ಸಾ ನಿಗಮ..ಪಾದ ನೀ ಸಾ?
– ತುರುವೇಕೆರೆ ಪ್ರಸಾದ್
ಎಂಎಲ್‍ಎ ಮುಳ್ಳಪ್ಪನವರ ಏಕಮಾತ್ರ ಪುತ್ರಿ ಪದ್ಮಾವತಿ ‘ಸ…’ ಎಂದು ಬಾಯಿ ತೆರೆದಾಗ ಸಂಗೀತ ಮೇಷ್ಟ್ರು ಶಾಮಾ ದೀಕ್ಷಿತರು ‘ಸ್ವಲ್ಪ ಎಳೆಯಮ್ಮ..’ ಎಂದರು. ಕೂಡಲೇ ಪದ್ಮಾವತಿ ಬಾಯಲ್ಲಿದ್ದ ಚೂಯಿಂಗ್ ಗಮ್‍ನ ದೀಕ್ಷಿತರ ಮೂತಿಗೇ ಬರುವಂತೆ ಎಳೆದಾಗ ದೀಕ್ಷಿತರು ಅಸಹ್ಯದಿಂದ ಮುಖ ಹಿಂಡಿದರು. ‘ ಎಳೆಯೋದು ಅಂದ್ರೆ ಈ ಸುಡುಗಾಡು ಚೂಯಿಂಗ್‍ಗಮ್‍ನಲ್ಲ..ಸ್ವರನಮ್ಮ..’ ಎಂದರು ಅಸಹನೆಯಿಂದ. ಪದ್ಮಾ ತಾರಕ ಸ್ವರದಲ್ಲಿ ‘ ಸಾ…’ ಎಂದು ಬೊಬ್ಬೆ ಹೊಡೆದಾಗ, ಆ ಕರ್ಕಶ ಸ್ವರ ಕೇಳಲಾಗದೆ ‘ಶಿವ ಶಿವಾ’ಎಂದು ಕಿವಿ ಮುಚ್ಚಿಕೊಂಡರು.’ಅಷ್ಟೊಂದು ಎಳೀಬಾರದಮ್ಮ..’ ಎಂದು ಕಿವಿಯಲ್ಲಿ ಬೆರಳಿಟ್ಟುಕೊಂಡೇ ಬೇಡಿಕೊಂಡರು. ಪದ್ಮಾವತಿ ತಲೆಯಾಡಿಸಿ ದೀಕ್ಷಿತರ ಮುಖಕ್ಕೇ ಕೆಮ್ಮಿ, ಕ್ಯಾಕರಿಸಿ ಕಾಫಿ ಎಂಬ ಕಲಗಚ್ಚು ಹೀರಿ ಗಂಟಲು ಹದಮಾಡಿಕೊಂಡು ಬರಲು ಒಳಗೆ ಹೋದಳು. ದೀಕ್ಷಿತರು ಧೋತರದಿಂದ ಪದ್ಮಾವತಿ ಉಗಿದಿದ್ದನ್ನು ಒರೆಸಿಕೊಂಡು ನಿಟ್ಟುಸಿರಿಟ್ಟರು.
ಪಾಪ್, ರ್ಯಾಪ್, ರಾಕ್ ಅಬ್ಬರದಲ್ಲಿ ದೀಕ್ಷಿತರ ಶಾಸ್ತ್ರೀಯ ಸಂಗೀತ ಔಟ್ ಡೇಟೆಡ್ ಆಗಿಹೋಗಿತ್ತು. ಮನೆಯೊಳಗಿನ ಹೆಂಡತಿ ಮಕ್ಕಳೆಂಬ ಪಕ್ಕ ವಾದ್ಯಗಳ ಮಧ್ಯೆ ದೀಕ್ಷಿತರಿಗೆ ಮುತ್ತಯ್ಯ ದೀಕ್ಷಿತರ ಕೀರ್ತನೆಯನ್ನು ಮೆಲುಕು ಹಾಕಲೂ ಅವಕಾಶವಿರಲಿಲ್ಲ. ರಾಮನವಮಿ, ಶಂಕರ ಜಯಂತಿ ಮುಂತಾದ ಸಮಾರಂಭಗಳಲ್ಲಿ ಲೈಟ್ ಮ್ಯೂಸಿಕ್ ಎಂದು ಬಳ್ಳಿ ನಡುವಿನ ಲತಾಂಗಿ ಸ್ಟೇಜ್ ಹತ್ತಲು ಶುರುಮಾಡಿದ ಮೇಲಂತೂ ದೀಕ್ಷಿತರ ಆಲಾಪನೆಯನ್ನು ಕೇಳುವವರೇ ಇಲ್ಲದಾಗಿ ಹೋಯಿತು. ಅಸ್ತಮಾದಿಂದ ದೀಕ್ಷಿತರು ಅನವರತ ಗೊರ ಗೊರ ಎನ್ನುವಂತೆ ತಿದಿಯೊತ್ತಿದರೆ ಅವರ ಹಾರ್ಮೊನಿಯಂ ಪೆಟ್ಟಿಗೆಯೂ ಬುಸ ಬುಸ ಎಂದು ನಿಟ್ಟುಸಿರುಬಿಡುತ್ತಿತ್ತು. ದೀಕ್ಷಿತರು ಇಂತಹ ಸಂಕಷ್ಟ ಸಮಯದಲ್ಲಿ ಎಂಎಲ್‍ಎ ಮುಳ್ಳಪ್ಪನವರ ಮಗಳು ಪದ್ಮಾವತಿಗೆ ಸಂಗೀತ ಕಲಿಯುವ ಹುಚ್ಚು ಹತ್ತಿತ್ತು. ತಾನೂ ಫಿಲಂ ಸ್ಟಾರ್ ರಮಯಾ ತರ ಆಗುತ್ತೇನೆಂದು ಅಪ್ಪನ ಬೆನ್ನು ಹತ್ತಿದ್ದಳು.
ಒಂದೆರಡು ಸಭೆಗಳಲ್ಲಿ ಎಂಎಲ್‍ಎ ಸಾಹೇಬರ ಭಾಷಣಕ್ಕೆ ಮೊದಲೇ ಪದ್ಮಾವತಿಯ ಪ್ರಾರ್ಥನೆ ಎನ್ನುವ ಐಟಂ ಸಾಂಗ್‍ಗೇ ಜನ ಖಾಲಿಯಾಗಲಾರಂಭಿಸಿದಾಗ ಮುಳ್ಳಪ್ಪನವರು ವಿಲವಿಲ ಒದ್ದಾಡಿದರು. ಹಾಗೆಂದು ಮಗಳ ಆಸೆಯನ್ನು ಕಡೆಗಣಿಸುವಂತಿರಲಿಲ್ಲ. ಮೊನ್ನೆ ಎಲೆಕ್ಷನ್‍ಗೆ ನಿಂತ ರಮಯಾ ತರ ಏಕಮಾತ್ರ ವಂಶದ ಕುಡಿಯನ್ನೂ ತಮ್ಮ ಸಕ್ಸಸರ್ ಆಗಿ ರಾಜಕೀಯಕ್ಕೆ ತರಬೇಕೆಂಬ ಮಹದಾಕಾಂಕ್ಷೆ ಮುಳ್ಳಪ್ಪನವರಿಗಿತ್ತು.ಆದರೆ ರಮಯಾ ತರ ಆಕರ್ಷಕ ಶರೀರವಂತೂ ಮಗಳು ಪದ್ಮಳಿಗಿರಲಿಲ್ಲ. ಶಾರೀರವನ್ನಾದರೂ ಹದ ಮಾಡಿ ಒಂದಿಷ್ಟು ಭಾಷಣ ಕಲಿಸಿದರೆ ಮಗಳು ವಂಶದ ಹೆಸರು ಉಳಿಸಿಯಾಳು ಎಂಬ ಭರವಸೆ ಇತ್ತು. ಅದಕ್ಕೇ ಮುಳ್ಳಪ್ಪನವರು ತರ್ಲೆಕ್ಯಾತನಹಳ್ಳಿಯ ಏಕಮಾತ್ರ ಸಂಗೀತ ಸಾಮ್ರಾಟ ಶಾಮಾದೀಕ್ಷಿತರಿಗೆ ಆಸ್ಥಾನ ವಿದ್ವಾಂಸರ ಪಟ್ಟ ಕಟ್ಟಿ ಪದ್ಮಾವತಿಯ ಶಾರೀರ ಪಳಗಿಸಲು ಬಿಟ್ಟಿದ್ದರು. ರಾಜಾಶ್ರಯ ವಂಚಿತರಾಗಿದ್ದ ದೀಕ್ಷಿತರು ರಾಜಕೀಯಾಶ್ರಯ ಪಡೆದು ತಮ್ಮ ಅಸ್ತಮಾ ಖರ್ಚಿಗೊಂದು ದಾರಿ ಕಂಡುಕೊಂಡಿದ್ದರು.
ಪದ್ಮಾವತಿ ಅಡುಗೆ ಮನೆಯಿಂದ ಹಂದಿಯಂತೆ ಉರುಳುತ್ತಾ ಬಂದು ಡರ್ರನೆ ತೇಗಿ ಲಕ್ಷಣವಾಗಿ ಚಕ್ಕಳ ಮಕ್ಕಳ ಹಾಕಿ ಕುಳಿತಳು. ದೀಕ್ಷಿತರು ‘ ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಾ?’ ಕೀರ್ತನೆ ಕೆನೆದರು. ಅದನ್ನೇ ಪದ್ಮಾವತಿ ಮೂಗಲ್ಲಿ ಗುನುಗಿದಳು.’ ಛೇ! ಛೇ! ಮೂಗಲ್ಲಿ ಹೇಳಬಾರದಮ್ಮ, ಬಾಯಲ್ಲಿ ಹೇಳು’ ಎಂದರು ದೀಕ್ಷಿತರು. ಮತ್ತೆ ನೀವು ಮೂಗಲ್ಲಿ ಹೇಳ್ತೀರಲ್ಲ!?’ ಪದ್ಮಾವತಿ ಜಿಜ್ಞಾಸೆ. ಹೆಂಡತಿಯ ಮುಂದೆ ಏಗಿ ಏಗಿ ವಾಯ್ಸ್ ವೂಸ್ಟ್ ಆಗಿದೆ ಎಂದು ಹೇಗೆ ಹೇಳುವುದು? ‘ನನಗೆ ನೆಗಡಿಯಾಗಿದೆಯಮ್ಮ’ ಅಂದರು. ‘ನೆಗಡಿ ಮೂಗಲ್ಲಿರುತ್ತಲ್ಲ, ಬಾಯಲ್ಲಿ ಹೇಳಿಕೊಡಿ’ ಎಂದು ದಂಬಾಲು ಬಿದ್ದಳು ಪದ್ಮಾವತಿ. ದೀಕ್ಷಿತರು ಮತ್ತೆ ‘ಕಂಡು ಕಂಡು ನೀ ಎನ್ನ…ಕೃಷ್ಟಾ?’ ರಿಪೀಟ್ ಮಾಡಿದರು. ಅಷ್ಟರಲ್ಲಿ ಪತ್ನೀ ಸಹಿತರಾಗಿ ಅತ್ತ ಬಂದ ಮುಳ್ಳಪ್ಪನವರು ಕೃಷ್ಣಾ ಹೆಸರು ಕೇಳಿ ಕಿಡಿಕಿಡಿಯಾದರು.
‘ಮೇಷ್ಟ್ರೇ! ನಿಮಗೆ ಜ್ಞಾನ ನೆಟ್ಟಗಿಲ್ಲವಾ? ಆ ಔಟ್ ಡೇಟೆಡ್ ಹೆಸರು ಯಾಕೆ ಹೇಳ್ತೀರಿ? ಈಗ ಅವರೇನು ಕೈ ಬಿಡೋದು? ಅವರೇ ಕೈ ಜಾರಿ ಹೋಗದ ಹಾಗೆ ಒದ್ದಾಡ್ತಿದಾರೆ. ಹಂಬರೀಶಣ್ಣನ ಕಿವಿಗೆ ಬಿದ್ರೆ ನಂಗೆ ಕುತ್ತಿಗೆ ಬರುತ್ತೆ’
‘ಹೋಗಲಿ ಬಿಡಿ, ನಿಮಗೆ ಆ ಕೀರ್ತನೆ ಇಷ್ಟ ಆಗಲಿಲ್ಲ ಅಂದರೆ ಬೇರೆ ಹೇಳಿ ಕೊಡ್ತೀನಿ. ಹೇಳಮ್ಮ..ಧರ್ಮವೇ ಜಯವೆಂಬ ದಿವ್ಯ ಮಂತ್ರ..’
‘ಅಯ್ಯೊ ಅಯ್ಯೋ ! ನಿಲ್ಸಿ ಸಾಕು..! ಚೀರಿದರು ಮುಳ್ಳಪ್ಪ. ಎಲ್ಲಿದಾರ್ರೀ ಧರ್ಮಸಿಂಗ್? ಅವರ ಕಾಲ ಆಗೋಯ್ತು..ಧರ್ಮ ಅಲ್ಲ ಸ್ವಾಮಿ ಜಯದ ದಿವ್ಯ ಮಂತ್ರ, ಧನ..ಅಂದ್ರೆ ಹಣ, ಹಣ ಸ್ವಾಮಿ ಜಯದ ದಿವ್ಯ ಮಂತ್ರ..ಆ ಕೀರ್ತನೆನ ಮೊದಲು ಧನವೇ ಜಯವೆಂಬ ದಿವ್ಯ ಮಂತ್ರಿ ಅಂತ ತಿದ್ದಿ..’
ದೀಕ್ಷಿತರು ಬೆಪ್ಪಾದರು. ಸಾವರಿಸಿಕೊಂಡು ಸರಿ ಸ್ವಾಮಿ ಎಂದು ಬೇರೆ ಕೀರ್ತನೆ ಪಲುಕಿದರು ; ‘ದೇವ ಬಂದ, ನಮ್ಮ ಸ್ವಾಮಿ ಬಂದಾನೋ, ದೇವರ ದೇವ ಶಿಖಾಮಣಿ ಬಂದಾನೋ..’ಪದ್ಮಾವತಿ ಕಯ್ ಎಂದು ಚೀರುವಷ್ಟರಲ್ಲೇ ಮುಳ್ಳಪ್ಪ ಸಿಡಿದರು:’ ಬಾಯ್ಮುಚ್ಚಮ್ಮ, ಆ ದೀಕ್ಷಿತರೇನೋ ತಲೆಕೆಟ್ಟು ಬಾಯಿಗೆ ಬಂದಾಗೆ ಹೇಳಿಕೊಡ್ತಾರೆ ಅಂದ್ರೆ ನೀನೇ ಅದನ್ನೇ ಒದರ್ತೀಯಲ್ಲ..
ಪದ್ಮಾವತಿ ಬೆಚ್ಚಿದಳು: ‘ಯಾಕಪ್ಪ? ಏನಾಯ್ತು?’
‘ಅಲ್ಲಮ್ಮ, ದೇವೇಗೌಡ್ರ ಸಮ್ಮಿಶ್ರ ಸರ್ಕಾರ ಆಗಿ ಯಾವ ಜನ್ಮ ಆಗೋಯ್ತು. ಈಗ ದೇವೇಗೌಡ್ರು ಎಲ್ಲಿಂದ ಬರ್ತಾರೆ?ಕುಮಾರ ಸ್ವಾಮಿ ಎಲ್ಲಿಂದ ಬರ್ತಾರೆ? ಹೀಗೆಲ್ಲಾ ಹೇಳುದ್ರೆ ನನ್ನ ಬಗ್ಗೆ ಅನುಮಾನ ಬರುತ್ತೆ ಅಷ್ಟೇ! ದೇವ ಶಿಖಾಮಣಿ ಹೋಗಿ ನಾನು ಮೂರ್ಖಶಿಖಾಮಣಿ ಆಗಬೇಕಾಗುತ್ತೆ. ರೀ! ಮೇಷ್ಟ್ರೇ! ಏನ್ರೀ ಇನ್ನೂ ನೀವು ಹಳೇ ಕೀರ್ತನೇನೇ ಕುಯ್ತಿದೀರಲ್ಲ..ಸಿದ್ಧ ಬಂದ ನಮ್ಮ ರಾಮ ಬಂದಾನೋ, ಕಾಂಗ್ರೆಸ್ ದೇವ ಮುಕುಟಮಣಿ ಬಂದಾನೋ ಅಂತ ಹೇಳಿಕೊಡಿ..’
ದೀಕ್ಷಿತರು ನರಳಿದರು. ಪದ್ಮಾವತಿ ಮತ್ತೂ ಕರ್ಕಶವಾಗಿ ನರಳಿದಳು. ಮುಳ್ಳಪ್ಪನವರ ಶ್ರೀಮತಿಗೆ ಅಯ್ಯೋ ಪಾಪ ಎನಿಸಿತು. ‘ ಸ್ವಾಮಿ, ಮಗುಗೆ ಈ ಕಷ್ಟದ ಕೀರ್ತನೆ ಯಾಕೆ? ನೀರಿಳಿಯದ ಗಂಟಲಲ್ಲಿ ಕುಡುಬು ತುರುಕಿದಂತಾಯ್ತು. ಸುಮ್ನೆ ಲಕ್ಷಣವಾಗಿ ಸರಿಗಮ ಪದನಿಸ ಹೇಳ್ಕೊಡಿ ಎಂದು ಹುಕುಂ ಮಾಡಿದರು. ದೀಕ್ಷಿತರು ಬದುಕಿದೆಯಾ ಬಡಜೀವವೇ ಎಂದು ಸರಿಗಮ ಶುರುಮಾಡಿದರು.
‘ ಸರಿಗಮ ಪದನಿಸ… ಹೇಳಮ್ಮ..’
‘ ಸಾ ನಿಗಮ…ಪಾದ ನೀ ಸಾ! ’ಪದ್ಮಾವತಿ ಸ್ವರ ಕತ್ತರಿಸಿ ಚಿತ್ರಾನ್ನ ಮಾಡಿ ಎಳೆದಾಡಿದಳು.
‘ಅಯ್ಯೋ ಅದು ಸಾ ನಿಗಮ ಅಲ್ಲ, ಸರಿಗಮ ಅಂತ ಹೇಳಮ್ಮ..’ದೀಕ್ಷಿತರು ತಲೆ ಚಚ್ಚಿಕೊಂಡರು. ಮತ್ತೆ ಪದ್ಮಾವತಿ ‘ಸಾನಿಗಮ..’ ಎಂದೇ ಒದರಿದಳು. ರೋಸಿ ಹೋದ ದೀಕ್ಷಿತರು ‘ ಏನಮ್ಮ ನೀನು? ನೆಟ್ಟಗೆ ಸರಿಗಮನೇ ಹೇಳಕ್ಕೆ ಬರಲ್ಲ, ಇನ್ನೇನು ಸಂಗೀತ ಕಲೀತೀಯ ನನ್ನ ಪಿಂಡ? ನಿನ್ನ ನಾಲಿಗೆನ ಮೊದ್ಲು ಉಪ್ಪಿನ ಕಾಗದ ಹಾಕಿ ತಿಕ್ಕಿಕೋ’ ಎಂದು ರೇಗಿಬಿಟ್ಟರು.
ಮುಳ್ಳಪ್ಪನವರ ಸಿಟ್ಟು ನೆತ್ತಿಗೇರಿತು: ರೀ! ಮೇಷ್ಟ್ರೇ, ಸುಮ್ನೆ ನನ್ ಮಗಳ ಮೇಲೆ ಯಾಕ್ರೀ ರೇಗ್ತೀರಿ? ಅವಳು ನೆಟ್ಟಗೇ ಹೇಳ್ತಿದಾಳಲ್ರೀ..?’
ದೀಕ್ಷಿತರು ಪೆಕರನಂತೆ ಎಂಎಲ್‍ಎ ಸಾಹೇಬರ ಮುಖ ನೋಡಿದರು: ‘ಇಲ್ಲ ಸರ್, ಅದು ಸರಿಗಮ, ಸನಿಗಮ ಅಲ್ಲ..’
‘ಸಾಕು ಬಾಯ್ ಮುಚ್ರೀ..! ಇನ್ನೂ ಸರಿಗಮ ಪದನಿಸ ಅಂತ ಹೇಳ್ಕೊಂಡು ಕೂತಿದ್ರೆ ಹಳೇ ಪೇಪರ್ ಕಾಲಿ ಸೀಸನೇ ಕೈಗೆ ಸಿಗೋದು. ಮಂತ್ರಿಮಂಡಲದಲ್ಲಿ ಸೀಟು ಸಿಗಲಿಲ್ಲ, ಎಂಪಿ ಎಲೆಕ್ಷನ್ ಆಯ್ತು, ಇನ್ನೇನು ವಿಧಾನಪರಿಷತ್‍ದೂ ಮುಗಿಯುತ್ತೆ. ಉಳಿದಿರೋದು ಇನ್ನೇನ್ರೀ? ಮಂಡಲಿ, ನಿಗಮ ತಾನೇ?’ ಸಾ ನಿಗಮ’ ಅಂತ ಯಾರಾದ್ದಾದರೂ’ ಪಾದ ನೀ ಸಾ’ ಅಂದ್ರೆ ಕಾಲು ಹಿಡುದ್ರೆ ತಾನೇ ಯಾವುದಾದರೊಂದು ನಿಗಮಕ್ಕೆ ಕಚ್ಚಿಕೊಳ್ಳೋದು..ಎಷ್ಟು ಸರ್ಕಾರ ಬದಲಾದ್ರೂ ನಿಮ್ ಸಂಗೀತದ ಬೇಸೇ ಚೇಂಜಾಗಿಲ್ಲವಲ್ರೀ..! ಮೊದ್ಲು ನಮ್ ಕಿಮ್ಮನೆಗೆ ಹೇಳಿ ಈ ಸುಮ್ಮನೆ ವೇಸ್ಟ್ ಅನಿಸೋ ಸರಿಗಮ ಪದನಿಸ ಕಿತ್ ಹಾಕಿಸಿ ಸಾ ನಿಗಮ..ಪಾದ ನೀ ಸಾ? ಅಂತ ಬದಲಾಯಿಸಬೇಕು..ಛೇ ಎಲ್ಲಾ ಎಕ್ಕುಟ್ಟಿ ಹೋಯ್ತು.’ ಎಂಎಲ್‍ಎ ದಂಪತಿ ಎದ್ದು ಹೋದರು.
‘ಮೂರು ದಿನದಿಂದ ಮಂಜು ಕವಿದಿದೆ. ಚಳಿ, ಗಂಟಲು ಕೆಟ್ಟಿದೆ. ನಾಳೆ ಮುಂದುವರೆಸೋಣ’ ಎಂದರು ದೀಕ್ಷಿತರು.
‘ಅಯ್ಯೋ ಅದು ಮಂಜಲ್ಲ, ಮಿನಿಸ್ಟ್ರೀಲಿ ಜಾಗ ಸಿಗದಿರೋ ನಮ್ಮಪ್ಪನಂತವರ ಅತೃಪ್ತಿ ಹೊಗೆ, ಮುಂದಿನ ಎಂಪಿ ಎಲೆಕ್ಷನ್ ಹೊತ್ಗೆ ಎಲ್ಲಾ ಕೀರ್ತನೆನೂ ಸಿದ್ಧರಾಮ ವಚನಗಳನ್ನಾಗಿ, ಹಂಬರೀಶ್ ಕುಚುಕು ಪದ್ಯಗಳನ್ನಾಗಿ ತಿದ್ದಬೇಕು, ಇಲ್ಲ ಅಂದ್ರೆ ನಿಮ್ ಗತಿ ನೆಟ್ಟಗಿರಲ್ಲ, ಹುಶಾರ್’ ಎಂದು ನಕ್ಕಳು ಪದ್ಮಾವತಿ. ದೀಕ್ಷಿತರು ಬೆಚ್ಚಿಬಿದ್ದು ಹಾರ್ಮೊನಿಯಂ ಪೆಟ್ಟಿಗೆಯನ್ನು ಕಂಕುಳಿಗೇರಿಸಿ ದುಡು ದುಡು ಬಾಗಿಲ ಕಡೆ ಓಡಿದರು.




