ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 4, 2013

3

“ವಿಶ್ವರೂಪ” ದರ್ಶನವಂತೂ ಆಗುತ್ತಿದೆ….!

‍ನಿಲುಮೆ ಮೂಲಕ

– ಚಕ್ರವರ್ತಿ ಸೂಲಿಬೆಲೆ

Vishwaroopamಸೆಕ್ಯುಲರ್ ಭಾರತ!
ಇನ್ನಾದರೂ ಹಾಗೆ ಕರೆಯೋಕೆ ನಾಚ್ಕೋಬೇಕು. ಇಸ್ಲಾಮ್ ಭಾರತ ಅಂತಾನೋ ಹಿಂದೂ ವಿರೋಧಿ ಭಾರತ ಅಂತಾನೋ ಕರೆದರೆ ಒಂದಷ್ಟು ಅತೃಪ್ತ ಆತ್ಮಗಳು ತೃಪ್ತಿಗೊಂಡಾವು. ಕಳೆದ ಎಂಟ್ಹತ್ತು ದಿನಗಳ ನಾಟಕ ನೋಡಿದರೆ ಹಾಗನ್ನಿಸುವುದು ಸಹಜವೇ.

‘ವಿಶ್ವರೂಪಮ್’ ಬಿಡುಗಡೆಗೆ ಕಿರಿಕ್ ಅಯ್ತು. ಹತ್ಯೆ ಮಾಡುವ ಮುನ್ನ ಭಯೋತ್ಪಾದಕ ಅಲ್ಲಾಹನಿಗೆ ವಂದಿಸಿ ಹೊರಡುವುದನ್ನು ತೋರಿಸಿರುವುದೇ ಗಲಾಟೆಗೆ ಕಾರಣವಂತೆ. ತಮಿಳುನಾಡು ಸರ್ಕಾರ ಸಿನೆಮಾ ತಡೆಹಿಡಿಯಿತು. ಬೇರೆಬೇರೆ ರಾಜ್ಯಗಳಲ್ಲಿ ಬಿಡುಗಡೆಗೆ ಮುನ್ನ ಮುಸಲ್ಮಾನ ಸಂಘಟನೆಗಳು ಪ್ರತಿಭಟನೆ ಮಾಡಿದವು. ದಾವಣಗೆರೆಯಲ್ಲಿ ಕೋಮು ಗಲಭೆಯೇ ನಡೆಯಿತು. ತಮಿಳುನಾಡಿನ ಸಿನೆಮಾ ಮಂದಿರದಲ್ಲಿ ಪೆಟ್ರೋಲ್ ಬಾಂಬ್ ಎಸೆಯಲಾಯ್ತು. ಅಚ್ಚರಿಯೇನು ಗೊತ್ತೆ? ಜನಾರ್ಧನ ಪೂಜಾರಿಯವರು ಬಾಯಿ ತೆರೆಯಲೇ ಇಲ್ಲ. ಬುದ್ಧಿ ಮಾರಿಕೊಂಡು ಬದುಕುವ ಕೆಲವರು ಬೆಂಗಳೂರಿನಲ್ಲಿ ತಣ್ಣಗೆ ಕುಳಿತುಬಿಟ್ಟಿದ್ದಾರೆ.

ಯಾಕೆ ಸ್ವಾಮಿ? ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ವೆ? ಈಗ ನಿಮಗೆ ಧರ್ಮದ ಹೆಸರಲ್ಲಿ ಕ್ರೌರ್ಯ ಕಾಣುವುದೆ ಇಲ್ಲವೆ?

ಸುಮ್ಮನೆ ನೆನಪಿಗಿರಲಿ ಅಂತ ಹೇಳ್ತೇನೆ. ಮುಂಬಯ್‌ನಲ್ಲಿ ಹುಟ್ಟಿದ ಸಲ್ಮಾನ್ ರಷ್ದಿ ತಾನು ಬರೆದ ಪುಸ್ತಕ ’ಸಟಾನಿಕ್ ವರ್ಸಸ್’ನಿಂದಾಗಿ ಮುಸ್ಲಿಮ್ ಜಗತ್ತಿನಲ್ಲಿ ಕುಖ್ಯಾತಿಗೆ ಒಳಗಾದ. ಮುಸಲ್ಮಾನರೆ ಹೆಚ್ಚಿನ ಸಂಖ್ಯೆಯಲ್ಲಿರುವ ರಾಷ್ಟ್ರಗಳಲ್ಲಿ ಅದು ನಿಷೇಧಕ್ಕೊಳಗಾಯ್ತು. ಈ ಹನ್ನೆರಡು ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿತ್ತು! ಅದೇಕೆ? ನಮ್ಮದೇನು ಪಾಕಿಸ್ತಾನ, ಬಾಂಗ್ಲಾಗಳಂತೆ ಮುಸ್ಲಿಮ್ ರಾಷ್ಟ್ರವೇನು? ಇರಾನಿನ ಅಯತ್ತುಲ್ಲಾ ಖೊಮೇನಿ ರಷ್ದಿಯ ತಲೆಗೆ ಬೆಲೆ ಕಟ್ಟಿದ. ರಷ್ದಿಯನ್ನು ಜೈಪುರ ಸಾಹಿತ್ಯೋತ್ಸವಕ್ಕೆ ಆಹ್ವಾನಿಸಿದಾಗ ಕೇಂದ್ರ ಸರ್ಕಾರ ಪಾಲ್ಗೊಳ್ಳದಂತೆ ತಡೆಯಿತಲ್ಲ, ಏಕೆ? ಆತನೊಂದಿಗೆ ವಿಡಿಯೋ ಕಾನ್ಫರೆನ್ಸನ್ನೂ ಮಾಡದಿರುವಂತೆ ಘನಂದಾರಿ ಕೇಂದ್ರ ಸರ್ಕಾರ ತಾಕೀತು ಮಾಡಿತ್ತಲ್ಲಾ, ಸಾಹಿತ್ಯಾರಾಧಕರು ಬಾಯಿ ಬಿಡದ ಹಾಗೆ ಅದೇನು ಕಂಟಕ ಬಡಿದಿತ್ತೋ! ಹಿಂದೂ ಸಂಘಟನೆಗಳ ವಿರುದ್ಧ ಪೀಪಿಯೂದುತ್ತ ಕೂತಿರುತ್ತಾರಲ್ಲ ಜ್ಞಾನಪೀಠೀಗಳು, ಅದೇಕೋ ತುಟಿ ಬಿಚ್ಚಲೇ ಇಲ್ಲ!

ಆ ಹೆಣ್ಣು ಮಗಳು ತಸ್ಲಿಮಾ ನಸ್ರೀನ್ ಕಡಿಮೆ ಆಸಾಮಿಯೇನಲ್ಲ. ವೃತ್ತಿಯಿಂದ ವೈದ್ಯೆ. ಬಾಂಗ್ಲಾದಲ್ಲಿ ಮುಸ್ಲಿಮರು ಹಿಂದೂಗಳ ಮೇಲೆ ಮಾಡಿದ ಅತ್ಯಾಚಾರದ ಕುರಿತು ಬರೆದ ‘ಲಜ್ಜಾ’ ಬಿರುಗಾಳಿ ಎಬ್ಬಿಸಿದತು. ಮೂಲಭೂತವಾದಿಗಳು ಮನಸಿಕವಿರಲಿ, ದೈಹಿಕ ಕಿರುಕುಳಗಳನ್ನೂ ಕೊಟ್ಟರು. ಅದು ಹೇಗೋ ಅಚಾನಕ್ಕು ನಾಪತ್ತೆಯಾದ ತಸ್ಲಿಮಾ ಆರು ವರ್ಷಗಳ ಕಾಲ ಪಶ್ಚಿಮದಲ್ಲಿ ಕದ್ದುಮುಚ್ಚಿ ಬದುಕು ನಡೆಸಿದಳು. ಭಾರತಕ್ಕೆ ಬರುವ ಇರಾದೆ ಬಲವಾಗಿತ್ತು. ಅದರೇನು? ಮುಸಲ್ಮಾನರ ಪ್ರತಿಭಟನೆಗೆ ಹೆದರಿ ಸರ್ಕಾರ ವೀಸಾವನ್ನೆ ದಯಪಾಲಿಸಲಿಲ್ಲ. ತನ್ನ ಕೃತಿ ’ಶೋಧ’ದ ಅನುವಾದದ ಬಿಡುಗಡೆಗೆ ಮುಂಬೈಗೆ ಬಂದಾಗಲೂ ಮುಸಲ್ಮಾನ ಸಂಘಟನೆಗಳು ಜೀವಂತ ಸುಡುವ ಬೆದರಿಕೆ ಹಾಕಿದ್ದರಿಂದ ಕಾರ್ಯಕ್ರಮ ರದ್ದಾಯ್ತು. ಅಲ್ಲಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮುದುರಿ ಕಸದಬುಟ್ಟಿಗೆ ಬಿತ್ತು.
ಇದಕ್ಕೆ ಎದುರಾಗಿ ತೀಸ್ತಾ ಸೆಟಲ್ವಾಡ್, ಅರುಂಧತಿ ರಾಯ್ ಅಂಥವರು ಹಿಂದೂಗಳು ಮಾಡದ ಅತ್ಯಾಚಾರದ ಗೂಬೆಯನ್ನು ಕೂರಿಸಿ ಹಿಂದೂ ಧರ್ಮವನ್ನು ನಿಂದಿಸುವ ಕೆಲಸ ಮಾಡುತಾರೆ; ನೆಮ್ಮದಿಯಿಂದಲೇ ಇಲ್ಲಿ ಬದುಕುತ್ತಾರೆ. ಆಗೀಗ ಆಕೆಯ ವಿರುದ್ಧ ಕೂಗಾಡಿದ್ದು ಕೇಳುತ್ತದಾದರೂ ಆಗೆಲ್ಲ ಸೆಕ್ಯುಲರ್ ಭೂತಗಳು ಎದ್ದೆದ್ದು ಕುಣಿಯತೊಡಗುತ್ತವೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶ ಇಲ್ಲ ಎಂದು ಗೋಳಾಡುತ್ತವೆ. ತಸ್ಲಿಮಾ ಹೈದರಾಬಾದಿಗೆ ಬಂದಾಗ ಓವೈಸಿ ನೇತೃತ್ವದಲ್ಲಿ ಹೆಣ್ಣುಮಗಳೆಂಬ ದಯೆಯಿಲ್ಲದೆ ಹಿಂಸಾತ್ಮಕ ದಾಳಿ ಮಾಡಿದರಲ್ಲ, ಅದು ಹೋಮ್‌ಸ್ಟೇ ದಾಳಿಗಿಂತಲೂ ಭೀಕರವಾಗಿತ್ತು. ಯಾಕೋ ಅದು ಮೀಡಿಯಾಗಳ ಕಣ್‌ಕುಕ್ಕಲೇ ಇಲ್ಲ.

ನಾಚಿಕೆಯಾಗೋದು ಅದಕ್ಕೇ. ಎಲ್ಲರೂ ಸಮಾನರು ಅಂದ ಮೇಲೆ ಸಮಾನರಲ್ಲಿ ಮುಸಲ್ಮಾನರಿಗೇಕೆ ಮೇಲ್ದರ್ಜೆ? ಕಮಲಹಾಸನ್‌ಗೆ ಈಗ ತಡವಾಗಿ ಅರ್ಥವಾಗಿದೆ. ಆತ ಮುಸಲ್ಮಾನ ಸಂಘಟನೆಗಳ ಮುಂದೆ ಕಣ್ಣೀರ್ಗರೆದಿದ್ದಾನೆ. ಅವರಿಗಿಷ್ಟವಾಗದ ಸೀನ್‌ಗಳನ್ನ ಕತ್ತರಿಸಿ ಪ್ರದರ್ಶಿಸುವ ಭರವಸೆ ಕೊಟ್ಟಿದ್ದಾನೆ. ಅಭಿವ್ಯಕ್ತಿ ಸ್ವಾತಂತ್ರ್ಯದೊಂದಿಗೆ ವ್ಯಭಿಚಾರಕ್ಕೆ ಸಿದ್ಧವಾಗಿದ್ದಾನೆ. ಹಗಂತ ಬಾಯಿ ಬಡುಕರ‍್ಯಾರೂ ಸುಮ್ಮನಿಲ್ಲ. ಅವರು ಮಾತನಾಡುತ್ತಿದ್ದಾರೆ. ಕಮಲ್ ಜೊತೆಗೆ ಆತುಕೊಂಡು ನಿಂತಿದ್ದಾರೆ. ಆದರೆ ಮೂಲಭೂತ ವಾದಿಗಳನ್ನು ಬೆದರಿಸುವ ಗೋಜಿಗೆ ಹೋಗುತ್ತಿಲ್ಲ. ಕೆಸರಿಗೆ ಕಲ್ಲೇಕೆ ಎಸೆಯುವುದು ಎಂದು ಸುಮ್ಮನೆ ಕುಳಿತಿದ್ದಾರೆ. ಇದರರ್ಥ, ಯಾವುದು ಕೆಸರೆಂದು ನಿರ್ಧರಿಸಿಯಾಗಿದೆ!

ಹೌದು. ಜಾಗತಿಕ ಮಟ್ಟದಲ್ಲೂ ಈ ಕುರಿತು ಗಂಭೀರ ಚರ್ಚೆ ನಡೆಯುತ್ತಿದೆ. ಹೊಸತನಕ್ಕೆ, ಹೊಸ ಬೆಳವಣಿಗೆಗೆ ತೆರೆದುಕೊಳ್ಳದ ಇಸ್ಲಾಮ್ ಭೂಭಾಗಗಳು ಮೂಲಭೂತವಾದದ ಅಡ್ಡಾಗಳಾಗುತ್ತಿವೆ. ಸವಾಲಿಗೆ ಎದೆಯೊಡ್ಡುವ ಛಾತಿಯಿಲ್ಲದ ಅವರಲ್ಲಿ ಇರೋದು ಸೋತುಹೋಗುವ ಭಯ. ಈ ಸೋಲಿನ ಭಯವೇ ಕ್ರೌರ್ಯವಾಗುತ್ತೆ. ಕ್ರೌರ್ಯದಿಂದ ಗೆಲ್ಲುತ್ತಾರಲ್ಲ, ಆ ಗೆಲುವಿನ ಮದ ತಲೆಗೇರುತ್ತೆ. ಆಮೇಲೆ ವಿನಾಶವಷ್ಟೆ. ಕಂಸನಿಗೆ ಸಾವಿನ ಭಯ ಉಂಟಾದ ಮೇಲೆ ಮತ್ತಷ್ಟು ಕ್ರೂರಿಯಾಗಲಿಲ್ವೆ? ರಾಮ ಲಂಕೆಯೆದುರು ನಿಂತ ಮೇಲೆ ಹೆದರಿ ಹೆದರಿಯೇ ರಾವಣ ಕ್ರೌರ್ಯದ ತುದಿ ಮುಟ್ಟಲಿಲ್ಲವೆ? ಹಾಗೇ. ಮನಶ್ಶಾಸ್ತ್ರದ ಮೂಲ ಪಾಠಗಳಿವು.

ಮನಶ್ಶಾಸ್ತ್ರಜ್ಞನೊಬ್ಬ ಸುಂದರವಾಗಿ ವಿಶ್ಲೇಷಿಸಿದ್ದಾನೆ. ’ಅಮೆರಿಕಾದಲ್ಲಿ ಅನ್ಯಾನ್ಯ ಉದ್ಯೋಗ ಮಾಡುವ ಚೀನೀಯರು ಒಂದಾಗುತ್ತಾರೆ. ಜರ್ಮನಿಯವರು ಉದ್ಯೋಗ ಬೇರೆಬೇರೆ ಇದ್ದರೂ ಜತೆಗೂಡುತ್ತಾರೆ. ಆದರೆ ಬೇರೆ ಬೇರೆ ದೇಶದವರಾದರೂ ಇಷ್ಟಪಟ್ಟು ಜತೆಗೂಡಿದ್ದಾರೆ ಎಂದರೆ ಅವರು ಮುಸಲ್ಮಾನರು ಅಂತಾನೇ ಅರ್ಥ’. ಇದಕ್ಕೆ ನಿದರ್ಶನವಾಗಿ ಆತ ಕೊಡುವ ಉದಾಹರಣೆ ಏನು ಗೊತ್ತೆ? ‘ಅಮೆರಿಕಾದಲ್ಲಿ ಭಯೋತ್ಪಾದನೆಯ ಕಾರಣಕ್ಕೆ ಸಿಕ್ಕಿಬಿದ್ದ ಐವರಲ್ಲಿ ಒಬ್ಬ ಅಮೆರಿಕನ್, ಇಬ್ಬರು ಯಮನ್‌ನವರು, ಒಬ್ಬ ಈಜಿಪ್ತಿನವನದರೆ, ಮತ್ತೊಬ್ಬ ಸ್ವೀಡನ್‌ನವನು.’ ಅವರಿಗೆ ತಮ್ಮ ಹುಟ್ಟುದೇಶಕ್ಕಿಂತ ಧರ್ಮವೇ ಮೊದಲು. ಒಂದು ಲೆಕ್ಕಾಚಾರದ ಪ್ರಕಾರ ವಲ್ಡ್‌ಟ್ರೇಡ್ ಸೆಂಟರ್ ಉರುಳಿಸಿದ್ದನ್ನು ಜಗತ್ತಿನ ಅರ್ಧದಷ್ಟು ಮುಸಲ್ಮಾನರು ಸಮರ್ಥಿಸಿಕೊಂಡಿದ್ದಾರೆ. ಅದರರ್ಥ ಸುಮಾರು ಎಂಭತ್ತು ಕೋಟಿ ಮುಸಲ್ಮಾನರು ಸಮರ್ಥಕರು ಅಂತಾಯ್ತು. ಇವರಲ್ಲಿ ಅರ್ಧದಷ್ಟು ಯುವಕರು ಅಂತಾದರೆ ನಲವತ್ತು ಕೋಟಿಯಾಯ್ತು. ಇಷ್ಟು ಜನ ಆತ್ಮಹತ್ಯಾ ಬಾಂಬರುಗಳಾಗಿ ಮುಗಿಬಿದ್ದರೆ ಜಗತ್ತಿನ ಗತಿ ಏನು? ಹೇ ಭಗವಂತನೇ!

ಮದವೇರಿಸಿಕೊಂಡ ಮತಾಂಧರು ಅದಾಗಲೇ ಸೌದಿ ಅರೇಬಿಯಾದಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿದ್ದಾರೆ. ಅಲ್ಲಿ ಹೆಣ್ಣು ಮಕ್ಕಳು ಇಂಗ್ಲಿಶ್ ಕಲಿಯಲು ನಿಷೇಧವಿದೆ. ಪಾಠ ಮಾಡಿ ಸಿಕ್ಕಿಬಿದ್ದರೆ ಸಾವೇ ಗತಿ. ಅಫ್ಘಾನಿಸ್ತಾನ ಈಗೀಗ ತೆರೆದುಕೊಳ್ಳುತ್ತಿದೆ. ಈ ಕಟ್ಟರ್‌ಪಂಥಿಗಳಿಂದ ದೂರ ನಿಂತ ದುಬೈ, ಕುವೈತ್‌ಗಳು ಮಾತ್ರ ಮುಕ್ತವಾಗಿ ಬದುಕುತ್ತಿವೆ. ಅಲ್ಲಿ ಹೆಣ್ಣುಮಕ್ಕಳು ಮನಸೋ ಇಚ್ಛೆ ಬಟ್ಟೆ ಹಾಕಿಕೊಂಡು ತಿರುಗಾಡಬಲ್ಲರು. ರಸ್ತೆ ಬದಿ ಹರಟುತ್ತ ಪಾನೀಯ ಕುಡಿಯಬಲ್ಲರು. ವಾವ್! ಅದು ಸುಂದರ ವಾತಾವರಣ. ಅಲಲೆಲ್ಲ ಪರ್ದಾ ಅನಿವಾರ‍್ಯವಲ್ಲ. ಇಷ್ಟು ಮಾತ್ರ ನಮ್ಮ ದೇಶದಲ್ಲಿ ಹೇಳಿಬಿಟ್ಟರೆ ನಿಮಗೊಂದು ಫತ್ವಾ ರೆಡಿ. ಹಾಗೆ ಹೆದರಿಸುತ್ತಾರೆ ಎಂಬ ಕಾರಣಕ್ಕೆ ಮಹಿಳಾವಾದಿಗಳೆಲ್ಲ ಸುಮ್ಮನಿರುತ್ತಾರೆ.

ಸುಮ್ಮನಿರೋದು ಹಾಳಾಗಿಹೋಗಲಿ. ಬುರ್ಖಾ ಹಾಕಿಕೊಳ್ಳೋದು ಅವರಿಷ್ಟ. ನೀವೇಕೆ ಸುಮ್ಮನೆ ಮೂಗು ತೂರಿಸುತ್ತೀರಿ ಅಂತ ನಮಗೇ ಬುದ್ಧಿ ಹೇಳುವ ಭೂಪರು, ಸೀತೆಯನ್ನು ರಾಮ ಕಾಡಿಗಟ್ಟಿದ್ದನ್ನು ಮಾತ್ರ ಬಿಡದೆ ಪ್ರಶ್ನಿಸುತ್ತಾರೆ. ರಾಮ ಕಾಡಿಗೆ ಕಳಿಸುವ ಮಾತಾಡಿದಾಗ ಸೀತೆಯೇ ಎದುರಾಡಲಿಲ್ಲ, ಇನ್ನು ಇವರ‍್ಯಾರು ಎದುರಾಡಲಿಕ್ಕೆ?

ಇಷ್ಟು ದಿನ ಸರಿ, ಇನ್ನಾದರೂ ಪ್ರಶ್ನೆ ನಿಮಗೆ ನೀವೆ ಕೇಳಿಕೊಳ್ಳಿ. ಚಿತ್ರದುರ್ಗದ ಬಳಿಯ ಮಠವೊಂದರಲ್ಲಿ ರಾಮನು ದೇವರಲ್ಲ ಎಂಬುದನ್ನು ಸಾಬೀತುಪಡಿಸಲೆಂದೇ ಎಡಬಿಡಂಗಿಯೊಬ್ಬರಿಂದ ಭಾಷಣ ಇಡಿಸಲಾಗಿತ್ತು. ಮರು ದಿನ ಆ ವಿಷಯ ಕಂಡು ಹೌಹಾರಿ, ಅಲ್ಲಿನ ಮಠಾಧೀಶರನ್ನು ’ನೀವು ಪೂಜಿಸುವ ಶಿವಲಿಂಗವನ್ನು ದೇವರಲ್ಲ ಎಂದು ಸಾಬೀತು ಪಡಿಸಿದರೆ ಸಹಿಸುವಿರೇನು?’ ಎಂದು ಪ್ರಶ್ನಿಸಿದೆ. ಅವರ ಮುಖ ಬಿಳುಚಿಕೊಂಡಿತು. ’ಉನ್ನತ ವಿಷಯಗಳ ಚರ್ಚೆ ನಡೆಯಬೇಕು. ಆಗಲೇ ಸ್ವಸ್ಥ ಸಮಾಜ..’ ಎಂದೆಲ್ಲ ಭಾಷಣ ಬಿಗಿದರು. ಈಗ ವಿಶ್ವರೂಪವನ್ನು ಮುಂದಿಟ್ಟುಕೊಂಡು ಇಸ್ಲಾಮ್ ಮತಾಂಧತೆಯ ಕುರಿತು ಭಾಷಣ ಮಾಡಿಸಬಲ್ಲರೇನು? ಹ್ಹ! ಎತ್ತರದ ಪೀಠಗಳಲ್ಲಿ ಕುಳಿತವರುಗಳೇ ಮುಸಲ್ಮಾನರನ್ನು ದಾರಿ ತಪ್ಪಿಸಿರೋದು. ಮಗು ತಪ್ಪು ಹೆಜ್ಜೆ ಇಟ್ಟಾಗ ಗದರಿಸಿ ಬೈದು, ಅಗತ್ಯ ಬಿದ್ದರೆ ನಲ್ಕು ಬಿಟ್ಟಾದರೂ ಬುದ್ಧಿ ಹೇಳಬೇಕು. ರಚ್ಚೆ ಹಿಡಿಯುತ್ತೆಂದು ಸುಮ್ಮನೆ ಕುಳಿತರೆ ನಾಳೆಯ ದಿನ ಮಗುವಂತೂ ಅಡ್ಡ ದಾರಿ ಹಿಡಿದು ಪಶ್ಚಾತ್ತಾಪ ಪಡುತ್ತದೆ, ದಾರಿ ತಪ್ಪಿಸಿದ ಹಿರಿಯರೂ ಕಣ್ಣೀರಿಡುವಂತಾಗುತ್ತದೆ.

ಸಜ್ಜನ ಮುಸಲ್ಮಾನರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಕಮಲ ಹಾಸನ್ ದೇಶ ಬಿಡುವ ಮಾತಾಡಿದ್ದಾನೆ. ಅಲ್ಲಿಯೂ ಬುದ್ಧಿವಂತಿಕೆಯಿಂದ ಸಲ್ಮಾನ್ ರಷ್ದಿಯಂತೆ ಎನ್ನದೆ ಎಮ್.ಎಫ್.ಹುಸೇನನಂತೆ ದೇಶ ಬಿಡುತ್ತೇನೆ ಎಂದಿದ್ದಾನೆ! ಹಿಂದೂಗಳನ್ನು ಗುರಿಯಿಟ್ಟು ಮುಸಲ್ಮಾನ ಬಂಧುಗಳಿಗೆ ತೃಪ್ತಿ ಕೊಡೋಣ ಅಂತ. ಆದರೆ ನೆನಪಿರಲಿ, ಹುಸೇನ ದೇಶ ಬಿಟ್ಟಿದ್ದು ಭಾರತ ಮಾತೆಯನ್ನು ನಗ್ನವಾಗಿ ಚಿತ್ರಿಸಿದ್ದಕ್ಕೆ. ಅದು ಧರ್ಮದ ಪ್ರಶ್ನೆಗಿಂತಲೂ ದೊಡ್ಡದು.

ರೋಮನ್ನರ ದಬ್ಬಾಳಿಕೆಗೆ ಒಳಗಾದ ಯಹೂದ್ಯರು ದೇಶ ಭ್ರಷ್ಟರಾಗಿ ಬಂದು ಸೇರಿಕೊಂಡಿದ್ದು ಭಾರತವನ್ನು. ಪಾರ್ಸಿಗಳು ನೆಲೆ ಕಳೆದುಕೊಂಡು ಆಶ್ರಯ ಅರಸಿ ಬಂದಾಗ ಆದರಿಸಿದ್ದು ನಾವೇ. ಹೋಗಲಿ, ಟಿಬೇಟಿನಿಂದ ಓಡಿಬಂದ ದಲೈ ಲಾಮಾರಿಗೆ, ಕರ್ಮಪಾರಿಗೆ ಇಂದಿಗೂ ಶಾಂತಿಯ ತಾಣ ಭಾರತವೇ. ದುರ್ದೈವ. ಈಗ ಜನ ಭಾರತ ಬಿಟ್ಟು ಬೇರೆ ನಾಡುಗಳನ್ನ ಅರಸಿ ಹೋಗುತ್ತಿದ್ದಾರೆ. ಈ ದೌರ್ಜನ್ಯ, ದಬ್ಬಾಳಿಕೆಗಳನ್ನು ಸಹಿಸಲಾರೆವು ಎನ್ನುತ್ತಿದ್ದಾರೆ. ನೆನಪಿಡಿ. ಇವುಗಳಿಗೆ ಕಾರಣ ಹಿಂದುತ್ವವಲ್ಲ. ಹೀಗೆ ಪ್ರಚಾರವಾಗೋದು ಇಸ್ಲಾಮಿಗೂ ಒಳ್ಳೆಯದಲ್ಲ. ಬುದ್ಧಿ ಹೇಳುವವರ ತಲೆ ಕಡಿಯುತ್ತೀರಿ. ಹಾಗಂತ ಸುಮ್ಮನಿದ್ದರೆ ಈಗ ಇಸ್ಲಾಮ್ ಜಗತ್ತಿನಲ್ಲಿ ಆಗುವಂತೆ ಕಾಲಕ್ರಮದಲ್ಲಿ ನಿಮ್ಮ ತಲೆ ನೀವೇ ಕಡಿದುಕೊಳ್ಳುತ್ತೀರಿ.

ಒಟ್ಟಿನಲ್ಲಿ ’ವಿಶ್ವರೂಪ’ ದರ್ಶನವಂತೂ ಆಯಿತು.

3 ಟಿಪ್ಪಣಿಗಳು Post a comment
  1. Prasanna Rameshwara T S's avatar
    Prasanna Rameshwara T S
    ಫೆಬ್ರ 5 2013

    ವಿಶ್ವರೂಪಂ ಚಿತ್ರದ ಬಿಡುಗಡೆಯ ಪ್ರಹಸನದ ಬಗ್ಗೆ ಸೂಲಿಬಲೆಯವರ ಸ್ವಭಾವತಹ [characteristic] ಮೊನಚಾದ ಮತ್ತು ವಿಸ್ತಾರವಾದ ವಿಶ್ಲೇಷಣೆ/ನಿಲುಮೆ ಎಲ್ಲ ಭಾರತೀಯರೂ ಓದಬೇಕಾದ್ದಾಗಿದೆ. ಇದಕ್ಕೆ ಮತ್ತೊಂದು ಸೇರ್ಪಡೆ : ಇಂದಿನ ವಿಜಯಕರ್ನಾಟಕದಲ್ಲಿ ಪಂಡಿತ್ ರಾಜೇವ್ ತಾರಾನಥ್ ಅವರ ಲೇಖನ. ಕಾಶ್ಮೀರದ ಮೊದಲ ಮಹಿಳಾ ಬ್ಯಾಂಡ್ ಎಂದೇ ಪ್ರಸಿದ್ಧವಾದ ‘ಪ್ರಕಾಶ್ ಬ್ಯಾಂಡ್’ ಮೇಲೆ ಮೂಲಭೂತವಾದಿಗಳು ಹೊರಡಿಸಿದ ಫತ್ವಾ ಹಿನ್ನೆಲೆಯಲ್ಲಿ ಅದನ್ನು ಬಂದು ಮಾಡಿದ್ದು ನಮ್ಮ ದೇಶದಲ್ಲಿ ಮುಸ್ಲಿಂ ಮೂಲಭೂತವಾದಿಗಳ ಅಟ್ಟಹಾಸ ಯಾವ ಹಂತಕ್ಕೆ ಬೆಳೆದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇಂತಹ ಬೆದರಿಕೆಗಳಿಗೆ ಹೆದರಿ ಕಮಲ ಹಾಸನ್ ಅಂಥವರೂ ಹೆದರಬೇಕಾಗಿದೆ ಮತ್ತು ಬುದ್ಧಿಜೀವಿಗಳೆನಿಸಿದವರೂ [ನೈಪಾಲ್ ಅವರ ಕೃತಿಗಳನ್ನು ನೇರವಾಗಿ ವಿರೋಧಿಸಿದವರೂ] ತೆಪ್ಪಗಿರುವಂತೆ ಮಾಡಿರುವುದು ಅತ್ಯಂತ ಶೋಚನೀಯ ಸ್ಥಿತಿ.

    ಉತ್ತರ
  2. HS Raj's avatar
    ಫೆಬ್ರ 8 2013

    ವೋಟ್ ಬ್ಯಾಂಕುಗಳ ಎದುರು ಯಾರೂ ಮಾತಾಡುವುದಿಲ್ಲ, ಸೂಲಿಬೆಲೆಯವರೇ. ನಾಡವರಾಳ್ಕೆ (= ಪ್ರಜಾಪ್ರಭುತ್ವ) ಕೆಲವೊಮ್ಮೆ ಒಂದು ದೊಡ್ದ ಶಾಪ ಎನಿಸುತ್ತದೆ. ನಾಡವರಾಳ್ಕೆಯ ಕುಂದು-ಕೊರತೆ ಇಂದು ತನ್ನ ವಿಶ್ವರೂಪವನ್ನು ತೋರಿಸುತ್ತಿದೆ. ಈ ದೇಶವನ್ನು ಆ ದೇವರೇ (ಇದ್ದರೆ) ಕಾಪಾಡಬೇಕು.

    ಉತ್ತರ
  3. Manju's avatar
    ಮಾರ್ಚ್ 19 2013

    Chakravarti soolibeleyavare nijavaglu artavagbeku e buddijeevigalige aglu arta agadidare avranna en mdabeku antane gottagalla ast kopa baratte sir.nangu niv helidela anisatte adre nimmastu sundaravagi bareyakagalla.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments