ವಿಷಯದ ವಿವರಗಳಿಗೆ ದಾಟಿರಿ

Recent Articles

4
ಆಗಸ್ಟ್

ಕೊಳವೆಬಾವಿ ಅವಾಂತರ-ಕೊನೆ ಹೇಗೆ?

 – ಡಾ. ಶ್ರೀಪಾದ ಭಟ್,ಸಹಾಯಕ ಪ್ರಾಧ್ಯಾಪಕ

ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ಕರ್ನಾಟಕ

borewellಸೂರಜ್ (ಉತ್ತರ ಭಾರತ), ಪ್ರಿನ್ಸ್ (ಕುರುಕ್ಷೇತ್ರ), ವಂದನಾ (ಉತ್ತರ ಪ್ರದೇಶ), ಆರತಿ ಚಾವ್ಡಾ (ಭಾವನಗರ್), ನವನಾಥ್ (ಗುಲ್ಬರ್ಗಾ), ಕರಿಯ (ದಾವಣಗೆರೆ), ಕಾರ್ತಿಕ್ (ಆಂಧ್ರ), ತಿಮ್ಮ (ಚಿತ್ರದುರ್ಗ), ಸಂಧ್ಯಾ (ಬಳ್ಳಾರಿ), ಸಂದೀಪ್ (ರಾಯಚೂರು), ಸೋನು (ಆಂಧ್ರ), ಏಗವ್ವ (ಬಿಜಾಪುರ) –ಇವರೆಲ್ಲ ಎರಡರಿಂದ ಹತ್ತು ವರ್ಷದ ಮಕ್ಕಳು. ಹೀಗೆ ಹೆಸರನ್ನು ಹೇಳುತ್ತ ಹೋದರೆ ಪ್ರಾಥಮಿಕ ಶಾಲೆಯೊಂದರ ಹಾಜರಿ ಪಟ್ಟಿಯಂತೆ ಕಾಣುತ್ತದೆ. ಇವರು 2001ರಿಂದ ಈಚೆಗೆ ದೇಶಾದ್ಯಂತ ಕೊಳವೆ ಬಾವಿಯ ಕಗ್ಗತ್ತಲ ನರಕ ಕಂಡವರು.

ಇವರಲ್ಲಿ ಪ್ರಿನ್ಸ್, ವಂದನಾ ಮತ್ತು ಸಂಧ್ಯಾ ಎಂಬ ಮೂವರು ಮಕ್ಕಳು ಮಾತ್ರ ಬದುಕಿ ಬಂದು ಹೊಸ ಜೀವನ ಕಂಡಿದ್ದಾರೆ. ತೆರೆದ ಕೊಳವೆ ಬಾವಿಗೆ ಮಕ್ಕಳು ಆಗಾಗ ಬೀಳುತ್ತಲೇ ಇರುತ್ತಾರೆ. ಇದೀಗ ಈ ಪಟ್ಟಿಗೆ ಸೇರಿದ ಹೊಸ ಹೆಸರುಗಳು ನಾಲ್ಕು ವರ್ಷದ ಪೋರಿ ವಿಜಾಪುರದ ನಾಗಠಾಣಾದ ಅಕ್ಷತಾ ಹಾಗೂ ಇದೀಗ ಕೊಳವೆಬಾವಿಯಲ್ಲಿ ಬಿದ್ದು ಹೋರಾಟ ಮಾಡುತ್ತಿರುವ ಬಾಗಲಕೋಟೆಯ ಆರು ವರ್ಷದ ಬಾಲಕ ತಿಮ್ಮಣ್ಣ.

ನೀರಿನ ಲಭ್ಯತೆ ಹೆಚ್ಚಿಸಿಕೊಳ್ಳಲು ಹೆಚ್ಚು ಹೆಚ್ಚು ಆಳದ ಕೊಳವೆ ಬಾವಿ ತೆಗೆದಂತೆಲ್ಲ ಸುತ್ತಲಿನ ತೋಡು ಬಾವಿಗಳ ನೀರು ಕೂಡ ಇಂಗಿ ಹೋಗುತ್ತದೆ. ಆಗ ಅನಿವಾರ್ಯವಾಗಿ ತೋಡು ಬಾವಿ ಉಳ್ಳವರೂ ಕೊಳವೆ ಬಾವಿ ತೆಗೆಸುತ್ತಾರೆ. ವಿಶ್ವಬ್ಯಾಂಕ್ ಭಾರತದ ಅಂತರ್ಜಲದ ಬಗ್ಗೆ ವರದಿಯೊಂದನ್ನು ನೀಡಿ ಅಂತರ್ಜಲ ಬಳಕೆ ಪ್ರಮಾಣ ಹೀಗೇ ಇದ್ದರೆ ಇನ್ನು 15 ವರ್ಷದಲ್ಲಿ ದೇಶದ ಶೇ. 60ರಷ್ಟು ಜಲಮೂಲಗಳು ಸಂಪೂರ್ಣ ಬತ್ತಿಹೋಗಲಿವೆ ಎಂದು ಎಚ್ಚರಿಸಿದೆ. ಅಂದರೆ ಕೊಳವೆ ಬಾವಿಗಳು ಮಾತ್ರವಲ್ಲ, ಕೆರೆ ಕೊಳ್ಳಗಳು ಮಾತ್ರವಲ್ಲದೇ ನದಿ ನೀರಿನ ಮೂಲಗಳು ಕೂಡ ಬತ್ತಲಿವೆ. ಕೊಳವೆ ಬಾವಿ ತಂದಿಟ್ಟ ದೊಡ್ಡ ಅಪಾಯದಲ್ಲಿ ಇದೂ ಒಂದು.

ಜನರಿಗೆ ಸುಲಭವಾಗಿ ನೀರು ಕುಡಿಸುವುದಕ್ಕೂ ಮತಬೇಟೆಗೂ ನೇರ ಸಂಬಂಧವಿದೆ. ಈಗಂತೂ ಸಂಸತ್‍ನಿಂದ ಹಿಡಿದು ನಗರ ಸಭೆ, ಪಂಚಾಯ್ತಿವರೆಗೆ ಒಂದಲ್ಲ ಒಂದು ಚುನಾವಣೆ ಆಗಾಗ ನಡೆಯುತ್ತಲೇ ಇರುವುದರಿಂದ ಕೊಳವೆಬಾವಿ ತೋಡಿಸಿ ನೀರಿನ ವ್ಯವಸ್ಥೆ ತೋರಿಸಿ ಜನರನ್ನು ಸುಲಭವಾಗಿ ಮರುಳುಗೊಳಿಸುವ ಯತ್ನ ನಡೆಯುತ್ತಲೇ ಇರುತ್ತದೆ. 2009ರ ಸಂಸತ್ ಚುನಾವಣೆಗೆ ಮುನ್ನ ಆಂಧ್ರದ ಪ್ರಕಾಶಂ ಜಿಲ್ಲೆಯ ಒಂದೇ ಕ್ಷೇತ್ರದಲ್ಲಿ 400ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಲಾಯಿತು!

ಮತ್ತಷ್ಟು ಓದು »

4
ಆಗಸ್ಟ್

ವಾಲ್ಮೀಕಿ ಯಾರು?

– ನವೀನ್ ನಾಯಕ್

ವಾಲ್ಮೀಕಿ ಯಾರುಕೆ.ಎಸ್ ನಾರಾಯಣಾಚಾರ್ಯರ ” ವಾಲ್ಮೀಕಿ ಯಾರು ” ಎಂಬ ಕೃತಿಗೆ ನಿಷೇಧದ ಭೀತಿ ಎದುರಾಗಿದೆ. ಕೆಳವರ್ಗದವರು ಮಹಾಗ್ರಂಥಗಳನ್ನು ಬರೆಯಲು ಸಾಧ್ಯವಿಲ್ಲ ಅದು ಕೇವಲ ಬ್ರಾಹ್ಮಣರ ಸೊತ್ತು ಎಂಬಂತೆ ಪುಸ್ತಕ ಸೂಚಿಸುತ್ತದೆ ಎಂಬ ಆರೋಪವನ್ನೂ ಹೊರಿಸಿ ಹಲವು ಸಂಘಟನೆಗಳು ಪ್ರತಿಭಟಿಸುತ್ತಿವೆ. ಈ ಎಲ್ಲಾ ವಿವಾದಗಳಿಗೆ ಮೂಲ ಕಾರಣ ವಾಲ್ಮೀಕಿಯವರ ಜನ್ಮ ವೃತ್ತಾಂತವನ್ನು ಕೆ ಎಸ್ ನಾರಾಯಣಾಚಾರ್ಯರು ತಡಕಾಡಿದ್ದು. ತಡಕಾಡಲು ಕಾರಣವನ್ನೂ ಅವರು ಕೃತಿಯಲ್ಲೇ ನೀಡಿದ್ದಾರೆ. ವಾಲ್ಮೀಕಿ ರಾಮಾಯಣ ಮತ್ತು ಆನಂದರಾಮಾಯಣದ ಆಧಾರವನ್ನೇ ಈ ಕುರಿತ ಚರ್ಚೆಗೆ ಬಳಸಿದ್ದಾರೆ.

ವಾಲ್ಮೀಕಿ ಬ್ರಾಹ್ಮಣ ಪುತ್ರನೋ ಇಲ್ಲವೋ ಎಂಬುದಕ್ಕೆ ಲೇಖಕರು ಕೊಟ್ಟ ಆಧಾರಗಳು ಇಂತಿವೆ.ವಾಲ್ಮೀಕಿಯವರ ಆಶ್ರಮದಲ್ಲಿ ನೆಲೆಸಿ ಲವ ಕುಶರನ್ನು ಹಡೆದ ಸೀತಾಮಾತೆಯನ್ನು ಮತ್ತೆ ಶ್ರೀರಾಮನೆದುರು ನಿಲ್ಲಿಸಿ ” ಈಕೆ ಪರಿಶುದ್ಧೆ ! ಸ್ವೀಕರಿಸು ” ಎನ್ನುವಾಗ ಮಹರ್ಷಿಯು ತಾನು ಸುಳ‍್ಳಾಡುವವನು ಅಲ್ಲ ಎಂದು ಪ್ರತಿಜ್ಞೆ ಮಾಡಿ ತನ್ನ ಕುಲಗೋತ್ರವನ್ನು ತಂದೆಯವರನ್ನು ಸ್ಮರಿಸಿ ಹೇಳುತ್ತಾರೆ ” ಪ್ರಚೇತಸೋಹಂ ದಶಮಃ ಪುತ್ರೋ , ರಾಘವನಂದನ” |

( ಉತ್ತರಾಯಣ 96-16 ). ಹೇ ಶ್ರೀರಾಮ ! ನಾನು ಪ್ರಚೇತಸನೆಂಬ ಮಹರ್ಷಿಯ ಹತ್ತನೆಯ ಮಗ. ಎರಡನೆಯದಾಗಿ ಲವಕುಶರು ಶ್ರೀರಾಮನೆದುರೇ ರಾಮಾಯಣವನ್ನು ಗಾನ ಮಾಡಿ ತೋರಿಸಿದಾಗ ಶ್ರೀರಾಮಚಂದ್ರನು ಇದನ್ನು ಬರೆದವರಾರು ಎಂದು ಕೇಳಿದಾಗ, ಮಕ್ಕಳು ಇದನ್ನು ಭಾರ್ಗವ ಗೋತ್ರದ ಮಹರ್ಷಿ ವಾಲ್ಮೀಕಿ ಬರೆದರು ಎನ್ನುತ್ತಾರೆ. ಇದಲ್ಲದೇ ಇತರ ಪುರಾಣಗಳಲ್ಲೂ ಅಲ್ಲಲ್ಲಿ ವಾಲ್ಮಿಕಿಯನ್ನು ” ಪ್ರಾಚೇತಸ , ಭಾರ್ಗವ, ವರುಣಪುತ್ರ, ಭೃಗುಸೋದರ ” ನೆಂದೂ ಹೇಳಿದೆ.

ವಾಲ್ಮೀಕಿಯವರು ಬೇಡನಾಗಲು ಇರುವ ಕಾರಣಗಳನ್ನು ಹಲವಾರು ಕಾವ್ಯಗಳು ಎರಡು-ಮೂರು ರೀತಿಯಲ್ಲಿ ಚಿತ್ರಿಸಿವೆ. ಬೇಡನಾದ ನಂತರ ವಾಲ್ಮೀಕಿಯವರಿಗೆ ಸಪ್ತರ್ಷಿಗಳು ಅಥವ ನಾರದರ ಅನುಗ್ರಹದಿಂದ ರಾಮ ಮಂತ್ರದ ಉಪದೇಶವನ್ನು ಪಡೆದು ಜಪಿಸತೊಡಗಿದರು. ಕಾಲ ಚಲಿಸಿದಂತೆ ಬೇಡನ ಸುತ್ತ ಹುತ್ತ ( ವಾಲ್ಮೀಕ ) ಬೆಳೆಯಿತು. ನಂತರ ಸಪ್ತರ್ಷಿಗಳು ಬೇಡನನ್ನು ಹೊರ ಬರುವಂತೆ ಕರೆದಾಗ ಹುತ್ತವನ್ನೊಡೆದುಕೊಂಡು ಹೊರ ಬಂದು ವಾಲ್ಮೀಕರೆಂದು ಪ್ರಖ್ಯಾತರಾದರು. ಇದರಲ್ಲಿ ಆಚಾರ್ಯರು ಯಾವುದಾದರೂ ವಿಷಯವನ್ನು ಸೃಷ್ಟಿಸಿರುವುದು ಕಂಡು ಬರುತ್ತದೆಯೇ ? ಇಲ್ಲವಲ್ಲ. ಕೃತಿಯ ಮದ್ಯಭಾಗದಲ್ಲಿ ಲೇಖಕರು ಬರೆಯುತ್ತಾರೆ, ಪಾಮರನಾದ ಬೇಡನೊಬ್ಬ ದಿಢೀರನೆ ರಾಮಾಯಣದಂತಹ ಕಾವ್ಯ ಬರೆದ ಎಂದು ಹೇಳುವುದು ಹಾಸ್ಯಾಸ್ಪದವಾಗುತ್ತದೆ. ಈ ವಾಕ್ಯದ ಕುರಿತಾದ ದೃಷ್ಠಿಕೋನವನ್ನು ಈಗ ತಿರುಚಿರುವುದೇ ವಿವಾದಕ್ಕೆ ಮೂಲವಾಗಿರುವುದು.
ಮತ್ತಷ್ಟು ಓದು »

1
ಆಗಸ್ಟ್

’ನನ್ನ ಅದೃಷ್ಟದ ಮಗುವಿದು’ ಎನ್ನುವ ಮುನ್ನ…..

– ಗುರುರಾಜ್ ಕೊಡ್ಕಣಿ

ಮಗುಕೆಲವು ದಿನಗಳ ಹಿ೦ದಿನ ಮಾತು.ವಿಶೇಷ ಔತಣಕೂಟವೊ೦ದರ ನಿಮಿತ್ತ ಸ್ನೇಹಿತನ ಮನೆಗೆ ಹೋಗಿದ್ದೆ.’ನಾವಿಬ್ಬರು,ನಮಗಿಬ್ಬರು’ ಎನ್ನುವ೦ತೆ ಎರಡು ಮಕ್ಕಳ ಸು೦ದರ ಸ೦ಸಾರ ಆತನದು.ಅವನ ಹಿರಿಯ ಮಗನಿಗೆ ಸುಮಾರು ಏಳು ವರ್ಷ ವಯಸ್ಸಾಗಿದ್ದರೇ,ಕಿರಿಯ ಪುತ್ರನಿಗೆ ಮೂರು ಸ೦ವತ್ಸರಗಳು ತು೦ಬಿವೆ.ತು೦ಬ ದೊಡ್ಡದಲ್ಲದಿದ್ದರೂ ತೃಪ್ತಿಕರ ಸ೦ಬಳ ತರುವ ಕೆಲಸದಲ್ಲಿದ್ದಾನೆ ನನ್ನ ಮಿತ್ರ.ಸುಶೀಲ,ಸದ್ಗುಣಸ೦ಪನ್ನೆಯಾದ ಮಡದಿಯೊ೦ದಿಗಿರುವ ಅವನದು ಒಟ್ಟಾರೆಯಾಗಿ ಚಿಕ್ಕ ಚೊಕ್ಕ ಸ೦ಸಾರ. ಆದರೆ ಅವನ ಮನೆಯಲ್ಲಿ ಅ೦ದು ನಡೆದ ಚಿಕ್ಕ ಘಟನೆಯೊ೦ದು ನನ್ನ ಮನದಲ್ಲಿ ಅಚ್ಚಳಿಯದೇ ಉಳಿದಿದೆ.ನನ್ನ ಸ್ನೇಹಿತ ಸಣ್ಣದೊ೦ದು ಸೈಟು ಖರೀದಿಸಹೊರಟಿದ್ದ.ಅವನ ನಿರೀಕ್ಷೆಗಿ೦ತ ಕಡಿಮೆ ಬೆಲೆಯಲ್ಲಿ ಆ ಜಾಗ ಅವನಿಗೆ ಸಿಗುವುದರಲ್ಲಿತ್ತು.ನಾನು ಆತನ ಮನೆಯಲ್ಲಿ ಕುಳಿತಿದ್ದಾಗಲೇ ಆತ ಖರೀದಿಸಬೇಕಿದ್ದ ಜಮೀನಿಗೆ ಸ೦ಬ೦ಧಪಟ್ಟ೦ತೆ ಕರೆಯೊ೦ದು ಆತನಿಗೆ ಬ೦ದಿತು.ಫೋನಿನಲ್ಲಿ ಮಾತು ಮುಗಿಸಿದವನು ’ಒ೦ದು ಹತ್ತು ನಿಮಿಷ ಕೂತಿರು ಗುರು,ಸಣ್ಣ ಕೆಲಸವೊ೦ದಿದೆ.ಮುಗಿಸಿಕೊ೦ಡು ಬೇಗ ಬ೦ದು ಬಿಡ್ತೀನಿ’ ಎ೦ದವನೇ ತನ್ನ ಬೈಕಿನ ಕೀಯನ್ನು ಕೈಗೆತ್ತಿಕೊಳ್ಳುತ್ತಾ,’ಚಿನ್ನು,ಬಾ ಪುಟ್ಟಾ,ಇಲ್ಲೇ ಹೋಗಿ ಬರೋಣ’ ಎ೦ದು ತನ್ನ ಕಿರಿಯ ಮಗನನ್ನು ಕೂಗಿದ.ಅಪ್ಪನ ಧ್ವನಿಯನ್ನು ಕೇಳಿ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಓಡಿ ಬ೦ದ ಕಿರಿಯ ಮಗನನ್ನು ಬೈಕಿನಲ್ಲಿ ಕೂರಿಸಿಕೊ೦ಡು ಅದರ ಪಕ್ಕೆಗೊ೦ದು ಒದೆ ಕೊಟ್ಟು ಎಕ್ಸಲರೇಟರ್ ತಿರುವಲಾರ೦ಭಿಸಿದ ಅವನು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಮನೆಯೊಳಗಿ೦ದ ಓಡಿ ಬ೦ದ ಅವನ ಹಿರಿಯ ಮಗ,’ಅಪ್ಪಾ ನಾನೂ ಬರ್ಲಾ ನಿನ್ನ ಜೊತೆ.?’ ಎ೦ದು ಕೇಳಿದ .’ನೀನು ಬೇಡ,ಇಲ್ಲೇ ಇರು ಮನೆಲಿ’ ಎ೦ದು ಸಣ್ಣಗೆ ಸಿಡುಕುತ್ತಲೇ ನುಡಿದ ಅವನ ಅಪ್ಪ.ಆದರೆ ಅಷ್ಟಕ್ಕೆ ಸುಮ್ಮನಾಗದ ಅವನ ಹಿರಿಯ ಮಗ ’ಅಪ್ಪಾ..’ ಎ೦ದು ಪುನ: ರಾಗವೆಳೆಯತೊಡಗಿದ.’ಒಮ್ಮೆ ಹೇಳಿದ್ರೆ ಗೊತ್ತಾಗಲ್ವಾ,ಹೋಗೋ ಕತ್ತೆ, ಒಳಗೆ ’ಎ೦ದು ಜೋರಾಗಿ ಗದರಿದ ಅಪ್ಪನ ಮಾತಿಗೆ ಬೆದರಿದ ಆ ಹುಡುಗ ಜೋಲು ಮೋರೆ ಹಾಕಿಕೊ೦ಡು ಅರೇ ಮನಸ್ಸಿನಿ೦ದ ನಿಧಾನವಾಗಿ ಮನೆಯೊಳಗೆ ಹೋದ.

ಹುಡುಗನ ಕಣ್ಣ೦ಚಿನಲ್ಲಿ ಜಿನುಗುತ್ತಿದ್ದ ನಿರಾಸೆಯ ಕಣ್ಣೀರನ್ನು ನಾನು ಗಮನಿಸಿದ್ದೆ.ನನಗೆ ಅವನ ಬಗ್ಗೆ ಅನುಕ೦ಪವು೦ಟಾಗಿ,’ಪಾಪ,ಅವನನ್ನೂ ಕರ್ಕೊ೦ಡು ಹೋಗೋ ನಿನ್ನ ಜೊತೆ’ಎ೦ದು ಗೆಳೆಯನಿಗೆ ತಿಳಿಸಿದೆ.’ನಿನಗೆ ಗೊತ್ತಿಲ್ಲ ಕಣೋ ,ಅವನು ಸಿಕ್ಕಾಪಟ್ಟೆ ಅನ್ ಲಕ್ಕಿ,ಅವನನ್ನ ಕರ್ಕೊ೦ಡು ಹೋದ್ರೆ ಯಾವ ಕೆಲ್ಸಾನೂ ಆಗಲ್ಲ,ಅನಿಷ್ಟ ಮು೦ಡೆದು’ ಎ೦ದು ಬಯ್ದು ಅವನು ಹೊರಟು ಹೋದ.ನನಗೆ ಅಕ್ಷರಶ; ಚೇಳು ಕುಟುಕಿದ ಅನುಭವ.ತಾನು ಹೆತ್ತ ಮಗನನ್ನೇ ’ಅನಿಷ್ಟ’ ಎ೦ದ ನನ್ನ ಸ್ನೇಹಿತನ ಮಾತುಗಳನ್ನು ಅರಗಿಸಿಕೊಳ್ಳುವುದು ನನಗೆ ಕಷ್ಟವೆನಿಸಿತು.ಆತ ಹೇಳುವ೦ತೆ,ಅವನ ಹಿರಿಯ ಮಗ ಹುಟ್ಟುವಾಗ ತು೦ಬ ದುಡ್ಡಿನ ತೊ೦ದರೆಯಾಗಿ,ಕ೦ಡಕ೦ಡಲ್ಲಿ ಸಾಲ ಮಾಡಿ ಹೆ೦ಡತಿಯ ಹೆರಿಗೆ ಮಾಡಿಸಿದ್ದನ೦ತೆ. ಸಾಲಗಾರರು ಕೊಟ್ಟ ಕಾಟ ಅಷ್ಟಿಷ್ಟಲ್ಲವ೦ತೆ.ಆದರೆ ಅವನ ಎರಡನೇ ಪುತ್ರ ಹಾಗಲ್ಲವ೦ತೆ,ಅವನು ಹುಟ್ಟುವ ಗಳಿಗೆಯಲ್ಲಿ ಇವನ ಕೈತು೦ಬ ಹಣವಿತ್ತ೦ತೆ,ಎರಡನೇ ಮಗ ಹುಟ್ಟುತ್ತಲೇ ಇವನು ಬೈಕು ಖರೀದಿಸಿದನ೦ತೆ,ಹೆ೦ಡತಿಗೆ ಚಿನ್ನದ ಒಡವೆಗಳನ್ನು ಮಾಡಿಸಿಕೊಟ್ಟನ೦ತೆ,ಹಾಗಾಗಿ ಕಿರಿಯ ಮಗ ತನ್ನ ಲಕ್ಕಿ ಸ್ಟಾರ್ ಎ೦ದು ಹೆಮ್ಮೆಯಿ೦ದ ವಿವರಿಸಿದ ಆ ನನ್ನ ಗೆಳೆಯ. ನನಗೆ ಏನು ಹೇಳಬೇಕೋ ತಿಳಿಯದ೦ತಾಯಿತು.ಆತ ನನಗೆ ಸುಮಾರು ಹತ್ತು ವರ್ಷಗಳಿ೦ದ ಪರಿಚಯ.ತನ್ನ ತ೦ದೆಗೆ ಹಿರಿಯ ಮಗನಾದ ಅವನಿಗೆ ಇಬ್ಬರು ಸೋದರಿಯರಿದ್ದರು.
ಮತ್ತಷ್ಟು ಓದು »

31
ಜುಲೈ

ಮತ್ತೆ ಮತ್ತೆ ಬರಲಿ ಮಗಳ ದಿನ!

– ತುರುವೇಕೆರೆ ಪ್ರಸಾದ್

ಕಲ್ಪನಾ ಚಾವ್ಲಾಪ್ರತಿವರ್ಷ ಜ.12, ಸೆ.4 ಮತ್ತು ಸೆಪ್ಟೆಂಬರ್ ಕೊನೆಯ ಭಾನುವಾರ ಹೀಗೆ ವಿವಿಧ ದಿನಗಳನ್ನು ವಿವಿಧ ಸಂಘಟನೆಗಳು ಮಗಳ ದಿನವನ್ನಾಗಿ ಆಚರಿಸುತ್ತವೆ. ಆದರೆ ಭಾರತೀಯ ಸಾರ್ವಜನಿಕ ಸಂಪರ್ಕ ಸಮಿತಿ ಅಂತರರಾಷ್ಟ್ರೀಯ ಖ್ಯಾತಿಯ ಭಾರತೀಯ ಖಗೋಳ ವಿಜ್ಞಾನಿ ದಿ.ಕಲ್ಪಾನಾಚಾವ್ಲಾ ಹುಟ್ಟಿದ ದಿನವನ್ನು (ಜುಲೈ 1) ಮಗಳ ದಿನವನ್ನಾಗಿ ಆಚರಿಸುವಂತೆ 2006ರಲ್ಲಿ ಕರೆನೀಡಿತ್ತು. ಆ ವರ್ಷ ಬಹಳಷ್ಟು ಸಂಘ ಸಂಸ್ಥೆಗಳು ಜುಲೈ ತಿಂಗಳು ಪೂರಾ ಕಲ್ಪನಾ ಚಾವ್ಲಾ ಅವರ ಜನ್ಮದಿನೋತ್ಸವವನ್ನು ಮಗಳ ದಿನದ ರೂಪದಲ್ಲಿ ಆಚರಿಸಿದ್ದ ವರದಿಗಳನ್ನು ನಾನು ಪತ್ರಿಕೆಗಳಲ್ಲಿ ಓದಿದ್ದೆ. ಆದರೆ ಆ ನಂತರ ಆ ನಿಟ್ಟಿನಲ್ಲಿ ಯಾವುದೇ ಆಚರಣೆಗಳು ನಡೆದದ್ದು ನನ್ನ ಗಮನಕ್ಕೆ ಬಂದಿಲ್ಲ. ಇದಕ್ಕೆ ಆಡಳಿತಗಳಾಗಲೀ, ಸ್ಥಳೀಯ ಸಂಘ-ಸಂಸ್ಥೆಗಳಾಗಲೀ ಯಾವುದೇ ಮಹತ್ವ ನೀಡಿಲ್ಲ. ಹಾಗಾಗಿ ಈ ತಿಂಗಳಲ್ಲಿ ಮತ್ತೊಮ್ಮೆ ಕಲ್ಪನಾ ಚಾವ್ಲಾ ನೆನಪು ಮೂಡಿಸಿ ಕೋಟಿ ಕೋಟಿ ಹೆಣ್ಣುಮಕ್ಕಳಿಗೆ ಆಕೆ ಸ್ಪೂರ್ತಿಯ ಅನುಕರಣೀಯ ಮಾದರಿ ಆಗುವಂತೆ ಮಾಡಬೇಕಿದೆ.

ನಮ್ಮ ದೇಶದಲ್ಲಿ ಮಹಿಳಾ ಸಬಲೀಕರಣ ಕುರಿತ ನೂರಾರು ಕಾರ್ಯಕ್ರಮಗಳು ಅನುಷ್ಠಾನಗೊಂಡಿವೆ. ಮಹಿಳಾ ಆಯೋಗಗಳು ರಚನೆಯಾಗಿವೆ. ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಂತೆಯೇ ಕಾನೂನುಬದ್ಧ ಆಸ್ತಿ ಹಕ್ಕು ನೀಡಲಾಗಿದೆ. ಆದರೂ ಇಂದಿಗೂ ಹೆಣ್ಣು ಮಕ್ಕಳ ಸಾಮಾಜಿಕ ಹಾಗೂ ಕೌಟುಂಬಿಕ ಶೋಷಣೆ ನಿರಂತರವಾಗಿ ನಡೆಯುತ್ತಲೇ ಇದೆ. ಎಂತಹ ಕಠಿಣ ಕಾನೂನು ಮಾಡಿದರೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಒಂದು ವರದಿ ಪ್ರಕಾರ ಭಾರತದಲ್ಲಿ ಪ್ರತಿ 22 ನಿಮಿಷಕ್ಕೊಂದು ಅತ್ಯಾಚಾರ ಪ್ರಕರಣ ವರದಿಯಾಗುತ್ತಿದೆ. ಎಷ್ಟೋ ಸಾವಿರಾರು ಪ್ರಕರಣಗಳು ದಾಖಲೆಯೇ ಆಗದೆ ಅರೋಪಿಗಳು ಕಾನೂನಿನ ಕೈಯ್ಯಿಂದ ನುಣುಚಿಕೊಳ್ಳುತ್ತಿದ್ದಾರೆ. ಅಂತಸ್ತು ಗೌರವದ ಹೆಸರಿನಲ್ಲಿ ಮರ್ಯಾದೆ ಹತ್ಯೆಗಳು ನಡೆಯುತ್ತಿವೆ. ಮಹಿಳೆಯರಿಗೆ ರಾಜಕೀಯ ಶಕ್ತಿ ದೊರಕಿಸಿಕೊಡುವ ಶೇ.33 ಮೀಸಲಾತಿ ಮಸೂದೆ ವರುಷಗಳಿಂದ ನೆನೆಗುದಿಗೆ ಬಿದ್ದಿದೆ. ಏನೆಲ್ಲಾ ಹೋರಾಟದ ನಡುವೆಯೂ ಪುರುಷ ಪ್ರಧಾನ ವ್ಯವಸ್ಥೆಯ ಕಬಂಧ ಬಾಹುಗಳಿಂದ ಲಕ್ಷಾಂತರ ಮಹಿಳೆಯರು ಹೊರಬರಲಾಗಿಲ್ಲ. ಪರಿಪೂರ್ಣ ಸ್ವಾತಂತ್ಯ್ರದ ಬೆಳಕು ಕಾಣಲಾಗಿಲ್ಲ ಎಂಬುದೇ ದೊಡ್ಡ ದುರಂತ.

ಇದಕ್ಕೆಲ್ಲಾ ಕಾರಣ ಪರಂಪರಾಗತವಾಗಿ ಬಂದಿರುವ ಮನೋವೈಜ್ಞಾನಿಕ ಹಾಗೂ ಸಾಮಾಜಿಕ ಲಿಂಗತ್ವದ ಪರಿಕಲ್ಪನೆ. ನಮ್ಮ ವಿದ್ಯಾವಂತ ಸಮಾಜವೂ ಸಹ ಈ ಲಿಂಗತ್ವದ ಸಾಂಪ್ರದಾಯಿಕ ಪರಿಕಲ್ಪನೆಯಿಂದ ಹೊರಬರಲಾಗದೆ ತೊಳಲಾಡುತ್ತಿದೆ. ಖ್ಯಾತ ಸ್ತ್ರೀವಾದಿ ಆನ್ ಓಕ್ಲೆ ಪ್ರಕಾರ ಲಿಂಗ ಮತ್ತು ಲಿಂಗತ್ವದ ನಡುವಿನ ಸಂಬಂಧ ತೀರಾ ಅಸಹಜವಾದುದು. ಲಿಂಗತ್ವಕ್ಕೂ ಸಂಸ್ಕøತಿಗೂ ತಳುಕು ಹಾಕಿ ಅದನ್ನು ಸಂಪ್ರದಾಯದ ಹಿನ್ನಲೆಯಲ್ಲಿ ವರ್ಗೀಕರಿಸಿ ಸಾಂಸ್ಕøತಿಕ ಪರಿಭಾಷೆಯ ಚೌಕಟ್ಟಿನಲ್ಲಿ ತಾರತಮ್ಯದ ಜವಾಬ್ಧಾರಿಯನ್ನು ಆರೋಪಿಸಲಾಗಿದೆ. ಈ ಕಲ್ಪನೆಯ ಭಾಗವೇ ಗಂಡ್ತನ ಮತ್ತು ಹೆಣ್ತನ. ಪ್ರತಿಯೊಂದು ಸಮಾಜವೂ ವ್ಯವಸ್ಥಿತವಾಗಿ ಗಂಡು ಹೆಣ್ಣಿನಲ್ಲಿ ಈ ಲಿಂಗತ್ವದ ಗುಣಗಳನ್ನು ಹೇರಿ ಅವರ ಹಕ್ಕುಗಳು, ನೀರೀಕ್ಷೆಗಳು ಜವಾಬ್ಧಾರಿಗಳು ಎಲ್ಲದರಲ್ಲೂ ಶ್ರೇಷ್ಠ,ಕನಿಷ್ಟ ಎಂಬ ಭಾವನೆ ಮೂಡುವಂತೆ ಪರಿವರ್ತಿಸಲಾಗುತ್ತದೆ. ಇದಕ್ಕೇ ಸಂಸ್ಕøತಿ ಎಂಬ ಹೆಸರಿಟ್ಟು ಅವರ ವರ್ತನೆಗಳನ್ನು ಈ ಸಾಂಸ್ಕøತಿಕ ಮಾನದಂಡದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಸಾಂಸ್ಕøತಿಕ ಚಹರೆಗಳು,ಮಾನದಂಡಗಳು, ಸ್ಥಳದಿಂದ ಸ್ಥಳಕ್ಕೆ, ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತವೆ. ಹಾಗಾಗಿ ಸಮಾಜ ಲಿಂಗದ ಸ್ಥಿರತೆಯನ್ನು ಒಪ್ಪಿಕೊಂಡಂತೆಯೇ ಲಿಂಗತ್ವದ ಬದಲಾಗುವ ಚಲನಶೀಲ ತಾರತಮ್ಯದ ಸ್ವರೂಪಗಳನ್ನೂ ಒಪ್ಪಿಕೊಳ್ಳುವುದು ಅನಿವಾರ್ಯವಾಗುತ್ತದೆ.

ಮತ್ತಷ್ಟು ಓದು »

28
ಜುಲೈ

ನಾಡು- ನುಡಿ: ಮರುಚಿಂತನೆ-‘ಕರ್ಣಾಟಕ’ ದ ಇತಿಹಾಸ’-ಭಾಗ 1

ಪ್ರೊ.ರಾಜಾರಾಮ್ ಹೆಗಡೆ, ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ, ಕುವೆಂಪು ವಿ.ವಿ.

Social Science Column Logo

ಕರ್ಣಾಟಕ ಶಬ್ದದ ವ್ಯುತ್ಪತ್ತಿ ಹಾಗೂ ಇತಿಹಾಸದ ಕುರಿತು ಏಕೀಕರಣ ಹೋರಾಟ ಕಾಲದಲ್ಲಿ ಶಂಬಾ ಜೋಶಿಯವರಾದಿಯಾಗಿ ಅನೇಕ ವಿದ್ವಾಂಸರು ಚರ್ಚಿಸಿದ್ದಾರೆ. ಈ ಶಬ್ದದ ಉಲ್ಲೇಖವನ್ನು ಬಹುಶಃ ಕ್ರಿಸ್ತಶಕದ ಆದಿಯಿಂದ ವಿಭಿನ್ನ ಸಂಸ್ಕೃತ ಗ್ರಂಥಗಳಲ್ಲಿ ಗುರುತಿಸಬಹುದು. ಕನ್ನಡ ಶಾಸನಗಳಲ್ಲಿ ಈ ಶಬ್ದವು ರಾಷ್ಟ್ರಕೂಟರ ಕಾಲದಿಂದ ಕಾಣಿಸಿಕೊಳ್ಳುವುದಾಗಿ ತಿಳಿದುಬರುತ್ತದೆ. ತದನಂತರ ಇಲ್ಲಿಯ ರಾಜರನ್ನು ಕರ್ಣಾಟ ರಾಜರೆಂದೂ, ಸೈನ್ಯವನ್ನು ಕರ್ಣಾಟ ಬಲವೆಂದೂ ಸಂಸ್ಕೃತದಲ್ಲಿ ಕರೆದರೆ, ಕನ್ನಡ ನುಡಿ, ಕನ್ನಡನಾಡು ಎಂಬುದಾಗಿ ಇಲ್ಲಿಯ ಜನರು ರಾಷ್ಟ್ರಕೂಟರ ಕಾಲದಿಂದಲೇ ಕನ್ನಡ ಸಾಹಿತ್ಯದಲ್ಲಿ ಈ ಶಬ್ದವನ್ನು ಬಳಸಿದ್ದಾರೆ. ತಮಿಳರು ಇವರನ್ನು ಕನ್ನಡಿ, ಕನ್ನಡಿ ಅರಸರ್ ಎಂದು ಕರೆದಿರುವುದೂ ಕಂಡುಬರುತ್ತದೆ. ಈ ಕುರಿತು ಇಲ್ಲಿ ನೀಡಿದ ವಿವರಗಳಿಗೆ ಇನ್ನಷ್ಟು ಈಚೆಗಿನ ಹಾಗೂ ಮುಂದಿನ ವಿವರಗಳು ಸೇರಿ ಈ ಶಬ್ದ ಇನ್ನೂ ಪ್ರಾಚೀನವೆಂದು ಸಿದ್ಧವಾಗಲೂಬಹುದು. ಅದರಿಂದ ಕರ್ನಾಟಕವೊಂದು ಭೂಪ್ರದೇಶ, ಹಾಗೂ ಅದರಲ್ಲಿ ಆಡುತ್ತಿದ್ದ ಭಾಷೆ ಕನ್ನಡ ಎಂಬ ಸತ್ಯಗಳಿಗೇನೂ ಕುಂದುಬರಲಾರದೆಂಬ ತರ್ಕದಿಂದ ಮುಂದುವರಿಯೋಣ.

ನಮಗೆ ಇಲ್ಲಿರುವ ಸಮಸ್ಯೆ ಎಂದರೆ ಈ ಶಬ್ದವನ್ನು ಇಂದಿನ ನಮ್ಮ ವ್ಶೆಜ್ಞಾನಿಕ ಇತಿಹಾಸದ ಪರಿಕಲ್ಪನೆಗೆ ನಾವು ಹೇಗೆ ಒಗ್ಗಿಸಿದ್ದೇವೆ ಹಾಗೂ ಅದು ಆ ಕಲ್ಪನೆಗೆ ಎಷ್ಟರಮಟ್ಟಿಗೆ ಒಗ್ಗುತ್ತದೆ ಎಂಬ ವಿಚಾರ. ಕರ್ನಾಟಕದ ಏಕೀಕರಣ ಕಾಲದಲ್ಲಿ ಕರ್ನಾಟಕದ ಇತಿಹಾಸವನ್ನು ವ್ಶೆಜ್ಞಾನಿಕವಾಗಿ ರಚಿಸಲಾಯಿತು. ಈ ರಚನೆಯಲ್ಲಿ ಇದ್ದ ಪೂರ್ವಗೃಹೀತಗಳೆಂದರೆ: 1) ಕನ್ನಡ ಭಾಷೆಯ ಮೂಲಕ ಒಂದು ಪ್ರದೇಶವನ್ನು ಕಲ್ಪಿಸಿಕೊಳ್ಳಲು ಸಾಧ್ಯ, ಅಂಥ ಪ್ರದೇಶವೇ ಕರ್ನಾಟಕವಾಗಿದೆ. ಕರ್ನಾಟಕ ಎಂಬುದು ಒಂದು ಪ್ರಕಾರದ ರಾಷ್ಟ್ರ ಕಲ್ಪನೆ ಹಾಗೂ ಅದು ಭಾರತ ಎಂಬ ರಾಷ್ಟ್ರದ ಅಂಗಭೂತವಾಗಿದೆ. 2) ಇದೊಂದು ಸಾಂಸ್ಕೃತಿಕ ಪ್ರಭೇದವಾಗಿದೆ ಹಾಗೂ ಇದು ಭಾಷೆಯನ್ನು ಆಧರಿಸಿದೆ, ಅಂದರೆ ಕನ್ನಡ ಬಾಷೆಯ ಮೂಲಕ ಕನ್ನಡ ಸಂಸ್ಸೃತಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯ. 3) ಈಗ ಈ ಎರಡೂ ಸಂಗತಿಗಳನ್ನು ನಾವು ಮರೆತಿರುವುದರಿಂದ ಅವನ್ನು ಕಲ್ಪಿಸಿಕೊಳ್ಳುವ ಅವಸ್ಥೆ ಬಂದಿದೆ. ಆದರೆ ಅವು ಸತ್ಯವಾಗಿದ್ದಲ್ಲಿ ಅವು ಇತಿಹಾಸದಲ್ಲಿ ಸಿಕ್ಕಲೇಬೇಕು. 4) ಈ ಸಂಸ್ಕೃತಿ ಈ ಕರ್ನಾಟಕವೆಂಬ ಪ್ರದೇಶದ ಇತಿಹಾಸದ ಮೂಲಕ ಮೈದಳೆದಿರುವುದರಿಂದ ಇದರ ಇತಿಹಾಸವನ್ನು ತಿಳಿದುಕೊಂಡರೆ ಈ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಸಾಧ್ಯ. 5) ಹಾಗಾಗಿ ಕರ್ನಾಟಕದ ಇತಿಹಾಸದ ಕುರಿತ ತಿಳುವಳಿಕೆಯಿಂದ ಅದರ ಸಂಸ್ಕೃತಿಯ ಕುರಿತ ಜಾಗೃತಿ ಮೂಡುತ್ತದೆ. 6) ಈ ಜಾಗೃತಿ ಏಕೆ ಬೇಕೆಂದರೆ: ಈ ಭಾಷೆ, ಪ್ರದೇಶ, ಸಂಸ್ಕೃತಿ ಹಾಗೂ ಇತಿಹಾಸದ ಆಧಾರದ ಮೇಲೆ ಒಂದು ಪ್ರಭುತ್ವವನ್ನು ರಚಿಸುವುದು ಸಾಧ್ಯ ಹಾಗೂ ಅಂಥ ಪ್ರಭುತ್ವವು ಈ ಭಾಷೆಯನ್ನಾಡುವ ಜನರ ಸರ್ವತೋಮುಖ ಏಳ್ಗೆಗೆ ಮಾರ್ಗವಾಗಲು ಸಾಧ್ಯ. ಈ ರೀತಿ ಇಲ್ಲಿಯ ಜನರ ಏಳ್ಗೆಗೂ ಇವರ ಇತಿಹಾಸಕ್ಕೂ ಅವಿನಾಭಾವಿ ಸಂಬಂಧ ಇದೆ ಎಂದು ನಂಬಿಕೊಂಡು ಕರ್ನಾಟಕದ ಇತಿಹಾಸದ ರಚನೆಯಾಯಿತು. ಮತ್ತಷ್ಟು ಓದು »

25
ಜುಲೈ

ಅತ್ಯಾಚಾರ: ಹುಯಿಲೆಬ್ಬಿಸುವುದೇಕೆ?

– ಡಾ. ಶ್ರೀಪಾದ ಭಟ್

ಸಹಾಯಕ ಪ್ರಾಧ್ಯಾಪಕ,ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ಕರ್ನಾಟಕ

Stop Rapeಕಳೆದ ಒಂದೆರಡು ವಾರಗಳಿಂದ ಯಾವ ಮಾಧ್ಯಮ ಓದಿದರೂ ನೋಡಿದರೂ ಅತ್ಯಾಚಾರದ್ದೇ ಸುದ್ದಿ. 2012ರಲ್ಲಿ ದೆಹಲಿಯಲ್ಲಿ ನಿರ್ಭಯಾಳ ಮೇಲೆ ನಡೆದ ಹೇಯ ಕೃತ್ಯದ ತರುವಾಯ ಇಂಥ ಪ್ರಕರಣಗಳು ನಿರ್ಭಯವಾಗಿ ಹೆಚ್ಚು ಸುದ್ದಿಯಾಗುತ್ತಿವೆ. ಇದು ಗುಣವೋ ದೋಷವೋ ಗೊತ್ತಿಲ್ಲ. ಈಚೆಗೆ ಬೆಂಗಳೂರಿನ ಶಾಲೆಯೊಂದರಲ್ಲಿ ಆರು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದ ಮೇಲೆ ಕಾಕತಾಳೀಯವೋ ಎಂಬಂತೆ ಬೆಂಗಳೂರಿನಲ್ಲಿ ನಿತ್ಯ ಒಂದೆರಡು, ರಾಜ್ಯಾದ್ಯಂತ ಒಂದೇದಿನ ಎಂಟು ಇಂಥ ಪ್ರಕರಣಗಳು ವರದಿಯಾದವು. ಮಾಧ್ಯಮಗಳಂತೂ ಅತ್ಯಾಚಾರ ಎಲ್ಲಿಂದ ಎಷ್ಟುಹೊತ್ತಿಗೆ ಬರುತ್ತದೆ ಎಂದು ಕಾದು ಕೂತಿರುವವರಂತೆ ಅಲ್ಲೊಂದು ಅತ್ಯಾಚಾರವಂತೆ ಎಂಬ ಅಂತೆ ಕಂತೆಯನ್ನೂ ಅತ್ಯಾಚಾರವಾಗಿದೆ ಎಂದೇ ಬಿಂಬಿಸಿ ಅವಸರದಿಂದ ವರದಿ ಮಾಡಿಯೇ ಮಾಡಿದರು. ಕಳೆದವಾರ ಬೇರೆಲ್ಲ ಕಡೆಯಿಂದ ಇಂಥ ಸುದ್ದಿ ಬಂದಂತೆ ತುಮಕೂರಿನಿಂದಲೂ ಸುದ್ದಿ ಬಂತು. ದಿನ ಕಳೆದ ಮೇಲೆ ಆ ಹುಡುಗಿಯೇ ಠಾಣೆಗೆ ಹೋಗಿ ನನ್ನ ಮೇಲೆ ಅತ್ಯಾಚಾರವಾಗಿಲ್ಲ ಎಂದು ಹೇಳಿಕೆಕೊಟ್ಟಳು! ಸತ್ಯಾಸತ್ಯತೆ ಏನಿದೆಯೋ?

ಇಂಥ ಸುದ್ದಿಗಳ ಪ್ರಸಾರಕ್ಕೆ ಯಾಕಿಷ್ಟು ಅವಸರ? ಇದೊಂದು ಕ್ರೇಜು ಹುಟ್ಟಿಸುವ ಸಂಗತಿಯೇ? ಅಥವಾ ಇಂಥ ವರದಿಯಿಂದ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ಕೂಡಲೇ ದೊರೆತೇಬಿಡುತ್ತದಾ? ಇಂಥ ವರದಿಯಿಂದ ಪ್ರಯೋಜನ ಯಾರಿಗೆ? ಕೆಲವರ ಸುದ್ದಿ ಚಪಲ ತೀರಬಹುದು ಅಷ್ಟೆ.

ಮತ್ತಷ್ಟು ಓದು »

25
ಜುಲೈ

ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು – ಪುಸ್ತಕ ಪರಿಚಯ – ೩

ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು-ಪುಸ್ತಕ ಪರಿಚಯ – ೧
ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು-ಪುಸ್ತಕ ಪರಿಚಯ – ೨

ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳುದಾಖಲೆಗಳು 

   ಮೂಲ : ವಿನಯಲಾಲ್                                  ಕನ್ನಡಕ್ಕೆ : ಅಕ್ಷರ  ಕೆ.ವಿ

ನಾಗರಿಕತೆಗಳು, ದೇಶಗಳು, ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನೂ ಕೂಡಿದಂತೆ ಎಲ್ಲ ಸಂಗತಿಗಳ ‘ಪ್ರಗತಿ’ ಮತ್ತು ‘ಪತನಗಳನ್ನು’ ಅಳೆಯುವುದಕ್ಕೆ ನಾವು ಬಳಸುವ ದಾಖಲೆಗಳನ್ನು ಕುರಿತಂತೆ ಚಿತ್ರ ವಿಚಿತ್ರವಾದ ಹಲವಾರು ವಿಚಾರಗಳನ್ನು ಹೇಳಬಹುದು. ನಾಜಿಗಳು ಮೃತರಾದ ಖೈದಿಗಳನ್ನು ಕುರಿತಂತೆ ಇಟ್ಟಿರುವ ದಾಖಲೆಪುಸ್ತಕಗಳಲ್ಲಿ ಯಾವ ಯಾತನಾಶಿಬಿರಕ್ಕೆ ಯಾವ ರೈಲಿನ ಮೂಲಕ ಯಾವ ಯಾವ ಯಹೂದಿಗಳನ್ನು ಸಾಗಿಸಲಾಯಿತು, ಪ್ರತಿ ರೈಲಿನಲ್ಲಿದ್ದ ಯಹೂದಿಗಳ ಸಂಖ್ಯೆ, ವಿಷಾನಿಲ ಪ್ರಯೋಗದಿಂದ ಕೊಲ್ಲಲ್ಪಟ್ಟ ಯಹೂದಿಗಳ ಸಂಖ್ಯೆ ಈ ಎಲ್ಲವೂ  ವಿವವರವಾಗಿ ದೊರೆಯುತ್ತದೆ.

ಭಾರತವನ್ನಾಳಿದ ಬ್ರಿಟಿಷರಿಗೂ ಇಷ್ಟೇ ವಿಸ್ತಾರವಾದ ಆಡಳಿತಾತ್ಮಕ ದಾಖಲೆಗಳನ್ನು ಇಡುವ ಪರಿಪಾಠವಿತ್ತು. 19ನೆಯ ಶತಮಾನದ ತುದಿಯ ವರ್ಷಗಳಲ್ಲಿ ರಾಷ್ಟ್ರೀಯತಾವಾದವು ಪ್ರಬಲವಾಗುತ್ತಿದ್ದಂತೆ ಈ ದಾಖಲೆಗಳು ಇನ್ನೂ ಇನ್ನೂ ವಿವರಗಳನ್ನು ಸೇರಿಸಿಕೊಳ್ಳುತ್ತಾ ಹೋಯಿತು. ಸ್ಥಳಿಯರ ನಡವಳಿಕೆಗಳ ಬಗ್ಗೆ ಮುನ್ಸೂಚನೆ ನೀಡಿ ಅವರಲ್ಲಿ ದಂಗೆಕಾರರನ್ನು ಹತೋಟಿಯಲ್ಲಿಡಲಿಕ್ಕೂ ಇವೇ ದಾಖಲೆಗಳು ಸಹಾಯಕವಾಗುತ್ತದೆಂಬ ಹೊಸ ಭಾರವು ಆಗ ರಾಜ್ಯದ ಮೇಲೆ ಬಿತ್ತು. ಮುಂದೆ ಹೊಸದಾಗಿ ಅವಿಷ್ಕಾರಗೊಂಡ ರಾಷ್ಟ್ರಪ್ರಭುತ್ವವೂ ಇದೇ ಸಾಮ್ರಾಜ್ಯಶಾಹಿ ದಾಖಲೆ ವಿಧಾನವನ್ನು ಮುಂದುವರಿಸಿತು. ಇವತ್ತು ರಾಷ್ಟ್ರ ಪ್ರಭುತ್ವವೊಂದರ ಸೂಚಕ ಚಿನ್ಹೆಗಳಾಗಿ ಒಂದು ರಾಷ್ಟ್ರಗೀತೆ, ರಾಷ್ಟ್ರಧ್ವಜ, ರಾಷ್ಟ್ರ ಭಾಷೆ ಇರುವಂತೆ ರಾಷ್ಟ್ರೀಯ ಪತ್ರಾಗಾರವೂ ಇದೆ. ಈ ರಾಷ್ಟ್ರೀಯ ದಾಖಲೆ ಸಂಗ್ರಹಾಲಯಗಳು ಆಯಾ ರಾಷ್ಟ್ರಗಳ ರಹಸ್ಯಗಳ,ದೌರ್ಜನ್ಯಗಳ ಮತ್ತು ದುಷ್ಕರ್ಮಗಳ ಅಡಗುದಾಣವೂ ಆಗಿರುತ್ತದೆ.

ಹಿಂದೂಗಳ ಸಾಂಸ್ಕೃತಿಕ ಸೃಷ್ಟಿ ಪುರಾಣಗಳಲ್ಲಿ ವರ್ಗೀಕರಣ ಮತ್ತು ಗಣನೆಗಳೆರೆಡೂ ತುಂಬಾ ಅತ್ಯಂತಿಕವಾದ ಒಂದು ಉಪಕರಣವೆಂದು ಭಾವಿಸಲ್ಪಟ್ಟಿದ್ದವು. ದೇವರಪೂಜೆಯಲ್ಲಿ, ಬಲಿಯ  ವಿಧಿಗಳಲ್ಲಿ, ಸಾಹಿತ್ಯ ಕೃತಿಗಳ ನಿರ್ಮಾಣದಲ್ಲಿ, ವಂಶವೃಕ್ಷಗಳ ನಿರೂಪಣೆಯಲ್ಲಿ , ಜ್ಯೋತಿಷ್ಯದಲ್ಲಿ ಮತ್ತು ಕಾಮಶಾಸ್ತ್ರದಲ್ಲಿಯೂ ಕೂಡ ಸಂಖ್ಯೆಗಳು ಬಳಕೆಯಾಗುತ್ತಿದ್ದವು. ಅಥರ್ವವೇದವು (ದಾಳಗಳನ್ನು ಉಪಯೋಗಿಸಿ) ಐವತ್ಮೂರು ಬಗೆಯ ಮಾಟ  ಮಂತ್ರಗಳನ್ನು ಮಾಡಬಹುದು ಎಂದೂ ಮತ್ತು ಸಾವಿನಲ್ಲಿ ಒಟ್ಟು 101 ಬಗೆಯ ಮರಣಗಳಿವೆಯೆಂದೂ ನಿಖರವಾಗಿ ಹೇಳುತ್ತದೆ. ಇಂಗ್ಲೇಡಿನಲ್ಲಿ  ಸಹ ಇನ್ನೊಂದು ಬಗೆಯ ಸಂಖ್ಯಾ ಸಂಗ್ರಹ ಕಾರ್ಯವನ್ನು ಮಾಡಲಾಗುತ್ತಿತ್ತು. ಅಲ್ಲಿ ಮೃತ ದೇಹಗಳನ್ನು  ಭರದಿಂದ ಎಣಿಸಲಾಗುತ್ತಿತ್ತು. ಒಂದು ವರ್ಷದ ಅವಧಿಯಲ್ಲಿ ರೂಢಿಗತ ಅಪರಾಧಿಗಳಿಗೆ ಎಷ್ಟು ಬಾರಿ ಛಡಿಯೇಟಿನ ಶಿಕ್ಷೆ ನೀಡಲಾಯಿತೆಂಬ ಅಂಕಿ ಅಂಶದಿಂದ ಆರಂಭಿಸಿ, ಜೈಲುಗಳಲ್ಲಿ, ಆಶ್ರಯಧಾಮಗಳಲ್ಲಿ ಎಷ್ಟು ಜನ ಕುಡುಕರು-ಹುಚ್ಚರು ಇದ್ದಾರೆಂಬ ಲೆಕ್ಕಾಚಾರದವರೆಗೆ-ನಾನಾ ಮಾದರಿಯ ಸಂಖ್ಯಾರಾಶಿಗಳನ್ನು ಇಂಗ್ಲೇಡಿನಲ್ಲಿ ಕಲೆಹಾಕಲಾಯಿತು. ಮುಂದೆ ನಡೆಯತೊಡಗಿದ ಅನಾಹುತಗಳ ದಾಖಲೆಗಳಿಗೆ ಈ ಗಣತಿಯೇ ಆರಂಭವೆಂದೂ ಬೇಕಿದ್ದರೆ ಹೇಳಬಹುದು. ಈ ದಾಖಲೆಗಳ ಮೂಲಕವೇ ಆ ಸಮಾಜವು ತನ್ನೊಳಗಿನ ಬಂಡುಕೋರರನ್ನು, ಬಹಿಷ್ಕೃತರನ್ನು, ದಲಿತ-ದಮನಿತರನ್ನು, ಅಪರಾಧಿಗಳನ್ನು, ಭಿನ್ನಮತೀಯರನ್ನು,ವಿರೋಧಿಗಳನ್ನು ಹೇಗೆ ಹತೋಟಿಯಲ್ಲಿಟ್ಟುಕೊಂಡು ನಿರ್ವಹಿಸಬೇಕೆಂಬ ಬಗ್ಗೆ ತಿಳಿಯುವ ಪ್ರಯತ್ನ ಮಾಡುತ್ತಿತ್ತು.

ಮತ್ತಷ್ಟು ಓದು »

24
ಜುಲೈ

ತೂಕಡಿಸಿ ತೂಕಡಿಸಿ ಬೀಳದಿರು ಅಣ್ಣ …ನಮ್ಮ ಅಣ್ಣ….ಸಿದ್ರಾಮಣ್ಣ….!!

– ರಾಘವೇಂದ್ರ ನಾವಡ

Wake Up Sidಇತ್ತೀಚಿನ ಸಿದ್ರಾಮಣ್ಣನವರನ್ನು ನೋಡುತ್ತಿದ್ದರೆ, ನನಗೆ ಒಮ್ಮೊಮ್ಮೆ ಅನುಮಾನಗಳು ಏಳುತ್ತವೆ! ಸಿದ್ರಾಮಣ್ಣನಲ್ಲಿ ಏನಾದರೂ ಕು೦ಭಕರ್ಣನ ಆತ್ಮ ಸೇರಿಬಿಟ್ಟಿದೆಯೇ? ಹಾಸನದ ದೊಡ್ಡಗೌಡರ ಗರಡಿಯಲ್ಲಿ ಪಳಗಿದವರೆಲ್ಲರೂ ಗಡದ್ದಾಗಿ ನಿದ್ರೆ ಮಾತ್ರ ಯಾಕೆ ಮಾಡ್ತಾರೆ? ದೊಡ್ಡ ಗೌಡರನ್ನೇ ತೆಗೆದುಕೊಳ್ಳಿ… ಪ್ರಧಾನಿಯಾಗಿದ್ದಾಗಲ೦ತೂ ಬಿಡಿ..ಸಿಕ್ಕಾಪಟ್ಟೆ ಕೆಲಸದ ಟೆನ್ಶನ್.. ಆದರೆ ಪಟ್ಟದಿ೦ದ ಇಳಿದ ೧೯೯೦ ರ ದಶಕದಿ೦ದ ಇಲ್ಲಿಯವರೆವಿಗೂ ಮಧ್ಯದಲ್ಲಿ ಎಲ್ಲಾದರೂ ಅಪರೂಪಕ್ಕೆ ಏಳ್ತಾರೆ! ಗದ್ದಕ್ಕೆ ಕೈಕೊಟ್ಟು ಗಡದ್ದಾಗಿ ನಿದ್ರೆ ಹೊಡಿತಾ ಕೂತು ಬಿಟ್ಟರೆ ಮುಗೀತು.. ಊರ ಗೌಡ ಏಕೆ.. ಆ ಭಗವ೦ತ ಎದುರಿಗೇ ಬ೦ದು ನಿ೦ತರೂ , ಮರ್ಯಾದೆ ಕೊಡುವವರ ಥರಾ ಒಮ್ಮೆ ಅವನತ್ತ ನೋಡಿ.. ಮತ್ತೆ ಕಣ್ಮುಚ್ಚಿ ಬಿಡ್ತಾರೆ! ಮೊನ್ನೆ ಅಧಿವೇಶನದಲ್ಲಿ ನಮ್ಮ ಮಾಜಿ ಮುಖ್ಯಮ೦ತ್ರಿ.. ದೊಡ್ಡಗೌಡರ ಪ್ರೀತಿಯ ಮಗ ಕುಮಾರಣ್ಣ ಅಪ್ಪ೦ದೇ ಶೈಲಿಯಲ್ಲಿ ಗದ್ದಕ್ಕೆ ಕೈಕೊಟ್ಟು ಅಲ್ಲಿಯೇ….. ದೊಡ್ಡಗೌಡರ ದೊಡ್ಡ ಮಗನವರೂ ಹಾಗೆಯೇ… ಹೀಗೆ ಮೊದಲಿನಿ೦ದಲೂ ಇದೇ ಗರಡಿಯಲ್ಲಿಯೇ ಅಣ್ಣತಮ್ಮ೦ದಿರ ಅಕ್ಕಪಕ್ಕವೇ ಬೆಳೆದು, ದೊಡ್ಡಗೌಡರ ಮಾನಸ ಪುತ್ರನೇ ಆಗಿ ಹೋಗಿದ್ದ ಸಿದ್ರಾಮಣ್ಣ, ಗೌಡ್ರ ಗರಡಿಯಿ೦ದ ಹೊರಗೆ ಬ೦ದ ಮೇಲೆ ಆ ದುಷ್ಟಬುಧ್ಧಿಯನ್ನು ಬಿಟ್ಟರೇನೋ ಎ೦ದು ಅ೦ದಾಜಿತ್ತು!

ಹೂ೦ ಹೂ೦.. ಎಲ್ಲಿ೦ದ ಬಿಡೋದು.. ಮುಖ್ಯಮ೦ತ್ರಿ ಆಗೋತನಕ ಬಿಟ್ಟಿದ್ರೇನೋ! ಒಮ್ಮೆ ಪಟ್ಟದ ಮೇಲೆ ಕುಳಿತರು ನೋಡಿ.. ಅಲ್ಲಿ೦ದ ಕು೦ಭಕರ್ಣನ ಅಪರಾವತಾರವೇ ಆಗಿಹೋಗಿದ್ದಾರೆ!!

ಮತ್ತಷ್ಟು ಓದು »

23
ಜುಲೈ

ಎಲ್ಲಾ ಅನಿಷ್ಟಗಳಿಗೂ ಶನೀಶ್ಚರ ಕಾರಣನಲ್ಲ!

– ರಾಘವೇಂದ್ರ ಅಡಿಗ ಎಚ್ಚೆನ್.

Stop Rapeಮೊನ್ನೆ ತಾನೇ ಕೋಲಾರದಲ್ಲಿ ನಡೆದ ಘಟನೆ.

ಆ ಮನೆಯಲ್ಲಿನ ಎರಡರಿಂದ ಎರಡೂವರೆ ವರ್ಷಗಳಿರಬಹುದಾದ ಹೆಣ್ಣು ಮಗುವೊಂದು ಜೋರಾಗಿ ಅಳುತ್ತಲಿತ್ತು. ಮಗುವಿನ ತಾಯಿ ಒಳಗೆಲ್ಲೋ ಇದ್ದವಳು ಬಂದು ನೋಡಿದಾಗ ಮಗುವಿನ ಮೈಮೇಲೆಲ್ಲಾ ಉಗುರಿನಿಂದ ಪರಚಿದಂತೆ ಗಾಯಗಳಾಗಿದ್ದವು. ಆ ತಾಯಿಗೆ ಮಗುವಿನ ಮೇಲೆ ಅತ್ಯಾಚಾರವಾಗಿರುವುದು ಖಚಿತವಾಯಿತು. ಮಗುವನ್ನು ಕೇಳಿದಳು.. “ಕಂದಾ ಏನಾಯ್ತು, ಯಾಕೆ ಅಳ್ತಾ ಇದ್ದೀಯಾ?”

ಮಗು ಮುಗ್ದತೆಯ ದನಿಯಲ್ಲಿ ಹೇಳಿತು, “ಅಮ್ಮಾ… ಅಣ್ಣ ಅಬ್ಬು ಮಾಡಿದ!”

ನಮ್ಮ ಸಾಮಾಜಿಕ ವ್ಯವಸ್ಥೆ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ಇದೊಂದು ನಿದರ್ಶನ. ದೂರದ ದೆಹಲಿಯಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣಗಳಂತಹಾ ಘಟನೆಗಳು ಇಂದು ದಿನನಿತ್ಯವೂ ನಮ್ಮ ರಾಜ್ಯದಲ್ಲಿಯೂ ನಡೆಯುತ್ತಿರುವುದು ಖಂಡಿತವಾಗಿಯೂ ಸುಸಂಸ್ಕೃತಿಗೆ ಹೆಸರಾದ ಕನ್ನಡಿಗರಿಗೆ ಶೋಭಿಸುವ ವಿಚಾರವಲ್ಲ.

ಇಷ್ಟಕ್ಕೂ ನಮ್ಮ ಯುವಜನತೆಯಲ್ಲಿ ಇಂತಹಾ ಕ್ರೌರ್ಯವು ಮೂಡುವಂತಾಗಲು ಮೂಲ ಪ್ರೇರಣೆ ಏನು? ಇಂದಿನ ಕುಟುಂಬದಲ್ಲಿಯೂ, ಮಾದ್ಯಮದಲ್ಲಿಯೂ, ಶಾಲಾ ಪರಿಸರದಲ್ಲಿಯೂ ಗಂಡಸಿಗೆ ಯಾವ ಬಗೆಯ ನೈತಿಕತೆಯ ಸಂದೇಶ ರವಾನಿಸಲಾಗುತ್ತಿದೆ? ಅತ್ಯಾಚಾರ ಪ್ರಕರಣಗಳು ವರದಿಯಾದಾಗ ಮೊದಲಿಗೆ ಎಲ್ಲರ ದೃಷ್ಟಿ ಬೀಳುವುದೂ ಸಹ ಅತ್ಯಾಚಾರಕ್ಕೊಳಗಾದ ಹೆಣ್ಣಿನ ಮೇಲೆ. ಅದಾಕ್ಷಣದಲ್ಲಿ ಅವಳ ಮೇಲೆ ಅನುಕಂಪ, ಕರುಣೆಗಳು ತಾನಾಗಿ ಉಕ್ಕಿ ಹರಿಯುತ್ತದೆ. ಅದೇನೋ ಸರಿಯಾದುದೆ, ಆದರೆ ಇದರ ಫಲಿತವು ಮಾತ್ರ ಶೂನ್ಯ. ಕಾರಣವೇನೆಂದರೆ ಜನರು ಅದಾವುದನ್ನೂ ಸಹ ಗಂಭೀರವಾಗಿ ಪರಿಗಣಿಸುತ್ತಿಲ್ಲ! ಜನರ ಮನಸ್ಸು ಹೃದಯ ಅಷ್ಟೊಂದು ಕಠಿಣವಾಗಿದೆ, ಅಥವಾ ಅವರಿಗೆ ಅದರ ಬಗೆಗೆ ಚಿಂತಿಸಿ ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳುವಷ್ಟು ಸಮಯವಿಲ್ಲ! ಎಲ್ಲಕ್ಕಿಂತ ಮುಖ್ಯವಾಗಿ ಇಂದಿನ ಸಮೂಹ ಮಾದ್ಯಮಗಳು ಅವರನ್ನು ಆ ಮನಸ್ಥಿತಿಗೆ ತಂದು ನಿಲ್ಲಿಸಿವೆ!

ಮತ್ತಷ್ಟು ಓದು »

21
ಜುಲೈ

ಈ ಸಮಸ್ಯೆಗೆ ಉತ್ತರವಿದೆಯೋ ಇಲ್ಲವೋ?

– ರಾಘವೇಂದ್ರ ಸುಬ್ರಹ್ಮಣ್ಯ

Stop Rape(*) ಲೈಂಗಿಕ ಶಿಕ್ಷಣ ಕೊಟ್ರೆ ಅತ್ಯಾಚಾರಗಳು ಕಡಿಮೆಯಾಗುತ್ತವೆ ಅನ್ನೋದನ್ನ ನಾನೊಪ್ಪಲ್ಲ.
(*) ಹುಡುಗೀರು ಗಿಡ್ಡವಾದ, ಬಿಗಿಯಾದ ಉಡುಪು ತೊಡೋದನ್ನ ನಿಲ್ಲಿಸಿದ್ರೆ, ಮೊಬೈಲ್ ಉಪಯೋಗ ಕಡಿಮೆ ಮಾಡಿದ್ರೆ ಅತ್ಯಾಚಾರಗಳು ಕಡಿಮೆಯಾಗುತ್ತವೆ ಅನ್ನೋದನ್ನೂ ನಾನೊಪ್ಪಲ್ಲ.
(*) ಯಾವನೋ ಎರೆಕ್ಷನ್ ತಡೆಯಲಾಗದವ ಮಾತ್ರ ರೇಪ್ ಮಾಡ್ತಾನೆ ಅನ್ನೋದನ್ನೂ ನಾನೊಪ್ಪಲ್ಲ.

ಹೆಣ್ಣು ಬೈಕ್ ಓಡಿಸಿದ್ರೂ ಮರುಳಾಗ್ತಾಳೆ, ಡಿಯೋ ಹಾಕಿದ್ರೂ ಆಕರ್ಷಿತಳಾಗ್ತಾಳೆ, ಹೇರ್ ಜೆಲ್ ಹಾಕಿಯೂ ಹುಡುಗಿಯರನ್ನ ಪಟಾಯಿಸಬಹುದು ಅನ್ನೋ ಮೂರನೇ ದರ್ಜೆಯ ಜಾಹೀರಾತಿನ ಬಗ್ಗೆ ಕಮಕ್-ಕಿಮಕ್ ಎನ್ನದ ನಮ್ಮ ಮಹಿಳಾವಾದಿಗಳು ಹಾಗೂ ಬುದ್ಧಿಜೀವಿಗಳು, ಅತ್ಯಾಚಾರ ನಡೆದಾಗ ಮಾತ್ರ ಬೊಬ್ಬಿರಿಯುವುದನ್ನು ಸ್ವಲ್ಪ ಕಡಿಮೆ ಮಾಡಿದರೆ ನಮ್ಮ ಸಮಾಜ ಉದ್ಧಾರವಾಗುವುದರೆಡೆಗೆ ಮೊದಲ ಹೆಜ್ಜೆ ಇಡಬಹುದೇನೋ. ಇನ್ನು ನಮ್ಮ ಸಿನಿಮಾಗಳೋ, ಅದರ ಸೂಪರ್ ಸ್ಟಾರ್ ಕಪೂರ್, ಖಾನ್ ಮಹಾಶಯರ ಕಥೆಯಂತೂ ಕೇಳುವುದೇ ಬೇಡ. ಸಿನಿಮಾಗಳಲ್ಲಿ ತಮ್ಮ ಮಕ್ಕಳ ವಯಸ್ಸಿನ ಹೆಂಗೆಳೆಯರನ್ನು ಚೀಪ್-ಟ್ರಿಕ್ ಉಪಯೋಗಿಸಿ ಬಲೆಗೆ ಬೀಳಿಸುವುದಲ್ಲದೇ, ಚಡ್ಡಿ-ಬನಿಯಾನ್ ಜಾಹಿರಾತಿನಲ್ಲೂ ಹೆಣ್ಣುಗಳು ತಮ್ಮನ್ನು ಮುತ್ತುವುದರಂತಹ ಸಂದೇಶವನ್ನು ಜನರಿಗೆ ಕೊಡುತ್ತಾರೆ. ಇಂತಹ ಟೀವಿ ಜಾಹೀರಾತುಗಳು, ದ್ವಂದ್ವಾರ್ಥ ಸಂಭಾಷಣೆಯ ಚಿತ್ರಗಳನ್ನು ನೋಡಿ ಬೆಳೆದ ಮಕ್ಕಳು ಇನ್ನೆಂತಹ ಪಾಠ ಕಲಿಯಲು ಸಾಧ್ಯ!? ಸಧ್ಯಕ್ಕೆ ಲೈಂಗಿಕ ಶಿಕ್ಷಣಕ್ಕಿಂತ ಮುಖ್ಯವಾಗಿ ಬೇಕಿರುವುದು, ನಮ್ಮ ಕುಲಗೆಟ್ಟ ಟಿವಿ ಸಿನಿಮಾ ಮಾಧ್ಯಮದ ಮೇಲಿನ ಹಿಡಿತ ಹಾಗೂ ಸ್ವಲ್ಪ ನೈತಿಕತೆಯ ಪಾಠಗಳು.

ಇನ್ನೊಂದು ಮಾತು ತಿಳಿಯೋಣ. ಅತ್ಯಾಚಾರಿಯ ಮನಸ್ಸು ವಿಕೃತಿಯಿಂದ ತುಂಬಿರುವಂತದ್ದು. ಅದೊಂದು ಮಾನಸಿಕ ರೋಗಗಳ ಗೂಡು. ವಿಕ್ಷಿಪ್ತ ವಾಂಛೆಗಳ ಕೂಪ. ಆ ವ್ಯಕ್ತಿಗೆ ‘ಆ ಸಮಯಕ್ಕೆ’ ಏನೋ ಒಂದು ಸಿಕ್ಕಿದರಾಯ್ತು. ಮಗುವೋ, ಹೆಂಗಸೋ, ವೃದ್ಧೆಯೋ ಯಾವುದಾದರೂ ಸರಿ. ಅದು ಸಿಗಲಿಲ್ಲವೆಂದಾದಲ್ಲಿ ಗಂಡಸರ ಮೇಲೂ, ಪ್ರಾಣಿಗಳ ಮೇಲೂ ಏರಿದವರ ಬಗ್ಗೆ ನಾವು ಕೇಳಿದ್ದೇವೆ. ನಿಜವಾದ ಗಂಡಸು ಹೆಣ್ಣಿನ ಮೈಮೇಲೆ ಏರುವುದಿಲ್ಲ. ಮೃಗದಂತೆ ಬಳಸಿ ಬಿಸಾಡುವುದಿಲ್ಲ. ಆದ್ದರಿಂದ ನನ್ನ ಪ್ರೀತಿಯ ಮಹಿಳಾವಾದಿಗಳೇ….ಯಾವನೋ ಒಬ್ಬ ಝಿಪ್ ನಿಲ್ಲದವ ಪ್ಯಾಂಟ್ ಬಿಚ್ಚಿದ್ದಕ್ಕೆ ಇಡೀ ಗಂಡುಕುಲದ ಮೇಲೆ ಹರಿಹಾಯ್ದು, ಮನುಸ್ಮೃತಿಯನ್ನು ಚರ್ಚೆಗೆ ಎಳೆದು ನಿಲ್ಲಿಸುವ ಅಗತ್ಯವಿಲ್ಲ. ಯಾವುದೋ ಒಂದು ಹೆಣ್ಣು ರಾತ್ರಿ ಹನ್ನೆರಡಕ್ಕೆ ತನ್ನ ಗೆಳೆಯನೊಂದಿಗೆ ಮಾತನಾಡುತ್ತಾ ನಿಂತದ್ದಕ್ಕೆ ‘ರಾತ್ರಿ ಹನ್ನೆರಡಕ್ಕೆ ಗಂಡಸಿನೊಡನೆ ಮನೆಯ ಹೊರಗೆ ಇವಳಿಗೇನು ಕೆಲಸ!?’ ಎಂದು ಅನುಮಾನಿಸುವ ಅಗತ್ಯವೂ ಇಲ್ಲ. ಅತ್ಯಾಚಾರಕ್ಕೆ ಹೆಣ್ಣಿನ ಸ್ವಾತಂತ್ರ್ಯಹರಣ ಉತ್ತರವಲ್ಲ. ಹಾಗಂತ ಸ್ವಾತಂತ್ರ್ಯ ಹಾಗೂ ಸ್ವೇಚ್ಛೆಯ ಮಧ್ಯದ ಅಂತರವನ್ನೂ fairer sex ಅರ್ಥೈಸಿಕೊಳ್ಳಬೇಕು.

ಮತ್ತಷ್ಟು ಓದು »