ವಚನಗಳನ್ನು ಆಧ್ಯಾತ್ಮಿಕ ಸಂದರ್ಭದಲ್ಲಿಟ್ಟು ನೋಡಿದಾಗ ಕಾಣಿಸುವುದೇನು?
– ಬಾಲಗಂಗಾಧರ ಎಸ್. ಎನ್.
ಗೆಂಟ್ ವಿಶ್ವವಿದ್ಯಾಲಯ, ಬೆಲ್ಜಿಯಂ
ವಚನಗಳ ಉದ್ದೇಶವು ಜಾತಿವಿನಾಶ ಚಳವಳಿಯಲ್ಲ ಎಂಬ ನನ್ನ ಹಾಗೂ ನನ್ನ ಸಹಸಂಶೋಧಕರ ವಾದವು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ನನ್ನ ವಾದಕ್ಕೆ ಪ್ರತಿಕ್ರಿಯಿಸಿದವರೆಲ್ಲರೂ ನನ್ನ ವಾದವು ವಚನಗಳ ಹಿರಿಮೆಯನ್ನು ಅಲ್ಲಗಳೆಯುತ್ತಿದೆ ಎಂಬುದಾಗಿ ಭಾವಿಸಿದ್ದಾರೆ. ಅದನ್ನು ಸ್ಪಷ್ಟೀಕರಿಸಲು ವಚನಗಳನ್ನು ಆಧ್ಯಾತ್ಮಿಕ ಸಂದರ್ಭದಲ್ಲಿಟ್ಟು ನೋಡಬೇಕೆಂಬುದು ನಮ್ಮ ವಾದವೆಂಬುದನ್ನು ಓದುಗರ ಗಮನಕ್ಕೆ ತಂದಿದ್ದೂ ಆಗಿದೆ. ಆ ಹೇಳಿಕೆಯ ಕುರಿತೂ ಅನೇಕ ಪ್ರತಿಕ್ರಿಯೆಗಳು ಬಂದವು. ಈ ಪ್ರತಿಕ್ರಿಯೆಗಳಲ್ಲಿ ಪರೋಕ್ಷವಾಗಿ ಇವರೆಲ್ಲರೂ ಆಧ್ಯಾತ್ಮ ಸಂಪ್ರದಾಯವನ್ನು ಬ್ರಾಹ್ಮಣರಿಗೆ ಸಮೀಕರಿಸುವುದು ಕಂಡುಬರುತ್ತದೆ. ಇಲ್ಲಿ ಬಹುಶಃ ಈ ಅಭಿಪ್ರಾಯಗಳಿಗೆ ಉತ್ತರ ನೀಡುವುದಕ್ಕಿಂತ ನಾನು ಏನು ಹೇಳುತ್ತಿದ್ದೇನೆ ಎಂಬುದನ್ನು ಮತ್ತೂ ಸ್ಪಷ್ಟೀಕರಿಸುವುದು ಸೂಕ್ತ ಎನ್ನಿಸುತ್ತದೆ.
ಭಾರತೀಯ ಆಧ್ಯಾತ್ಮ ಪರಂಪರೆಯು ಇಂದಿನವರೆಗೂ ಐತಿಹಾಸಿಕ ಏಳು ಬೀಳುಗಳನ್ನೆಲ್ಲ ದಾಟಿಕೊಂಡು ಅವ್ಯಾಹತವಾಗಿ ಮುಂದುವರಿದುಕೊಂಡು ಬಂದಿದೆ. ಆದರೆ ಅದರ ಕುರಿತು ಅಧಿಕೃತವಾಗಿ ತಿಳಿದುಕೊಳ್ಳುವ ಗುರಿಯನ್ನು ಸಮಾಜ ವಿಜ್ಞಾನವು ಇನ್ನೂ ತಲುಪಿಲ್ಲ. ಏಕೆಂದರೆ, ಅದರ ಒಂದು ವಿಶೇಷತೆಯೆಂದರೆ ಅದನ್ನು ಗುರು, ಶಿಷ್ಯವೃತ್ತಿ, ಸತತ ಸಾಧನೆ ಇತ್ಯಾದಿಗಳಿಂದಲೇ ಕಲಿಯಬೇಕಾಗುತ್ತದೆ. ಅದರ ಕುರಿತು ನಮ್ಮ ಆಧುನಿಕ ಪರಿಭಾಷೆಗಳಲ್ಲಿ ಮಾತನಾಡಲು ಹಾಗೂ ಅರ್ಥಮಾಡಿಕೊಳ್ಳಲು ನಾವಿನ್ನೂ ಸರಿಯಾದ ಭಾಷೆಯನ್ನು ಬೆಳೆಸಿಕೊಂಡಿಲ್ಲವೆಂಬುದು ವಚನದ ಕುರಿತ ಈ ಚರ್ಚೆಯಂದ ಧೃಡಪಡುತ್ತದೆ. ಏಕೆ ಈ ಸಂಪ್ರದಾಯವನ್ನು ಪ್ರವೇಶಿಸಲು ನಮಗೆ ಸಾಧ್ಯವಾಗುತ್ತಿಲ್ಲವೆಂದರೆ ಈಗ ಇರುವ ವಿವರಣೆಗಳೆಲ್ಲವೂ ಕ್ರೈಸ್ತ ಥಿಯಾಲಜಿಯನ್ನಾಧರಿಸಿ ಹುಟ್ಟಿದಂಥವು. ಅಂದರೆ, ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನು ಪ್ರಪ್ರಥಮವಾಗಿ ಸಮಾಜ ವಿಜ್ಞಾನದ ಪರಿಭಾಷೆಯಲ್ಲಿ ಇಟ್ಟ ಐರೋಪ್ಯರು ತಮಗೆ ಗೊತ್ತಿದ್ದ ಒಂದೇ ಒಂದು ಪರಿಭಾಷೆಗಳ ಲೋಕದಿಂದ ಇದನ್ನು ವರ್ಣಿಸಿದರು, ಅದೇ ಕ್ರೈಸ್ತರ ಥಿಯಾಲಜಿಯ ಲೋಕ. ಅಂದರೆ, ಇಂದು ಆಧ್ಯಾತ್ಮದ ಜ್ಞಾನದ ಹಿನ್ನೆಲೆಯನ್ನು ಹೊಂದಿದವರು ಏನನ್ನು ಹೇಳುತ್ತಿದ್ದಾರೆ ಎಂಬುದನ್ನು ಇಂದಿನ ಸಮಾಜ ವಿಜ್ಞಾನಿಗಳು ಸಂಶೋಧನಾ ಭಾಷೆಯಲ್ಲಿ ವರ್ಣಿಸಬೇಕಾದರೆ ಥಿಯಾಲಜಿಗೂ ಹೊರತಾದ ವೈಜ್ಞಾನಿಕ ಭಾಷೆಯೊಂದರ ಅಗತ್ಯವಿದೆ.
ಮತ್ತಷ್ಟು ಓದು 




