿಗೆ ಕರ್ನಾಟಕದ ಇತಿಹಾಸವೂ ಒಳಪಡುತ್ತದೆ.
4)ಈ ರೀತಿ ವಸಾಹತು ಮತ್ತು ರಾಷ್ಟ್ರಗಳ ಭಿತ್ತಿಯ ಮೇಲೇ ರೂಪುತಳೆದು, ಅವುಗಳ ಇತಿಹಾಸದ ನಿಬಂಧನೆಗಳಿಗೊಳಪಟ್ಟರೂ ಕನ್ನಡತ್ವದ ಇತಿಹಾಸಕ್ಕೆ ತನ್ನದೇ ಪರಿಕ್ರಮವನ್ನು ಸಾಧಿಸಬೇಕಾದ ಒಂದು ಸಂದಿಗ್ಧವೂ ಇದರಲ್ಲಿ ವ್ಯಕ್ತವಾಗಿದೆ. ಹಾಗಾಗಿ ಅದೊಂದು ಚಳುವಳಿಯಾಗಿ ವಸಾಹತು ಮತ್ತು ರಾಷ್ಟ್ರಗಳನ್ನು ಮಾತ್ರವಲ್ಲದೇ ವ್ಶೆಜ್ಞಾನಿಕ ಇತಿಹಾಸವನ್ನೂ ಮುಖಾಮುಖಿ ಮಾಡುತ್ತ ಬೆಳೆದುಬರುತ್ತದೆ. ಹಾಗಾಗಿ ಸಾಧ್ಯವಿರುವಲ್ಲೆಲ್ಲ ಸಂವಾದ ನಡೆದಿದ್ದರೂ, ವೃತ್ತಿನಿರತರ ಇತಿಹಾಸಕ್ಕೆ ಸಂಪೂರ್ಣವಾಗಿ ಚಳುವಳಿಗಳ ಅಗತ್ಯವನ್ನು ಪೂರೈಸುವುದು ಸಾಧ್ಯವಾಗಿಲ್ಲ ಎಂಬುದೂ ಕಂಡುಬರುತ್ತದೆ.

ಈ ಹಿನ್ನೆಲೆಯಲ್ಲಿ ಮುಂದಿನ ವಿವರಗಳನ್ನು ಜೋಡಿಸಲಾಗುವುದಾದರೂ, ಕಡ್ಡಾಯವಾಗಿ ಈ ಮೇಲಿನ ಕ್ರಮದಲ್ಲೇ ವಿಚಾರಗಳನ್ನು ಇಡುವುದು ತೊಡಕಿನದಾದ್ದರಿಂದ ಅದನ್ನು ಮೇಲೆ ಪ್ರತ್ಯೇಕವಾಗಿ ಸೂಚಿಸಲಾಗಿದೆ.

1. ಏಕೀಕರಣ ಚಳುವಳಿಯ ಮೂಲಕವೇ ಕನ್ನಡ ರಾಷ್ಟ್ರೀಯತೆಯ ವ್ಶೆಜ್ಞಾನಿಕ ಇತಿಹಾಸ ಲೇಖನ ಹುಟ್ಟಿದೆ ಎಂಬುದು ನನ್ನ ಪ್ರತಿಪಾದನೆಯಾಗಿದೆ. ಭಾರತದಲ್ಲಿ 18ನೇ ಶತಮಾನದ ಅಂತ್ಯಭಾಗದಿಂದಲೇ ವ್ಶೆಜ್ಞಾನಿಕ ಇತಿಹಾಸದ ಬರವಣಿಗೆ ಪ್ರಾರಂಭವಾಯಿತು. ಮೊದಲು ಅದು ವಸಾಹತುಕಾರರ ಇತಿಹಾಸವಾಗಿ ನಂತರ ಭಾರತ ದೇಶದ ಇತಿಹಾಸವಾಗಿ ಪರಿವರ್ತನೆಯಾಗಿದ್ದರೂ ಕರ್ನಾಟಕದ ಇತಿಹಾಸ ಎಂಬುದು ವೃತ್ತಿಪರರ ಅಗತ್ಯವಾದುದು ಪ್ರತ್ಯೇಕ ಕರ್ನಾಟಕ ರಾಜ್ಯದ ಉಗಮವಾದ ಮೇಲೇ. ಅದೂ ಕೂಡ, ಭಾರತದಲ್ಲಿ ದಕ್ಷಿಣ ಭಾರತ, ಡೆಕ್ಕನ್ ಎಂಬೆಲ್ಲ ಉಪಪ್ರದೇಶಗಳ ಇತಿಹಾಸಗಳನ್ನು ಕುರಿತು ಕಲ್ಪಿಸಿದ ನಂತರವೇ. ಇದೆಲ್ಲ ಆಗಿದ್ದು 20 ನೇ ಶತಮಾನದ ಏಳನೇ ದಶಕದಲ್ಲಿ. ಕನ್ನಡ ಚಳುವಳಿ ರೂಪುತಳೆದಿದ್ದು 20 ನೇ ಶತಮಾನದ ಎರಡನೆಯ ದಶಕದಲ್ಲಿ. ಈ ಕನ್ನಡ ಚಳುವಳಿಗೆ ತನ್ನ ಪ್ರೇರಣೆಯಾಗಿ ಇದ್ದುದು ಅದುವರೆಗೆ ಬಂದ ವಸಾಹತು ಮತ್ತು ರಾಷ್ಟ್ರೀಯ ಇತಿಹಾಸಗಳೇ, ಆದರೆ ಅವುಗಳಲ್ಲಿ ಕನ್ನಡ ರಾಷ್ಟ್ರ ಪ್ರಸ್ತುತತೆ ಪಡೆದಿರಲಿಲ್ಲ. ಹಾಗಾಗಿ ಈ ಇತಿಹಾಸಗಳಲ್ಲಿ ಕನ್ನಡ ರಾಷ್ಟ್ರೀಯ ಇತಿಹಾಸಕ್ಕೆ ಅವಕಾಶವಿರಲಿಲ್ಲ. ಆದರೆ ಈ ಭಾರತೀಯ ರಾಷ್ಟ್ರೀಯ ಇತಿಹಾಸ ಮತ್ತು ಐತಿಹಾಸಿಕ ಸನ್ನಿವೇಶಗಳು ಇಲ್ಲದಿರುತ್ತಿದ್ದರೆ ಕನ್ನಡ ಏಕೀಕರಣ ಇತಿಹಾಸಕ್ಕೂ ಯಾವ ಅರ್ಥವೂ ಇರಲಿಲ್ಲ ಎಂಬುದು ರಾಜಾವಳೀ ಕಥಾಸಾರದಿಂದ ನಿದರ್ಶಿತವಾಗುತ್ತದೆ. ರಾಜಾವಳೀ ಕಥಾಸಾರವನ್ನು 19 ನೇ ಶತಮಾನದ ಮೂರನೆಯ ದಶಕದಲ್ಲಿ ರಚಿಸಲಾಯಿತು. ಇದರ ಕರ್ತೃ ದೇವಚಂದ್ರನು ಕರ್ನಲ್ ಮೆಕೆಂಝಿಯ ಕೋರಿಕೆಯ ಮೇರೆಗೆ ಕರ್ನಾಟಕದ ಇತಿಹಾಸವನ್ನು ಈ ರೂಪದಲ್ಲಿ ಬರೆದನು. ಆದರೆ ಅದಕ್ಕೆ ರಾಷ್ಟ್ರೀಯ ಚೌಕಟ್ಟಿರಲಿಲ್ಲ, ಹಾಗೂ ವ್ಶೆಜ್ಞಾನಿಕ ಸ್ವರೂಪವೂ ಇರಲಿಲ್ಲ, ಕನ್ನಡ ಭಾಷೆಯ, ಸಂಸ್ಕೃತಿಯ ಕಾರ್ಯಕ್ರಮವೂ ಇರಲಿಲ್ಲ. ಹಾಗಾಗಿ ಆಧುನಿಕ ಕಾಲದಲ್ಲಿ ದೇಶೀಯನೇ ಬರೆದ ಒಂದು ಮೊತ್ತಮೊದಲ ಕರ್ನಾಟಕದ ಇತಿಹಾಸ ಎಂದು ಅದನ್ನು ನಾವು ಪರಿಗಣಿಸುವುದಿಲ್ಲ. ಅದು ಜೈನಮತೀಯ ಇತಿಹಾಸವೆಂಬಂತೆ ತೋರುತ್ತದೆ.

ವ್ಶೆಜ್ಞಾನಿಕ ಇತಿಹಾಸವು 20 ನೇ ಶತಮಾನದ ವೇಳೆಗಾಗಲೇ ಭಾರತದ ರಾಷ್ಟ್ರೀಯ ಪರಂಪರೆಯ ರೂಪುರೇಷೆಗಳನ್ನು ನೀಡಿತ್ತು. ಭಾರತದ ಪ್ರತೀ ಪ್ರದೇಶ ಮತ್ತು ಸಂಪ್ರದಾಯದ ಕುರಿತೂ ಐತಿಹಾಸಿಕ ವಿವರಗಳು ಸಂಗ್ರಹವಾಗಿರಲಿಲ್ಲ. ಆದರೆ ಅಲ್ಪ ಸ್ವಲ್ಪ ವಿವರಗಳು ಸಿಕ್ಕಿದ್ದವು. ಆದರೆ ಕನ್ನಡ ರಾಷ್ಟ್ರೀಯತೆಗೆ ನಿರ್ಣಾಯಕವಾದುದೆಂದರೆ ವಿವರಗಳಲ್ಲ, ರಾಷ್ಟ್ರ ಕಲ್ಪನೆಯ ತಾತ್ವಿಕತೆ ಮತ್ತು ಅದರ ನಿರ್ವಚನ. ಇವುಗಳನ್ನು ಕನ್ನಡದ ಸಂದರ್ಭದಲ್ಲಿ ಅರ್ಥಪೂರ್ಣವಾಗಿ ನಿರೂಪಿಸುವುದು ಅವರ ಕೆಲಸವಾಯಿತು.

2. ಕರ್ನಾಟಕ ಏಕೀಕರಣ ಚಳುವಳಿಯನ್ನು ಹುಟ್ಟುಹಾಕಿದವರಲ್ಲೊಬ್ಬರಾದ ಆಲೂರು ವೆಂಕಟರಾಯರು 1909 ರಿಂದ 1957 ರ ವರೆಗೆ ಅನೇಕ ಗ್ರಂಥಗಳನ್ನು ರಚಿಸಿ ಕರ್ನಾಟಕತ್ವದ ಪರಿಕಲ್ಪನೆಯನ್ನು ಪ್ರಚಲಿತದಲ್ಲಿ ತಂದರು. ಆವರು ಭಾರತೀಯ ರಾಷ್ಟ್ರೀಯ ಹೋರಾಟದಲ್ಲೂ ಸಕ್ರಿಯವಾಗಿ ಭಾಗವಹಿಸಿ ಸಾಕಷ್ಟು ಪ್ರಕಟಣೆಗಳನ್ನೂ ಮಾಡಿದ್ದರು. ಕರ್ನಾಟಕತ್ವವು ಕರ್ನಾಟಕ ರಾಷ್ಟ್ರೀಯತೆಗೆ ಮತ್ತೊಂದು ಹೆಸರು. ಇದೊಂದು ದೇಶಾಭಿಮಾನ ಮತ್ತು ಭಾಷಾಭಿಮಾನಕ್ಕೂ ಮೀರಿದ ಶುದ್ಧ ಆಧ್ಯಾತ್ಮಿಕ ಭಾವನೆ ಎಂಬುದಾಗಿ ಅವರು ಹೇಳುತ್ತಾರೆ. ಈ ಭಾವನೆ ಇತಿಹಾಸದ ಅರಿವಿನಿಂದ ಪ್ರಚೋದಿತವಾಗುತ್ತದೆ. ಈ ಮೂಲಕ ಸಾಂಸ್ಕೃತಿಕವಾಗಿ ಐಕ್ಯತೆಯನ್ನು ಪಡೆದ ಜನರು ರಾಜಕೀಯವಾಗಿ ಒಂದಾಗುತ್ತಾರೆ. ಹೀಗೆ ರಾಜಕೀಯ ರಾಷ್ಟ್ರಕ್ಕೆ ಪೂರ್ವಭಾವಿಯಾಗಿ ಒಂದು ಸಾಂಸ್ಕೃತಿಕ ರಾಷ್ಟ್ರ ಇರಬೇಕಾಗುತ್ತದೆ. ಈ ಸಾಂಸ್ಕೃತಿಕ ರಾಷ್ಟ್ರದ ರೂಪುರೇಷೆ ಆ ರಾಷ್ಟ್ರದ ರಾಜಕೀಯ, ಧರ್ಮ, ವಾಙ್ಮಯ, ಇತಿಹಾಸ, ಕಲೆ ಮುಂತಾದ ಎಲ್ಲ ಅಂಶಗಳಲ್ಲೂ ಅಭಿವ್ಯಕ್ತಿ ಪಡೆಯುತ್ತದೆ. ಭಾರತೀಯ ರಾಷ್ಟ್ರವು ಹಿಂದೂ ಧರ್ಮದ ತಳಹದಿಯ ಮೇಲೆ ನಿಂತರೆ, ಕರ್ನಾಟಕತ್ವವು ಕನ್ನಡದ ತಳಹದಿಯ ಮೇಲೆ ನಿಂತಿದೆ. ಕರ್ನಾಟಕತ್ವವು ಹಿಂದೂ ಧರ್ಮದ ಒಂದು ಅಭಿವ್ಯಕ್ತಿಯಾಗಿರುವ್ಯದರಿಂದ ಅವೆರಡರಲ್ಲಿ ಸಂಘರ್ಷವಿಲ್ಲ, ಬದಲಾಗಿ ಒಂದನ್ನೊಂದು ಒಳಗೊಳ್ಳುತ್ತವೆ. ಈ ರೀತಿ ಕನ್ನಡ ರಾಷ್ಟ್ರೀಯ ಇತಿಹಾಸದ ತಾತ್ವಿಕ ತಳಹದಿ ಹಾಗೂ ರೂಪ ವಿನ್ಯಾಸಗಳು ರಾಷ್ಟ್ರೀಯ ಇತಿಹಾಸದ ಮಾದರಿಯಲ್ಲಿ, ಅದರ ಒಂದು ಅಂಗವಾಗಿ ನಿರ್ಮಾಣವಾಗುತ್ತವೆ. ಕನ್ನಡ ರಾಷ್ಟ್ರೀಯತೆಯ ಇತಿಹಾಸದಲ್ಲಿ ಇಲ್ಲಿನ ಜನರ ಗುಣಗಳು ಹೇಗಿರಬೇಕೆಂಬುದೂ ಭಾರತೀಯ ರಾಷ್ಟ್ರೀಯತೆಯ ಪರಿಕಲ್ಪನೆಯಿಂದಲೇ ನಿರ್ಧಾರಿತವಾಗುತ್ತದೆ. ಈ ಜನರು ಧರ್ಮ ಸಹಿಷ್ಣುಗಳಾಗಿರಬೇಕು, ವೀರರಾಗಿರಬೇಕು, ಧರ್ಮಭೀರುಗಳು, ಉದಾತ್ತ ಚರಿತರು, ಇತ್ಯಾದಿ. ಈ ಮೌಲ್ಯಗಳೆಲ್ಲ ಹಿಂದೂ ಧರ್ಮದ ಮೌಲ್ಯಗಳೇ ಆಗಿರುವುದರಿಂದ ಕನ್ನಡಿಗರು ಭಾರತೀಯ ರಾಷ್ಟ್ರೀಯತೆಯನ್ನು ಅರಿಯದಿದ್ದರೆ ಕರ್ನಾಟಕತ್ವ ಅರಿವಾಗದು. ತಮ್ಮದನ್ನು ಪ್ರಾದೇಶಿಕ ರಾಷ್ಟ್ರೀಯತ್ವ ಎಂದೂ ಆಲೂರರು ಕರೆಯುತ್ತಾರೆ.

ಹಾಗಾದರೆ ಕನ್ನಡ ರಾಷ್ಟ್ರೀಯತೆಯ ಪ್ರತ್ಯೇಕ ಅವಕಾಶಗಳು ಎಲ್ಲೆಲ್ಲಿ ಇವೆ? ಪರಕೀಯ ಧಾಳಿಗಳನ್ನು ತಡೆಯುವುದರಲ್ಲಿ, ಪರಭಾಷೆಗಳ ಆಕ್ರಮಣವನ್ನು ಹಿಮ್ಮೆಟ್ಟಿಸುವುದರಲ್ಲಿ, ತಮ್ಮ ಗಡಿಯನ್ನು ವಿಸ್ತರಿಸುವುದರಲ್ಲಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ತಮ್ಮದೇ ವೈಶೆಷ್ಟ್ಯತೆಗಳನ್ನು ಮೆರೆದ ವ್ಯಕ್ತಿಗಳು ಮತ್ತು ಸಂಪ್ರದಾಯಗಳ ಹೆಚ್ಚುಗಾರಿಕೆಯನ್ನು ದಾಖಲಿಸುವುದರಲ್ಲಿ. ಆಲೂರರ ಕರ್ನಾಟಕ ಗತವೈಭವ, ಕರ್ನಾಟಕ ವೀರರತ್ನಗಳು, ವಿದ್ಯಾರಣ್ಯ ಚರಿತೆ, ಕರ್ನಾಟಕತ್ವದ ವಿಕಾಸ ಮುಂತಾದ ರಚನೆಗಳು ಈ ರೀತಿ ಕನ್ನಡ ರಾಷ್ಟ್ರೀಯ ಇತಿಹಾಸಕ್ಕೆ ವ್ಯಾಕರಣವನ್ನು ರಚಿಸಿಕೊಡುತ್ತವೆ. ಕೇವಲ ಗ್ರಂಥ ರಚನೆಯೊಂದೇ ಅಲ್ಲದೆ, ಇತಿಹಾಸ ಸಂಶೋಧನಾ ಮಂಡಲವನ್ನು ಸ್ಥಾಪಿಸಿ, ಸಮ್ಮೇಳನಗಳನ್ನು ನಡೆಸಿ ಕೂಡ ಆಲೂರರು ಕನ್ನಡ ಇತಿಹಾಸವನ್ನು ಗಟ್ಟಿಗೊಳಿಸಿದರು. ಆಲೂರರಿಗೆ ಒಂದು ಸಿದ್ಧ ಮಾದರಿಯ ಕನ್ನಡ ಇತಿಹಾಸ ಇರಲಿಲ್ಲ. ಭಾರತೀಯತೆಯ ಇತಿಹಾಸವನ್ನೇ ಅವರು ಮಾದರಿಯಾಗಿಟ್ಟುಕೊಂಡು ಸಂಶೋಧನೆಗಳನ್ನು ನಡೆಸಿದರು ಹಾಗೂ ವೃತ್ತಿಪರ ಇತಿಹಾಸಕಾರರ ನಿರ್ಲಿಪ್ತ ಶೈಲಿ, ನಿಷ್ಠುರತೆ, ಹಾಗೂ ಸಾರ್ವತ್ರಿಕವಾಗಿ ಅನ್ವಯವಾಗಬಲ್ಲ ಆಕಾರ ಇವು ಆಲೂರರಿಗೆ ಪ್ರಯೋಜನವಿರಲಿಲ್ಲ, ಇವರು ವ್ಯಕ್ತಿಗಳನ್ನು ಅತಿಮಾನುಷ ಮಟ್ಟಕ್ಕೆ ಏರಿಸಿ, ಕಲ್ಪನೆಯನ್ನ ಧಾರಾಳವಾಗಿ ಹರಿಬಿಟ್ಟು ಕನ್ನಡಿಗರನ್ನು ವೈಭವೀಕರಿಸಿ, ಭಾವನೆಯನ್ನು ಪ್ರಚೋದಿಸುವ ಉದ್ದೇಶವನ್ನಿಟ್ಟುಕೊಂಡು ಬರೆದರು. ಹಾಗಾಗಿ ಅವರಿಗೆ ಅಂದು ಸತ್ಯಾಂಶಗಳ ಕೊರತೆ ಇತ್ತು ಎಂಬುದಕ್ಕಿಂತ ಇದ್ದ ಸತ್ಯಾಂಶಗಳನ್ನೇ ಅವುಗಳ ನಿರ್ಲಿಪ್ತತೆಯನ್ನು ಆದಷ್ಟೂ ತೊಡೆದು ಉಪಯೋಗಿಸಬೇಕಿತ್ತು.

(ಮುಂದುವರೆಯುವುದು…)

5 ಟಿಪ್ಪಣಿಗಳು Post a comment
  1. Maaysa
    ಜುಲೈ 30 2014

    [ಕರ್ನಾಟಕ ಎಂಬುದು ಒಂದು ಪ್ರಕಾರದ ರಾಷ್ಟ್ರ ಕಲ್ಪನೆ ಹಾಗೂ ಅದು ಭಾರತ ಎಂಬ ರಾಷ್ಟ್ರದ ಅಂಗಭೂತವಾಗಿದೆ.]

    ಸಮಸ್ಯೆ!!
    ಕರ್ನಾಟಕ ಒಂದು ನಾಡು/ರಾಷ್ಟ್ರ. ಇಂದಿನ ‘ಭಾರತ’ ಒಂದು ರಾಜಕೀಯ ಒಕ್ಕೂಟ.

    ನೀವು ರಾಷ್ಟ್ರ ಶಬ್ದದ ವ್ಯಾಖ್ಯಾನ ತಿಳಿಸಬೇಕು.. ಇಲ್ಲಿ ನೀವು ಯಾವ ಅರ್ಥದಲ್ಲಿ ರಾಷ್ಟೃ ಶಬ್ದವನ್ನು ಬಳಸುತ್ತಿದ್ದೀರಿ?

    rastra [ râsh-trá ] n. [&root;râg] kingdom, realm, dominions; territory, country; nation, peo ple, subjects.
    http://dsalsrv02.uchicago.edu/cgi-bin/romadict.pl?page=135&table=macdonell&display=simple

    ಭಾರತದ ಸಂವಿಧಾನ – ಇಂಡಿಯ ಒಂದು ನಾಡು/ರಾಷ್ಟ್ರ/ರಾಜ್ಯಗಳ ಒಕ್ಕೂಟ/ಸಂಯುಕ್ತ ವೆಂದೇ ಹೇಳೋದು.

    Click to access Const.Pock%202Pg.Rom8Fsss(4).pdf

    PART I
    THE UNION AND ITS TERRITORY
    1. Name and territory of the Union.—(1) India, that is Bharat, shall be
    a Union of States.

    ಕರ್ನಾಟಕ ಎಂಬುದು ಒಂದು ಪ್ರಕಾರದ ರಾಷ್ಟ್ರ ಕಲ್ಪನೆ ಹಾಗೂ ಅದು ಭಾರತ ಎಂಬ ಒಕ್ಕೂಟ/ಸಂಯುಕ್ತದ ಅಂಗಭೂತವಾಗಿದೆ.

    ಉತ್ತರ

Trackbacks & Pingbacks

  1. ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’-ಭಾಗ 2 | ನಿಲುಮೆ
  2. ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’-ಭಾಗ 3 | ನಿಲುಮೆ
  3. ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’-ಭಾಗ 2 | ನಿಲುಮೆ
  4. ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’-ಭಾಗ 2 – ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments