ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು-ಪುಸ್ತಕ ಪರಿಚಯ –೧
ವಿನಯಲಾಲ್ ಮತ್ತು ಅಶೀಶ್ ನಂದಿಯವರ ಸಂಪಾದಕತ್ವದಲ್ಲಿ “ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು” ಎಂಬ ಪುಸ್ತಕವನ್ನು ಅಕ್ಷರ ಪ್ರಕಾಶನದವರು (ಹೆಗ್ಗೋಡು ಸಾಗರ; ಮೊದಲ ಮುದ್ರಣ ೨೦೦೭ ಮತ್ತು ಎರಡನೇ ಮುದ್ರಣ ೨೦೧೦) ಪ್ರಕಟಿಸಿದ್ದಾರೆ. ಈ ಪುಸ್ತಕದ ಬಗ್ಗೆ ಪ್ರಕಾಶಕರು ‘ಬೌದ್ಧಿಕ ಸಿದ್ಧ ಮಾದರಿಗಳ ನಿರಾಕರಣೆ’ ಎಂಬ ಶೀರ್ಷಿಕೆಯಡಿಯಲ್ಲಿ ಹೇಳಿರುವುದನ್ನು ಅವರದೇ ಮಾತುಗಳಲ್ಲಿ ಈ ರೀತಿ ಸಂಕ್ಷೇಪಿಸಿ ಹೇಳಬಹುದು.”… ಕನ್ನಡ ಅಕಾರಾದಿಯಲ್ಲಿ ಜೋಡಿಸಲ್ಪಟ್ಟಿರುವ ಈ ಪರಿಭಾಷಾ ಕೋಶದಲ್ಲಿ (ಅಂದರೆ ಪ್ರಸ್ತುತ ಪುಸ್ತಕದಲ್ಲಿ) ‘ಅರ್ಥಶಾಸ್ತ್ರ’ ದಿಂದ ‘ಬಾಲಿವುಡ್’ ನವರೆಗೆ, ‘ಇಸ್ಲಾಂ’ನಿಂದ ‘ಕೋಕಾಕೋಲಾ’ವರೆಗೆ, ‘ಮಾರ್ಕ್ಸ್ ವಾದ’ ದಿಂದ, ‘ಯಾಹೂ(yahoo)’ ,ದವರೆಗೆ ನಾನಾ ವಿಚಾರ ಕುರಿತ ಕಿರುಲೇಖನಗಳಿವೆ…ಆಧುನಿಕ ಜೀವನಕ್ರಮದಲ್ಲಿ ನಾವಿವತ್ತು ಹಲವು ಪದಗಳನ್ನೂ ಮತ್ತು ಆ ಪದಗಳೊಂದಿಗೆ ಅಂತರ್ಗತವೂ ಆಗಿರುವ ವಿಚಾರಗಳನ್ನು ‘ಸಾಮಾನ್ಯಜ್ಞಾನ’ವಾಗಿ ತುಂಬ ಸಹಜವೂ ಪರಿಚಿತವೂ ಎಂದು ಭಾವಿಸಿ ಸ್ವೀಕರಿಸಿದ್ದೇವೆ. ಉದಾಹರಣೆಗೆ ಶಿಕ್ಷಣ,ಬಡತನ,ಅಥವಾ ಅರ್ಥಶಾಸ್ತ್ರ ಮೊದಲಾದವು…ಈಗ ಈ ಪದವು ಚಾಲ್ತಿಯಲ್ಲಿ ಪಡೆದಿರುವ ಅರ್ಥವನ್ನಾಗಲೀ …ಆ ವ್ಯಾಖ್ಯಾನದ ಹಿನ್ನೆಲೆಯಲ್ಲಿರುವ ಸಿದ್ಧಾಂತವನ್ನಾಗಲಿ ಮೂಲಭೂತವಾಗಿಯೇ ಪ್ರಶ್ನಿಸುವ ಸಾಹಸಕ್ಕೆ ನಾವು ಕೈ ಹಾಕುವುದು ಅಪರೂಪ.
… ಬದಲು ಬದಲಾಗುತ್ತಲೇ ಇರುವ ಬೌದ್ಧಿಕ ಜಗತ್ತಿನೊಳಗೊಂದು ಕಿರುನೋಟವನ್ನು ಕೊಡುವ ಮೂಲಕ ಓದುಗರಿಗೆ ತುಂಬ ಪರಿಚಿತವೆಂದು ಭಾವಿತವಾದದ್ದು, ಎಷ್ಟು ಅಪರಿಚಿತವೆಂಬುದನ್ನೂ ಹಾಗೂ ಅಪರಿಚಿತವೇ ಎಷ್ಟು ಪರಿಚಿತವೆಂಬುದನ್ನೂ ಕಾಣಿಸಿ ಕೊಡುವ ಒಂದು ಪ್ರಯತ್ನ ಇಲ್ಲಿದೆ. ಅಲ್ಲದೆ ಇಲ್ಲಿ ಸಂಕಲಿತವಾಗಿರುವ ಎಲ್ಲ ಲೇಖನಗಳಲ್ಲಿ ಶೈಕ್ಷಣಿಕ ಶಿಸ್ತಿನ ಬಿಗಿಯಾದ ಜಡ ನಿರೂಪಣೆಗಿಂತ ಹಗುರವಾದ ಪ್ರಬಂಧರೂಪಿ ಲಾಲಿತ್ಯದ ಶೈಲಿ ಕಾಣಿಸಿಕೊಂಡಿರುವುದು ಕೂಡಾ ಇಂಥ ಪ್ರಯತ್ನದ ಒಂದು ಅಂಗವಾಗಿಯೇ …ಈ ಎಲ್ಲ ಲೇಖನಗಳು,ತಮ್ಮ ವಸ್ತು -ವಿನ್ಯಾಸಗಳೆರಡರಲ್ಲೂ ಪಾಶ್ಚಿಮಾತ್ಯ ರೂಢಿಯಲ್ಲಿ ಯಾವುದನ್ನು ‘ಅಕೆಡೆಮಿಕ್ ಬರಹ‘ ಎನ್ನಲಾಗುತ್ತದೆಯೋ ಅದಕ್ಕಿಂತ ಭಿನ್ನವಾದ ಹೊಸತನಕ್ಕಾಗಿ ಹವಣಿಸುತ್ತಿವೆ …”
ಇನ್ನು ನಾನು ಮಾಡಲು ಪ್ರಯತ್ನಿಸಿರುವ ಈ ಪುಸ್ತಕದ ಪರಿಚಯದ ರೀತಿಯ ಬಗ್ಗೆ ಒಂದೆರೆಡು ಮಾತುಗಳು. ‘ನಿಲುಮೆ’ಯ ಓದುಗರಲ್ಲಿ ಹಲವರು ಈಗಾಗಲೇ ಈ ಪುಸ್ತಕವನ್ನು ಓದಿರಬಹುದು ಮತ್ತು ಕೆಲವರ ಗಮನಕ್ಕೆ ಬರದೆ ಹೋಗಿರಬಹುದು. ಪ್ರಸ್ತುತ ಪುಸ್ತಕದಲ್ಲಿರುವ ಲೇಖನಗಳ ಅರ್ಥಕ್ಕೆ ಭಂಗ ಬರದಂತೆ ಅವುಗಳ ‘ಸಾರಾಂಶ’ವನ್ನು ನೀಡಲು ನಾನು ಪ್ರಯತ್ನಿಸಿದ್ದೇನೆ.ಈ ಲೇಖನಗಳಲ್ಲಿ ಆಗಾಗ ‘ನಾನು’, ‘ನಾವು’ ಎಂಬ ಪದಗಳು ಬರುತ್ತವೆ. ಅವು ಆ ಮೂಲ ಲೇಖಕರೇ ಹೊರತು ಸಾರಾಂಶ ಬರೆದಿರುವ ”ನಾನಲ್ಲ” ಎಂಬುದನ್ನು ಓದುಗರು ಗಮನಕ್ಕೆ ತರಲು ಇಚ್ಚಿಸುತ್ತೇನೆ.
[ಈ ಲೇಖನಗಳನ್ನು ಬರೆದ ಸಂದರ್ಭ ಮತ್ತು ವರ್ಷಗಳನ್ನು ಪುಸ್ತಕದಲ್ಲಿ ಸೂಚಿಸಿಲ್ಲ. ಆದ್ದರಿಂದ ಇಲ್ಲಿ ಪ್ರಸ್ತಾಪಿಸಿರುವ ವಿಷಯಗಳಲ್ಲಿನ ಪ್ರಸ್ತುತತೆ/ಅಪ್ರಸ್ತುತತೆಯ ಬಗ್ಗೆ (ಕೊನೆಯ ಪಕ್ಷ ಕರ್ನಾಟಕ/ ಭಾರತದ ಇತರೆ ರಾಜ್ಯಗಳಿಗೆ/ಭಾರತಕ್ಕೆ ಸಂಬಂಧಿಸಿದಂತೆ ಓದುಗರಿಗೆ ಗೊಂದಲ ಮೂಡಬಹುದು).’ಹೊಸ ಶತಮಾನಕ್ಕೆ ……… ‘ ಪುಸ್ತಕದಲ್ಲಿರುವ ಲೇಖನಗಳನ್ನು ಬರೆದಿರುವವರಲ್ಲಿ ಒಂದಿಬ್ಬರನ್ನು ಬಿಟ್ಟರೆ ಉಳಿದವರೆಲ್ಲಾ ವಿದೇಶಿಯರು.ಇನ್ನೊಂದಿಬ್ಬರು ವಿದೇಶದ ವಿ ವಿ ಗಳಲ್ಲಿ ಪ್ರಾಧ್ಯಾಪಕರಾಗಿರುವ ಅನಿವಾಸಿ ಭಾರತೀಯರು. ಹೀಗಾಗಿ ಅಂತಹವರ ಲೇಖನಗಳಲ್ಲಿ ಇಂದು ಎಲ್ಲಾ ದೇಶಗಳಲ್ಲಿ ಕಂಡು ಬರುತ್ತಿರುವ ಸಾಮಾನ್ಯವಾದ(general) ಅಂಶಗಳತ್ತ ಗಮನವಿದೆ. ಜತೆಗೆ ಇಂದು ಸಂಪರ್ಕ,ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದ ಅಗಾಧ ಬೆಳವಣಿಗೆಯಿಂದ ಎಲ್ಲಾ ದೇಶಗಳೂ, ಅದರ ಪ್ರಜೆಗಳೂ ಒಂದು ”global village” ಗೆ ಸೇರಿದವರು ಎಂಬ ಒಂದು ಮಾತೂ ಕೇಳಿಬರುತ್ತಿದೆ.ಆದ್ದರಿಂದ ಇಲ್ಲಿನ ಲೇಖನಗಳಲ್ಲಿ ನಮ್ಮ ನಮ್ಮ ಪ್ರಾದೇಶಿಕತೆಗಳಿಗಿಂತ ಆಯಾ ಲೇಖನಗಳ ಹಿಂದಿರುವ ಒಟ್ಟು ಆಶಯವನ್ನು ಗಮನಿಸಬೇಕಾಗುತ್ತದೆ ಎಂದು ನನ್ನ ಅನಿಸಿಕೆ – ಮು. ಅ . ಶ್ರೀರಂಗ] ಇಷ್ಟು ಪ್ರಸ್ತಾವನೆಯ ನಂತರ ಈ ಪುಸ್ತಕ ಪರಿಚಯವನ್ನು ”ಸಕ್ಕರೆ”ಯನ್ನು ಕುರಿತ ಲೇಖನದ ಸಾರಾಂಶದಿಂದ ಪ್ರಾರಂಭಿಸುತ್ತೇನೆ.
—–x —-x—- x —-x —-
ಸಕ್ಕರೆ
ಮೂಲ ಲೇಖಕರು : ಅಶೀಶ್ ನಂದಿ
ಕನ್ನಡಕ್ಕೆ :ಅಕ್ಷರ ಕೆ.ವಿ
೧೯೯೦ರ ದಶಕದ ಆರಂಭದಲ್ಲೊಮ್ಮೆ ಆಗ ಕಲ್ಪನಾಥರಾಯ್ ಅವರು ಬೆಲ್ಲದ ಉತ್ಪಾದನೆಯನ್ನು ನಿಷೇಧಿಸಿ ಆಜ್ಞೆ ಹೊರಡಿಸಿದ್ದರು. ಬೆಳೆಯಲಾಗುವ ಎಲ್ಲ ಕಬ್ಬೂ ಸಕ್ಕರೆಯ ಉತ್ಪಾದನೆಯತ್ತ ಸಾಗಿದರೆ ಸಕ್ಕರೆಯ ಕೊರತೆಯನ್ನು ನೀಗಬಹುದು ಮತ್ತು ಸಕ್ಕರೆಯ ಬೆಲೆಯನ್ನು ನಿಯಂತ್ರಣದಲ್ಲಿಡುವುದು ತಮ್ಮ ಆಶಯವೆಂದು ಆಗ ಆ ಸಚಿವರು ಘೋಷಿಸಿದ್ದರು. ಈ ನಿಷೇಧದ ಆಜ್ಞೆ ಬಹಳ ಕಾಲದವರೆಗೆ ಇರಲಿಲ್ಲ; ತಾತ್ಕಾಲಿಕ ಕ್ರಮವಷ್ಟೇ ಆಗಿತ್ತು. ಜಗತ್ತಿನ ಬಹುತೇಕ ದೇಶಗಳಲೆಲ್ಲ ಈ ಬೆಲ್ಲದ ಆಹಾರ ಪದ್ಧತಿಯು ಸಂಪ್ರದಾಯದಿಂದಲೇ ನಶಿಸಿ ಹೋಗಿದೆ; ಅದು ಉಳಿದಿರುವುದು ನಮ್ಮಲ್ಲಿ ಮಾತ್ರ. ಭಾರತದ ಆಹಾರ ಸಚಿವರು ಮಾಡಬಯಸಿದ್ದ ಬೆಲ್ಲದ ಮೇಲಿನ ಹಲ್ಲೆಯ ಪ್ರಕ್ರಿಯೆಯನ್ನು ಇಂದು ಜಾಗತೀಕರಣಗೊಂಡ ವಿಶ್ವದ ಅರ್ಥವ್ಯವಸ್ಥೆಯು ಸಮ್ಮತಿ ಸಮೇತ ಮುಂದುವರಿಸಿದೆ. ಈಗ ಆ ಕೆಲಸವನ್ನು ದಕ್ಷವಾಗಿ ಮತ್ತು ಸೂಕ್ಷ್ಮವಾಗಿ ಅಂತರಾಷ್ಟ್ರೀಯ ಕಾರ್ಪೋರೇಶನ್ ಗಳೂ ಮತ್ತು ಉದ್ಯಮೀಕರಣಗೊಂಡ ಕೃಷಿ ವ್ಯವಸ್ಥೆಯೂ ಮಾಡಲಿಕ್ಕೆ ತೊಡಗಿಕೊಂಡಿದೆ. ಹಾಗಂತ ಇನ್ನು ಬೆಲ್ಲದ ಮೇಲೆ ನಿಷೇಧ ಹೇರಲಾಗುವುದಿಲ್ಲ; ಬದಲು ಅದನ್ನು ತುಂಬ ಆರೋಗ್ಯಪೂರ್ಣ ಆಹಾರವೆಂದು ಪ್ರಚಾರ ಮಾಡಲಾಗುತ್ತದೆ. ಸಕ್ಕರೆಗೆ ಒಂದು ಪರ್ಯಾಯವೆಂಬಂತೆ ಆಕರ್ಷಕ ಉಪಹಾರಗೃಹಗಳಲ್ಲಿ ಧೀಮಂತರಿಗೆ, ಸುಸಂಸ್ಕೃತರಿಗೆ ಲಭ್ಯವಾಗುತ್ತದೆ. ಸಕ್ಕರೆ ಕಾರ್ಖಾನೆಗಳೇ ಮುಂದೆ ಬೆಲ್ಲವನ್ನೂ ಉತ್ಪಾದಿಸುತ್ತವೆ. ಸಕ್ಕರೆಗಿಂತ ಹೆಚ್ಚು ದುಬಾರಿಯಾದ ರುಚಿಕರ ಕಜ್ಜಾಯವೆಂಬಂತೆ ಮಾರುತ್ತವೆ.
ಈ ನಡುವೆ ಸಾಧಾರಣ ಜನರ ನಿತ್ಯದ ಬದುಕಿನಲ್ಲಿ ಬೆಲ್ಲದ ಸ್ಥಾನವನ್ನು ಸಕ್ಕರೆ ಆಕ್ರಮಿಸಿಕೊಳ್ಳುತ್ತದೆ. ಬೆಲ್ಲ ದುಬಾರಿಯಾಗುತ್ತದೆ. ಜಾಗತಿಕ ಆಹಾರೋದ್ಯಮವು ತನಗೆ ತೋಚಿದ ಉತ್ಪನ್ನಗಳೆಲ್ಲದರ ಜತೆಗೆ ಸಕ್ಕರೆಯನ್ನು ಬೆರೆಸಲಿಕ್ಕೆ ಆರಂಭಿಸಿದೆ. ಟೊಮ್ಯಾಟೋ ಕೆಚಪ್,ಆಲೂ ಉಪ್ಪೆರಿ,ಬ್ರೆಡ್-ಜಾಮ್,ಕೋಕಾಕೋಲಾ,ಪೆಪ್ಸಿಕೋಲಾ ಹೀಗೆ. ಆದ್ದರಿಂದಲೇ ಸಕ್ಕರೆ ಉದ್ಯಮ ಈಗ ಅಭಿವೃದ್ಧಿಯ ಚಟುವಟಿಕೆಯಾಗಿದೆ. ವರ್ಲ್ಡ್ ಬ್ಯಾಂಕಿನಂತ ಜಾಗತಿಕ ಸಂಸ್ಥೆಗಳ ಬೆಂಬಲವಿದೆ. ಸಕ್ಕರೆ ಉದ್ಯಮವನ್ನು ವರ್ಧಿಸಲಿಕ್ಕಾಗಿ ಮಿಲಿಯಾಂತರ ಡಾಲರ್ ಹಣವನ್ನು ಹೂಡಲಾಗುತ್ತಿದೆ.
ಬೆಲ್ಲದ ಉತ್ಪಾದನೆಯೆಂಬುದು ಒಂದು ಗುಡಿ ಕೈಗಾರಿಕೆ. ರಾಷ್ಟ್ರದ ಸಂಪತ್ತನ್ನು ಬೆಳೆಸುವ ಒಂದು ಉದ್ಯಮವೆಂಬ ಹೆಗ್ಗಳಿಕೆ ಅದಕ್ಕಿಲ್ಲ. ಇಂಥ ಯೋಚನಾಕ್ರಮದಿಂದ ಕಳೆದ ಹಲವಾರು ವರ್ಷಗಳಿಂದ ಭಾರತದಲ್ಲಿ ರೈತರು ಕಬ್ಬು ಬೆಳೆಯಲು ಸಾಲ ಪಡೆದರೆ ಸಕ್ಕರೆ ಉತ್ಪಾದನೆಗೇ ಕೊಡಬೇಕು, ಬೆಲ್ಲ ಮಾಡಲು ಕೊಡುವಂತಿಲ್ಲ ಎಂಬ ಷರತ್ತನ್ನು ವಿಧಿಸಲಾಗುತ್ತಿದೆ. ಹಳೆಯ ಕೆಲವು ನಾಗರಿಕತೆಗಳಿಗೆ ಸಕ್ಕರೆ ನಿರ್ಮಿಸುವ ವಿಧಾನ ತಕ್ಕಮಟ್ಟಿಗೆ ಪರಿಚಿತವಾಗಿತ್ತು. ಆದರೂ ಸಹ ಜಗತ್ತಿನ ನಿತ್ಯದ ಆಹಾರ ಕ್ರಮದಲ್ಲಿ ಈ ಬಿಳಿ ಬಣ್ಣದ, ಹರಳಿನ ರೂಪದ, ಸಂಸ್ಕರಿಸಲ್ಪಟ್ಟ ಸಕ್ಕರೆಯ ಪ್ರವೇಶ ರೂಢಿಗೆ ಬರತೊಡಗಿದ್ದು ೧೭ ಮತ್ತು ೧೮ ಶತಮಾನಗಳಷ್ಟು ತಡವಾಗಿ. ಇತಿಹಾಸದಲ್ಲಿ ಒಂದೆಡೆ, ಆಫ್ರಿಕಾದ ಗುಲಾಮರ ವ್ಯಾಪಾರ ಬಿರುಸಾದಂತೆಯೇ ಈ ಸಕ್ಕರೆ ಉದ್ಯಮಕ್ಕೂ ಕುಮ್ಮಕ್ಕು ದೊರಕಿತು. ಸಕ್ಕರೆ ಉದ್ಯಮಕ್ಕೆ ಅಗತ್ಯವಾಗುವ. ಕಡಿಮೆ ಕೂಲಿಯ ಕಾರ್ಮಿಕರು ಗುಲಾಮರ ವ್ಯಾಪಾರದ ಮೂಲಕವೇ ಅಮೇರಿಕಾಕ್ಕೆ-ಮುಖ್ಯವಾಗಿ ಉತ್ತರ ಅಮೇರಿಕಾಕ್ಕೆ ಲಭ್ಯವಾದರು. ಅಮೇರಿಕಾ ಖಂಡದ ಬ್ರಿಟಿಷ್ ವಸಾಹುತುಗಳಲ್ಲಿ ಗುಲಾಮಗಿರಿ ಪದ್ಧತಿಯು ರದ್ದಾದ ಬಳಿಕ ಕೂಡ ಕೆರೆಬಿಯನ್ ದ್ವೀಪದ ಕೆಲವು ಭಾಗಗಳಲ್ಲಿ ಕಬ್ಬನ್ನೇ ಬೆಳೆಯುವಂತೆ ರೈತರನ್ನು ಕೋವಿಯ ಮೊನೆಯ ಬೆದರಿಕೆ ಒಡ್ಡಿ ಒತ್ತಾಯ ಮಾಡಲಾಯಿತು.
ಹೀಗೆ ಸಕ್ಕರೆ ಉತ್ಪಾದನೆಯು ವ್ಯಾಪಕವಾಗುತ್ತ ಹೋದಂತೆ ಅದರ ಬೆಲೆ ಗಣನೀಯವಾಗಿ ಇಳಿಯಿತು. ಇಷ್ಟು ಬೆಳ್ಳಗೂ ಸಿಹಿಯಾಗಿಯೂ ಶುದ್ಧವಾಗಿಯೂ ಇರುವ ಸಕ್ಕರೆಯು ಆರೋಗ್ಯಕ್ಕೆ ಒಳ್ಳೆಯದಾಗಿರಲೇ ಬೇಕು ಎಂಬ ಭಾವನೆಯೂ ಯೂರೋಪಿನಲ್ಲಿ ಆಗಲೇ ಹರಡತೊಡಗಿತ್ತು. ಕ್ರಿ. ಶ ೧೮೧೫ರ ಕಾಲದ ಬ್ರಿಟನ್ನಿನಲ್ಲಿ ಸಕ್ಕರೆಯ ಬಳಕೆಯು ವ್ಯಕ್ತಿಗೆ ಸರಾಸರಿ ವರ್ಷಕ್ಕೆ ೩೩ ಕಿಲೋಗ್ರಾಮುಗಳಷ್ಟು ಏರಿಕೊಂಡಿತು. ಇವತ್ತು ಅಭಿವೃದ್ಧಿಗೊಂಡ ದೇಶಗಳಲ್ಲಿ ಪ್ರತಿ ವ್ಯಕ್ತಿಗೆ ಸಕ್ಕರೆ ಬಳಕೆಯ ಸರಾಸರಿ ಪ್ರಮಾಣವು ವರ್ಷಕ್ಕೆ ೫೫ ಕಿಲೋಗಳಷ್ಟಿದೆ.
ಏಶಿಯಾ ಮತ್ತು ಆಫ್ರಿಕಾದ ಸಮಾಜಗಳಲ್ಲಿ ಬೆಲ್ಲವನ್ನು ಬಡಿದೋಡಿಸಿ ಆಹಾರ ಸಿಹಿಗೊಳಿಸುವ ಮಾಧ್ಯಮವಾಗಿ ಸಕ್ಕರೆಯು ತನ್ನ ಸ್ಥಾನವನ್ನು ಭದ್ರಗೊಳಿಸಿಕೊಂಡಿದ್ದು ೨೦ನೇ ಶತಮಾನದಲ್ಲಿ. ತೀರಾ ಈಚಿನವರೆಗೂ ಭಾರತದ ಕೆಲವು ಭಾಗಗಳಲ್ಲಿ ಚಹಾ ಮಾಡಲು ಬೆಲ್ಲವನ್ನು ಬಳಸುವ ರೂಢಿ ಉಳಿದುಕೊಂಡಿತ್ತು.
ಸಕ್ಕರೆಯ ಇಂಥ ಅಗಾಧ ಆಕ್ರಮಣವನ್ನು ಸಹಿಸಿಕೊಳ್ಳುವಂಥ ರಚನೆಯು ಮನುಷ್ಯ ದೇಹಕ್ಕಿಲ್ಲ. ಇದರಿಂದ ಖಿನ್ನತೆ,ಆತಂಕ,ಉದ್ವೇಗ ಮೊದಲಾದ ಮಾನಸಿಕ ಏರುಪೇರುಗಳು ಸಂಭವಿಸುತ್ತವೆ. ಇವತ್ತಿನ ಪಶ್ಚಿಮದಲ್ಲಿ ವ್ಯಾಪಕವಾಗಿರುವ ಮಾನಸಿಕ ಅಸ್ವಸ್ಥತೆಯ ಏರು ಪ್ರಮಾಣಕ್ಕೆ ಹಾಗೂ ಮಾದಕ ದ್ರವ್ಯಗಳ ವ್ಯಸನಕ್ಕೆ ಪರೋಕ್ಷ ಕಾರಣ ಈ ಎರ್ರಾಬಿರ್ರಿ ಸಕ್ಕರೆಯ ಸೇವನೆಯೂ ಒಂದು. ಜತೆಗೆ ಸುಸ್ತು,ಭಯ ಮತ್ತು ಅಶಕ್ತಿಗಳು ಮತ್ತು ಹಲವು ರೀತಿಯ ಅಲರ್ಜಿಗಳು ಉತ್ಪನ್ನವಾಗುತ್ತದೆ. ಇನ್ನು ಕೆಲವು ರೀತಿಯ ಕ್ಯಾನ್ಸರ್ ಖಾಯಿಲೆಗಳಿಗೆ ಪರೋಕ್ಷವಾಗಿ ಸಕ್ಕರೆಯ ಜನಪ್ರಿಯತೆಯಿಂದ ಉಂಟಾದ ಆಹಾರ ಕ್ರಮದ ಪಲ್ಲಟ ಕಾರಣವಾಗಿದೆ. ಮಧುಮೇಹ ಮತ್ತು ಬೊಜ್ಜಿನ ಖಾಯಿಲೆಗಳು ಸಕ್ಕರೆಯಿಂದಲೇ ನೇರವಾಗಿ ಉಂಟಾಗುತ್ತದೆ ಎಂಬುದು ಇವತ್ತು ಎಲ್ಲರಿಗೂ ಗೊತ್ತಿದೆ. ಅಕಾರಣವಾದ ಹಿಂಸಾ ಪ್ರವೃತ್ತಿಯಂಥ ಸಾಮಾಜಿಕ ರೋಗಗಳಿಗೂ ಸಕ್ಕರೆಗೂ ಈಚೆಗೆ ಸಂಬಂಧಗಳು ಗೋಚರಿಸಲಾರಂಭಿಸಿದೆ. ಹೀಗಾಗಿ ಸಕ್ಕರೆಯ ಅಗಾಧ ಪ್ರಮಾಣದ ಬಳಕೆಯು ಕೇವಲ ಆಧುನೀಕರಣದ ಒಂದು ಸೂಚಕ ಮಾತ್ರವೇ ಅಲ್ಲ, ಪ್ರಾಯಶಃ ಅದು ಆತ್ಮವಿನಾಶದ ಸೂಚಕವೂ ಹೌದು.
ಎರಡು ಶತಮಾನಗಳ ಹಿಂದೊಮ್ಮೆ ಸಕ್ಕರೆಯ ಬೆಂಬಲಿಗರೂ ಬೆಳೆಗಾರರೂ ಕೋವಿಯ ಮೊನೆಯನ್ನು ಮುಂದೊತ್ತಿ ತಮ್ಮ ಬೇಳೆಯನ್ನು ಬೇಯಿಸಿಕೊಂಡಿದ್ದರು. ಅದಕ್ಕಿಂತ ಭಿನ್ನವಾಗಿ ಇವತ್ತು ಏಶಿಯಾ-ಆಫ್ರಿಕಾ-ದಕ್ಷಿಣ ಅಮೇರಿಕಾಗಳ ಸರ್ಕಾರಿ ನೀತಿ ನಿರ್ಮಾತೃಗಳು, ವಿಶ್ವ ಬ್ಯಾಂಕು ಮತ್ತು ಅಭಿವೃದ್ಧಿಪರ ಸಂಘಟನೆಗಳ ಸಹಾಯ ಪಡೆದು ಕಚೇರಿ,ಕಡತಗಳನ್ನು ಮುಂದೊತ್ತುವ ಮೂಲಕ ಅದೇ ಕೆಲಸವನ್ನು ಮಾಡಲಿಕ್ಕೆ ತೊಡಗಿಕೊಂಡಿದ್ದಾರೆ.
%%%—–%%%%—–%%%%—-%%%
ಅಶೀಶ್ ನಂದಿ ಅವರ ಕಿರು ಪರಿಚಯ:::—ದೆಹಲಿಯ ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ ಸಂಸ್ಥೆಯ ಮುಖ್ಯಸ್ಥರಾಗಿದ್ದು ಈಗ ಸೀನಿಯರ್ ಫೆಲೋ ಆಗಿ ಕೆಲಸ ಮಾಡುತ್ತಿರುವ ಆಶೀಶ್ ನಂದಿ ಅವರು ಸಮಾಜ-ಸಂಸ್ಕೃತಿ-ರಾಜಕಾರಣ ಕುರಿತಂತೆ ಬರೆಯುತ್ತಿರುವ ಭಾರತದ ಚಿಂತಕರಲ್ಲಿ ಪ್ರಮುಖರು. ತಮ್ಮನ್ನು ‘ಬೌದ್ಧಿಕ ಬೀದಿ ಹೋರಾಟಗಾರ’ ಎಂದು ವರ್ಣಿಸಿಕೊಂಡಿರುವ ಇವರ ಬರಹಗಳು ಸಮಕಾಲೀನ ಬೌದ್ಧಿಕ ವಲಯಗಳಲ್ಲಿ ತೀವ್ರ ಚರ್ಚೆ-ವಿವಾದಕ್ಕೂ ಕಾರಣವಾಗಿದೆ.
—————
“ನಿಲುಮೆ”ಗಾಗಿ ” ಸಕ್ಕರೆ ” ಲೇಖನದ ಸಾರಾಂಶರೂಪ ಮಾಡಿದ್ದು – ಮು.ಅ ಶ್ರೀರಂಗ ,ಬೆಂಗಳೂರು
ಮುಂದಿನ ವಾರ “ಬಾಲಿವುಡ್ “ ಕುರಿತ ಲೇಖನದ ಸಾರಾಂಶ ರೂಪ .
—————————————————————-
ಚಿತ್ರ ಕೃಪೆ : http://www.aksharaprakashana.com
Trackbacks & Pingbacks