ಗುಂಡು ಬಿಡದ ಬಂದೂಕುಗಳ ನಡುವೆ!
– ಸಂತೋಷ್ ಆಚಾರ್ಯ
೧೯೫೯ರಲ್ಲಿ ಜನರಲ್ ತಿಮ್ಮಯ್ಯ ಭಾರತ ಚೀನಾ ಯುದ್ಧದ ಸಾಧ್ಯತೆ ಮತ್ತು ಅದಕ್ಕೆ ಬೇಕಾದ ತಯಾರಿಯನ್ನು ಮಾಡಲು ಒಪ್ಪಿಗೆ ಕೇಳಿದಾಗ ಆಗಿನ ರಕ್ಷಣಾ ಮಂತ್ರಿಯಾಗಿದ್ದ ಕೃಷ್ಣ ಮೆನನ್ ಅದನ್ನು ನಿರಾಕರಿಸಿದ್ದರು. ಇದರಿಂದ ಕುಪಿತಗೊಂಡ ಜನರಲ್ ರಾಜೀನಾಮೆಯನ್ನು ಎಸೆದಿದ್ದರು. ಜನರಿಂದ ಸರ್ಕಾರ ಎನ್ನುವ ಅರ್ಥದ ಪ್ರಜಾಪ್ರಭುತ್ವ ಶುರುವಾದ ಹೊತ್ತಲ್ಲೇ ಜನರು ಬದಲಿಸಬಯಸುವ ಸರ್ಕಾರದ ನೀತಿಗಳನ್ನು ಬದಲಿಸುವ ಅನುಮತಿ ಆಗಲೇ ಇರಲಿಲ್ಲ. ನೆಹರೂ ರಾಜೀನಾಮೆಗೆ ಒಪ್ಪದೇ ಅವರನ್ನು ಅವರ ಅವಧಿ ಮುಗಿಯುವ ತನಕ(೧೯೬೧) ಇಟ್ಟುಕೊಂಡಿದ್ದು ಮತ್ತು ಭಾರತ ಯುದ್ಧದಲ್ಲಿ(೧೯೬೨) ಹೀನಾಯವಾಗಿ ಸೋತದ್ದು ಈಗ ಕೇವಲ ಇತಿಹಾಸ! ನೆಹರೂ ಚಾಣಾಕ್ಷತನದಿಂದ ವರ್ತಿಸಿದ್ದರೆ ಯುದ್ಧವನ್ನು ತಪ್ಪಿಸಬಹುದಿತ್ತು ಎಂದು ಈಗಲೂ ಎಷ್ಟೋ ಜನ ಹೇಳುತ್ತಾರೆ. ತನ್ನ ತಂತ್ರವನ್ನು ಒಪ್ಪಲಿಲ್ಲವೆಂದು ರಾಜೀನಾಮೆ ಎಸೆದು ಸರ್ಕಾರದಿಂದ ದೂರ ಸರಿಯುವುದಕ್ಕೂ ತಾನು ಮಾಡಿದ್ದು ಸರಿ ಎಂದು ಅದಕ್ಕಾಗಿ ಸರ್ಕಾರಕ್ಕೆ ಕೇರೇ ಎನ್ನದೆ ಅದನ್ನು ಕೋರ್ಟಿಗೆಳೆಯುವುದಕ್ಕೂ ಎಷ್ಟು ವ್ಯತ್ಯಾಸಗಳನ್ನು ನಾವು ಗುರುತಿಸಬಹುದು?
ತನ್ನ ಕಾರ್ಯಾವಧಿಯ ಕೊನೆಯ ವರ್ಷದಲ್ಲಿ ಇಂತಹಾ ಅಗ್ನಿಪರೀಕ್ಷೆ ಜನರಲ್ ವಿ.ಕೆ ಸಿಂಗ್‍ಗೆ ಬೇಕಿತ್ತೇ ಎಂದು ಸಾಮಾನ್ಯವಾಗಿ ಅನಿಸುವುದು ಸಹಜ. ಆದರೆ ಸ್ವಲ್ಪವೂ ಕ್ರಮಬದ್ಧತೆಯಿಂದ ನಿರ್ವಹಿಸದ ಸರ್ಕಾರಿ ಕಚೇರಿಗಳಿಗೆ ಇದು ಮುಖದ ಮೇಲೆ ಹೊಡೆದ ಕಪಾಳಮೋಕ್ಷ. ರಕ್ಷಣಾ ಮಂತ್ರಾಲಯದ ಮುಂದೆ ಭೂ ಸೇನೆಯ ಸಮಸ್ಯೆಗಳು ಗುಡ್ಡಗಟ್ಟುತ್ತಿವೆ. ಜನರಲ್ ವಯಸ್ಸಿನ ಸಮಸ್ಯೆಯಿಂದ ಶುರುವಾಗಿ ಲಂಚದ ಕೇಸು, ಟ್ರಕ್ಕುಗಳಲ್ಲಿ ನಡೆದ ಭ್ರಷ್ಟಾಚಾರ, ಲೀಕಾದ ಪತ್ರ ಹೀಗೆ ವಿ.ಕೆ ಸಿಂಗ್ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತಿದ್ದಾರೆ. ಈ ನಡುವೆ ತಮ್ಮ ಸ್ವಾರ್ಥಕ್ಕಾಗಿ ತಾವೇ ಪತ್ರವನ್ನು ಲೀಕ್ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಇಳಿ ವಯಸ್ಸಿನ ಮಾನಸಿಕ ಸ್ಥಿತಿಗಳನ್ನು ನೋಡುವುದಾದರೆ ಅಲ್ಲಗಳೆಯಬಹುದಾದ ವಿಚಾರವೇನೂ ಅಲ್ಲ. ಆದರೂ ಮೊದಲು ಕಮಾಂಡೋ ಆಗಿದ್ದ ಜನರಲ್ ಹೀಗೆ ಮಾಡಬಹುದೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ವಿ.ಕೆ ಸಿಂಗ್ ಒಬ್ಬ ಹೋರಾಟಗಾರ. ನೇರವಾಗಿ ವಿಷಯಗಳನ್ನು ನಿಭಾಯಿಸುವ ನಿಷ್ಠುರ ವ್ಯಕ್ತಿ. ಅವರ ಮೇಲೆ ಆಪಾದನೆ ಹೊರಿಸುವ ಮೊದಲು ಮನಸ್ಸು ಕೂಡ ಎಲ್ಲೋ ಒಪ್ಪಲು ನಿರಾಕರಿಸುತ್ತದೆ.
ಮತ್ತಷ್ಟು ಓದು 
ಮಂಕು ತಿಮ್ಮನ ಕಗ್ಗ – ರಸಧಾರೆ (೧೮)
– ರವಿ ತಿರುಮಲೈ
ಲೋಕಜೀವನ ಮಂಥನ
ನದಿಯ ತೆರೆಯವೊಲುರುಳಿ ಹೊರಳುತಿರುವುದು ಜೀವ I
ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲ ವದಕೆ II
ಬದುಕೇನು ಸಾವೇನು ಸೊದೆಯೇನು ವಿಷವೇನು? I
ಉದಕಬುದ್ಬುದವೆಲ್ಲ ! – ಮಂಕುತಿಮ್ಮ II
ತೆರೆಯವೊಲುರುಳಿ = ತೆರೆಯವೊಲು ಉರುಳಿ, ಉದಕಬುದ್ಬುದವೆಲ್ಲ= ಉದಕ ಬುದ್ಬುದವು ಎಲ್ಲ.
ತೆರೆಯವೊಲು=ನದಿಯ ಅಲೆಯಂತೆ , ಮುಗಿವಿಲ್ಲ= ಕೊನೆಯಿಲ್ಲ, ನಿಲುವಿಲ್ಲ = ನಿಲುವು ಅಂದರೆ ಸ್ಥಿರತೆ,. ಸೊದೆಯೇನು= ಅಮೃತವೇನು, ಉದಕ= ನೀರು, ಬುದ್ಬುದ= ಗುಳ್ಳೆ
ನದಿಯ ತೆರೆಯಂತೆ ಉರುಳಿ ಹೊರಳುತಿದೆ ಜೀವ, ಮೊದಲಿಲ್ಲ , ಮುಗಿವಿಲ್ಲ ನಿಲುವಿಲ್ಲ ಅದಕೆ
ಬದುಕೇನು ಸಾವೇನು ಸೊದೆಯೇನು ವಿಷವೇನು ಉದಕದ ಬುದ್ಬುದವು ಎಲ್ಲ ಮಂಕುತಿಮ್ಮ.
ವಾಚಕರೆ ಹಿಂದಿನ ಕಗ್ಗದಲ್ಲಿ ಈ ಹಳತು ಹೊಸತನದ ತಿಕ್ಕಾಟವನ್ನು ಅಮೃತಕ್ಕಾಗಿ ನಡೆಯುವ ಸಮುದ್ರ ಮಂಥನಕ್ಕೆ ಹೋಲಿಸಿದರು ಮಾನ್ಯ ಡಿ.ವಿ.ಜಿ ಯವರು.ಆದರೆ ಇಂದಿನ ಕಗ್ಗದಲ್ಲಿ ಒಂದು ವೇದಾಂತದ ಮಾತನ್ನು ಸೂಚಿಸಿದ್ದಾರೆ. ಇಡೀ ಜೀವನವನ್ನು ಅವರು ಒಂದು ನದಿಯ ತೆರೆ ಅಥವಾ ಅಲೆಯಂತೆ ಎಂದಿದ್ದಾರೆ. ಒಂದು ನಿಮಿಷವೂ ಒಂದೇ ತೆರನಾಗಿ ಇರದ ನದಿಯ ತೆರೆಗೆ ಹೋಲಿಸಿದ್ದಾರೆ. ಹೌದು ಯಾರ ಜೀವನವೂ ಎಂದೂ ಒಂದೇ ತೆರನಾಗಿ ಇರುವುದಿಲ್ಲ.ಬದಲಾವಣೆಯಾಗುತ್ತಲೇ ಇರುತ್ತದೆ. ಅದಕ್ಕೆ ನಾನು ಅದನ್ನು kaleidoscopic ಲೈಫ್ ಎಂದು ಕರೆಯುತ್ತೇನೆ. ಕೆಲಿಡೋಸ್ಕೊಪ್ ಎನ್ನುವುದು ನಾವು ಚಿಕ್ಕಂದಿನಲ್ಲಿ ಮೂರು ಬಿಳಿಯ ಗಾಜಿನ ಪಟ್ಟಿಗಳನ್ನು ತೆಗೆದುಕೊಂಡು ಮೂರನ್ನೂ ತ್ರಿಕೋನಾಕಾರದಲ್ಲಿ ಜೋಡಿಸಿ ಎಲ್ಲ ಬದಿಯಿಂದಲೂ ಬಂಧಿಸಿ ಒಂದು ಕೊನೆಯನ್ನು ಮುಚ್ಚ್ಚಿ ಸುತ್ತಲೂ ಕಾಗದವನ್ನು ಸುತ್ತಿ ಬಿಡುತ್ತಿದ್ದೆವು. ತೆರೆದ ಬದಿಯಿಂದ ಒಡೆದ ಗಾಜಿನ ಬಳೆಯ ಚೂರುಗಳನ್ನು ಹಾಕಿದರೆ ಒಂದು ಚಿತ್ತಾರ (ಡಿಸೈನ್) ಮೂಡುತ್ತಿತ್ತು. ಅದನ್ನು ತಿರುಗಿಸುತ್ತಾ ಹೋದಂತೆಲ್ಲ, ಬೇರೆಬೇರೆ ಚಿತ್ತಾರಗಳು ಮೂಡುತ್ತಿದ್ದವು. ಒಂದು ಬಾರಿ ಮೂಡಿದ ಚಿತ್ತಾರ ಮತ್ತೊಂದು ಬಾರಿಗೆ ಎಂದೂ ಬರುವುದಿಲ್ಲ. ಹಾಗೆಯೇ ನಮ್ಮ ಜೀವನಗಳು ಈಗ ಇದ್ದಂತೆ ಎಲ್ಲವೂ ಮತ್ತೆಂದಿಗೂ ಇರುವುದಿಲ್ಲ. ದಿನಕಳೆದಂತೆ ನಮ್ಮ ವಯಸ್ಸು ಒಂದು ದಿನ ಹೆಚ್ಚಾಗುತ್ತದೆ. ಒಂದು ದಿನ ಇದ್ದ ಮನೋಭಾವ ಮತ್ತೊಂದು ದಿನ ಇರುವುದಿಲ್ಲ, ಒಂದು ಗಳಿಗೆ ಇದ್ದ ನಮ್ಮ ಯೋಚನಾ ವಿಧ ಮತ್ತೊಂದು ಗಳಿಗೆ ಇರುವುದಿಲ್ಲ. ಇದನ್ನೇ ಮಾನ್ಯ ಗುಂಡಪ್ಪನವರು ನಿಲುವಿಲ್ಲ ಎಂದರು.
ಮತ್ತಷ್ಟು ಓದು 
ಮಂಕು ತಿಮ್ಮನ ಕಗ್ಗ – ರಸಧಾರೆ (೧೯)
– ರವಿ ತಿರುಮಲೈ
ಲೋಕಜೀವನ ಮಂಥನ
ಗಾಳಿ ಮಣ್ಣು೦ಡೆಯೊಳಹೊಕ್ಕು ಹೊರಹೊರಳಲದು I
ಆಳೆನಿಪುದಂತಾಗದಿರೆ ಬರಿಯ ಹೆಂಟೆ II
ಬಾಳೇನು ಧೂಳು ಸುಳಿ, ಮರ ತಿಕ್ಕಿದುರಿಯ ಹೊಗೆI
ಕ್ಶ್ವೇಳವೇನಮೃತವೇಂ ? – ಮಂಕುತಿಮ್ಮ II
ಮಣ್ಣು೦ಡೆಯೊಳಹೊಕ್ಕು= ಮಣ್ಣ + ಉಂಡೆ+ಒಳ+ಹೊಕ್ಕು , ಹೊರಹೊರಳಲದು = ಹೊರ+ಹೊರಳಲು +ಅದು
ಆಳೆನಿಪುದಂತಾಗದಿರೆ = ಆಳು+ ಎನಿಪುದು +ಅಂತೆ + ಆಗದಿರೆ, ತಿಕ್ಕಿದುರಿಯ = ತಿಕ್ಕಿದ+ಉರಿಯ, ಕ್ಶ್ವೇಳವೇನಮೃತವೇಂ =ಕ್ಶ್ವೇಳವೇನು +ಅಮೃತವೇನು
ಈ ದೇಹವನ್ನು ಮಣ್ಣು೦ಡೆಗೆ ಹೋಲಿಸಿದ್ದಾರೆ ಮತ್ತು ಈ ದೇಹದಲ್ಲಿ ಆಡುವ ಉಸಿರು ( ಗಾಳಿ ) ಆಡುತ್ತಿದ್ದರೆ ನಾವುಗಳು “ಆಳು” ಎಂದು ಎನ್ನಿಸಿ ಕೊಳ್ಳುತ್ತೇವೆ. ಇಲ್ಲದಿದ್ದರೆ ಈ ದೇಹ ಬರೀ ಮಣ್ಣಿನ ಹೆಂಟೆ ಎಂದು ಒಂದು ಅತ್ಯುತ್ತಮ ಸತ್ಯವನ್ನು ಪ್ರತಿಪಾದಿಸುತ್ತಾರೆ. ಇಂದು ನಮ್ಮ ಸ್ನೇಹಿತರೊಬ್ಬರು ಇದಕ್ಕೆ ಸರಿಯಾಗಿ” ಬಡಿತ ನಿಂತರೆ ಬಡಿವಾರ ಬಂದ್ ” ಎಂದು ಹಿಂದಿನ ಕಗ್ಗಕ್ಕೆ ಪ್ರತಿಕ್ರಿಯೆ ನೀಡಿ, ಬಹಳ ಸೂಕ್ತವಾಗಿ ಹೇಳಿದರು. ಬಹುಶಃ ಅವರಿಗೆ ಇಂದಿನ ಕಗ್ಗದ ಪರಿಚಯವಿತ್ತೇನೋ ಎಂದು ಅನ್ನಿಸುತ್ತದೆ. ಇರಲಿ ಗುಂಡಪ್ಪನವರು ಈ ಬಾಳನ್ನು ದೂಳ ಸುಳಿ ಎಂದು ಕರೆಯುತ್ತಾರೆ. ಇದು ಬಹಳ ಸೂಕ್ತವಾಗಿದೆ. ಏಕೆಂದರೆ, ನಾನು ಹಿಂದೆ ಒಮ್ಮೆ ಈ ಬ್ರಹ್ಮಾಂಡದ ವಿವರಣೆಯನ್ನು ಮಾಡುವಾಗ, ಇಡೀ ಬ್ರಹ್ಮಾಂಡವು ಎಷ್ಟು ದೊಡ್ಡದೆಂದರೆ, ಇದರೆದುರು ನಾವು ಒಂದು ದೂಳ ಕಣವೂ ಅಲ್ಲ ಎಂದು ಹೇಳಿದ್ದೆ. ಈಗ ಮಣ್ಣಿಂದ ಆದ, ಮತ್ತು ಈ ಸಮಸ್ತ ಭೂಮಂಡಲವನ್ನು ನಿವಾಸಸ್ಥಾನವನ್ನಾಗಿಸಿಕೊಂಡ ಪ್ರಾಣಿಗಳೆಲ್ಲವೂ ಧೂಳ ಕಣಗಳೇ ಎಂದು ಗುಂಡಪ್ಪನವರು ಹೇಳುತ್ತಾರೆ.
ಮಣ್ಣಿಂದ ಆದ ಜೀವಕಣಗಳು ಮತ್ತು ಈ ಜೀವಕಣಗಳಿಂದಾದ ಈ ದೇಹವೂ ಮಣ್ಣಲ್ಲವೇ? “ಮಣ್ಣಿಂದ ಕಾಯ ಮಣ್ಣಿಂದ” ಎಂದು ನಾವು ಕೇಳಿಲ್ಲವೇ? ಹಾಗೆ ಮಣ್ಣಿಂದ ಆದ ಈ ದೇಹವನ್ನು ಮಣ್ಣ ಉಂಡೆ ಎಂದು ಹೇಳಿದ್ದಾರೆ. ಈ ಮಣ್ಣ ಉಂಡೆಯಲಿ ಗಾಳಿ ಆಡುತ್ತಿದ್ದರೆ ನಾವೂ ಸಹ “ಆಳು” ಅಂದರೆ ಮನುಷ್ಯ ಎಂದು ಕರೆಯಲ್ಪಡುತ್ತೇವೆ. ಇಲ್ಲದಿದ್ದರೆ ಬರೇ ಮಣ್ಣ ಉಂಡೆ. ಆಗ ನಮ್ಮನ್ನು ಹೆಣ ಎನ್ನುತ್ತಾರೆ
ಹಾಗಿದ್ದರೆ ಈ ಬಾಳು ಅಂದರೆ ಜೀವನವು ಏನು? ಎಂದರೆ ಮಣ್ಣ ಕಣಗಳ ತಿಕ್ಕಾಟವೆನ್ನುತ್ತಾರೆ ಶ್ರೀ ಗುಂಡಪ್ಪನವರು. ಈ ತಿಕ್ಕಾಟದಲ್ಲಿ ಬೆಂಕಿ ಉಂಟಾಗುತ್ತದೆ ಮತ್ತು ಹೊಗೆಯಾಡುತ್ತದೆ. ದ್ವೇಷದ ಬೆಂಕಿ, ಅಸೂಯೆಯ ಬೆಂಕಿ ಕೋಪದ ಬೆಂಕಿ ಹೀಗೆ ಹಲವಾರು ವಿಧದಲ್ಲಿ ಮನುಜ ಮನುಜರ ಮಧ್ಯೆ ಉಂಟಾಗುವ ತಿಕ್ಕಾಟ. ಆ ತಿಕ್ಕಾಟದ ಪರಿಣಾಮ ಸಾವು ನೋವುಗಳ ಪರಿಣಾಮ. ಅದೇ ಈ ಬೆಂಕಿಯಿಂದ ಬರುವ ಹೊಗೆ.
ಇದರಿಂದ ಕೆಲವರಿಗೆ ಸುಖ ಕೆಲವರಿಗೆ ದುಃಖ. ಇದನ್ನೇ “ಕ್ಶ್ವೇಳ “ಅಂದರೆ ವಿಷವೆಂದು, ಸುಖ ಮತ್ತು ಆನಂದವನ್ನು “ಅಮೃತ”ವೆಂದೂ ಕರೆಯುತ್ತಾರೆ ಗುಂಡಪ್ಪನವರು.
ಪರಮಾತ್ಮನೆಂಬ ಮಹಾಜ್ಜ್ವಾಲೆಯಲ್ಲಿ ಉರಿಯುವ ಬೆಂಕಿಯಿಂದ ಸಿಡಿದ ಕೋಟ್ಯಾಂತರ ಕಿಡಿಗಳೇ, ಈ ಜೀವಿಗಳು. ಈ ಜಗತ್ತಿನಲ್ಲಿ, ಮಣ್ಣಿನ ಉಂಡೆಗಳಂತೆ ಇರುವ ನಾವೂ ಮತ್ತು ಈ ಉಂಡೆಯೊಳಗೆ ಗಾಳಿ ಎಂಬಂತೆ ಇರುವ ಆತ್ಮ ಅಥವಾ ಚೇತನದ ಸಮ್ಮಿಲನದಿಂದ ಉಂಟಾದ ಬದುಕೆಂಬ ತಿಕ್ಕಾಟದಲ್ಲಿ ಬೆಂಕಿಯುಗುಳಿ, ವಿಷಕಾರಿ, ಅಮೃತವ ಸವಿದು ಬಾಳ ಸವೆಸಿ ಮತ್ತದೇ ಚೇತನವನ್ನು ಸೇರುವಾಗ, ಇಲ್ಲಿ ಪಡೆದ ಅಮೃತದ ಬೆಲೆಯೇನು ಕುಡಿದ ಅಥವಾ ಕಕ್ಕಿದ ವಿಷದ ಬೆಲೆಯೇನು ಎಂದು ಕೇಳುತ್ತಾರೆ ಶ್ರೀ ಗುಂಡಪ್ಪನವರು.
ಈ ಕಗ್ಗದ ಒಟ್ಟಾರೆ ಅಂತರ್ಯವೇನೆಂದರೆ, ಮಣ್ಣಿಂದ ಆಗಿ, ಮಣ್ಣಲ್ಲೇ ಇದ್ದು ಮಣ್ಣಲ್ಲೇ ಸೇರುವ ಈ ಮಾನವನ ಬಾಳು ಕೇವಲ ಉಸಿರಿರುವ ತನಕ. ಹೀಗೆ ಬದುಕಿರುವಾಗ ನಾವು ಪಡೆಯುವ ಸುಖ ದುಃಖ ಅನುಭವಿಸುವ , ಕೋಪ ದ್ವೇಷ, ಅಸೂಯ, ಪ್ರೀತಿ, ಪ್ರೇಮ, ಅನುರಾಗ, ಬಂಧನಗಳಂಥಹ ಭಾವಗಳೆಲ್ಲವೂ, ” ಬಡಿತವಿರುವತನಕ( ಹೃದಯದ)” ಅದು ನಿಂತರೆ” ಬಡಿವಾರ ಬಂದ್” ಈ ಜೀವನದ ಎಲ್ಲಕ್ಕೂ ಒಂದು ಮಂಗಳವನ್ನು ಹಾಡುವ,ಸಾವನ್ನು ಅಪ್ಪಿ ಎಲ್ಲವನ್ನೂ ಇಲ್ಲೇ ಬಿಟ್ಟು ಹೋಗುವಾಗುವಂಥಾ ಈ ಜೀವನದಲ್ಲಿ ಪಡೆದ ಸುಖಕ್ಕೆ ಏನು ಬೆಲೆ, ದುಃಖಕ್ಕೆ ಏನು ಬೆಲೆ. ಎಲ್ಲವೂ ಶೂನ್ಯ.
ಇಂತಹ ಭಾವಗಳನ್ನು ವ್ಯಕ್ತಪಡಿಸುವ ಈ ಕಗ್ಗದ ಅಂತರ್ಯವನ್ನು ವಾಚಕರು ಅವರದೇ ಅನುಭವದ ಮೂಸೆಯಲ್ಲಿ ಹಾಕಿ ನೋಡಿದಾಗ, ಪ್ರತಿಯೊಬ್ಬರಿಗೂ ಅವರವರದೇ ಅನುಭವದ ಭಾವ ಸಿಗುತ್ತದೆ.
ಇವುಗಳನ್ನೇ ಚಿಂತಿಸುತ್ತಾ ವಿಚಾರಮಾಡುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗೋಣ.
ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ.
ನಮಸ್ಕಾರ
ಸೇನೆ-ಸರ್ಕಾರದ ನಡುವೆ ಬಡವಾಗದಿರಲಿ ನನ್ನ ಭಾರತ
– ರಾಕೇಶ್ ಶೆಟ್ಟಿ
ಆವತ್ತು ಸಂಸತ್ತಿನಲ್ಲಿ ಭಾಷಣಕ್ಕೆ ನಿಂತ ನೆಹರೂ ದೇಶದ ಒಂದಿಂಚು ನೆಲವನ್ನು ಚೀನಿಗಳೀಗೆ ಬಿಟ್ಟುಕೊಡುವುದಿಲ್ಲ.ಎಂತಾ ಯುದ್ಧಕ್ಕಾದರೂ ಸೈನ್ಯ ತಯಾರಿದೆ ಅನ್ನುತ್ತಲೇ ತಮ್ಮ ಕೋಟಿನಿಂದ ತೆಗೆದ ಕೆಂಪು ಗುಲಾಬಿಯನ್ನ ಜನರ ಕಿವಿಗಿಟ್ಟರು.ಅವರ ಭಾಷಣದ ನಂತರದ ಇತಿಹಾಸ ನಿಮಗೆ ಗೊತ್ತಿರಲೇಬಹುದು.ಆ ಕಹಿ ನೆನಪಿಗೆ ೫೦ ವರ್ಷ ಆಗೋ ಸಮಯದಲ್ಲಿ ಮತ್ತೊಮ್ಮೆ ಕಳೆದವಾರ ಸಂಸತ್ತಿನಲ್ಲಿ ರಕ್ಷಣಾ ಸಚಿವ ಆಂಟನಿಯವರೂ ಸಹ ಭಾರತದ ಸೈನ್ಯ ಬಲಿಷ್ಟವಾಗಿದೆ,ಯುದ್ಧ ಸನ್ನದ್ಧವಾಗಿದೆ ಅಂದಿದ್ದಾರೆ.ನೆಹರೂ ಅವರಿಗೂ-ಅವ್ರ ಕಾಲಕ್ಕೂ ತುಲನೆ ಮಾಡಿದರೆ ಆಂಟನಿ ಅವರನ್ನ ಸ್ವಲ್ಪ ನಂಬಬಹುದು ಅನ್ನಿಸುತ್ತದೇ.ಆದರೆ…
ಕಳೆದ ವಾರ ನಡೆದ ವಿದ್ಯಾಮಾನಗಳಿವೆಯಲ್ಲ ಅವೆಲ್ಲ ಗಾಬರಿ ಹುಟ್ಟಿಸುವಂತವು.ಇದಕ್ಕೆ ಮುನ್ನುಡಿ ಬರೆದಿದ್ದು ಜನರಲ್.ವಿ.ಕೆ ಸಿಂಗ್…! ಜನ್ಮ ದಿನಾಂಕದ ರಗಳೆಯ ನಂತರ ಸ್ವಲ್ಪ ದಿನ ಸುಮ್ಮನಾಗಿದ್ದವ್ರು, ಟಿವಿ ಚಾನೆಲ್ನೊಂದಿಗೆ ಮಾತನಾಡುತ್ತ ತಮಗೆ ೧೪ ಕೋಟಿ ಲಂಚ ನೀಡಲು ಬಂದ ಪ್ರಸಂಗದ ಬಗ್ಗೆ ಬಾಯಿಬಿಡುವ ಮೂಲಕ.ಮತ್ತೆ ಆ ವಿಷಯವನ್ನ ನಾನು ರಕ್ಷಣಾ ಮಂತ್ರಿ ಆಂಟನಿ ಅವರಿಗೂ ಹೇಳಿದ್ದೆ ಅನ್ನುವುದು ಬೆಂಕಿಗೆ ತುಪ್ಪ ಸುರಿದಂತಾಗಿ ಹೋಯಿತು.ಸಂಸತ್ತಿನಲ್ಲಿ ಆಂಟನಿ ’ಅವರು ಮೌಕಿಕವಾಗಿ ಹೇಳಿದ್ದರು ನಾನು ಏನು ತಾನೇ ಮಾಡಲಿ” ಅಂತೆಲ್ಲ ಗೋಳಾಡುವಾಗಲೇ, ಜನರಲ್ ಪ್ರಧಾನಿ ಅವ್ರಿಗೆ ಬರೆದ ಮತ್ತು ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಂತ ರಹಸ್ಯವಾಗಿರಬೇಕಿದ್ದ ಪತ್ರ ಸೋರಿಕೆಯಾಗಿದ್ದು.!
ಮಂಕು ತಿಮ್ಮನ ಕಗ್ಗ – ರಸಧಾರೆ (೧೭)
– ರವಿ ತಿರುಮಲೈ
ಲೋಕಜೀವನ ಮಂಥನ
ತಳಮಳವಿದೇನಿಳೆಗೆ? ದೇವದನುಜರ್ ಮಥಿಸೆ
ಜಳಧಿಯೊಳಾದಂತೆ ಸುಧೆಗೆ ಪೀಠಿಕೆಯೇಂ?
ಹಾಲಾಹಲವ ಕುಡಿವ ಗಿರೀಶನಿರ್ದೊಡೀ
ಕಳವಳವದೇತಕೆಲೋ? – ಮಂಕುತಿಮ್ಮ
ತಳಮಳವಿದೇನಿಳೆಗೆ= ತಳಮಳವಿದು + ಏನು + ಇಳೆಗೆ, ದೇವಮನುಜರ್ =ದೇವದ + ಅನುಜರ್
ಜಳಧಿಯೊಳಾದಂತೆ = ಜಲಧಿಯೊಳು + ಆದಂತೆ, ಗಿರೀಶನಿರ್ದೊಡೀ= ಗಿರೀಶನು + ಇರ್ದೊಡೆ, ಕಳವಳವದೇತಕೆಲೋ = ಕಳವಳವು + ಅದು+ ಏತಕೆ+ ಎಲೋ,
ದೇವದನುಜರ್ = ದೇವಲೋಕದ ಅಣ್ಣ ತಮ್ಮಂದಿರು , ಮಥಿಸೆ= ಕಡೆಯೆ, ಜಲಿಧಿ= ಸಮುದ್ರ, ಸುಧೆ= ಅಮೃತ, ಪೀಠಿಕೆ = ಭೂಮಿಕೆ, ಪ್ರಸ್ತಾವನೆ, ಹಾಲಾಹಲ= ವಿಷ, ಗಿರೀಶ= ಶಿವ
ತಳಮಳವದೇನು ಇಳೆಗೆ ? ದೇವದುಜರು ಮಥಿಸೆ ಜಲಧಿಯೊಳು ಆದಂತೆ, ಸುಧೆಗೆ ಪೀಠಿಕೆಯೇನು,
ಹಲಾಹಲವ ಕುಡಿಯಲು ಗಿರೀಶನಿರುವಾಗ ಕಳವಳವದು ಏತಕೆ ಎಲೋ ಮಂಕುತಿಮ್ಮ.
ಇಲ್ಲಿ ಒಂದು ಆಶಾಭಾವನೆಯನ್ನು ವ್ಯಕ್ತಪಡಿಸುತ್ತಾರೆ, ಶ್ರೀ ಗುಂಡಪ್ಪನವರು. ಆಗ ಎಲ್ಲೆಲ್ಲೂ ಅತಂತ್ರದ ಸ್ಥಿತಿ. ಹಳೆಯ ಭಕ್ತಿ ಶ್ರದ್ಧೆಗಳು ಸಶಿಸಿ ಹೊಸದು ಯಾವುದೋ ಇಲ್ಲದೆ, ಒಂದು ಅತಂತ್ರದ ಸ್ಥಿತಿ ಇದೆ. ಜನರೆಲ್ಲಾ ಕಳವಳ ಗೊಂಡು ತಳಮಳಿಸುತ್ತಿದ್ದಾರೆ. ಅಂತ ಸ್ಥಿತಿಯಲ್ಲಿ ಇವರಿಗೊಂದು ಆಶಾಭಾವನೆ. ಅದನ್ನು ಅವರು ಈ ಕಗ್ಗದಲ್ಲಿ ಸೂಚಿಸುತ್ತಾರೆ.
ಹಿಂದೆ, ದೇವಲೋಕದಲ್ಲಿ ಅಮೃಥವನ್ನು ಪಡೆಯಲು ಸಮುದ್ರ ಮಂಥನ ನಡೆಯಿತು. ಅದನ್ನು ನಡೆಸಿದವರು ದೇವತೆಗಳು ಮತ್ತು ದಾನವರು. ಇವರನ್ನು ಗುಂಡಪ್ಪನವರು ಸೂಕ್ತವಾಗಿ “ದೇವಲೋಕದ ಅನುಜರ್” ಎಂದು ಸಂಬೋಧಿಸುತ್ತಾರೆ. ಏಕೆಂದರೆ ಪುರಾಣದ ಪ್ರಕಾರ ಈ ದೇವತೆಗಳು ಮತ್ತು ದಾನವರು ಇಬ್ಬರೂ ಕಶ್ಯಪ ಬ್ರಹ್ಮನ ಮಕ್ಕಳು. ಹಾಗಾಗಿ ಅವರನ್ನು ಅಣ್ಣ ತಮ್ಮಂದಿರು ಎಂದಿದ್ದಾರೆ. ವಾಚಕರು ಈ ದೇವದಾನವರು ನಡೆಸಿದ ಅಮೃತ ಮಂಥನದ ಕಥೆಯನ್ನು ಬೇರೆಯಾಗಿ ಓದಬೇಕಾಗಿ ವಿನಂತಿ. ಆದರೆ ಆ ಮಂಥನದಲ್ಲಿ ಮೊದಲು ಹಾಲಾಹಲ ಅಂದರೆ ವಿಷದ ಉದ್ಭವವಾಯಿತಂತೆ. ಘನ ಘೋರ ವಿಷವನ್ನು ಲೋಕ ಕಲ್ಯಾಣಕ್ಕಾಗಿ ಗಿರಿಜಾಪತಿ ಪರಮಶಿವನು ಕುಡಿದುಬಿಟ್ಟನಂತೆ. ಅದನ್ನು ಪಾರ್ವತಿ ಕಂಠದಲ್ಲೇ ತಡೆದದ್ದರಿಂದ ಅದು ಅಲ್ಲೇ ನಿಂತು, ಶಿವನು ನೀಲಕಂಠ ಮತ್ತು ವಿಷಕಂಠನಾದನಂತೆ.
ಹಿಂದಿನ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು II ಹಳೆ ಧರ್ಮ ಸತ್ತಿಹುದು ಹೊಸ ಧರ್ಮ ಹುಟ್ಟಿಲ್ಲ – ತಳಮಳಕೆ ಕಡೆಯೆಂದು – ಮಂಕು ತಿಮ್ಮ II ಎಂದು ತಮ್ಮ ಕಳವಳವನ್ನು ವ್ಯಕ್ತಪಡಿಸುತ್ತಾರೆ. ಆ ಕಳವಳಕ್ಕೆ ಉತ್ತರವೆಂಬಂತೆ ಈ ಕಗ್ಗದಲ್ಲಿ ಈ ರೀತಿಯ ಕಳವಳ, ತಳಮಳಗಳು ಸಹಜ. ಒಂದು ಉತ್ತಮವಾದ ವಸ್ತು ಈ ಪ್ರಪಂಚಕ್ಕೆ ಸಿಗಬೇಕಾದರೆ ಈ ರೀತಿಯ ಮಥನ ವಾಗಬೇಕು. ಇಲ್ಲಿ ದೇವದಾನವರ ಉಲ್ಲೇಖಮಾಡಿ ಮನುಷ್ಯನ ಅಂತರ್ಯದಲ್ಲಿರುವ
” ಒಳ್ಳೆಯ ಮತ್ತು ಕೆಟ್ಟ ” ಗುಣಗಳನ್ನು ಸೂಚ್ಯವಾಗಿಸುತ್ತಾರೆ.
ಮನುಷ್ಯನ ಮನಸ್ಸಿನಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರುತ್ತದೆ. ಪ್ರಮಾಣ ಮತ್ತು ಪರಿಮಾಣಗಳ ವ್ಯತ್ಯಾಸ ಅಷ್ಟೇ. ಯಾವುದು ಅಧಿಕವಾಗಿದ್ದರೆ ಅದರ ಪ್ರಾಬಲ್ಯ. ಆದರೆ ಒಂದು ವ್ಯಕ್ತಿಯಿಂದ ಮಹತ್ತರ ಕಾರ್ಯವಾಗಬೇಕಾದರೆ ಅಂತರ್ಯದಲ್ಲೂ ತಿಕ್ಕಾಟಗಳು ತುಮಲಗಳು ನಿರಂತರ ನಡೆಯಬೇಕು. ಸಮುದ್ರಮಥನದ ರೀತಿ. ನಮ್ಮ ಲೋಕದ ಮಹಾ ಮಹಿಮರೆಲ್ಲರಿಗೂ ಇಂಥಹ ಅನುಭವವಾಗಿದೆ. ಅವರ ಪ್ರಯತ್ನದಲ್ಲಿ ಅವರಿಗೆ ” ವಿಷದ” ರೂಪದಲ್ಲಿ ಬೇಕಾದಷ್ಟು ಕಷ್ಟಗಳು ಬಂದಿವೆ. ಆ ಮಹಾಮಹಿಮರೆಲ್ಲ ಅಂತಹ ಕಷ್ಟಗಳನ್ನೆಲ್ಲ ” ಪರಶಿವನು ಹಾಲಾಹಲವನ್ನು ಕುಡಿದಂತೆ ” ನುಂಗಿ ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ತ್ಯಾಗಮಾಡಿದ್ದಾರೆ. ಉದಾಹರಣೆಗೆ, ನಮ್ಮ ದೇಶಕ್ಕೆ ಚಾಣಕ್ಯ ವಿಷ್ಣು ಶರ್ಮನ ಕೊಡುಗೆ ಅಪಾರ. ಅಷ್ಟೇ ಕಷ್ಟ ನಿಷ್ಟೂರಗಳನ್ನು ಆಭವಿಸಿದ ಅವನು. ಹೀಗೆ, ಶಂಕರರು, ರಾಮಾನುಜರು, ಬಸವಣ್ಣನವರು, ನಮ್ಮ ದೇಶದ ಸ್ವಾತಂತ್ರ ಹೋರಾಟಗಾರರಾದ ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ರಾಜಗುರು, ಬೋಸ್ ಮುಂತಾದ ಅನೇಕ ವೀರರು ಸ್ವಾರ್ಥ ತೊರೆದು ಲೋಕಕಲ್ಯಾಣಕ್ಕಾಗಿ ಕಷ್ಟಗಳೆಂಬ ವಿಷವನ್ನು, ಪರಶಿವನಂತೆ ಕುಡಿದ ದೃಷ್ಟಾಂತಗಳು ನಮಗೆ ಹೇರಳವಾಗಿ ಸಿಗುತ್ತದೆ.
ಅದೇ ರೀತಿ ಇಂದು ಇರುವ ಪರಿಸ್ಥಿತಿಯೂ ಬದಲಾಗಿ ಇಂದಿರುವ ವಿಷ ಮತ್ತ ವಿಷಮ ಪರಿಸ್ಥಿತಿ ಕರಗಿ ಅಮೃತ ಹುಟ್ಟುವುದಕ್ಕೆ ಈ ರೀತಿಯ ತಿಕ್ಕಾಟವೇ, ತುಮುಲಗಳೇ, ತಳಮಳವೇ ಪೀಠಿಕೆಯೋ ಎಂದು ಕೇಳುತ್ತಾರೆ ಶ್ರೀ ಗುಂಡಪ್ಪನವರು. ಅಂದು ಪರ ಶಿವನು ” ವಿಷ”ವನ್ನು ಕುಡಿದು ಲೋಕಕಲ್ಯಾಣವನ್ನು ಮಾಡಿದಹಾಗೆ ಇಂದೂ ಯಾರಾದರೂ ಬರಬಹುದೆಂದು ಅವರ ಆಸೆ. ಅವರ ಅಶಾಭಾವಕ್ಕೆ ಒಂದು ನಮಸ್ಕಾರ.
ಆದರೆ ವಾಚಕರೆ, ವಿಚಾರ ಮಾಡಿ ನೋಡಿ. ಅಂದಿನ ಮಥನದಿಂದ ಅಂದರೆ ಲೋಕದ ದ್ವಂದ್ವಗಳಿಂದ ಮತ್ತು ಆ ದ್ವಂದ್ವಗಳ ತಿಕ್ಕಾಟದಿಂದ, ತೊಳಲಾಟದಿಂದ ಇನ್ನೂ ಅಮೃತ ಬಂದೆ ಇಲ್ಲ. ಎಲ್ಲೆಲ್ಲೂ ವಿಷಮ ಸ್ಥಿತಿಯ ವಿಷದ ಧಾರೆ ಹರಿಯುತ್ತಿದೆ. ದ್ವೇಷಾಸೂಯೆಗಳ, ಭಾಷಾಸೂಯಗಳ, ಅಹಂಕಾರದ, ಜನಬಲದ ಮದ, ಧನಬಲದ ಮದ, ಅಧಿಕಾರ ಮದದ ವಿಷದ ಗಾಳಿ ಎಲ್ಲೆಲ್ಲೂ ಹರಡಿದೆ. ಇಡೀ ಸಮಾಜ ಪ್ರೀತಿ ಕರುಣೆ ವಾತ್ಸಲ್ಯಗಳ ಕೊರತೆಯಿಂದ ಸೊರಗಿದೆ. ಹಳೆಯ ಶ್ರದ್ಧೆ -ಭಕ್ತಿಗಳ ಮತ್ತು ಆಧುನೀಕತೆಯ, ಡಂಬ ತೋರಿಕೆಯ ಜೀವನದ ನಡುವೆಯ ಅಂತರ ಅಗಾಧವಾಗುತ್ತಿದೆ.
ಅಂದು ಅಂದರೆ ಈಗ್ಗೆ ಎಂಬತ್ತು ವರ್ಷಗಳ ಹಿಂದೆ ಡಿ.ವಿ.ಜಿ.ಯವರು ಕಂಡ ಅಮೃತದ ಕನಸು ನನಸಾಗುವ ಕಾಲ ಬಂದೀತೆ ಎಂದರೆ, ನಾವು ಆಶಾಭಾವನೆಯನ್ನು ಎಂದಿಗೂ ಬಿಡಬಾರದು,ಇಂದಿನ ಯುವ ಪೀಳಿಗೆಗೆ ಮತ್ತು ಮುಂದಿನ ಪೀಳಿಗೆಗೆ, ಹಿಂದಿನ ತತ್ವಗಳ ಸತ್ವವನ್ನು ತಿಳಿಸಿಕೊಡಬೇಕು. ಅವುಗಳ ಅರಿವು ಮೂಡಿಸಬೇಕು. ಬಹಳಷ್ಟು ಜನ ಆ ಪ್ರಯತ್ನದಲ್ಲಿ ಇದ್ದರೂ ಇಷ್ಟು ವಿಶಾಲವಾದ ದೇಶದಲ್ಲಿ ಆಧುನೀಕತೆಯ ಪೊಳ್ಳು ಸಂಸ್ಕೃತಿಯ ವ್ಯಾಪ್ತಿಯನ್ನು ಮುಟ್ಟಲು ಇನ್ನೂ ಸಾಧ್ಯವಾಗಿಲ್ಲ. ಶೀಘ್ರವೇ ಫಲ ಬೇಕಾದಲ್ಲಿ, ಸಮರೋಪಾದಿ ಕಾರ್ಯಗಳು ನಡೆದು ನಮ್ಮ ಭಾರತೀಯ ಅಸ್ಮಿತೆಯನ್ನು ಅರಿತುಕೊಳ್ಳಲು ಮತ್ತು ಕಾಪಾಡಲು ಎಲ್ಲರೂ ಪ್ರವೃತ್ತರಾಗಬೇಕು. ಅದಕ್ಕೆ ನಾವು ನೀವು ಎಲ್ಲರೂ ಪ್ರಯತ್ನಪಟ್ಟು ನಮ್ಮ ಸುತ್ತು ಮುತ್ತಲಿನವರನ್ನೂ ಅದಕ್ಕೆ ಪ್ರೇರೇಪಿಸಿದರೆ ಅದು ಸಾಧ್ಯ.
ಅಂಥಹ ಪ್ರಯತ್ನವನ್ನು ಮಾಡುವ ಧೃಢ ಸಂಕಲ್ಪವನ್ನು ಮಾಡುತ್ತಾ ನಾವು ಮುಂದಿನ ಕಗ್ಗಕ್ಕೆ ಹೋಗುವ.
ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ.
ನಮಸ್ಕಾರ
**************************************************
ಮಂಕು ತಿಮ್ಮನ ಕಗ್ಗ – ರಸಧಾರೆ (೧೬)
– ರವಿ ತಿರುಮಲೈ
ಲೋಕಜೀವನ ಮಂಥನ
ಇಳೆಯ ಬಿಟ್ಟಿನ್ನುಮೆತ್ತಲುಮೈದದ ಪ್ರೇತ I
ವಲೆವಂತೆ ಲೋಕ ತಲ್ಲಣಿಸಿಹುದಿಂದು II
ಹಳೆಧರ್ಮ ಸತ್ತಿಹುದು ಹೊಸ ಧರ್ಮ ಹುಟ್ಟಿಲ್ಲ II
ತಳಮಳಕೆ ಕಡೆಯೆಂದು – ಮಂಕು ತಿಮ್ಮ II
ಇಳೆಯ ಬಿಟ್ಟಿನ್ನುಮೆತ್ತಲುಮೈದದ = ಇಳೆಯ+ ಬಿಟ್ಟು + ಇನ್ನು+ ಎತ್ತಲುಂ+ಐದದ, ಪ್ರೇತವಲೆವಂತೆ= ಪ್ರೇತವು + ಅಲೆವಂತೆ, ಕಡೆಯಂದು= ಕಡೆ+ ಎಂದು
ಇಳೆ = ಭೂಮಿ, ಎತ್ತಲುಂ= ಯಾವಕಡೆಗೂ, ಐದದ=ಸೇರದ, ಪ್ರೇತ= ಮರಣಾನಂತರದ ಪ್ರಯಾಣದಲ್ಲಿ ಇರುವ ಆತ್ಮದ ಸ್ಥಿತಿ. ತಲ್ಲಣಿಸಿಹುದು + ಒದ್ದಾಡುತ್ತಿದೆ.
ಈ ಭೂಮಿಯನ್ನು ಬಿಟ್ಟು ಎತ್ತಲೂ ಸೇರದ ಪ್ರೇತದಂತೆ ಲೋಕ ತಲ್ಲಣಿಸುತ್ತಿದೆ. ಹಳೆ ಧರ್ಮ ಸತ್ತಿದೆ. ಹೊಸ ಧರ್ಮ ಹುಟ್ಟಿಲ್ಲ ತಳಮಳಕೆ ಕಡೆ ಎಂದು ಮಂಕುತಿಮ್ಮ ಎಂದು ತಮ್ಮನ್ನು ತಾವೇ ಪ್ರಶ್ನಿಸುತ್ತಾ ಅದೇ ಪ್ರಶ್ನೆಯನ್ನು ನಮ್ಮ ಮುಂದಿಡುತ್ತಾರೆ.
ಭಾರತ ದೇಶವು ಅನ್ಯ ದೇಶದವರ ಆಕ್ರಮಣಕ್ಕೆ ಬಲಿಯಾಗಿ, ಹಾಗೆ ಬಂದ ಆಕ್ರಮಣಕಾರರು ಈ ದೇಶದಲ್ಲೇ ನೆಲೆಯೂರಿ ನಿಂತಾಗ, ಅವರ ನಂಬಿಕೆಗಳು ವಿಶ್ವಾಸಗಳು ಅಚಾರ ವಿಚಾರಗಳು ಉಡುಗೆ ತೊಡಿಗೆಗಳ ಶೈಲಿ ಹೀಗೆ ಎಲ್ಲವೂ ನಮ್ಮ ದೇಶದ ಸಂಸ್ಕೃತಿಯ ಮೇಲೆ ತನ್ನ ಪರಿಣಾಮವನ್ನು ಬೀರುತ್ತ, ಕಾಲಕ್ರಮದಲ್ಲಿ ಇಲ್ಲಿನ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿ ನೆಲೆ ನಿಂತಿತು. ಆಗ ಅದರದು ಬೇರೆಯೇ ರೂಪ. ಆ ರೂಪ ಹಳೆಯದನ್ನು ಬಿಡಲಾಗದೆ, ಹೊಸದನ್ನು ಸಂಪೂರ್ಣ ಅಳವಡಿಸಿಕೊಳ್ಳಲಾಗದೆ ಒಂದು ಹೊಸರೂಪವನ್ನೇ ತಾಳಿತು. ಆದರೆ ಆ ಹೊಸರೂಪದಲ್ಲೂ ಒಂದು ತಳಮಳ, ಒಂದು ಚಡಪಡಿಕೆ ಇತ್ತು. ಅತ್ತ ಹಳೆಯದನ್ನು ಬಿಟ್ಟರೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಭಯ, ಇತ್ತ ಹೊಸದರ ಹೊಸತನದ ಮೋಜು. ಇವೆರಡರ ರೂಪವೇ ಒಂದು ಎಡಬಿಡಂಗಿ ಸ್ವರೂಪ. ಇಂದು ನಾವು ಇರುವುದೇ ಅಂತಹ ಸ್ಥಿತಿಯಲ್ಲಿ. ಇದನ್ನು ಶ್ರೀ ಗುಂಡಪ್ಪನವರು ” ಈ ಭೂಮಿಯನ್ನು ಬಿಟ್ಟು ಎತ್ತಲೂ ಸೇರದ ಪ್ರೇತದಂತೆ ” ಎಂದು ಹೇಳುತ್ತಾರೆ. ಇದು ಒಂದು ಉಪಮೆ ಅಷ್ಟೇ. ಸನಾತನದಲ್ಲಿ ಅಂತಹ ನಂಬಿಕೆ ಉಂಟು. ಅನ್ಯರಲ್ಲೂ ಬೇರೆ ಬೇರೆ ರೂಪದಲ್ಲಿ ಆ ನಂಬಿಕೆ ಉಂಟು. ಆದರೆ ತಮ್ಮನ್ನು ತಾವು ಪ್ರಗತಿಪರರು ಅಥವಾ ಬುದ್ಧಿಜೀವಿಗಳು ಎಂದು ಅಂದುಕೊಂಡಿರುವ ಕೆಲವರು, ಇದರ ಸೂಕ್ತತೆಯನ್ನು ಮತ್ತು ಪ್ರಸ್ತುತತೆಯನ್ನು ಪ್ರಶ್ನಿಸುತ್ತಾರೆ. ಹಾಗೆ ಪ್ರಶ್ನೆ ಮಾಡುವ, ಅಲ್ಲಗೆಳೆಯುವ ಮತ್ತು ಟೀಕಿಸುವ ಹಕ್ಕು ಅವರಿಗೆ ಉಂಟು.
ಹಾಗೆ ಹಳೆಯದನ್ನು ಬಿಟ್ಟೂ ಬಿಡದ ಹಂಗೆ, ಹೊಸದನ್ನು ಹಿಡಿದೂ ಹಿಡಿಯದ ಹಂಗೆ ಇಂದಿನ ಸಮಾಜದಲ್ಲಿ ಎಲ್ಲರೂ ಇದ್ದಾರೆ. ಅದಕ್ಕೆ ಹಲವಾರು ಕಾರಣಗಳು. ವಿಧ್ಯಾಭ್ಯಾಸದ ಕ್ರಮ ಬದಲಾವಣೆ, ಹೊಸ ಹೊಸ ಸಾಧನಗಳು ಮತ್ತು ಮಾಹಿತಿ ತಂತ್ರಜ್ಞಾನದ ಸ್ಫೋಟ, ಜಾಗತೀಕರಣ, ಹೀಗೆ ಹತ್ತು ಹಲವಾರು. ಹಿಂದೆ ಇದ್ದದ್ದು ಇಂದು ಇಲ್ಲ. ಇಂದು ಇರುವುದು ಮುಂದಿರುವುದಿಲ್ಲ. ಅಂತಹ ಸ್ಥಿತಿಯಲ್ಲಿ ಜನರು ಯಾವುದೇ ಒಂದು ನಿರ್ಧಿಷ್ಟತೆಯಲ್ಲಿ ಇರದೇ ಒಂದು ಅತಂತ್ರದ ಸ್ಥಿತಿಯಲ್ಲಿದ್ದಾರೆ ಎಂದು ಮಾನ್ಯ ಗುಂಡಪ್ಪನವರ ಹೇಳುತ್ತಾರೆ. ಭಾಷೆ, ಜೀವನದ ಶೈಲಿ, ಉದ್ಯೋಗ, ಸಂಪಾದನೆ ಎಲ್ಲವೂ ಇಂದಿನ ಜನಾಂಗದ ಮೇಲೆ ಪರಿಣಾಮ ಬೀರಿದೆ. ಇಂದು ನಾವು ಹೊಸದಾಗಿ ಕಾಣುತ್ತಿರುವ ಹೊಸ ವಿಧ್ಯಮಾನವೇನಲ್ಲ. ನಮ್ಮ ಭಾರತೀಯ ಇತಿಹಾಸದಲ್ಲೇ ಬೇರೆ ಬೇರೆ ಸಮಯಗಳಲ್ಲಿ ಇಂತಹ ಅತಂತ್ರ ಸ್ಥಿತಿಗಳನ್ನು ನೋಡಬಹುದು. ಅಂದಿನ ಭೌಗೋಲಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಸ್ಥಿತಿಗಳು ಅಂದಿಗೆ, ಅಂದಿನ ಸ್ಥಿತಿಗೆ ಕಾರಣವಾಗುತ್ತದೆ.
ಚಾಣಕ್ಯನಂತಹ ಮುತ್ಸದ್ಧಿಗಳು ಬಂದಾಗ ಏನೋ ಒಂದು ರೀತಿಯ ಕಲರವ ಉಂಟಾಗಿ ಸ್ವಲ್ಪ ಬದಲಾವಣೆಗಳನ್ನು ಕಾಣಬಹುದು. ಆದರೆ ಸ್ವಾಭಾವಿಕವಾಗಿ ಮಾನ್ಯ ಡಿ.ವಿ.ಜಿ ಯವರು ಹೇಳಿದಂತೆ ಮತ್ತೆ ಅದೇ ಅತಂತ್ರ ಸ್ಥಿತಿಗೆ ಒಗ್ಗಿ ಹೋಗುತ್ತದೆ ಇಡೀ ಸಮಾಜ. ಆದರೆ ಇಂತಹ ಪ್ರತಿಪಾದನೆಗಳಿಗೆ, ಕೆಲವು ವ್ಯಕ್ತಿಗಳು ಅಪವಾದವಾಗಿ ಭಿನ್ನವಾಗಿರಬಹುದು. ಶುದ್ಧ ಸತ್ವದಲ್ಲಿ ಯಾವುದು ಪುರಾತನವೋ ಯಾವುದು ಸನಾತನವೋ ಅದನ್ನು ಪಾಲಿಸುತ್ತಿರಬಹುದು. ಆದರೆ ಒಟ್ಟಾರೆ ಸಮಾಜವನ್ನು ನೋಡಿದಾಗ ಎಲ್ಲೋ ಏನೋ ಸರಿಯಿಲ್ಲ ಎನ್ನುವ ಭಾವನೆ ಬರುತ್ತದೆ. ಅದನ್ನೇ ಡಿ.ವಿ.ಜಿ ಯವರು ” ಲೋಕ ತಲ್ಲಣಿಸಿಹುದಿಂದು” ಎಂದರು.
ಆದರೆ ನಾವು ನೋಡಬೇಕಾದದ್ದು ಏನೆಂದರೆ, ಇದು ಸರಿಯೇ ಎಂದು. ಬದಲಾವಣೆಯೇ ಪ್ರಪಂಚದ ಮೂಲ ಗುಣವಾದ್ದರಿಂದ ಇದು ಸರಿ. ಅಸ್ತಿತ್ವವನ್ನು ಕಳೆದುಕೊಳ್ಳುವುದರಿಂದ ಇದು ಸರಿಯಿಲ್ಲ. ಹಾಗಾಗಿ ಏನು ಮಾಡಬೇಕು. ಡಿ.ವಿ.ಜಿ ಯವರೆ ಮುಂದೆ ಯಾವುದೋ ಕಗ್ಗದಲ್ಲಿ ಹೇಳುತ್ತಾರೆ” ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ಹೊಸ ಯುಕ್ತಿ ಹಳೆ ತತ್ವ…..” ಎಂದು. ಅಂದರೆ ನೈಸರ್ಗಿಕವಾದ ಮತ್ತು ಸ್ವಾಭಾವಿಕವಾದ ಬದಲಾವಣೆ ಬೇಕು ಮತ್ತು ಆಗಬೇಕು. ಆದರೆ ಹೊಸತನ್ನು, ಹಳೆಯ ಮತ್ತು ಕಾಲದಲ್ಲಿ ಪರಿಕಿಸಿ ನಿರೂಪಿಸಲ್ಪಟ್ಟು ಸರ್ವಕಾಲಕ್ಕೂ ಅನ್ವಯವಾಗುವಂತಾ ಸಿದ್ಧಾಂತಗಳ ( theories ) ಆಧಾರದಮೇಲೆ ಹೊಸತು ಪಲ್ಲವಿಸ ಬೇಕು. ಆಗ ಹಳತು ಅಂತರ್ಯದಲ್ಲಿ ಉಳಿದು ಹೊಸತು ಪಲ್ಲವಿಸಿ ಬೆಳೆದು ಹಳೆಯದಕ್ಕೆ ಹೊಳಪ್ಪಿತ್ತಂತೆ ಆಗುತ್ತದೆ. ಹೊಸತು, ಆ ಹೊಳಪಿನ ಬೆಳಕಲ್ಲಿ ಸುಂದರವಾಗಿ ಕಾಣುತ್ತದೆ. ಆಗ ಎರಡೂ ಸಮನ್ವಯಗೊಂಡು ಒಂದು ಹೊಸ ನೆಲೆ ಸಿಕ್ಕಂತಾಗುತ್ತದೆ.
ಆದರೆ ವಿಷಾದವೇನೆಂದರೆ ಇಂದು ಯಾರಿಗೂ ಹಳೆಯದು ಬೇಡ. ಅದರ ಅರ್ಥ ಬೇಡ. ಅದರ ಸತ್ವ ಬೇಡ. ಅದನ್ನು ಗೊಡ್ಡು ಸಂಪ್ರದಾಯ ಎಂದು ಮೂದಲಿಸುವ, ಜರಿಯುವ, ನೇಪಥ್ಯಕ್ಕೆ ಸರಿಸುವ ಇಂದಿನ ಜನಾಂಗವು ಸತ್ಯವಾಗಲೂ ಗುಂಡಪ್ಪನವರು ಹೇಳಿದಂತೆ “ಎತ್ತಲೂ ಸೇರದ ಪ್ರೇತದಂತೆ ಲೋಕ ತಲ್ಲಣಿಸುತ್ತಿದೆ”.ಅಂತರ್ಪಿಶಾಚಿಗಳ ತರಹೆ ಇದ್ದಾರೆ.
ಎಲ್ಲರಲ್ಲೂ ಹಳೆಯ ಸತ್ವಯುತವಾದ ಸಿದ್ಧಾಂತಗಳ, ಸಂಸ್ಕೃತಿಯ, ಸಂಸ್ಕೃತಿಯನ್ನು ಒಳಗೊಂಡ ಭಾಷೆ, ಸಾಹಿತ್ಯ, ಕಲೆ ಮುಂತಾದವುಗಳನ್ನು ಪುರುಜ್ಜೀವನ ಮಾಡಲು ಒಂದು ಪ್ರಾಮಾಣಿಕ ಪ್ರಯತ್ನ ನಡೆಯಬೇಕು. ಅಂತಹ ಪ್ರಯತ್ನ ಎಲ್ಲ ಅಯಾಮಗಳಿಂದಲೂ ಒಂದೇ ಸಲಕ್ಕೆ ಒಂದು ಸ್ಫೋಟದಂತೆ ಆದಾಗ ಒಂದು ಸಕಾರಾತ್ಮಕವಾದ ಬದಲಾವಣೆಯನ್ನು ನಾವು ನೋಡಬಹುದು. ನಮ್ಮ ಭಾರತೀಯತೆಯನ್ನು, ಸಂಸ್ಕೃತಿಯನ್ನು ಉಳಿಸಬೇಕಾದರೆ ಅಂತಹ ಪ್ರಯತ್ನ ಅಗತ್ಯ.
ಬನ್ನಿ ಮಿತ್ರರೇ, ನಾವೂ ಅಂತಹ ಪ್ರಯತ್ನದಲ್ಲಿ ನಮ್ಮನ್ನು ನಾವೇ ತೊಡಗಿಸಿಕೊಳ್ಳೋಣ. ಅಂತಹ ವಿಚಾರಮಾಡುತ್ತಾ ಮುಂದಿನ ಕಗ್ಗಕ್ಕೆ ಹೋಗೋಣ.
ಇಂದಿನ ದಿನ ನಿಮಗೆಲ್ಲರಿಗೂ ಶುಭವಾಗಲಿ.
******************************************************
‘ಕೋಮುವಾದ ಮತ್ತು ಮಹಿಳೆ’ ಎಂಬ ಲೇಖನಕ್ಕೊಂದು ಪ್ರತಿಕ್ರಿಯೆ
– ಡಾ.ಜಿ. ಭಾಸ್ಕರ ಮಯ್ಯ
ಸಬಿಹಾರವರ ಮಹಿಳೆ ಮತ್ತು ಕೋಮುವಾದ ಇಂದು ವಿವಾದಕ್ಕೆ ಒಳಗಾಗಿರುವುದು ಜನರ ಕೋಮುವಾದೀಕರಣದ ಪ್ರಕ್ರಿಯೆ ಎಷ್ಟೊಂದು ಉಲ್ಬಣಿಸಿದೆ ಎನ್ನುವುದಕ್ಕೆ ಸಾಕ್ಷಿ. ಸಬಿಹಾರವರ ಲೇಖನದ
ಯಾವ ಒಂದು ವಾಕ್ಯವೂ ಅಸತ್ಯದಿಂದ ಕೂಡಿಲ್ಲ. ಪೂರ್ವಾಗ್ರಹಪೀಡಿತವಾಗಿಲ್ಲ. ಅದು ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ. ಹಾಗೆ ನೋಡಿದರೆ, ಗುಜರಾತಿನ ಬಗ್ಗೆ ಲೇಖಕಿ ಹೇಳಿರುವುದು ಕಡಿಮೆಯೆ. ಅಲ್ಲಿಯ ನರಮೇಧ ಮತ್ತು ಮಹಿಳೆಯರ ಮೇಲಿನ ಭಯಾನಕ ಅತ್ಯಾಚಾರ ಮಧ್ಯಯುಗದ ಯಾವುದೇ ಧರ್ಮಯುದ್ಧ, ಕ್ರುಸೇಡ್ ಮತ್ತು ಜಿಹಾದ್‌ಗೆ ಕಡಿಮೆಯಿಲ್ಲ. ಮನುಷ್ಯತ್ವದಲ್ಲಿ ನಂಬಿಕೆ ಇರುವವರಿಗೆ ಆಕ್ರೋಶ ಉಂಟಾಗುವಂತಹ ಸನ್ನಿವೇಶದ ಚಿತ್ರಣವನ್ನು ಲೇಖಕಿ ಅತ್ಯಂತ ಸಹನೆಯಿಂದ ಉಲ್ಲೇಖಿಸುತ್ತಾರೆ. ಕೋಮುವಾದದ ವಿವಿಧ ಮುಖಗಳನ್ನು ಮತ್ತು ಆಯಾಮಗಳನ್ನು ಚರ್ಚಿಸುತ್ತಾರೆ. ಆದರೆ, ಲೇಖನದ ಆರಂಭದಲ್ಲಿ ಫಣಿರಾಜರವರು ಕೋಮುವಾದದ ಕುರಿತು ಹೇಳಿದ ಮಾತಿನ ಒಂದು ಉಲ್ಲೇಖವಿದೆ. ಅದು …ಬಹುಸಂಖ್ಯಾತರ ಸಂಸ್ಕೃತಿಗೆ ಅಲ್ಪಸಂಖ್ಯಾತರು ಹೊರಗಿನವರು ಎಂದು ವಾದಿಸಿ ದ್ವೇಷ ತಿರಸ್ಕಾರಗಳನ್ನು ಬೆಳೆಸುವುದೇ ಕೋಮುವಾದ – ಕೋಮೂವಾದಕ್ಕೆ ಇಂತಹ ಸರಳ ವ್ಯಾಖ್ಯೆ ಸರಿಯಲ್ಲ. ಫಣಿರಾಜ್ ಮತ್ತು ಜಿ. ರಾಜಶೇಖರ್ ಕೋಮುವಾದವನ್ನು ವಿರೋಧಿಸುವಲ್ಲಿ ನಿಷ್ಪಕ್ಷಪಾತಿಗಳಾಗಿರದೆ, ಒಂದು ಕೋಮಿನ ಕೋಮುವಾದದ ಕುರಿತು ಮೌನವಹಿಸುವುದು ಅಥವಾ ಅಂತಹ ಸಂಸ್ಥೆಗಳೊಂದಿಗೆ ಸಂಬಂಧವನ್ನಿರಿಸಿಕೊಳ್ಳುವುದು ನಿಜಕ್ಕೂ ಆಕ್ಷೇಪಾರ್ಹ. ಆದರೆ ಸಬಿಹಾರವರ ಬರವಣಿಗೆ ಈ ನಿಟ್ಟಿನಲ್ಲಿ ದೋಷಮುಕ್ತವಾಗಿದೆ. ಅವರು ಪಾಕಿಸ್ತಾನ, ಬಾಂಗ್ಲಾ ಮತ್ತು ತಸ್ಲೀಮಾ ನಜರೀನ್ ಅವರನ್ನು ಉಲ್ಲೇಖಿಸುತ್ತಾ ನೆರೆಯ ದೇಶಗಳಲ್ಲಿ ಅಲ್ಪಸಂಖ್ಯಾತ ಹಿಂದುಗಳ ಮೇಲಿನ ದೌರ್ಜನ್ಯದ ಕುರಿತೂ ಹೇಳುತ್ತಾರೆ. ಸಬಿಹಾರವರ ಲೇಖನ ಈ ನಿಟ್ಟಿನಲ್ಲಿ ವಾಸ್ತವವಾದೀ, ಮಾನವತಾವಾದೀ ಬರವಣಿಗೆಯೆಂಬುದು ನಿಸ್ಸಂಶಯ.
ಬೆಳೆ ಬೆಳೆಸಿದರಷ್ಟೆ ನೆಲದ ಒಡೆತನ
– ಟಿ.ಎಂ.ಕೃಷ್ಣ
ಆಹಾರ ಧಾನ್ಯಗಳ ಬೆಲೆ ಒಂದೇ ಸಮನೆ ಗಗನಕ್ಕೇರುತ್ತಲೇ ಇದೆ. ಜನಸಾಮಾನ್ಯರೇನು- ಅಷ್ಟೋ ಇಷ್ಟೋ ಸ್ಥಿತಿವಂತರೇ ಜೀವನ ನಿರ್ವಹಿಸಲು ಸಾಧ್ಯವಾಗದಂತಾಗಿದೆ. ಕೆಳ, ಮದ್ಯಮ ವರ್ಗದವರು ತರಗೆಲೆಗಳಂತೆ ತತ್ತರಿಸತೊಡಗಿದ್ದಾರೆ. ಮುಂದುವರಿದ(?) ಮನುಷ್ಯನ ಅಗತ್ಯಗಳು ಅಗಣಿತವಾಗಿರಬಹುದಾದರೂ, ಮೂಲಭೂತ ಅಗತ್ಯವಾದ ಅನ್ನಾಹಾರಗಳ ಲಭ್ಯತೆ ಕಠಿಣವಾದರೆ ಏನಿದ್ದರೂ, ಯಾವುದೇ ತಂತ್ರಜ್ಞಾನವಿದ್ದರೂ ಅವೆಲ್ಲಾ ಅಪ್ರಸ್ತುತವಾಗಿಬಿಡುತ್ತವೆ. (ಚಿನ್ನದ ಕತ್ತಿ ಇದೆಯೆಂದು ಕುತ್ತಿಗೆ ಕೊಯ್ದುಕೊಳ್ಳಲಾದೀತೆ?)
ಅಗತ್ಯವಸ್ತುಗಳು ಕೈಗೆಟುಕದಂತಾಗಿರುವ ಈ ಸಂದರ್ಭದಲ್ಲಿ ಸರ್ಕಾರದ ಕಡೆ ಕೈ ತೋರಿಸುವುದು ಅನಿವಾರ್ಯವಾದರೂ, ಆಯಕಟ್ಟಿನ ಜಾಗಕ್ಕೆ ಕೈತೋರಿಸದಿರುವುದು ನಮ್ಮಲ್ಲಿನ ಪ್ರಜ್ಞಾವಂತರ ಪ್ರಜ್ಞೆಯ ಅವನತಿಯನ್ನು ಸೂಚಿಸುತ್ತದೆ. ಕುರಿಗಳು ಹಳ್ಳಕ್ಕೆ ಬಿದ್ದಂತೆ ಪ್ರತಿಯೊಬ್ಬರೂ ಪ್ರಸ್ತಾಪಿಸುತ್ತಿರುವುದು ಮಳೆ ಅಭಾವ, ಬೆಳೆನಷ್ಟ, ವ್ಯಾಪಾರಿಗಳು ಸೃಷ್ಟಿಸುತ್ತಿರುವ ಕೃತಕ ಅಭಾವ, ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ, ಜನಸಂಖ್ಯೆಯ ಹೆಚ್ಚಳ ಇತ್ಯಾದಿ…ಈ ಎಲ್ಲ ಕಾರಣಗಳಿಗೆ ನಿದರ್ಶನಗಳಿದ್ದರೂ, ಅವೆಲ್ಲಾ ತಾತ್ಕಾಲಿಕ ಅವ್ಯವಸ್ಥೆಗಳೇ ಹೊರತು ಮೂಲಭೂತ ಸತ್ಯಗಳಲ್ಲವೇ ಅಲ್ಲ.
ವಿವೇಕಾನಂದರ ವಾರಸುದಾರರು ಕೋಮುವಾದಿಗಳಲ್ಲ – ಪ್ರಗತಿಪರರು
– ಡಾ.ಭಾಸ್ಕರ್ ಮಯ್ಯ
ಆಧುನಿಕ ತತ್ವಶಾಸ್ತ್ರದ ಇತಿಹಾಸದಲ್ಲಿ ಸ್ವಾಮಿ ವಿವೇಕಾನಂದರಿಗೆ ಪ್ರಮುಖವಾದ ಸ್ಥಾನವಿದೆ. ವೇದಾಂತ ದರ್ಶನಕ್ಕೆ ನೂರಾರು ವ್ಯಾಖ್ಯಾನಗಳಿವೆ. ಆದರೆ ಅವುಗಳಲ್ಲಿ ಪ್ರಮುಖ ಸ್ಥಾನವಿರುವುದು `ಶಾಂಕರ ವೇದಾಂತ’ಕ್ಕೆ. ಆದರೆ, ಶಂಕರರು ವೇದಾಂತ ದರ್ಶನಕ್ಕೆ ವ್ಯಾಖ್ಯಾನ ಬರೆದಿರುವುದು ಭಾವವಾದೀ ದೃಷ್ಟಿಯಿಂದ ಶಂಕರರು ಭಾವವಾದದ ಮೇರು ಶಿಖರ ಎಂಬಲ್ಲಿ ಎರಡು ಮಾತಿಲ್ಲ. ಅವರಿಗೆ ಸರಿಗಟ್ಟುವ ಭಾವವಾಣಿ ದಾರ್ಶನಿಕರುಪಾಶ್ಚಾತ್ಯ ದರ್ಶನ ಶಾಸ್ತ್ರದಲ್ಲಿ ದೊರಕುವುದಿಲ್ಲ. ಆದರೆ, ವಿವೇಕಾನಂದರು ವೇದಾಂತಕ್ಕೆ ವ್ಯವಹಾರಿಕ ರೂಪವನ್ನು ಕೊಟ್ಟರು. ಈ ಬಗೆಯ ವ್ಯಾಖ್ಯಾನ ಕೂಡಾ ತತ್ವಶಾಸ್ತ್ರಕ್ಕೆ ನವನವೀನ.
ಅಗಾಧ ಪ್ರತಿಭೆ
1863ನೆಯ ಇಸವಿ ಜನವರಿ 12 ರಂದು ಕಲ್ಕತ್ತಾದ ಒಂದು ಕ್ಷತ್ರಿಯ ಕುಟುಂಬದಲ್ಲಿ ಜನಿಸಿದ ವಿವೇಕಾನಂದರು ಅಗಾಧ ಪ್ರತಿಭೆಯ ವ್ಯಕ್ತಿ. ಆ ಕಾಲದಲ್ಲಿಯೇ ಬಿ.ಎ. ಶಿಕ್ಷಣ ಮುಗಿಸಿದ ವಿವೇಕಾನಂದರು ( ಮೂಲ ಹೆಸರು ನರೇಂದ್ರನಾಥ) ವಿದ್ಯಾರ್ಥಿ ಜೀವನದಲ್ಲಿ ನಾಸ್ತಿಕರಾಗಿದ್ದರು. ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ಅವರ ಚಿಂತನಾ ಕ್ರಮವೇ ಬದಲಾಯಿತು.ರಾಮಕೃಷ್ಣರು ಮಹಾನ್ ಸಂತರಾಗಿದ್ದರೂ ಅನಕ್ಷರಸ್ತರು. ವಿವೇಕಾನಂದರು ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯ ಪ್ರಖಾಂಡ ಪಂಡಿತರು. ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರು ಒಂದೇ ಜೀವನದ ಎರಡು ಮುಖಗಳು ಅಥವಾ ಒಂದೇ ಸತ್ಯದ ಎರಡು ರೂಪಗಳು. ಇನ್ನೊಂದು ಬಗೆಯಲ್ಲಿ ಹೇಳುವುದಾದರೆ ರಾಮಕೃಷ್ಣರು ಅನುಭೂತಿ ಆದರೆ ವಿವೇಕಾನಂದರು ಅವರ ವ್ಯಾಖ್ಯಾನ ಅಭಿವ್ಯಕ್ತಿ.
ವಿವೇಕಾನಂದರು ಹಾರ್ಬರ್ತ್ ಸ್ಪೆನ್ಸರ್ ಹಾಗೂ ಜಾನ್ ಸ್ಟುವರ್ಟ್ರಮಿಲ್ ಅವರ ಪ್ರೇಮಿಯಾಗಿದ್ದರು. ಶೆಲಿ, ವರ್ಡ್ಸ್ವರ್ತ್ರ ದಾರ್ಶನಿಕತೆ, ಹೆಗಲ್ನ ವಸ್ತುನಿಷ್ಠ ಆದರ್ಶವಾದ ಹಾಗೂ ಫ್ರಾನ್ಸಿನ ರಾಜ್ಯಕ್ರಾಂತಿ ವಿವೇಕಾನಂದರನ್ನು ತೀವ್ರವಾಗಿ ಪ್ರಭಾವಿಸಿತ್ತು.
ವಿವೇಕಾನಂದರು ಕೇವಲ 39 ವರ್ಷಗಳ ಕಾಲ ಜೀವಿಸಿದ್ದರೂ ಅವರ ಸಂದೇಶ ಇವತ್ತಿನ ಕೋಮುವಾದಿ ರಾಜಕೀಯಕ್ಕೆ ಅತ್ಯಂತ ಪ್ರಬಲವಾದ ಶಸ್ತ್ರ. ರಾಮಮೋಹನ್ ರಾಯ್, ಕೇಶವ ಚಂದ್ರ ಸೇನ್, ದಯಾನಂದ ಸರಸ್ವತಿ, ರಾನಡೆ, ಅನಿಬೆಸೆಂಟ್ ಮತ್ತು ರಾಮಕೃಷ್ಣರು ಹದಮಾಡಿದ ನೆಲದಲ್ಲಿ ವಿವೇಕಾನಂದರು ಅಶ್ವತ್ಥದಂತೆ ಬೆಳೆದು ನಿಂತರು. ಇಂದು ಕೋಮುವಾದಿಗಳು ಆ ಅಶ್ವತ್ಥದ ರೆಂಬೆಕೊಂಬೆಗಳನ್ನು ಕಡಿದು ಯೂಪಸ್ಥಂಭ (ಬಲಿಸ್ಥಂಭ)ವನ್ನಾಗಿ ರೂಪಿಸುತ್ತಿದ್ದಾರೆ.
ಮಂಕು ತಿಮ್ಮನ ಕಗ್ಗ – ರಸಧಾರೆ (೧೫)
– ರವಿ ತಿರುಮಲೈ
ಲೋಕಜೀವನ ಮಂಥನ
ಹಳೆಯ ಭಕ್ತಿ ಶ್ರದ್ಧೆಯಳಿಸಿಹೋಗಿದೆ ಮಾಸಿ I
ಸುಳಿದಿಲ್ಲವಾವ ಹೊಸ ದರ್ಶನದ ಹೊಳಪುಂ II
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ I
ತಳಮಳಿಸುತಿದೆ ಲೋಕ – ಮಂಕುತಿಮ್ಮ II
ಹಳೆಯ ಭಕ್ತಿ ಶ್ರದ್ಧೆಯು ಅಳಿಸಿಹೋಗಿದೆ ಮಾಸಿ. ಸುಳಿದಿಲ್ಲವು ಯಾವ ಹೊಸ ದರ್ಶನದ ಹೊಳಪು
ಪಳಗಿದ್ದ ಮನೆ ಬಿದ್ದ ಕುಂಟ ಕುರುಡನ ತೆರದಿ ತಳಮಳಿಸುತಿದೆ ಲೋಕ ಮಂಕುತಿಮ್ಮ
ಮಾಸು = ಅಳಿಸು , ದರ್ಶನ=ಸಿದ್ಧಾಂತದ ಹೊಸ ರೂಪ, ತೆರದಿ= ತರಹೆ, ತಳಮಳಿಸು= ಒದ್ದಾಡು, ಪರದಾಡು
ಈಗ್ಗೆ ಎಪ್ಪತ್ತು ವರ್ಷಗಳ ಕೆಳಗೇ ಗುಂಡಪ್ಪನವರಿಗೆ ಹೀಗೆ ಅನ್ನಿಸಿದ್ದರೆ, ಇಂದು ಅವರು ಏನನ್ನುತ್ತಿದ್ದರೋ ಏನೋ!
ಇರಲಿ, ಪುರಾತನ ಕಾಲದಿಂದಲೂ ಅನೂಚಾನವಾಗಿ ಜನಗಳಲ್ಲಿ ಇದ್ದ ದೇವರಲ್ಲಿ ಭಕ್ತಿ ಮತ್ತು ಸಂಪ್ರದಾಯಗಳಲ್ಲಿ ಇದ್ದ ಶ್ರದ್ಧೆ ಈಗ ಅಳಿಸಿ ಹೋಗಿದೆ. ಇಲ್ಲಿ ಸಂಪ್ರದಾಯ ಎಂದರೆ ಹಿಂದಿನಿಂದ ಬಂದಿರುವ ನಡವಳಿಕೆ ಎಂದಷ್ಟೆ ಅರ್ಥ. ಜನರಲ್ಲಿ ಮತ್ತೆ ಈ ಭಕ್ತಿ ಮತ್ತು ಶ್ರದ್ಧೆಗಳನ್ನು ತರಲು ಯಾವ ಹೊಸ ಸಿದ್ಧಾಂತಗಳೂ ಪ್ರತಿಪಾದಿಸಲ್ಪಟ್ಟು ಪ್ರಚಾರಕ್ಕೆ ಬಂದಿಲ್ಲ. ಹಾಗಾಗಿ ಜನರೆಲ್ಲರೂ ಮೊದಲಿನಿಂದ ಬಂದದನ್ನು ಕಳೆದು ಕೊಂಡು ಹೊಸದಿಲ್ಲದೆ ಒಂದು ಅತಂತ್ರ ಸ್ಥಿತಿಯಲ್ಲಿದ್ದಾರೆ. ಯಾರ ಸಹಾಯವೂ ಇಲ್ಲದೆ ಸುಲಭವಾಗಿ ಮತ್ತು ಚೆನ್ನಾಗಿ ಓಡಾಡಲು ಅಭ್ಯಾಸವಾಗಿರುವ ಮನೆ ಕುಸಿದು ಹೋದರೆ, ಆ ಮನೆಯಲ್ಲಿ ವಾಸಿಸುವ ಕುಂಟನಿಗೋ ಕುರುಡನಿಗೋ, ಪಾಪ ತಳಮಳಿಸುವ ಮತ್ತು ಪರದಾಡುವಂತೆ ಆಗುತ್ತದಲ್ಲವೇ? ಹಾಗೆ ಆಗಿದೆ ಇಂದಿನ ಲೋಕದ ಪರಿಸ್ಥಿತಿ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
ಮತ್ತಷ್ಟು ಓದು 




