ದೇವಾಲಯ ಪ್ರವೇಶದ ಕುರಿತು ತಪ್ಪು ತಿಳಿವಳಿಕೆಗಳು
– ಡಾ. ರಾಜಾರಾಮ ಹೆಗಡೆ
ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗ,ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ.
ಇಂದು ಎರಡು ವಿಭಿನ್ನ ಸ್ಥಳಗಳಲ್ಲಿ ದೇವಾಲಯಗಳಿಗೆ ಸ್ತ್ರೀಯರ ಪ್ರವೇಶದ ಕುರಿತು ಹೋರಾಟಗಳು ನಡೆಯುತ್ತಿವೆ. ಈ ಹೋರಾಟವನ್ನು ನಡೆಸುತ್ತಿರುವವರು ಪ್ರಗತಿಪರರು ಹಾಗೂ ಸ್ತ್ರೀವಾದಿಗಳು. ಈ ಸಂದರ್ಭದಲ್ಲಿ ಅವರು ಎತ್ತುತ್ತಿರುವ ಚರ್ಚೆಯನ್ನು ಗಮನಿಸಿದಾಗ ಭಾರತೀಯ ಸಂಸ್ಕೃತಿಯ ಕುರಿತು ಈ ಮುಂದಿನ ತಪ್ಪು ಕಲ್ಪನೆಗಳು ಅವರಿಗೆ ಇರುವುದು ಸ್ಪಷ್ಟ. ಅದೆಂದರೆ: 1. ಹಿಂದೂ ಎನ್ನುವುದು ಇಸ್ಲಾಂ, ಕ್ರಿಶ್ಚಿಯಾನಿಟಿಗಳಂತೆ ಒಂದು ರಿಲಿಜನ್ನು. 2. ಹಿಂದೂಗಳ ದೇವಾಲಯಗಳು ಚರ್ಚು ಮಸೀದಿಗಳಂತೆ ಹಿಂದೂಗಳ ಸಾರ್ವಜನಿಕ ಪೂಜಾ ಸ್ಥಳಗಳು. ಹಾಗಾಗಿ ಹಿಂದೂ ಮಹಿಳೆಯರಿಗೆ ಇಂಥ ದೇವಾಲಯಗಳಲ್ಲಿ ಬಿಟ್ಟುಕೊಳ್ಳದಿರುವುದು ಲೈಂಗಿಕ ತಾರತಮ್ಯವನ್ನು ಮಾಡಿದಂತೇ ಎಂಬುದು ಅವರ ತರ್ಕ.
ಹಿಂದೂ ಎನ್ನುವುದು ಇಸ್ಲಾಂ ಕ್ರಿಶ್ಚಿಯಾನಿಟಿಗಳಂತೆ ರಿಲಿಜನ್ನಲ್ಲ. ಇದೊಂದು ಬಹು ಸಂಪ್ರದಾಯಗಳ ಸಮಾಜ. ಈ ಸಂಪ್ರದಾಯಗಳಿಗೆ ಆಧಾರವಾಗಿ ಕ್ರೈಸ್ತ ಮುಸ್ಲಿಮರಿಗೆ ಇರುವಂತೆ ಯಾವುದೇ ದೇವವಾಣಿ, ಪವಿತ್ರ ಗ್ರಂಥ ಅಥವಾ ಏಕರೂಪೀ ಡಾಕ್ಟ್ರಿನ್ನುಗಳ ಆಧಾರವಿಲ್ಲ. ಹಾಗಾಗಿ ಇಂಥ ಸಂಪ್ರದಾಯಗಳು ವೈವಿಧ್ಯಪೂರ್ಣವಾಗಿ ಬೆಳೆದುಕೊಂಡಿವೆ. ಹಿಂದೂ ದೇವಾಲಯಗಳು ಚರ್ಚುಗಳಂತೆ ಒಂದು ಕೇಂದ್ರೀಕೃತ ಆಡಳಿತ ವ್ಯವಸ್ಥೆಯ ಘಟಕಗಳಲ್ಲ. ಅವು ಹುಟ್ಟಿಕೊಳ್ಳುವುದು,ಅವುಗಳ ಅಭಿವೃದ್ಧಿ,ಜನಪ್ರಿಯತೆ,ನಿರ್ವಹಣೆ,ಅವನತಿ ಇವೆಲ್ಲ ಆಯಾ ಕ್ಷೇತ್ರಗಳ ಕ್ರಿಯಾಶೀಲತೆಗೆ ಸಂಬಂಧಪಟ್ಟ ಖಾಸಗಿ ವಿಚಾರಗಳಾಗಿವೆ. ಅವುಗಳಿಗೆ ಭಕ್ತರು ನಾನಾ ಕಡೆಗಳಿಂದ ಬರುತ್ತಾರೆ ಎಂಬ ಕಾರಣಕ್ಕೆ ಅವು ಸಾರ್ವಜನಿಕವಲ್ಲ. ಏಕೆಂದರೆ ಆ ಭಕ್ತರಿಗೆ ಅಲ್ಲಿ ಬರಲೇಬೇಕೆಂಬ ನಿರ್ಬಂಧವಿಲ್ಲ.ಭಕ್ತರು ಆಯಾ ಕ್ಷೇತ್ರದ ರೀತಿ ರಿವಾಜುಗಳಿಗೆ ಗೌರವಕೊಟ್ಟೇ ಅಲ್ಲಿಗೆ ತಮ್ಮ ಇಷ್ಟಾರ್ಥಗಳನ್ನು ಪಡೆಯಲು ಅಲ್ಲಿಗೆ ಬಂದಿರುತ್ತಾರೆ.ಯಾರಿಗಾದರೂ ಹೊಸ ದೇವಾಲಯವನ್ನು ಕಟ್ಟಿ ಬೆಳೆಸುವ ಆಯ್ಕೆ ಮುಕ್ತವಾಗಿದೆ. ಹಾಗಾಗಿ ನಮ್ಮಲ್ಲಿ ಜಾತಿಗಳಿಗೆ,ಮತಗಳಿಗೆ,ಕುಲಗಳಿಗೆ,ಪ್ರದೇಶಗಳಿಗೆ,ಊರುಗಳಿಗೆ,ಗಲ್ಲಿಗಳಿಗೆ ಪ್ರತ್ಯೇಕದೇವಾಲಯಗಳು ಇರುವುದು.
ಬಹುಶಃ ನನಗೇ ಈ ಶೋಷಣೆ,ಸಮಾನತೆ,ಸಹಪಂಕ್ತಿ ಇವೆಲ್ಲಾ ಅರ್ಥವಾಗೊಲ್ಲ
– ರಾಘವೇಂದ್ರ ಸುಬ್ರಹ್ಮಣ್ಯ,ಶೃಂಗೇರಿ
ಯಾಕಂದ್ರೆ ನಮ್ಮೂರಲ್ಲಿ ದೇವಸ್ಥಾನಕ್ಕೆ ಒಳಗೆ ಬಿಡೋದ್ರ ಬಗ್ಗೆ ಗಲಾಟೆಯೇ ಇಲ್ಲ. ಶೃಂಗೇರಿ ಅಂತಲ್ಲ, ಸುತ್ತ ಮುತ್ತಲಿನ ಯಾವೂರಿನಲ್ಲೂ ‘ಏಯ್ ಹೊರಗೆ ಹೋಗೋ, ದೇವಸ್ಥಾನದೊಳಗೆ ನೀನು ಬರೋ ಹಾಗಿಲ್ಲ’ ಅನ್ನಲ್ಲ. ಅಲ್ಲಿ ಜನರನ್ನ ಹೊರಗಿಡೋದು ಬಿಡಿ, ಉಲ್ಟಾ, ಕೆಲವಷ್ಟು ಕೆಲಸಗಳಿಗೆ ಕೆಲಜನರು ಬರದಿದ್ರೆ ಮುಖ್ಯ ಕೆಲಸಗಳೇ ನಡೀತಾ ಇರ್ಲಿಲ್ಲ. ಉದಾಹರಣೆಗೆ, ಭೋವಿ ಜನಾಂಗದ ಜನರು ಬಂದು ಪಲ್ಲಕ್ಕಿ ಹೊರ್ಲಿಲ್ಲ ಅಂದ್ರೆ, ಸಾರದಬಾಗಿಲಿನಿಂದ ಜನ ಬಂದು ದೀಪ, ದೀವಟಿಗೆ, ಚಾಮರ ಹಿಡೀಲಿಲ್ಲ ಅಂದ್ರೆ ನವರಾತ್ರಿಯ ಅಡ್ಡಪಲ್ಲಕ್ಕಿಯ ಉತ್ಸವವೇ ನಡಿತಾ ಇರ್ಲಿಲ್ಲ. ಅವತ್ತಿನ ಮಟ್ಟಿಗೆ ನಾನಂತೂ ಅದನ್ನ ಶೋಷಣೆ ಅಂತಾ ಅಂದ್ಕೊಳ್ಳಿಲ್ಲ. ಉಲ್ಟಾ ಅದು ನಮ್ಮ ಐಡೆಂಟಿಟಿಯಾಗಿತ್ತು. ಇವತ್ತಿನ ಹುಡುಗ್ರು ಏನಂದ್ಕೊಳ್ತಾರೋ ಗೊತ್ತಿಲ್ಲಪ್ಪ. ಶೃಂಗೇರಿಯಲ್ಲಂತೂ ಬುರ್ಖಾ ಹಾಕಿಕೊಂಡೇ ಕೆಲ ಹೆಣ್ಣುಮಕ್ಕಳು ದೇವಸ್ಥಾನದಲ್ಲಿರೋ ಮೀನುಗಳಿಗೆ ಮಂಡಕ್ಕಿ ತಿನ್ಸೋಕೆ ಬಂದಿರೋದನ್ನ ನೋಡಿದ್ದೇನೆ. ದೇವಸ್ಥಾನವೆಂದರೆ ನಾಲ್ಕು ಜನ ಸೇರೋ ಜಾಗ ಅಂದುಕೊಂಡು ಬೆಳೆದ ನನಗೆ ಶೋಷಣೆಯ ಆಂಗಲ್ಲೇ ಹೊಳೆಯಲಿಲ್ಲ. ಅದೂ ಅಲ್ದೆ ‘ತಿಂಗಳ ಆ ದಿನಗಳಲ್ಲಿ’ ದೇವಸ್ಥಾನದೊಳಗೆ ಹೋಗದ ನನ್ನ ಅತ್ತೆಯಂದಿರು, ಉತ್ಸವ ಮೂರ್ತಿ ಹೊರಗೆ ಬಂದಾಗ ಕೈಮುಗಿದು ‘ನೋಡು ನಾವು ಒಳಗೆ ಹೋಗದಿದ್ರೇನಂತೆ, ಶಾರದಮ್ಮನೇ ಹೊರಗೆ ಬಂದು ನಮಗೆ ದರ್ಶನ ಕೊಟ್ಲು’ ಅಂತಾ ಹೇಳಿದ್ದು ನನಗೆ ತಮಾಷೆ ಎನ್ನಿಸಲೇ ಇಲ್ಲ. ಅವೊಂತರಾ pradigm shift ಮಾಡುವಂತಾ ಮಾತುಗಳಾಗಿಬಿಟ್ಟವು. ಆದರೂ ಕೆಲವರು ‘ನಮ್ಮನ್ನು ದೇವಸ್ಥಾದೊಳಕ್ಕೆ ಬಿಡಲಿಲ್ಲ’ ಅಂತಾ ಹೋರಾಟ ಮಾಡುವಾಗ ನನಗೆ ಆಶ್ಚರ್ಯವಾಗುತ್ತೆ. ಅದಕ್ಕೇ ಏನೋಪ್ಪ ನನಗೆ ಇವೆಲ್ಲಾ ಅರ್ಥವಾಗೊಲ್ಲ.
ಸಮಾನತೆ, ವಿಶ್ವಭ್ರಾತೃತ್ವ ಮತ್ತು ನಾವು
-ಕ.ವೆಂ.ನಾಗರಾಜ್
“ನನಗೆ ಒಂದು ಕನಸು ಇದೆ. ಅದೆಂದರೆ ನನ್ನ ನಾಲ್ಕು ಮಕ್ಕಳು ಒಂದು ದಿನ ಅವರ ಬಣ್ಣಗಳಿಂದಲ್ಲದೆ ಅವರ ಗುಣಗಳಿಂದ ಗುರುತಿಸಲ್ಪಡುವ ದೇಶದಲ್ಲಿ ಬಾಳುತ್ತಾರೆ ಅನ್ನುವುದು” – ಇದು ಅಮೆರಿಕಾದ ದಿ. ಮಾರ್ಟಿನ್ ಲೂಥರ್ ಕಿಂಗ್ ರವರ ಉದ್ಗಾರ. ಇದು ಸಮಾನತೆಯನ್ನು ಬಯಸಿದ, ಅಲ್ಲಿ ಪ್ರಚಲಿತವಿದ್ದ ಕಪ್ಪು-ಬಿಳಿ ಜನಾಂಗ ದ್ವೇಷದ ವಿರುದ್ಧ ಹೋರಾಡಿದ್ದ ವ್ಯಕ್ತಿಯ ಕನಸು. ಸಮಾನತೆ ಅನ್ನುವ ಕಲ್ಪನೆ ಯಾವುದೇ ಆದರ್ಶಮಾನವನ ಗುರಿ. ಸಮಾನತೆ ಅಂದರೇನು ಅನ್ನುವುದಕ್ಕೆ ವಿವರಣೆ ನೀಡುವುದು ಕಷ್ಟವೇ ಸರಿ. ಸರಿಸಮ ಎಂಬುದು ನಿಘಂಟಿನ ಅರ್ಥ. ವ್ಯಾವಹಾರಿಕ ಜಗತ್ತಿನಲ್ಲಿ ಸಮಾನತೆಯ ಕಲ್ಪನೆಯ ಸಾಕಾರ ಹೇಗೆ ಎಂಬುದರ ಕುರಿತು ಚಿಂತಿಸಬೇಕಿದೆ. ಭಾರತದ ಸಂವಿಧಾನದಲ್ಲಿ ದೇಶದ ನಾಗರಿಕರಲ್ಲಿ ಜಾತಿ, ಮತ, ಲಿಂಗ, ಭಾಷೆ – ಇಂತಹ ಯಾವುದೇ ಕಾರಣದಿಂದ ಭೇದ ಕೂಡದು, ಎಲ್ಲರಿಗೂ ಸಮಾನವಾದ ಹಕ್ಕು ಇದೆ ಎಂದಿದೆ. ಆದರೆ ಇಲ್ಲಿ ಜಾತಿಯ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಲಿಂಗದ ಹೆಸರಿನಲ್ಲಿ, ಭಾಷೆಯ ಹೆಸರಿನಲ್ಲಿ ಭೇದ ಭಾವ ತಾಂಡವವಾಡುತ್ತಿರುವುದು ದುರ್ದೈವ. ಯಾರು ಈ ಸಮಾನತೆಯನ್ನು ಸಾಧಿಸಬೇಕಿದೆಯೋ ಆ ಆಳುವ ಸ್ಥಾನದಲ್ಲಿರುವ ಜನಪ್ರತಿನಿಧಿಗಳೇ ಇಂತಹ ಭೇದ ಭಾವಗಳನ್ನು ಉಳಿಸಿ, ಪೋಷಿಸಿಕೊಂಡು ಬರುತ್ತಿರುವುದು ಘೋರ ಸತ್ಯ.
ಕನ್ನಡ/ಇಂಗ್ಲೀಷ್ ಮಾಧ್ಯಮದ ಜೊತೆಗೆ ಏಕರೂಪ ಶಿಕ್ಷಣದ ಬಗ್ಗೆಯೂ ಚರ್ಚೆ ಆಗಬೇಕಲ್ಲವೇ?
– ರಾಕೇಶ್ ಶೆಟ್ಟಿ
ಕಡೆಗೂ ‘ಸರ್ಕಾರ ಏಕರೂಪ ಶಿಕ್ಷಣ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ಚಿಂತಿಸಬೇಕು’ ಅನ್ನುವ ಮಾತುಗಳನ್ನು ಕಸಪಾ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದ್ದಾರೆ.ಕಳೆದ ಹಲವು ದಿನಗಳಿಂದ ಇಂಗ್ಲೀಷ್ ಮಾಧ್ಯಮದ ಸುತ್ತ ನಡೆಯುತ್ತಲಿರುವ ಚರ್ಚೆಯಲ್ಲಿ ನಾನು ನಿರೀಕ್ಷಿಸುತಿದ್ದ ಮಾತು “ಏಕರೂಪ ಶಿಕ್ಷಣ”ದ ಬಗ್ಗೆ.ಪೇಟೆಯ/ಉಳ್ಳವರ ಮಕ್ಕಳಿಗೊಂದು ಶಿಕ್ಷಣ,ಹಳ್ಳಿಯ/ಬಡವರ ಮಕ್ಕಳಿಗೊಂದು ಶಿಕ್ಷಣ ಕೊಟ್ಟು ಕಡೆಗೆ ಸಮಾನತೆ,ಸಾಮಾಜಿಕ ನ್ಯಾಯ,ಭಾಷೆ,ನಾಡು-ನುಡಿಯ ಅಳಿವು ಉಳಿವು ಅಂತ ಮಾತನಾಡುವುದೆಷ್ಟು ಸರಿ?
೧೦ನೆ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ ನನಗೆ ಮಾತೃ ಭಾಷೆಯಲ್ಲಿ ಕಲಿಯುವುದೆಷ್ಟು ಸುಲಭ,ಆನಂದದ ವಿಷಯ ಅನ್ನುವುದರ ಅರಿವಿದೆ ಹಾಗೆಯೇ ೧೦ರ ನಂತರ ಇಂಗ್ಲೀಷ್ ಮಾದ್ಯಮಕ್ಕೆ (ಪಿಯುಸಿಯಲ್ಲಿ ಆಯ್ದುಕೊಂಡಿದ್ದು ವಿಜ್ಞಾನ ವಿಷಯ) ಕಾಲಿಟ್ಟಾಗ ಅನುಭವಿಸಿದ ಕಷ್ಟ,ಕೀಳರಿಮೆಯ ಅನುಭವಗಳು ಇವೆ.ಹಾಗಾಗಿ ಈ ಚರ್ಚೆಯಲ್ಲಿ ಮತ್ತು ಈಗಿನ ನಮ್ಮ ಶೈಕ್ಷಣಿಕ ಪರಿಸ್ಥಿತಿಯಲ್ಲಿ ನಾನು ಇಂಗ್ಲೀಷ್ ಮೀಡಿಯಂ ಬೇಕು ಅನ್ನುವುದರ ಪರವೇ ನಿಲ್ಲುತ್ತೇನೆ.
ಒಂದು ವೇಳೆ ಸಾಹಿತಿಗಳು ಒತ್ತಾಯಿಸುತ್ತಿರುವಂತೆ ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲೇ ಆಗಬೇಕು ಅನ್ನುವುದಾದರೆ ಅದು ಈ ರಾಜ್ಯದಲ್ಲಿರುವ ಸರ್ಕಾರಿ/ಅನುದಾನಿತ/ಕೇಂದ್ರೀಯ/ಖಾಸಗಿ ಶಾಲೆಗಳಿಗೂ ಏಕರೂಪವಾಗಿ ಅನ್ವಯವಾಗಲಿ. ಅದನ್ನು ಬಿಟ್ಟು ಸರ್ಕಾರಿ ಶಾಲೆಗಳಲ್ಲಿ ಮಾತ್ರ ಕನ್ನಡ ಕಡ್ಡಾಯವಾಗಲಿ ಆ ಮೂಲಕ ಬಡವರ ಮಕ್ಕಳು ಮಾತ್ರ ಕನ್ನಡದಲ್ಲಿ ಕಲಿತು ಮುಂದೆ ಇಂಗ್ಲೀಷ್ ಲೋಕಕ್ಕೆ ಕಾಲಿಟ್ಟು ಅರ್ಧಕರ್ಧ ಜನ ಕೀಳರಿಮೆ,ಹೆದರಿಕೆಯಿಂದಾಗಿ ಹಿಂದೆ ಬೀಳಲಿ ಅನ್ನುವುದು ಇಬ್ಬಗೆಯ ನೀತಿಯಾಗುತ್ತದೆ.
ಏಕರೂಪ ಶಿಕ್ಷಣ ಅನ್ನುವಾಗ ಇನ್ನೊಂದು ಅಂಶವನ್ನ ನಾವು ಗಮನಕ್ಕೆ ತೆಗೆದುಕೊಳ್ಳಬೇಕು.ಮಕ್ಕಳನ್ನು ಶಾಲೆಗೇ ಸೇರಿಸುವಾಗ ಅದು ಇಂಗ್ಲೀಷ್ ಮೀಡಿಯಂ ಶಾಲೆಯೇ ಅಂತ ಮಾತ್ರ ಈಗಿನ ಪೋಷಕರು ನೋಡುತ್ತಿಲ್ಲ,ಅದರ ಜೊತೆಗೆ ಅವರು ಅಲ್ಲಿರುವುದು ಸೆಂಟ್ರಲ್ ಸಿಲ್ಲಬಸ್ಸೋ,ಐ.ಸಿ.ಎಸ್.ಈ ಸಿಲ್ಲಬಸ್ಸೋ (ಅಥವಾ ಇನ್ಯಾವುದೋ) ಅನ್ನುವುದನ್ನು ನೋಡುತಿದ್ದಾರೆ.ನಮ್ಮ ಮಕ್ಕಳು ಇಂತ ಸಿಲಬಸ್ಸ್ ಇರೋ ಶಾಲೆಯಲ್ಲಿ ಓದುತಿದ್ದಾರೆ ಅಂತ ಹೇಳಿಕೊಳ್ಳುವುದು ಈಗಿನ ಪೋಷಕರಿಗೆ ಗರ್ವದ ವಿಷಯವಾಗಿದೆ. ಅಸಲಿಗೆ ಈ ರೀತಿ ಬೇರೆ,ಬೇರೆ ಸಿಲ್ಲಬಸ್ಸಿನ ಅಗತ್ಯ ಶಾಲಾ ಮಟ್ಟದಲ್ಲಿ ಏನು ಅನ್ನುವುದು ಸಹ ಚರ್ಚೆಯಾಗಬೇಕಲ್ಲವೇ?