ನೂರರ ನೋಟು ಮತ್ತು ನೈತಿಕತೆ
– ಪ್ರಸನ್ನ
ನನ್ನದು ಕುಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ. ಸಹಪಾಠಿ ದಯಾನಂದ ನಮ್ಮೂರ ಪಟೇಲರ ಮೊಮ್ಮಗ. ಆಗ ಕಾಂಗ್ರೆಸ್ ಮತ್ತು ಜನತಾ ಪಕ್ಷ ಎರಡೇ ಪಕ್ಷಗಳಿದ್ದಂತೆ ತೋರುತ್ತದೆ. ಯಾವ ಚುನಾವಣೆ ಎಂಬುದು ನೆನಪಿಲ್ಲ. ಕಾಂಗ್ರೆಸ್ಸಿನ ಚಿಹ್ನೆ ಹಸು ಮತ್ತು ಕರುವಿನದ್ದು. ತಗಡಿನ ಬಿಲ್ಲೆಯ ಮೇಲೆ ಮುದ್ರಿತಗೊಂಡಿದ್ದ ಆ ಬಿಲ್ಲೆ ನಮಗೆ ಅಚ್ಚುಮೆಚ್ಚು, ಕಾರಣ ಎರಡು ತೂತ ಹಾಕಿ ದಾರ ಕಟ್ಟಿ ಜುಯ್ ಎಂದೆಳೆಯುವ ಮೋಜಿನ ಬಿಲ್ಲೆಗೆ ಅದು ಅತ್ಯಂತ ಸೂಕ್ತವಾಗಿತ್ತು. ಆಗ ಜನತಾ ಪಕ್ಷದವರು ಸಂಘರ್ಷ ಚಿತ್ರದ “ಯೌವನದ ಹೊಳೆಯಲ್ಲಿ ಈಜಾಟವಾಡಿದರೆ ಓ ಹೆಣ್ಣೆ ಸೋಲು ನಿನಗೆ” ಹಾಡಿನ ರೀಮಿಕ್ಸ್ ಮಾಡಿ, ಓ ಇಂದಿರಾ ಸೋಲು ನಿನಗೆ ಎಂಬ ಹಾಡನ್ನು ಎಲ್ಲೆಡೆ ಬಿತ್ತರಿಸುತ್ತಿದ್ದ ನೆನಪು ಇದೇ ಚುನಾವಣೆಯ ಅಥವ ನಂತರದ್ದ ನೆನಪಿಲ್ಲ.
ಒಂದು ದಿನ ದಯಾನಂದ ಮಧ್ಯಾಹ್ನ ಊಟದ ನಂತರ ಬಂದು ನೂರು ರೂಪಾಯಿ ನೋಡಿದ್ಯ? ಅಂತ ಕೇಳ್ದ, ಇಲ್ಲಾ ಅಂತ ತಲೆ ಆಡಿಸಿದೆ. ನೋಡ್ತಿಯ? ಅಂದವನಿಗೆ ಗೋಣು ಹಾಕಿ ಇಚ್ಚೆ ವ್ಯಕ್ತ ಪಡಿಸಿದೆ. ಸರಿ ಬಾ ತೋರಿಸ್ತಿನಿ. ಭಯದಿಂದ ಕೇಳಿದೆ ನಿನ್ ಹತ್ರ ಹೇಗ್ ಬಂತು. ನನ್ ಹತ್ರ ಇಲ್ಲ. ನಮ್ಮನೆಲಿದೆ ತೋರಿಸ್ತಿನಿ ಬಾ.
ಪಟೇಲರು ವಂಶಪಾರಂಪರ್ಯವಾಗಿ ಕಾಂಗ್ರೆಸ್ಸಿನ ಸದಸ್ಯರು. ಅವರ ವಂಶದ ಯಾರೋ ಒಬ್ಬರು ನೆಹರುರೊಡನೆ ಇದ್ದ ಫೋಟೊವೊಂದು ಅವರ ಮನೆಯ ನಡುಮನೆಯ ಮುಂಬಾಗಿಲಿನ ಎದುರು ನೇತಾಡುತ್ತಿತ್ತು.
ಅವ್ವ ಒಳ್ಗೆ ಕೆಲ್ಸ ಮಾಡ್ತವ್ಳೆ ಎಂದ, ಮೆಲ್ಲಗೆ ನಡುಮನೆ ದಾಟಿ ಹಿಂದೆ ಕೋಣೆಯೊಂದಕ್ಕೆ ನನ್ನನ್ನು ಎಳೆದುಕೊಂಡು ಹೋದ. ಕೊಟೆಯೊಳಗೆ ನುಸುಳಿದಂತ ಅನುಭವ ದೊಡ್ಡಮನೆ, ದವಸ ಧಾನ್ಯಗಳ ತುಂಬಿತುಳುಕುತ್ತಿದ್ದ ಕೋಣೆಯ ಮೂಲೆಯೊಂದರಲ್ಲಿ ನಾಲ್ಕಾರು ತೆಳ್ಳನೆ ಗೋಣಿ ಚೀಲದ ಮೂಟೆಯ ಬಳಿಗೆ ಕರೆದೊಯ್ದು ಬೆರಳಿನಿಂದ ಚೀಲದ ದಾರಗಳನ್ನು ಬಿಡಿಸಿ ತೂತಿನಿಂದ ನೋಡು ಎಂದ ಉಹುಂ ಕತ್ತಲೆಯಲ್ಲಿ ಕಾಣುತ್ತಿರಲಿಲ್ಲ. ಮೆಲ್ಲಗೆ ಸ್ವಿಚ್ ಹಾಕಿದಾಗ ಮಂದ ಬೆಳಕು ಹರಿಯಿತು. ಯಾರ್ಲಾ ಅದು ಕೋಣ್ಯಾಗೆ? ಎಂಬ ವಯಸ್ಸಾದ ಹೆಣ್ಣಿನ ಧ್ವನಿ ತೂರಿ ಬಂತು. ನಾನು ನಡುಗಿ ಹೋಗಿದ್ದೆ. ಏ ನಾನೆ ಕಣಜ್ಜಿ ದಯಾ ಎಂದು ರೇಗಿದ. ಅಲ್ಲೇನ್ಲಾ ಕ್ಯಾಮೆ ನಿಂಗೆ ಇಸ್ಕೂಲ್ಗೆ ಓಗಿಲ್ವೆನ್ಲಾ? ಏಯ್ ಓಗಿದಿನಿ, ಪುಸ್ಕ ಮರ್ತೋಗಿದ್ದೆ ತಗೊಂಡೋಯ್ತಿನಿ.
“ಮಾರಲ್ ಪೋಲೀಸಗಿರಿಯ ಹೊಸ ಮಾದರಿ”
-ಡಾ.ಜೆ.ಎಸ್.ಸದಾನಂದ
( ಬ್ಲಾಗ್ ವೊಂದರಲ್ಲಿ ಕೆಲವು ದಿನಗಳ ಹಿಂದೆ ಪ್ರಕಟವಾದ ಪ್ರೊ. ರಾಜೇಂದ್ರ ಚೆನ್ನಿಯವರ ಲೇಖನಕ್ಕೆ ಪ್ರತಿಕ್ರಿಯೆ )
ಪ್ರಾರಂಭದಲ್ಲಿಯೇ ವೈಜ್ಞಾನಿಕ ಸಂಶೋಧನೆಯ ಬಗ್ಗೆ ನಮ್ಮ ನಿಲುವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ.
ಪ್ರಚಲಿತ ವಿದ್ಯಮಾನವನ್ನು ಕುರಿತಾದ ಯಾವುದೇ ಸಂಶೋಧನೆಯೂ ಕೂಡ ಅಂತಹ ವಿದ್ಯಮಾನದ ಕುರಿತು ಈಗಾಗಲೆ ಇರುವ ವಿವರಣೆಗಳು ಎಷ್ಟು ಸಮರ್ಪಕ/ಅಸಮರ್ಪಕವಾಗಿವೆ ಎನ್ನುವುದರಿಂದ ಪ್ರಾರಂಭವಾಗುತ್ತದೆ. ವಿವರಣೆ ಅಥವಾ ವಿವರಣೆಗಳಲ್ಲಿ ಸಾಕಷ್ಟು ಅಂತರ್ವ್ಯೆರುಧ್ಯಗಳಿದ್ದರೆ ಮತ್ತು ವಿದ್ಯಮಾನದ ಎಲ್ಲ ಆಯಾಮಗಳನ್ನು ಹಿಡಿದಿಡಲು ಅದು ಅಸಮರ್ಥವಾಗಿದ್ದರೆ ಅದಕ್ಕಿರಬಹುದಾದ ಕಾರಣಗಳನ್ನು ಹುಡುಕಿ ಕ್ಯೆಗೆತ್ತಿಕೊಳ್ಳಬೇಕಾದ ಸಮಸ್ಯೆಯ ಸ್ವರೂಪವನ್ನು ರಚಿಸಬೇಕಾಗುತ್ತದೆ. ಸಂಶೋಧಕನು ಈಗಾಗಲೇ ಇರುವ ವಿವರಣೆಗಳಿಲ್ಲರಬಹುದಾದ ದೋಷಗಳನ್ನು ಮತ್ತು ಅದಕ್ಕಿರಬಹುದಾದ ಕಾರಣಗಳನ್ನು ತರ್ಕಬದ್ಧವಾಗಿ ಊಹಿಸಿ ಅದರ ಆಧಾರದ ಮೇಲೆ ಒಂದು ಪ್ರಾಕ್ ಕಲ್ಪನೆಯನ್ನು ರಚಿಸಿ ವಿದ್ಯಮಾನಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಸಂಗ್ರಹಿಸಿ ತರ್ಕಬದ್ಧ ವಾದವನ್ನು ಮಂಡಿಸುವ ಮೂಲಕ ತನ್ನದೇ ಆದ ಪರ್ಯಾಯ ವಿವರಣೆಯನ್ನು ಕೊಡಬೇಕಾಗುತ್ತದೆ. ಅಂತಹ ವಿವರಣೆಯು ಹಳೆಯ ವಿವರಣೆಗಳಲ್ಲಿರುವ ದೋಷಗಳನ್ನು/ಮಿತಿಗಳನ್ನು ಮೀರಿದ್ದಲ್ಲಿ ಮಾತ್ರ ವಿದ್ಯಮಾನಕ್ಕೆ ಸಂಬಂಧಿಸಿದ ಜ್ಞಾನದ ಮುಂದುವರಿಕೆಗೆ ಕೊಡುಗೆ ಸಲ್ಲಿಸಿದಂತಾಗುತ್ತದೆ. ನಾವು ತಿಳಿದುಕೊಂಡಂತೆ ಸಂಶೋಧನೆಯು ಮಾಡಬೇಕಾದ ಎರಡು ಪ್ರಮುಖ ಕೆಲಸಗಳೆಂದೆರೆ: 1) ವಿದ್ಯಮಾನದ ಬಗ್ಗೆ ಈಗಾಗಲೇ ಇರುವ ವಿವರಣೆಯ ಮಿತಿಯನ್ನು ತೋರಿಸುವುದು; 2) ಸಂಶೋಧನೆಯ ಫಲಿತವಾದ ಹೊಸ ವಿವರಣೆಯು ಅಂತಹ ಮಿತಿಗಳನ್ನು ಮೀರಿ ವಿದ್ಯಮಾನದ ಬಗ್ಗೆ ಹೆಚ್ಚು ಬೆಳಕು ಚೆಲ್ಲುತ್ತದೆ ಎಂದು ಸಾಬೀತುಪಡಿಸುವುದು.
ಈ ಅರ್ಥದಲ್ಲಿ ಸಂಶೋಧಕನ ಒಳ ಉದ್ದೇಶ/ರಾಜಕೀಯ/ಹುನ್ನಾರಗಳೇನೇ ಇರಲಿ ಅವುಗಳನ್ನು ಹೊರತುಪಡಿಸಿ ಸಂಶೋಧನೆಯನ್ನು ಮೌಲ್ಯಮಾಪನ ಮಾಡುವ ಸಾಧ್ಯತೆಯಿದೆ. ಮತ್ತು ಅಂತಹ ಒಳ ಉದ್ದೇಶಗಳು, ಹುನ್ನಾರಗಳು ಹೇಗೆ ಸಂಶೋಧನೆಯ ಮುಖ್ಯ ದೋಷವಾಗುತ್ತವೆ ಎನ್ನುವುದನ್ನು ಸಂಶೋಧನೆಯು ಮಂಡಿಸಿದ ವಾದದ ಚೌಕಟ್ಟಿನಲ್ಲಿಯೇ ತೋರಿಸಲು ಸಾಧ್ಯವಾದಾಗ ಮಾತ್ರ ಉಪಯುಕ್ತವಾಗುತ್ತದೆ. ಇಲ್ಲದಿದ್ದಲ್ಲಿ ಅಂತಹ ಆರೋಪಗಳು ಸಂಶೋಧನೆಗೆ ಹೊರತಾದ ಆರೋಪಗಳಾಗುತ್ತವೆ ಮತ್ತು ಅವುಗಳನ್ನು ಸಾಬೀತುಪಡಿಸುವುದು ಆರೋಪ ಮಾಡಿದವರಿಗಾಗಲಿ ಮತ್ತು ಅಂತಹ ಆರೋಪ ತಪ್ಪು ಎಂದು ತೋರಿಸುವುದು ಸಂಶೋಧಕರಿಗಾಗಲಿ ಸಾಧ್ಯವಿಲ್ಲ. ಈ ಅರ್ಥದಲ್ಲಿ ನಾನು ಅದು ಆಂತರ್ಯಕ್ಕೆ ಸಂಬಂದಿಸಿದ್ದು ಎಂದು ಹೇಳಿದ್ದು. ಆಂತರ್ಯವನ್ನು ಪರೀಕ್ಷಿಸಬಾರದು ಎಂದು ನಾನು ಹೇಳುತ್ತೇನೆ ಎಂದು ಚೆನ್ನಿಯವರು ತಪ್ಪಾಗಿ ಗ್ರಹಿಸುತ್ತಾರೆ. ಮತ್ತಷ್ಟು ಓದು
ವಚನ ಸಾಹಿತ್ಯ ಹಾಗೂ ಜಾತಿ ವ್ಯವಸ್ಥೆ: ರಾಜೇಂದ್ರ ಚೆನ್ನಿಯವರಿಗೊಂದು ಪ್ರತಿಕ್ರಿಯೆ
– ಡಂಕಿನ್ ಝಳಕಿ
ಇದು ರಾಜೇಂದ್ರ ಚೆನ್ನಿಯವರು ಲಡಾಯಿ ಬ್ಲಾಗ್ನಲ್ಲಿ ಬರೆದ ಲೇಖನಕ್ಕೆ ನನ್ನ ಪ್ರತಿಕ್ರಿಯೆ. ಅವರ ಲೇಖನ ಸಾಕಷ್ಟು ಉದ್ದವಿದ್ದರೂ ಅದರಲ್ಲಿ ಉತ್ತರ ಕೊಡಲು ಯೋಗ್ಯವಾದ ವಿಚಾರಗಳಿರುವುದು ಎರಡು ಅಥವಾ ಮೂರು ಮಾತ್ರ. ಉಳಿದದ್ದೆಲ್ಲಾ ವೈಯುಕ್ತಿಕ ನಿಂದನೆಗಳು, ಆಧಾರ ರಹಿತ ಆಪಾದನೆಗಳು, ಮತ್ತು ಬಾಲಿಶ ಹಾಸ್ಯಗಳು. ಅವುಗಳಿಗೆ ಉತ್ತರ ಕೊಡುವುದು ಘನತೆಯ ವಿಚಾರವಲ್ಲ.
೧.ಮೇಲುಚಲನೆಯ ಕುರಿತು: ಡಾ.ಷಣ್ಮುಖರವರು ಹೇಳುವ ನನ್ನ “ಪ್ರಬಂಧದಲ್ಲಿ ಎಲ್ಲೂ ಈಗ ಇರುವ ವಚನಗಳು ಜಾತಿ(ವ್ಯವಸ್ಥೆ) ವಿರೋಧಿ ಚಳುವಳಿ ಎಂಬ ಕಥೆಯನ್ನು ವೀರಶೈವರು ತಮ್ಮ ಮೇಲುಚಲನೆಗಾಗಿ ಹರಡಿದರು ಎನ್ನುವ ವಾದವಿಲ್ಲ” ಎಂಬುದನ್ನು ಅಲ್ಲಗಳೆಯುತ್ತಾ ಚೆನ್ನಿಯವರು ನಾನು ನನ್ನ ಪ್ರಬಂಧದಲ್ಲಿ ತನ್ನ ಅಸ್ಮಿತೆ ಹಾಗೂ ಸಂಘಟನೆಯನ್ನು ಬಲಪಡಿಸುವ ಪ್ರಯತ್ನದಲ್ಲಿ ಬ್ರಿಟಿಷರು ಕಟ್ಟಿಕೊಟ್ಟ ಚಿತ್ರಣಗಳನ್ನು ತನಗೆ ಅಪ್ಯಾಯಮಾನವಾಗಿ ಕಂಡಿದ್ದರಿಂದ ಆಧುನಿಕ ವೀರಶೈವ ಶಿಕ್ಷಿತ ವರ್ಗವು ಒಪ್ಪಿಕೊಂಡಿತು ಎಂದು ವಾದಿಸುತ್ತೇನೆ ಎಂದು ಹೇಳುತ್ತಾರೆ.
ವಚನ ಸಂಶೋಧನೆಯ ವಿಮರ್ಶೆ: ನಿರ್ಬಲ ವಾದ, ತಾರ್ಕಿಕ ಸಮಸ್ಯೆ
– ಡಂಕಿನ್ ಝಳಕಿ
`ಪ್ರಜಾವಾಣಿ’ಯಲ್ಲಿ ವಚನಗಳ ಕುರಿತ ನಮ್ಮ ಸಂಶೋಧನೆಯ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿ ಒಂದು ಸಮಸ್ಯೆ ಮತ್ತೆ ಮತ್ತೆ ಚರ್ಚೆಗೆ ಬಂದಿದೆ. ಈ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಈ ಮುಂದಿನ ಮಾತುಗಳನ್ನು ಕುರಿತು ನಾವು ಚಿಂತಿಸಬೇಕು: ವಚನಕಾರರು ಜಾತಿಯ ಬಗ್ಗೆ ತಮ್ಮ ಸಿಟ್ಟು, ಅಸಮಾಧಾನ ಮತ್ತು ಕೊರಗುಗಳನ್ನು ಹೇಳಿದ್ದಾರೆಂಬುದಕ್ಕೆ ಸಾಕಷ್ಟು ಪುರಾವೆಗಳನ್ನು ವಚನಗಳಲ್ಲಿ ತೋರಿಸಬಹುದು. ಅವುಗಳ ಸಂಖ್ಯೆ ವಿರಳವೆಂಬುದು ಅವುಗಳ ಪ್ರಾಮುಖ್ಯವನ್ನು ಕುಂದಿಸುವುದಿಲ್ಲ.
ಶಿವಪ್ರಕಾಶರ ಈ ಹೇಳಿಕೆಯ ಎರಡನೇ ಸಾಲನ್ನು ಗಮನಿಸಿ. ಈ ಸಾಲನ್ನು ನೋಡಿದಾಗಲೆಲ್ಲಾ ನನಗೆ ಅನಿಸಿದ್ದು ಈ ಆಕ್ಷೇಪಣೆಗೆ ಸಮರ್ಪಕವಾದ ಉತ್ತರ ನಮ್ಮ ಲೇಖನದಲ್ಲೇ ಇದೆಯಲ್ಲಾ ಎಂದು. ಹಾಗೇಕೆ ಅನಿಸುತ್ತದೆ ಎಂದೂ ಹೇಳಿ ಬಿಡುತ್ತೇನೆ. ಸಮಗ್ರ ವಚನ ಸಂಪುಟಗಳಲ್ಲಿರುವ ಒಟ್ಟು 21,788 ವಚನಗಳಲ್ಲಿ, ನಮ್ಮ ಲೇಖನ ತೋರಿಸುವ ಪ್ರಕಾರ, ಜಾತಿ ವಿರೋಧಿ ಚಳವಳಿ ಎಂಬ ವಿಷಯದ ಚರ್ಚೆಗೆ ಸರಿಯಾಗಿ ಉಳಿದುಕೊಳ್ಳುವ ವಚನಗಳು 72 ಮಾತ್ರ.
ಇರುವ ಈ 72 ವಚನಗಳಲ್ಲಿ, ವಚನಗಳು ಜಾತಿಯನ್ನು ವಿರೋಧಿಸುತ್ತವೆ ಎಂದು ಸಾಧಿಸ ಹೊರಡುವ ಚಿಂತಕರು ಬಳಸುವುದು ಕೇವಲ ಎಂಟು ಹತ್ತು ವಚನಗಳನ್ನು ಮಾತ್ರ. ಕೇವಲ ಎಂಟು ಹತ್ತು ವಚನಗಳನ್ನು ಆಯ್ದುಕೊಂಡು ಎಂಟುನೂರು ವರ್ಷಗಳ ಸುದೀರ್ಘ ಇತಿಹಾಸ ಉಳ್ಳ ಇಡಿಯ ವಚನ ಸಂಪ್ರದಾಯದ ಬಗ್ಗೆ ಮಾತನಾಡುವುದಾದರೆ, ಯೋಚಿಸಿ ನೋಡಿ, ನಾವು ಏನನ್ನು ಬೇಕಾದರೂ ಸಾಧಿಸಿಬಿಡಬಹುದು.
ಇದು ಸತ್ಯಕಥೆ – ಮಾನವ ಕಳ್ಳಸಾಗಣೆಯ ಕರಾಳ ಮುಖದ ದರ್ಶನ !
-ನಿತ್ಯಾನಂದ ವಿವೇಕವಂಶಿ.ಮಂಡ್ಯ
ಒಂದು ವರ್ಷಗಳ ದೀರ್ಘ ಅವಧಿಯ ನಂತರ ಮತ್ತೆ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಪ್ರವಾಸ ಮಾಡಿದ ಖುಷಿಯೊಂದಿಗೆ ವಾಪಾಸು ಬರಬೇಕಾದರೆ ಮನಸ್ಸಿಗೆ ಹಾಯೆನಿಸಿತ್ತು. ನಾಲ್ಕು ಸಾವಿರ ಕಿಲೋಮೀಟರುಗಳ ದೂರ ಕ್ರಮಿಸಿ ಭೇಟಿಯಾದ ಅರುಣಾಚಲದ ನನ್ನ ಪ್ರಿಯ ವಿದ್ಯಾರ್ಥಿಗಳ ಮಕ್ಕಳ ಮುದ್ದು ಮುಖ, ಬೆಟ್ಟದಿಂದ ಬೀಸುವ ಗಾಳಿ, ತುಂತುರು ಮಳೆ, ಮೋಡ, ಅಸ್ಸಾಮಿನ ಚಹಾ ತೋಟ, ಕಾಡುಗಳು, ಬ್ರಹ್ಮಪುತ್ರ ನದಿಯ ವೈಭವವನ್ನು ನೋಡಿಕೊಂಡು ಬರಬೇಕಾದರೆ, ವಾಪಾಸು ಹೋಗಲೇಬೇಕಾ? ಎನ್ನಿಸುವಂತೆ ಆಗಿತ್ತು.
ಏಪ್ರಿಲ್ ಐದನೇ ತಾರೀಖು ಮದ್ಯಾಹ್ನ ಮೂರು ಘಂಟೆಗೆ ಗುವಾಹಟಿಯಿಂದ ಹೊರಟ ಟ್ರೈನು ಏಪ್ರಿಲ್ 7ರ ರಾತ್ರಿ ಚೆನ್ನೈ ತಲುಪಲಿತ್ತು. ಮೊದಲೇ ಬುಕ್ ಮಾಡಿದ್ದ ನನ್ನ ಸೀಟಿನಲ್ಲಿ ಕುಳಿತೆ. ನನ್ನ ಅಕ್ಕ ಪಕ್ಕದ ಸೀಟುಗಳಲ್ಲಿ ಅದಾಗಲೇ ಪ್ರಯಾಣಿಕರು ಬಂದು ಕುಳಿತಿದ್ದರು. ಎಲ್ಲರೂ ಹೆಚ್ಚು ಕಡಿಮೆ ಒಂದೇ ವಯಸ್ಸಿನ ಅನಕ್ಷರಸ್ಥ ಮುಸ್ಲಿಮ್ ಹುಡುಗರು. ಕೆಲಸ ಮಾಡಲು ಅಸ್ಸಾಮಿನಿಂದ ಚೆನ್ನೈಗೆ ವಲಸೆ ಹೊರಟಿದ್ದರು. ಹಿಂದಿ ಭಾಷೆಯಲ್ಲಿ ನಾನು ಸರಾಗವಾಗಿ ಮಾತಾಡುತ್ತಿದ್ದರಿಂದಲೋ ಅಥವಾ ದಕ್ಷಿಣದವನೆಂಬ ಕಾರಣಕ್ಕೋ, ಬಹುಬೇಗ ಎಲ್ಲರೂ ಪರಿಚಯವಾದರು. ರೈಲು ಅಸ್ಸಾಮ್, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒರಿಸ್ಸಾ, ಆಂಧ್ರ ಪ್ರದೇಶ ರಾಜ್ಯಗಳನ್ನು ದಾಟಿ ತಮಿಳುನಾಡಿನ ಚೆನ್ನೈ ತಲುಪಬೇಕಿತ್ತು. ರೈಲಿನ ಕಿಟಕಿಯ ಬಳಿ ಕುಳಿತು ಆಗಾಗ ಬರುವ ಸ್ಟೇಷನ್‍ಗಳಲ್ಲಿ ರೋಟಿ, ವೆಜಿಟೆಬಲ್ ಪಲಾವ್‍ಗಳನ್ನು ತಿಂದುಕೊಂಡು ಬಾಟಲಿ ನೀರು ಕುಡಿಯುತ್ತಾ, ಹೊರಗಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಿದ್ದೆ. ರೈಲಿನಲ್ಲಿ ದೂರದ ಪ್ರಯಾಣ ಮಾಡಬೇಕಾದರೆ ಆಗಾಗ ಮಾರಾಟಕ್ಕೆ ಬರುವ ಆಯಾ ರಾಜ್ಯದ ವಿಶೇಷ ಹಣ್ಣು, ತಿಂಡಿ-ತಿನಿಸುಗಳನ್ನು ಕೊಂಡು ತಿನ್ನುವುದು ಬಹಳ ಮಜವಾದ ಸಂಗತಿ. ಅದರ ಜೊತೆಗೆ ಬೇರೆ ಬೇರೆ ರಾಜ್ಯಗಳ ಹವಾಮಾನ, ಭೌಗೋಳಿಕ ವೈವಿಧ್ಯತೆಗಳು, ಜನರ ಜೀವನ ಮತ್ತು ನದಿ ತೊರೆಗಳನ್ನು ನೋಡುವುದು ಅದಕ್ಕಿಂತಲೂ ಮಜವಾದ ಸಂಗತಿ. ಆದರೆ ನನ್ನ ಮಿದುಳು ಮತ್ತು ಹೃದಯ ಬಹಳ ಸಮಯ ಯೋಚಿಸುತ್ತಿದ್ದುದು, ಅಲ್ಲಿ ಕಾಣುತ್ತಿದ್ದ ಜನರ ಬಡತನ ಮತ್ತು ಅನಕ್ಷರತೆಯ ಬಗ್ಗೆ. ಅಸ್ಸಾಮಿನ ಗುವಾಹಟಿ ನಗರದಲ್ಲಿ ರೈಲ್ವೇ ಸ್ಟೇಶನ್ನಿನಲ್ಲಿ ಬರುತ್ತಿದ್ದ ಭಿಕ್ಷುಕರ, ಅಂಗವಿಕಲರ, ಅನಾಥ ಮಕ್ಕಳ ಗೋಳು, ರೈಲಿನ ಹೊರಗೆ ಪ್ಲಾಟ್ ಫಾರಮ್‍ನಲ್ಲಿ ಪ್ರಾಣಿಗಳಿಗಿಂತಲೂ ಕಡೆಯಾಗಿ ಬಿದ್ದಿರುತ್ತಿದ್ದ ಜನರ ಹೃದಯ ವಿದ್ರಾವಕ ದೃಶ್ಯಗಳು ನನ್ನನ್ನು ಮೂಕನನ್ನಾಗಿ ಮಾಡುತ್ತಿದ್ದವು. ಕುಡಿದು ಬಿದ್ದಿರುತ್ತಿದ್ದ ಜನರು, ತಂಬಾಕು, ಸಿಗರೇಟುಗಳನ್ನು ಸೇದಿ ಪ್ರಜ್ಞಾಹೀನ ಸ್ಥಿತಿ ತಲುಪಿದ್ದ ಅನೇಕರ ದರ್ಶನವೂ ಆಯಿತು. ಇದಲ್ಲದೇ ದುಡ್ಡಿಗಾಗಿ ಪೀಡಿಸುತ್ತಾ, ನಮಗೆ ತೊಂದರೆ ಕೊಟ್ಟ ಹಿಜಿಡಾಗಳ ಘೋರ ಮುಖದ ಪರಿಚಯವೂ ಆಯಿತು. ಹೀಗೆ ಮೊದಲನೇ ದಿನ ಬಹುಬೇಗ ಕಳೆದು ಹೋಯಿತು.
ಮತ್ತಷ್ಟು ಓದು
ವಚನಗಳನ್ನು ಆಧ್ಯಾತ್ಮಿಕ ಸಂದರ್ಭದಲ್ಲಿಟ್ಟು ನೋಡಿದಾಗ ಕಾಣಿಸುವುದೇನು?
– ಬಾಲಗಂಗಾಧರ ಎಸ್. ಎನ್.
ಗೆಂಟ್ ವಿಶ್ವವಿದ್ಯಾಲಯ, ಬೆಲ್ಜಿಯಂ
ವಚನಗಳ ಉದ್ದೇಶವು ಜಾತಿವಿನಾಶ ಚಳವಳಿಯಲ್ಲ ಎಂಬ ನನ್ನ ಹಾಗೂ ನನ್ನ ಸಹಸಂಶೋಧಕರ ವಾದವು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ನನ್ನ ವಾದಕ್ಕೆ ಪ್ರತಿಕ್ರಿಯಿಸಿದವರೆಲ್ಲರೂ ನನ್ನ ವಾದವು ವಚನಗಳ ಹಿರಿಮೆಯನ್ನು ಅಲ್ಲಗಳೆಯುತ್ತಿದೆ ಎಂಬುದಾಗಿ ಭಾವಿಸಿದ್ದಾರೆ. ಅದನ್ನು ಸ್ಪಷ್ಟೀಕರಿಸಲು ವಚನಗಳನ್ನು ಆಧ್ಯಾತ್ಮಿಕ ಸಂದರ್ಭದಲ್ಲಿಟ್ಟು ನೋಡಬೇಕೆಂಬುದು ನಮ್ಮ ವಾದವೆಂಬುದನ್ನು ಓದುಗರ ಗಮನಕ್ಕೆ ತಂದಿದ್ದೂ ಆಗಿದೆ. ಆ ಹೇಳಿಕೆಯ ಕುರಿತೂ ಅನೇಕ ಪ್ರತಿಕ್ರಿಯೆಗಳು ಬಂದವು. ಈ ಪ್ರತಿಕ್ರಿಯೆಗಳಲ್ಲಿ ಪರೋಕ್ಷವಾಗಿ ಇವರೆಲ್ಲರೂ ಆಧ್ಯಾತ್ಮ ಸಂಪ್ರದಾಯವನ್ನು ಬ್ರಾಹ್ಮಣರಿಗೆ ಸಮೀಕರಿಸುವುದು ಕಂಡುಬರುತ್ತದೆ. ಇಲ್ಲಿ ಬಹುಶಃ ಈ ಅಭಿಪ್ರಾಯಗಳಿಗೆ ಉತ್ತರ ನೀಡುವುದಕ್ಕಿಂತ ನಾನು ಏನು ಹೇಳುತ್ತಿದ್ದೇನೆ ಎಂಬುದನ್ನು ಮತ್ತೂ ಸ್ಪಷ್ಟೀಕರಿಸುವುದು ಸೂಕ್ತ ಎನ್ನಿಸುತ್ತದೆ.
ಭಾರತೀಯ ಆಧ್ಯಾತ್ಮ ಪರಂಪರೆಯು ಇಂದಿನವರೆಗೂ ಐತಿಹಾಸಿಕ ಏಳು ಬೀಳುಗಳನ್ನೆಲ್ಲ ದಾಟಿಕೊಂಡು ಅವ್ಯಾಹತವಾಗಿ ಮುಂದುವರಿದುಕೊಂಡು ಬಂದಿದೆ. ಆದರೆ ಅದರ ಕುರಿತು ಅಧಿಕೃತವಾಗಿ ತಿಳಿದುಕೊಳ್ಳುವ ಗುರಿಯನ್ನು ಸಮಾಜ ವಿಜ್ಞಾನವು ಇನ್ನೂ ತಲುಪಿಲ್ಲ. ಏಕೆಂದರೆ, ಅದರ ಒಂದು ವಿಶೇಷತೆಯೆಂದರೆ ಅದನ್ನು ಗುರು, ಶಿಷ್ಯವೃತ್ತಿ, ಸತತ ಸಾಧನೆ ಇತ್ಯಾದಿಗಳಿಂದಲೇ ಕಲಿಯಬೇಕಾಗುತ್ತದೆ. ಅದರ ಕುರಿತು ನಮ್ಮ ಆಧುನಿಕ ಪರಿಭಾಷೆಗಳಲ್ಲಿ ಮಾತನಾಡಲು ಹಾಗೂ ಅರ್ಥಮಾಡಿಕೊಳ್ಳಲು ನಾವಿನ್ನೂ ಸರಿಯಾದ ಭಾಷೆಯನ್ನು ಬೆಳೆಸಿಕೊಂಡಿಲ್ಲವೆಂಬುದು ವಚನದ ಕುರಿತ ಈ ಚರ್ಚೆಯಂದ ಧೃಡಪಡುತ್ತದೆ. ಏಕೆ ಈ ಸಂಪ್ರದಾಯವನ್ನು ಪ್ರವೇಶಿಸಲು ನಮಗೆ ಸಾಧ್ಯವಾಗುತ್ತಿಲ್ಲವೆಂದರೆ ಈಗ ಇರುವ ವಿವರಣೆಗಳೆಲ್ಲವೂ ಕ್ರೈಸ್ತ ಥಿಯಾಲಜಿಯನ್ನಾಧರಿಸಿ ಹುಟ್ಟಿದಂಥವು. ಅಂದರೆ, ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನು ಪ್ರಪ್ರಥಮವಾಗಿ ಸಮಾಜ ವಿಜ್ಞಾನದ ಪರಿಭಾಷೆಯಲ್ಲಿ ಇಟ್ಟ ಐರೋಪ್ಯರು ತಮಗೆ ಗೊತ್ತಿದ್ದ ಒಂದೇ ಒಂದು ಪರಿಭಾಷೆಗಳ ಲೋಕದಿಂದ ಇದನ್ನು ವರ್ಣಿಸಿದರು, ಅದೇ ಕ್ರೈಸ್ತರ ಥಿಯಾಲಜಿಯ ಲೋಕ. ಅಂದರೆ, ಇಂದು ಆಧ್ಯಾತ್ಮದ ಜ್ಞಾನದ ಹಿನ್ನೆಲೆಯನ್ನು ಹೊಂದಿದವರು ಏನನ್ನು ಹೇಳುತ್ತಿದ್ದಾರೆ ಎಂಬುದನ್ನು ಇಂದಿನ ಸಮಾಜ ವಿಜ್ಞಾನಿಗಳು ಸಂಶೋಧನಾ ಭಾಷೆಯಲ್ಲಿ ವರ್ಣಿಸಬೇಕಾದರೆ ಥಿಯಾಲಜಿಗೂ ಹೊರತಾದ ವೈಜ್ಞಾನಿಕ ಭಾಷೆಯೊಂದರ ಅಗತ್ಯವಿದೆ.
ಮತ್ತಷ್ಟು ಓದು
ಪಂಜಾಂಬಿನಲ್ಲಿ ಖಲಿಸ್ತಾನಿ ಕರಾಳ ದಿನಗಳು ಮರುಕಳಿಸಲಿವೆಯೇ?
– ರಾಕೇಶ್ ಶೆಟ್ಟಿ
ಆ ದಂಪತಿಗಳು ಮರುದಿನ ಸಂಜೆ ರಜೆಯ ಮೇಲೆ ಮಣಿಲಕ್ಕೆ ಹೊರಡುವವರಿದ್ದರು.ಪ್ರಯಾಣದ ಟಿಕೆಟ್ಟು ಎಲ್ಲವೂ ನಿಗದಿಯಾಗಿತ್ತು.ಅಷ್ಟರಲ್ಲಿ ಟೆಲಿಫೋನ್ ರಿಂಗಣಿಸಿತ್ತು.ಕರೆ ಸ್ವೀಕರಿಸಿದವರಿಗೆ ಮರುದಿನ ತುರ್ತು ಮಾತುಕತೆಗಾಗಿ ದೆಹಲಿಗೆ ಬರುವ ಆದೇಶ ಸಿಕ್ಕಿತು.
ಹೆಂಡತಿಯ ಜೊತೆ ಮೀರತ್ ಬಿಟ್ಟು ದೆಹಲಿಯ ಕಡೆ ಹೊರಟವರು, ಸಂಜೆಯೊಳಗೆ ಬರುವೆ ಮಣಿಲಕ್ಕೆ ಹೊರಟು ಬಿಡೋಣ ಅಂತೇಳಿ, ಚಾಂದಿಮಂದಿರದ II ಕಾರ್ಪ್ಸ್ ಅರ್ಮಿ ಹೆಡ್ ಕ್ವಾರ್ಟರ್ ತಲುಪಿಕೊಂಡರು.ತಲುಪಿಕೊಂಡವರೇ ಆಪರೇಷನ್ ರೂಮಿನೊಳ ಹೊಕ್ಕರು.ಅಲ್ಲಿ ಅಮೃತಸರದ ಗೋಲ್ಡನ್ ಟೆಂಪಲ್ ನಕ್ಷೆಗಳನ್ನು ಹರವಿ ಕುಳಿತಿದ್ದರು ಸೈನ್ಯಾಧಿಕಾರಿಗಳು.ಒಳ ಬಂದವರಿಗೆ ಏನೊಂದು ಅರ್ಥವಾಗುವ ಮೊದಲೇ “ನಿನಗೆ ಅಮೃತಸರದ ಪರಿಸ್ಥಿತಿ ಕೈ ತಪ್ಪುತ್ತಿರುವುದು ಗೊತ್ತಿದೆಯಲ್ಲ?,ಆದಷ್ಟು ಬೇಗ ನೀನು ಅಮೃತಸರ ತಲುಪಿಕೊಂಡು ಸ್ವರ್ಣಮಂದಿರದೊಳಗೆ ಸೇರಿಕೊಂಡಿರುವ ಖಲಿಸ್ತಾನಿ ಉಗ್ರಗಾಮಿಗಳನ್ನ ಹೊರಹಾಕಬೇಕು” ಅಂತ ಆದೇಶಿಸಲಾಯಿತು.ಹಾಗೆ,ಇದ್ದಕ್ಕಿದ್ದಂತೆ ಸಿಕ್ಕ ಅಪ್ಪಣೆಯನ್ನು ಯಶಸ್ವಿಯಾಗಿ ನಿರ್ವಹಿಸಿ,ಪಂಜಾಬ್ ರಾಜ್ಯ ಭಾರತದಿಂದ ಸಿಡಿದು “ಖಲಿಸ್ತಾನ” ಆಗುವುದನ್ನು ತಪ್ಪಿಸಿದ್ದು “ಆಪರೇಷನ್ ಬ್ಲೂ-ಸ್ಟಾರ್” ಅನ್ನುವ ಮಿಲಿಟರಿ ಕಾರ್ಯಾಚರಣೆ ಮತ್ತದರ ನೇತೃತ್ವ ವಹಿಸಿದ್ದ ಆ ಯೋಧನ ಹೆಸರು ಜನರಲ್.ಕೆ.ಎಸ್ ಬ್ರಾರ್.
ಆವತ್ತು ಅಮೃತಸರಕ್ಕೆ ಬಂದಿಳಿದ ಬ್ರಾರ್ ಅವರಿಗೆ ಸರಿಯಾಗಿ ಸ್ವರ್ಣಮಂದಿರದ ನಕ್ಷೆಯೂ ಗೊತ್ತಿರಲಿಲ್ಲ.ತಕ್ಷಣ ಅವರು ಅಲ್ಲಿನ ಸರ್ಕಾರಿ ಅಧಿಕಾರಿಗಳು ಮತ್ತು ಪೋಲಿಸರನ್ನು ಭೇಟಿಯಾಗಿ ಹೆಚ್ಚಿನ ಮಾಹಿತಿ ಕೇಳಿದರು.ಊಹೂಂ! ಅವರಲ್ಲಿ ಯಾವ ಮಾಹಿತಿಯೂ ಇರಲಿಲ್ಲ.ತಿಂಗಳುಗಟ್ಟಲೆ ಕೆಲಸವಿಲ್ಲದೆ ಕುಳಿತಿದ್ದ ಅವರಿಂದ ಏನು ನಿರೀಕ್ಷಿಸುವಂತೆಯೂ ಇರಲಿಲ್ಲ.ಭಿಂದ್ರನ್ ವಾಲೆಯ ಕಪಿಮುಷ್ಟಿಗೆ ಅದಾಗಲೇ ಸ್ವರ್ಣಮಂದಿರ ಸಿಕ್ಕಿಯಾಗಿತ್ತು.ಒಳಗೇನು ನಡೆಯುತ್ತಿದೆ ಯಾರಿಗೂ ಗೊತ್ತಿರಲಿಲ್ಲ.ಭಿಂದ್ರನ್ ವಾಲೆಯ ಖ್ಯಾತಿ ಆಗ ಪಂಜಾಬಿನಲ್ಲಿ ಉತ್ತುಂಗಕ್ಕೇರಿದ ಸಮಯ.ಜನ ಅವನನ್ನು ದೈವತ್ವಕ್ಕೇರಿಸುವ ಮಟ್ಟಕ್ಕೇ ಅವನ ಅಮಲೇರಿತ್ತು.
ಸಾಹಿತ್ಯ ಪರಂಪರೆಯ ಅರಿವಿಲ್ಲದ ’ಎಲ್ಲರ ಕನ್ನಡ’
ಡಾ. ಮಾಧವ ಪೆರಾಜೆ ಅವರ ಲೇಖನಕ್ಕೊಂದು ಪೂರಕ ಪ್ರತಿಕ್ರಿಯೆ
– ಡಾ. ಮೋಹನ ಕುಂಟಾರ್
ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣದ ಮೂಲಕ ಡಿ.ಎನ್.ಶಂಕರಭಟ್ಟರು ಕನ್ನಡ ಬರವಣಿಗೆಯಲ್ಲಿ ಹೊಸ ಕ್ರಾಂತಿಯನ್ನು ಮಾಡಲು ಮುಂದಾಗಿದ್ದಾರೆ. ಅವರ ಮಾರ್ಗದಲ್ಲೇ ಮುಂದುವರಿಯುವ ಅವರ ಶಿಷ್ಯವರ್ಗ ಅದನ್ನೇ ಸಮರ್ಥಿಸಿ ಕೃತಿರೂಪಕ್ಕೆ ಇಳಿಸುತ್ತಿದೆ. ಒಂದು ರೀತಿಯಲ್ಲಿ ಇದು ಅತಿಬುದ್ಧಿವಂತಿಕೆಯ ಪ್ರದರ್ಶನವಲ್ಲದೇ ಬೇರೇನೂ ಅಲ್ಲ.
ಕನ್ನಡಕ್ಕೆ ಭಾಷಿಕವಾಗಿಯೂ ಸಾಹಿತ್ಯಿಕವಾಗಿಯೂ ಗೌರವ ತರುವ ಸುದೀರ್ಘ ಪರಂಪರೆಯಿದೆ. ಅದರ ಮೂಲಕವೇ ಕನ್ನಡ ಪರಂಪರೆ ವಿಶಾಲವಾಗಿ ಅಷ್ಟೆ ಅಗಾಧ ಪ್ರಮಾಣದಲ್ಲಿ ಬೆಳೆದು ನಿಂತಿರುವುದನ್ನು ಗುರುತಿಸಲಾಗುತ್ತಿದೆ. ಪಂಪ, ಕುಮಾರವ್ಯಾಸಾದಿಗಳು ಬರೆಯುವ ಕಾಲಕ್ಕೆ ಮಾತನಾಡುವ ಭಾಷೆ ಬಳಕೆಯಲ್ಲಿತ್ತು. ಮಾಸ್ತಿ, ಕಾರಂತ, ಕುವೆಂಪು ಅವರ ಕಾಲದಲ್ಲಿಯೂ ಇತ್ತು. ಅವರೆಲ್ಲ ಬರವಣಿಗೆಯ ಭಾಷೆಯೊಂದನ್ನು ಕನ್ನಡದ ಮೂಲಕ ಕಟ್ಟಿಕೊಟ್ಟು ಕನ್ನಡ ಭಾಷೆಯ ಮಹತ್ವವನ್ನು ಹೆಚ್ಚಿಸಿದ್ದಾರೆ. ಇವರೆಲ್ಲರ ಗ್ರಾಂಥಿಕ ಭಾಷೆಗೆ ಆಡುನುಡಿಯ ಸೊಗಡೂ ಪೂರಕವಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲಿ ಕನ್ನಡದ ಮಾತಿನ ಭಾಷೆಯಲ್ಲಿ ಮಹಾಪ್ರಾಣಾಕ್ಷರಗಳಿದ್ದುವು, ಋಕಾರಗಳೂ ಇದ್ದುವು. ಉಚ್ಚಾರದಲ್ಲಿ ಅದನ್ನು ಸ್ಪಷ್ಟವಾಗಿ ಬಳಸದೆ ಇದ್ದಾಗಲೂ ಆ ವ್ಯತ್ಯಾಸವನ್ನು ನಿರಂತರವಾಗಿ ಕನ್ನಡ ಪರಂಪರೆ ಗ್ರಹಿಸುತ್ತಾ ಬಂದಿದೆ. ಅದಕ್ಕಾಗಿ ಕನ್ನಡ ಭಾಷೆಯ ಲಿಖಿತ ಪರಂಪರೆಯ 1500 ವರ್ಷಗಳ ಸುದೀರ್ಘ ಇತಿಹಾಸದ ನಡುವೆ ಆ ಅಕ್ಷರಗಳೆಲ್ಲ ಉಳಿದುಕೊಂಡು ಬಂದಿವೆ. ಬರಹ ಭಾಷೆ ಎನ್ನುವುದು ಭಾಷಾಭಿವ್ಯಕ್ತಿಯ ಒಂದು ಸಾಧ್ಯತೆ ಮಾತ್ರ. ಅದೇ ಅಂತಿಮ ಅಲ್ಲ. ಬಳಕೆಯ ಉಚ್ಚಾರವೆಲ್ಲ ಬರಹದ ಭಾಷೆಯಲ್ಲಿ ಬರಬೇಕೆಂಬ ಹಟ ಸಲ್ಲದು. ಬರವಣಿಗೆಯ ಭಾಷೆಗೆ ಒಂದು ಮಿತಿ ಇದೆ. ಒಂದು ಶಿಸ್ತು ಇದೆ. ಆ ಶಿಸ್ತು ಮಾತಿನ ಭಾಷೆಯಿಂದಲೇ ರೂಪುಗೊಂಡುದು. ಮಾತಿನ ಭಾಷೆಯೇ ಅಂತಿಮ. ಅವುಗಳಲ್ಲಿ ವ್ಯತ್ಯಸ್ಥ ರೂಪಗಳನ್ನು ಅಂಗೀಕರಿಸಿದ ಕಾರಣಕ್ಕೆ ಬರಹದಲ್ಲಿ ವಿಭಿನ್ನ ಸಂಕೇತಗಳು ಬಳಕೆಯಾಗಿವೆ. ಈ ಸಂಕೇತಗಳೇ ಅಲ್ಪಪ್ರಾಣಗಳೆಂದೂ, ಮಹಾಪ್ರಾಣಗಳೆಂದೂ ದಾಖಲಾಗಿವೆ. ಈಗ ಅವು ಕನ್ನಡದ ಬರಹ ಭಾಷೆಯ ಅವಿಭಾಜ್ಯ ಸಂಕೇತಗಳು. ಆಗಾಗ ಕವಿಗಳು ಅಚ್ಚಕನ್ನಡದ ಬಳಕೆಗಾಗಿ ಶ್ರಮಿಸಿದ್ದುಂಟು. ಆಂಡಯ್ಯನಂತಹ ಪ್ರಾಚೀನರು ಹಾಗೂ ಕೊಳಂಬೆ ಪುಟ್ಟಣ್ಣಗೌಡರಂಥ ಆಧುನಿಕರನ್ನು ಇಲ್ಲಿ ಹೆಸರಿಸಬಹುದು. ಆದರೆ ಅವರ ಪ್ರಯೋಗಗಳು ವಿಫಲವಾಗಿ ಅದನ್ನು ಮೀರಿದ ಪ್ರಯೋಗಗಳೇ ಕನ್ನಡದಲ್ಲಿ ದಾಖಲಾದವು.
ವಚನ ಸಾಹಿತ್ಯದ ಕುರಿತ ಸಂಶೋಧನೆಯೊಂದಕ್ಕೆ ಬಂದ ಪ್ರತಿಕ್ರಿಯೆಗಳ ಸ್ವರೂಪ
– ಶಿವಕುಮಾರ ಪಿ.ವಿ., ಸಿ.ಎಸ್.ಎಲ್.ಸಿ
ವಚನ ಸಾಹಿತ್ಯದ ಕುರಿತ ಸಂಶೋಧನಾ ಲೇಖನದ ವಾದದ ಕುರಿತು ಚರ್ಚಿಸಬೇಕಾದುದೇನು? ಮತ್ತು ಲೇಖನಕ್ಕೆ ಬಂದ ಪ್ರತಿಕ್ರಿಯೆಗಳ ಸ್ವರೂಪವೇನು? ಒಂದೆಡೆ, ಇವೆರೆಡರ ನಡುವೆ ದೊಡ್ಡ ಕಂದರವಿದೆ. ಮತ್ತೊಂದೆಡೆ, ಅವು ತೀರ ಹತ್ತಿರವಾಗಿಯೂ ಇವೆ. ಈ ವಿಚಾರವು ವಿದ್ವಾಂಸರ ಪ್ರತಿಕ್ರಿಯೆಗಳಲ್ಲಿ ತಾನಾಗಿಯೇ ಸ್ಪಷ್ಟವಾಗುತ್ತದೆ. ಈ ಮೂಲಕ ಒಟ್ಟಾರೆ ಚರ್ಚೆಯ ಸ್ವರೂಪವನ್ನು ಗುರುತಿಸುವ ಪ್ರಯತ್ನ ಈ ಲೇಖನದ್ದಾಗಿದೆ.
‘ಜಾತಿವ್ಯವಸ್ಥೆ’ಯೆಂಬ ಪೂರ್ವನಂಬಿಕೆ ಇಟ್ಟುಕೊಂಡು ವಚನಸಾಹಿತ್ಯವನ್ನು ನೋಡಿದಾಗ ಅವು ಜಾತಿವ್ಯವಸ್ಥೆಯ ವಿರುದ್ಧದ ಚಳುವಳಿಯಂತೆ ಕಾಣುತ್ತವೆ. ಆ ಪೂರ್ವನಂಬಿಕೆಯ ಚೌಕಟ್ಟಿನಿಂದ ಹೊರತಾಗಿ ವಚನ ಸಾಹಿತ್ಯವನ್ನು ಅಧ್ಯಯನ ನಡೆಸಿದರೆ ಅದು ಜಾತಿವ್ಯವಸ್ಥೆಯ ವಿರುದ್ಧದ ಚಳುವಳಿ ಎಂದು ಸೈದ್ಧಾಂತಿಕವಾಗಿ ನಿದರ್ಶಿಸಲು ಸಾಧ್ಯವಿಲ್ಲ. ಹಾಗೂ ಈವರೆಗೂ ವಚನ ಸಾಹಿತ್ಯವನ್ನು ಆ ಒಂದು ಪೂರ್ವನಂಬಿಕೆಯಿಂದಲೇ ವಿಶ್ಲೇಷಿಸಲಾಗಿದೆ. ಇದು ಡಂಕಿನ್‍ರವರ ಸಂಶೋಧನಾ ಲೇಖನದ ಮುಖ್ಯ ವಾದ. ಇದನ್ನು ಮತ್ತೊಮ್ಮೆ ಸಂಕ್ಷಿಪ್ತವಾಗಿಡುವ ಅನಿವಾರ್ಯತೆಯನ್ನು ಪ್ರಸ್ತುತ ವಾದಕ್ಕೆ ಶಿವಪ್ರಕಾಶರವರ ಪ್ರತಿಕ್ರಿಯೆ ಹಾಗೂ ಅದನ್ನೇ ಆಧರಿಸಿ ಬಂದಂತಹ ಉಳಿದ ಪ್ರತಿಕ್ರಿಯೆಗಳು ಉಂಟುಮಾಡಿವೆ.
ಈ ಮೇಲಿನ ವಾದಕ್ಕೆ ‘ಸಂಬಂಧಿಸಿ’ದಂತೆ ಬರುತ್ತಿರುವ ಬೌದ್ಧಿಕ ವಲಯದ ಟೀಕೆ ಅಥವಾ ‘ಪ್ರತಿಕ್ರಿಯೆ’ಗಳು ಹಾಗು ಅವುಗಳ ಮಿತಿಗಳನ್ನು ಈ ಮುಂದಿನಂತೆ ನೋಡಬಹುದು.
1. ಮೊದಲನೆಯದಾಗಿ, ಹೆಚ್.ಎಲ್. ಪುಷ್ಪರವರು “ವಚನಕಾರರು ಜಾತಿಯ ಪರ ಅಥವಾ ಬ್ರಾಹ್ಮಣ ಪರವಾಗಿದ್ದರು ಎಂಬ ಮಾತೇ ತರ್ಕರಹಿತವಾದದ್ದು” ಹಾಗೂ ವಚನಕಾರರಲ್ಲಿ ಎಲ್ಲಿಯೂ “ಜಾತಿ ಪರವಾದ ಬ್ರಾಹ್ಮಣರ ಬಗ್ಗೆ ಮೃದುವಾದ ಭಾವನೆಗಳು ಕಂಡು ಬರುವುದಿಲ್ಲ” ಎನ್ನುತ್ತಾರೆ. ಎರಡನೆಯದಾಗಿ ಟಿ.ಆರ್. ಚಂದ್ರಶೇಖರ್‍ರವರು ಡಂಕಿನ್ ಮತ್ತು ಬಾಲುರವರು “ಭಾರತದಲ್ಲಿ ಜಾತಿಯೇ ಇಲ್ಲ” ಎನ್ನುವ ಪೂರ್ವಾಗ್ರಹ ಹೊಂದಿದ್ದಾರೆ ಎಂದು ಗ್ರಹಿಸುತ್ತಾರೆ. ಮೊದಲನೆಯದಕ್ಕೆ, ಉದಾಹರಣೆಯ ಮೂಲಕ ಹೇಳುವುದಾದರೆ, ಯಾರೋ ಒಬ್ಬ ವ್ಯಕ್ತಿಯು ಕಲಾತ್ಮಕ ಸಿನಿಮಾದ ಕುರಿತು ಮೃದು ಧೋರಣೆಯನ್ನು ಹೊಂದಿರುವುದಿಲ್ಲ ಎಂದಿಟ್ಟುಕೊಳ್ಳೋಣ. ಹಾಗೆಂದಾಕ್ಷಣ, ಆತ ಕಲಾತ್ಮಕ ಸಿನಿಮಾ ಹಾಗೂ ಸಿನಿ ಪ್ರಪಂಚದ ವಿರೋಧಿಯಾಗಿದ್ದಾನೆ ಮಾತ್ರವಲ್ಲ ಅವುಗಳನ್ನು ನಾಶಮಾಡಲು ಹೋರಾಡಿದ್ದಾನೆ ಎನ್ನಲು ಹೇಗೆ ಸಾಧ್ಯ? ಎರಡನೆಯ ಅಂಶದಲ್ಲಿ, ವಾದದಲ್ಲಿನ ತರ್ಕರಹಿತತೆ ಹಾಗೂ ಪೂರ್ವಾಗ್ರಹ ಯಾವುದು? ಅದು ಎಲ್ಲಿದೆ? ಎಂಬುದನ್ನು ಸುಸಂಬದ್ಧವಾಗಿ ತೋರ್ಪಡಿಸದೇ, ಆ ಹೊಣೆಯನ್ನು ಓದುಗರ ಮೇಲೆಯೇ ಹಾಕಿಬಿಡುತ್ತಾರೆ. ಆದರೆ, ಡಂಕಿನ್ ಹಾಗೂ ಬಾಲುರವರು, ಅವರ ಒಟ್ಟಾರೆ ಸಂಶೋಧನೆಯಲ್ಲಿ, ಎಲ್ಲಿಯೂ ಕೂಡ ವಚನಕಾರರು ಜಾತಿಯ ಪರವಾಗಿದ್ದರು; ಭಾರತದಲ್ಲಿ ಜಾತಿಯೇ ಇಲ್ಲ ಎಂದು ಹೇಳಿರುವುದು ಕಂಡುಬರುವುದಿಲ್ಲ. ಇದನ್ನು ಸ್ವತಃ ಆರೋಪಿಸುವವರೇ ಸಾಭೀತು ಪಡಿಸಬೇಕಾಗುತ್ತದೆ. ಇಲ್ಲವಾದರೆ, ವಿದ್ವಾಂಸರುಗಳು ತಮ್ಮ ಈ ಆರೋಪಗಳೆಲ್ಲವೂ ನಿರಾಧಾರವಾದವುಗಳು ಎಂಬ ಬೆಲೆ ತೆರಬೇಕಾಗುತ್ತದೆ.
ಅಕ್ಷರ ಕಡಿತಕ್ಕೆ ತಮಿಳು ಮಾದರಿ?
-ಡಾ. ಅಜಕ್ಕಳ ಗಿರೀಶ್ ಭಟ್
ನನ್ನ ” ಕನ್ನಡಕ್ಕೇಕೆ ಶಂಕರ ಬಟ್ಟರ ಕತ್ತರಿ? ” ಎಂಬ ಪುಸ್ತಕದ ಕೆಲವು ಭಾಗಗಳು.
ಅಕ್ಷರ ಕಡಿತಕ್ಕೆ ತಮಿಳು ಮಾದರಿ?
ಹಿರಿಯ ಭಾಷಾವಿದ್ವಾಂಸರಾದ ಡಾ. ಡಿ. ಎನ್. ಶಂಕರ ಭಟ್ಟರು ಈಚಿನ ವರ್ಷಗಳಲ್ಲಿ” ಹೊಸ ಕನ್ನಡ”ವನ್ನು ಪ್ರತಿಪಾದಿಸುತ್ತಿದ್ದಾರೆ. ಕನ್ನಡದ ಅಕ್ಷರಗಳನ್ನು ಕಡಿಮೆ ಮಾಡಬೇಕು ಹಾಗೂ ಸಂಸ್ಕೃತದಿಂದ ಬಂದ ಪದಗಳನ್ನು ಬಿಟ್ಟುಬಿಡಬೇಕು ಎನ್ನುವುದು ಅವರ ವಾದದ ಮುಖ್ಯಾಂಶ. ಅವರ ಇತ್ತೀಚಿನ ಪುಸ್ತಕಗಳು ಅವರದೇ ಆದ ಹೊಸ ಕನ್ನಡದಲ್ಲಿ ಬರುತ್ತಿವೆ.
ಪರಂಪರೆ ಮತ್ತು ಸಂಸ್ಕೃತಿಗಳ ಬಗ್ಗೆ ಡಿ.ಎನ್.ಎಸ್. ಬರಹಗಳಲ್ಲಿ ವ್ಯಕ್ತವಾಗುವ ನಿಲುವೇನು ಎಂದು ನೋಡಬೇಕು. ಅವರು ಒಂದೆಡೆ ಸ್ವಾಭಿಮಾನ, ಸ್ವಸಂಸ್ಕೃತಿ ಬಗ್ಗೆ ಮಾತಾಡುತ್ತಾರೆ; ಇನ್ನೊಂದೆಡೆ ವ್ಯಾವಹಾರಿಕ ಪ್ರಯೋಜನಗಳ ಬಗ್ಗೆ ಮಾತಾಡುತ್ತಾರೆ.ಇನ್ನೊಂದೆಡೆ ವರ್ತಮಾನ ಕಾಲವನ್ನೂ ಈಚಿನ ಕೆಲ ಶತಮಾನಗಳ ಇತಿಹಾಸವನ್ನೂ ನಿರಾಕರಿಸುತ್ತಾರೆ.
ತಮಿಳನ್ನು ಅನುಸರಿಸುವುದೇ ಕನ್ನಡದ ಸಂಸ್ಕೃತಿಯನ್ನು ಹಾಗೂ ಸೊಗಡನ್ನು ಉಳಿಸುವ ದಾರಿ ಎಂದು ಡಾ.ಡಿ.ಎನ್.ಎಸ್. ಹೇಳುತ್ತಾರೆ. ಆರ್. ಗಣೇಶ್ ಹೇಳುವಂತೆ , ಈ ಸುಧಾರಣೆಯು ” ಒಂದು ಶತಾಬ್ಧಿಗೂ ಮುನ್ನ ತಮಿಳುನಾಡಿನಲ್ಲಿ ವೀರ ತಮಿಳರು ನಡೆಸಿದ ಅವಿಚಾರಿತ ಸುಧಾರಣೆಯ ಸವಕಲು ಅನುಕರಣೆಯೆಂಬುದನ್ನು ಬಲ್ಲವರೆಲ್ಲ ಬಲ್ಲರು.ಇಷ್ಟಾಗಿಯೂ ತಮಿಳು ಜಾಗತಿಕ ಸ್ತರದಲ್ಲಿ ತಾನೊಂದು ಭಾಷೆಯಾಗಿ ಏನನ್ನೂ ಸಾಧಿಸಲಾಗಲಿಲ್ಲ.ತಮಿಳರಿಗೆ ಜೀವಿಕೆಯ ಅನಿವಾರ್ಯತೆಯಿಂದ ವ್ಯವಹಾರಮಾತ್ರಕ್ಕಾಗಿ ಕಲಿಯಬೇಕಾಗಿ ಬರುವ ಇನ್ನಿತರ ಭಾಷೆಗಳನ್ನರಿಯಲೂ ಅದು ಸಹಕಾರಿಯಾಗಿಲ್ಲ.” ಕೆ.ವಿ.ತಿರುಮಲೇಶ್ ಅವರು ಕೂಡ ತಮಿಳರ ಈ ಮಾದರಿ ಕನ್ನಡಕ್ಕೆ ಅನುಸರಣಯೋಗ್ಯವಲ್ಲ ಎಂದು ತುಂಬ ಸ್ಪಷ್ಟವಾಗಿಯೇ ಹೇಳಿದ್ದಾರೆ.