ವಿಷಯದ ವಿವರಗಳಿಗೆ ದಾಟಿರಿ

ಜನವರಿ 12, 2013

3

ತೇಜಃಪುಂಜ

‍ನಿಲುಮೆ ಮೂಲಕ

– ರಾಜೇಶ್ ರಾವ್

Rastriya Yuva Dinaತಮಿಳುನಾಡಿನ ಒಂದು ಹಳ್ಳಿ. ಮರವೊಂದರ ಕೆಳಗೆ ಕುಳಿತು ಸಂತನೊಬ್ಬ ತನ್ನ ಶಿಷ್ಯರಿಗೆ ಹೇಳುತ್ತಿದ್ದಾನೆ…

“ಹಿಂದೂಸ್ಥಾನ ಮತಾಂಧರ ದಾಸ್ಯಕ್ಕೆ ಸಿಲುಕಿ ತನ್ನ ಕ್ಷಾತ್ರತ್ವ, ಸ್ವಾಭಿಮಾನ, ಅಸ್ಮಿತೆಯನ್ನು ಮರೆತು ನಿದಿರೆ, ಮದಿರೆ, ನಪುಂಸಕತ್ವದ ವಶವಾಗಿದ್ದಾಗ ದೇಶದ ಕ್ಷಾತ್ರ ತೇಜವನ್ನು ಬಡಿದೆಬ್ಬಿಸಿದನಾತ. ಮತಾಂಧ ಮೊಘಲ್, ಆದಿಲ್, ನಿಜಾಮ್, ಬರೀದ್, ಕುತುಬ್, ಇಮಾಮ್ ಶಾಹಿಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ಹಿಂದೂಗಳ ಮಾನ, ಪ್ರಾಣ ರಕ್ಷಣೆ ಮಾಡಿದ. ತೋರಣ, ಚಾಕಣ, ಪನ್ನಾಳ, ಪುರಂದರ…ಹೀಗೆ ಕೋಟೆಗಳ ಮೇಲೆ ಕೋಟೆ ಗೆದ್ದು…ಛತ್ರಪತಿಯಾಗಿ ಹಿಂದೂಸಾಮ್ರಾಜ್ಯದ ಶೌರ್ಯ, ಸ್ಥೈರ್ಯ, ಸಾಹಸವನ್ನು ಜಗತ್ತಿಗೆ ಪ್ರಚುರಪಡಿಸಿದ….”

ಶಿಷ್ಯರಿಗೋ ಆಶ್ಚರ್ಯ. ತಮ್ಮ ಗುರುಗಳ್ಯಾಕೆ ಆ ದರೋಡೆಕೋರ ಶಿವಾಜಿಯ ಬಗ್ಗೆ ಹೇಳುತ್ತಿದ್ದಾರೆ?

ಆ ಗುರು ಮತ್ಯಾರು ಅಲ್ಲ. ಮುಂದೊಂದು ದಿನ ಐದೇ ಐದು ನಿಮಿಷಗಳ ಭಾಷಣದಲ್ಲಿ ಜಗತ್ತಿನ ಎದುರು ತನ್ನ ದೇಶ ಜಗತ್ತಿನ ಗುರು, ತನ್ನ ಸಂಸ್ಕೃತಿ ಉತ್ಕೃಷ್ಟವಾದ ಸನಾತನ ಸಂಸ್ಕೃತಿ, ತನ್ನ ನಾಗರೀಕತೆ ಇಂದಿಗೂ ಅಳಿದಿಲ್ಲ ಎಂದು ಜಾಗತಿಕ ಧರ್ಮ ಸಮ್ಮೇಳನದಲ್ಲಿ ಭಾರತದ ಹಿರಿಮೆ, ಗರಿಮೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟನೋ, ನನ್ನ ಭಾರತಕ್ಕೆ ಶಿವಾಜಿಯಂತಹ ೧೦೦ ಮಂದಿ ತರುಣರು ಸಾಕೆಂದು ಯುವ ಜನತೆಯನ್ನು ಬಡಿದೆಬ್ಬಿಸಿದನೋ ಅಂತಹ ಸಿಡಿಲ ಸಂತ ಸ್ವಾಮಿ ವಿವೇಕಾನಂದ.

ಹೌದು. ಭಾರತದ ಕ್ಷಾತ್ರ ತೇಜ ಬ್ರಿಟಿಷರ ಎದುರು ಮಕಾಡೆ ಮಲಗಿತ್ತು. ವಿದ್ಯಾವಂತರೆನಿಸಿಕೊಂಡವರು ಗುಲಾಮೀ ಮಾನಸೀಕತೆಯ ಆಳಾಗಿ ಆಂಗ್ಲ ಇತಿಹಾಸಕಾರರು ಬರೆದುದೇ, ಹೇಳಿದ್ದೇ ಸತ್ಯ ಅಂತ ನಂಬಿದ್ದ ಕಾಲವದು. ಅವರ ದೃಷ್ಟಿಯಲ್ಲಿ ಶಿವಾಜಿ, ರಾಣಪ್ರತಾಪ, ತಾತ್ಯಾಟೋಪೆ, ಫಡಕೆ, ಕೂಕಾ… ದರೋಡೆಕೋರರಾಗಿದ್ದರು! ಸ್ವಾತಂತ್ರ್ಯ ಸಂಗ್ರಾಮ ದಂಗೆಯೆನಿಸಿಕೊಂಡಿತ್ತು.( ಅದನ್ನು ದಂಗೆಯಲ್ಲ, ಸ್ವಾತಂತ್ರ್ಯ ಸಂಗ್ರಾಮ ಅಂತ ಮೊಟ್ಟಮೊದಲು ನಿರೂಪಿಸಿದವರು ಸಾವರ್ಕರ್). ಅಂತಹ ಸಂದರ್ಭದಲ್ಲಿ ಭಗವಂತನ ಅವತಾರ ಎಂದೆನಿಸಿಕೊಂಡಿದ್ದ ರಾಮಕೃಷ್ಣ ಪರಮಹಂಸರ ಅಮೃತ ಹಸ್ತದಿಂದ ರಾಷ್ಟ್ರ ನಿರ್ಮಾಣಕ್ಕಾಗಿ ಕಡೆಯಲ್ಪಟ್ಟ ಶಿಲ್ಪ ಅದು. ಅದು ಇಡೀ ದೇಶದಲ್ಲಿ ಬಿರುಗಾಳಿಯಂತೆ ಸಂಚರಿಸಿ ಧರ್ಮ, ಸಂಸ್ಕೃತಿ, ಕ್ಷಾತ್ರವನ್ನು ಬಡಿದೆಬ್ಬಿಸಿತು.

ಭಾರತೀಯರ ಸರಳತೆಯನ್ನು, ವ್ಯಕ್ತಿಯನ್ನು ಜಗತ್ತಿನೊಂದಿಗೆ ಸಮರಸಗೊಳಿಸಬಲ್ಲ ಇಲ್ಲಿಯ ಸಂಸ್ಕಾರವನ್ನು ಜಗತ್ತಿನಾದ್ಯಂತ ಸಾಧ್ಯಂತವಾಗಿ ವಿವರಿಸಿದರು. ವಿಶ್ವವಿರಾಟವನ್ನು ವ್ಯಾಪಿಸಬಲ್ಲ ಹಿಂದೂಗಳ ಮುಗ್ಧ ಪ್ರೀತಿಯನ್ನು ಮೆಚ್ಚಿದರು. ಬೆಂಕಿಯನ್ನು ಕೆಣಕಿದೊಡನೆ ಭಗ್ಗನೆ ಉರಿಯುವ ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತು ಬೆರಗಾಗುವಂತೆ ನೆನಪಿಸಿದರು. ನೋವಿಗೆ ಮರುಗುವ ಕಣ್ಣ ನೀರ ದೃಷ್ಟಿಯನ್ನು ಶುಭ್ರಗೊಳಿಸಿ, ಮನುಷ್ಯ ಮರಕಲ್ಲುಗಳನ್ನು ಕಾಣುವ ನೋಟದ ದ್ವೈತ ಭಾವವನ್ನು ಮರೆಸುವ ಪಾರಮಾರ್ಥದ ಸಿದ್ಧಿಯನ್ನು ಪ್ರಪಂಚದ ಮೂಲೆ ಮೂಲೆಗೂ ಪಸರಿಸುವಂತೆ ಮಾಡಿದ ವೇದಾಂತಿ ಅವರು.

“Who dares misery love and hugs the form of death, to him the mother comes” ಎಂಬ ಅವರ ಆವಾಹನ ಮಂತ್ರಕ್ಕೆ ಸಾವಿರಾರು ಯುವಕರು ಓಗೊಟ್ಟರು. ವಿನಂತಿ ಸರಣಿಗಳಿಂದಾಗಲಿ ಅಹಿಂಸಾದಿ ಮಾರ್ಗಗಳಿಂದಾಗಲಿ ಸ್ವಾತಂತ್ರ್ಯ ಸಾಧನೆ ಆಗದೆಂದು ಅವರು ಅಸಂದಿಗ್ಧವಾಗಿ ಸಾರಿದ್ದರು.

“ಮಾರಕ ಯಂತ್ರಗಳು, ಧನಬಲ, ಸರಕುರಾಶಿಗಳಿಂದ ಮೆರೆಯುವ ವಣಿಕರ ಜಗತ್ತಿನಲ್ಲಿ ಭಿಕ್ಷಾಪಾತ್ರೆಗೆ ಸ್ಥಾನವಿರದು. ಆ ಬಲದೆದುರು ಮಹಾಮಾಯೆಯ ವಾಣಿಯ, ಎಂದರೆ ಮಾನವನ ಅಂತಸ್ಥಶಕ್ತಿಯ ಸ್ಫೋಟ ಮಾತ್ರ ಮಾನವಗತಿಗೆ ಹೊಸ ದಿಕ್ಕನ್ನು ನೀಡೀತು” ಎಂದು ಜನರಿಗೆ ಕರೆ ಕೊಟ್ಟಿದ್ದರು.

ಭಾರತದ ರಾಷ್ಟ್ರೀಯತೆಗೆ ಸಕ್ರಿಯತೆ ತುಂಬಿ ಭಾರತೀಯರಲ್ಲಿ ರಾಜ್ಯಕ್ಕೆ ಅಧಿಸ್ಠಾನವಾಗಿ ಸಾಮುದಾಯಿಕ ಭಾವನೆಯನ್ನು ಉಂಟು ಮಾಡಿದ ಅವರು ಕಾಂಗ್ರೆಸ್ಸಿನ ಮನವಿ ರಾಶಿಗಳಿಂದ ಪ್ರಯೋಜನವಾಗದೆಂದು ಬಲವಾಗಿ ನಂಬಿದ್ದರು. ಮದ್ರಾಸಿನಲ್ಲಿ ಮಾಡಿದ ಭಾಷಣದಲ್ಲಿ  “Heaven is nearer through football than through Gita. We want men of strong biceps ” ಎಂದು ಕಂಠೋಕ್ತವಾಗಿ ಸಾರಿದ್ದರು.

ಸ್ವಯಂ ವಿವೇಕಾನಂದರೇ ಹೇಮಚಂದ್ರ ಘೋಷ್ ಮತ್ತು ಸಂಗಡಿಗರ ಮೂಲಕ ೧೯೦೨ರಲ್ಲಿ ಕ್ರಾಂತಿ ಸಂಘಟನೆಯೊಂದನ್ನು ಹುಟ್ಟು ಹಾಕಿದ್ದರು. ಮುಂದೆ ಬ್ರಹ್ಮಬಾಂಧವ ಉಪಧ್ಯಾಯ ಅದಕ್ಕೆ ಮುಕ್ತಿಸಂಘ ಎಂದು ಹೆಸರಿಟ್ಟು ಮುನ್ನಡೆಸಿದರು. ವಿವೇಕಾನಂದರ ಕುರಿತು ಫ್ರಾನ್ಸಿನ ಅಗ್ರಮಾನ್ಯ ಚಿಂತಕ ರೋಮಾರೋಲಾ “The neo-Vedantism of swami vivekananda put new life in themoribund Indian nationalism” ಎಂದು ವಿವೇಕಾನಂದರಿಂದ ದೊರೆತ ಚೇತರಿಕೆಯನ್ನು ಬಣ್ಣಿಸಿದ್ದಾನೆ.

ಅವರ ದೃಷ್ಟಿಯಲ್ಲಿ ಭಾರತೀಯ ಹೇಗಿರಬೇಕು?

” ನಾನು ಹಲವು ವರ್ಷಗಳಿಂದ ಪಶ್ಚಿಮ ದೇಶಗಳಲ್ಲಿ ಇದ್ದುದರಿಂದ ನನಗೆ ಗೊತ್ತು. ಅಲ್ಲಿಯ ದೃಷ್ಟಿ ಬೇರೆ. ನಡೆಯುವ ದಾರಿ ಬೇರೆ. ಅದನ್ನು ಕುರುಡರಂತೆ ಅನುಸರಿಸಿದರೆ ನಮ್ಮ ದಾರಿಯು ತಪ್ಪುತ್ತದೆ. ನಾವು ಆದರ್ಶರೆನ್ನುವ ಸೀತೆ, ಸಾವಿತ್ರಿ, ದಮಯಂತಿಯರು ತ್ಯಾಗದ ಮೂರ್ತಿಗಳು. ನಾವು ಪೂಜಿಸುವ ದೇವರು ಕೂಡಾ ತ್ಯಾಗದ ಸಂಕೇತಗಳೇ. ಸಂನ್ಯಾಸಿಯಂತಿದ್ದ ಶಂಕರನೇ ನಮ್ಮ ಆರಾಧ್ಯದೈವ” ಇದು ಇಂದಿನ ಪಾಶ್ಚಾತ್ಯ ಮಾನಸಿಕತಾವಾದಿಗಳು ತಿಳಿಯಬೇಕಾದ ಅಪ್ಪಟ ಸತ್ಯವಲ್ಲವೇ?

ಮುಸ್ಲಿಂ ಮಾನಸಿಕತೆಯ ಒಳಹೊರಗುಗಳ ಬಗ್ಗೆ ಸ್ಪಷ್ಟ ವೈಚಾರಿಕ ವ್ಯಗ್ರತೆಯು ಅವರ ಮಾತುಗಳಲ್ಲಿ ಕಂಡುಬರುತ್ತಿತ್ತು. “ಮುಸಲ್ಮಾನರು ಯೆಹೂದಿಗಳನ್ನು ಮತ್ತು ಕ್ರೈಸ್ತರನ್ನು ದ್ವೇಷಿಸುವುದು ಯಾಕೆಂದರೆ ಅವರು ತಮಗಿಂತಲೂ ಕ್ಷುಲ್ಲಕವಾದ ನಂಬಿಕೆಗಳನ್ನು ಹೊಂದಿರುವ ಜನರೆಂದು. ಆದರೆ ಹಿಂದೂಗಳ ಬಗೆಗೆ ಅವರದ್ದು ತೀವ್ರವಾದ ದ್ವೇಷ ಭಾವನೆ. ಹಿಂದುಗಳು ವಿಗ್ರಹಗಳನ್ನು ಪೂಜಿಸುವುದರಿಂದ ಅವರು ಕಾಫಿರ ಜನರು. ಅಂತಹವರು ಬದುಕಲು ಯೋಗ್ಯರಲ್ಲ. ಅವರನ್ನು ನಿರ್ನಾಮ ಮಾಡುವುದೇ ನಮ್ಮ ಗುರಿ-ಇದು ಮುಸ್ಲಿಮರ ಮನಸ್ಸು” ಎಂಬುದು ಅವರ ವಿಶ್ಲೇಷಣೆ.

ಕೊಲಂಬೋದಿಂದ ಅಲ್ಮೋರಾದವರೆಗೆ ಉಪನ್ಯಾಸ ಮಾಲೆಯಲ್ಲಿ ವಿವೇಕಾನಂದರು ಯಾವ ಶಕ್ತಿಪಂಥದ ಪ್ರತಿಪಾದನೆ ಮಾಡಿದ್ದರೋ ಅದು ೧೯೦೫ರ ಸ್ವದೇಶೀ ಆಂದೋಲನದಲ್ಲಿ ಮೂರ್ತರೂಪದಲ್ಲಿ ಪ್ರಕಟಗೊಂಡಿತು. ಶಿಷ್ಯೆ ಭಗಿನಿ ನಿವೇದಿತಾರನ್ನು ರಾಷ್ಟ್ರಸೇವೆಗೆ ಸಮರ್ಪಿಸಿದರು. “ಭಗವತಿ ಬೇಡುತ್ತಿರುವುದು ರಾಷ್ಟ್ರೀಯತೆಯ ನೈವೇದ್ಯವನ್ನೇ ಹೊರತು ಸೌಮ್ಯ ವಿಧೇಯತೆಯನ್ನಲ್ಲ. ನನಗೆ ಧೃಢಕಾಯರಾದ, ಸಿಂಹದ ಗುಂಡಿಗೆಯುಳ್ಳ, ಮಿಂಚಿನೋಪಾದಿಯಲ್ಲಿ ಸಂಚರಿಸಬಲ್ಲ, ತನು ಮತ್ತು ಮನದಿಂದ ತರುಣರಾದ ೧೦೦ ಮಂದಿ ಯುವಕರನ್ನು ಕೊಡಿ. ಬಲಿಷ್ಠ ಭಾರತವನ್ನು ನಿರ್ಮಿಸಬಲ್ಲೆ. ಏಳಿ ಎದ್ದೇಳಿ” ಎಂದು ಭಾರತೀಯರ ಅಂತಃಸತ್ವವನ್ನು ಬಡಿದೆಬ್ಬಿಸಿದ ಆ ಸೂರ್ಯ ೩೯ರ ಎಳೇ ಪ್ರಾಯದಲ್ಲಿಯೇ ಅಸ್ತಮಿಸಿದ್ದು ಭಾರತದ ದೌರ್ಭಾಗ್ಯವಲ್ಲವೇ?

ಆವರ ಕನಸು ನನಸು ಮಾಡುವಲ್ಲಿ ನಾವು ಪ್ರಯತ್ನ ಮಾಡಲೇ ಇಲ್ಲ… ೧೫೦ ಅಲ್ಲ ಸಾವಿರವಾದರೂ ಇದೇ ಮನಸ್ಥಿತಿ ಇದ್ದರೆ ಭಾರತದ ಸ್ಥಿತಿ ಅಧೋಗತಿ…ಎದ್ದೇಳು ಅರ್ಜುನ!

3 ಟಿಪ್ಪಣಿಗಳು Post a comment
  1. bhadravathi's avatar
    bhadravathi
    ಜನ 13 2013

    ಸ್ವಾಮೀ ವಿವೇಕಾನಂದ ಇಸ್ಲಾಮಿನ ಬಗ್ಗ್ಗೆ ಹೇಳಿದ್ದು ಹೀಗೆ. ” ಇಸ್ಲಾಂ ಒಂದು ಒಳ್ಳೆಯ ಧರ್ಮ ವಲ್ಲದಿದ್ದರೆ ಅದು ಇಷ್ಟು ಕಾಲ ಇರಲು ಸಾಧ್ಯವಿಲ್ಲ. ಒಳ್ಳೆಯದು ಮಾತ್ರ ದೀರ್ಘ ಕಾಲ ನಿಲ್ಲುತ್ತದೆ. ಪ್ರವಾದೀ ಮುಹಮ್ಮದರು ಸೋದರತೆ ಮತ್ತು ಸಮಾನತೆಯನ್ನು ಸಾರಿದವರು. ವರ್ಗ, ಜಾತಿ, ಕುಲ, ಬಣ್ಣ, ಲಿಂಗಬೇಧ ಎನ್ನುವ ಪ್ರಶ್ನೆಯೇ ಇಸ್ಲಾಮಿನಲ್ಲಿ ಇಲ್ಲ. ತುರ್ಕಿ ದೇಶದ ಸುಲ್ತಾನ ಒಬ್ಬ ಗುಲಾಮನಿಗೆ ಕೂಡ ತನ್ನ ಮಗಳನ್ನ ಮದುವೆ ಮಾಡಿ ಕೊಡಬಲ್ಲ. ಹಿಂದೂಗಳು ಮಾಡುವುದನ್ನಾದರೂ ಏನನ್ನು? ಕೀಳು ಜಾತಿಯವನು ಅನ್ನವನ್ನು ಮುಟ್ಟಿದ ಮಾತ್ರಕ್ಕ್ಕೆ ಸವರ್ಣೀಯ ಆ ಅನ್ನವನ್ನು ಬಿಸಾಕುತ್ತಾನೆ”.

    “ಅಮೆರಿಕೆಯಲ್ಲಿ ಕರಿಯ ಮತ್ತ್ತ್ತು ಬಿಳಿಯ ಚರ್ಚಿನಲ್ಲಿ ಒಟ್ಟಿಗೆ ಪ್ರಾರ್ಥನೆ ಮಾಡಲಾರರು, ಆದರೆ ಇಸ್ಲಾಮಿನಲ್ಲಿ ಸಮಾನತೆ ಇದೆ.”

    “ನಮ್ಮ ಮಾತೃಭೂಮಿಗೆ ಬೇಕಿರೋದು ಎರಡು ಮಹಾನ್ ವ್ಯವಸ್ಥೆಗಳು. ಇಸ್ಲಾಮೀ ಕಸುವು ಮತ್ತು ವೇದಾಂತ ಮೆದುಳಿನಿಂದ ನಾವು ಉನ್ನತ ಮಟ್ಟಕ್ಕೆ ಏರಬಲ್ಲೆವು”.

    ಮೇಲಿನ ಮಾತುಗಳು ವಿವೇಕಾನಂದರು ಆಡಿದ್ದು

    ಉತ್ತರ
  2. laxminarayana's avatar
    laxminarayana
    ಜನ 13 2013

    viveka vani ellavoo madhura

    ಉತ್ತರ

Leave a reply to bhadravathi ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments