ಸಂಶೋಧನೆಯ ರೂಪುರೇಷೆಗಳನ್ನರಿಯದ ವಿಮರ್ಶಕರು
– ಡಂಕಿನ್ ಝಳಕಿ
ಇಂದಿನ (04/05/2013) ಪ್ರಜಾವಾಣಿಯಲ್ಲಿ ಜಿ.ಬಿ. ಹರೀಶರು ಬರೆದ ಲೇಖನ ಮತ್ತು ಇದುವರೆಗೂ ಬಂದಿರುವ ಇನ್ನಿತರ ಪ್ರತಿಕ್ರಿಯೆಗಳಲ್ಲಿ ಸಂಶೋಧನೆ ಎಂದರೇನು ಎಂಬ ವಿಚಾರದ ಕುರಿತು ಬಹಳಷ್ಟು ಗೊಂದಲವನ್ನು ನಾವು ಕಾಣಬಹುದು. ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನೆಯಲ್ಲಿ ನಾವು ಪದೇಪದೇ ಕಾಣುವ ಹಲವು ಸಣ್ಣ ದೊಡ್ಡ ತಪ್ಪುಗಳು ಈ ಪ್ರತಿಕ್ರಿಯೆಗಳ ತುಂಬಾ ಕಾಣಿಸುತ್ತವೆ. ಅಂತಹ ಕೆಲವು ಸಮಸ್ಯೆಗಳನ್ನು ಕುರಿತು ಚರ್ಚಿಸುವುದೇ ಈ ಪುಟ್ಟ ಲೇಖನದ ಉದ್ದೇಶ.
(೧) ಸಂಶೋಧನೆಗಳು ಮತ್ತು ಉಲ್ಲೇಖಗಳು: ನಾನು ನನ್ನ ಲೇಖನ ಮತ್ತು ಪ್ರಬಂಧಗಳಲ್ಲಿ ಯಾರನ್ನು ಮತ್ತು ಎಷ್ಟು ಮಂದಿಯನ್ನು ಉಲ್ಲೇಖಿಸುತ್ತೇನೆ ಮತ್ತು ಉಲ್ಲೇಖಿಸುವುದಿಲ್ಲ ಎಂಬ ವಿಚಾರವನ್ನು ಕುರಿತು ಮಾತನಾಡುತ್ತಾ ಹರೀಶರು ಹೀಗೆ ಹೇಳುತ್ತಾರೆ “ವಚನ ಸಾಹಿತ್ಯದ ಬಗ್ಗೆ ಅಪಾರ ಒಳನೋಟವಿರುವ ಬರಹಗಳನ್ನು ಬರೆದಿರುವ ಜ.ಚ.ನಿ. ಸಿದ್ದೇಶ್ವರಸ್ವಾಮಿಗಳಾಗಲಿ, ಕಪಟರಾಳ ಕೃಷ್ಣರಾವ್, ಎಂ.ಆರ್. ಶ್ರಿನಿವಾಸಮೂರ್ತಿಯವರಾಗಲಿ, ಈ ಬರಹದುದ್ದಕ್ಕೂ ಎಲ್ಲೂ ಕಾಣಿಸುವುದಿಲ್ಲ. ಕಿ.ರಂ. ನಾಗರಾಜರೂ ಇಲ್ಲಿ ಗೈರುಹಾಜರಿ.”





