ಅಕ್ಷರ ಕಡಿತಕ್ಕೆ ತಮಿಳು ಮಾದರಿ?
-ಡಾ. ಅಜಕ್ಕಳ ಗಿರೀಶ್ ಭಟ್
ನನ್ನ ” ಕನ್ನಡಕ್ಕೇಕೆ ಶಂಕರ ಬಟ್ಟರ ಕತ್ತರಿ? ” ಎಂಬ ಪುಸ್ತಕದ ಕೆಲವು ಭಾಗಗಳು.
ಅಕ್ಷರ ಕಡಿತಕ್ಕೆ ತಮಿಳು ಮಾದರಿ?
ಹಿರಿಯ ಭಾಷಾವಿದ್ವಾಂಸರಾದ ಡಾ. ಡಿ. ಎನ್. ಶಂಕರ ಭಟ್ಟರು ಈಚಿನ ವರ್ಷಗಳಲ್ಲಿ” ಹೊಸ ಕನ್ನಡ”ವನ್ನು ಪ್ರತಿಪಾದಿಸುತ್ತಿದ್ದಾರೆ. ಕನ್ನಡದ ಅಕ್ಷರಗಳನ್ನು ಕಡಿಮೆ ಮಾಡಬೇಕು ಹಾಗೂ ಸಂಸ್ಕೃತದಿಂದ ಬಂದ ಪದಗಳನ್ನು ಬಿಟ್ಟುಬಿಡಬೇಕು ಎನ್ನುವುದು ಅವರ ವಾದದ ಮುಖ್ಯಾಂಶ. ಅವರ ಇತ್ತೀಚಿನ ಪುಸ್ತಕಗಳು ಅವರದೇ ಆದ ಹೊಸ ಕನ್ನಡದಲ್ಲಿ ಬರುತ್ತಿವೆ.
ಪರಂಪರೆ ಮತ್ತು ಸಂಸ್ಕೃತಿಗಳ ಬಗ್ಗೆ ಡಿ.ಎನ್.ಎಸ್. ಬರಹಗಳಲ್ಲಿ ವ್ಯಕ್ತವಾಗುವ ನಿಲುವೇನು ಎಂದು ನೋಡಬೇಕು. ಅವರು ಒಂದೆಡೆ ಸ್ವಾಭಿಮಾನ, ಸ್ವಸಂಸ್ಕೃತಿ ಬಗ್ಗೆ ಮಾತಾಡುತ್ತಾರೆ; ಇನ್ನೊಂದೆಡೆ ವ್ಯಾವಹಾರಿಕ ಪ್ರಯೋಜನಗಳ ಬಗ್ಗೆ ಮಾತಾಡುತ್ತಾರೆ.ಇನ್ನೊಂದೆಡೆ ವರ್ತಮಾನ ಕಾಲವನ್ನೂ ಈಚಿನ ಕೆಲ ಶತಮಾನಗಳ ಇತಿಹಾಸವನ್ನೂ ನಿರಾಕರಿಸುತ್ತಾರೆ.
ತಮಿಳನ್ನು ಅನುಸರಿಸುವುದೇ ಕನ್ನಡದ ಸಂಸ್ಕೃತಿಯನ್ನು ಹಾಗೂ ಸೊಗಡನ್ನು ಉಳಿಸುವ ದಾರಿ ಎಂದು ಡಾ.ಡಿ.ಎನ್.ಎಸ್. ಹೇಳುತ್ತಾರೆ. ಆರ್. ಗಣೇಶ್ ಹೇಳುವಂತೆ , ಈ ಸುಧಾರಣೆಯು ” ಒಂದು ಶತಾಬ್ಧಿಗೂ ಮುನ್ನ ತಮಿಳುನಾಡಿನಲ್ಲಿ ವೀರ ತಮಿಳರು ನಡೆಸಿದ ಅವಿಚಾರಿತ ಸುಧಾರಣೆಯ ಸವಕಲು ಅನುಕರಣೆಯೆಂಬುದನ್ನು ಬಲ್ಲವರೆಲ್ಲ ಬಲ್ಲರು.ಇಷ್ಟಾಗಿಯೂ ತಮಿಳು ಜಾಗತಿಕ ಸ್ತರದಲ್ಲಿ ತಾನೊಂದು ಭಾಷೆಯಾಗಿ ಏನನ್ನೂ ಸಾಧಿಸಲಾಗಲಿಲ್ಲ.ತಮಿಳರಿಗೆ ಜೀವಿಕೆಯ ಅನಿವಾರ್ಯತೆಯಿಂದ ವ್ಯವಹಾರಮಾತ್ರಕ್ಕಾಗಿ ಕಲಿಯಬೇಕಾಗಿ ಬರುವ ಇನ್ನಿತರ ಭಾಷೆಗಳನ್ನರಿಯಲೂ ಅದು ಸಹಕಾರಿಯಾಗಿಲ್ಲ.” ಕೆ.ವಿ.ತಿರುಮಲೇಶ್ ಅವರು ಕೂಡ ತಮಿಳರ ಈ ಮಾದರಿ ಕನ್ನಡಕ್ಕೆ ಅನುಸರಣಯೋಗ್ಯವಲ್ಲ ಎಂದು ತುಂಬ ಸ್ಪಷ್ಟವಾಗಿಯೇ ಹೇಳಿದ್ದಾರೆ.





