ವಿಷಯದ ವಿವರಗಳಿಗೆ ದಾಟಿರಿ

Archive for

15
ಏಪ್ರಿಲ್

ಸಾಹಿತ್ಯ ಪರಂಪರೆಯ ಅರಿವಿಲ್ಲದ ’ಎಲ್ಲರ ಕನ್ನಡ’

ಡಾ. ಮಾಧವ ಪೆರಾಜೆ ಅವರ ಲೇಖನಕ್ಕೊಂದು ಪೂರಕ ಪ್ರತಿಕ್ರಿಯೆ

– ಡಾ. ಮೋಹನ ಕುಂಟಾರ್

imagesಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣದ ಮೂಲಕ ಡಿ.ಎನ್.ಶಂಕರಭಟ್ಟರು ಕನ್ನಡ ಬರವಣಿಗೆಯಲ್ಲಿ ಹೊಸ ಕ್ರಾಂತಿಯನ್ನು ಮಾಡಲು ಮುಂದಾಗಿದ್ದಾರೆ. ಅವರ ಮಾರ್ಗದಲ್ಲೇ ಮುಂದುವರಿಯುವ ಅವರ ಶಿಷ್ಯವರ್ಗ ಅದನ್ನೇ ಸಮರ್ಥಿಸಿ ಕೃತಿರೂಪಕ್ಕೆ ಇಳಿಸುತ್ತಿದೆ. ಒಂದು ರೀತಿಯಲ್ಲಿ ಇದು ಅತಿಬುದ್ಧಿವಂತಿಕೆಯ ಪ್ರದರ್ಶನವಲ್ಲದೇ ಬೇರೇನೂ ಅಲ್ಲ.

ಕನ್ನಡಕ್ಕೆ ಭಾಷಿಕವಾಗಿಯೂ ಸಾಹಿತ್ಯಿಕವಾಗಿಯೂ ಗೌರವ ತರುವ ಸುದೀರ್ಘ ಪರಂಪರೆಯಿದೆ. ಅದರ ಮೂಲಕವೇ ಕನ್ನಡ ಪರಂಪರೆ ವಿಶಾಲವಾಗಿ ಅಷ್ಟೆ ಅಗಾಧ ಪ್ರಮಾಣದಲ್ಲಿ ಬೆಳೆದು ನಿಂತಿರುವುದನ್ನು ಗುರುತಿಸಲಾಗುತ್ತಿದೆ. ಪಂಪ, ಕುಮಾರವ್ಯಾಸಾದಿಗಳು ಬರೆಯುವ ಕಾಲಕ್ಕೆ ಮಾತನಾಡುವ ಭಾಷೆ ಬಳಕೆಯಲ್ಲಿತ್ತು. ಮಾಸ್ತಿ, ಕಾರಂತ, ಕುವೆಂಪು ಅವರ ಕಾಲದಲ್ಲಿಯೂ ಇತ್ತು. ಅವರೆಲ್ಲ ಬರವಣಿಗೆಯ ಭಾಷೆಯೊಂದನ್ನು ಕನ್ನಡದ ಮೂಲಕ ಕಟ್ಟಿಕೊಟ್ಟು ಕನ್ನಡ ಭಾಷೆಯ ಮಹತ್ವವನ್ನು ಹೆಚ್ಚಿಸಿದ್ದಾರೆ. ಇವರೆಲ್ಲರ ಗ್ರಾಂಥಿಕ ಭಾಷೆಗೆ ಆಡುನುಡಿಯ ಸೊಗಡೂ ಪೂರಕವಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲಿ ಕನ್ನಡದ ಮಾತಿನ ಭಾಷೆಯಲ್ಲಿ ಮಹಾಪ್ರಾಣಾಕ್ಷರಗಳಿದ್ದುವು, ಋಕಾರಗಳೂ ಇದ್ದುವು. ಉಚ್ಚಾರದಲ್ಲಿ ಅದನ್ನು ಸ್ಪಷ್ಟವಾಗಿ ಬಳಸದೆ ಇದ್ದಾಗಲೂ ಆ ವ್ಯತ್ಯಾಸವನ್ನು ನಿರಂತರವಾಗಿ ಕನ್ನಡ ಪರಂಪರೆ ಗ್ರಹಿಸುತ್ತಾ ಬಂದಿದೆ. ಅದಕ್ಕಾಗಿ ಕನ್ನಡ ಭಾಷೆಯ ಲಿಖಿತ ಪರಂಪರೆಯ 1500 ವರ್ಷಗಳ ಸುದೀರ್ಘ ಇತಿಹಾಸದ ನಡುವೆ ಆ ಅಕ್ಷರಗಳೆಲ್ಲ ಉಳಿದುಕೊಂಡು ಬಂದಿವೆ. ಬರಹ ಭಾಷೆ ಎನ್ನುವುದು ಭಾಷಾಭಿವ್ಯಕ್ತಿಯ ಒಂದು ಸಾಧ್ಯತೆ ಮಾತ್ರ. ಅದೇ ಅಂತಿಮ ಅಲ್ಲ. ಬಳಕೆಯ ಉಚ್ಚಾರವೆಲ್ಲ ಬರಹದ ಭಾಷೆಯಲ್ಲಿ ಬರಬೇಕೆಂಬ ಹಟ ಸಲ್ಲದು. ಬರವಣಿಗೆಯ ಭಾಷೆಗೆ ಒಂದು ಮಿತಿ ಇದೆ. ಒಂದು ಶಿಸ್ತು ಇದೆ. ಆ ಶಿಸ್ತು ಮಾತಿನ ಭಾಷೆಯಿಂದಲೇ ರೂಪುಗೊಂಡುದು. ಮಾತಿನ ಭಾಷೆಯೇ ಅಂತಿಮ. ಅವುಗಳಲ್ಲಿ ವ್ಯತ್ಯಸ್ಥ ರೂಪಗಳನ್ನು ಅಂಗೀಕರಿಸಿದ ಕಾರಣಕ್ಕೆ ಬರಹದಲ್ಲಿ ವಿಭಿನ್ನ ಸಂಕೇತಗಳು ಬಳಕೆಯಾಗಿವೆ. ಈ ಸಂಕೇತಗಳೇ ಅಲ್ಪಪ್ರಾಣಗಳೆಂದೂ, ಮಹಾಪ್ರಾಣಗಳೆಂದೂ ದಾಖಲಾಗಿವೆ. ಈಗ ಅವು ಕನ್ನಡದ ಬರಹ ಭಾಷೆಯ ಅವಿಭಾಜ್ಯ ಸಂಕೇತಗಳು. ಆಗಾಗ ಕವಿಗಳು ಅಚ್ಚಕನ್ನಡದ ಬಳಕೆಗಾಗಿ ಶ್ರಮಿಸಿದ್ದುಂಟು. ಆಂಡಯ್ಯನಂತಹ ಪ್ರಾಚೀನರು ಹಾಗೂ ಕೊಳಂಬೆ ಪುಟ್ಟಣ್ಣಗೌಡರಂಥ ಆಧುನಿಕರನ್ನು ಇಲ್ಲಿ ಹೆಸರಿಸಬಹುದು. ಆದರೆ ಅವರ ಪ್ರಯೋಗಗಳು ವಿಫಲವಾಗಿ ಅದನ್ನು ಮೀರಿದ ಪ್ರಯೋಗಗಳೇ ಕನ್ನಡದಲ್ಲಿ ದಾಖಲಾದವು.

Read more »