ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು-ಪುಸ್ತಕ ಪರಿಚಯ-೨
– “ನಿಲುಮೆ”ಗಾಗಿ (೧) ಬಾಲಿವುಡ್ ಮತ್ತು (೨) ಜೈಲು ಈ ಎರಡು ಲೇಖನಗಳ ಸಾರಾಂಶ ಮಾಡಿದ್ದು :- ಮು. ಅ . ಶ್ರೀರಂಗ, ಬೆಂಗಳೂರು
ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು-ಪುಸ್ತಕ ಪರಿಚಯ –೧
(೧) ಬಾಲಿವುಡ್
———-
ಮೂಲ ಲೇಖಕರು : ಎಂ. ಕೆ. ರಾಘವೇಂದ್ರ ಕನ್ನಡಕ್ಕೆ : ಅಕ್ಷರ ಕೆ. ವಿ.
ಮುಂಬಯಿಯಲ್ಲಿ ತಯಾರಾಗುವ ಹಿಂದಿ ಭಾಷೆಯ ಚಲನಚಿತ್ರ ಪ್ರಕಾರಕ್ಕೆ ‘ಬಾಲಿವುಡ್’ ಎಂಬ ಹೆಸರನ್ನು ಕೊಡಲಾಗಿದೆ. ಈ ಚಲನಚಿತ್ರಗಳಿಗೆ ಭಾರತದಲ್ಲಿನ ಪ್ರೇಕ್ಷಕರ ಜತೆಗೆ ಏಶಿಯಾ,ಆಫಿಕ್ರಾದಾದ್ಯಂತ ಹರಡಿರುವ ಅಪಾರ ಪ್ರೇಕ್ಷಕ ಸಮೂಹವೇ ಇದೆ. ವದಂತಿಗಳ ಪ್ರಕಾರ (ಅವು ಉತ್ಪ್ರೇಕ್ಷಿತ ವಾಗಿರಲೂಬಹುದು) ಜೋಸೆಫ್ ಸ್ಟಾಲಿನ್ ಮತ್ತು ಮಾವೊತ್ಸೆತುಂಗರಂಥವರೂ ತಮ್ಮ ತಮ್ಮ ‘ ಕಾಲಗಳಲ್ಲಿ ಬಾಲಿವುಡ್ಡಿನ ಚಿತ್ರಗಳ ಭಕ್ತರಾಗಿದ್ದರಂತೆ! ಮಾವೋ ಅವರು ರಾಜಕಪೂರನ “ಆವಾರಾ” ವನ್ನು ನಲವತ್ತು ಬಾರಿ ನೋಡಿದ್ದರಂತೆ!
ಬಾಲಿವುಡ್ ಚಿತ್ರಗಳ ಕೆಲವು ಲಕ್ಷಣಗಳನ್ನು ಬಹುಶಃ ಈ ರೀತಿ ಪಟ್ಟಿಮಾಡಬಹುದು.
(೧) ರಂಜನೆ
(೨) ಸಾವಿನ ಅಂಚಿನಲ್ಲಿರುವ ಶ್ರೀಮಂತ ವಿಧವೆ ಸಾವನ್ನು ಎದುರುನೋಡುತ್ತ ಮುಂಬರುವ ಭಾವುಕ ಉತ್ತುಂಗಕ್ಕೆ ಕಾರಣಲಾಗುವುದು
(೩) ತನ್ನಪ್ಪನ ಸಾವಿಗೆ ಕಾರಣನಾದ ಖಳನಾಯಕನಿಗೆ ಪ್ರತೀಕಾರಮಾಡಲು ಕಾಯುತ್ತಿರುವ ನಾಯಕ
(೪) ಹುಟ್ಟುವಾಗಲೇ ಸಂತತ್ವವನ್ನು ಪಡೆದ ಸಂತರು
(೫) ಯಾವಾಗಲೂ ಶೋಕದಲ್ಲೇ ಮುಳುಗಿರುವ ವಿಧವೆಯರು
(೬) ಗೃಹಿಣಿಯರಾಗಲು ಸಾಧ್ಯವಾಗದ ವೇಶ್ಯೆಯರು.
ಹಾಡು ಮತ್ತು ನರ್ತನಗಳ ಮೇಲೆ ಬಾಲಿವುಡ್ ನ ಅವಲಂಬನೆಯಂತೂ ತುಂಬ ಜನಜನಿತವಾದ ಸಂಗತಿ. ಹಾಡು,ಕುಣಿತದ ವಿಧಾನಗಳಲ್ಲಿ ಈಗ ಸಾಕಷ್ಟು ಬದಲಾವಣೆಗಳು ಸಂಭವಿಸಿವೆ. ಆಧುನಿಕ ಕಾಲದ ಹಲವಾರು ಚಿತ್ರಗಳಲ್ಲಿ ಒಂದೇ ಹಾಡಿನ ಎರಡು ಚರಣಗಳನ್ನು ಎರಡು ವಿಭಿನ್ನ ಭೂಭಾಗಗಳಲ್ಲೇ ನಡೆದಂತೆ ತೋರಿಸುವುದೂ ಇಲ್ಲಿ ಸಾಧ್ಯವಿದೆ. ಇದರ ಜತೆಗೆ ಭವಿಷ್ಯ ಸೂಚನಾ ಘಟನೆಗಳೂ ಹಠಾತ್ತನೆ ಸಂಭವಿಸುವ ಕಾಕತಾಳೀಯ ಸನ್ನಿವೇಶಗಳು ಜತೆಗೆ ಇನ್ನೂ ಹತ್ತಾರು ತಂತ್ರಗಳೂ ಕೂಡಿ ಈ ಚಿತ್ರಗಳ ಕಟ್ಟಡವು ಎಲ್ಲ ರೀತಿಯ ಅಂಶಗಳನ್ನೂ ಕೂಡಿಸಿಕೊಂಡಿರುವ ತೇಪೆಯಂತಾಗುತ್ತಿದೆ.ಬಾಲಿವುಡ್ ಗೆ ಹೋಲಿಸಿದರೆ ತುಂಬ ಈಚಿನದೆಂದು ಹೇಳಬಹುದಾದ ‘ಕಲಾತ್ಮಕ’ ಚಲನ ಚಿತ್ರಗಳ ಒಂದು ಧಾರೆಯೂ ಭಾರತದಲ್ಲಿ ಇದೆ. ತನ್ನ ಸತ್ವದಲ್ಲಿ ಐರೋಪ್ಯ ಮಾದರಿಗೆ ಹೆಚ್ಚು ಸಮೀಪವಾಗಿರುವ ಈ ಸಂಪ್ರದಾಯವು ಬಂಗಾಳಿ ನಿರ್ದೇಶಕ ಸತ್ಯಜಿತ್ ರಾಯ್ ಅವರ ಬಳಿಕ ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ.
ಭಾರತದ ಮೂಕಿಯುಗದ ಬಹುಪಾಲು ಚಿತ್ರಗಳು ಈಗ ನಷ್ಟವಾಗಿದೆ. ಲಭ್ಯವಿರುವ ಚಿತ್ರಗಳಲ್ಲಿ ೧೯೨೦ರ ದಶಕದ ಕೆಲವು ತುಣುಕುಗಳಿದ್ದು ಅವು ಅಚ್ಚರಿಯಾಗುವಷ್ಟು ವಾಸ್ತವವಾದಿ ಗುಣವನ್ನು ಕಾಣಿಸುವಂತಿದೆ. ಬಾಬುರಾವ್ ಪೇಂಟರ್ ಅವರ ‘ಮುರಳೀವಾಲಾ’ (೧೯೨೭) ಚಿತ್ರ ಕೃಷ್ಣನ ಬಾಲ್ಯವನ್ನು ಕುರಿತದ್ದು. ಈಗ ಲಭ್ಯವಾಗಿರುವ ಈ ಚಿತ್ರದ ನಲವತ್ತು ನಿಮಿಷಗಳ ತುಣುಕಿನಲ್ಲಿ ಕೃಷ್ಣ ಮತ್ತು ಅವನ ಗೆಳೆಯರು ಸ್ಥಳೀಯ ಜನಗಳೊಂದಿಗೆ ನಡೆಸುವ ತುಂಟಾಟಗಳು, ಅದನ್ನು ನಿಯಂತ್ರಿಸಲಾಗದ ಯಶೋದಯ ಅಸಹಾಯಕತೆಯೂ ಚಿತ್ರಿತವಾಗಿದೆ. ಕೃಷ್ಣನ ಗೆಳೆಯರ ಪಾತ್ರಕ್ಕೆ ಈ ಚಿತ್ರದ ನಿರ್ದೇಶಕರು ಹಳೆಯ ಕೊಳೆಯ ಬಟ್ಟೆಗಳನ್ನು ಧರಿಸಿರುವ ಸ್ಥಳೀಯ ಮಕ್ಕಳನ್ನೇ ಬಳಸಿಕೊಂಡಿದ್ದಾರೆ. ಅಂಥ ಬಟ್ಟೆ ತೊಟ್ಟ ಮಕ್ಕಳು ಮಹಾರಾಷ್ಟ್ರದ ಗ್ರಾಮೀಣ ಭಾಗಗಳಲ್ಲಿ ಇವತ್ತಿಗೂ ಕಾಣಸಿಗಬಹುದೆನ್ನುವಷ್ಟು ಆ ಪಾತ್ರಗಳು ವಾಸ್ತವಿಕವಾಗಿವೆ. ಯಶೋದೆಯ ಮನೆಯೂ ಮಸಿ ಹಿಡಿದು ಇಕ್ಕಟ್ಟಾಗಿರುವ ಒಂದು ಗುಡಿಸಲಾಗಿದ್ದು ಅದರ ಅಡಿಗೆ ಮನೆಯಿಂದ ಸದಾ ಹೊಗೆ ಏಳುತ್ತಲೇ ಇರುತ್ತದೆ. ಈ ಚಿತ್ರವನ್ನು ‘ಪಥೇರ್ ಪಾಂಚಾಲಿ’ಯ ಮುನ್ಸೂಚಕವೆಂದು ಭಾವಿಸಲ್ಲಿಕ್ಕೆ ಇಲ್ಲಿ ಆಧಾರಗಳಿವೆ.
ಶಬ್ದ ಚಿತ್ರಗಳ ಯುಗ ಆರಂಭಗೊಂಡ ಬಳಿಕ ಬಾಲಿವುಡ್ ಇಂಥ ವಾಸ್ತವ ಮೀಮಾಂಸೆಯನ್ನು ಉದ್ದೇಶಪೂರ್ವಕವಾಗಿಯೇ ಕಳೆದುಕೊಂಡಿತು. ಸ್ವತಃ ಬಾಬುರಾವ್ ಪೇಂಟರ್ ಅವರ ಆ ಮೇಲಿನ ಚಿತ್ರಗಳು ‘ಮುರಳೀವಾಲಾ’ದ ಹಿಂದಿರುವ ದರ್ಶನವನ್ನು ಕೈ ಬಿಟ್ಟು ಮತ್ತೆ ಪರಿಚಿತವಾದ ಬಾಲಿವುಡ್ ನ ಮಾದರಿಗಳಿಗೇ ಮರಳಿಕೊಂಡಿವೆ. ೧೯೪೭ರಲ್ಲಿ ಸ್ವಾಂತಂತ್ರ್ಯ ಬಂದ ನಂತರ ಬಾಲಿವುಡ್ ‘ರಾಷ್ಟ್ರೀಯತೆಯ ಹಂಬಲ’ಗಳನ್ನುಳ್ಳ ಚಿತ್ರಗಳನ್ನು ನಿರ್ಮಿಸಲಾರಂಭಿಸಿತು. ಆಗ ಚಲನಚಿತ್ರವೆಂಬುದು ಇಡೀ ಉಪಖಂಡವನ್ನು ಪ್ರಭಾವಿಸಬಲ್ಲ ಏಕೈಕ ಮಾಧ್ಯಮವಾಗಿದ್ದರಿಂದ ರಾಷ್ಟ್ರಾದ್ಯಂತ ವ್ಯಾಪಕವಾಗಿದ್ದ ಸೆಕ್ಯುಲರ್ ಆಶಾವಾದವೊಂದಕ್ಕೆ ಪ್ರತಿಸ್ಪಂದಿಯಾಗಿ ಕೆಲಸ ಮಾಡತೊಡಗಿದವು. (ಉದಾ: ಮೆಹಬೂಬ್ ಖಾನರ ‘ಮದರ್ ಇಂಡಿಯಾ , ೧೯೫೭).
ಸಮಾಜವಾದದ ದಾರಿಯಲ್ಲಿ ಭಾರತ ನಡೆಸಿದ ಸ್ವಲ್ಪ ಮಟ್ಟಿನ ಹೊರಸಂಚಾರವೂ ಕೂಡ ಪರೋಕ್ಷವಾಗಿ ಬಾಲಿವುಡ್ ಚಿತ್ರಗಳಲ್ಲಿ ಸಿನೆಮಾದ ಸಾಮಾಜಿಕ ಕಳಕಳಿಯ ಉದ್ದೇಶಗಳನ್ನು ಉದ್ದೀಪಿಸಿದ ಒಂದು ಅಂಶವಾಯಿತು. ಆದರೆ ಅಂಥ ನಂಬಿಕೆಯು ಈ ಚಿತ್ರ ಗಳಲ್ಲಿ ಬಿಂಬಿತವಾಗಿದ್ದು ಭಿನ್ನ ವರ್ಗ-ಜಾತಿ-ಧರ್ಮಗಳಿಗೆ ಸೇರಿದ ಪಾತ್ರಗಳ ನಡುವಿನ ಕ್ಲಿಷ್ಟ ಪ್ರೇಮ ಪ್ರಸಂಗಗಳ ಮೂಲಕ ಮಾತ್ರ. ಸೋವಿಯತ್ ಒಕ್ಕೂಟದ ಪತನವಾದ ಮೇಲೆ ಮತ್ತು ಭಾರತದಲ್ಲೂ ಆರ್ಥಿಕ ಉದಾರೀಕರಣದ ಪ್ರಕ್ರಿಯೆ ಆರಂಭಗೊಂಡ ನಂತರ ಈ ಚಿತ್ರಕಥನಗಳ ವ್ಯಾಪ್ತಿಯಿಂದ ಸಂಪೂರ್ಣವಾಗಿ ಬಡವರನ್ನೇ ಹೊರಗಿಡುವಂತಹ ಒಂದು ಬೆಳವಣಿಗೆಯೂ ಸಂಭವಿಸಿದಂತೆ ಕಾಣುತ್ತದೆ. “ಹಮ್ ಆಪ್ ಕೆ ಹೈ ಕೌನ್ (೧೯೯೫) ನಂತಹ ಹೊಸ ಬಗೆಯ ಮಸಾಲೆ ಚಿತ್ರಗಳು ಇದಕ್ಕೆ ಉತ್ತಮ ಉದಾಹರಣೆ.
ಬಾಲಿವುಡ್ ನ ಚಿತ್ರಮಾರ್ಗದ ಕಥನ ಸೂತ್ರಗಳು ಪ್ರಭಾವಶಾಲಿಯಾದ ‘ಜಾಗತಿಕ’ ಮಾದರಿಗಳಿಗಿಂತ ತುಂಬಾ ಉತ್ಪ್ರೇಕ್ಷಿತ ಪ್ರಮಾಣದಲ್ಲಿ ಭಿನ್ನವಾಗಿವೆ. ಆ ಮೂಲಕ ಆಧುನಿಕತೆಯನ್ನು ಗ್ರಹಿಸುವ ಅನ್ಯ ಮಾರ್ಗಗಳೂ ಇವೆ ಮತ್ತು ಇಂಥ ಗ್ರಹಿಕೆಗಳು ‘ವಾಸ್ತವ’ವನ್ನು ಅರಿಯುವ ದಿಶೆಯಲ್ಲಿ ತಮ್ಮದೇ ವಿಚಿತ್ರ ಸಂಕೀರ್ಣ ದಾರಿಗಳೂ ಉಂಟೆಂಬುದನ್ನು ಸಾಬೀತುಪಡಿಸಲು ಪ್ರಯತ್ನ ನಡೆಸುತ್ತಲೇ ಇರುತ್ತವೆ.
%%%%%%%%%
ಲೇಖಕರ ಪರಿಚಯ:- ಸಾಹಿತ್ಯ-ಸಿನೆಮಾ ವಿಮರ್ಶಕ ಎಂ. ಕೆ. ರಾಘವೇಂದ್ರ ಅವರು ೧೯೯೬ರಲ್ಲಿ ಅತ್ಯುತ್ತಮ ಚಲನಚಿತ್ರ ವಿಮರ್ಶೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಯುದ್ಧೋತ್ತರ ಜರ್ಮನ್ ಚಿತ್ರ ಕುರಿತು ಅಭ್ಯಾಸಮಾಡಲು ಗಯಟೆ ಇನ್ಸ್ಟಿಟ್ಯೂಟಿನ ಫೆಲೋಶಿಪ್ ಅನ್ನೂ ಹಾಗೂ ಭಾರತದ ಜನಪ್ರಿಯಚಿತ್ರಗಳ ಕಥನ ಕುರಿತು ಸಂಶೋಧನೆ ನಡೆಸಲಿಕ್ಕಾಗಿ ಹೋಮಿ ಭಾಭಾ ಫೆಲೋಶಿಪ್ ಅನ್ನೂ ಪಡೆದ ಇವರು ಭಾರತ ಸೇರಿದಂತೆ ವಿವಿಧ ದೇಶಗಳ ಚಿತ್ರ ಮಾಧ್ಯಮ ಕುರಿತು ಬರಹಗಳನ್ನು ಪ್ರಕಟಿಸಿದ್ದಾರೆ. ಭಾರತದ ಜನಪ್ರಿಯ ಚಿತ್ರಗಳ ಕಥನಮಾರ್ಗ ಕುರಿತ ಇವರ ಪುಸ್ತಕ ‘ನೆರೇಶನ್ ಅಂಡ್ ಮೀನಿಂಗ್ ಇನ್ ಇಂಡಿಯನ್ ಪಾಪ್ಯುಲರ್ ಸಿನೆಮಾ’ಸದ್ಯದಲ್ಲೇ ಪ್ರಕಟವಾಗಲಿದೆ.
——–
(೨) ಜೈಲು
—————
ಮೂಲ ಲೇಖಕರು : ಬ್ಯಾರಿ ಸ್ಯಾಂಡರ್ಸ್ ಕನ್ನಡಕ್ಕೆ : ಜಿ ರಾಜಶೇಖರ
ಜೈಲು ಎಂಬ ಶಬ್ಧವೇ ಭಯಾನಕ. ಜೈಲನ್ನು ಕುರಿತು ಯೋಚಿಸುವುದೂ ಸಹ ನಮ್ಮ ದಿನನಿತ್ಯದ ಬದುಕನ್ನು ಅಸ್ತವ್ಯಸ್ತಗೊಳಿಸುವಷ್ಟು ಕಂಗೆಡಿಸುತ್ತದೆ ಲಿಂಗ,ಜನಾಂಗ,ಅಂತಸ್ತು,ವರ್ಗಗಳನ್ನೂ ಮೀರಿ ಜೈಲು ಎಲ್ಲರಲ್ಲೂ ಭಯಭೀತಿಯನ್ನು ಹುಟ್ಟಿಸುತ್ತದೆ. ಪಶ್ಚಿಮದ ರಾಷ್ಟ್ರಗಳು ತಮ್ಮ ಸಾಂವಿಧಾನಿಕ ಘೋಷಣೆಗಳಲ್ಲಿ ಅನಿರ್ಬಂಧಿತ ವೈಯಕ್ತಿಕ ಸ್ವಾತಂತ್ರ್ಯದ ಭರವಸೆಯನ್ನು ಧಾರಾಳವಾಗಿ ಕೊಡುತ್ತವೆ. ಅದೇ ವೇಳೆಗೆ ಸ್ವಾತಂತ್ರ್ಯವು ಮೇರೆ ಮೀರುವ ಹಾಗೂ ಅರಾಜಕತೆಗೆ ದಾರಿ ಮಾಡಿಕೊಡುವ ಸಂಭಾವ್ಯತೆಯು ರಾಜಕೀಯ ನಾಯಕರಿಗೆ, ಸ್ವಾತಂತ್ರ್ಯದ ಹರಿಕಾರರಾಗಿದ್ದವರಿಗೂ ಮತ್ತು ಬಳಿಕ ಶಾಸಕರಾಗಿರುವವರಿಗೂ ಭಯ ಹುಟ್ಟಿಸುತ್ತದೆ. ಆದ್ದರಿಂದ ತಾವೇ ರೂಪಿಸಿದ ಪೌರಹಕ್ಕು-ಸ್ವಾತಂತ್ರ್ಯಗಳ ಕಾನೂನಿಗೆ ಬಂಧನ ಮತ್ತು ಶಿಕ್ಷೆಗೆ ಸಂಬಂಧಿಸಿದ ತಿದ್ದುಪಡಿಗಳನ್ನು ಸೇರಿಸುತ್ತಾರೆ. ದಕ್ಷತೆಯಿಂದ ಮತ್ತು ಪರಿಣಾಮಕಾರಿಯಾದ ಆಳ್ವಿಕೆ ನಡೆಸಲು ಜೈಲಿನ ಚಿತ್ರ ಮತ್ತು ಶಿಕ್ಷೆಯ ಬೆದರಿಕೆಗಳು ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿರಬೇಕು ಎಂಬ ಸತ್ಯವು ರಾಜಕಾರಣಿಗಳಿಗೆ ಚೆನ್ನಾಗಿ ಗೊತ್ತಿದೆ.
ಅಮೇರಿಕಾದ ಸ್ವಾತಂತ್ರ್ಯದ ಉದಾತ್ತ ಘೋಷಣೆಗೆ ಬೆಂಬಲವಾಗಿರುವುದು ಅಮೇರಿಕಾದ ಭಯಾನಕತೆ. ಯಾವುದೇ ಸಮಾಜದಲ್ಲಿ ಪ್ರಜೆಯೊಬ್ಬ ಮಾಡಬಹುದಾಗಿರುವ ಅವಕಾಶಗಳಿಗಿಂತ ,ಆತ ಏನು ಮಾಡಕೂಡದು ಎಂಬುದರ ಪಟ್ಟಿಯೇ ದೊಡ್ಡದಾಗಿರುತ್ತದೆ. ಅಮೇರಿಕಾದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಬೀದಿಗಳಿಂದ ಜನರನ್ನು ಅನಾಮತ್ತಾಗಿ ಸೆರೆಹಿಡಿದು ಅವರನ್ನು ಅಪರಾಧಿಗಳನ್ನಾಗಿ ಪರಿವರ್ತಿಸುತ್ತದೆ. ಆದರೆ ಹೀಗೆ ಸೆರೆಹಿಡಿಯಲ್ಪಟ್ಟವರಲ್ಲಿ ಹೆಚ್ಚಿನವರು ವರ್ಣೀಯರು,ಯುವಕರು ಮತ್ತು ಮಾದಕ ದ್ರವ್ಯ ಸೇವನೆಯಂತಹ ಚಿಲ್ಲರೆ ಅಪರಾಧಗಳ ಆರೋಪಿಗಳು. ಅಮೇರಿಕಾದಲ್ಲಿ ವರ್ಣೀಯ ಪ್ರಜೆಯಾಗಿರುವುದೆಂದರೆ ಸಮಾಜದ ಅಂಚಿನಲ್ಲಿರುವುದು ಎಂಬುದು ದಿನೇದಿನೇ ಹೆಚ್ಹು ಹೆಚ್ಹು ನಿಚ್ಚಳವಾಗುತ್ತಿದೆ.
ಅಮೇರಿಕಾದಲ್ಲಿ ಹೊಸ ಶತಮಾನದ ಆರಂಭದಲ್ಲಿ ಜೈಲುಗಳಲ್ಲಿದ್ದ ಜನರ ಒಟ್ಟು ಸಂಖ್ಯೆ ಹತ್ತಿರ ಹತ್ತಿರ ಇಪ್ಪತ್ತು ಲಕ್ಷ. ಅವರಲ್ಲಿ ಶೇಕಡಾ ಎಂಭತ್ತೈದರಷ್ಟು ಗಂಡಸರು. ಕೋರ್ಟ್ ತೀರ್ಪಿಗಾಗಿ ಕಾದಿರುವ ಆರೋಪಿಗಳು,ವಿಚಾರಣಾಪೂರ್ವ ಬಂದಿಗಳು, ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದಿರುವವರು, ಕೋರ್ಟು ಆದೇಶದ ಮೇರೆಗೆ ಹಂಗಾಮಿಯಾಗಿ ಬಿಡುಗಡೆಗೊಂಡಿರುವವರು, ಸುಧಾರಣಾ ಶಿಬಿರಗಳಲ್ಲಿರುವವರು ಹಾಗೂ ಒಂದಲ್ಲ ಒಂದು ಕಾರಣಕ್ಕೆ ಸ್ವಾತಂತ್ರ್ಯಕ್ಕೆ ಎರವಾಗಿರುವವರು(=ದೂರವಾಗಿರುವವರು) ಇವರೆಲ್ಲರನ್ನೂ ಸೇರಿಸಿಕೊಂಡರೆ ಅಮೇರಿಕದ ಬಂಧಿಗಳ ಸಂಖ್ಯೆ ಐವತ್ತು ಲಕ್ಷದಷ್ಟಾಗುತ್ತದೆ. ಅಮೇರಿಕದಲ್ಲಿ ಕರಿಯ ಯುವಕರ ಬಂಧನದ ಪ್ರಮಾಣ,ದಕ್ಷಿಣ ಆಫ್ರಿಕಾದ ವರ್ಣ ಭೇದ ನೀತಿಯ ಆಳ್ವಿಕೆಯ ಅತ್ಯಂತ ಕರಾಳ ದಿನಗಳ ದಾಖಲೆಯನ್ನು ಸಹ ಮೀರಿಸುತ್ತದೆ.
ಯುದ್ಧ ಸಂದರ್ಭಗಳಲ್ಲಿ ಸೈನ್ಯ ಜೈಲು ಶಿಕ್ಷೆಯ ಭಯವಿಲ್ಲದೆ ತನ್ನ ಕಣ್ಣಿಗೆ ಬಿದ್ದುದನ್ನೆಲ್ಲಾ ಧ್ವಂಸಪಡಿಸಬಹುದು. ಜೈಲು ಎಂಬ ಶಬ್ಧವು ಮೊದಲಿಗೆ ಸೈನ್ಯದಲ್ಲಿ ಬಳಕೆಗೆ ಬಂದು ನಂತರ ಇಂಗ್ಲಿಷ್ ಭಾಷೆಗೆ ಸೇರಿಕೊಂಡಿತು. ಯುದ್ಧವು ಮುಗಿದ ಬಳಿಕ ವಿಜಯೀ ರಾಷ್ಟ್ರಗಳು ನಿರ್ವಹಿಸುವ ಕಟ್ಟಕಡೆಯ ಕರ್ತವ್ಯವೆಂದರೆ, ಯುದ್ಧಾಪರಾಧಿಗಳನ್ನು ಜೈಲಿಗೆ ಕಳುಹಿಸುವುದು. ಜೈಲು ಎಂಬುದು ಯುದ್ಧದ ಕಟ್ಟಕಡೆಯ ಪ್ರಕಟಣೆ ಮತ್ತು ಶಾಂತಿಯ ಮೊದಲ ಹೆಜ್ಜೆ. ಜೈಲುಗಳ ಸಂಖ್ಯೆ ದೊಡ್ಡದಾಗಿದ್ದರೆ ಪ್ರಜೆಗಳಿಗೆ ಅಷ್ಟರಮಟ್ಟಿಗೆ ತಾವು ಸುರಕ್ಷಿತರು ಎನಿಸುತ್ತದೆ. ಕಾರಣವೇನೆಂದರೆ ಅವರ ಕಲ್ಪನೆಗೆ ಬಂಧನ ಹಾಕಲಾಗಿದೆ. ಅವರಿಗೇ ಗೊತ್ತಾಗದಂತೆ ಅವರಲ್ಲಿ ಅಪರಾಧಿ ಮನೋಧರ್ಮವನ್ನು ಹುಟ್ಟುಹಾಕಿ ವಸ್ತುಶಃ ಅವರನ್ನು ಜೈಲುವಾಸಿಗಳನ್ನಾಗಿಯೇ ಮಾರ್ಪಡಿಸಲಾಗಿದೆ.
ಜೈಲುವಾಸದ ಅನುಭವವನ್ನು ತಮ್ಮ ಸ್ವಂತ ವ್ಯಕ್ತಿತ್ವದ ಭಾಗವನ್ನಾಗಿ ಮಾಡಿಕೊಂಡವರು ಮಹಾತ್ಮ ಗಾಂಧಿ ಮತ್ತು ನೆಲ್ಸನ್ ಮಂಡೇಲಾ . ಅವರಿಬ್ಬರೂ ಜನರ ಮನಸ್ಸಿನಲ್ಲಿ ನೆಟ್ಟಿರುವ ಜೈಲುಗಳ ಭಯವನ್ನು ಹೋಗಲಾಡಿಸಲು ಜೈಲನ್ನೆ ತಮ್ಮ ಮನೆಯನ್ನಾಗಿ ಮಾಡಿಕೊಂಡರು. ತನ್ನ ದೀರ್ಘ ಜೈಲು ವಾಸದಿಂದ ಬಿಡುಗಡೆಗೊಂಡ ದಿನ ಬೆಳಗ್ಗೆ ಮಂಡೇಲಾರನ್ನು ಜೋಹಾನ್ಸ್ ಬರ್ಗ್ ನಲ್ಲಿ ಜನ ಸ್ವಾಗತಿಸಿದ್ದನ್ನು ನೋಡಿದರೆ ಅವರ ಗಡಿಪಾರು ಮತ್ತು ಬಂಧನಗಳು ದೇಶದ ಜನರನ್ನು ಸಂಘಟಿಸುವ ಕೇಂದ್ರವೂ,ಶಕ್ತಿಯೂ ಆಗಿ ಮಾರ್ಪಟ್ಟಿದ್ದನ್ನು ಅದು ಸ್ಪಷ್ಟವಾಗಿ ಕಾಣಿಸಿಕೊಟ್ಟಿತು.ಸಮಕಾಲೀನ ಬದುಕಿನ ಇನ್ನೊಂದು ಮಗ್ಗುಲಲ್ಲೇ ಮಂಡೇಲಾ ಮತ್ತು ಗಾಂಧಿಯವರ ಅನುಭವ, ಕಾಣ್ಕೆಗಳ ವಿಕಾರವಾದ ಪ್ರತಿಬಿಂಬ ಕೇಡಿ ತಂಡಗಳ ಸದಸ್ಯರಲ್ಲಿ ಒಡಮೂಡಿದೆ. ತಮ್ಮ ಕೇರಿಗಳ ಜನರ ಗೌರವಪಡೆದುಕೊಳ್ಳಲು ಜೈಲುವಾಸ ಕಠಿಣವಾಗಿದ್ದಷ್ಟೂ ಕೇಡಿಗಳಿಗೆ ಗೌರವವೂ ಜಾಸ್ತಿ. ಆಧುನಿಕ ಜಗತ್ತಿನಲ್ಲಿ ಜೈಲು ಎಂಬುದು ಕೇಡಿಯ ವಿಳಾಸದ ಒಂದು ಸಾಲು. ಅವನಿಗೆ ಅಗತ್ಯವಾಗಿ ಇರಲೇಬೇಕಾದ ತರಬೇತಿಯ ಅನುಭವ.
%%%%%%%%
ಲೇಖಕರ ಪರಿಚಯ :- ಕ್ಯಾಲಿಫೋರ್ನಿಯಾದ ಕ್ಲಾರ್ಮಂಟ್ ಕಾಲೇಜಿನಲ್ಲಿ ಇಂಗ್ಲಿಷ್ ಮತ್ತು ಬೌದ್ಧಿಕ ಇತಿಹಾಸಗಳಲ್ಲಿ ಪ್ರಾಧ್ಯಾಪಕರು. ೧೯೮೫ ರಿಂದ ೯೦ರವರೆಗೆ ಪೀಟರ್ ಎಸ್ ಮತ್ತು ಗ್ಲೋರಿಯಾ ಗೋಲ್ಡ್ ಛೇರ್ ನ ಗೌರವ ಪಡೆದಿದ್ದರು. ಇವರ ಪ್ರಮುಖ ಪುಸ್ತಕಗಳು-ಎ ಈಸ್ ಫಾರ್ ಆಕ್ಸ್:ವಯಲೆನ್ಸ್,ಎಲೆಕ್ಟ್ರಾನಿಕ್ ಮೀಡಿಯಾ,ಎಂಡ್ ದಿ ಸೈಲೆನ್ಸಿಂಗ್ ಆಫ್ ರಿಟರ್ನ್ ವರ್ಡ್, ದಿ ಪ್ರೈವೇಟ್ ಡೆಥ್ ಆಫ್ ಪಬ್ಲಿಕ್ ಡಿಸ್ಕೋರ್ಸ್, ಸಡನ್ ಗ್ಲೋರಿ:ಲಾಫ್ಟರ್ ಆಸ್ ಸಬ್ ವರ್ಸಿವ್ ಹಿಸ್ಟರಿ.
ಈ ಪುಸ್ತಕ ಪರಿಚಯದ ಮುಂದಿನ ಭಾಗದಲ್ಲಿ (೧) ದಾಖಲೆಗಳು ಮತ್ತು (೨) ಭೂಪಟಗಳು ಕುರಿತಾದ ಲೇಖನಗಳ ಸಾರಾಂಶ
———————————————————————————————————————————-
ಚಿತ್ರ ಕೃಪೆ : http://www.aksharaprakashana.com
Trackbacks & Pingbacks